ಪಂಚಗವ್ಯ ಚಿಕಿತ್ಸೆ…
ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ಕೇಳಿ ಬರುತ್ತಿರುವ ಪದ ಪಂಚಗವ್ಯ, ಪಂಚಗವ್ಯ ಚಿಕಿತ್ಸೆ, ಪಂಚಗವ್ಯ ಚಿಕಿತ್ಸಾ ಶಿಬಿರ ಇತ್ಯಾದಿ.
ಯಾವುದು ಈ ಹೊಸ ಚಿಕಿತ್ಸಾ ಪದ್ಧತಿ?
ಇದರಿಂದ ನಮಗೆ ಆಗುವ ಪ್ರಯೋಜನಗಳೇನು?
ಈ ಚಿಕಿತ್ಸೆ ಯಾವ ಯಾವ ಖಾಯಿಲೆಗಳಿಗೆ ಉಪಯೋಗವಾಗುತ್ತದೆ?
ಈ ಚಿಕಿತ್ಸೆ ಎಷ್ಟು ಪರಿಣಾಮಕಾರಿ?
ಇಂತಹ ಹಲವಾರು ಪ್ರಶೆಗಳು ಜನಸಾಮಾನ್ಯರಲ್ಲಿ ತಲೆದೋರುತ್ತಿರುತ್ತವೆ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವ ಸಣ್ಣ ಪ್ರಯತ್ನ.
” ಪಂಚಗವ್ಯ ಚಿಕಿತ್ಸೆ “ ಅಂದರೆ ಪಂಚಗವ್ಯಗಳಿಂದ ಮಾಡುವಂತಹ ಚಿಕಿತ್ಸೆ.
ಪಂಚಗವ್ಯಗಳು ಅಂದರೇನು?
ನಮ್ಮ ಭಾರತ ದೇಶದ ತಳಿಯ ಹಸುಗಳ ಗವ್ಯಗಳಾದ, ಹಾಲು, ಮಜ್ಜಿಗೆ, ತುಪ್ಪ, ಗೋಮೂತ್ರ, ಗೋಮಯಗಳು.
ಈ ಪಂಚಗವ್ಯಗಳನ್ನು ಗಿಡ ಮೂಲಿಕೆಗಳ ಜೊತೆ ಆಯಾ ಖಾಯಿಲೆಗೆ ಅನುಗುಣವಾಗಿ ಸಂಸ್ಕರಿಸಿ ಔಷಧ ರೂಪದಲ್ಲಿ ಬಳಕೆ ಮಾಡುವಂತಹ ಪದ್ದತಿಯೇ ಪಂಚಗವ್ಯ ಚಿಕಿತ್ಸೆ.
ಈ ಚಿಕಿತ್ಸೆ ಹೊಸದೇ?
ಯಾವಾಗ ಪ್ರಾರಂಭವಾಯಿತು?
*ಈಗಾಗಲೇ ಅನೇಕ ಚಿಕಿತ್ಸಾ ಪದ್ದತಿಗಳು ವ್ಯಾಪಾಕವಾಗಿ ಬಳಕೆಯಲ್ಲಿ ಇರಬೇಕಾದರೆ ಈ ಚಿಕಿತ್ಸೆಯ ಅವಶ್ಯಕತೆ ಏನಿದೆ?
ಪಂಚಗವ್ಯಗಳು ಅರ್ಥಾತ್ ದೇಸಿ ತಳಿಯ ಹಸುಗಳ ಹಾಲು, ಮೊಸರು, ತುಪ್ಪ, ಗೋಮೂತ್ರ, ಗೋಮಯಗಳು ಮನುಷ್ಯರ ದೈನಂದಿನ ಆಹಾರ ಪದ್ದತಿಗಳಲ್ಲಿ ಒಂದಾಗಿತ್ತು.
ಪ್ರತಿ ಮನೆ ಮನೆಗಳಲ್ಲೂ ಆಯಾ ಪ್ರಾಂತ್ಯದ ತಳಿಯ ಹಸುಗಳನ್ನು ಕೃಷಿಗೆ ಮತ್ತು ಮನೆ ಮಂದಿಯ ಹಾಲು, ಮಜ್ಜಿಗೆಗಳ ಪೂರೈಕೆಯ ಸಲುವಾಗಿ ಸಾಕಲಾಗುತಿತ್ತು ಮತ್ತು ಆ ಹಸುಗಳ ಗವ್ಯಗಳು ದಿನ ನಿತ್ಯದ ಊಟದ ಪದ್ದತಿಯಲ್ಲಿ ಒಂದಾಗಿದ್ದವು.
ಬೆಳಿಗ್ಗೆ ಎದ್ದ ಕೂಡಲೆ ಹಸು ಹಾಕಿದ ಮೊದಲ ಗೊಂಜಲ/ಗೋಮೂತ್ರವನ್ನು ಕುಡಿಯುವ ಮತ್ತು ಮುಖ ತೊಳೆಯುವ ಅಭ್ಯಾಸವನ್ನು ನಮ್ಮ ಪೂರ್ವಜರು ರೂಢಿಸಿಕೊಂಡಿದ್ದರು. ಗೋಮಯ (ಸಗಣಿ ) ವನ್ನು ಕೃಷಿಯಲ್ಲಿ ವ್ಯಾಪಾಕವಾಗಿ ಬಳಸಲಾಗುತಿತ್ತು. ಯಾವುದೇ ರೀತಿಯ ರಾಸಾಯನಿಕಗಳನ್ನು ಬೆಳೆಗಳಿಗೆ ಉಪಯೋಗಿಸುತ್ತಿರಲಿಲ್ಲ. ಹಾಗಾಗಿ ಬೆಳೆದ ಫಸಲು ಕೂಡ ಗೋಮಾಯಾಧಾರಿತವಾಗಿರುತ್ತಿತ್ತು.
ಗೋಮಯ, ಗೋಜಲವನ್ನು ಮನೆಯ ನೆಲ, ಅಂಗಳಗಳಿಗೆ ಸಾರಿಸುತ್ತಿದ್ದರು. ಇದರಿಂದ ವಾತಾವರಣ ಪರಿಶುದ್ಧವಾಗಿ ಯಾವುದೇ ರೀತಿಯ ರೋಗ ರುಜಿನಗಳು ಹರಡುವ ಕ್ರಿಮಿ ಕೀಟಗಳು ಇರುತ್ತಿರಲಿಲ್ಲ.
ಪಂಚಗವ್ಯಗಳು ಮಾನವರ ಜೀವನ ಶೈಲಿಯ ಅವಿಭಾಜ್ಯ ಅಂಗವಾಗಿತ್ತು. ಇವುಗಳನ್ನು ಪ್ರತ್ಯೇಕವಾಗಿ ಚಿಕಿತ್ಸೆ ಅಥವಾ ಬೇರೆ ಯಾವುದೇ ರೀತಿಯಲ್ಲಿ ಬಳಸುವ ಅಗತ್ಯ ಇರಲಿಲ್ಲ. ಮನುಷ್ಯರ ದೈಹಿಕ ಮತ್ತು ಮಾನಸಿಕ ಆರೋಗ್ಯ ಕೂಡ ಸಮಾತೋಲನದಲ್ಲಿತ್ತು.
ಕಾಲ ಕ್ರಮೇಣ ಬದಲಾದ ಮನುಷ್ಯರ ಆಲೋಚನೆಗಳು, ದೃಷ್ಟಿ ಕೋನ, ಹೆಚ್ಚಿನ ಹಾಲಿನ ವ್ಯಾಮೋಹ ಮುಂತಾದವುಗಳು ದೇಸಿ ತಳಿಯ ಹಸುಗಳನ್ನು ನಿರ್ಲಕ್ಷಿಸುವಂತಾಯಿತು ಮತ್ತು ಜೆರ್ಸಿ ( ಸೀಮೆ ) ಹಸುಗಳನ್ನು ಕೇವಲ ಹೆಚ್ಚಿನ ಹಾಲಿನ ವ್ಯಾಮೋಹದಿಂದ ಸಾಕಿ ತುಂಬಾ ದೊಡ್ಡ ತಪ್ಪು ಮಾಡಿ ಅದಕ್ಕಿಂತ ದೊಡ್ಡ ಪ್ರಮಾಣದಲ್ಲಿ ವೆಚ್ಚವನ್ನು ಸಹ ಭರಿಸುತ್ತಿದ್ದೇವೆ.
ಕೇವಲ ಮನುಷ್ಯರನ್ನಷ್ಟೇ ಅಲ್ಲದೆ ಇಡಿ ಸೃಷ್ಟಿಯನ್ನು ಪೋಷಿಸಿ ಪಂಚಮಹಾಭೂತ ತತ್ವಗಳ ಸಮತೋಲನ ಕಾಪಾಡುತ್ತಿದ್ದ ನಮ್ಮ ದೇಸಿ ತಳಿಯ ಹಸುಗಳನ್ನು ಸಂರಕ್ಷಣೆ ಮಾಡದೆ ಮಾನವರು ” ತಾನು ಕುಳಿತ ರೆಂಭೆಯನ್ನು ತನ್ನ ಕಯ್ಯಾರೇ ತಾನೇ ಕಡಿದು ಕೊಂಡ ” ಕಥೆಯ ಸನ್ನಿವೇಶವನ್ನು ಸೃಷ್ಟಿಸಿಕೊಂಡಂತಾಗಿದೆ.
ನಮ್ಮ ಪೂರ್ವಿಕರು ಮಾಡಿಕೊಂಡ ಈ ಆಯ್ಕೆಯಿಂದ ಬಹು ದೊಡ್ಡ ನಷ್ಟವನ್ನು ನಾವೆಲ್ಲಾ ಇಂದು ಎದುರಿಸುತ್ತಿದ್ದೇವೆ ಮತ್ತು ಅದರಿಂದ ಉಂಟಾಗಿರುವ ದುಷ್ಟಪರಿಣಾಮಗಳನ್ನು ಮತ್ತೆ ಸರಿ ಪಡಿಸಲು ಸಾಧ್ಯವಾಗದೆ ಇರುವ ಸನ್ನಿವೇಶವನ್ನು ಸೃಷ್ಟಿಸಿಕೊಂಡಿದ್ದೇವೆ.
ನಮಗೆ ಬದುಕಲು ಅತ್ಯವಶ್ಯಕವಾಗಿ ಬೇಕಾದ ಆಹಾರ ಪೌಷ್ಟಿಕಾಂಶಗಳಿಂದ ತುಂಬಿಲ್ಲ. ಏಕೆಂದರೆ ರಾಸಾಯನಿಕಗಳ ಬಳಕೆಯಿಂದ ಭೂಮಿಯು ತನ್ನ ಫಲವತ್ತತೆಯನ್ನು ಕಳೆದುಕೊಂಡು ಬೆಳೆದ ಫಸಲು ಗುಣಮಟ್ಟದಲ್ಲಿ ಕಡಿಮೆಯಿದೆ. ಇಂತಹ ಆಹಾರವನ್ನು ಸೇವಿಸಿದ ಮನುಷ್ಯರು ನಾನಾ ರೀತಿಯ ಖಾಯಿಲೆಗಳಿಂದ ಬಳಲುತ್ತಿದ್ದಾರೆ.
ಗೋಮಯ ಮತ್ತು ಗಂಜಲದ ಗೊಬ್ಬರವನ್ನು ಬೆಳೆಗಳಿಗೆ ಪ್ರಯೋಗ ಮಾಡಿದಾಗ ಯಾವುದೇ ರೀತಿಯ ಕೀಟ ನಾಶಕಗಳ ಅವಶ್ಯಕತೆ ಇರುತ್ತಿರಲಿಲ್ಲ. ಅಂತಹ ಆಹಾರವನ್ನು ಸೇವಿಸಿದಂತಹ ಮನುಷ್ಯರು ಸಂಪೂರ್ಣವಾಗಿ ಅರೋಗ್ಯವಂತರಾಗಿ ಸದೃಢ ದೇಹವನ್ನು ಹೊಂದಿದವಾರಾಗಿ ಇರುತ್ತಿದ್ದರು.
ನಮ್ಮ ತಾತ, ಅಜ್ಜಿಯರು ಯಾವುದೇ ಆಸ್ಪತ್ರೆಗೆ ಹೋದವರಲ್ಲ. ತುಂಬಾ ಸಹಜವಾದ ಜೀವನವನ್ನು ಬದುಕಿರುವವರೆಗೂ ನೆಡೆಸಿಕೊಂಡಿದ್ದವರು.
ಇತ್ತೀಚಿಗೆ ಸುಮಾರು 20-30 ವರ್ಷಗಳಿಂದ ನಾವು ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳು, ಸುಸ್ಸಜ್ಜಿತವಾದ ಆಸ್ಪತ್ರೆಗಳು, ನವೀನ ರೀತಿಯ ಯಂತ್ರೋಪಕರಣಗಳು ಮತ್ತು ಅಷ್ಟೇ ಪ್ರಮಾಣದಲ್ಲಿ ಹೆಚ್ಚುತ್ತಿರುವ ರೋಗಗಳು ಮತ್ತು ರೋಗಿಗಳು.
ಈ ರೋಗಗಳನ್ನು ಸುಧಾರಿಸಲು ನಮ್ಮಲ್ಲಿ ವ್ಯವಸ್ಥೆಗಳು ಆಗುತ್ತಿವೆಯೇ ಹೊರತು ಅವುಗಳನ್ನು ಶಾಶ್ವತವಾಗಿ ನಿವಾರಿಸಲು ಅಥವಾ ಬರದಂತೆ ತಡೆಯಲು ನಮ್ಮಲ್ಲಿ ಉಪಾಯಗಳಿಲ್ಲ.
ಇದೆಲ್ಲಾ ಯಾಕೆ ಅಂತ ಯೋಚನೆ ಮಾಡಿದಾಗ ನಮ್ಮ ಗಮನಕ್ಕೆ ಬರುವುದು ನಮ್ಮ ಜೀವನ ಶೈಲಿಯಲ್ಲಾದ ಬದಲಾವಣೆಗಳು. ಅವುಗಳನ್ನು ಪಟ್ಟಿ ಮಾಡುತ್ತಾ ಹೋದರೆ ನಮಗೆ ಉತ್ತರಗಳು ತಂತಾನೆ ಹೊಳೆಯುತ್ತವೆ. ಯಾವಾಗ ಮನುಷ್ಯ ಪಂಚಗವ್ಯಗಳ ಸೇವನೆ ಮತ್ತು ಅದರ ಬಳಕೆಯನ್ನು ದೈನಂದಿನ ಜೀವನದಿಂದ ಕೈ ಬಿಟ್ಟನೋ ಅಂದಿನಿಂದ ಅನಾರೋಗ್ಯಗಳು ತಲೆದೋರಲು ಪ್ರಾರಂಭವಾಯಿತು.
ನಮ್ಮ ಸಮಸ್ಯೆಗಳಿಗೆ ಉತ್ತರ ಸಿಕ್ಕ ನಂತರ ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಒಮ್ಮೆ ಅವಲೋಕಿಸಿದರೆ ದೇಸಿ ತಳಿಯ ಹಸುಗಳನ್ನು ಎಲ್ಲೋ ಒಂದೆಡೆ ಗೋಶಾಲೆಗಳಲ್ಲಿ ಕಾಣಬಹುದೇ ವಿನಃ ನಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿ ಅವುಗಳೊಂದಿಗೆ ಸಹ ಬಾಳ್ವೆ ಮಾಡುವುದು ಸ್ವಲ್ಪ ಕಷ್ಟ. ಅದರಲ್ಲೂ ಶುದ್ಧ ತಳಿಯ ಹಸುಗಳು ಎಷ್ಟರ ಮಟ್ಟಿಗೆ ಉಳಿದಿವೆ ಅನ್ನುವುದು ಪ್ರಶ್ನಾರ್ಹ.
ನಮ್ಮ ಜೀವನ ಶೈಲಿಯಲ್ಲಿ ಪಂಚಗವ್ಯಗಳನ್ನು ಸೇರಿಸಿಕೊಳ್ಳಬೇಕಾದರೂ ತುಂಬಾ ದುಬಾರಿ ಮತ್ತು ಅಷ್ಟು ಬೆಲೆ ತೆತ್ತರು ಸಹ ಕಲೆಬೆರಕೆ ಇಲ್ಲದಂತಹ ನೈಜ್ಯವಾದ ಗವ್ಯಗಳು ಸಿಗುತ್ತವೆ ಎನ್ನುವುದಕ್ಕೂ ಯಾವುದೇ ರೀತಿಯ ಆಧಾರವಿಲ್ಲ.
ಬದಲಾದ ಈ ಸಂಧರ್ಭದಲ್ಲಿ ಪಂಚಾಗವ್ಯಗಳನ್ನು ಚಿಕಿತ್ಸಾ ರೂಪದಲ್ಲಿ ಎಲ್ಲೆಲ್ಲಿ ಅವಶ್ಯಕತೆ ಇದೆಯೋ ಅಲ್ಲಿ ಬಳಸಿ ಗವ್ಯಗಳ ಪ್ರಯೋಜನ ಪಡೆದು ಕೊಳ್ಳಲೆಂದೆ ಈ ಚಿಕಿತ್ಸೆಯನ್ನು ಪ್ರಚಲಿತಕ್ಕೆ ತರಲಾಗಿದೆ.
ಪಂಚಗವ್ಯ ಚಿಕಿತ್ಸೆ ಅಂದರೆ ಏನು, ಇದು ಹೇಗೆ ಮತ್ತು ಯಾಕೆ ನಮ್ಮ ಚಿಕಿತ್ಸಾ ಪದ್ದತಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ ಎಂಬುದನ್ನು ಸ್ವಲ್ಪ ಮಟ್ಟಿಗೆ ವಿವರಿಸುವ ಪ್ರಯತ್ನವನ್ನು ಮಾಡಲಾಗಿದೆ.
ಸರ್ವೇ ಜನಾ: ಸುಖಿನೋ ಭವಂತು 🙏