ಈ ದಿನ ಕರ್ನಾಟಕ ಸಂಗೀತ ಪಿತಾಮಹ ಶ್ರೀಪುರಂದರ ದಾಸರ ಆರಾಧನೆ
ಜಗತ್ತಿಗೆ ಶಾಸ್ತ್ರೀಯ(ಕರ್ನಾಟಕ) ಸಂಗೀತದ ಕೊಡುಗೆ ನೀಡಿದ ಖ್ಯಾತ ವಾಗ್ಗೇಯಕಾರ, ಶಾಸ್ತ್ರೀಯ ಸಂಗೀತ ಪಿತಾಮಹಾ ಶ್ರೀ ಪುರಂದರ ದಾಸರ ಆರಾಧನೆಯ ಪರ್ವ ದಿನ. ಮಹಾನುಭಾವರನ್ನು ಸ್ಮರಿಸೋಣ, ನಮಿಸೋಣ.
ಮನ್ಮನೋಭೀಷ್ಟವರದಂ ಸರ್ವಾಭೀಷ್ಟ ಫಲಪ್ರದಮ್|
ಪುರಂದರಗುರುಂ ವಂದೇ ದಾಸಶ್ರೇಷ್ಟಂ ದಯಾನಿಧಿಮ್||
*ನಾರದರೇ ಸ್ವಯಂ *ಪುರಂದರ ದಾಸ* ರಾಗಿ ಅವತರಿಸಿ ಬಂದು ಶ್ರೀಮಧ್ವ ವಾಂಙ್ಮಯವೆಂಬ ಕೃಷಿ ಕ್ಷೇತ್ರದಲಿ ಹರಿನಾಮ ಎಂಬ ಬೀಜವನ್ನು ಬಿತ್ತಿ, ಹರಿದಾಸ ಸಾಹಿತ್ಯ ಎನ್ನುವ ಕಲ್ಪವೃಕ್ಷ ದಿಂದ ಶಾಸ್ತ್ರೀಯ ಸಂಗೀತ, ಹಾಡು, ಭಜನೆ, ಉಗಾಭೋಗಾ, ಸುಳಾದಿಗಳೆಂಬ ಫಲಗಳನ್ನು ರುಚಿಯಾಗಿ ನಮಗೆ ದೊರಕುವಂತೆ ಮಾಡಿದ ಮಹಾನುಭಾವರು.*
ವಿಜಯನಗರ ಸಾಮ್ರಾಜ್ಯದಲ್ಲಿದ್ದ ಅತಿ ಸಿರಿವಂತರಲ್ಲಿ ಶ್ರೀನಿವಾಸ ನಾಯಕರು ಒಬ್ಬರಾಗಿದ್ದರು.
ಇವರು 1484ರಲ್ಲಿ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೂಕಿನ “ಆರಗ” ಗ್ರಾಮದ ಮುತ್ತು ರತ್ನಗಳ ವ್ಯಾಪಾರಿ ವರದಪ್ಪ ನಾಯಕ ಹಾಗೂ ಲೀಲಾವತಿ ದಂಪತಿ ಮಗನಾಗಿ ಜನಿಸಿದರು.
ಬೆಳೆದ ಮಗನಿಗೆ ಪೋಷಕರು, ಸರಸ್ವತಿ ಬಾಯಿ ಎಂಬಾಕೆಯೊಂದಿಗೆ ಮದುವೆ ಮಾಡಿದರು. ಕಾಲಾನಂತರದಲ್ಲಿ ತಂದೆಯ ಆಸ್ತಿ ನೋಡಿಕೊಳ್ಳುವ ಹೊಣೆಗಾರಿಕೆ ಶ್ರೀನಿವಾಸನಾಯಕರದಾಯಿತು. ಶ್ರೀನಿವಾಸ ಮೊದಲೇ ಜಿಪುಣ, ಆಸ್ತಿ ಪ್ರಾಪ್ತವಾದ ಮೇಲಂತೂ ಅವರ ಜುಗ್ಗುತನ ಹೇಳ ತೀರದಾಯಿತು. ಆ ಕಾಲಕ್ಕೆ ಒಂಭತ್ತು ಕೋಟಿ ವರಹಗಳಷ್ಟು ಮೌಲ್ಯದ ಸ್ವತ್ತಿನ ಒಡೆಯ. ಆದರೆ ಕಿಲುಬುಕಾಸು ದಾನ ಮಾಡುತ್ತಿರಲಿಲ್ಲ.
ಹೀಗಿರುವಾಗ ಒಮ್ಮೆ ಶ್ರೀಹರಿ, ಬಡ ಬ್ರಾಹ್ಮಣನ ವೇಷದಲ್ಲಿ ಜಿಪುಣ ಶ್ರೀನಿವಾಸ ನಾಯಕನ ಅಂಗಡಿಗೆ ಬಂದು ತನ್ನ ಮಗನ ಉಪನಯನ ಸಂಸ್ಕಾರಕ್ಕೆ ಸಹಾಯ ಮಾಡುವಂತೆ ಬೇಡಿದ. ಜಿಪುಣಾಗ್ರೇಸರನೆಂದೇ ಪ್ರಸಿದ್ಧ ಪಡೆದ ಶ್ರೀನಿವಾಸನಾಯಕ, ನೆರವು ನೀಡದೆಲೆ ಪ್ರತಿ ದಿನವೂ ಮಾರನೆಯ ದಿನ ಬಾ ಎಂದು ಆ ಬ್ರಾಹ್ಮಣನಿಗೆ ಹೇಳಿ ಕಳುಹಿಸಿ ಕಾಲ ದೂಡುತ್ತಿದ್ದ. ಹೀಗೇ ಸುಮಾರು ಕಾಲ ಸರಿಯಿತು, ಈತ(ನಾಯಕ) ಕೊಡಲಿಲ್ಲ, ಆತ(ಬ್ರಾಹ್ಮಣ) ಬಿಡಲಿಲ್ಲ. ಕೊನೆಗೆ ನಿತ್ಯ ಬರುತ್ತಿದ್ದ ಬ್ರಾಹ್ಮಣನ ಕಾಟ ತಡೆಯಲಾರದೆ ಒಂದು ಸವಕಲು ನಾಣ್ಯವನ್ನು ಕೊಟ್ಟ.
ಮರು ದಿನ ಆ ಬ್ರಾಹ್ಮಣ ಶ್ರೀನಿವಾಸನಾಯಕನ ಮನೆಗೆ ಬಂದು, ಅವರ ಪತ್ನಿ ಸರಸ್ವತಿಯ ಬಳಿ ತನ್ನ ಮಗನ ಉಪನಯನದ ಬಗ್ಗೆ ಹೇಳಿ ಸಹಾಯ ಯಾಚಿಸಿದ. ತನ್ನದಲ್ಲದ್ದು ಕೊಡಲು ಬೇರೇನೂ ಇಲ್ಲದ ಕಾರಣ, ತವರಿನವರು ಕೊಟ್ಟಿದ್ದ ಮೂಗುತಿಯನ್ನು ಮರುಕದಿಂದ ಆ ತಾಯಿ ಕೊಟ್ಟಳು.
ಆ ಬ್ರಾಹ್ಮಣ ಮೂಗುತಿಯನ್ನು ಶ್ರೀನಿವಾಸ ನಾಯಕರ ಅಂಗಡಿಗೆ ತೆಗೆದುಕೊಂಡು ಹೋಗಿ, ಅದನ್ನು ಅಡವಿಟ್ಟುಕೊಂಡು ಹಣ ನೀಡುವಂತೆ ಕೇಳಿದ. ಶ್ರೀನಿವಾಸ ನಾಯಕ ಆ ಮೂಗುತಿಯನ್ನು ಗುರುತಿಸಿದ, ಆತನಿಗೆ ಸಂಶಯ ಬಂತು. ಹಣಕ್ಕೆ ನಂತರ ಬರುವಂತೆ ಬ್ರಾಹ್ಮಣನಿಗೆ ಹೇಳಿ, ಮೂಗುತಿಯನ್ನು ಪೆಟ್ಟಿಗೆಯಲ್ಲಿ ಭದ್ರವಾಗಿರಿಸಿ ತಕ್ಷಣ ಮನೆಗೆ ಬಂದು ಪತ್ನಿಯ ಬಳಿ ಮೂಗುತಿಯನ್ನು ತೋರಿಸುವಂತೆ ಕೇಳಿದ.
ಹೆದರಿದ ಹೆಂಡತಿ ದಾನ ನೀಡಿದ್ದಾಗಿ ನಿಜ ಹೇಳಲಾರದೆ, ಇದೆ ಎಂದು ಸುಳ್ಳು ಹೇಳಲಾರದೆ ಪರಿತಪಿಸಿದಳು. ಕೊನೆಗೆ ಗಂಡನ ಜಿಪುಣತನ ಅರಿತಿದ್ದ ಆಕೆ, ಉಳಿಗಾಲವಿಲ್ಲವೆಂದು ವಿಷ ಕುಡಿಯಲು ಮುಂದಾದಳು. ಶ್ರೀಕೃಷ್ಞನನ್ನು ಪ್ರಾರ್ಥಿಸಿ ವಿಷ ಸೇವಿಸಲು ಬಟ್ಟಲನ್ನು ಬಾಯಿ ಬಳಿ ತರುತ್ತಿದ್ದಂತೆ ಬಟ್ಟಲಿನೊಳಗೆ ಮೂಗುತಿ ಬಿದ್ದ ಶಬ್ದವಾಯಿತು. ಆಶ್ಚರ್ಯ ಮತ್ತು ಸಂತೋಷಗೊಂಡ ಸಾಧ್ವಿ, ಮೂಗುತಿಯನ್ನು
ತಂದು ತನ್ನ ಪತಿಗೆ ಕೊಟ್ಟಳು.
ಆಶ್ಚರ್ಯಚಕಿತನಾದ ನಾಯಕ, ಅಂಗಡಿಗೆ ಹಿಂದಿರುಗಿ ಬಂದು ನೋಡಿದಾಗ ತಿಜೋರಿಯಲ್ಲಿ ಇಟ್ಟಿದ್ದ ಮೂಗುತಿ ಇರಲಿಲ್ಲ. ಇದಾದ ಮೇಲೆ ನೆರವಿಗಾಗಿ ನಿತ್ಯ ಅಂಗಡಿಗೆ ಬರುತ್ತಿದ್ದ ಆ ಬ್ರಾಹ್ಮಣ ಮತ್ತೆ ಸುಳಿಯಲಿಲ್ಲ.
ಚಿಂತಿತನಾದ ಶ್ರೀನಿವಾಸನಾಯಕ, ಮನೆಗೆ ಬಂದು ಪತ್ನಿಯಿಂದ ನಿಜ ಸಂಗತಿ ಅರಿತ ನಂತರ ಜ್ಞಾನೋದಯವಾಯಿತು. ಸ್ವತಃ ನಾರಾಯಣನೇ ಬ್ರಾಹ್ಮಣ ವೇಷದಲ್ಲಿ ಬಂದು ಪರೀಕ್ಷಿಸಿದನೆಂಬ ಅರಿವಾಗಿ ಜ್ಞಾನ, ಭಕ್ತಿ, ವೈರಾಗ್ಯ ಮೂಡಿತು. ಕೂಡಲೇ ತನ್ನಲ್ಲಿದ್ದ ಸಂಪತ್ತನ್ನು ಬಡವರಿಗೆ ದಾನ ಮಾಡಿ, ಶ್ರೀಮಂತಿಕೆ ತೊರೆದು ವಿರಾಗಿಯಾದರು.
“ಆದದ್ದೆಲ್ಲಾ ಒಳಿತೇ ಆಯಿತು, ನಮ್ಮ ಶ್ರೀಧರನ ಸೇವೆ ಮಾಡಲು ಸಾಧನ ಸಂಪತ್ತಾಯಿತು” ಎಂದು ಹಾಡಿ ಕುಣಿದರು.
ಅಂದಿನ ಕಾಲಕ್ಕೆ ಒಂಭತ್ತು ಕೋಟಿರೂ ಮೌಲ್ಯದ ಆಸ್ತಿಯ ಒಡೆಯ. ಮನೆಬಾಗಿಲಿಗೆ ಬೇಡಿಬಂದ ದೀನರಿಗೆ ಕಿಲುಬು ಕಾಸು ನೀಡದ ಅತಿ ದೊಡ್ಡ ಜಿಪುಣ. ಶ್ರೀಹರಿ ತೋರಿದ ಮಾಯೆಯಿಂದ ಇಂತಹ ಜಿಪುಣ ವ್ಯಕ್ತಿ, ತನ್ನ ಪತ್ನಿಯ ಮೂಲಕ ದಾನದ ಮಹತ್ವ ಅರಿತು ಮೋಹದ ಜೀವನದಿಂದ ಹೊರಬಂದು ಸತಿಯ ಸಂತತಿ ಸಾವಿರವಾಗಲಿ ಎಂದು ಮುಕುತಿಯ ದಾರಿ ತೋರಿದ ಸರಸ್ವತಿ ದೇವಿಯನ್ನು ಕೊಂಡಾಡಿದರು.
ತನ್ನಲ್ಲಿದ್ದ ನವ ಕೋಟಿಯನ್ನು ದಾನ ಮಾಡಿದ ಶ್ರೀನಿವಾಸ ನಾಯಕರು, ಕಾಲಿಗೆ ಗೆಜ್ಜೆ ಕಟ್ಟಿ ಕೈಯ್ಯಲ್ಲಿ ತಂಬೂರಿ ಹಿಡಿದು ಹರಿದಾಸ ರಾದರು. ಅಂದಿನ ವಿಜಯ ನಗರ ಸಾಮ್ರಾಜ್ಯದ ರಾಜಗುರುಗಳಾದ ಶ್ರೀವ್ಯಾಸತೀರ್ಥರ ಅಡಿಗೆರಗಿ, ಪುರಂದರ ದಾಸ ಎಂಬ ಅಭಿದಾನ ಪಡೆದರು.
ನಂತರ ನಡೆದದ್ದೆಲ್ಲಾ ವಿಭೂತಿ ಯೇ, ಭಾರತೀಯ ಸಂಗೀತ ಪರಂಪರೆಗೊಂದು ಹೊಸ ಆಯಾಮ ನೀಡಿದರಲ್ಲದೇ ಸಾವಿರಾರು ಹಾಡುಗಳನ್ನು ಹಾಡಿ- ಕುಣಿದು ಶ್ರೀಹರಿಯನ್ನು ಅರ್ಚಿಸಿದರು ಮೆಚ್ಚಿಸಿದರು.
ಮುತ್ತು ಮಾಣಿಕ್ಯವೆಲ್ಲ ಲೊಳಲೊಟ್ಟೆ ಎಂದು ಅರಿತು ನಶ್ವರ ಸಂಪತ್ತಿನ ಬಗ್ಗೆ ಜಗಕೆ ಸಾರಿದರು.
ತಂಬೂರಿ ಮೀಟಿದವ- ಭವಾಬ್ದಿ ದಾಟಿದವ ಎನ್ನುತ್ತಾ ಶ್ರೀಹರಿ ದಾಸರಾದರೆ ದಾರಿ ಬಹುದೂರವಿಲ್ಲ ವೈಕುಂಠಕ್ಕೆ ಎಂದು ತಿಳಿಹೇಳಿದರು.
ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ ಕೇಳನೋ ಹರಿ ತಾಳನೋ ಎಂದು ಸಂಗೀತದಲ್ಲಿ ಕೇವಲ ರಾಗ, ತಾಳವೇ ಪ್ರಧಾನವಲ್ಲ ಭಕ್ತಿ ಭಾವ ವೇ ಮುಖ್ಯವಾಗಿರಬೇಕು, ಇಲ್ಲವಾದಲ್ಲಿ ಢಂಬಕದ ಕೂಗಾಟ ವೆಂದು ಸಾರಿ ಹೇಳಿದರು.
ಯತಿ ಪ್ರಾಸವಿರಬೇಕು, ಗತಿಗೆ ನಿಲ್ಲಿಸಬೇಕು ರತಿಪತಿಪಿತನೊಳು ಅತಿಪ್ರೇಮವಿರಬೇಕು , ಅಡಿಗಡಿಗಾನಂದ ಭಾಷ್ಪಪುಳಕದಿಂದ ನುಡಿನುಡಿಗೆ ಶ್ರೀಹರಿಯೆನ್ನುತ್ತ ದೃಢಭಕ್ತರನು ಕೂಡಿ ಹರಿಕೀರ್ತನೆ ಮಾಡಿ ಕಡೆಗೆ ಪುರಂದರವಿಠಲನೆಂದರೆ ಕೇಳ್ವ‘ ಎಂದು ಆನಂದ ಪರವಶತೆ ತೋರಿಸಿಕೊಟ್ಟರು.
ಮಧ್ವಮತಾಬ್ಧಿಯೊಳು ಮೀನಾಗಿರಬೇಕು, ಇಂಥಾತನು ಗುರುವಾದದ್ದು ನಮಗೆ ಇನ್ನೆಂಥಾ ಪುಣ್ಯದ ಫಲವೋ ಎಂದು ಮನತುಂಬಿ ಸ್ತುತಿಸಿ, ಹನುಮನ ಮತವೇ ಹರಿಯ ಮತವೆಂದು ನಂಬಿದ ಅದೇ ಮಧ್ವಮತ ದಲ್ಲಿ ಸಾಗಿ ಹಾಡಿದರೆ ಎನ್ನ ಒಡೆಯನ ಹಾಡುವೆ, ಬೇಡಿದರೆ ಎನ್ನ ಒಡೆಯನ ಬೇಡುವೆ ಎಂದು ಅನ್ಯರಲಿ ದೈನ್ಯಭಾವ ಬೇಡವೆಂದು ತೋರಿಸಿಕೊಟ್ಟರು.
ಗೀತಾನರ್ತನದಿಂದ ಶ್ರೀಕೃಷ್ಣನ್ನ ಪೂಜಿಸುವ ಪೂತಾತ್ಮ ಪುರಂದರದಾಸರಿವರಯ್ಯ ಹಾಗೂ ದಾಸರೆಂದರೆ ಪುರಂದರದಾಸರಯ್ಯ ಎಂದು ಅಭಿದಾನ ನೀಡಿದ ಗುರುಗಳಾದ ಶ್ರೀವ್ಯಾಸತೀರ್ಥ ಗುರುಸಾರ್ವಭೌಮರಿಂದಲೇ ಮುಕ್ತಕಂಠದಿಂದ ಹೊಗಳಿಸಿಕೊಂಡ ಶಕ ಪುರುಷ ಪುರಂದರದಾಸರು.
ಇಂತಹ ಮಹಾನುಭಾವರು, 1564 ರಂದು ಪುಷ್ಯಮಾಸ ಅಮಾವಾಸ್ಯೆಯಂದು ಹಂಪಿಯಲ್ಲಿ ಶ್ರೀಪುರಂದರ ವಿಟ್ಠಲನಲ್ಲಿ ಲೀನವಾದರು. 4.75 ಲಕ್ಷ ಕೃತಿಗಳನ್ಬು ರಚಿಸಿದ
ಇಂತಹ ವಾಗ್ಗೇಯಕಾರ ಸಂಗೀತ ಮಹಾಮುನಿಯನ್ನು,
ಶ್ರೀವಿಜಯದಾಸರು ಗುರು ಪುರಂದರದಾಸರೇ ನಿಮ್ಮ ಚರಣಕಮಲವ ನಂಬಿದೆ, ಗರುವ ರಹಿತರ ಮಾಡಿ ಎಮ್ಮನು ಪೊರೆವಭಾರವು ನಿಮ್ಮದೆ ಎಂದು ಬೇಡಿದ್ದಾರೆ. ನಾವೂ ದಾಸ ಶ್ರೇಷ್ಠರಾದ ದಯಾನಿಧಿಗಳನ್ನು ಸ್ಮರಿಸೋಣ.
ಇಂದಿನ ದಿನವೇ ಶುಭ ದಿನವು । ಇಂದಿನ ವಾರ ಶುಭ ವಾರ । ಇಂದಿನ ತಾರೆ ಶುಭ ತಾರೆ । ಇಂದಿನ ಕರಣ ಶುಭ ಕರಣ ।
ಇಂದಿನ ಯೋಗ ಶುಭ ಯೋಗ| ಇಂದಿನ ಲಗ್ನ ಶುಭ ಲಗ್ನ । ಇಂದು ಪುರಂದರ ವಿಠಲನ – ನೆನಸಿದ ದಿನವೇ ಶುಭದಿನವು।।
ಎಂದು ಶ್ರೀಹರಿ ಯನ್ನು ನೆನೆದರೆ ಎಲ್ಲ ದೋಷವೂ ದೂರ ಎಂದು ಸಾರಿದ ಮಹಾನುಭಾವರೇ ನಿಮಗಿದೋ ನಮ್ಮ ಶತಕೋಟಿ ನಮನ….🙏🙏🙏
ಶ್ರೀಶ ಚರಣಾರಾಧಕ:
ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ, ಆನೇಕಲ್.🙏
!! ಶ್ರೀಕೃಷ್ಣಾರ್ಪಣಮಸ್ತು !!