ಚಂದ್ರ…🌙
ಚಂದ್ರನು ನೋಡಲು ಅತ್ಯಂತ ಸುಂದರನಾಗಿದ್ದ. ಆತನು ಪ್ರಜಾಪತಿ ದಕ್ಷನ ಅಶ್ವಿನಿ, ಭರಣಿ ಮೊದಲಾದ 27 ಹೆಣ್ಣುಮಕ್ಕಳನ್ನು ಮದುವೆಯಾಗುತ್ತಾನೆ. ಚಂದ್ರನು ತನ್ನ 27 ಪತ್ನಿಯರಲ್ಲಿ ರೋಹಿಣಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾನೆ. ಇದರಿಂದ ಕೋಪಗೊಂಡ ರೋಹಿಣಿಯ ಇನ್ನುಳಿದ ಸಹೋದರಿಯರು ತಮ್ಮ ತಂದೆ ಪ್ರಜಾಪತಿ ದಕ್ಷನಿಗೆ ದೂರನ್ನು ನೀಡುತ್ತಾರೆ. ಆಗ ದಕ್ಷನು ಚಂದ್ರನಿಗೆ ಕ್ಷಯ ರೋಗ ಬರಲಿ, ದಿನಕಳೆದಂತೆ ನೀನು ಕ್ಷೀಣಿಸುತ್ತಾ ಹೋಗಿ ರೂಪವನ್ನು ಕಳೆದುಕೋ ಎಂದು ಶಪಿಸುತ್ತಾನೆ. ದಕ್ಷನ ಶಾಪದಿಂದ ಚಿಂತೆಗೀಡಾದ ಚಂದ್ರನು ಬ್ರಹ್ಮನ ಸಲಹೆಯ ಮೇರೆಗೆ ಶಿವನನ್ನು ಪ್ರಾರ್ಥಿಸಲು ಆರಂಭಿಸುತ್ತಾನೆ. ಆಗ ಶಿವನು ಪ್ರತ್ಯಕ್ಷನಾಗಿ ಹುಣ್ಣಿಮೆಯ ದಿನ ಬರುತ್ತಿದ್ದಂತೆ ನೀನು ಪೂರ್ಣ ಸೌಂದರ್ಯವನ್ನು, ಶಕ್ತಿಯನ್ನು ಪಡೆದುಕೊಳ್ಳುವಂತಾಗಲಿ ಹಾಗೂ ಅಮಾವಾಸ್ಯೆ ಸಮೀಪಿಸುತ್ತಿದ್ದಂತೆ ನಿನ್ನ ಸೌಂದರ್ಯ ಕಳೆಗುಂದಲಿ ಹಾಗೂ ಶಕ್ತಿ ಕಡಿಮೆಯಾಗಲಿ ಎಂದು ಶಾಪದ ಪ್ರಭಾವವನ್ನು ಕಡಿಮೆ ಮಾಡುತ್ತಾನೆ.
ಚಂದ್ರ ಒಮ್ಮೆ ದೇವ ಗುರುಗಳಾದ ಬ್ರಹಸ್ಪತಿಯ ಪತ್ನಿ ತಾರೆಯನ್ನು ಅಪಹರಿಸಿ ಅವಳಲ್ಲಿ ಬುಧನನ್ನು ಪಡೆಯುತ್ತಾನೆ.
ಒಮ್ಮೆ ಚೌತಿಯಂದು ಗಣಪತಿ ಎಲ್ಲಿಗೋ ಹೋಗುತ್ತಿರುವಾಗ ಜಾರಿ ಧೊಪ್ಪನೆ ಬೀಳುತ್ತಾನೆ. ಇದನ್ನು ಕಂಡ ಚಂದ್ರ ನಕ್ಕು ಅಪಹಾಸ್ಯ ಮಾಡುತ್ತಾನೆ. ಆಗ ಗಣಪತಿಯು ಚೌತಿಯಂದು ನಿನ್ನನ್ನು ನೋಡಿದವರಿಗೆ ಅಪವಾದ ಬರಲಿ ಎಂದು ಶಾಪ ಕೊಡುತ್ತಾನೆ.
ಆದುದರಿಂದ ಚೌತಿಯಂದು ಚಂದ್ರದರ್ಶನ ನಿಷಿದ್ದ. ಚಂದ್ರ ದರ್ಶನ ಮಾಡಿದರೆ , ಅಪವಾದ ಬಾರದಿರಲು ಪ್ರಾಯಶ್ಚಿತ್ತವಾಗಿ ಸ್ಯಮಂತಕೋಖ್ಯಾನ ಕೇಳಬೇಕಂತೆ