ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ವಿಂಧ್ಯ ಪರ್ವತದ ಕಥೆ ಇತಿಹಾಸ

ವಿಂಧ್ಯನಿಗೆ ನಮನ

ವಿಂಧ್ಯ ಮತ್ತು ಮೇರು ಎರಡೂ ಅತ್ಯಂತ ಪ್ರಾಚೀನ ಪರ್ವತಗಳು. ಹೌದು, ಇದು ಆಶ್ಚರ್ಯವೆನ್ನಿಸುತ್ತದೆ. ವಿಂಧ್ಯಪರ್ವತದ ತಪ್ಪಲಿನ ಪ್ರದೇಶದ ೧೮೫೮ ಹೆಕ್ಟೇರ್ ಪ್ರದೇಶದಲ್ಲಿದ್ದ ಕುರುಹುಗಳು ಈ ಪರ್ವತ ಪ್ರದೇಶವನ್ನು ಸುಮಾರು ಹದಿನೈದು ಸಾವಿರ ವರ್ಷಗಳಿಗೂ ಹೆಚ್ಚಿನ ಪ್ರಾಚೀನತೆಗೆ ಕೊಂಡೊಯ್ಯುತ್ತವೆ.
ರಾಮಾಯಣದ ಅರಣ್ಯಕಾಂಡದ 11ನೇ ಸರ್ಗದಲ್ಲಿ ಒಂದು ಕಥೆ ಬರುತ್ತದೆ. ಮೇರು ಪರ್ವತ ಅತ್ಯಂತ ಎತ್ತರವಾಗಿ ಬೆಳೆದು ಅದಕ್ಕೆ ಸೂರ್ಯ ಸುತ್ತುತ್ತಾನಂತೆ ಆಗ ವಿಂದ್ಯನಿಗೆ ಅಸೂಯೆ ಹೆಚ್ಚಾಗುತ್ತದೆ. ವಿಂಧ್ಯ ಸೂರ್ಯನಲ್ಲಿ ಆಕ್ಷೇಪವನ್ನು ವ್ಯಕ್ತ ಪಡಿಸುತ್ತಾನೆ. ನೀನು ಮೇರುವಿಗೆ ಮಾತ್ರ ಸುತ್ತುತ್ತಿರುವೆ ನನಗೂ ಸುತ್ತು ತಿರುಗು ಎನ್ನುತ್ತಾನೆ. ಸೂರ್ಯ ಅದಕ್ಕೆ ಮೇರು ಎಂದರೆ ದೇವಪರ್ವತ ಅವನಿಗೆ ತಿರುಗಲೇ ಬೇಕೆಂದು ದೇವತೆಗಳ ಅಪ್ಪಣೆ ಇದೆ ಎಂದು ಉತ್ತರಿಸುತ್ತಾನೆ. ಆಗ ವಿಂಧ್ಯಪರ್ವತವು ಸೂರ್ಯನ ಸಂಚಾರವನ್ನೂ ತಡೆಗಟ್ಟುವ ರೀತಿಯಲ್ಲಿ ಬೆಳೆಯುತ್ತಿರಲು ಸೂರ್ಯನು ಅಗಸ್ತ್ಯಮುನಿಗಳ ಬಳಿಗೆ ಹೋಗಿ ತನ್ನ ಕಷ್ಟವನ್ನು ನಿವೇದಿಸಿಕೊಳ್ಳುತ್ತಾನೆ. ಅಗಸ್ತ್ಯರು ವಿಂಧ್ಯನ ಬಳಿಗೆ ಹೋಗಿ ತಾವು ಪುಣ್ಯ ತೀರ್ಥಕ್ಕೆ ಸ್ನಾನಮಾಡಲು ಹೋಗುತ್ತಿರುವುದಾಗಿಯೂ ತಾವು ವೃದ್ಧರಾದುದರಿಂದ ಪರ್ವತವನ್ನು ಹತ್ತಿ ಇಳಿದು ಹೋಗಲು ಸಾಧ್ಯವಾಗದೆಂದೂ ಆದುದರಿಂದ ವಿಂಧ್ಯನಲ್ಲಿ ನೀನು ಬಾಗ ಬೇಕೆಂದೂ ಹೇಳಿದರು. ಮಹರ್ಷಿಗಳ ಮಾತಿನಂತೆ ವಿಂಧ್ಯನು ಬಾಗಿದನು. ಅಗಸ್ತ್ಯರು ಪರ್ವತವನ್ನು ದಾಟಿದನಂತರ ‘ತೀರ್ಥದಲ್ಲಿ ಸ್ನಾನಮಾಡಿ ಪಾಪವನ್ನು ಕಳೆದುಕೊಂಡು ಹಿಂದಿರುಗಿ ಇದೇ ಮಾರ್ಗವಾಗಿಯೇ ಬರುತ್ತೇನೆ. ಅಲ್ಲಿಯವರೆಗೂ ನೀನು ಬಾಗಿಯೇ ಇರಬೇಕು. ಇಲ್ಲದಿದ್ದರೆ ಶಾಪಕೊಟ್ಟುಬಿಡುತ್ತೇನೆ’ ಎಂದು ಹೇಳಿದರು. ಮುಂದೆ ಅಗಸ್ತ್ಯರು ಹಿಂದಿರುಗಲೂ ಇಲ್ಲ. ಪರ್ವತವು ಮೇಲೇಳಲೂ ಇಲ್ಲ ಎನ್ನುವ ಕಥೆ ಬರುತ್ತದೆ.
ಇದು ರಾಮಾಯಣದಲ್ಲಿ ಬರುವ ವಿಂಧ್ಯನ ಕಥೆಯನ್ನು ಸಂಕ್ಷೇಪಿಸಿ ಬರೆದಿದ್ದೇನೆ. ಇನ್ನು ಮಹಾಭಾರತಕ್ಕೆ ಬಂದಾಗಲೂ ಇದೇ ಕಥೆ ದೊರಕುತ್ತದೆ. ವಿಂಧ್ಯ ಅಂತೂ ಮೇರುವಿನಂತೆಯೇ ಬೃಹದಾಕಾರವಾಗಿ ಎತ್ತರಕ್ಕೆ ಬೆಳೆದ ಪರ್ವತ ಎನ್ನುವುದು ತಿಳಿಯುತ್ತದೆ. ಸ್ಕಂಧಪುರಾಣದ ಕಾಶೀಕಂಡದಲ್ಲಿ, ದೇವೀಭಾಗವತ ಮತ್ತು ಮತ್ಸ್ಯಪುರಾಣದಲ್ಲಿ ಇದರ ಕುರಿತು ಉಲ್ಲೇಖಗಳು ಸಿಗುತ್ತವೆ. ಸರಿ ನಾನು ಮಹಾಭಾರತದ ಕಥೆಯನ್ನು ಗಮನಿಸಿದಾಗ ಪಾಂಡವರು ಬಹಳ ಸಮಯ ವಿಂಧ್ಯದ ತಪ್ಪಲಿನಲ್ಲಿಯೇ ಜೀವಿಸಿದ್ದರು. ಮಹಾಭಾರತದ ಕಥೆಯಲ್ಲಿ ಒಬ್ಬೊಬ್ಬರದು ಒಂದೊಂದು ಕಥೆ. ಮಹಾಭಾರತದ ಕಥೆಯಲ್ಲಿ ಅತ್ಯಂತ ಇಷ್ಟವಾಗುವ ಪಾತ್ರ ಭೀಮನದ್ದು. ಈತ ಪರಾಕ್ರಮಿ ಹಠವಾದಿ, ಛಲದ ಪ್ರವೃತ್ತಿ. ಕೀಟಲೆ ಮಾಡುವ ಜಾಯಮಾನ. ಮಹಾ ಧೈರ್ಯಶಾಲಿಯಾಗಿದ್ದ. ಆಗ ಪಾಂಡವರ ವನವಾಸದ ಕಾಲ ಈತ ಕೆಲಸಗಳನ್ನು ಮಾಡಿ ಬಂದು ಬಸವಳಿದು ಕುಳಿತುಕ್ಕೊಳ್ಳಿತ್ತಿದ್ದ ಒಂದು ಜಾಗದ ವಿಷಯದ ಕುರಿತಾಗಿ ನಾನು ಸ್ವಲ್ಪವೇ ಬರೆಯುತ್ತಿದ್ದೇನೆ. ಹೌದು, ಇದು ಇರುವುದು ಮಧ್ಯಪ್ರದೇಶದ ಭೂಪಾಲ್‌ನಿಂದ ಕೇವಲ ೪೫ ಕಿಲೋಮೀಟರು ಅಂತರದಲ್ಲಿರುವ ಭೀಮಬೇಟ್ಕಾ ಎನ್ನುವ ಪ್ರದೇಶದ ಕುರಿತಾಗಿ. ಭೀಮ ಕುಳಿತುಕೊಳ್ಳುತ್ತಿದ್ದ ಗುಹೆ ಅದು. ಭೀಮ ಅಲ್ಲಿ ಕುಳಿತು ಎಲ್ಲರೊಡನೆ ಹರಟೆಹೊಡೆಯುತ್ತಿದ್ದ, ಮಾತನಾಡುತ್ತಿದ್ದ ಚರ್ಚಿಸುತ್ತಿದ್ದ ಜಾಗ ಅದು. ಬೈಟ್ ಎನ್ನುವುದು ಹಿಂದಿಯಲ್ಲಿ ಕುಳಿತುಕೊಳ್ಳುವುದಕ್ಕೆ ಹೇಳುವುದು. ಈ ಬೈಟ್ ಎನ್ನುವ ಶಬ್ದವೇ ಬೇಟ್ಕಾ ಆಗಿದೆ. ಅತ್ಯಂತ ಸುಂದರವಾದ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ಈ ಪ್ರದೇಶ ಈಗ ವಿಶ್ವ ಪಾರಂಪರಿಕ ತಾಣದ ಗರಿಮೆ ಪಡೆದುಕೊಂಡಿದೆ. ಭಾರತವೇ ಹಾಗೇ ಒಂದಿಲ್ಲೊಂದು ವೈವಿಧ್ಯತೆಯನ್ನು ಹೊಂದಿರುತ್ತದೆ. ಇಲ್ಲಿನ ಪ್ರತಿಯೊಂದು ಕಲ್ಲೂ ಸಹ ಪುರಾತನ ಚರಿತ್ರೆಯ ಸಾಕ್ಷೀಭೂತವಾಗಿ ನಿಂತಿವೆ. ನಮ್ಮ ದೇಶ ಜಗತ್ತಿನ ಅತ್ಯಂತ ಪ್ರಾಚೀನ ದೇಶಗಳ ಪಟ್ಟಿಯಲ್ಲಿ ಸೇರಿಕೊಂಡಿರುವುದೇ ನಮಗೆ ಹೆಮ್ಮೆ ಪಡುವ ವಿಷಯ. ಆದರೆ ನಾವು ಮಾತ್ರ ಈಜಿಪ್ಟಿನ ಪಿರಮಿಡ್ಡುಗಳ ಅಧ್ಯಯನದಲ್ಲಿಯೇ ಕಾಲ ಕಳೆಯುತ್ತೇವೆ.
ಭೀಮ್ ಬೇಟ್ಕಾದಲ್ಲಿರುವ ಗುಹೆಗಳು ಪ್ರಾಚೀನ ಮಾನವನ ವಸತಿ ಇದ್ದ ಕುರಿತಾಗಿ ನಿಸರ್ಗವೇ ಅತ್ಯಂತ ಜಾಗ್ರತೆಯಿಂದ ಕಾದು ಕೊಟ್ಟಿರುವ ಅಪೂರ್ವ ಸಂಗ್ರಹ. ಇವುಗಳು ಸುಮಾರು ೧೫ ಸಾವಿರ ವರ್ಷಗಳಷ್ಟು ಹಳೆಯವು ಎನ್ನುವುದು ಕಾರ್ಬನ್ ಡೇಟಿಂಗ್ ಪರೀಕ್ಷೆಯಿಂದ ದೃಢಪಟ್ಟಿವೆ. ಈ ಗುಡ್ಡ ಬೆಟ್ಟಗಳ ಮೇಲೆ ಪಾಂಡವ ಭೀಮಸೇನ ಕುಳಿತು ಜನರೊಂದಿಗೆ ಮಾತನಾಡುತ್ತಿದ್ದನಂತೆ. ಅದಕ್ಕೇ ಇದು ಭೀಮ್ ಬೇಟ್ (ಬೈಟ್ = ಕುಳಿತುಕೊಳ್ಳುವುದು) ಕಾ ಆಯಿತು ಎನ್ನಲಾಗುತ್ತದೆ. ಈ ಕಥೆಗೆ ಆಧಾರವಾಗಿ ಪರಿಸರದ ಸುತ್ತಲಿನ ಹಳ್ಳಿಗಳಿಗೂ ಪಾಂಡವರ ಹೆಸರುಗಳಿವೆ.
ಇದು ಸಂಶೋಧಿಸಲ್ಪಟ್ಟಿದ್ದು ಒಂದು ಆಕಸ್ಮಿಕ ಎನ್ನಲಾಗುತ್ತದೆ.
೧೯೭೫ನೇ ಇಸವಿಯಲ್ಲಿ ಒಮ್ಮೆ ಇತಿಹಾಸ ಸಂಶೋಧಕ ಉಜ್ಜಯಿನಿಯ ವಿಕ್ರಂ ವಿಶ್ವವಿದ್ಯಾಲಯಯದ ವಿಷ್ಣು ಶ್ರೀಧರ ವಾಕಣ್ಕರ್ ಅವರು ರೈಲಿನಲ್ಲಿ ಹೋಗುತ್ತಿರುವಾಗ ರೈಲ್ವೇ ಕ್ರಾಸಿಂಗ್‌ನಲ್ಲಿ ರೈಲು ನಿಲ್ಲುತ್ತದೆ. ಆಗ ವಾಕಣ್ಕರ್ ಅವರಿಗೆ ನಿಸರ್ಗದ ನಡುವೆ ಏನೋ ಇದೆ ಎಂದು ಭಾಸವಾಗುತ್ತದೆ. ಎಷ್ಟಂದರೂ ಹುಡುಕುವ ಸ್ವಭಾವ ಅವರದ್ದು. ವಾಕಣ್ಕರ್ ಅವರು ಅಲ್ಲಿಯೇ ಅಲೆದಾಡಿ ಈ ಭೀಮ್ ಬೇಟ್ಕಾದ ಸಮೀಪ ಬಂದಾಗ ದನಗಾಹಿ ಹುಡುಗರು ಆಟವಾಡುವುದನ್ನು ಗಮನಿಸಿ ಅವರಲ್ಲಿ ಈ ಪ್ರದೇಶವನ್ನು ಕೇಳುತ್ತಾರೆ. ಆ ಪ್ರದೇಶದ ಹೆಸರು ಸಿಗುತ್ತದೆ. ಅಲ್ಲಿಯೇ ಕುಳಿತು ಗುಹೆಯ ಬಂಡೆಗಳ ಮೇಲೆಲ್ಲ ಗೀಚಿರುವ ಚಿತ್ರವನ್ನು ಗಮನಿಸಿ ಇದು ದನಗಾಹಿಗಳ ಕೆಲಸವೆಂದು ತೆರಳುತ್ತಾರೆ. ಆದರೆ ಮನಸ್ಸು ತಡೆಯುವುದಿಲ್ಲ. ಆ ಸ್ಥಳಕ್ಕೆ ಪುನಃ ಅವರನ್ನು ಕರೆತರುತ್ತದೆ. ಆ ಊರಿಗೆ ಬರುತ್ತಾರೆ ಸುತ್ತಲಿನ ಊರುಗಳ ಅಧ್ಯಯನ ಮಾಡುತ್ತಾರೆ. ಹಾಗೆಯೇ ಪುನಃ ಗುಹೆಯನ್ನು ಪ್ರವೇಶಿಸಿ ಸೂಕ್ಷ್ಮವಾಗಿ ಗಮನಿಸಿದಾಗ ಅವರಿಗೆ ಹೊಸದೊಂದು ಪ್ರಪಂಚವೇ ಕಾಣಸಿಗುತ್ತದೆ. ಅಲ್ಲಿಯೇ ಆತ ಹದಿನೈದು ವರ್ಷಗಳಷ್ಟು ಉತ್ಖನನ ಮಾಡಿಸುತ್ತಾರೆ. ಆಗ ಸಿಕ್ಕಿದ್ದೇ ಅನರ್ಘ್ಯ ರತ್ನ ಭೀಮ್ಬೇಟ್ಕಾ ಎನ್ನುವ ಅತ್ಯಪೂರ್ವ ಪ್ರಪಂಚ.
ಹೌದು ಈಗ ನಮಗೆ ಕಾಣಸಿಗುವುದು ಬೆರಳೆಣಿಕೆಯಷ್ಟು ಗುಹೆಗಳು. ಆದರೆ ಹದಿನೈದು ಗುಹೆಗಳು. ಅಲ್ಲಿ ಸುಮಾರು ೮೩೮ ಗುಹೆಗಳಿವೆ ಎಂದು ಅಂದಾಜಿಸಲಾಗಿದೆ. ಪ್ರಾಚೀನ ಆದಿಮಾನವನಿಂದ ದಿನಚರಿಯ ರೀತಿಯಲ್ಲಿ ರೇಖಾ ಚಿತ್ರಗಳನ್ನು ಬಿಡಿಸಿಟ್ಟ ಅತ್ಯಪೂರ್ವ ಸಂಗ್ರಹದ ನಿಧಿಯನ್ನು ಶ್ರೀ ವಾಕಣ್ಕರ್ ನಮಗೆ ದೊರಕಿಸಿಕೊಟ್ಟರು.
ಇದನ್ನು ಗಮನಿಸಿದರೆ ಭಾರತದ ಪ್ರಾಚೀನತೆ ಇನ್ನೂ ಆಳಕ್ಕೆ ಇಳಿಯುತ್ತದೆ. ಮಾನವ ಆ ಕಾಲದಲ್ಲಿ ರಚಿಸಿದ ಚಿತ್ರಗಳು ಇಂದಿಗೂ ನಮಗೆ ಯಥಾವತ್ತಾಗಿ ದೊರಕಿಸಿಕೊಟ್ಟವರು ವಾಕಣ್ಕರ್.
ನಾನು ವಿಂಧ್ಯ ಪರ್ವತದ ಕುರಿತು ಮೊದಲಿಗೆ ಹೇಳಿದ್ದು ಇದೇ ಭೀಮ್ ಬೇಟ್ಕಾದ ಕುರಿತಾಗಿ, ಈ ಭೀಮ್ ಬೇಟ್ಕಾ ಇದ್ದದ್ದು ವಿಂಧ್ಯ ಪರ್ವತದ ತಪ್ಪಲಿನಲ್ಲಿ. ಇಂತಹ ಭವ್ಯಭಾರತದ ಪರಂಪರೆ ಎಷ್ಟು ಆಳವೋ ಅಷ್ಟೇ ನಿಗೂಢವೂ ಹೌದು. ನಾವು ಯಾವುದೋ ಪರಂಪರೆ ಸ್ಮಾರಕಗಳನ್ನು ಹುಡುಕಿ ಅಧ್ಯಯನ ಮಾಡುತ್ತೇವೆ. ಏನೂ ಸಿಗದಿದ್ದಾಗ ಅಲ್ಲಿ ಬಂಡಾಯ ಆರಂಭವಾಗುತ್ತದೆ. ಅದಿಲ್ಲವೆಂದರೆ ಯಾವುದೋ ಸತ ಅಥವಾ ಜೀವಂತ ವ್ಯಕ್ತಿಗಳ ಅಧ್ಯಯನ ಆರಂಭವಾಗುತ್ತದೆ. ಆದರೆ ಇತಿಹಾಸಕಾರ ಸಂಶೋಧಕನನ್ನು ಕೆಣಕುವುದು ಸಂಶಯಗಳು ಎನ್ನುವುದು ವಾಕಣ್ಕರ್ ರಂತವರಿಂದ ಗೊತ್ತಾಗುತ್ತದೆ. ಸಂಶಯ ಬೇರುಬಿಟ್ಟ ತಕ್ಷಣ ಅದನ್ನು ಪರಿಹರಿಸಿಕೊಳ್ಳುವಲ್ಲಿ ಸಫಲರಾದ ವಾಕಣ್ಕರ್ ಗೆ ನಮೋನಮಃ

Leave a Reply

Your email address will not be published. Required fields are marked *

Translate »