www.vishaya.in ದಿನಕ್ಕೊಂದು ಕಥೆಯಲ್ಲಿ–> ಬಹುಶಃ – ಅಂತ್ಯವಿಲ್ಲದ ಕಥೆ – ಈ ಜೆನ್ ಕಥೆ. # ಕನ್ನಡ, #ಕಥೆ , #ಜೆನ್, #ನೀತಿಕಥೆ , #ರೈತ, #ಕುದುರೆ , #ಝೆನ್_ಕಥೆ , #ಅಂತ್ಯ, #ಆರಂಭ,
ಒಂದಾನೊಂದು ಕಾಲದಲ್ಲಿ ಓರ್ವ ಹಳೆಯ ರೈತನಿದ್ದ, ಅವನು ತನ್ನ ಪಾಡಿಗೆ ತನ್ನ ಬೆಳೆಗಳನ್ನು ಬೆಳೆಸುತ್ತ ಅನೇಕ ವರ್ಷಗಳಿಂದ ತನ್ನ ಕೆಲಸ ಮಾಡಿಕೊಂಡು ಜೀವನ ನಡೆಸುತ್ತ ಇದ್ದ. ಒಂದು ದಿನ ಅವನ ಪ್ರಿಯವಾದ ಕುದುರೆ ಮನೆಯಿಂದ ಓಡಿಹೋಯಿತು. ಸುದ್ದಿ ಕೇಳಿದ ನಂತರ, ಅವರ ನೆರೆಹೊರೆಯವರು ಭೇಟಿಗೆ ಬಂದರು. “ಎಂಥ ಕೆಟ್ಟ ಅದೃಷ್ಟ (bad luck) ,” ಎಂದು ಸಹಾನುಭೂತಿ ವ್ಯಕ್ತಪಡಿಸಿದರು.
“ಬಹುಶಃ,” ಎಂದು ರೈತ ಯಾವುದೇ ದುಃಖವಿಲ್ಲದೆ ತಟಸ್ಥ ಭಾವನೆಯಿಂದ ಉತ್ತರಿಸಿದರು.
ಮರುದಿನ ಬೆಳಿಗ್ಗೆ ಕುದುರೆ ಮರಳಿತು, ಅದರೊಂದಿಗೆ ಮೂರು ಇತರ ಕಾಡು ಕುದುರೆಗಳನ್ನು ಕರೆದುಕೊಂಡು ಬಂದಿತ್ತು. “ಎಂಥ ಅದ್ಭುತ,” ಎಂದು ನೆರೆಯವರು ಆಶ್ಚರ್ಯದಿಂದ ಉದ್ಗರಿಸಿದರು.
“ಬಹುಶಃ,” ಎಂದು ರೈತ ಯಾವುದೇ ನಗುವಿಲ್ಲದೆ ತಟಸ್ಥ ಭಾವನೆಯಿಂದ ಮತ್ತೆ ಉತ್ತರಿಸಿದರು.
ಮರುದಿನ, ಅವನ ಮಗನು ಕಾಡು ಕುದುರೆಗಳಲ್ಲಿ ಒಂದನ್ನು ಓಡಿಸಲು ಪ್ರಯತ್ನಿಸಿದನು, ಸಂಭಾಳಿಸಲಾಗದೆ ಕಾಡು ಕುದುರೆಯ ಮೇಲಿಂದ ಬಿದ್ದು ಅವನ ಕಾಲು ಮುರಿದು ಹೋಯಿತು. ನೆರೆಮನೆಯವರು ಮತ್ತೆ ರೈತನ ದೌರ್ಭಾಗ್ಯದ ಬಗ್ಗೆ ತಮ್ಮ ಸಹಾನುಭೂತಿ ನೀಡಲು ಬಂದರು.
“ಬಹುಶಃ,” ಎಂದು ರೈತ ಯಾವುದೇ ದುಃಖವಿಲ್ಲದೆ ತಟಸ್ಥ ಭಾವನೆಯಿಂದ ಮತ್ತೆ ಉತ್ತರಿಸಿದರು.
ಮರು ದಿನ ಮಿಲಿಟರಿ ಅಧಿಕಾರಿಗಳು ಸೈನ್ಯಕ್ಕೆ ಯುವಕರು ಸೇರಿಸಿಕೊಳ್ಳಲು ಆ ಹಳ್ಳಿಗೆ ಬಂದರು. ಆ ಕಾಲದಲ್ಲಿ ಪ್ರತಿ ಮನೆಯಿಂದ ಒಬ್ಬ ಯುವಕನನ್ನು ಕಡ್ಡಾಯವಾಗಿ ಸೈನ್ಯಕ್ಕೆ ಸೇರಿಸಬೇಕಾಗಿತ್ತು. ಮಗನ ಕಾಲು ಮುರಿಯಲ್ಪಟ್ಟಿದೆ ಎಂದು ನೋಡಿದ ಮಿಲಿಟರಿ ಅಧಿಕಾರಿಗಳು ಅವನನ್ನು ಆರಿಸದೆ ಬಿಟ್ಟು ಹೋದರು. ನೆರೆಹೊರೆಯವರು ರೈತರಿಗೆ ಮತ್ತೆ ಬಂದು ಅಭಿನಂದನೆ ಮಾಡಿದರು.
“ಬಹುಶಃ,” ಎಂದು ರೈತ ಯಾವುದೇ ನಗುವಿಲ್ಲದೆ ತಟಸ್ಥ ಭಾವನೆಯಿಂದ ಮತ್ತೆ ಉತ್ತರಿಸಿದರು.
ವಿವರಣೆ: ರೈತ ಯಾವುದೇ ಘಟನೆಗೂ ಒಂದು ಅಂತಿಮ ತೀರ್ಪು ಕೊಡದೆ ಇರುವುದನ್ನು ಅಭ್ಯಾಸ ಮಾಡುತ್ತಿದ್ದಾನೆ. ಅವನು ಯಾವುದೇ ಘಟನೆಯನ್ನು ಒಂದು “ಅಂತ್ಯ” ಎಂದು ತೀರ್ಮಾನಿಸಲು ಸಾಧ್ಯವಿಲ್ಲವೆಂದು, ಅದೇ ಜೀವನದ ನಿಜವಾದ ಸ್ವಭಾವವೆಂದು ಅರ್ಥೈಸುತ್ತಾರೆ. ನಮ್ಮ ಜೀವನವು ಕಾದಂಬರಿಯಂತೆ ಕೆಲಸ ಮಾಡುವುದಿಲ್ಲ. ಒಂದು ಕ್ಷಣ ಮತ್ತು ಇನ್ನೊಂದನ್ನು ಬೇರ್ಪಡಿಸುವ ನಿರ್ದಿಷ್ಟ ವಿರಾಮಗಳಿಲ್ಲ, ಮತ್ತು ಎಲ್ಲವನ್ನೂ ನಿರ್ಮಿಸುವ ಒಂದು ಸಂಪೂರ್ಣ ರಚನೆಯ ಅಂತ್ಯವಿಲ್ಲ.
ನಾಳೆ ಯಾವಾಗಲೂ ಇರುತ್ತದೆ. ಮತ್ತು ಪ್ರತಿ ದಿನವು ಒಳ್ಳೆಯದು ಅಥವಾ ಕೆಟ್ಟದ್ದಾಗಿಯೇ ಇರುತ್ತದೆ. ಒಳ್ಳೆಯದು ಮತ್ತು ಕೆಟ್ಟವು ಪರಸ್ಪರ ಸಂಬಂಧ ಹೊಂದಿವೆ. ಅದು ಒಂದೇ ನಾಣ್ಯದ ಎರಡು ಬದಿಗಳಾಗಿವೆ. ಪ್ರತಿಯೊಂದಕ್ಕೂ ಒಂದು ಅಂತ್ಯವಿರುತ್ತದೆ ಹಾಗೆ ಅದು ಇನ್ನೊಂದರ ಆರಂಭವಾಗಿರುತ್ತದೆ. ಜೀವನದಲ್ಲಿ ಯಾವುದೇ ಘಟನೆಯಾದರೂ ನೀವು ಬದುಕುವ ವಿಧಾನವನ್ನು ಬದಲಾಯಿಸಬೇಡಿ. ಪಾಲಿಗೆ ಬಂದದ್ದು ಪಂಚಾಮೃತ ಮತ್ತು ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ಹೇಳಿದಂತೆ “ಆಗುವುದೆಲ್ಲ ಒಳ್ಳೆಯದಕ್ಕೆ” ಎನ್ನುವ ರೀತಿಯಲ್ಲಿ ಬದುಕಿ ಎಂದು ಈ ಜೆನ್ ಕಥೆಯ ಮೂಲಕ ತಿಳಿಸಿದ್ದಾರೆ.