ಏಕಾದಶಿ ದಿನದಂದು ಮಾತ್ರ ತಿನ್ನದಿರಿ :-
ಎಲ್ಲವನ್ನೂ ಕೊಟ್ಟ ದೇವರು ಹೇಳಿದ್ದಾನೆ ” ನನಗಾಗಿ, ನನ್ನ ಪ್ರೀತಿಗಾಗಿ, ನಿಮ್ಮ ಮನೋಬಲಕ್ಕಾಗಿ, ಆತ್ಮಬಲಕ್ಕಾಗಿ, ನಿಮ್ಮ ಸಕಲ ಪಾಪಗಳ ಪರಿಹಾರಕ್ಕಾಗಿ ಒಂದು ದಿನ ಉಪವಾಸ ಮಾಡಿ. 14 ದಿನಗಳಲ್ಲಿ ಯಥೇಚ್ಛವಾಗಿ ತಿಂದು ಭೋಗ ಮಾಡಿ. ಆದರೆ ನನ್ನ ದಿನದಲ್ಲಿ ಆಂದರೆ ಹರಿದಿನದಲ್ಲಿ ಒಂದು ಹನಿ ನೀರನ್ನೂ ಸೇವಿಸಕೂಡದು ” ಎಂದು ಶ್ರೀಹರಿಯೇ ಈ ಮಾತನ್ನು ಹೇಳಿಕೊಂಡಿದ್ದಾನೆ.
ಯಾರೋ ಸ್ನೇಹಿತರು, ಆಪ್ತರು ಮನೆಗೆ ಬರುತ್ತಾರೆಂದು ಅಡಿಗೆ ಮಾಡಿಕೊಂಡು ಗಂಟೆಗಟ್ಟಲೇ ಕಾಯುತ್ತೇವೆ. ಅವರು ಬಂದ ಮೇಲೆ ಅವರಿಗೆ ಊಟಕ್ಕೆ ಹಾಕಿ ಊಟ ಮಾಡುತ್ತೇವೆ. ಗಮನಿಸಿ ಪರಮ ಆಪ್ತನಾದ, ಜನ್ಮ ಜನ್ಮಾಂತರಕ್ಕೂ ಸಖನಾದ ಭಗವಂತನು ನಮ್ಮ ಮನವೆಂಬ ಮಂದಿರಕ್ಕೆ ಬರುತ್ತಿದ್ದಾನೆ. ಅವನಿಗಾಗಿ ಒಂದು ದಿನ ಉಪವಾಸವಿದ್ದು ಕಾಯಲು ಸಾಧ್ಯವಿಲ್ಲವೇ ? ದೇವರು ಪ್ರತ್ಯಕ್ಷ ಆಗುವವರೆಗೂ ಸಣ್ಣ ಬಾಲಕ ಧ್ರುವರಾಜ ಆಹಾರ ಸೇವಿಸಲಿಲ್ಲ. ಆ ಯೋಗ್ಯತೆ ನಮ್ಮದಲ್ಲ. ಬೇಡ. ಆದರೆ ಹದಿನೈದು ದಿನಕೊಮ್ಮೆ ಉಪವಾಸ ಮಾಡುವುದು ಬೇಡವೇ ? ಮನುಷ್ಯನಿಗೆ ಉತ್ತಮ ಆತ್ಮಬಲ, ಮನೋಬಲ ತಂದುಕೊಡುವ ಏಕೈಕ ಸಾಧನೆ ಅಂದರೆ ಅದು ಏಕಾದಶಿಯ ಉಪವಾಸ. ಇದು ಹಿರಿದಾದ ವೈಷ್ಣವದೀಕ್ಷೆ. ಏಕದಶಿಯನ್ನು ಎಲ್ಲರೂ ಮಾಡುವುದೇ ಆದರೆ ದೇವರು ನಮ್ಮ ಹತ್ತಿರ ಬೇಗನೇ ಬರುತ್ತಾನೆ. ಇದರಲ್ಲಿ ಯಾವ ಸಂಶಯವೂ ಇಲ್ಲ. ಯಾಕೆಂದರೆ ಮಕ್ಕಳು ಉಪವಾಸ ಇದ್ದಾರೆಂದರೆ ತಾಯಿ ತಡಮಾಡುವುದಿಲ್ಲ. ಬೇಗನೇ ಹತ್ತಿರ ಬಂದು ಉಣಿಸುತ್ತಾಳೆ. ಹಾಗೆ ನಮ್ಮೆಲ್ಲರ ತಂದೆ – ತಾಯಿಯಾದ ಭಗವಂತ ನಮ್ಮ ಹತ್ತಿರ ಬೇಗ ಬರುತ್ತಾನೆ. ದೇವರನ್ನು ಕಾಣುವುದಕ್ಕಾಗಿ ಉಪವಾಸ ಮಾಡಿ….