ಇಂದಿನ ಗಾದೆಯ ವಿಷಯ – ಉಪ್ಪಿಗಿಂತ ರುಚಿ ಇಲ್ಲ , ತಾಯಿಗಿಂತ ಬಂಧುವಿಲ್ಲ
ಸಂಕ್ಷಿಪ್ತರ್ಥದಲ್ಲಿ ಉಪ್ಪು ಇಲ್ಲದ ಯಾವುದೇ ಆಡುಗೆ ರುಚಿ ಇರುವುದಿಲ್ಲ ಹಾಗೂ ಸುಖ-ದುಃಖ , ನೋವು-ನಲಿವು ಹಂಚಿಕೊಳ್ಳಲು ತಾಯಿಗಿಂತ ಉತ್ತಮವಾದ ಸ್ನೇಹಿತರಿಲ್ಲ.
ಈ ಗಾದೆಯ ವಿವರಣೆ ಎಂದರೆ, ಹೆಚ್ಚಾಗಿ ಸಿಹಿ ಅಡುಗೆ ಬಿಟ್ಟು ಯಾವುದೇ ಅಡುಗೆ ಮಾಡಬೇಕಾದರು ಉಪ್ಪು ಬೇಕೇ ಬೇಕಾಗುತ್ತದೆ. ಉಪ್ಪಿಲ್ಲದೆ ಯಾವುದೇ ಅಡುಗೆ ಕೂಡ ರುಚಿಸುವುದಿಲ್ಲ. ಒಂದು ಚಿಟಿಕೆ ಉಪ್ಪಿನಿಂದ ಅಡುಗೆಯ ರುಚಿಯೇ ಬದಲಾಗಿ ಹೋಗುತ್ತದೆ. ಹದವಾದ ಉಪ್ಪಿನ ಬೆರಕೆಯಿಂದ ಆಡುಗೆ ಸ್ವಾದಿಷ್ಟವಾಗುತ್ತದೆ. ಅಂದರೆ ಆಡುಗೆ ಮಾಡುವಾಗ ಎಂತೆಂತ ಪದಾರ್ಥಗಳನ್ನು ಬಳಸಿದರು ಕೂಡ ಉಪ್ಪಿಗೆ ಇರುವ ಪ್ರಾಮುಖ್ಯ ಬೇರೆ ಯಾವ ಪದಾರ್ಥಕ್ಕು ಕೂಡ ಇಲ್ಲ ಎಂದು ಸೂಚ್ಯವಾಗಿ ಹೇಳಿದ್ದಾರೆ. ಹಾಗೆಯೇ ಪ್ರತಿಯೊಬ್ಬರ ಜೀವನದಲ್ಲಿ ಅಮ್ಮನ ಪ್ರಾಮುಖ್ಯತೆ ಎಷ್ಟಿದೆ ಎಂದು ಈ ಗಾದೆಯ ಮೂಲಕ ಹಿರಿಯರು ಸೂಚ್ಯವಾಗಿ ತಿಳಿಸಿದ್ದಾರೆ. ಪ್ರತಿಯೊಬ್ಬ ಮನುಜನಿಗೂ ಅಮ್ಮ ಎಲ್ಲ ವಿಷಯದಲ್ಲೂ ಬಹಳ ಪ್ರಮುಖ, ಹುಟ್ಟುವ ಮುಂಚೆ ಗರ್ಭದಲ್ಲೇ ಮಗುವನ್ನು ಮಾತಾಡಿಸುತ್ತ ಪ್ರೀತಿಯ ಬಂಧುವಾಗುತ್ತಾಳೆ, ತದನಂತರ ಹುಟ್ಟಿನಿಂದ ಸಾವಿನವರೆಗೂ ಒಂದಲ್ಲ ಒಂದು ರೀತಿ ನಮ್ಮ ಜೀವನದ ಘಟನೆಗಳಲ್ಲಿ ಒಂದು ಭಾಗವಾಗಿ, ನಮ್ಮ ಸುಖದಲ್ಲಿ ನಗುವಾಗಿ, ನಮ್ಮ ದುಃಖದಲ್ಲಿ ಕಣ್ಣೀರೊರೆಸುವ ಬಂಧುವಾಗಿ , ನಮ್ಮ ಜೀವನದ ಭಾವನೆಯಲ್ಲಿ ಭಾಗವಾಗುತ್ತಾಳೆ. ಇದೇ ವಿಷಯವನ್ನು ಹಿರಿಯರು ತಮ್ಮ ಅನುಭವದಲ್ಲಿ ಕಂಡದನ್ನು ಸೂಚ್ಯವಾಗಿ ಈ ಗಾದೆಯ ಮೂಲಕ ತಿಳಿಸಿದ್ದಾರೆ.