“ಲಕ್ಷ್ಮಿ ಶೋಭಾನ”
ಶ್ರೀ ವಾದಿರಾಜತೀರ್ಥ ವಿರಚಿತ ಶ್ರೀ ಲಕ್ಷ್ಮಿ ಶೋಭಾನ ಪದ
ಶೋಭಾನವೆನ್ನಿರೆ ಸುರರೊಳು ಸುಭಗನಿಗೆ ಶೋಭಾನವೆನ್ನಿ ಸುಗುಣನಿಗೆ |
ಶೋಭಾನವೆನ್ನಿರೆ ತ್ರಿವಿಕ್ರಮರಾಯಗೆ ಶೋಭಾನವೆನ್ನಿ ಸುರಪ್ರಿಯಗೆ |ಶೋಭಾನೇ | ಪ|
ಲಕ್ಷ್ಮಿ ನಾರಾಯಣರ ಚರಣಕ್ಕೆ ಶರಣೆಂಬೆ ಪಕ್ಷಿವಾಹನ್ನಗೆರಗುವೆ |
ಪಕ್ಷಿವಾಹನ್ನಗೆರಗುವೆ ಅನುದಿನ ರಕ್ಷಿಸಲಿ ನಮ್ಮ ವಧುವರರ | ೧ |
ಪಾಲಸಾಗರವನ್ನು ಲೀಲೆಯಲ್ಲಿ ಕಡೆಯಲು ಬಾಲೆ ಮಹಲಕ್ಷುಮಿ ಉದಿಸಿದಳು |
ಬಾಲ ಮಹಲಕ್ಷುಮಿ ಉದಿಸಿದಳಾ ದೇವೀ ಪಾಲಿಸಲಿ ನಮ್ಮ ವಧುವರರ | ೨ |
ಬೊಮ್ಮನ ಪ್ರಳಯದಲಿ ತನ್ನರಸಿಯೊಡಗೂಡಿ ಸುಮ್ಮನೆಯಾಗಿ ಮಲಗಿಪ್ಪ |
ನಮ್ಮ ನಾರಾಯಣಗೂ ಈ ರಮ್ಮೆಗಡಿಗಡಿಗೂ ಜನ್ಮವೆಂಬುದು ಅವತಾರ | ೩ |
ಕಂಬುಕOಠದ ಸುತ್ತ ಕಟ್ಟಿದ ಮಂಗಳಸೂತ್ರ ಅಂಬುಜವೆರಡು ಕರಯುಗದಿ |
ಅಂಬುಜವೆರಡು ಕರಯುಗದಿ ಧರಿಸಿ ಪೀತಾಂಬರವುಟ್ಟು ಮೆರೆದಳು | ೪ |
ಒಂದು ಕರದಿಂದ ಅಭಯವನೀವಳೆ ಮತ್ತೊಂದು ಕೈಯಿಂದ ವರಗಳ |
ಕುಂದಿಲ್ಲದಾನOದ ಸಂದೋಹ ಉಣಿಸುವ ಇಂದಿರೆ ನಮ್ಮ ಸಲಹಲಿ | ೫ |
ಪೊಳೆವ ಕಾಂಚಿಯ ದಾಮ ಉಲಿವ ಕಿಂಕಿಣಿಗಳು ನಲಿವ ಕಾಲಂದುಗೆ ಘಲುಕೆನಲು |
ನಳನಳಿಸುವ ಮುದ್ದುಮೊಗದ ಚೆಲುವೆ ಲಕ್ಷ್ಮಿ ಸಲಹಲಿ ನಮ್ಮ ವಧುವರರ | ೬ |
ರನ್ನದ ಮೊಲೆಗಟ್ಟು ಚಿನ್ನದಾಭರಣಗಳ ಚೆನ್ನೆ ಮಹಲಕ್ಷುಮಿ ಧರಿಸಿದಳೆ |
ಚೆನ್ನೆ ಮಹಲಕ್ಷುಮಿ ಧರಿಸಿದಳಾ ದೇವಿ ತನ್ನ ಮನೆಯ ವಧುವರರ ಸಲಹಲಿ | ೭ |
ಕುಂಭ ಕುಚದ ಮೇಲೆ ಇಂಬಿಟ್ಟ ಹಾರಗಳು ತುಂಬಿಗುರುಳ ಮುಖಕಮಲ |
ತುಂಬಿಗುರುಳ ಮುಖಕಮಲದ ಮಹಲಕ್ಷ್ಮಿ ಜಗದಂಬೆ ವಧುವರರ ಸಲಹಲಿ | ೮ |
ಮುತ್ತಿನ ಓಲೆಯನ್ನಿಟ್ಟಳೆ ಮಹಲಕ್ಷ್ಮಿ ಕಸ್ತೂರಿ ತಿಲಕ ಧರಿಸಿದಳೆ |
ಕಸ್ತೂರಿ ತಿಲಕ ಧರಿಸಿದಳಾ ದೇವಿ ಸರ್ವತ್ರ ವಧುವರರ ಸಲಹಲಿ | ೯ |
ಅಂಬುಜ ನಯನಗಳ ಬಿಂಬಾಧರದ ಶಶಿ ಬಿಂಬದೆOತೆಸೆವ ಮೂಗುತಿಮಣಿಯ |
ಬಿಂಬದೆOತೆಸೆವ ಮೂಗುತಿಮಣಿಯ ಮಹಲಕ್ಷ್ಮಿ ಉಂಬುದಕೀಯಲಿ ವಧುವರರ್ಗೆ|೧೦|
ಮುತ್ತಿನಕ್ಷತೆಯಿಟ್ಟು ನವರತ್ನದ ಮುಕುಟವ ನೆತ್ತಿಯ ಮೇಲೆ ಧರಿಸಿದಳೆ |
ನೆತ್ತಿಯ ಮೇಲೆ ಧರಿಸಿದಳಾ ದೇವಿ ತನ್ನ ಭಕ್ತಿಯ ಜನರ ಸಲಹಲಿ | ೧೧ |
ಕುಂದಮOದಾರ ಜಾಜಿ ಕುಸುಮಗಳ ವೃಂದದ ಚೆಂದದ ತುರುಬಿಗೆ ತುರುಬಿದಳೆ |
ಕುಂದ ವರ್ಣದ ಕೋಮಲೆ ಮಹಲಕ್ಷ್ಮಿ ಕೃಪೆಯಿಂದ ವಧುವರರ ಸಲಹಲಿ | ೧೨ |
ಎಂದೆOದು ಬಾಡದ ಅರವಿಂದದ ಮಾಲೆಯ ಇಂದಿರೆ ಪೊಳೆವ ಕೊರಳಲಿ |
ಇಂದಿರೆ ಪೊಳೆವ ಕೊರಳಲ್ಲಿ ಧರಿಸಿದಳೆ ಅವಳಿಂದು ವಧುವರರ ಸಲಹಲಿ | ೧೩ |
ದೇವಾಂಗ ಪಟ್ಟೆಯ ಮೇಲು ಹೊದ್ದಿಕೆಯ ಭಾವೆ ಮಹಲಕ್ಷುಮಿ ಧರಿಸಿದಳೆ |
ಭಾವೆ ಮಹಲಕ್ಷುಮಿ ಧರಿಸಿದಳಾ ದೇವಿ ತನ್ನ ಸೇವಕ ಜನರ ಸಲಹಲಿ | ೧೪ |
ಈ ಲಕ್ಷ್ಮಿದೇವಿಯ ಕಾಲುಂಗುರ ಘಲುಕೆನಲು ಲೋಲಾಕ್ಷಿ ಮೆಲ್ಲನೆ ನಡೆ ತಂದಳು |
ಸಾಲಾಗಿ ಕುಳ್ಳಿರ್ದ ಸುರರ ಸಭೆಯ ಕಂಡು ಆಲೋಚಿಸಿದಳು ಮನದಲ್ಲಿ | ೧೫ |
ತನ್ನ ಮಕ್ಕಳ ಕುಂದ ತಾನೇ ಪೇಳುವುದಕ್ಕೆ ಮನ್ನದಿ ನಾಚಿ ಮಹಲಕ್ಷ್ಮಿ |
ತನ್ನಾಮದಿಂದಲಿ ಕರೆಯದೆ ಒಬ್ಬೊಬ್ಬರ ಉನ್ನಂತ ದೋಷಗಳನೆಣಿಸಿದಳು | ೧೬ |
ಕೆಲವರು ತಲೆಯೂರಿ ತಪಗೈದು ಪುಣ್ಯವ ಗಳಿಸಿದ್ದರೇನೂ ಫಲವಿಲ್ಲ |
ಜ್ವಲಿಸುವ ಕೋಪದಿ ಶಾಪವ ಕೊಡುವರು ಲಲನೆಯನಿವರು ಒಲಿಸುವರೆ | ೧೭ |
ಎಲ್ಲ ಶಾಸ್ತ್ರಗಳೋದಿ ದುರ್ಲಭ ಜ್ಞಾನವ ಕಲಿಸಿ ಕೊಡುವ ಗುರುಗಳು |
ಬಲ್ಲಿದ ಧನಕ್ಕೆ ಮರುಳಾಗಿ ಇಬ್ಬರು ಸಲ್ಲದ ಪುರೋಹಿತಕ್ಕೊಳಗಾದರು | ೧೮ |
ಕಾಮನಿರ್ಜಿತನೊಬ್ಬ ಕಾಮಿನಿಗೆ ಸೋತೊಬ್ಬ ಭಾಮಿನಿಯ ಹಿಂದೆ ಹಾರಿದವನೊಬ್ಬ|
ಕಾಮಾಂಧನಾಗಿ ಮುನಿಯ ಕಾಮಿನಿಗೈದವನೊಬ್ಬ ಕಾಮದಿ ಗುರುತಲ್ಪಗಾಮಿಯೊಬ್ಬ|೧೯|
ನಶ್ವರೈಶ್ವರ್ಯವ ಬಯಸುವನೊಬ್ಬ ಪರರಾಶ್ರಯಿಸಿ ಬಾಳುವ ಈಶ್ವರನೊಬ್ಬ |
ಹಾಸ್ಯವಮಾಡಿ ಹಲ್ಲುದುರಿಸಿಕೊಂಡವನೊಬ್ಬ ಅದೃಶ್ಯಾಂಘ್ರಿಯೊಬ್ಬಒಕ್ಕಣ್ಣನೊಬ್ಬ|೨೦|
ಮಾವನ ಕೊಂದೊಬ್ಬ ಮರುಳಾಗಿಹನು ಗಡ ಹಾರ್ವನ ಕೊಂದೊಬ್ಬ ಬಳಲಿದ |
ಜೀವರ ಕೊಂದೊಬ್ಬ ಕುಲಗೇಡೆಂದೆನಿಸಿದ ಶಿವನಿಂದೊಬ್ಬ ಬಯಲಾದ | ೨೧ |
ಧರ್ಮ ಉಂಟೊಬ್ಬನಲಿ ಹೆಮ್ಮೆಯ ಹೆಸರಿಗೆ ಅಮ್ಮಮ್ಮ ತಕ್ಕ ಗುಣವಿಲ್ಲ |
ಕ್ಷಮೆಯ ಬಿಟ್ಟೊಬ್ಬ ನರಕದಲಿ ಜೀವರ ಮರ್ಮವ ಮೆಟ್ಟಿ ಕೊಲಿಸುವ | ೨೨ |
ಖಳನಂತೆ ಒಬ್ಬ ತನಗೆ ಸಲ್ಲದ ಭಾಗ್ಯವ ಬಲ್ಲಿದಗಂಜಿ ಬರಿಗೈದ |
ದುರ್ಲಭಮುಕ್ತಿಗೆ ದೂರವೆಂದೆನಿಸುವ ಪಾತಾಳ ತಳಕ್ಕೆ ಇಳಿದ ಗಾಡ | ೨೩ |
ಎಲ್ಲರಾಯುಷ್ಯವ ಶಿಂಶುಮಾರದೇವ ಸಲ್ಲೀಲೆಯಿಂದ ತೊಲಗಿಸುವ |
ಒಲ್ಲೆ ನಾನಿವರ ನಿತ್ಯಮುತ್ತೈದೆಯಂದು ಬಲ್ಲವರೆನ್ನ ಭಜಿಸುವರು | ೨೪ |
ಪ್ರಕೃತಿಯ ಗುಣದಿಂದ ಕಟ್ಟು ಒಡೆದು ನಾನಾ ವಿಕೃತಿಗೊಳಗಾಗಿ ಭವದಲ್ಲಿ |
ಸುಖದು:ಖವುಂಬ ಬೊಮ್ಮಾದಿ ಜೀವರು ದು:ಖಕ್ಕೆ ದೂರಳೆನಿಪ ಎನಗೆಣೆಯೆ|೨೫ |
ಒಬ್ಬನಾವನ ಮಗ ಮತ್ತೊಬ್ಬನಾವನ ಮೊಮ್ಮಗ ಒಬ್ಬನಾವನಿಗೆ ಶಯನಾಹ |
ಒಬ್ಬನಾವನ ಪೊರುವ ಮತ್ತಿಬ್ಬರಾವನಿಗಂಜಿ ಅಬ್ಬರದಲಾವಾಗ ಸುಳಿವರು | ೨೬ |
ಒಬ್ಬನಾವನ ನಾಮಕಂಜಿ ಬೆಚ್ಚುವ ಗಡ ಸರ್ವರಿಗಾವ ಅಮೃತವ |
ಸರ್ವರಿಗಾವ ಅಮೃತವನುಣಿಸುವ ಅವನೊಬ್ಬನೆ ನಿರನಿಷ್ಟ ನಿರವದ್ಯ | ೨೭ |
ನಿರನಿಷ್ಟ ನಿರವದ್ಯ ಎಂಬ ಸೃತ್ಯರ್ಥವ ಒರೆದು ನೋಡಲು ನರಹರಿಗೆ |
ನರಕಯಾತನೆ ಸಲ್ಲ ದುರಿತಾತಿದೂರನಿಗೆ ಮರುಳಮನಬಂದOತೆ ನುಡಿಯದಿರು|೨೮|
ಒಂದೊOದು ಗುಣಗಳು ಇದ್ದಾವು ಇವರಲ್ಲಿ ಸಂದಣಿಸಿವೆ ಬಹು ದೋಷ |
ಕುಂದೆಳ್ಳಷ್ಟಿಲ್ಲದ ಮುಕುಂದನೆ ತನಗೆಂದು ಇಂದಿರೆ ಪತಿಯ ನೆನೆದಳು | ೨೯ |
ದೇವರ್ಷಿ ವಿಪ್ರರ ಕೊಂದು ತನ್ನುದರದೊಳಿಟ್ಟು ತೀವಿರ್ದ ಹರಿಗೆ ದುರಿತವ |
ಭಾವಜ್ಞರೆಂಬರೆ ಅಗಾಲದೆಲೆ ಮೇಲೆ ಶಿವನ ಲಿಂಗವ ನಿಲಿಸುವರೆ | ೩೦ |
ಹಸಿ ತೃಷೆ ಜರೆ ಮರಣ ರೋಗ ರುಜಿನಗಳೆಂಬ ಅಸುರ ಪಿಶಾಚಿಗಳ ಭಯವೆಂಬ |
ವ್ಯಸನ ಬರಬಾರದು ಎಂಬ ನಾರಾಯಣಗೆ ಪಸು ಮೊದಲಾದ ನೆನೆಯದು | ೩೧ |
ತಾ ದು:ಖಿಯಾದರೆ ಸುರರಾರ್ತಿಯ ಕಳೆದು ಮೋದವೀವುದಕೆ ಧರೆಗಾಗಿ |
ಮಾಧವ ಬಾಹನೆ ಕೆಸರೊಳು ಮುಳಿಗಿದವ ಪರರ ಬಾಧಿಪ ಕೆಸರ ಬಿಡಿಸುವನೆ|೩೨|
ಬೊಮ್ಮನಾಲಯದಲ್ಲಿ ಇದ್ದವಗೆ ಲಯ ಉಂಟೆ ಜನ್ಮ ಲಯವಿಲ್ಲದವನಿಗೆ |
ಅಮ್ಮಿಯನುಣಿಸಿದ್ದ ಯಶೋದೆಯಾಗಿದ್ದಳೆ ಅಮ್ಮ ಇವಗೆ ಹಸಿ ತೃಷೆಯುಂಟೆ|೩೩ |
ಆಗ ಭಕ್ಷ್ಯ ಭೋಜ್ಯವಿತ್ತು ಪೂಜಿಸುವ ಯೋಗಿಗಳುಂಟೆ ಧನಧಾನ್ಯ |
ಆಗ ದೊರಕೊಂಬುದೆ ಪಾಕ ಮಾಡುವ ವಹ್ನಿ ಮತ್ತಾಗಲೆಲ್ಲಿಹುದು ವಿಚಾರಿಸಿರೋ|೩೪|
ರೋಗವನೀವ ವಾತಪಿತ್ತಶ್ಲೇಷ್ಮ ಆಗ ಕೊಡುವುದೇ ರಮೆಯೊಡನೆ |
ಭೋಗಿಸುವವಗೆ ದುರಿತವ ನೆನೆವರೆ ಈ ಗುಣನಿಧಿಗೆ ಎಣೆಯುಂಟೆ | ೩೫ |
ರಮ್ಮೆ ದೇವಿಯರನಪ್ಪಿಕೊಂಡಿಪುö್ಪದು ರಮ್ಮೆಯರಸಗೆ ರತಿ ಕಾಣಿರೊ |
ಅಮ್ಮೋಘವೀರ್ಯವು ಚಲಿಸಿದರೆ ಪ್ರಳಯದಲಿ ಕುಮ್ಮಾರರು ಯಾಕೆ ಜನಿಸರು|೩೬|
ಏಕತ್ರ ನಿರ್ಣೀತ ಶಾಸ್ತಾçರ್ಥ ಪರತ್ರಾಪಿ ಬೇಕೆಂಬ ನ್ಯಾಯವ ತಿಳಿದುಕೋ |
ಶ್ರೀಕೃಷ್ಣನೊಬ್ಬನೆ ಸರ್ವದೋಷಕ್ಕೆ ಸಿಲುಕ್ಕನೆಂಬೋದು ಸಲಹಲಿಕೆ | ೩೭ |
ಎಲ್ಲ ಜಗವ ನುಂಗಿ ದಕ್ಕಿಸಿಕೊಂಡವಗೆ ಸಲ್ಲದು ರೋಗ ರುಜಿನವು |
ಬಲ್ಲ ವೈದ್ಯರ ಕೇಳಿ ಅಜೀರ್ತಿ ಮೂಲವಲ್ಲದಿಲ್ಲ ಸಮಸ್ತ ರುಜಿನವು | ೩೮ |
ಇಂಥ ಮೂರುತಿಯ ಒಳಕೊಂಬ ನರಕ ಬಹು ಭ್ರಾಂತನೇನೆಲ್ಲಿOದ ತೋರುವೆಲೊ|
ಸಂತೆಯ ಮರುಳ ಹೋಗೆಲೋ ನಿನ್ನ ಮಾತ ಸಂತರು ಕೇಳಿ ಸೊಗಸರು | ೩೯ |
ಶ್ರೀ ನಾರಾಯಣರ ಜನನಿ ಜನಕರ ನಾನೆಂಬ ವಾದಿ ನುಡಿಯೆಲೋ |
ಜಾಣರದರಿಂದರಿಯ ಮೂಲರೂಪವ ತೋರಿ ಶ್ರೀ ನಾರಸಿಂಹನ ಅವತಾರ | ೪೦ |
ಅಂಬುಧಿಯ ಉದಕದಲಿ ಒಡೆದು ಮೂಡಿದ ಕೂರ್ಮ ಎಂಬ ಶ್ರೀಹರಿಯ ಪಿತನಾರು|
ಎಂಬ ಶ್ರೀಹರಿಯ ಪಿತನಾರು ಅದರಿಂದ ಸ್ವಯುಂಭುಗಳೆಲ್ಲ ಅವತಾರ | ೪೧ |
ದೇವಕಿಯ ಗರ್ಭದಲಿ ದೇವನವತರಿಸಿದ ಭಾವವನು ಬಲ್ಲ ವಿವೇಕಿಗಳು |
ಈ ವಸುಧೆಯೊಳಗೆ ಕೃಷ್ಣಗೆ ಜನ್ಮವ ಆವ ಪರಿಯಲಿ ನುಡಿವೆಯೋ | ೪೨ |
ಆಕಳಿಸುವಾಗ ಯಶೋದಾದೇವಿಗೆ ದೇವ ತನ್ನೊಳಗೆ ಹುದುಗಿದ್ದ |
ಭುವನವೆಲ್ಲವ ತೋರಿದ್ದುದಿಲ್ಲವೆ ಆ ವಿಷ್ಣು ಗರ್ಭದೊಳಡಗುವನೆ | ೪೩ |
ಆನೆಯ ಮಾನದಲಿ ಆದಗಿಸಿದವರುಂಟೆ ಅನೇಕ ಕೋಟಿ ಅಜಾಂಡವ |
ಅಣುರೋಮ ಕೋಪದಲಿ ಆಳ್ದ ಶ್ರೀಹರಿಯ ಜನನಿ ಜಠರವು ಒಳಕೊಂಬುದೆ|೪೪ |
ಅದರಿಂದ ಕೃಷ್ಣನಿಗೆ ಜನ್ಮವೆಂಬುದು ಸಲ್ಲ ಮದನನಿವನ ಕುಮಾರನು |
ಕದನದಿ ಕಣೆಗಳ ಇವನೆದೆಗೆಸೆವನೆ ಸುದತೇರಿಗಿವನಿಂತು ಸಿಲುಕುವನೆ | ೪೫ |
ಅದರಿಂದ ಕೃಷ್ಣಗೆ ಪರನಾರಿ ಸಂಗವ ಕೋವಿದರಾದ ಬುಧರು ನುಡಿವರೆ |
ಸದರವೆ ಈ ಮಾತು ಸರ್ವ ವೇದಂಗಳು ಮುದದಿಂದ ತಾವು ಸ್ತುತಿಸುವವು| ೪೬ |
ಎಂದ ಭಾಗವತದ ಚೆಂದದ ಮಾತನು ಮಂದ ಮಾನವ ಮನಸಿಗೆ |
ತಂದು ಕೊಜಗಕೆ ಕೈವಲ್ಯವೀವ ಮುಕುಂದಗೆ ಕುಂದು ಕೊರತೆ ಸಲ್ಲದು | ೪೭ |
ಹತ್ತು ವರುಷದ ಕೆಳಗೆ ಮಕ್ಕಳಾಟಿಕೆಯಲ್ಲಿ ಚಿತ್ತಸ್ತ್ರೀಯರಿಗೆ ಎರಗುವುದೆ |
ಅರ್ತಿಯಿಂದರ್ಚಿಸಿದ ಗೋಕುಲದ ಕನ್ನೆಯರ ಸತ್ಯಸಂಕಲ್ಪ ಬೆರೆತಿದ್ದ | ೪೮ |
ಹತ್ತು ಮತ್ತಾರು ಸಾಸಿರ ಸ್ತ್ರೀಯರಲ್ಲಿ ಹತ್ತು ಹತ್ತೆನಿಪ ಕ್ರಮದಿಂದ |
ಪುತ್ರರನು ವೀರ್ಯದಲಿ ಸೃಷ್ಟಿಸಿದವರುಂಟೆ ಅರ್ತಿಯ ಸೃಷ್ಟಿ ಹರಿಗಿದು | ೪೯ |
ರೋಮ ರೋಮ ಕೂಪ ಕೋಟಿ ವೃಕಂಗಳ ನಿರ್ಮಿಸಿ ಗೋಪಾಲರ ತೆರಳಿಸಿದ |
ನಮ್ಮ ಶ್ರೀಕೃಷ್ಣನು ಮಕ್ಕಳ ಸೃಜಿಸುವ ಮಹಿಮೆ ಬಲ್ಲವರಿಗೆ ಸಲಹಲಿಕೆ | ೫೦ |
ಮಣ್ಣನೇಕೆ ಮೆದ್ದೆ ಎಂಬ ಯಶೋದೆಗೆ ಸಣ್ಣ ಬಾಯೊಳಗೆ ಜಗಂಗಳ |
ಕಣ್ಣಾರೆ ತೋರಿದ ನಮ್ಮ ಶ್ರೀಕೃಷ್ಣನ ಘನ್ನತೆ ಬಲ್ಲವರಿಗೆ ಸಲಹಲಿಕೆ | ೫೧ |
ನಾರದ ಸನಕಾದಿ ಮೊದಲಾದ ಯೋಗಿಗಳು ನಾರಿಯರಿಗೆ ಮರುಳಾದರೆ |
ಓರಂತೆ ಶ್ರೀಕೃಷ್ಣನಡಿಗಡಿಗೆರಗುವರೆ ಆರಾಧಿಸುತ್ತ ಭಜಿಸುವರೆ | ೫೨ |
ಅಂಬುಜ ಸಂಭವ ತ್ರಿಯಂಬಕ ಮೊದಲಾದ ನಂಬಿದವರಿಗೆ ವರವಿತ್ತ |
ಸಂಭ್ರಮದ ಸುರರು ಎಳ್ಳಷ್ಟು ಕೋಪಕ್ಕೆ ಇಂಬಿದ್ದರಿವನ ಭಜಿಸುವರೆ | ೫೩ |
ಅವನುಂಗುಷ್ಟವ ತೊಳೆದ ಗಂಗಾದೇವಿ ಪಾವನಳೆನಿಸಿ ಮೆರೆಯಳೆ |
ಜೀವನ ಸೇರುವ ಪಾಪವ ಕಳೆವಳು ಈ ವಾಸುದೇವಗೆ ಎಣೆಯುಂಟೆ | ೫೪ |
ಕಿಲ್ಬಿಷವಿದ್ದರೆ ಅಗ್ರಪೂಜೆಯನು ಸರ್ಬರಾಯರ ಸಭೆಯೊಳು |
ಉಬ್ಬಿದ ಮನದಿಂದ ಧರ್ಮಜ ಮಾಡುವನೆ ಕೊಬ್ಬದಿರೆಲೊ ಪರವಾದಿ | ೫೫ |
ಸಾವಿಲ್ಲದ ಹರಿಗೆ ನರಕ ಯಾತನೆ ಸಲ್ಲ ಜೀವಂತರಿಗೆ ನರಕದಲಿ |
ನೋವನೀವನು ನಿಮ್ಮ ಯಮದೇವನು ನೋವ ನೀ ಹರಿಯ ಗುಣವರಿಯೆ | ೫೬ |
ನರಕವಾಳುವ ಯಮಧರ್ಮರಾಜ ತನ್ನ ನರಜನ್ಮದೊಳಗೆ ಪೊರಳಿಸಿ |
ಮರಳಿ ತನ್ನರಕದಲಿ ಪೊರಳಿಸಿ ಕೊಲುವನು ಕುರು ನಿನ್ನ ಕುಹಕ ಕೊಳದಲ್ಲಿ | ೫೭ |
ಬೊಮ್ಮನ ನೂರು ವರುಷ ಪರಿಯಂತ ಪ್ರಳಯದಲಿ ಸುಮ್ಮನೆಯಾಗಿ ಮಲಗಿರ್ದ |
ನಮ್ಮ ನಾರಾಯಣಗೆ ಹಸಿ ತೃಷೆ ಜರೆಮರಣ ದುಷ್ಕರ್ಮದು:ಖಗಳ ತೊಡಗಿಸುವರೆ|೫೮|
ರಕ್ಕಸರಸ್ತçಗಳಿಂದ ಗಾಯವಡೆಯದ ಅಕ್ಷಯಕಾಯದ ಸಿರಿಕೃಷ್ಣ |
ತುಚ್ಚ ಯಮಭಟರ ಶಸ್ತ್ರ ಕಳಕುವನಲ್ಲ ಹುಚ್ಚ ನೀ ಹರಿಯ ಗುಣವರಿಯ | ೫೯ |
ಕಿಚ್ಚ ನುಂಗಿದನು ನಮ್ಮ ಶ್ರೀಕೃಷ್ಣನು ತುಚ್ಚ ನರಕದೊಳು ಅನಲನಿಗೆ |
ಬೆಚ್ಚುವನಲ್ಲ ಅದರಿಂದಿವಗೆ ನರಕ ಮೆಚ್ಚುವರಲ್ಲ ಬುಧರೆಲ್ಲ | ೬೦ |
ಮನೆಯಲ್ಲಿ ಕ್ಷಮೆಯ ತಾಳ್ದ ವೀರಭಟ ರಣರಂಗದಿ ಕ್ಷಮಿಸುವನೆ |
ಅಣುವಾಗಿ ನಮ್ಮ ಹಿತಕ್ಕೆ ಮನದೊಳಗಿನ ಕೃಷ್ಣ ಮುನಿವಕಾಲಕ್ಕೆ ಮಹತ್ತಾಪ|೬೧ |
ತಾಯ ಪೊಟ್ಟೆಯಿಂದ ಮೂಲರೂಪವ ತೋರಿ ಆಯುಧ ಸಹಿತ ಪೊರವಂಟ |
ನ್ಯಾಯ ಕೋವಿದರು ಪುಟ್ಟಿದನೆಂಬರೆ ಬಾಯಿಗೆ ಬಂದOತೆ ಬೊಗಳದಿರು | ೬೨ |
ಉಟ್ಟ ಪೀತಾಂಬರ ತೊಟ್ಟ ಭೂಷಣಂಗಳು ಇಟ್ಟ ನವರತ್ನದ ಮುಕುಟವು |
ಮೆಟ್ಟಿದ ಕುರುಹ ಎದೆಯಲ್ಲಿ ತೋರಿದ ಶ್ರೀ ವಿಠಲ ಪುಟ್ಟಿದನೆನಬಹುದೆ | ೬೩ |
ಋಷಭಹಂಸ ಮೇಷ ಮಹಿಷ ಮೂಷಕವಾಹನವೇರಿ ಮಾನಿಸರಂತೆ ಸುಳಿವ ಸುರರೆಲ್ಲ|
ಎಸೆವ ದೇವೇಶಾನರ ಸಾಹಸಕ್ಕೆ ಮಣಿದರು ಕುಸುಮನಾಭನಿಗೆ ಸರಿಯುಂಟೆ |೬೪ |
ಒಂದೊOದು ಗುಣಗಳು ಇದ್ದಾವು ಇವರಲ್ಲಿ ಸಂದಣಿಸೆವೆ ಬಹು ದೋಷ |
ಕುಂದೆಳ್ಳಷ್ಟಿಲ್ಲದ ಮುಕುಂದನೆ ತನಗೆಂದು ಇಂದಿರೆ ಪತಿಯ ನೆನೆದಳು | ೬೫ |
ಇಂತು ಚಿಂತಿಸಿ ರಮೆ ಸಂತ ರಾಮನ ಪದವ ಸಂತೋಷ ಮನದಿ ನೆನೆವುತ್ತ |
ಸಂತೋಷ ಮನದಿ ನೆನೆವುತ್ತ ತನ್ನ ಶ್ರೀಕಾಂತನಿದ್ದೆಡೆಗೆ ನಡೆದಳು | ೬೬ |
ಕಂದರ್ಪ ಕೋಟಿಗಳ ಗೆಲುವ ಸೌಂದರ್ಯದ ಚೆಂದವಾಗಿದ್ದ ಚೆಲುವನ |
ಇಂದಿರೆ ಕಂಡು ಇವನೆ ತನಗೆ ಪತಿ ಎಂದವನ ಬಳಿಗೆ ನಡೆದಳು | ೬೭ |
ಈ ತೆರದಿ ಸುರರ ಸುತ್ತ ನೋಡುತ್ತ ಚಿತ್ತವ ಕೊಡದೆ ನಸುನಗುತ |
ಚಿತ್ತವ ಕೊಡದೆ ನಸುನಗುತ ಬಂದು ಪುರುಷೋತ್ತಮನ ಕಂಡು ನಮಿಸಿದಳು|೬೮ |
ನಾನಾ ಕುಸುಮಗಳಿಂದ ಮಾಡಿದ ಮಾಲೆಯ ಶ್ರೀನಾರಿ ತನ್ನ ಕರದಲ್ಲಿ |
ಪೀನ ಕಂಧರನ ತ್ರಿವಿಕ್ರಮರಾಯನ ಕೊರಳಿನ ಮೇಲಿಟ್ಟು ನಮಿಸಿದಳು | ೬೯ |
ಉಟ್ಟ ಪೊಂಬಟ್ಟೆಯು ತೊಟ್ಟಾಭರಣಗಳು ಇಟ್ಟ ನವರತ್ನದ ಮುಕುಟವು |
ದುಷ್ಟ ಮರ್ದನನೆಂಬ ಕಡೆಯ ಪೆಂಡೆಗಳ ವಟ್ಟಿದ್ದ ಹರಿಗೆ ವಧುವಾದಳು |೭೦ |
ಕೊಂಬು ಚೆಂಬಕ ಕಹಳೆ ತಾಳ ಮದ್ದಳೆಗಳು ತಂಬಟೆ ಭೇರಿ ಪಟಹಗಳು |
ಭೋಂಭೋO ಎಂಬ ಶಂಖ ಡೊಳ್ಳುಮೌರಿಗಳು ಅಂಬುಧಿಯ ಮನೆಯಲ್ಲೆಸೆದವು|೭೧|
ಅರ್ಘ್ಯಪಾದ್ಯಾಚಮನ ಮೊದಲಾದ ಷೋಡಶನರ್ಘ್ಯ ಪೂಜೆಯನ್ನಿತ್ತನಳಿಯಗೆ |
ಒಗ್ಗಿದ ಮನದಿಂದ ಧಾರೆಯೆರೆದನೆ ಸಿಂಧು ಸದ್ಗತಿಯಿತ್ತು ಸಲಹೆಂದ | ೭೨ |
ವೇದೋಕ್ತ ಮಂತ್ರ ಪೇಳಿ ವಸಿಷ್ಠನಾರದ ಮೊದಲಾದ ಮುನೀಂದ್ರರು ಮುದದಿಂದ|
ವಧುವರರ ಮೇಲೆ ಶೋಭನದಕ್ಷತೆಯನು ಮೋದವೀಯುತ್ತ ತಳಿದರು | ೭೩ |
ಸಂಭ್ರಮದಿOದOಬರದಿ ದುಂಧುಭಿ ಮೊಳಗಲು ತುಂಬುರು ನಾರದರು ತುತಿಸುತ್ತ |
ತುಂಬುರು ನಾರದರು ತುತಿಸುತ್ತ ಪಾಡಿದರು ಪೀತಾಂಬರಧರನ ಮಹಿಮೆಯ |೭೪|
ದೇವ ನಾರಿಯರೆಲ್ಲ ಬಂದೊದಗಿ ಪಾಠಕರು ಓವಿ ಪಾಡುತ್ತ ಕುಣಿದರು |
ದೇವ ತರುವಿನ ಹೂವಿನ ಮಳೆಗಳ ಶ್ರೀವರನ ಮೇಲೆ ಕರೆದರು | ೭೫ |
ಮುತ್ತು ರತ್ನಗಳಿಂದ ಕೆತ್ತಿಸಿದ ಹಸೆಯ ನವರತ್ನ ಮಂಟಪದಿ ಪಸರಿಸಿ |
ನವರತ್ನ ಮಂಟಪದಿ ಪಸರಿಸಿ ಕೃಷ್ಣನ ಮುತ್ತೈದೆಯರೆಲ್ಲ ಕರೆದರು | ೭೬ |
ಶೇಷಶಯನನೆ ಬಾ ದೋಷ ದೂರನೆ ಬಾ ಭಾಸುರಕಾಯ ಹರಿಯೆ ಬಾ |
ಭಾಸುರಕಾಯ ಹರಿಯೆ ಬಾ ಶ್ರೀಕೃಷ್ಣ ವಿಲಾಸಂದಿದೆಮ್ಮ ಹಸೆಗೆ ಬಾ | ೭೭ |
ಕಂಜಲೋಚನನೆ ಬಾ ಮಂಜುಳ ಮೂರ್ತಿ ಬಾ ಕುಂಜರವರದಾಯಕನೆ ಬಾ |
ಕುಂಜರವರದಾಯಕನೆ ಬಾ ಶ್ರೀ ಕೃಷ್ಣ ನಿರಂಜನ ನಮ್ಮ ಹಸೆಗೆ ಬಾ | ೭೮ |
ಆದಿ ಕಾಲದಲ್ಲಿ ಆಲದೆಲೆಯ ಮೇಲೆ ಶ್ರೀದೇವಿಯರೊಡನೆ ಪವಡಿಸಿದ |
ಶ್ರೀದೇವಿಯರೊಡನೆ ಪವಡಿಸಿದ ಶ್ರೀಕೃಷ್ಣ ಮೋದದಿಂದೆಮ್ಮ ಹಸೆಗೆ ಬಾ | ೭೯ |
ಅದಿಕಾರಣನಾಗಿ ಆಗ ಮಲಗಿದ್ದು ಮೋದ ಜೀವರ ತನ್ನುದರದಲಿ |
ಮೋದ ಜೀವರ ತನ್ನುದರದಲಿ ಇಂಬಿಟ್ಟ ಅನಾದಿ ಮೂರುತಿಯೆ ಹಸೆಗೆ ಬಾ |೮೦ |
ಚಿನ್ಮಯವೆನಿಪ ನಿಮ್ಮ ಮನೆಗಳಲ್ಲಿ ಜ್ಯೋತಿರ್ಮಯವಾದ ಪದ್ಮದಲಿ |
ರಮ್ಮೆಯರೊಡಗೂಡಿ ರಮಿಸುವ ಶ್ರೀಕೃಷ್ಣ ನಮ್ಮ ಮನೆಯ ಹಸೆಗೆ ಬಾ | ೮೧ |
ನಾನಾವತಾರದಲಿ ನಂಬಿದ ಸುರರಿಗೆ ಆನಂದವೀವ ಕರುಣಿ ಬಾ |
ಆನಂದವೀವ ಕರುಣಿ ಬಾ ಶ್ರೀಕೃಷ್ಣ ಶ್ರೀನಾರಿಯರೊಡನೆ ಹಸೆಗೆ ಬಾ | ೮೨ |
ಬೊಮ್ಮನ ಮನೆಯಲ್ಲಿ ರನ್ನದ ಪೀಠದಿ ಕುಳಿದು ಒಮ್ಮನದಿ ನೇಹವ ಮಾಡುವ |
ನಿರ್ಮಲಪೂಜೆಯ ಕೈಗೊಂಬ ಶ್ರೀಕೃಷ್ಣಪರಬೊಮ್ಮಮೂರುತಿಯೆ ಹಸೆಗೆ ಬಾ|೮೩|
ಮುಖ್ಯಪ್ರಾಣನ ಮನೆಯಲ್ಲಿ ಭಾರತಿಯಾಗಲಿಕ್ಕೆ ಬಡಿಸಿದ ರಸಾಯನವ |
ಸಕ್ಕರೆಗೂಡಿದ ಪಾಯಸ ಸವಿಯುವ ರಕ್ಕಸವೈರಿಯ ಹಸೆಗೆ ಬಾ | ೮೪ |
ರುದ್ರನ ಮನೆಯಲ್ಲಿ ರುದ್ರಾಣಿ ದೇವಿಯರು ಭದ್ರಮಂಟಪದಿ ಕುಳ್ಳಿರಿಸಿ |
ಸ್ವಾದ್ವನ್ನಗಳನು ಬಡಿಸಲು ಕೈಗೊಂಬ ಮುದ್ದು ನರಸಿಂಹ ಹಸೆಗೆ ಬಾ | ೮೫ |
ಗರುಡನ ಮೇಲೇರಿ ಗಗನ ಮಾರ್ಗದಲ್ಲಿ ತರತರದಿ ಸ್ತುತಿಪ ಸುರಸ್ತ್ರೀಯರ |
ಮೆರೆವ ಗಂಧರ್ವರ ಗಾನವ ಸವಿಯುವ ನರಹರಿ ನಮ್ಮ ಹಸೆಗೆ ಬಾ | ೮೬ |
ನಿಮ್ಮಣ್ಣನ ಮನೆಯಲ್ಲಿ ಸುಧರ್ಮ ಸಭೆಯಲ್ಲಿ ಉಮ್ಮೆಯರಸ ನಮಿಸಿದ |
ಧರ್ಮರಕ್ಷಕನೆನಿಪ ಕೃಷ್ಣ ಕೃಪೆಯಿಂದ ಪರಮ್ಮ ಮೂರುತಿಯೆ ಹಸೆಗೆ ಬಾ | ೮೭ |
ಇಂದ್ರನ ಮನೆಗೆ ಹೋಗಿ ಅದಿತಿಗೆ ಕುಂಡಲವಿತ್ತು ಅಂದದ ಪೂಜೆಯ ಕೈಗೊಂಡು |
ಅಂದದ ಪೂಜೆಯ ಕೈಗೊಂಡು ಸುರತರುವ ಇಂದಿರೆಗಿತ್ತ ಹರಿಯೆ ಬಾ | ೮೮ |
ನಿಮ್ಮ ನೆನೆವ ಮುನಿ ಹೃದಯದಲಿ ನೆಲೆಸಿದ ಧರ್ಮ ರಕ್ಷಕನೆನಿಸುವ |
ಸಮ್ಮತವಾಗಿದ್ದ ಪೂಜೆಯ ಕೈಗೊಂಬ ನಿಸ್ಸೀಮ ಮಹಿಮ ಹಸೆಗೆ ಬಾ | ೮೯ |
ಮುತ್ತಿನ ಸತ್ತಿಗೆ ನವರತ್ನದ ಚಾಮರ ಸುತ್ತ ನಲಿವ ಸುರಸ್ತ್ರೀಯರ |
ನೃತ್ಯವ ನೋಡುತ್ತ ಚಿತ್ರವಾದ್ಯಂಗಳ ಸಂಪತ್ತಿನ ಹರಿಯೆ ಹಸೆಗೆ ಬಾ | ೯೦ |
ಎನಲು ನಗುತ ಬಂದು ಹಸೆಯ ಮೇಲೆ ವನಿತೆ ಲಕ್ಷ್ಮಿಯೊಡಗೂಡಿ |
ಅನಂತವೈಭವದಿ ಕುಳಿತ ಕೃಷ್ಣನ ನಾಲ್ಕು ದಿನದುತ್ಸವ ನಡೆಸಿದರು | ೯೧ |
ಅತ್ತೇರೆನಿಪ ಗಂಗೆ ಯಮುನೆ ಸರಸ್ವತಿ ಭಾರತಿ ಮೊದಲಾದ ಸುರಸ್ತ್ರೀಯರು |
ಮುತ್ತಿನಕ್ಷತೆಯನು ಶೋಭನವೆನುತ ತಮ್ಮರ್ತಿಯಳಿಯಗೆ ತಳಿದರು | ೯೨ |
ರತ್ನದಾರತಿಗೆ ಸುತ್ತಮುತ್ತನೆ ತುಂಬಿ ಮುತ್ತೈದೆಯರೆಲ್ಲ ಧವಳದ |
ಮುತ್ತೈದೆರೆಲ್ಲ ಧವಳದ ಪದವ ಪಾಡುತ್ತಲೆತ್ತಿದರು ಸಿರಿವರಗೆ | ೯೩ |
ಬೊಮ್ಮ ತನ್ನರಸಿ ಕೂಡೆ ಬಂದೆರಗಿದ ಉಮ್ಮೆಯರಸ ನಮಿಸಿದ |
ಅಮ್ಮರರೆಲ್ಲರು ಬಗೆ ಬಗೆ ಉಡುಗೊರೆಗಳ ರಮ್ಮೆಯರಸಗೆ ಸಲಿಸಿದರು | ೯೪ |
ಸತ್ಯಲೋಕದ ಬೊಮ್ಮ ಕೌಸ್ತುಭರತ್ನವನಿತ್ತ ಮುಕ್ತ ಸುರರು ಮುದದಿಂದ |
ಮುತ್ತಿನ ಕಂಠೀಸರ ಮುಖ್ಯಪ್ರಾಣನಿತ್ತ ಮಸ್ತಕ ಮಣಿಯ ಶಿವನಿತ್ತ | ೯೫ |
ತನ್ನರಸಿ ಕೂಡೆ ಸವಿನುಡಿ ನುಡಿವಾಗ ವದನದಲ್ಲಿದ್ದಗ್ನಿ ಕೆಡದಂತೆ |
ವಹ್ನಿ ಪ್ರತಿಷ್ಟೆಯ ಮಾಡಿ ಅವನೊಳಗಿದ್ದ ತನ್ನಾಹುತಿಯಿತ್ತ ಸುರರಿಗೆ | ೯೬ |
ಕೊಬ್ಬಿದ ಖಳರೋಡಿಸಿ ಅಮೃತಾನ್ನ ಊಟಕ್ಕೆ ಉಬ್ಬಿದ ಹರುಷದಲಿ ಉಣಿಸಲು |
ಉಬ್ಬಿದ ಹರುಷದಲಿ ಉಣಿಸಬೇಕೆಂದು ಸಿಂಧು ಸರ್ಬರ್ಗೆದೆಯ ಮಾಡಿಸಿದ | ೯೭ |
ಮಾವನ ಮನೆಯಲ್ಲಿ ದೇವರಿಗೌತಣವ ದಾನವರು ಕೆಡಿಸದೆ ಬಿಡರೆಂದು |
ದಾನವರು ಕೆಡಿಸದೆ ಬಿಡರೆಂದು ಶ್ರೀಕೃಷ್ಣ ದೇವ ಸ್ತ್ರೀವೇಷವ ಧರಿಸಿದ | ೯೮ |
ತನ್ನ ಸೌಂದರ್ಯದಿOದನ್ನOತ ಮಡಿಯಾದ ಲಾವಣ್ಯದಿ ಮೆರೆವ ನಿಜ ಪತಿಯ |
ಹೆಣ್ಣುರೂಪವ ಕಂಡು ಕನ್ನೆ ಮಹಲಕ್ಷ್ಮಿ ಇವಗನ್ಯರೇಕೆಂದು ಬೆರಗಾದಳು | ೯೯ |
ಲಾವಣ್ಯಮಯವಾದ ಹರಿಯ ಸ್ತ್ರೀವೇಷಕ್ಕೆ ಭಾವುಕರೆಲ್ಲ ಮರುಳಾಗೆ |
ಮಾವರ ಸುಧೆಯ ಕ್ರಮದಿಂದ ಬಡಿಸಿ ತನ್ನ ಸೇವಕ ಸುರರಿಗುಣಿಸಿದ |೧೦೦ |
ನಾಗನ ಮೇಲೆ ತಾ ಮಲಗಿದ್ದಾಗ ಆಗಲೆ ಜಗವ ಜತನದಿ |
ಆಗಲೆ ಜಗವ ಜತನದಿ ಧರಿಸೆಂದು ನಾಗಬಲಿಯ ನಡೆಸಿದರು | ೧೦೧ |
ಕ್ಷುಧೆಯ ಕಳೆವ ನವರತ್ನದ ಮಾಲೆಯ ಮುದದಿಂದ ವಾರಿಧಿ ವಿಧಿಗಿತ್ತ |
ಚದುರ ಹಾರವ ವಾಯುದೇವರಿಗಿತ್ತ ವಿಧುವಿನ ಕಲೆಯ ಶಿವಗಿತ್ತ | ೧೦೨ |
ಶಕ್ರ ಮೊದಲಾದ ದಿಕ್ಪಾಲಕರಿಗೆ ಸೊಕ್ಕಿದ ಚೌದಂತ ಗಜಂಗಳ |
ಉಕ್ಕಿದ ಮನದಿಂದ ಕೊಟ್ಟ ವರುಣ ಮದುಮಕ್ಕಳಾಯುಷ್ಯವ ಬೆಳೆಸೆಂದ | ೧೦೩ |
ಮತ್ತೆ ದೇವೇಂದ್ರಗೆ ಪಾರಿಜಾತವನಿತ್ತ ಚಿತ್ತವಸೆಳೆವಪ್ಸರ ಸ್ತ್ರೀಯರ |
ಹತ್ತು ಸಾವಿರ ಕೊಟ್ಟ ವರುಣ ದೇವ ಹರಿ ಭಕ್ತಿಯ ಮನದಿ ಬೆಳೆಸೆಂದ | ೧೦೪ |
ಪೊಳೆವ ನವರತ್ನದ ರಾಶಿಯ ತೆಗೆತೆಗೆದು ಉಳಿದ ಅಮರರಿಗೆ ಸಲಿಸಿದ |
ಉಳಿದ ಅಮರರಿಗೆ ಸಲಿಸಿದ ಸಮುದ್ರ ಕಳುಹಿದನವರ ಮನೆಗಳಿಗೆ | ೧೦೫ |
ಉನ್ನಂತ ನವರತ್ನಮಯವಾದ ಅರಮನೆಯ ಚೆನ್ನೇಮಗಳಿಂದ ವಿರಚಿಸಿ |
ತನ್ನ ಅಳಿಯಗೆ ಸ್ಥಿರವ ಮಾಡಿಕೊಟ್ಟ ಇನ್ನೊಂದು ಕಡೆಯಡಿ ಇಡದಂತೆ | ೧೦೬ |
ಹಯವದನ ತನ್ನ ಪ್ರಿಯಳಾದ ಲಕ್ಷುಮಿಗೆ ಜಯವಿತ್ತ ಕ್ಷೀರಾಂಬುಧಿಯಲ್ಲಿ |
ಜಯವಿತ್ತ ಕ್ಷೀರಾಂಬುಧಿಯಲ್ಲಿ ಶ್ರೀಕೃಷ್ಣ ದಯದಿ ನಮ್ಮೆಲ್ಲರ ಸಲಹಲಿ | ೧೦೭ |
ಈ ಪದವ ಮಾಡಿದ ವಾದಿರಾಜೇಂದ್ರ ಮುನಿಗೆ ಶ್ರೀಪತಿಯಾದ ಹಯವದನ |
ತಾಪವ ಕಳೆದು ತನ್ನ ಶ್ರೀಚರಣ ಸಮೀಪದಲ್ಲಿಟ್ಟು ಸಲಹಲಿ | ೧೦೮ |
ಇಂತು ಸ್ವಪ್ನದಲ್ಲಿ ಕೊಂಡಾಡಿಸಿಕೊOಡ ಲಕ್ಷ್ಮಿಕಾಂತನ ಕಂದನೆನಿಸಿದ |
ಸಂತರ ಮೆಚ್ಚಿನ ವಾದಿರಾಜೇಂದ್ರ ಮುನಿಪಂಥದಿ ಪೇಳಿದ ಪದವಿದು | ೧೦೯ |
ಶ್ರೀಯರಸ ಹಯವದನ ಪ್ರಿಯ ವಾದಿರಾಜರಾಯ ರಚಿಸಿದ ಪದವಿದು |
ಆಯುಷ್ಯ ಭವಿಷ್ಯ ದಿನದಿನಕೆ ಹೆಚ್ಚುವುದು ನಿರಾಯಾಸದಿಂದ ಸುಖಿಪರು | ೧೧೦ |
ಬೊಮ್ಮನ ದಿನದಲ್ಲಿ ಒಮ್ಮೊಮ್ಮೆ ಈ ಮದುವೆ ಕ್ರಮದಿ ಮಾಡಿ ವಿನೋದಿಸುವ |
ನಮ್ಮನಾರಾಯಣಗೂ ಈ ರಮ್ಮೆಗಡಿಗಡಿಗೂ ಅಸುರಮೋಹನವೇ ನರನಟನೆ |೧೧೧|
ಮದುವೆಯ ಮನೆಯಲ್ಲಿ ಈ ಪದವ ಪಾಡಿದರೆ ಮದುಮಕ್ಕಳಿಗೆ ಮುದವಹುದು |
ವಧುಗಳಿಗೆ ವಾಲೆಭಾಗ್ಯ ದಿನದಿನಕ್ಕೆ ಹೆಚ್ಚುವದು ಮದನನಯ್ಯನ ಕೃಪೆಯಿಂದ|೧೧೨|