ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇದಸೇ
ರಘುನಾಥಾಯ ನಾಥಾಯ
ಸೀತಾಯಾಪತಯೇ ನಮಃ
ತನ್ನನ್ನು ತಾನು ಅರಿತುಕೊಳ್ಳುವುದು
ಆಗುವುದೆಲ್ಲಾ ಒಳ್ಳೆಯದಕ್ಕೆ
ರಾಜನೊಬ್ಬ ತನ್ನ ಮಂತ್ರಿಯೊಂದಿಗೆ ಬೇಟೆಯಾಡಲು ಕಾಡಿಗೆ ಹೋದ. ಆ ರಾಜ ನಿರೀಶ್ವರವಾದಿಯಾಗಿದ್ದ. ಆದರೆ ಮಂತ್ರಿಗೆ ದೇವರಲ್ಲಿ ಅಪಾರವಾದ ನಂಬಿಕೆಯಿತ್ತು. ಆತ ಮನುಷ್ಯನಿಗೆ ಏನೇ ಜರುಗಿದರೂ ಅದು ಅವನ ಒಳ್ಳೆಯದಕ್ಕೇ ಎಂದು ಭಾವಿಸುತ್ತಿದ್ದ. ರಾಜನಿಗೆ ಅಡವಿಯಲ್ಲಿ ಜಿಂಕೆಯೊಂದು ಕಂಡಿತು. ರಾಜ ಆ ಜಿಂಕೆಯನ್ನು ಕೊಲ್ಲಲು ಆತುರಾತುರವಾಗಿ ಬಾಣ ಹೂಡಲು ಪ್ರಯತ್ನಿಸಿದಾಗ ಆತನ ಕೈಯಲ್ಲಿನ ಒಂದು ಬೆರಳು ತುಂಡಾಯಿತು. ಆಗ ಮಂತ್ರಿ, “ಮಹಾರಾಜಾ! ಚಿಂತಿಸಬೇಡಿ, ಆಗುವುದೆಲ್ಲಾ ಒಳ್ಳೆಯದಕ್ಕೇ!” ಎಂದು ರಾಜನನ್ನು ಸಂತೈಸಿದ. ಆದರೆ ಮಂತ್ರಿಯ ಮಾತುಗಳನ್ನು ಕೇಳಿ ರಾಜನಿಗೆ ವಿಪರೀತವಾದ ಕೋಪವುಂಟಾಯಿತು. ಆತ ಮಂತ್ರಿಯನ್ನು ಹತ್ತಿರದಲ್ಲಿದ್ದ ಹಾಳು ಬಾವಿಯೊಂದಕ್ಕೆ ತಳ್ಳಿ, “ಆಗುವುದೆಲ್ಲಾ ಒಳ್ಳೆಯದಕ್ಕೇ!” ಎಂದು ಹೇಳಿ ಮುಸಿಮುಸಿ ನಗುತ್ತಾ ಅಲ್ಲಿಂದ ಹೊರಟುಹೋದ.
ಈಗ ರಾಜ ತನ್ನ ಅರಮನೆಯ ದಾರಿ ಹಿಡಿದು ಹೊರಟ. ಆದರೆ ದಾರಿಯಲ್ಲಿ ಕಳ್ಳರ ಗುಂಪೊಂದು ಅವನನ್ನು ಬಂಧಿಸಿತು. ಅವರು ಕಾಳಿಮಾತೆಯ ಆರಾಧಕರಾಗಿದ್ದರು, ಅವರು ನರಬಲಿಕೊಟ್ಟು ಆಕೆಯ ಅನುಗ್ರಹ ಪಡೆಯಲು ಕಾತರರಾಗಿದ್ದರು. ಅವರು ಅದಕ್ಕಾಗಿ ಒಬ್ಬ ಮನುಷ್ಯನಿಗಾಗಿ ಹುಡುಕುತ್ತಿದ್ದರು. ರಾಜ ಸಿಕ್ಕ ಕೂಡಲೇ ಅವರು ಆತನನ್ನು ಕಾಳಿಮಾತೆಯ ಪೂಜೆಯನ್ನು ಮಾಡುತ್ತಿದ್ದ ಮಾಂತ್ರಿಕನ ಬಳಿಗೆ ಎಳೆದೊಯ್ದರು. ಅಂಗ ಊನವಿರುವ ವ್ಯಕ್ತಿಯನ್ನು ದೇವರಿಗೆ ಬಲಿಕೊಡಬಾರದೆನ್ನುವುದು ಆ ಪೂಜೆಯಲ್ಲಿದ್ದ ನಿಯಮ. ಅದಕ್ಕಾಗಿ ಅವರು ರಾಜನ ಅಂಗಾಂಗಳನ್ನು ಪರೀಕ್ಷಿಸುತ್ತಿರುವಾಗ ಆತನ ಕೈಯಲ್ಲಿ ಒಂದು ಬೆರಳು ಕತ್ತರಿಸಲ್ಪಟ್ಟಿರುವುದು ಕಾಣಿಸಿತು. ಆದ್ದರಿಂದ ರಾಜನು ಬಲಿಕೊಡಲು ಯೋಗ್ಯನಲ್ಲವೆಂದು ಮಾಂತ್ರಿಕನು ತೀರ್ಮಾನಿಸಿ ತನ್ನ ಅನುಚರರಿಗೆ ರಾಜನನ್ನು ಬಿಟ್ಟು ಕಳುಹಿಸಲು ಹೇಳಿದ. ಈಗ ರಾಜನಿಗೆ ಜ್ಞಾನೋದಯವಾಯಿತು. ತನ್ನ ಮಂತ್ರಿ ಹೇಳಿದ ಮಾತಿನಲ್ಲಿ ನಿಜವಿದೆ ಎನಿಸಿತು. ಅವನ ಕೈಬೆರಳು ತುಂಡಾದುದರಿಂದ ಆತನ ಪ್ರಾಣ ಉಳಿದಿತ್ತು. ಈಗ ಆತ ತನ್ನ ಮಂತ್ರಿಯನ್ನು ಹುಡುಕಿಕೊಂಡು ಹಾಳು ಬಾವಿಯಿದ್ದಲ್ಲಿಗೆ ಬಂದ. ಒಂದು ಉದ್ದನೆಯ ವಸ್ತ್ರವನ್ನು ಇಳಿಬಿಟ್ಟು ಮಂತ್ರಿಯನ್ನು ಬಾವಿಯಿಂದ ಮೇಲೆತ್ತಿದ. ರಾಜ ಮಂತ್ರಿಗೆ ನಡೆದುದೆಲ್ಲವನ್ನೂ ವಿವರಿಸಿ, “ನಿನ್ನನ್ನು ಬಾವಿಯಲ್ಲಿ ತಳ್ಳಿದ್ದರಿಂದ ನಿನಗೇನು ಒಳಿತಾಯಿತು?” ಎಂದು ಪ್ರಶ್ನಿಸಿದ. ಆಗ ಆ ಮಂತ್ರಿ ನಸುನಕ್ಕು, “ಮಹಾಪ್ರಭೂ! ಒಂದು ವೇಳೆ ನೀವು ನನ್ನನ್ನು ಬಾವಿಯಲ್ಲಿ ತಳ್ಳದೇ ಇದ್ದರೆ ಕಳ್ಳರು ಅಂಗ ಊನವಿರುವ ನಿಮ್ಮನ್ನು ಬಿಟ್ಟು ನಿಮ್ಮ ಜೊತೆಯಲ್ಲಿದ್ದ ನನ್ನನ್ನು ಕಾಳಿಮಾತೆಗೆ ಬಲಿಕೊಡುತ್ತಿದ್ದರು. ಆದ್ದರಿಂದ ಆಗುವುದೆಲ್ಲಾ ಒಳ್ಳೆಯದಕ್ಕೇ!” ಎಂದು ವಿವರಿಸಿದ.
ಶ್ರೀ ಹರಿ ಕೃಷ್ಣಾರ್ಪಣಮಸ್ತು.