ಕಷ್ಟ ಯಾರ ಜೀವನದಲ್ಲಿ ಇಲ್ಲ ಹೇಳಿ… ಆದರೆ ಕಷ್ಟಗಳನ್ನು ಕಷ್ಟ ಎಂದುಕೊಳ್ಳುವುದೇ ದೊಡ್ಡ ತಪ್ಪು. ಕರ್ಣ ತನ್ನ ಕಷ್ಟಗಳನ್ನು ಕೃಷ್ಣನಿಗೆ ಹೇಳಿಕೊಂಡಾಗ, ಕೃಷ್ಣ ಕರ್ಣನಿಗೆ ಹೇಳಿದ ಈ ಅದ್ಭುತ ಮಾತುಗಳನ್ನು ಕೇಳಿ.
ಅಂದು ಕರ್ಣ ಕೃಷ್ಣನಿಗೆ ಹೇಳಿದ. “ನನ್ನ ಬದುಕೇ ಒಂದು ಅಗ್ನಿಕುಂಡ. ಮುಳ್ಳಿನ ಬೇಲಿ. ನಾನು ಹುಟ್ಟಿದೆನೇನೋ ಸರಿ, ಆದರೆ ಎಂಥ ಹುಟ್ಟು! ಹುಟ್ಟಿಸಿದ ಕುಂತಿ ನವಜಾತ ಶಿಶುವಾಗಿದ್ದ ನನ್ನನ್ನು ನದಿಯಲ್ಲಿ ತೇಲಿಬಿಟ್ಟಳು. ಹುಟ್ಟಿ ಕಣ್ಣು ಬಿಡುವುದಕ್ಕೂ ಮುನ್ನ ನಾನು ವಿಶಾಲ ನೀರಿನ ನಡು ಭಾಗದಲ್ಲಿ ತೇಲುತ್ತಿದ್ದೆ! ಹೇಳು, ಅಕ್ರಮ ಸಂತಾನವಾಗಿ, ತಾಯಿಯ ಕುತೂಹಲದ ಪರೀಕ್ಷೆಗಾಗಿ ಹುಟ್ಟಿದ್ದು ನನ್ನ ತಪ್ಪೇ?
“ಹುಟ್ಟಿ ಬಡಬಗ್ಗರ ಹಟ್ಟಿಯಲ್ಲಿ ಬೆಳೆದೆ. ಬಿಲ್ವಿದ್ಯೆ ಕಲಿಯಬೇಕೆಂದು ದ್ರೋಣಾಚಾರ್ಯರ ಬಳಿ ಬಂದಾಗ ನನ್ನನ್ನು ಇದಿರುಗೊಂಡಿದ್ದೇನು? ನಿರಾಸೆ! ನೀನು ಕ್ಷತ್ರಿಯನಲ್ಲ ! ಕೀಳುಜಾತಿಯಲ್ಲಿ ಹುಟ್ಟಿದ ಸೂತಪುತ್ರ! ದೂರವಿರು! ಎಂಬ ಮನ ನೋಯಿಸುವ ಮಾತುಗಳು! ಸರಿ, ಪರಶುರಾಮರು ಅಸ್ತ್ರಶಸ್ತ್ರಗಳ ವಿದ್ಯೆಯನ್ನೇನೋ ಕಲಿಸಿದರು. ಆದರೆ ನಾನು ಕ್ಷತ್ರಿಯ ಎಂಬುದು ಗೊತ್ತಾಗುತ್ತಲೇ…. ಶಾಪ ಕೊಟ್ಟೇ ಬಿಟ್ಟರು.
ಅಗತ್ಯ ಬಿದ್ದಾಗ ನಿನಗೆ ಅಸ್ತ್ರಗಳು ಕೈ ಕೊಡಲಿ! ಅಬ್ಬಾ… ಅದೆಂಥ ಉಗ್ರ ಶಾಪ! ಅಗತ್ಯ ಸಂದರ್ಭದಲ್ಲಿ ಮಾತ್ರ ವಿದ್ಯೆ ಕೈ ಕೊಡುವುದಾದರೆ, ಅಂಥ ವಿದ್ಯೆಯನ್ನಾದರೂ ನಾನು ಯಾಕೆ ಸಂಪಾದಿಸಬೇಕಿತ್ತು? ಹಣದ ಅವಶ್ಯಕತೆ ಬಿದ್ದಾಗ ಒಂದೇ ಒಂದು ದಮ್ಮಡಿಯೂ ಉಳಿಯದಂತೆ, ಆಗಿ ಹೋಗಲಿ ಎಂಬಂಥ ಶಾಪವಲ್ಲವೇ ಅದು?
ನನ್ನ ಬದುಕಿನ ದುರಂತಗಳ ಸರಮಾಲೆ ಇನ್ನೂ ಮುಗಿಯಲಿಲ್ಲ ಕೃಷ್ಣ. ದ್ರೌಪದಿಯ ಸ್ವಯಂವರದಲ್ಲಿ, ಅದೆಂಥ ಕಡು ಅವಮಾನವನ್ನು ನಾನಂದು ನುಂಗಬೇಕಾಗಿ ಬಂತೆಂಬುದು ಎಲ್ಲರಿಗೆ ಗೊತ್ತಿದೆ. ಕೌರವ – ಪಾಂಡವರ ನಡುವೆ ಯುದ್ಧವೇರ್ಪಟ್ಟಾಗ ಕುಂತಿ, ನನ್ನ ತಾಯಿ ಬಂದಳು. ತೊಟ್ಟ ಅಸ್ತ್ರವನ್ನು ಮತ್ತೆ ತೊಡೆನೆಂಬ ಮಾತು ಪಡೆದು ಹೋದಳು. ಮಾತಿನುದ್ದಕ್ಕೂ ಪಾಂಡವರನ್ನು ರಕ್ಷಿಸುವ ಹೊಣೆಯನ್ನು ನನ್ನ ಮೇಲೆ ಹೊರಿಸಿದಳೇ ಹೊರತು ಒಮ್ಮೆಯಾದರೂ, ಬಾಯಿಯ ಮಾತಿಗಾದರೂ ಯುದ್ಧದಲ್ಲಿ ಗೆದ್ದು ಬಾ ಎಂದು ಸ್ವಂತ ತಾಯಿ ಹರಸಲಿಲ್ಲ.
ಇನ್ನೊಬ್ಬ…. ಇಂದ್ರ! ನನ್ನ ಕರ್ಣ ಕವಚ ಕುಂಡಲಗಳನ್ನು ಕದಿಯುವುದಕ್ಕೆಂದೇ ಬಂದ. ಇಷ್ಟೆಲ್ಲ ದೌರ್ಭಾಗ್ಯಗಳ ಮಧ್ಯೆ, ನನ್ನನ್ನು ಕೊನೆಯವರೆಗೆ, ಕೈಹಿಡಿದದ್ದು ದುರ್ಯೋಧನ ಮಾತ್ರ. ಹಾಗಿರುವಾಗ ಆತನನ್ನು ನಾನು ಹೇಗೆ ಮುರಿಯಲಿ ಕೃಷ್ಣ? ಅವನ ಪರವಾಗಿ ನಿಲ್ಲುವುದು ಅಧರ್ಮ ಹೇಗಾದೀತು…. ನೀನೇ ಹೇಳು”.
ಆಗ ಕರ್ಣನಿಗೆ ಕೃಷ್ಣ ನಗುತ್ತಾ ಹೇಳಿದ.
“ನೀನು ನದಿ ತೀರದಲ್ಲಿ ಹುಟ್ಟಿದೆ, ನದಿಯ ಪಾಲಾದೆ…. ಅಲ್ಲವೇ? ನಾನು ಹುಟ್ಟಿದ್ದು ಎಲ್ಲಿ ಎಂದು ಕೇಳು! ಸೆರೆಮನೆಯಲ್ಲಿ! ಇಂಥ ಜನ್ಮವನ್ನು ಯಾರಾದರೂ ಬಯಸಲು ಸಾಧ್ಯವೇ?
ಹುಟ್ಟಿದ ಮರುಕ್ಷಣವೇ ನಾನು ನನ್ನ ತಾಯಿಯಿಂದ ಬೇರೆಯಾದೆ. ನನ್ನ ತಂದೆ ನನ್ನನ್ನು ದೂರದೊಂದು ಹಳ್ಳಿಗೆ, ಬಿಟ್ಟು ಬಂದರು. ಹೋಗುವ ದಾರಿಯುದ್ದಕ್ಕೂ ಮಳೆ – ಗಾಳಿ ಹಾಗೂ ಸಿಡಿಲು. ಅಂದು ಸಾವು ನನ್ನ ಕಣ್ಮುಂದೆ ಇತ್ತು.
ನೀನಾದರೋ ಚಿಕ್ಕವನಿದ್ದಾಗಿನಿಂದ ಕತ್ತಿ, ರಥ, ಕುದುರೆ, ಬಿಲ್ಲುಬಾಣಗಳಿತ್ಯಾದಿಯನ್ನು ನೋಡಿಕೊಂಡು ಬಂದವನು ಕರ್ಣ. ಆದರೆ, ನನ್ನ ಬಾಲ್ಯದಲ್ಲಿ ಏನಿತ್ತು? ಹಸು, ಕೊಟ್ಟಿಗೆ, ಸೆಗಣಿ, ಗಂಜಲ! ಹಸು ಮೇಯಿಸುತ್ತ, ಸೆಗಣಿ ಬಾಚುತ್ತ, ಇದೇ ಜೀವನವೆಂದು ಬಗೆದ ಜನರೊಂದಿಗೆ ಬಾಳುತ್ತಿದ್ದವನು ನಾನು. ಅಷ್ಟರ ಮೇಲೂ, ಅನಿಷ್ಟಕ್ಕೆಲ್ಲ ನಾನೇ ಕಾರಣ ಎಂದು ಜನ ನನ್ನನ್ನು ಬೆಟ್ಟು ಮಾಡುತ್ತಿದ್ದರು. ನನ್ನನ್ನು ಕೊಲ್ಲಲು ಅದೆಷ್ಟು ಪ್ರಯತ್ನಗಳಾದವು ಹೇಳು, ರಾಕ್ಷಸರು ಅದೆಷ್ಟೆಲ್ಲ ಬಗೆಯಲ್ಲಿ ನನ್ನ ಮೇಲೆ ಆಕ್ರಮಣ ಮಾಡಿದರು.
ನಾನೂ ಓದಬೇಕು, ವಿದ್ಯೆ ಸಂಪಾದಿಸಬೇಕು ಎಂದು ನಿರ್ಧರಿಸಿ ಗುರುಕುಲ ಸೇರುವ ಹೊತ್ತಿಗೆ, ನನಗೆ ಹದಿನಾರು ವರ್ಷಗಳಾಗಿ ಬಿಟ್ಟಿದ್ದವು. ಬಾಕಿ ಹುಡುಗರು ಅದಾಗಲೇ ತಮ್ಮ ಜ್ಞಾನಾರ್ಜನೆಯನ್ನು ಮುಗಿಸಿ, ಆಶ್ರಮದಿಂದ ಹೊರಬರುವ ಹೊತ್ತಿನಲ್ಲಿ, ನಾನು ವಿದ್ಯಾರ್ಥಿಯಾಗಿ ಸೇರಿದ್ದೆ. ಇನ್ನು ಗೃಹಸ್ಥ ಜೀವನ ಹೇಗಿತ್ತೆಂದು ಕೇಳುತ್ತೀಯಾ? ಅದಿನ್ನೊಂದು ಕಥೆ….
ಮದುವೆಯಾದವರನ್ನು ನಾನು ಮನಃಪೂರ್ವಕ ಪ್ರೀತಿಸಿರಲಿಲ್ಲ. ಯಾರನ್ನು ನಿಜವಾಗಿ ಪ್ರೀತಿಸಿದ್ದೆನೋ…..ಅವರನ್ನೂ ಮದುವೆಯಾಗಲಿಲ್ಲ. ದೈತ್ಯನೊಬ್ಬ ಕೂಡಿ ಹಾಕಿದ್ದ ಹೆಂಗಸರನ್ನು ಬಿಡಿಸಿದ್ದರಿಂದ ಅವರೆಲ್ಲರಿಗೂ ನಾನು ಪತಿಯಾದೆ. ಬಯಸದೇ ಬಂದ ಜವಾಬ್ದಾರಿಯದು. ಜರಾಸಂಧನಿಂದ ಜೀವ ಉಳಿಸಲಿಕ್ಕಾಗಿ, ನಾನು ಊರಿನೆಲ್ಲರನ್ನೂ ಹೊರಡಿಸಿಕೊಂಡು ಮಥುರೆಯಿಂದ ದ್ವಾರಕೆಗೆ ಹೋಗಬೇಕಾಯಿತು. ಹೊಸ ಪರಿಸರ, ಹೊಸ ಜನ. ಅಂತಹ ಪರಿಸ್ಥಿತಿಯಲ್ಲಿ ಏನು ಮಾಡಬಹುದಿತ್ತು ಎಂದರೆ ನಾವು ಅಲ್ಲಿಯೇ ಇರಬೇಕಾಗಿ ಬಂತು.
ಅಲ್ಲಿ ನಾವು ಬಿಡಾರ ಹೂಡಿ, ಹೊಸ ನಗರವನ್ನು ಕಟ್ಟಿಕೊಳ್ಳಬೇಕಾಗಿತ್ತು. ಮಥುರೆಯಿಂದ ಹೊರಟಾಗ ನಾನು ಕೇಳಿದ ಮಾತುಗಳಾದರೂ ಎಂಥಾದ್ದು! ಹೇಡಿ ಎಂದರು. ರಟ್ಟೆಯಲ್ಲಿ ಬಲವಿಲ್ಲದೆ ಓಡಿ ಹೋಗುತ್ತಿದ್ದಾನೆ ಎಂದರು. ಎಲ್ಲ ಗೇಲಿ – ಅಪಮಾನಗಳನ್ನೂ ಸ್ಥಿತಪ್ರಜ್ಞನಾಗಿ ನಾನು ಸಹಿಸಿಕೊಳ್ಳಬೇಕಾಯಿತು.
ಕರ್ಣ! ಕುರುಕ್ಷೇತ್ರದಲ್ಲಿ, ನೀನು ಗೆದ್ದದ್ದೇ ಆದರೆ ದುರ್ಯೋಧನನ ಪ್ರೀತಿಗೆ ನೀನು ಸಂಪೂರ್ಣವಾಗಿ, ಪಾತ್ರನಾಗುತ್ತಿದ್ದೆ. ಪ್ರೀತಿಯಿಂದ ಅರ್ಧ ರಾಜ್ಯವನ್ನು ನಿನಗೆ ಬಿಟ್ಟು ಕೊಟ್ಟಾನೇನೋ ಅಥವಾ ಸಿಂಹಾಸನದ ಪಕ್ಕದಲ್ಲೇ ಮತ್ತೂಂದನ್ನಿಟ್ಟು ನಿನ್ನನ್ನು ಕುಳ್ಳಿರಿಸಿಯಾನೋ ಏನೋ…. ಜಯದಿಂದ ಲಭಿಸುವ ಎಲ್ಲ ಭೋಗ ಭಾಗ್ಯಗಳಿಗೂ ನೀನು ವಾರಸುದಾರನಾಗಿರುತ್ತಿದ್ದೆ.
ಆದರೆ ನನಗೆ? ಈ ಯುದ್ಧ ಗೆಲ್ಲಿಸಿಕೊಟ್ಟರೆ…. ನನಗೇನು ಸಿಗುತ್ತದೆ ಎಂದು ಭಾವಿಸಿದ್ದಿ? ಅಣ್ಣತಮ್ಮಂದಿರು ಹೇಳುತ್ತಾರೆ – ನಮಗೆ ಬೇಡ ಇತ್ತು. ಆದರೂ ಆ ಕುಟಿಲ ಈ ಯುದ್ಧ ಮಾಡಿಸಿದ! ಲಕ್ಷಾಂತರ ಜನರ ಸಾವಿಗೆ ಕಾರಣನಾದ. ದಾಯಾದಿಗಳೇ ಪರಸ್ಪರ ಕೊಂದುಕೊಳ್ಳುವ ಹಾಗೆ ಮಾಡಿದ. ಅಣ್ಣತಮ್ಮಂದಿರು ಎದುರೆದುರು ನಿಂತು ಸೆಣಸುವಂತೆ ಮಾಡಿದ.
ಗಾಂಧಾರಿಯ ಶಾಪವನ್ನು ನಾನು ಗಾಳಿಗೆ ತೂರಿ ಬಿಡಲಾಗಲಿಲ್ಲ.
ಸಹನೆಯಿಂದ ಅನುಭವಿಸಬೇಕಾಯಿತು.
ಕರ್ಣ!
ಪ್ರತಿಯೊಬ್ಬನಿಗೂ ಜೀವನದಲ್ಲಿ ಒಂದಿಲ್ಲೊಂದು ಸವಾಲು ಇದ್ದೇ ಇರುತ್ತದೆ. ನಿನಗೆ ನಿನ್ನ ಜೀವನ ಅಗ್ನಿಕುಂಡ ಅನ್ನಿಸಿದರೆ ನನ್ನದನ್ನು ನೋಡು. ಜೀವನ ಯಾರಿಗೂ ಹೂವಿನ ಹಾಸಿಗೆಯಲ್ಲ. ಯಾರಿಗೂ ಸುಲಭ ಗ್ರಾಹ್ಯವೂ ಅಲ್ಲ. ಜೀವನದಲ್ಲಿ ಏನೇ ಏರುಪೇರುಗಳು ಬಂದರೂ, ಆ ಎಲ್ಲ ಸಂದರ್ಭಗಳಲ್ಲಿ ನೀನು ಏನನ್ನೇ ಮಾಡಿದರೂ ಯಾವುದು ಸರಿ ಎಂಬುದು ನಿನ್ನ ಒಳ ಮನಸ್ಸಿಗೆ ಗೊತ್ತಿರುತ್ತದೆ. ಅದನ್ನೇ ಧರ್ಮ ಎನ್ನುವುದು. ಆತ್ಮಸಾಕ್ಷಿ ಯಾವುದನ್ನು ನುಡಿಯುತ್ತದೋ, ಅದೇ ಧರ್ಮ. ಆತ್ಮಸಾಕ್ಷಿ ಸತ್ತ ದಿನ ನಾವು ಧರ್ಮದಿಂದ ವಿಮುಖರಾದೆವು, ಅಧರ್ಮಿಗಳಾದೆವು ಎಂದೇ ಅರ್ಥ.
ನಾವು ಎಷ್ಟು ಅನ್ಯಾಯಕ್ಕೊಳಗಾದರೂ ಎಷ್ಟೊಂದು ಅಪಮಾನವನ್ನು ನುಂಗಬೇಕಾಗಿ ಬಂದರೂ…. ಎಷ್ಟೊಂದು ಸಲ ಕೆಳಗೆ ಬಿದ್ದರೂ…. ಮೀಸೆ ಮಣ್ಣಾದರೂ…. ಮುಖ್ಯವಾಗುವುದು ಯಾವುದು ಗೊತ್ತಾ? ನಾವು ಆ ಪರಿಸ್ಥಿತಿಗಳಿಗೆ ಹೇಗೆ ಪ್ರತಿಕ್ರಿಯಿಸಿದೆವು ಎನ್ನುವುದು.
ಜೀವನದಲ್ಲಿ ಮೇಲಿಂದ ಮೇಲೆ ಸಮಸ್ಯೆಗಳು, ದುಃಖಗಳು, ಅವಮಾನಗಳು ಬಂದವೆನ್ನುವುದು ನಾವು ತಪ್ಪು ಮಾಡಲು ನಮಗೆ ಸಿಗುವ ಪರವಾನಗಿಯಲ್ಲ. ಜೀವನದಲ್ಲಿ, ನಮ್ಮ ಬದುಕು ನಿರ್ಧಾರವಾಗುವುದು ನಾವು ಯಾವ ಚಪ್ಪಲಿಯನ್ನು ತೊಡುತ್ತೇವೆ ಎಂಬುದರಿಂದ ಅಲ್ಲ… ಯಾವ ದಾರಿಯಲ್ಲಿ ನಮ್ಮ ಹೆಜ್ಜೆಗಳನ್ನು ಇಡುತ್ತೇವೆ ಎಂಬುವುದರಿಂದ. ಅದನ್ನು
ಮೊದಲು ನಾವು ಅರ್ಥ ಮಾಡಿಕೊಳ್ಳಬೇಕು”.
ಉತ್ತಮವಾದ ಕಥೆ