ಕೃಷ್ಣಉಡುಪಿಗೆ ಬಂದ ರೋಮಾಂಚಕ ಕಥೆ
ಉಡುಪಿ ಕ್ಷೇತ್ರದಲ್ಲಿರೋ ಕೃಷ್ಣನ ಮೂರ್ತಿ ಮಧ್ವಾಚಾರ್ಯರು ಸ್ಥಾಪನೆ ಮಾಡಿದ್ದು ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ. ಆದ್ರೆ ಅದು ಉಡುಪೀಲಿ ಕೆತ್ತಿದ್ದಲ್ಲ…
ಅದು ಉಡುಪಿಗೆ ಹೇಗೆ ಬಂತು, ಯಾರು ಈ ಮೂರ್ತಿಯನ್ನು ಮಾಡ್ಸಿದ್ದು ಅಂತ ಕೇಳಿ…
ಕಥೆ ಶುರು ಆಗೋದು ದ್ವಾಪರ ಯುಗದ ಕೊನೆಯಲ್ಲಿ. ದ್ವಾರಕೆಯಲ್ಲಿ ಕೃಷ್ಣನ ತಾಯಿ ದೇವಕಿ ಅವನ ಬಾಲ್ಯ ಲೀಲೆಗಳನ್ನ ಮತ್ತೆ ನೋಡ್ಬೇಕು ಅಂತ ಹಂಬಲಿಸ್ತಾಳಂತೆ…ಅದಕ್ಕೆ ಕೃಷ್ಣ ಮತ್ತೆ ಮಗುವಾಗಿ ದೇವಕಿ ತೊಡೆ ಮೇಲೆ ಕೂತ್ಕೊತಾನಂತೆ. ದೇವಕಿ ಬೆಣ್ಣೆ ಕಡ್ಯಕ್ಕೆ ಹೋದಾಗ ಮಡಿಕೆ ಒಡೆದು ಅಲ್ಲಿದ್ದ ಬೆಣ್ಣೆ ತಿಂದು ಕಡಗೋಲು, ಹಗ್ಗ ಕಿತ್ಕೊಂಡು ನಿಂತ್ಕೊತಾನಂತೆ…ಇದನ್ನೆಲ್ಲ ಕೃಷ್ಣನ ಹೆಂಡತಿ ರುಕ್ಮಿಣಿನೂ ನೋಡಿ ತುಂಬಾ ಖುಶಿ ಪಡ್ತಾಳೆ… ಈ ದೃಶ್ಯ ಸದಾ ತನ್ನ ನೆನಪಿನಲ್ಲಿ ಇರ್ಬೇಕು ಅಂತ ಒಂದು ಮೂರ್ತಿ ಮಾಡಿಸ್ತಾಳಂತೆ. ವಿಶ್ವಕರ್ಮ ಮಾಡಿದ ಆ ಮೂರ್ತಿಗೆ ಬಲಗೈನಲ್ಲಿ ಕಡಗೋಲು ಎಡಗೈನಲ್ಲಿ ಹಗ್ಗ… ರುಕ್ಮಿಣಿ ದಿನಾಗಲೂ ಅದಕ್ಕೆ ಪೂಜೆ ನಡೆಸಿಕೊಂಡು ಬರ್ತಾ ಇರ್ತಾಳೆ.
ಹೀಗೇ ಕೃಷ್ಣನ ಅವತಾರ ಮುಗಿದಾಗ ಕೃಷ್ಣ, ರುಕ್ಮಿಣಿ ಸ್ವರ್ಗಕ್ಕೆ ಹೋಗ್ತಾರಂತೆ. ಅರ್ಜುನ ಆ ಮೂರ್ತಿನ ತೊಗೊಂಡು ದ್ವಾರಕೆಯಲ್ಲಿರೋ “ರುಕ್ಮಿಣಿವನ”ದಲ್ಲಿ ಬಚ್ಚಿಡ್ತಾನಂತೆ… ಇದೆಲ್ಲ 5000 ವರ್ಷ ಹಿಂದಿನ ಕಥೆ…
ಕಾಲ ಕಳೀತಿದ್ದಂಗೆ ಆ ಮೂರ್ತಿ ಗೋಪಿಚಂದನದಿಂದ ತುಂಬ್ಕೊಂಡು ಒಂದು ದೊಡ್ಡ ಕಲ್ಲುಗುಂಡಿನ ತರಹ ಆಯ್ತಂತೆ…13ನೇ ಶತಮಾನದಲ್ಲಿ ವ್ಯಾಪಾರಿಗಳ ಒಂದು ಹಡಗು ದ್ವಾರಕಾ ತೀರದಿಂದ ಹೊರಟಿತ್ತಂತೆ… ಈ ಗೋಪಿಚಂದನದ ಗುಂಡುಕಲ್ನ ಕೃಷ್ಣನ ವಿಗ್ರಹ ಅಂತ ತಿಳೀದೆ ಹಡಗಿಗೆ ನಿಲುಭಾರವಾಗಿ ಇಟ್ಕೊಂಡಿದ್ರಂತೆ!
ಇನ್ನೇನು ಉಡುಪಿ ತೀರದ ಹತ್ತಿರ ಬಂದಾಗ ಬಿರುಗಾಳಿ ಕಾರಣ ಹಡಗು ಅಲ್ಲಾಡಕ್ಕೆ ಶುರುವಾಯ್ತಂತೆ… ಅದೇ ದಿನ ಮಧ್ವಾಚಾರ್ಯರು ಮಲ್ಪೆ ಬೀಚ್ ಹತ್ತಿರ ದ್ವಾದಶ ಸ್ತೋತ್ರ ರಚನೆ ಮಾಡೋದರ ಬಗ್ಗೆ ಯೋಚ್ನೆ ಮಾಡ್ಕೊಂಡು ಸ್ನಾನ ಮಾಡ್ತಿದ್ದರಂತೆ…ಹಡಗು ಮುಳುಗಿ ಹೋಗ್ತಿರೋದು ನೋಡಿ ಅವರು ಬಟ್ಟೆ ಬೀಸಿದ್ರಂತೆ. ಬಿರುಗಾಳಿ ತಣ್ಣಗಾಗಿ ಹಡಗು ನಿಲ್ಸಕ್ಕೆ ಅನುಕೂಲ ಆಯ್ತಂತೆ. ಹಡಗಿನ ಕ್ಯಾಪ್ಟನ್ ಬಹಳ ಖುಷಿಯಿಂದ ಮಧ್ವಾಚಾರ್ಯರ ಹತ್ತಿರ ಬಂದು ಸಹಾಯ ಮಾಡಿದ್ದಕ್ಕೆ ಹಡಗಿನಲ್ಲಿರುವ ಯಾವ ಸಾಮಾನಾದರೂ ತೊಗೊಳ್ಳಿ ಅಂತ ಅಂದನಂತೆ. ಆಗ ಆಚಾರ್ಯರು ಗೋಪಿಚಂದನದ ಕಲ್ಲುಗುಂಡೆ ತೊಗೊಂಡರಂತೆ…
ದಾರಿ ಮಧ್ಯದಲ್ಲಿ ಆ ಗೋಪಿಚಂದನದ ಉಂಡೆ ಬಿದ್ದು ಚೂರಾಗಿ ಒಳಗಡೆ ಬಲರಾಮ ಮತ್ತು ಕೃಷ್ಣನ ಮೂರ್ತಿ ಕಾಣಿಸ್ತಂತೆ. ಶಿಷ್ಯರಿಗೆ ಅದನ್ನ ಎತ್ತಕ್ಕೆ ಆಗ್ಲೇ ಇಲ್ಲವಂತೆ. ಮಧ್ವಾಚಾರ್ಯರು ಅದನ್ನ ಸಲೀಸಾಗಿ ನಾಲ್ಕು ಮೈಲಿ ಎತ್ಕೊಂಡು ದ್ವಾದಶ ಸ್ತೋತ್ರ ಪೂರ್ತಿ ರಚಿಸಿಕೊಂಡು ಉಡುಪಿಗೆ ಬಂದ್ರಂತೆ…
ಮಧ್ವ ಸರೋವರದಲ್ಲಿ ಆ ಮೂರ್ತಿಗೆ ಸ್ನಾನ ಮಾಡಿಸಿ ಸಂಕ್ರಾಂತಿ ದಿನ ಕೃಷ್ಣ ಮಠದಲ್ಲಿ ಪ್ರತಿಷ್ಠಾಪನೆ ಮಾಡಿದ್ರಂತೆ…