ಸಮಯ ಸರಿಯಿಲ್ಲ ಎನ್ನುವುದನ್ನು ಬಿಡಲು ಇಂದೇ ಸುಸಮಯ!
ಒಂದಾನೊಂದು ಕಾಲದಲ್ಲಿ ಒಬ್ಬನಿಗೆ ಮಾತುಮಾತಿಗೂ ನನ್ನ ಅದೃಷ್ಟವೇ ಸರಿಯಿಲ್ಲ ಎನ್ನುವ ಕೆಟ್ಟ ಅಭ್ಯಾಸವಿತ್ತು. ಅವನು ಕಾಲೇಜಿಗೆ ಹೋಗಲು ಬಸ್ ನಿಲ್ದಾಣಕ್ಕೆ ಹೋಗುವಾಗ ಹೀಗೆ ಹೇಳಿಕೊಂಡೆ ಹೋಗುತ್ತಿದ್ದ. ಬಸ್ ಸಿಗುತ್ತಿರಲಿಲ್ಲ. ಮುಂದಿನ ಬಸ್ ನಲ್ಲಿ ಹೋಗುವಷ್ಟರಲ್ಲಿ ತರಗತಿ ಪ್ರಾರಂಭವಾಗಿರುತಿತ್ತು. ಕ್ಯಾಂಟೀನಿಗೆ ಊಟಕ್ಕೆ ಹೋದರೆ ಊಟ ಮುಗಿದಿರುತ್ತಿತ್ತು. ಈತ ಪರೀಕ್ಷೆಗೂ ಹೀಗೆಯೇ ಹೇಳಿಕೊಂಡು ಹೋಗುತ್ತಿದ್ದ. ಉತ್ತರ ಗೊತ್ತಿದ್ದರೂ ಸರಿಯಾಗಿ ಬರೆಯುತ್ತಿರಲಿಲ್ಲ. ಉತ್ತೀರ್ಣನಾಗಲು ಎರಡು-ಮೂರು ಪ್ರಯತ್ನ ಬೇಕಾಗುತ್ತಿತ್ತು. ಕೆಲಸಕ್ಕೆ ಸೇರಿದಾಗಲೂ ಹೀಗೆಯೇ ಎಲ್ಲರಿಗಿಂತಲೂ ಕೊನೆಯವನಾಗಿ ಸೇರಿದ್ದ.
ಈತನಿಗೆ ಇದೆಲ್ಲಾ ಅನುಭವಿಸಿ ಬೇಸರವಾಗಿ ಹೋಯಿತು. ಸರಿಯಾದ ಊಟ, ಬಟ್ಟೆ, ಆಶ್ರಯ ಸಿಗುತ್ತಿರಲಿಲ್ಲ. ಶಾಂತಿ ಸಮಾಧಾನವಿರಲಿಲ್ಲ. ಜೀವನದಲ್ಲಿ ಉತ್ಸಾಹವೇ ಉಳಿದಿರಲಿಲ್ಲ. ಜೀವನವೇ ಜುಗುಪ್ಸೆಯಾಗುತ್ತಿತ್ತು. ಸತ್ತರೆ ಸ್ವರ್ಗದಲ್ಲಿ ರುಚಿರುಚಿಯಾದೂಟ, ಗಾನ, ನರ್ತನ ಎಲ್ಲವೂ ಸಿಗಬಹುದೇನೋ ಎನಿಸಿತು. ಒಂದು ದಿನ ಆತ್ಮಹತ್ಯೆಯ ತೀರ್ಮಾನ ಮಾಡಿಕೊಂಡು, ರೈಲಿಗೆ ಸಿಕ್ಕಿ ಸಾಯೋಣವೆಂದುಕೊಂಡು ಬೆಳಗ್ಗೆಯೇ ಹೋಗಿ ರೈಲ್ವೆ ಕಂಬಿಗಳ ಮೇಲೆ ಮಲಗಿಬಿಟ್ಟ. ಅಂದು ಭಾರತ್ ಬಂದ್ ಚಳುವಳಿ ಇತ್ತಾದ್ದರಿಂದ ಸಂಜೆವರೆಗೂ ಯಾವ ರೈಲು ಬರಲಿಲ್ಲ. ಈತ ಮಲಗಿ ಚೆನ್ನಾಗಿ ನಿದ್ದೆ ಮಾಡಿ ಬಿಟ್ಟ. ಅಷ್ಟರಲ್ಲಿ ಗೂಡ್ಸ್ ರೈಲು ಈತನ ಮೇಲೆ ಹರಿದುಹೋಯಿತು.
ಮರುಕ್ಷಣವೇ ಸತ್ತು ಸ್ವರ್ಗದ ಬಾಗಿಲಲ್ಲಿ ನಿಂತಿದ್ದ. ದ್ವಾರಪಾಲಕರ ಊಟದ ಸಮಯವಾದ್ದರಿಂದ ಬಾಗಿಲು ಮುಚ್ಚಿತ್ತು. ಈತ ಕಾಯುತ್ತಾ ಪಕ್ಕಕ್ಕೆ ತಿರುಗಿ ನೋಡಿದಾಗ, ಈತನಂತೆಯೆ ಇರುವ ಮತ್ತೊಬ್ಬ ನಿಂತಿದ್ದ. ಅವನಿಗೆ ನಮಸ್ಕರಿಸಿ, ತನ್ನ ಪರಿಚಯ ಹೇಳಿಕೊಂಡು ಭೂಲೋಕದ ಜೀವನ ಸಾಕಾಗಿತ್ತು. ಸ್ವರ್ಗದಲ್ಲಾದರೂ ಚೆನ್ನಾಗಿ ತಿಂದು ಉಂಡು ಸುಖವಾಗಿ ಇರೋಣವೆಂದು ಬಂದಿದ್ದೇನೆ. ನೀವು ಯಾರು? ಏಕೆ ಬಂದಿದ್ದೀರಿ? ಎಂದು ಕೇಳಿದ. ಆತ ಗಹಗಹಿಸಿ ನಕ್ಕು ನಾನು ಬೇರೆ ಯಾರೋ ಅಲ್ಲ. ನಾನು ನಿನ್ನ ದುರಾದೃಷ್ಟ. ನೀನು ಇಲ್ಲಿಯೂ ಸುಖವಾಗಿರದಂತೆ ನೋಡಿಕೊಳ್ಳಲು ನಾನು ನಿನ್ನೊಂದಿಗೆ ಬಂದಿದ್ದೇನೆ ಎಂದ. ಈತ ಅಯ್ಯೋ ನೀನು ಇಲ್ಲಿಗೂ ಏಕೆ ಬಂದೆ? ಎಂದು ಕೇಳಿದ. ಆತ ನೀನು ನಿನ್ನ ಇಡೀ ಜೀವನದಲ್ಲಿ ನನ್ನ ಅದೃಷ್ಟ ಸರಿಯಿಲ್ಲ. ನನ್ನದು ದುರಾದೃಷ್ಟ ಎಂದೇ ಹೇಳುತ್ತಿದ್ದೆ. ಅದಕ್ಕೆ ನಾನು ಯಾವಾಗಲೂ ನಿನ್ನೊಡನೆಯೇ ಇರುತ್ತಿದ್ದೆ. ಈಗಲೂ ಬಂದಿದ್ದೇನೆ ಎಂದ.
ಈತ ನನ್ನಿಂದ ತಪ್ಪಾಯಿತು, ನಿನಗೊಂದು ದೊಡ್ಡ ನಮಸ್ಕಾರ. ನಿನ್ನಿಂದ ಬಿಡಿಸಿಕೊಳ್ಳಲು ನಾನೇನು ಮಾಡಬೇಕು ಎಂದು ಕೇಳಿಕೊಂಡ. ಆತ ನನ್ನಿಂದ ತಪ್ಪಿಸಿಕೊಳ್ಳುವ ಸರಳ ಉಪಾಯವೆಂದರೆ ಯಾವಾಗಲೂ ನನ್ನದು ದುರಾದೃಷ್ಟ ಎಂದು ಹೇಳಿಕೊಳ್ಳುತ್ತಿರಬೇಡ ಹಾಗೆಂದುಕೊಳ್ಳುತ್ತಿದ್ದರೆ ಇರುವ ಒಳ್ಳೆಯ ಅದೃಷ್ಟವು ಹೊರಟು ಹೋಗುತ್ತದೆ. ಯಾವಾಗಲೂ ಒಳ್ಳೆಯದನ್ನೇ ಯೋಚಿಸುತ್ತಿರು. ಒಳ್ಳೆಯದೇ ಆಗುತ್ತದೆ. ಈಗ ನಾನು ಹೋಗುತ್ತೇನೆ. ನೀನು ಕರೆದರೆ ಮತ್ತೆ ಬರುತ್ತೇನೆಂದು ಹೇಳಿ ಭಾರಿ ಶಬ್ದಮಾಡುತ್ತಾ ಹೊರಟುಹೋದ. ಭಾರಿ ಶಬ್ದಕ್ಕೆ ಈತನಿಗೆ ಎಚ್ಚರವಾಯಿತು ಇದೆಲ್ಲ ಕಂಡಿದ್ದು ಕನಸಿನಲ್ಲಿ ಎಂಬ ಅರಿವಾಯಿತು. ಅಲ್ಲಿಂದ ಎದ್ದು ಬಂದ ಕನಸಿನಲ್ಲಿ ಕಲಿತ ಪಾಠವನ್ನು ಪಾಲಿಸಿಕೊಂಡು ನನ್ನದು ದುರಾದೃಷ್ಟ, ನನ್ನ ಸಮಯ ಸರಿ ಇಲ್ಲ ಎಂದೆಲ್ಲ ಹೇಳುವ ಅಭ್ಯಾಸವನ್ನು ಅಂದೇಬಿಟ್ಟ.
ಸ್ನೇಹಿತರೆ ನಿಮಗೂ ನನ್ನ ಅದೃಷ್ಟ ಸರಿಯಿಲ್ಲ, ನನ್ನ ಸಮಯ ಸರಿಯಿಲ್ಲ, ನನ್ನ ಕೈಯಿಂದ ಆಗುವುದಿಲ್ಲ, ಎನ್ನುವ ಅಭ್ಯಾಸವಿದ್ದರೆ ಅದನ್ನು ಬಿಡಲು ಎಂದೇ ಸುಸಮಯ ಅಲ್ಲವೇ??.