ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಶರಣ ಉರಿಲಿಂಗ ಪೆದ್ದಿಯವರ ೩೬೩ ವಚನಗಳು

 ಶರಣ ಉರಿಲಿಂಗ ಪೆದ್ದಿಯವರ ಮೂಲ ಹೆಸರು ಪೆದ್ದಣ್ಣ, ಇವರ ಒಟ್ಟು 363 ವಚನಗಳು ಲಭ್ಯವಾಗಿದ್ದು, ಇವರ ವಚನಗಳ ಅಂಕಿತ ನಾಮವು   ಉರಿಲಿಂಗ ಪೆದ್ದಿ ಪ್ರಿಯ ವಿಶ್ವೇಶ್ವರಾ. 

ಮೂಲತ: ಚೋರವೃತ್ತಿಯವನಾಗಿದ್ದ ಈತ ಉರಿಲಿಂಗದೇವನ ಶಿಷ್ಯತ್ವ ವಹಿಸಿ, ಘನ ವಿದ್ವಾಂಸನಾದ. ಕಾಳವ್ವೆ ಈತನ ಸತಿ. ಈತ ರಚಿಸಿದ ೩೬೩ ವಚನಗಳು ದೊರೆತಿವೆ.
ಅವುಗಳಲ್ಲಿ ಗುರುಮಹಿಮೆಗೆ ಅಗ್ರಸ್ಥಾನ ಸಂದಿದೆ. ಜೊತೆಗೆ ಲಿಂಗ-ಜಂಗಮ ತತ್ವದ ವಿಚಾರ, ಕುಲ-ಜಾತಿ ಸಮಸ್ಯೆ ನಿರೊಪಿತವಾಗಿವೆ. ವಚನಗಳ ಮಧ್ಯದಲ್ಲಿ ಬಳಸಿದ ಹೇರಳ ಸಂಸ್ಕೃತ ಉದ್ಧರಣೆಗಳು ಈತನ ಪಾಂಡಿತ್ಯಕ್ಕೆ ನಿದರ್ಶನವೆನಿಸಿವೆ.
ಧರ್ಮ ಹಾಗೂ ಧರ್ಮದ ತತ್ವ, ಆಚರಣೆಗಳ ಪ್ರಚಾರ ಇವನ ವಚನಗಳ ಪ್ರಧಾನ ಆಶಯ. ವಚನಗಳ ನಡುವೆ ಬಳಸುವ ಯಥೇಚ್ಛ ಸಂಸ್ಕೃತ ಶ್ಲೋಕಗಳ ಆಧಾರದಿಂದ ಈತ ದೊಡ್ಡ ಜ್ಞಾನಿ ಎಂದು ಹೇಳಬಹುದು.
ಹುಟ್ಟಿನಲ್ಲಿ ಅಂತ್ಯಜನಾಗಿ ಗುರುಪೀಠವನ್ನೇರಿದ ಸಂಗತಿ ಕ್ರಾಂತಿಕಾರಕವಾದುದು. ಈತನಲ್ಲಿ ಸಾಮಾಜಿಕ ವಿಡಂಬನೆ ತೀಕ್ಷ್ಣವಾಗಿದೆ. ತನಗೆ ಸರಿಕಾಣದ್ದನ್ನು ಮುಚ್ಚು ಮರೆಯಿಲ್ಲದೆ ಟೀಕಿಸಿರುವನು.
ಇವನಲ್ಲಿ ವೈಚಾರಿಕತೆ ಪ್ರಧಾನವಾಗಿದೆ. ಕಳ್ಳತನ ಮಾಡಿಕೊಂಡು ಜೀವಿಸುತ್ತಿದ್ದ ಒಬ್ಬ ಪೆದ್ದಣ್ಣ ಎಂಬ ವ್ಯಕ್ತಿಯು ಗುರುಕೃಪದಿಂದ, ನಡೆದ ಒಂದು ಘಟನೆಯಿಂದ, ಆತ್ಮನರಿವಿನಿಂದ ಮಹಾ ಶರಣರಾಗಿ ಹೊರಹೊಮ್ಮಿದವರೇ ಶರಣ ಉರಿಲಿಂಗ ಪೆದ್ದಿ ಯವರು.
ಇವರು ಆಂಧ್ರಪ್ರದೇಶದಿಂದ ಮಹಾರಾಷ್ಟ್ರದ ನಾಂದೇಢ್ ಜಿಲ್ಲೆಯ ಕಂದಾರ ಅಥವಾ ಕಂದಾಪುರ ಕ್ಕೆ ಹೆಂಡತಿ ಕಾಳವ್ವೆಯೊಂದಿಗೆ ವಲಸೆ ಬಂದನು‌.
ಬಡತನದೊಂದಿಗೆ ಅವನ ವಾಸ, ಕಳ್ಳತನ ಮಾಡುವ ಕಸುಬೇ ಅವನಿಗೆ ಉದ್ಯೋಗ, ಹೀಗೆ ಕಳ್ಳತನ ಮಾಡಿಕೊಂಡೇ ಜೀವನ ಸಾಗಿಸುವುದೇ ಅವರ ದಿನಚರಿಯಾಗಿತ್ತು.
ಇದೇ ಕಂದಾರ ಅಥವಾ ಕಂದಾಪುರದಲ್ಲಿ ಒಂದು ಮಠ ಇತ್ತು, ಆ ಮಠಕ್ಕೆ ಮಠಾಧಿಪತಿಗಳಾಗಿದ್ದವರು ಉರಿಲಿಂಗದೇವರು .
ಒಂದು ದಿನ ನಂದಿವಾಡ ಗ್ರಾಮದ ಸೂರಯ್ಯ ಎಂಬುವನಿಗೆ ಉರಿಲಿಂಗದೇವರು ಲಿಂಗದೀಕ್ಷೆ ಕೊಡುವ ಸಂಕಲ್ಪ ಮಾಡಿಕೊಂಡು, ಲಿಂಗದೀಕ್ಷೆಗೆ ಬೇಕಾಗುವ ಎಲ್ಲಾ ಪರಿಕರಗಳೂ ಹಾಗೂ ಸಾಮಾನುಗಳನ್ನು ತರಿಸಿ ಮಠದಲ್ಲಿರಿಸಿದ್ದರು.
ಈ ವಿಷಯ ಅದೇಗೋ ಪೆದ್ದಣ್ಣ ನವರಿಗೆ ತಿಳಿದು, ಮಠದಲ್ಲಿರಿಸಿದ್ದ ವಸ್ತುಗಳನ್ನು ಹೇಗಾದರೂ ಮಾಡಿ ಕಳವು ಮಾಡಬೇಕೆಂದು ಹೊಂಚು ಹಾಕಿ, ಯಾರಿಗೂ ತಿಳಿಯದಂತೆ ಮಠವನ್ನು ಪ್ರವೇಶಿಸಿ, ಮಠದ ಅಟ್ಟಣಿಗೆಯ ಮೇಲೆ ಕುಳಿತು ಸರಿಯಾದ ಸಮಯಕ್ಕಾಗಿ ಕಾಯುತ್ತಿರುವಾಗ್ಯೆ,
ಉರಿಲಿಂಗದೇವರು ಆಗಲೇ ಸೂರಯ್ಯನಿಗೆ ಲಿಂಗದೀಕ್ಷೆ ಕೊಡುತ್ತಿದ್ದುದು ಕಂಡು ಬಂತು, ಆಗ ಅಟ್ಟಣಿಗೆಯ ಮೇಲಿದ್ದ ಪೆದ್ದಣ್ಣನು ಲಿಂಗದೀಕ್ಷೆ ಕೊಡುವುದನ್ನೇ ನೋಡುತ್ತಿರುವಾಗ ಪೆದ್ದಣ್ಣನಿಗೆ ಮಾನಸದಲ್ಲಿ ಭಕ್ತಿರಸದ ಹೊಳೆಯೇ ಹರಿಯಲು ಪ್ರಾರಂಭಿಸಿತು.
ಕೂಡಲೇ ಅವನ ಕಳ್ಳತನದ ವೃತ್ತಿಯು ಪರಿವರ್ತನೆ ಹೊಂದಿತ್ತು. ಪೆದ್ದಣ್ಣನಲ್ಲಿ ಹೊಸ ಮನುಷ್ಯನೊಬ್ಬ ಅವತರಿಸಿದ್ದ. ಪೆದ್ದಣ್ಣನು ಆ ಕೂಡಲೇ ತಾನೂ ಲಿಂಗದೀಕ್ಷೆ ಪಡೆದುಕೊಳ್ಳಲೇ ಬೇಕೆಂದು ಸಂಕಲ್ಪ ಮಾಡಿಕೊಂಡನು.
ಕೂಡಲೇ ಪೆದ್ದಣ್ಣನು ತನ್ನ ಮೂಲ ಕಸುಬಾದ ಕಳ್ಳತನವನ್ನು ತ್ಯಜಿಸಿದ, ಶಿವನಲ್ಲಿ ಅನುರಕ್ತನಾಗಲು ಬಯಸಿದ, ನಂತರ ಗುರು ಉರಿಲಿಂಗದೇವರಲ್ಲಿ ದೀಕ್ಷೆ ಪಡೆಯುವ ಉತ್ಕಟತೆಯಲ್ಲಿ ಮಠಕ್ಕೆ ಪ್ರತಿದಿನವೂ ಉಚಿತವಾಗಿ ಸೌದೆಯನ್ನು ತಂದು ಹಾಕುವ ಕಾಯಕ ಮಾಡಿದ,
ಒಂದು ದಿನ ಉರಿಲಿಂಗದೇವರು ಪೆದ್ದಣ್ಣನಿಗೆ ನೀನು ಹಣ ಪಡೆದು ಸೌದೆ ತಂದು ಹಾಕುವುದಾದರೆ ಸೌದೆ ತಂದು ಹಾಕು, ಇಲ್ಲದಿದ್ದರೆ ಸೌದೆ ತರಬೇಡ ಎಂದು ಫಾರ್ಮಾನು ಮಾಡಿದರು,
ಆಗ ಪೆದ್ದಣ್ಣನು ಗುರುಗಳೇ ನನಗೆ ಯಾವ ಹಣವೂ ಬೇಡ, ನನಗೆ ಲಿಂಗ ಪ್ರಸಾದನ ಮಾಡಿ ಎಂದು ಭಿನ್ನವುಸಿಕೊಂಡ, ಆಗ ಗುರುಗಳು ಆ ಪೆದ್ದಣ್ಣನನ್ನು ಪರೀಕ್ಷೆ ಮಾಡಲು
ಅಲ್ಲೇ ಬಿದ್ದಿದ್ದ ಒಂದು ಕಲ್ಲನೇ ಇದೇ ಲಿಂಗ, ಇದನ್ನೇ ಕೊಂಡು ಹೋಗು ( ಘೇ ಜಾ ದಗಡಿಚ ) ಎಂದು ಪೆದ್ದಿಯವರ ಮುಂದೆ ಎಸೆದಾಗ, ಪೆದ್ದಿಯವರು ಇದು ಗುರುಕಾರುಣ್ಯ ಎಂದು ಕೊಂಡು,
ಆ ಕಲ್ಲನ್ನೇ ಕೊಂಡುಹೋಗಿ ಲಿಂಗವೆಂದು ಪೂಜಿಸಹತ್ತಿದರು. ಗುರುಗಳು ಹೇಳಿದ ಘೇ ಜಾ ದಗಡಿಚ ಎಂಬುದೇ ಅವನಿಗೆ ಶಿವಮಂತ್ರವಾಗಿತು‌. ಆ ಗುರುಗಳು ಎಸೆದ ಕಲ್ಲೇ ಶಿವಲಿಂಗ,
ಗುರುಗಳು ಹೇಳಿದ್ದೇ ಮಂತ್ರ ಎಂದುಕೊಂಡ ಪೆದ್ದಣ್ಣನು ಧ್ಯಾನಸ್ಥನಾಗುತ್ತಿದ್ದನು. ಬರಬರುತ್ತಾ ಆಧ್ಯಾತ್ಮಿಕದ ಶಿಖರ ಏರಿದ ಪೆದ್ದಣ್ಣನು ಉರಿಲಿಂಗದೇವರ ಹಾಗೆಯೇ ಲಿಂಗಪತಿ – ಶರಣ ಸತಿ ಎನ್ನುವ ಹಾಗೆ ಆ ಪರಶಿವನನ್ನು ಸೇವಿಸಿದರು .
ಈ ಪೆದ್ದಣ್ಣನಲ್ಲಿದ್ದ ಪ್ರಭೆಯನ್ನು ಗುರುತಿಸಿದ ಉರಿಲಿಂಗದೇವರು ತನ್ನ ಪೀಠಕ್ಕೆ ಮಠಾಧಿಪತಿಯನ್ನಾಗಿ ನೇಮಿಸಿದರು, ಅಂದಿನಿಂದ ಇವರಿಗೆ ಉರಿಲಿಂಗ ಪೆದ್ದಿ ಎಂದೇ ಹೆಸರಾಯಿತು.
ಈ ಪೆದ್ದಣ್ಣನಲ್ಲಿದ್ದ ಪ್ರಭೆಯನ್ನು ಗುರುತಿಸಿದ ಉರಿಲಿಂಗದೇವರು ತನ್ನ ಪೀಠಕ್ಕೆ ಮಠಾಧಿಪತಿಯನ್ನಾಗಿ ನೇಮಿಸಿದರು, ಅಂದಿನಿಂದ ಇವರಿಗೆ ಉರಿಲಿಂಗ ಪೆದ್ದಿ ಎಂದೇ ಹೆಸರಾಯಿತು.
ಶರಣ ಉರಿಲಿಂಗಪೆದ್ದಿಯು ಬಸವಾದಿ ಪ್ರಮಥರ ಸಂಗದಲ್ಲಿದ್ದುದು ನಿಚ್ಚಳವಾಗಿ ಕಂಡು ಬರುತ್ತದೆ. ಕೊನೆಗೆ ಇವರು ಕಲ್ಯಾದಲ್ಲಿಯೇ ಕಾಲವಾದರು. ಇವರ ಸಮಾಧಿಯು ಈಗಲೂ ಬಸವಕಲ್ಯಾಣದಲ್ಲಿ ಇದೆ.
ಇವರ ಮಠಗಳು ಕಲ್ಯಾಣ, ಕೊರಳಿ, ಭಾಲ್ಕಿ, ಮೈಸೂರು, ಬೇವಿನ ಚಿಂಚೋಳಿಗಳಲ್ಲಿ ಇವೆ. 12 ನೇ ಶತಮಾನದಲ್ಲಿಯೇ ಒಬ್ಬ ಅಸ್ಪೃಷ್ಯನು ತನ್ನ ಇಚ್ಚಾ ಶಕ್ತಿಯಿಂದ ಸ್ಪೃಷ್ಯನಾಗಿ, ನಂತರ ಆಚಾರ್ಯನಾಗಿ, ನಂತರ ಮಠಾಧಿಪತಿಯಾಗಿದ್ದು
ಇಡೀ ಭಾರತ ದೇಶದಲ್ಲಿಯೇ ಪ್ರಪ್ರಥಮವಾದ ಕ್ರಾಂತಿಕಾರಿ ಹೆಜ್ಜೆ ಎಂದೇ ಬಣ್ಣಿಸಲಾಗಿದೆ. ಈತನ ವಚನಗಳು ವಿಚಾರ ಪೂರಿತವಾಗಿಯೂ, ತತ್ವ ಹಾಗೂ ಸತ್ವ ಭರಿತವೂ, ಅನುಭಾವದಿಂದಲೂ ಕೂಡಿವೆ.
ಒಟ್ಟು 363 ವಚನಗಳನ್ನು ರಚಿಸಿದ ಉರಿಲಿಂಗ ಪೆದ್ದಿಯ ಪ್ರತಿಯೊಂದು ವಚನಗಳಲ್ಲಿ ಲಿಂಗದ ಮಹಿಮೆಯ ಉಲ್ಲೇಖಗಳಿವೆ. ಈ ಶರಣನು ಜಗತ್ತಿನ ಎಲ್ಲಾ ಕ್ರಿಯಾಕ್ರಿಯೆಗಳನ್ನು ಲಿಂಗದ ಮುಖಾಂತರವೇ ಅರಿತಿರುವುದು ಎಂದು ಭಾಸವಾಗುತ್ತದೆ.
ಲಿಂಗ ಮಧ್ಯೇ ಜಗತ್ ಸರ್ವಂ ಎಂಬಂತೆ ಪ್ರತಿಯೊಂದು ವಸ್ತುವೂ ಲಿಂಗ ಸ್ವರೂಪವೇ ಎಂಬುದು ಈ ಶರಣನ ಭಾವ ಹಾಗೂ ಭಕುತಿಯೇ ಆಗಿದೆ. ಶರಣರು ಆಚಾರ, ಗುಣ, ಜ್ಞಾನ, ಸದಾಚಾರಗಳಿಗೆ ಮಹತ್ವವನ್ನು ನೀಡಿದ್ದಾರೆ ಎಂಬುದು ಇವರ ವಚನಗಳಲ್ಲಿ ತಿಳಿದು ಬರುತ್ತದೆ.

ವಚನ
ಅಂಗದ ಮೇಲೆ ಲಿಂಗಸಂಬಂಧಿಯಾಗಲು
ಸಾಲೋಕ್ಯವೆಂದರೇನೋ ?
ಗುರುಲಿಂಗಜಂಗಮಸನ್ನಿಧಿ ದಾಸೋಹದೊಳಗಿರಲು
ಸಾಮೀಪ್ಯವೆಂದರೇನೋ ?
ಸರ್ವಾಂಗಮನ ಇಂದ್ರಿಯಂಗಳ ಸಂಗದೊಳಗಿರಲು
ಸಾರೂಪ್ಯವೆಂದರೇನೊ ?
ಚತುರ್ದಶಭುವನಂಗಳನೊಳಕೊಂಡ ಮಹಾಘನಲಿಂಗವು
ತನ್ನ ಮನದೊಳಗವಗವಿಸಿ ನೆನವುತ್ತಿರಲು ಸಾಯುಜ್ಯವೆಂದರೇನೊ ?
ಇಂತೀ ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯವೆಂಬ
ಚತುರ್ವಿಧಪದಂಗಳೆಂದರೇನೊ ?
ಎಲೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ, ನಿಮ್ಮನರಿದ ಶರಣಂಗೆ.

ವಚನ
ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ,
ಮರಳಿ ಅನ್ಯದೈವಂಗಳನಾರಾಧಿಸುವ ಕುನ್ನಿಗಳು ನೀವು ಕೇಳಿಭೋ
ವಿಷ್ಣುವೇ ದೈವವೆಂದು ಆರಾಧಿಸಿದ ಬಲಿಗೆ ಬಂಧನವಾಯಿತ್ತು.
ವಿಷ್ಣುವೇ ದೈವವೆಂದು ಆರಾಧಿಸಿದ ಕರ್ಣನ ಕವಚ ಹೋಯಿತ್ತು.
ವಿಷ್ಣುವೇ ದೈವವೆಂದು ಆರಾಧಿಸಿದ ನಾಗಾರ್ಜುನನ ಶಿರ ಹೋಯಿತ್ತು.
ಅದಂತಿರಲಿ,
ಬ್ರಾಹ್ಮಣನೇ ದೈವವೆಂದು ಆರಾಧಿಸಿದ ಗೌತಮಂಗೆ ಗೋವಧೆಯಾಯಿತ್ತು.
ಬ್ರಾಹ್ಮಣನೇ ದೈವವೆಂದು ಆರಾಧಿಸಿದ ದಕ್ಷಂಗೆ ಕುರಿದಲೆಯಾಯಿತ್ತು.
ಮೈಲಾರನೇ ದೇವರೆಂದಾರಾಧಿಸಿದಾತನು
ಕೊರಳಲ್ಲಿ ಕವಡೆಯ ಕಟ್ಟಿ, ನಾಯಾಗಿ ಬೊಗಳುತಿರ್ಪ.
ಭೈರವನೇ ದೇವರೆಂದಾರಾಧಿಸಿದಾತನು
ಕೊರಳಲ್ಲಿ ಕವಡೆಯ ಕಟ್ಟಿ, ಕರುಳ ಬೆರಳ ಕಡಿದಿಕ್ಕಿ, ಬಾಹಿರನಾದನು.
ಮಾಯಿರಾಣಿಯೇ ದೈವವೆಂದು ಆರಾಧಿಸಿದಾತನು
ಕೊರಳಿಗೆ ಕವಡಿಯ ಕಟ್ಟಿ, ತಲೆಯಲ್ಲಿ ಕೆರಹ ಹೊತ್ತು,
ಬೇವಿನ ಸೊಪ್ಪನುಟ್ಟು ಲಜ್ಜೆಯ ನೀಗಿದ.
ಈ ಬಿನುಗು ದೈವಂಗಳ ಭಕ್ತಿ ಬಣಗು ನಾಯಿ ಒಣಗಿದೆಲುವ ಕಚ್ಚಿಕೊಂಡು
ಕಂಡ ಕಂಡೆಡೆಗೆ ಹರಿದಂತಾಯಿತ್ತು,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಅಂಗಭಾವ ಹಿಂಗದೆ ಮಜ್ಜನಕ್ಕೆರೆವಿರಿ,
ಅರ್ಪಿತವನರಿಯದೆ ಅರ್ಪಿಸುವಿರಿ.
ಅರ್ಪಿತ ಸವೆಯಿತ್ತೆ ? ಲಿಂಗ ಸವೆಯಿತ್ತೆ ?
ಕರ್ಮಣಾ ಮನಸಾ ವಾಚಾ ಗುರೂಣಾಂ ಭಕ್ತಿವತ್ಸಲ
ಶರೀರಮರ್ಥಂ ಪ್ರಾಣಂ ಚ ಸದ್ಗುರುಭ್ಯೋ ನಿವೇದಯೇತ್
ಇಂತೆಂದುದಾಗಿ, ತನುವರ್ಪಿತ ಗುರುವಿಂಗೆ,
ಮನವರ್ಪಿತ ಲಿಂಗಕ್ಕೆ, ಧನವರ್ಪಿತ ಜಂಗಮಕ್ಕೆ.
ಇಂತೀ ತ್ರಿವಿಧಕ್ಕೆ ಅರಿದರ್ಪಿಸಬಲ್ಲಡೆ ಅರ್ಪಿತ.
ಈ ತ್ರಿವಿಧ ಸವೆಯದೆ ಅರ್ಪಿಸುವ ಅರ್ಪಿತವೆಂತೊ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ ?

ವಚನ
ಅಂಗೈಯ ಲಿಂಗವ ಕಂಗಳು ತುಂಬಿ ನೋಡಿ ಮನ ಹಾರೈಸಿದಲ್ಲಿ
ಅಂಗೇಂದ್ರಿಯಂಗಳೆಲ್ಲ ಲಿಂಗೇಂದ್ರಿಯಂಗಳಾದವು.
ಅಂಜದಿರು ಮನವೇ, ಲಿಂಗವು ನಿನಗೆ ದೂರನೆಂದು.
ಮನೋಮಧ್ಯದೊಳಿಪ್ಪ, ಅಂಗದ ಕಂಗಳಲಿಪ್ಪ,
ಭಾವದ ಪ್ರಾಣದಲ್ಲಿಪ್ಪ.
ಅಂಗಪ್ರಾಣಭಾವ ಸರ್ವಾಂಗಲಿಂಗವಾದ ಬಳಿಕ,
ಲಿಂಗಮಧ್ಯಪ್ರಾಣ, ಪ್ರಾಣಮಧ್ಯಲಿಂಗ.
ಇದು ಕಾರಣ ಉತ್ಪತ್ತಿಸ್ಥಿತಿಲಯವುಂಟೆಂದು ಅಂಜದಿರು.
ಅಂಜಿಕೆ ಇಲ್ಲ, ಅಳುಕಿಲ್ಲ, ಬಂದುದೇ ಲಿಂಗದ ಲೀಲೆ,
ಇದ್ದುದೇ ಲಿಂಗದಾನಂದ, ಭಾವಲೀಯವಾದುದೇ ಲಿಂಗನಿರವಯವು.
ಇದು ಸತ್ಯ, ಶಿವ ಬಲ್ಲ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಅಂಡಜನುದರದಲ್ಲಿ ತಂದಿಕ್ಕಿದಾ ತತ್ತಿ
ಮುಂದಣಾಧಿಕ್ಯವನರಿಯಲ್ಲುದೆ ನೋಡಾ.
ಪಿಂಡಾಧಿಕ್ಯದ ಸಂದಳಿಯದ ಮುನ್ನ ಮುಂದೆ ಬಂದಿಪ್ಪುದು ಅದು ನೋಡಾ.
ಒಬ್ಬ ಹೆಂಗೂಸಿಂಗೆ ಗಂಡು ನಾಲ್ವರು,
ಗರ್ಭಿಣಿಯಾಗದ ಮುನ್ನ ಪ್ರಸೂತೆ,
ಬಂಜೆಯ ಮಕ್ಕಳು ಮೂವರೈದಾರೆ,
ನಾಲ್ವರ ಮೂಲವರಿಯದ ಕಾರಣ ಧರೆಯ ಮೇಲೆನಿಸಿದವು ?
ಉಪಮೆಗುಡದ ಬಣ್ಣ ನೋಡಿ ಸಿಲಿಕಿದ ಕೂಟ
ಉಂಟು ದಣಿಯದ ತೃಪ್ತಿ
ಶ್ರೋತ್ರೇಂದ್ರಿಯದಲ್ಲಿ ಸವಿದು ಹರಿಯದ ಪರಿಮಳ
ಸಂದು ಸವೆದೊಂದಾದ ಕೂಟ
ನೋಡುವ ನೋಟವರಿತು ವಾಸಿಸುವ ವಾಸನೆ ಅರಿತು .
ಆಚಾರ ಪ್ರಾಣವಾಗಿ ಅರಿವರಿತು
ಮರಹು ನಷ್ಟವಾದಾತನೈಕ್ಯನು.
ಆಚಾರವರಿತು ಅನಾಚಾರ ನಷ್ಟವಾದಾತನನುಪಮಮಹಿಮನು.
ಶುದ್ಧ ಸಿದ್ಧ ಪ್ರಸಿದ್ಧಕ್ಕಾತ ನೆಲಮನೆ,
ಆತನ ಮೀರುವದೊಂದೊಡ್ಡವಣೆಯ ಕಾಣೆ.
ಕರುಣಾಮೃತಪೂರ್ಣವಾದ ಕುಂಭಕ್ಕೆ ವಿರಳ ಉಂಟೆ ?
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಯ್ಯನನೊಡಗೂಡಿ
ಸಂದಳಿದ ಶರಣಂಗೆ ಬಳಕೆಯ ಬೇಟದ ಬಣ್ಣ ಉಂಟೆ ?

ವಚನ
ಅಂತರಂಗ ಬಹಿರಂಗ ಪರಮಾಕಾಶದ ಪರಬ್ರಹ್ಮಸ್ಥಾನ ಬ್ರಹ್ಮರಂಧ್ರದಲ್ಲಿ,
ಪರಬ್ರಹ್ಮ ಪರಮಾತ್ಮನು,
ನಿಷ್ಕಳ ನಿರವಯ ನಿರುಪಮ ಶ್ರೀಗುರುಮೂರ್ತಿ ಲಿಂಗಭರಿತವಾಗಿಪ್ಪನು,
ಶಿವಂ ಪರಮಾಕಾಶಮಧ್ಯೇ ಧ್ರುವಂ ತತ್ವಾಧಿಕಂ’ ಎಂದುದಾಗಿ, ಇದುಕಾರಣ, ನಾನಾ ವೇದ ಶಾಸ್ತ್ರ ಪುರಾಣ ಆಗಮಂಗಳ ಮತವು, ಇದು ಶ್ರುತವು, ಭ್ರೂಮಧ್ಯದಲ್ಲಿ ಅಂತರಾತ್ಮನು ಸಕಲ ನಿಷ್ಕಲ ಪರಂಜ್ಯೋತಿರ್ಲಿಂಗಮೂರ್ತಿಭರಿತವಾಗಿಪ್ಪನು. ಪರಾತ್ಪರಂ ಪರಂಜ್ಯೋತಿರ್ಭ್ರೂಮಧ್ಯೇ ತು ವ್ಯವಸ್ಥಿತಂ’ ಎಂದುದಾಗಿ
ಹೃದಯಕಮಲಮಧ್ಯದಲ್ಲಿ ಜೀವಾತ್ಮನು.
ಕೇವಲ ಸಕಲಜಂಗಮಮೂರ್ತಿ ಲಿಂಗಭರಿತವಾಗಿಪ್ಪನು,
`ಹೃದಯಮಧ್ಯೇ ವಿಶ್ವೇದೇವಾ ಜಾತವೇದಾ ವರೇಣ್ಯಃ’ ಎಂದುದಾಗಿ.
ಇಂತು ಪರಬ್ರಹ್ಮ, ಬ್ರಹ್ಮರಂಧ್ರ ಭ್ರೂಮಧ್ಯ ಹೃದಯಸ್ಥಾನದಲ್ಲಿ
ನಿಷ್ಕಲ, ಸಕಲನಿಷ್ಕಲ, ಸಕಲ
ಪರಮಾತ್ಮ ಅಂತರಾತ್ಮ ಜೀವಾತ್ಮನೆಂದೆನಿಸಿ
ಶ್ರುತ ದೃಷ್ಟ ಅನುಮಾನದಿಂ ಕಂಡು
ವಿನೋದ ಕಾರಣ ಮಾಯಾವಶವಾಗಿ, ಪಂಚಭೂತಂಗಳನ್ನು ಸೃಜಿಸಿ
ಸಕಲಪ್ರಪಂಚವನೂ ಬೆರಸಿ, ಮಾಯಾಧೀನವಾಗಿ ವಿನೋದಿಸಿ
ಆ ಮಾಯೆಯನೂ ಸಕಲಪ್ರಪಂಚವನೂ ತ್ಯಜಿಸಲಿಕೆ
ಬಹಿರಂಗದಲಿ ಶ್ರೀಗುರುರೂಪಾಗಿ ಬೋಧಿಸಿ
ಪರಮಾತ್ಮನು ಪರಬ್ರಹ್ಮವಾಗಿ ನಿಜಪದವನೈದಿ ಸುಖಿಯಾಗಿಪ್ಪನು.
ಇಂತಹ ಅರಿವೇ ಪರಬ್ರಹ್ಮ, ಮರವೆಯೇ ಮಾಯಾಸಂಬಂಧವಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಅಂತರಂಗ ಬಹಿರಂಗವೆಂದೆಂಬರು,
ಆವುದು ಮುಂದು ಆವುದು ಹಿಂದೆಂದರಿಯರು.
ಎಳ್ಳೊಳಗಣ ಎಣ್ಣೆ ಕಲ್ಲೊಳಗಣ ಹೇಮ ಹಾಲೊಳಗಣ ತುಪ್ಪ
ಕಾಷ್ಠದೊಳಗಣ ಅಗ್ನಿಯಿಪ್ಪಂತಿಪ್ಪ ಚಿನುಮಯ ಮೂರ್ತಿಯನೂ
ಶ್ರೀಗುರುಹಸ್ತಾಬ್ಜಮಂ ಶಿಷ್ಯನ ಮಸ್ತಕದಲ್ಲಿಟ್ಟು
ಆಕರ್ಷಣಂ ಮಾಡಿ ತೆಗೆದು
ತಲ್ಲಿಂಗವನಂಗದಲ್ಲಿ ಸ್ಥಾಪ್ಯವಂ ಮಾಡಿ
ಸುಜ್ಞಾನಕ್ರೀಯ ಉಪದೇಶವಂ ಮಾಡಲು
ಘಟದ ಹೊರಗಿಹ ಆನಲನೂ ಆ ಘಟವ ಭೇದಿಸಿ
ತಜ್ಜಲವ ಹಿಡಿದು ತೆಗೆದುಕೊಂಬಂತೆ
ಬಾಹ್ಯದಿಂ ಮಾಡುವ ಸತ್ಕ್ರಿಯಾವರ್ತನದಿಂ
ಜೀವಶಿವ ಸಂಗವಹ ಬಟ್ಟೆಯನರಿಯದೆ
ಹಲವು ಬಟ್ಟೆಯಲ್ಲಿ ಹರಿವರು,
ಅಜ್ಞಾನಸಂಬಂಧಿಗಳು, ಗುರುವಚನಪರಾಙ್ಮುಖರು,
ಕರ್ಮನಿರ್ಮಲವಾಗದ ಜಡರುಗಳು, ಲಿಂಗನಿಷ್ಠಾವಿರಹಿತರು,
ನಿಮ್ಮನೆತ್ತಬಲ್ಲರಯ್ಯ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಅಂತ್ಯಜನಾಗಲಿ, ಅಗ್ರಜನಾಗಲಿ
ಮೂರ್ಖನಾಗಲಿ, ಪಂಡಿತನಾಗಲಿ
ಜಪಿಸುವುದು ಶ್ರೀ ಪಂಚಾಕ್ಷರಿಯ.
ಆ ಜಪದಿಂದ ರುದ್ರನಪ್ಪುದು ತಪ್ಪದು.
ಅದೆಂತೆಂದಡೆ:ಲೈಂಗೇ
ಅಂತ್ಯಜೋಪ್ಯಗ್ರಜೋ ವಾಪಿ ಮೂರ್ಖೊ ವಾ ಪಂಡಿತೋಪಿ ವಾ
ಪಂಚಾಕ್ಷರೀಂ ಜಪೇನ್ನಿತ್ಯಂ ಸ ರುದ್ರೋ ನಾತ್ರ ಸಂಶಯಃ
ಇಂತೆಂದುದಾಗಿ,
ಇದು ಸತ್ಯ, ಇದು ಸತ್ಯ, ಇದು ಸತ್ಯ ಜಪಿಸುವುದು,
ಶಪಥ ಮಾಡಿದೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಅಕಟಕಟಾ ಬೆಡಗು ಬಿನ್ನಾಣ ಒಂದೇ ನೋಡಾ.
ಓಂ ನಮಃ ಶಿವಾಯ ಓಂ ನಮಃ ಶಿವಾಯ
ಓಂ ನಮಃ ಶಿವಾಯ ಎಂಬುದೆ ಯಂತ್ರ.
ಓಂ ನಮಃ ಶಿವಾಯ ಓಂ ನಮಃ ಶಿವಾಯ
ಓಂ ನಮಃ ಶಿವಾಯ ಎಂಬುದೆ ತಂತ್ರ.
ಓಂ ನಮಃ ಶಿವಾಯ ಓಂ ನಮಃ ಶಿವಾಯ
ಓಂ ನಮಃ ಶಿವಾಯ ಎಂಬುದೆ ಮಂತ್ರ.
ಪ್ರಣಮಪಂಚಾಕ್ಷರಿಯ ಮಂತ್ರವನುಚ್ಚರಿಸುವರೆಲ್ಲರೂ
ಅಪ್ರಮಾಣಿಕರು ನೋಡಾ,
ಅಪ್ರಣಮ ಪಂಚಾಕ್ಷರ ಮಂತ್ರವ ವಿಶ್ವಾಸದಿಂದವಗ್ರಹಿಸಿ
ಮಂತ್ರಾರ್ಥವ ತಿಳಿದು ಉಚ್ಚರಿಸಲರಿಯದ ಕಾರಣ
ಮತ್ತೆ ಆಕಾರ ಉಕಾರ ಮಕಾರದ ಮೂಲವಂ ಭೇದಿಸಿ,
ಓಂಕಾರದ ನೆಲೆಯಂ ತಿಳಿದು, ಆ ಓಂಕಾರದಲ್ಲಿ
ಪಂಚವರ್ಣದ ಲಕ್ಷಣವನರಿದು, ಓಂ ನಮಃ ಶಿವಾಯ
ಓಂ ನಮಃ ಶಿವಾಯ, ಓಂ ನಮಃ ಶಿವಾಯ ಎಂದು ಸ್ಮರಿಸಬಲ್ಲಡೆ
ಇದೆ ಜಪ, ಇದೇ ತಪ, ಇದೇ ಸರ್ವಸಿದ್ಧಿಯಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಅಕಾರ ಉಕಾರ ಮಕಾರಂಗಳು ಪ್ರಕೃತಿಯಲ್ಲಿ ನಾದ ಬಿಂದು ಕಳೆಯಾದವು.
ಅಕಾರ ನಾದ, ಉಕಾರ ಬಿಂದು, ಮಕಾರ ಕಳೆ.
ಅಕಾರ ರುದ್ರ, ಉಕಾರ ಈಶ್ವರ, ಮಕಾರ ಸದಾಶಿವ.
ಅಕಾರ ಉಕಾರ ಮಕಾರಂಗಳಿಗೆ ನಾದ ಬಿಂದು ಕಳೆಯೇ ಆಧಾರ.
ನಾದ ಬಿಂದು ಕಳೆಗಳಿಗೆ ಪ್ರಕೃತಿಯೇ ಆಧಾರ.
ಆ ಪ್ರಾಣಕ್ಕೆ ಲಿಂಗವೇ ಆಧಾರ.
ಅ ಎಂಬಲ್ಲಿ ನಾದವಾಯಿತ್ತು.
ಉ ಎಂಬಲ್ಲಿ ನಾದ ಉಳಿದಿತ್ತು.
ಮ ಎಂಬಲ್ಲಿ ಬಿಂದು ಒಂದುಗೂಡಲು ಓಂಕಾರಶಕ್ತಿಯಾಗಿ ತೋರಿತ್ತು.
ಆ ಓಂಕಾರಶಕ್ತಿಯಲ್ಲಿ ನಕಾರ ಮಕಾರ ಶಿಕಾರ ವಕಾರ
ಯಕಾರಗಳೆಂಬ ಪಂಚಾಕ್ಷರಗಳುದಯಿಸಿದವು.
ನಕಾರವೇ ಬ್ರಹ್ಮ, ಮಕಾರವೇ ವಿಷ್ಣು, ಶಿಕಾರವೇ ರುದ್ರ,
ವಕಾರವೇ ಈಶ್ವರ, ಮಕಾರವೇ ಸದಾಶಿವ. ಈ ಪಂಚ ಶಾಖೆಗಳ
ವಕಾರವೇ ದೇವನ ನೆತ್ತಿಯಲ್ಲಿ ಆ ಓಂಕಾರ ಶಕ್ತಿ ಸ್ವರೂಪಿಯಾಗಿ ಕಾಣಿಸಿತ್ತು.
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಅಗ್ನಿಮುಟ್ಟಲು ತೃಣವಗ್ನಿಯಪ್ಪುದು ತಪ್ಪದಯ್ಯ.
ಗುರುಪ್ರಸಾದವಂಗವ ಸೋಂಕಿದಲ್ಲಿ
ಸರ್ವಾಂಗ ಗುರುವಪ್ಪುದು ತಪ್ಪದಯ್ಯ.
ಲಿಂಗಪ್ರಸಾದ ಮನವ ಸೋಂಕಿದಲ್ಲಿ
ಮನ ಲಿಂಗವಪ್ಪುದು ತಪ್ಪದಯ್ಯ.
ಜಂಗಮಪ್ರಸಾದ ಅರಿವ ಸೋಂಕಿದಲ್ಲಿ
ಅಖಂಡಿತ ಪ್ರಸನ್ನಪ್ರಸಾದವಪ್ಪುದು ತಪ್ಪದಯ್ಯ.
ಶಿವಶಿವಾ, ಪ್ರಸಾದದ ಮಹಿಮೆಯನೇನೆಂದುಪಮಿಸುವೆ ?
ಪ್ರಸಾದವೇ ಗುರು, ಪ್ರಸಾದವೇ ಲಿಂಗ, ಪ್ರಸಾದವೇ ಜಂಗಮ,
ಪ್ರಸಾದವೇ ಪರಾತ್ಪರ, ಪ್ರಸಾದವೇ ಪರಮಾನಂದ,
ಪ್ರಸಾದವೇ ಪರಮಾಮೃತ, ಪ್ರಸಾದವೇ ಪರಮಜ್ಞಾನ,
ಪ್ರಸಾದವೇ ವಾಙ್ಮನೋತೀತ, ಪ್ರಸಾದವೇ ನಿತ್ಯಪರಿಪೂರ್ಣ.
ಇಂತಪ್ಪ ಪ್ರಸಾದವ ಕೊಂಡು ಬದುಕಿದೆನಯ್ಯ.
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಅಚ್ಚಪ್ರಸಾದಿ ಅಚ್ಚಪ್ರಸಾದಿಗಳೆಂಬ ಹುಚ್ಚರನೇನೆಂಬೆನಯ್ಯಾ.
ಜಂಗಮಪ್ರಸಾದದರಿವು ಸೋಂಕಲೊಡನೆ
ಅಖಂಡಿತಪ್ರಸನ್ನಪ್ರಸಾದಿಯಪ್ಪುದು ತಪ್ಪದಯ್ಯಾ.
ಶಿವಶಿವಾ, ಪ್ರಸಾದದ ಮಹಿಮೆಯನೇನೆಂದುಪಮಿಸಬಹುದಯ್ಯಾ ?
ಪ್ರಸಾದವೆ ಗುರು, ಪ್ರಸಾದವೆ ಲಿಂಗ, ಪ್ರಸಾದವೆ ಜಂಗಮ,
ಪ್ರಸಾದವೆ ಜ್ಞಾನಿ, ಪ್ರಸಾದವೆ ಪರಾತ್ಪರ, ಪ್ರಸಾದವೆ ಜ್ಞಾನಾತೀತ,
ಪ್ರಸಾದವೆ ಸಚ್ಚಿದಾನಂದ,
ಪ್ರಸಾದವೆ ನಿತ್ಯಪರಿಪೂರ್ಣ.
[ನಿಮ್ಮ ಶರಣ] ಇಂತಪ್ಪ ಪ್ರಸಾದಿ ಕಾಣಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಅಚ್ಚಭವಿತನದಿಂದ ನಿಚ್ಚನರಕಕ್ಕಿಳಿವ
ಕರ್ಮಚಾಂಡಾಲವಿಪ್ರರು ನೀವು ಕೇಳಿರೇ !
ಈಶಭಕ್ತರ ಕಂಡು ದೂಷಿಸಿ ನರಕಕ್ಕಿಳಿವ
ಶಾಪಹತರು ನೀವು ಕೇಳಿರೇ !
ವಿಭೂತಿಯನೊಲ್ಲದೆ ಬಿಳೆಯ ಮಣ್ಣನಿಡುವ
ಶ್ವಪಚರೆಲ್ಲಾ ನೀವು ಕೇಳಿರೇ !
ಹರಿಯೂ ಹರನೂ ಹರಿಯೆಂದು ಗಳುಹುವ
ಮರುಳವಿಪ್ರರರು ನೀವು ಕೇಳಿರೇ !
ಆದಿಯಲ್ಲಿ ಶ್ರೀವಿಷ್ಣು ಮೇದಿನಿಯರಿಯೆ
ಒಂದು ನಯನವನು ಪುಷ್ಪಮಾಗಿತ್ತು ಪಡೆಯನೇ ವೈಕುಂಠವನು ?
ವೇದಕ್ಕೆ ನೆಲಗಟ್ಟಾವುದೆಂದು ಬಲ್ಲಡೆ ನೀವು ಹೇಳಿರೆ !
ಬ್ರಾಹ್ಮಣಿಕೆಗೆ ನೆಲೆಗಟ್ಟಾವುದೆಂಬುದು ಬಲ್ಲಡೆ ನೀವು ಹೇಳಿರೆ !
ವೇದಕ್ಕೆ ನೆಲೆಗಟ್ಟು ಓಂಕಾರ, ಬ್ರಾಹ್ಮಣಕ್ಕೆ ನೆಲಗಟ್ಟು ಗಾಯತ್ರೀ.
ಓಂಕಾರವೇನ ಹೇಳಿತ್ತು, ಗಾಯತ್ರಿಯೇನ ಹೇಳಿತ್ತೆಂಬುದ
ತಿಳಿದು ವಿಚಾರಿಸಿಕೊಳ್ಳಿರೇ ಶ್ರುತಿಗಳೊಳಗೆ.
ಅದೆಂತೆಂದಡೆ:
ಓಂಕಾರಪ್ರಭವಾ ವೇದಾ ಓಂಕಾರಪ್ರಭವಾಸ್ಸ್ವರಾಃ
ಓಂಕಾರಪ್ರಭವಂ ಸರ್ವಂ ತ್ರೈಲೋಕ್ಯಂ ಸಚರಾಚರಂ
ಇನ್ನು ಗಾಯತ್ರಿ:
ಓಂ ಮಹಃ ಓಂ ಜನಃ ಓಂ ತಪಃ
ಓಂ ಸತ್ಯಂ ಓಂ ತತ್ಸವಿತುರ್ವರೇಣ್ಯಂ
ಭರ್ಗೊ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್’
ಎಂದು ಶ್ರಾದ್ಧ ತದ್ದಿನ ಪಿತ್ಯಕಾರ್ಯವ ಮಾಡುವಲ್ಲಿ
ವಿಶ್ವದೇವರ ಸ್ಥಾಪನೆಯಂ ಮಾಡುವಿರಿ.
ವಿಶ್ವದೇವಾಯ ಸ್ವಾಹಾ’ ಎಂದು ಅರ್ಚನೆ ವಂದನೆಯಂ ಮಾಡುವಿರಿ ಯಥೋಕ್ತವಾಗಲಿ ಯಥಾಕಾಲವಾಗಲೆಂದು ಬೇಡಿಕೊಂಬಿರಿ. ಗಯಾಯಾಂ ಶ್ರೀರುದ್ರಪಾದೇ ದತ್ತಮಸ್ತು’ ಎಂದೆಂಬಿರಲ್ಲಾ
ಗಯಾಯಾಂ ಶ್ರೀವಿಷ್ಣುಪಾದೇ ದತ್ತಮಸ್ತು’ ಎಂದೆಂದುಂಟಾದಡೆ ಹೇಳಿರೇ. ಸತಿಗೆ ಪಿಂಡವ ಕೊಡುವಲ್ಲಿ ವಸುರುದ್ರಾದಿತ್ಯರೂಪೇಭ್ಯೋ ಮಧ್ಯಪಿಂಡಸ್ತು ಪುತ್ರದಃ ವೇದೋಕ್ತರುದ್ರನಿರ್ಮಾಲ್ಯಂ ಉರಸ್ಥಾನ್ಯಪವಿತ್ರಕಂ ಆದಿಪಿಂಡಾಂತ್ಯಪಿಂಡಂ ಚ ವರ್ಜಯೇತ್ ಸತತಂ ಬುಧಃ ಎಂದು ರುದ್ರಪಿಂಡದಿಂದ ಉತ್ಪತ್ಯವಾಗಿ ಮರಳಿ ಭಕ್ತರ ಜರಿದು ಗಳಹುವಾ ಪಾತಕರೆಲ್ಲರೂ ನೀವು ಕೇಳಿರೇ ಭಕ್ತರು ಕೊಂಬುದೇ ಪಾದೋದಕ ಪ್ರಸಾದ, ನೀವು ಉಂಬುದೇ ಭೂತಶೇಷ. ಅದೆಂತೆಂದೊಡೆ ಮಂತ್ರ: ಪ್ರಾಣಾಯ ಸಾಹಾ ಅಪಾನಾಯ ಸ್ವಾಹಾ ವ್ಯಾನಾಯ ಸ್ವಾಹಾ
ಉದಾನಾಯ ಸ್ವಾಹಾ ಸಮನಾಯ ಸ್ವಾಹಾ’ ಎಂದು
ಪಂಚಭೂತಕ್ಕೆ ಬಲಿಯನಿಕ್ಕಿ
ಆ ಭೂತಶೇಷವ ತಿಂಬ ಭೂತಪ್ರಾಣಿಯ
ಲಿಂಗಪ್ರಾಣಿಗೆ ಸರಿಯೆಂಬವನ ಬಾಯಲ್ಲಿ ಕೆರ್ಪನಿಕ್ಕಿ
ಈಶಭಕ್ತಿಯ ಮೆರೆವ
ನಮ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಅದನದನತಿಗಳೆದನೆ ಯೋಗಿ,
ಇಹ ಪರವನೆ ಮೀರಿ ನಿಲಬಲ್ಲಾತನೆ ಯೋಗಿ.
`ತತ್ತ್ವಮಸಿ’ ವಾಕ್ಯವು ನಿಲುಕದ ಪದವ ಮೀರಿ ನಿಲಬಲ್ಲಾತನೆ ಯೋಗಿ
ಇದು ತುದಿಪದವು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಅನಂತ ಜನ್ಮಗಳ ಪಾಪಂಗಳು ಸವೆದು ಹೋಗಿ
ಶ್ರೀಗುರುವಿನ ಕರುಣಾಕಟಾಕ್ಷದಿಂದ
ಪ್ರಾಣಲಿಂಗೋಪದೇಶವ ಪಡೆದು
ಸದ್ಭಕ್ತರಾಗಿ ಶಿವಲಿಂಗ ದರ್ಶನ ಸ್ಪರ್ಶನವ ಮಾಡಿ
ಆ ಲಿಂಗವನಂಗದಲ್ಲಿ ಧರಿಸಿಕೊಂಡು
ಅಂಗವೇ ಲಿಂಗ ಲಿಂಗವೇ ಅಂಗ
ಪ್ರಾಣವೇ ಲಿಂಗ ಲಿಂಗವೇ ಪ್ರಾಣವಾಗಿ
ಅಂತರಂಗ ಬಹಿರಂಗ ಸರ್ವಾಂಗವೆಲ್ಲವೂ ಲಿಂಗವಾದ ಬಳಿಕ
ಇಂತೀ ಶ್ರೀಗುರು ಕೊಟ್ಟ ಲಿಂಗವ ಬಿಟ್ಟು
ಬೇರೆ ಮತ್ತೆ ಆತ್ಮತತ್ತ್ವವ ವಿಚಾರಿಸಿ ನೋಡಬೇಕೆಂದು
ಪರಮಾತ್ಮನಲ್ಲಿ ಯೋಗವ ಮಾಡಿ ಯೋಗಿಗಳಾಗಿ ಮುಕ್ತರಾದೆವೆಂಬಿರಿ.
ಶಿವಶಿವಾ, ಆತ್ಮನನು ಪರಮಾತ್ಮನನು ಶ್ರೀ ಗುರುಸ್ವಾಮಿ ಒಂದು ಮಾಡಿ
ಇದೇ ನಿನ್ನ ನಿಜತತ್ತ್ವವೆಂದು ಅರುಹ ಹೇಳಿ ತೋರಿಸಿಕೊಟ್ಟ ಬಳಿಕ
ಇಂತಹ ಗುರುಸ್ವಾಮಿಯ ಆಜ್ಞೆಯ ಮೀರಿ ಲಿಂಗವನರಿಯದೆ ಲಿಂಗಬಾಹಿರರಾದ
ದ್ವಿಜರನು ಯೋಗಿಯನು ಸನ್ಯಾಸಿಯನು ಗುರುವೆಂದು ಭಾವಿಸಬಹುದೆ ?
ಶಿವ ಶಿವಾ, ಅದು ಗುರುದ್ರೋಹ.
ಪರಶಿವಮೂರ್ತಿಯಾದ ಗುರುಸ್ವಾಮಿಯು
ಷಡ್ದರ್ಶನಗಳಿಗೂ ಸಮಸ್ತಮತಂಗಳಿಗೂ ಸಮಸ್ತಾಗಮಂಗಳಿಗೆಯೂ
ಶಿವನೊಬ್ಬನೇ ಕರ್ತನೆಂದು, ಶಿವದರ್ಶನವೇ ವಿಶೇಷವೆಂದು, ಅಧಿಕವೆಂದು
ಹೇಳಿ ತೋರಿ ಕೊಟ್ಟ ಬಳಿಕ
ಶೈವವೆಂದು ಶಾಕ್ತೇಯವೆಂದು ವೈಷ್ಣವವೆಂದು
ಗಾಣಪತ್ಯವೆಂದು ಸಾರವೆಂದು ಕಾಪಾಲಿಕವೆಂದು
ಇಂತೀ ಷಡ್ದರ್ಶನಂಗಳಿಗೆಯೂ ಶಿವನೊಬ್ಬನೇ ಕರ್ತ,
ಇಂತೀ ಷಡ್ದರ್ಶನಕ್ಕೆ ಶಿವದರ್ಶನವೇ ಅಧಿಕವೆಂದು,
ಇಂತೀ ಶಿವದರ್ಶನ ಮಾರ್ಗವಿಲ್ಲದೆ ಮುಕ್ತಿಯಿಲ್ಲವೆಂದು,
ಆ ಪರಶಿವನೆಂಬ ಗುರುಮೂರ್ತಿ ಅರುಹಿ ಕಾಣಿಸಿ ಹೇಳಿ ತೋರಿ ಕೊಟ್ಟ ಬಳಿಕ
ಅದೆಂತೆಂದಡೆ ಶಿವಧರ್ಮ
ದರ್ಶನ ಷಡ್ವಿಧಂ ಪ್ರೋಕ್ತಂ ಶೈವಂ ಶಾಕ್ತಂ ವೈಷ್ಣವಂ
ಗಣಾಪತ್ಯಂ ಚ ಸಾರಂ ಚ ಕಾಪಾಲಿಕಮಿತಿ ಸ್ಮೃತಮ್
ಮತ್ತಂ
ಷಡ್ದರ್ಶನಾದಿ ದೇವೋ ಹಿ ಮಹಾದೇವೋ ನ ಸಂಶಯಃ
ಮಂತ್ರಪೂಜಾದಿ ಭಿನ್ನಾನಾಂ ಮೂಲಂ ಪರಶಿವಸ್ತಥಾ
ಎಂಬುದಾಗಿ, ಇನ್ನು
ವೈಷ್ಣವವೆಂದು ಆತ್ಮಯೋಗವೆಂದು ಶಾಕ್ತಿಕವೆಂದು
ವೈದಿಕವೆಂದು ಇಂತೀ ಭ್ರಾಂತಿನ ದರ್ಶನಮತಂಗಳನು ಕೇಳಿ,
ಅಲ್ಲಿಯ ಧರ್ಮಾಧರ್ಮಂಗಳನು ಕೇಳಿ,
ಅಲ್ಲಿ ಉಪದೇಶವ ಮಾಡಿಸಿಕೊಳ್ಳಬಹುದೇ ?
ಶಿವಶಿವಾ, ಅದು ಗುರುದ್ರೋಹ, ಆ ಶ್ರೀಗುರುವಿನಾಜ್ಞೆಯ ಮೀರದಿರಿ.
ಆ ಪರಶಿವಮೂರ್ತಿತತ್ತ್ವವೇ ಗುರುಸ್ವಾಮಿಯಾಗಿ ಚೆನ್ನಾಗಿ ಅರುಹಿ
ತೋರಿ ಹೇಳಿ ಕೊಟ್ಟನಲ್ಲದೆ
ಆ ಗುರುಸ್ವಾಮಿ ಏನು ತಪ್ಪಿ ಹೇಳಿದುದಿಲ್ಲ.
ಶ್ರುತಿ “ಏಕೋ ದೇವೋ ನ ದ್ವಿತೀಯಾಯ ತಸ್ಥೇ’
ಎಂದುದಾಗಿ ಶಿವನೊಬ್ಬನೇ ದೈವವೆಂದು ತೋರಿಕೊಟ್ಟ ಶ್ರೀಗುರು.
ಶ್ರುತಿ “ಏಕೋ ಧ್ಯೇಯಃ’ ಎಂದು
ಶಿವನೊಬ್ಬನನ್ನೇ ಧ್ಯಾನಿಸಿ ಪೂಜಿಸೆಂದು ಹೇಳಿ ತೋರಿಕೊಟ್ಟನು ಶ್ರೀಗುರು.
ಶ್ರುತಿ “ನಿರ್ಮಾಲ್ಯಮೇವ ಭಕ್ಷಯಂತಿ’ ಎಂದುದಾಗಿ
ಶಿವಪ್ರಸಾದವನೆ ಗ್ರಹಿಸಿಯೆಂದು ಪ್ರಸಾದವ ಕರುಣಿಸಿದ ಶ್ರೀಗುರು
ಇಂತಹ ಶ್ರೀಗುರು ಮರುಳನು, ನೀನು ಬುದ್ಧಿವಂತನೇ ?
ಕೇಳಾ, ನಿಮ್ಮ ಗುರುವ ಮರುಳ ಮಾಡಿದಿರಿ, ಅದೆಂತೆಂದಡೆ:
ನಿಮ್ಮಿಚ್ಛೆಯಲ್ಲಿಯೇ ಬಂದುದಾಗಿ, ಅದಲ್ಲದೆ ಮತ್ತೆ ಕೇಳು:
ಪೂರ್ವದ ಪುರುಷರು ಮರುಳರು, ನೀನೊಬ್ಬನೇ ಬುದ್ಧಿವಂತ ? ಕೇಳೋ:
ದೂರ್ವಾಸ ಉಪಮನ್ಯು ದಧೀಚಿ ಜಮದಗ್ನಿ ಮಾರ್ಕಂಡೇಯ
ಪರಾಶರ ಮೊದಲಾದ ಋಷಿಗಳೆಲ್ಲ ಶಿವಾರ್ಚನೆಯಂ ಮಾಡಿದರು.
ಬ್ರಹ್ಮವಿಷ್ಣು ಮೊದಲಾದವರೆಲ್ಲರೂ
ಶಿವಲಿಂಗಾರ್ಚನೆಯ ಮಾಡಿದರು, ಕೇಳಿರೇ ನೋಡಿರೇ ದೃಷ್ಟವನು.
ಮತ್ಸ್ಯಕೇಶ್ವರ ಕೂರ್ಮೆಶ್ವರ ವರಾಹೇಶ್ವರ ನಾರಸಿಂಹೇಶ್ವರ ರಾಮೇಶ್ವರ ಎಂಬ
ದಶಾವತಾರಗಳಲ್ಲಿ ಶಿವಲಿಂಗಪ್ರತಿಷ್ಠೆಯಂ ಮಾಡಿ
ಶಿವಲಿಂಗಾರ್ಚಾನೆಯಂ ಮಾಡಿದರು.
ಅನೇಕ ವೇದಶಾಸ್ತ್ರಾಗಮಪುರಾಣಂಗಳ ಕೇಳಿರೇ ನೋಡಿರೇ.
ಯಂ ಯಂ ಕಾಮಯತೇ ಕಾಮಂ ತಂ ತಂ ಲಿಂಗಾರ್ಚನಾಲ್ಲಭೇತ್
ನ ಲಿಂಗೇ [ನ] ವಿನಾ ಸಿದ್ದಿದುರ್ಲಭಂ ಪರಮಂ ಪದಂ
ಮತ್ತಂ
ಅಸುರಾ ದಾನವಾಶ್ಚೈವ ಪಿಶಾಚೋರಗರಾಕ್ಷಸಾಃ
ಆರಾಧ್ಯಂ ಪರಮಂ ಲಿಂಗಂ ಪ್ರಾಪುಸ್ತೇ ಸಿದ್ಧಿಮುತ್ತಮಾಮ್
ಮತ್ತಂ
ಅಗ್ನಿಹೋತ್ರಶ್ಚವೇದಶ್ಚ ಯಜ್ಞಾಶ್ಚ ಬಹುದಕ್ಷಿಣಾಃ
ಶಿವಲಿಂಗಾರ್ಚನಸ್ಯೈತೇ ಕೋಟ್ಯಂಶೇನಾಪಿ ನೋ ಸಮಾಃ
ಎಂದುದಾಗಿ, ಇಂತು ಇದು ಮೊದಲಾದ ದೇವಜಾತಿಗಳೆಲ್ಲ
ಶಿವಲಿಂಗಾರ್ಚನೆಯಂ ಮಾಡಿದುದಕ್ಕೆ ದೃಷ್ಟ ನೋಡಿರೇ:
ಕಾಶೀಕ್ಷೇತ್ರದಲ್ಲಿ ಬ್ರಹ್ಮೇಶ್ವರ ಇಂದ್ರೇಶ್ವರ ಯಕ್ಷಸಿದ್ದೇಶ್ವರ
ಎಂಬ ಲಿಂಗಂಗಳಂ ಪ್ರತಿಷ್ಠಿಸಿ ಶಿವಲಿಂಗಾರ್ಚನೆಯಂ ಮಾಡಿದರು.
ತಾರಕ ರಾವಣಾದಿಗಳೆಲ್ಲ ಶಿವಲಿಂಗಾರ್ಚನೆಯಂ ಮಾಡಿದರು.
ಇಂತವರೆಲ್ಲರು ಮರುಳರು, ನೀನೊಬ್ಬನೇ ಬುದ್ಧಿವಂತನೆ ?
ಅದು ಕಾರಣ, ಆ ಶ್ರೀಗುರುವಿನಾಜ್ಞೆಯಂ ಮೀರಿ ಕೆಡದಿರಿ ಕೆಡದಿರಿ.
ಆ ಮಹಾ ಶ್ರೀಗುರುವಿನ ವಾಕ್ಯವನೇ ನಂಬಿ,
ಗುರುಲಿಂಗಜಂಗಮವನೊಂದೇಯೆಂದು ನಿಶ್ಚಯಿಸಿ,
ಇದೇ ಅಧಿಕ, ಇದರಿಂದ ಬಿಟ್ಟು ಮತ್ತಾವುದು ಅಧಿಕವಿಲ್ಲ.
ಅಂದು ಗುರುಲಿಂಗಜಂಗಮದಲ್ಲಿಯ ಭಕ್ತಿಯೆ ಭಕ್ತಿ,
ಅರ್ಚನೆಯೇ ಅರ್ಚನೆ, ಆ ಸಂಗವೇ ಶಿವಯೋಗ,
ಇದು ಸತ್ಯ ಶಿವನಾಣೆ, ಉರಿಲಿಂಗಪೆದ್ಧಿಪ್ರಿಯ ವಿಶ್ವೇಶ್ವರಾ.

ವಚನ
ಅನಾದಿಶಾಶ್ವತಂ ನಿತ್ಯಂ ಚೈತನ್ಯಂ ಚಿತ್ಸ್ವರೂಪಕಂ
ಚಿದಂಗಂ ವೃಷಭಾಕಾರಂ ಚಿದ್ಭಸ್ಮ ಲಿಂಗಧಾರಣಂ
ಪ್ರಥಮಂ ಗೂಢನಿರ್ನಾಮ ದ್ವಿತೀಯಂ ಚಿತ್ಸ್ವರೂಪಕಂ
ತೃತೀಯ ಚಿದ್ವಿಲಾಸಂ ಚ ಚತುರ್ಥಂ ಭಸ್ಮಧಾರಣಂ
ರೋಮೇ ರೋಮೇ ಚ ಲಿಂಗಂ ತು ವಿಭೂತಿಧೂನಾದ್ಭವೇತ್
ಎಂದುದಾಗಿ,
ಬಸವ ಬಸವಾ ಎನುತಿಪ್ಪವರೆಲ್ಲರು ಬಸವನ ಘನವನಾರೂ ಅರಿಯರಲ್ಲಾ.
ಅನಾದಿಪರಶಿವನಲ್ಲಿ ಅಂತರ್ಗತಮಾಗಿರ್ದ
ಮಹಾಪ್ರಕಾಶವೇ ಬಹಿಷ್ಕರಿಸಿ ಚಿತ್ತು ಎನಿಸಿತ್ತು.
ಆ ಚಿತ್ತು ಚಿದಂಗಬಸವ.
ಆ ಚಿದಂಗಬಸವನಿಂದುದಯಿಸಿದ ಚಿದ್ವಿಭೂತಿಯನೊಲಿದು
ಧರಿಸಿದ ಶರಣರೆಲ್ಲರೂ ಜ್ಯೋತಿರ್ಮಯಲಿಂಗವಪ್ಪದು ತಪ್ಪುದು ಕಾಣಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಅನುಭಾವಲಿಂಗದ ಮರ್ಮವನರಿವುದರಿದು,
ಲಿಂಗಸಂಜ್ಞೆಯನರಿವುದರಿದು, ಲಿಂಗವೆಂದಾದುದೆಂದರಿವುದರಿದು,
ಲಿಂಗವಂತಹುದಿಂತಹುದೆಂದರಿವುದರಿದು ನೋಡಾ.
ಲಿಂಗದಲ್ಲಿಯೆ ಅಗಮ್ಯವಯ್ಯ.
ಭೂಮಿಯೆ ಪೀಠಕೆ, ಆಕಾಶವೆ ಲಿಂಗವೆಂದರಿದಾತನು ಲಿಂಗವನರಿದಾತನಲ್ಲ.
ಲಿಂಗದಲ್ಲಿ[ಯೆ] ಅಗಮ್ಯವಯ್ಯ.
ಲಿಂಗದ ಆದಿ ಬ್ರಹ್ಮ, ಮಧ್ಯ ವಿಷ್ಣು, ಅಂತ್ಯ ರುದ್ರ.
ಇಂತೀ ತ್ರಿಮೂರ್ತಿಲಿಂಗವೆಂದರಿದಾತನು ಲಿಂಗವನರಿದವನಲ್ಲ.
ಲಿಂಗದಲ್ಲಿ[ಯೆ] ಅಗಮ್ಯವಯ್ಯ.
ಲಿಂಗಮಧ್ಯೇ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಂ
ಲಿಂಗಬಾಹ್ಯಾತ್ ಪರಂ ನಾಸ್ತಿ ತಸ್ಮೈ ಶ್ರೀಗುರವೇ ನಮಃ
ಎಂಬ ಭಾವರಹಿತ ಲಿಂಗವು
`ಬ್ರಹ್ಮ ವಿಷ್ಣ್ವಾದಿದೇವಾನಾಮಪ್ಯಗೋಚರಂ’ ಎಂದು
ಇದಂ ಮಾಹೇಶ್ವರಂ ಜ್ಯೋತಿರಾಪಾತಾಲೇ ವ್ಯವಸ್ಥಿತಂ
ಅತೀತಂ ಸತ್ಯಲೋಕಾದೀನನಂತಂ ದಿವ್ಯಮೀಶ್ವರಂ
ಲಲಾಟಲೋಚನಂ ಚಾಂದ್ರೀ ಕಲಾಪಂ ಚತುರ್ದಶಂ
ಅಂತರ್ವತೇಹ ನಿರ್ದೆಹಂ ಗುರುರೂಪಂ ವ್ಯವಸ್ಥಿತಂ
ಪಾದಭಿನ್ನಂ ಹಿ ಲೋಕೇನ ಮೌಳಿಬ್ರಹ್ಮಾಂಡಭಿತ್ತಯೇ
ಭುಜಪ್ರಾಂತದಿಗಂತಾನಾಂ ಭೂತಾನಾಂ ಪತಯೇ ನಮಃ
ನಾದಲಿಂಗಮಿತಿಜ್ಞೇಯಂ ಬಿಂದುಪೀಠಮುದಾಹೃತಂ
ನಾದಬಿಂದುಯುತಂ ರೂಪಂ ಲಿಂಗಾಕಾರಮಿಹೋಚ್ಯತೇ
ಎಂಬ ಲಿಂಗಮೆಂದು
ಲಿಯತೇ ಗಮ್ಯತೇ ಯತ್ರ ಯೇನಸರ್ವಂ ಚರಾಚರಂ
ತದೇತಲ್ಲಿಂಗಮಿತ್ಯುಕ್ತಂ ಲಿಂಗತತ್ತ್ವಪರಾಯಣೈಃ
ಲಕಾರಂ ಲಯಸಂಪ್ರೋಕ್ತಂ ಗಕಾರಂ ಸೃಷ್ಟಿಮೇವ ಚ
ಲಯಾನಾಂ ಗಮನಶ್ಚೈವ ಲಿಂಗಾಕಾರಮಿಹೋಚ್ಯತೇ
ಎಂದರಿದಾತನು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನೆಂದರಿದ ಶರಣಂಗೆ ಸುಲಭ,
ಮಿಕ್ಕಿನವರಿಗಳಿಗಲಭ್ಯವಯ್ಯಾ.

ವಚನ
ಅಮೃತ ಸರ್ವರಿಗೂ ಅಮೃತವಾಗಿಪ್ಪುದಲ್ಲದೆ
ಕೆಲಬರಿಗೆ ಅಮೃತವಾಗಿ ಕೆಲಬರಿಗೆ ವಿಷವಾಗದು ನೋಡಾ.
ಎಂತು ಅಂತೆ,
ಶ್ರೀಗುರು ಸರ್ವರಿಗೆಯೂ ಗುರುವಾಗಿರಬೇಕಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಅಮೃತಕ್ಕೆ ಹಸಿವುಂಟೆ ? ಜಲಕ್ಕೆ ತೃಷೆಯುಂಟೆ ?
ಮಹಾಜ್ಞಾನಸ್ವರೂಪಂಗೆ ವಿಷಯವುಂಟೆ ?
ಸದ್ಗುರುಕಾರುಣ್ಯವ ಪಡೆದು ಲಿಂಗಾರ್ಚನೆಯಂ ಮಾಡುವ
ಮಹಾಭಕ್ತಂಗೆ ಬೇರೆ ಮುಕ್ತಿಯ ಬಯಕೆ ಉಂಟೆ ?
ಅವರುಗಳಿಗೆ ಅದು ಸ್ವಯಂಭು ಸಹಜಸ್ವಭಾವ.
ಇನ್ನು ತೃಪ್ತಿ ಅಪ್ಯಾಯನ ಅರಸಲುಂಟೆ ?
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಅಮೃತದೊಳಗೆ ಜನಿಸಿ ಅಮೃತದೊಳಗೆ ವರ್ತಿಸುವ
ಅಮೃತದೇಹಿಗೆ ಹಸಿವು ತೃಷೆಯೆ ?
ಆ ಅಮೃತವೆ ಆಹಾರ, ಆ ಅಮೃತವೆ ಸೇವನೆ,
ಬೇರೊಂದು ವಸ್ತುವುಂಟೆ ? ಇಲ್ಲ.
ಅಮೃತವೇ ಸರ್ವಪ್ರಯೋಗಕ್ಕೆ.
ಇದಕ್ಕೆ ಕಟ್ಟಳೆಯುಂಟೆ ? ಕಾಲವುಂಟೆ ?
ಆಜ್ಞೆ ಉಂಟೆ ? ಬೇರೆ ಕರ್ತರುಂಟೆ ? ಇಲ್ಲ.
ಮನವೇ ಮೇರೆ, ಪರಿಣಾಮವೇ ಅವಧಿ ನೋಡಾ.
ಶ್ರೀಗುರುಲಿಂಗದಲ್ಲಿ ಜನಿಸಿ, ಶಿವಲಿಂಗದಲ್ಲಿ ಬೆಳೆದು
ಜಂಗಮಲಿಂಗದಲ್ಲಿ ವರ್ತಿಸಿ, ಪ್ರಸಾದಲಿಂಗದಲ್ಲಿ ಪರಿಣಾಮಿಸಿ,
ಗುರು ಲಿಂಗ ಜಂಗಮ ಪ್ರಸಾದ ಒಂದೆಂದರಿದು
ಆ ಚತುರ್ವಿಧ ಏಕವಾದ ಲಿಂಗವೇ ಪ್ರಾಣ, ಪ್ರಾಣವೇ ಲಿಂಗ
ಲಿಂಗವೇ ಅಂಗ, ಅಂಗವೆ ಲಿಂಗವಾದ
ಲಿಂಗಸ್ವಾಯತವಾದ ಲಿಂಗೈಕ್ಯಂಗೆ
ಜಪ ಧ್ಯಾನ ತಪಕ್ಕೆ ಅರ್ಚನೆಗೆ ಪೂಜನೆಗೆ
ಆಗಮವುಂಟೆ ? ಕಾಲವುಂಟೆ ? ಕರ್ಮವುಂಟೆ ? ಕಲ್ಪಿತವುಂಟೆ ? ಇಲ್ಲ.
ಸರ್ವವೂ ಲಿಂಗಮಯ.
ಆ ಲಿಂಗವಂತಂಗೆ ನಡೆದುದೇ ಆಗಮ, ಪೂಜಿಸಿದುದೇ ಕಾಲ
ಮಾಡಿದುದೇ ಕ್ರಿಯೆ, ನುಡಿದುದೇ ಜಪ, ನೆನೆದುದೇ ಧ್ಯಾನ
ವರ್ತಿಸಿದುದೇ ತಪಸ್ಸು.
ಇದಕ್ಕೆ ಅವಧಿಯುಂಟೆ ? ಮೇರೆಯುಂಟೆ ? ಇಲ್ಲ.
ಮನವೇ ಮೇರೆ, ಪರಿಣಾಮವೇ ಅವಧಿ ನೋಡಾ.
ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ, ರವಿ, ಶಶಿ, ಆತ್ಮ
ಮನೋವಾಕ್ಕಾಯ ಹೊನ್ನು ಹೆಣ್ಣು ಮಣ್ಣು
ಮೊದಲಾದ ಸರ್ವಪದಾರ್ಥವನರ್ಪಿಸಿ,
ಗುರು ಲಿಂಗ ಜಂಗಮದ ಪ್ರಸನ್ನತೆಯ ಪಡೆದ ಮಹಾಪ್ರಸಾದಿಗೆ
ಸರ್ವವೂ ಪ್ರಸಾದವಲ್ಲದೆ ಮತ್ತೊಂದಿಲ್ಲ.
ಆ ಪ್ರಸಾದಿಗೆ ಪದಾರ್ಥವೆಂಬ ಪ್ರಸಾದವೆಂಬ ಭೇದವುಂಟೆ ?
ಅರ್ಪಿತವೆಂಬ ಅನರ್ಪಿತವೆಂಬ ಸಂದೇಹವುಂಟೆ ?
ಕೊಡುವಲ್ಲಿ ಕೊಂಬಲ್ಲಿ ಸೀಮೆಯುಂಟೆ ?
ನಿಸ್ಸೀಮಪ್ರಸಾದಿಗೆ ಸರ್ವವೂ ಪ್ರಸಾದ.
ಆ ಭೋಗಕ್ಕೆ ಮೇರೆ ಉಂಟೆ ? ಅವಧಿಯುಂಟೆ ? ಇಲ್ಲ.
ಮನವೇ ಮೇರೆ, ಪರಿಣಾಮವೇ ಅವಧಿ ನೋಡಾ.
ವೇದ ಶಾಸ್ತ್ರ ಆಗಮ ಪುರಾಣ ಮೊದಲಾದ ಸರ್ವವಿದ್ಯಂಗಳ
ತಾತ್ಪರ್ಯ ಮರ್ಮ ಕಳೆಗಳನರಿದ ಮಹಾಜ್ಞಾತೃವಿಂಗೆ
ಆ ಮಹಾಜ್ಞಾನವೇ ದೇಹ, ಆ ಮಹಾಜ್ಞೇಯವೇ ಪ್ರಾಣ.
ಈ ಮಹತ್ತಪ್ಪ ಜ್ಞಾತೃ ಜ್ಞಾನ ಜ್ಞೇಯ ಒಂದಾದ
ಮಹಾಬೆಳಗಿನ ಸುಖಸ್ವರೂಪಂಗೆ
ಮರ್ತ್ಯ ಸ್ವರ್ಗ ದೇವಲೋಕವೆಂಬ ಫಲಪದದಾಸೆಯುಂಟೆ ? ಇಲ್ಲ.
ನಿರಂತರ ತೇಜೋಮಯ ಸುಖಸ್ವರೂಪನು
ವಿದ್ಯಾಸ್ವರೂಪನು ನಿತ್ಯಾನಂದಸ್ವರೂಪನು.
ಆ ಮಹಾಮಹಿಮನ ಮಹಾಸುಖಕ್ಕೆ
ಅವಧಿಯುಂಟೆ ? ಮೇರೆಯುಂಟೆ ? ಇಲ್ಲ.
ಮನವೇ ಮೇರೆ, ಪರಿಣಾಮವೇ ಅವಧಿ ನೋಡಾ.
ಆ ಮಹಾನುಭಾವಿ ತಾನೆ ಕೇವಲ ಜ್ಯೋತಿರ್ಮಯಲಿಂಗವಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ

ವಚನ
ಅಮೃತಸೇವನೆಯಾದ ಬಳಿಕ
ಭಿನ್ನರುಚಿಯ ನಿಶ್ಚಯಿಸಲುಂಟೆ ?
ಸತ್ಯಶಾಂತಿಜ್ಞಾನವಿಂಬುಗೊಂಡ ಮಹಾಪುರುಷಂಗೆ
ಸುಖದ ಪದವ ನಿಶ್ಚಯಿಸಲುಂಟೆ ?
ಸದ್ಗುರುಕಾರುಣ್ಯವ ಪಡೆದ ಮಹಾಭಕ್ತಂಗೆ
ಮುಕ್ತಿಯ ನಿಶ್ಚಯಿಸಲುಂಟೆ ?
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಅಯ್ಯಾ ಮಹಾರಾಜನನೆಲ್ಲರೂ ಬಲ್ಲರು,
ಆ ರಾಜನಾರನೂ ಅರಿಯನು.
ಅರಿಯನಾಗಿ ಪದವಿಲ್ಲ, ಫಲವಿಲ್ಲ, ಭೋಗವಿಲ್ಲ, ಪರಿಣಾಮವಿಲ್ಲ.
ಶಿವಶಿವಾ ! ಮಹಾರಾಜಾಧಿರಾಜ ಶಿವನನೆಲ್ಲರೂ ಬಲ್ಲರು,
ಆ ಶಿವನು ಆರನೂ ಅರಿಯನು,
ಅರಿಯನಾಗಿ ನಿಜಸುಖವಿಲ್ಲ.
ಇದು ಕಾರಣ ಶಿವನರಿಯದ ಸದ್ಭಕ್ತರ, ಅನುಭವ ಸಂಪನ್ನರ ಸಂಗದಿಂದ
ಆ ಶಿವನು ತನ್ನನರಿವಂತೆ ಮಾಡಿಕೊಂಡಡೆ ಪರಮಸುಖವ ಕೊಡುವನಯ್ಯ,
ನಮ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನು.

ವಚನ
ಅಯ್ಯಾ ಶಿವಷಡಾಕ್ಷರಮಂತ್ರವೆ
ಸರ್ವಮಂತ್ರವೆಲ್ಲವಕ್ಕೆ ಮಾತೃಸ್ಥಾನ.
ಅಯ್ಯಾ ಶಿವಷಡಾಕ್ಷರಮಂತ್ರವೆ
ಸರ್ವವೆಲ್ಲವಕ್ಕೆ ಉತ್ಪತ್ತಿ ಸ್ಥಿತಿ ಲಯ ಸ್ಥಾನ.
ಅಯ್ಯಾ ಶಿವಷಡಾಕ್ಷರಮಂತ್ರವೆ
ಸರ್ವಕಾರಣವೆಲ್ಲವಕ್ಕೆ ಮೂಲ.
ಇದು ಕಾರಣ ಶಿವಷಡಾಕ್ಷರಮಂತ್ರವ
ಸ್ಮರಿಸುವ ಸದ್ಭಕ್ತನೆ ವೇದಾತೀತನು.
ಆ ಸದ್ಭಕ್ತನೆ ಶಾಸ್ತ್ರವಾನ್, ಆ ಮಹಾಮಹಿಮನೆ ಪುರಾಣಿಕನು.
ಆ ಮಹಾಮಹಿಮನೆ ಆಗಮಿಕನು.
ಆ ಮಹಾಮಹಿಮನೆ ಸರ್ವಜ್ಞಾನಿಯಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಅಯ್ಯಾ, ನಿಮ್ಮ ಶರಣರ ಅನುಭಾವಸಂಗ ಸಾಲೋಕ್ಯಪದವಯ್ಯ.
ಅಯ್ಯಾ, ನಿಮ್ಮ ಅನುಭಾವಿಗಳ
ಮುಖಾವಲೋಕ ಪ್ರಿಯಸಂಭಾಷಣೆ ಸಾಮೀಪ್ಯಪದವಯ್ಯ.
ಶ್ರೀ ವಿಭೂತಿ ರುದ್ರಾಕ್ಷಿ
ಅವರ ಶ್ರೀಮೂರ್ತಿಯ ಕಂಡು,
ಮನದಲ್ಲಿ ಧರಿಸಿದಡೆ ಸಾರೂಪ್ಯಪದವಯ್ಯ.
ಅವರ ಶ್ರೀಪಾದಂಗಳಲ್ಲಿ ಎನ್ನ ಶಿರಸ್ಪರುಶನದಿಂದ
ಸಾಷ್ಟಾಂಗವೆರಗಲು ಸಾಯುಜ್ಯಪದವಯ್ಯ.
ಇಂತು ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ ಸಾಯುಜ್ಯವೆಂಬ
ಚತುರ್ವಿಧಪದ ಎನಗಾಯಿತ್ತಯ್ಯ,
ನಿಮ್ಮನುಭಾವಿಗಳ ಕೃಪೆಯಿಂದ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಅಯ್ಯಾ, ನಿಮ್ಮ ಶರಣರ ಚರಣದ ಭಕ್ತಿಯೇ
ಎನಗೆ ಸಾಲೋಕ್ಯಪದವಯ್ಯಾ.
ನಿಮ್ಮ ಶರಣರ ಅರ್ಚನೆ ಪೂಜೆಯೇ
ಎನಗೆ ಸಾಮೀಪ್ಯಪದವಯ್ಯಾ.
ಅಯ್ಯಾ, ನಿಮ್ಮ ಗಣಂಗಳ ಧ್ಯಾನವೇ
ಎನಗೆ ಸಾರೂಪ್ಯಪದವಯ್ಯಾ.
ಅಯ್ಯಾ, ನಿಮ್ಮ ಪುರಾತನರ ಜ್ಞಾನಾನುಭಾವ ಸಮರಸಾನಂದವೇ
ಎನಗೆ ಸಾಯುಜ್ಯಪದವಯ್ಯಾ.
ಇಂತೀ ಚತುರ್ವಿಧಪದಂಗಳನಲ್ಲದೆ ಅನ್ಯವ ನಾನರಿಯೆನಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಅಯ್ಯಾ, ನೀನು ತತ್ತ್ವಂಗಳ ಮರೆಗೊಂಡಿರ್ಪನ್ನಕ್ಕ,
ನಾನು ಕಾಯವ ಮರೆಗೊಂಡಿರ್ದೆನಯ್ಯಾ.
ಅಯ್ಯಾ, ನೀನು ಶಕ್ತಿಯ ಮರೆಗೊಂಡಿರ್ಪನ್ನಕ್ಕ,
ನಾನು ಆಸೆಯ ಮರೆಯಲ್ಲಿರ್ದೆನಯ್ಯಾ.
ನಿನ್ನ ಬೆಡಗು ಬಿನ್ನಾಣವ ನಾ ಬಲ್ಲೆ, ನನ್ನ ಬೆಡಗು ಬಿನ್ನಾಣವ ನೀ ಬಲ್ಲೆ.
ಮರೆಗೆ ಮರೆಯನೊಡ್ಡಿ ಜಾರಿ ಹೋದೆಯಲ್ಲಾ.
ಈ ಬಿನ್ನಾಣದ ಮರೆಯನು ತೆರೆದು ದರ್ಶನಂ ಮಾಡಿ,
ನಿನ್ನೊಳಗೆ ಎನ್ನನಿರಿಸಿ, ಎನ್ನೊಳಗೆ ನಿನ್ನನಿರಿಸಿ,
ಪ್ರಾಣ ಪ್ರಾಣವ ಸಂಯೋಗವ ಮಾಡಿದೆನು
ಶ್ರೀಗುರು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಅಯ್ಯಾ, ಪಾದೋದಕವ ಮುಗಿಸಿ ಪ್ರಸಾದವ ಮುಗಿಸಬೇಕಲ್ಲದೆ,
ಪ್ರಸಾದವ ಮುಗಿಸಿ ಪಾದೋದಕವ ಮುಗಿಸಲಾಗದು.
ಪ್ರಸಾದವು ಮುಗಿದ ಮೇಲೆ, ಪ್ರಸಾದೋದಕವಲ್ಲದೆ
ಪಾದೋದಕವೆಲ್ಲುಂಟು ಹೇಳಾ ?
ಸಂಬಂಧಾಚರಣೆಗಳ ಮುಖದಿಂದ ಪ್ರಾಣಲಿಂಗಾರ್ಪಿತವಾದ ಮೇಲೆ
ಇಷ್ಟಲಿಂಗಕ್ಕೆ ಪ್ರಸಾದವರ್ಪಿತವಯ್ಯಾ.
ಪಾದೋದಕಸ್ವರೂಪವಾದ ಇಷ್ಟಲಿಂಗಕ್ಕೆ
ಪಾದೋದಕವನರ್ಪಿಸಿ ಕೊಳಬೇಕಯ್ಯ.
ಪ್ರಸಾದಸ್ವರೂಪವಾದ ಪ್ರಾಣಲಿಂಗಕ್ಕೆ
ಪ್ರಸಾದವನರ್ಪಿಸಿ ಕೊಳಬೇಕಯ್ಯ,
ಇಂತು ವಿಚಾರಮುಖದಿಂದ ಪಾದೋದಕ ಪ್ರಸಾದವ
ದಿವಾರಾತ್ರಿಗಳೆನ್ನದೆ [ಕೊಂಡು] ಸಂತೃಪ್ತನಾದಡೆ,
ಪ್ರಸಾದಲಿಂಗಕ್ಕಂಗವಾದ ಅಚ್ಚ ಶಿವಶರಣನೆಂಬೆ ನೋಡಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಅಯ್ಯಾ, ಯೋಗಾಭ್ಯಾಸ ಯೋಗಾಭ್ಯಾಸವೆಂದೆಂಬಿರಿ !
ಂೇಗವು ಅಭ್ಯಾಸವೆ ? ಯೋಗಾಭ್ಯಾಸವೆಂಬನ್ನಬರ ಅವನು ಯೋಗಿಯೆ ?
ಶ್ರೀಗುರುಕಾರುಣ್ಯದಿಂದ ಸರ್ವವು ಪರಬ್ರಹ್ಮವೆಂದರಿವುದು.
ಶ್ರೀಗುರುವಿನ ಶ್ರೀಪಾದಧ್ಯಾನವೆ ಯೋಗಾಭ್ಯಾಸವಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಅರಿದಡೆ ಆತ್ಮನಲ್ಲ, ಅರಿಯದಿದ್ದಡೆ ಆತ್ಮನಲ್ಲ.
ತೋರಿತ್ತಾದಡೆ ವಿಷಯ, ತೋರದಿದ್ದಡೆ ಶೂನ್ಯವೆನಿಸುಗು,
ಬೊಮ್ಮದ ಅರಿವಿನ್ನೆಲ್ಲಿಯದೊ ?
ಅವು ತಾನರಿವಾಗಿದ್ದು, ಸ್ವಾನುಭಾವದ ಹೊರೆಯಲ್ಲಿದ್ದು,
ಸನ್ನಿಧಿ, ನಿತ್ಯನಿಜಾನಂದಾತ್ಮ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನೆಂದರಿವುದು.

ವಚನ
ಅರಿದು ಮರೆದವನು ಶಿವಭಕ್ತನೆ ? ಅಲ್ಲ.
ಶಿವಭಕ್ತನರಿದ ಬಳಿಕ ಮರೆಯನು.
ಅರಿದು ಮರೆದವನು ಮದ್ದಗುಣಿಕೆಯ ಮೆಲಿದವನು.
ಮದಮಧುವ ಸೇವಿಸಿದವನು.
ಅರಿದು ಮರೆದವನು ಅಜ್ಞಾನಿಗಳ ಸಂಗವ ಮಾಡಿದವನು.
ಶ್ವಾನಮೂತ್ರವನುಂಡವನು.
ಅವಿದರುಗಳಿಗೆ ಅರಿವು ಮರವೆ ಸಹಜವಾದ ಕಾರಣ
ಅರಿದವನಲ್ಲ, ಅರಿತು ಮರೆದವನಲ್ಲ ಶಿವಭಕ್ತನು.
ನಂಬುವನಲ್ಲ ನಂಬುಗೆಗೆಡುವನಲ್ಲ ಶಿವಭಕ್ತನು.
ವಿಶ್ವಾಸವ ಮಾಡುವನಲ್ಲ ಅವಿಶ್ವಾಸವ ಮಾಡುವನಲ್ಲ ಶಿವಭಕ್ತನು.
ಮರೆದಡೆ ಮರೆದವರಂತೆ ಅರಿದಡೆ ಶಿವನಂತೆ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಅರಿದು ಮಾಡದ ಭಕ್ತಿ ಭವಕ್ಕೆ ತಂದಿತ್ತು.
ಅದೆಂತೆಂದಡೆ,
ಫಲಭೋಗಂಗಳ ಬಯಸುವನಾಗಿ
ಫಲವನುಂಡು ಮರಳಿ ಭವಕ್ಕೆ ಬಹನಾಗಿ.
ಇದು ಕಾರಣ,
ಅರಿದು ಮುಕ್ತಿಯ ಹಡೆವಡೆ ಅನುಭವವೇ ಬೇಕು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಅರಿಯದ ಕಾರಣ ಭವಕ್ಕೆ ಬಂದರು.
ಅರಿವಿಲ್ಲದವಂಗೆ ಆಚಾರವಿಲ್ಲ, ಆಚಾರವಿಲ್ಲದವಂಗೆ ಅರಿವಿಲ್ಲ.
ಅರಿವಿಲ್ಲದವಂಗೆ ಗುರುವಿಲ್ಲ, ಗುರುವಿಲ್ಲದವಂಗೆ ಲಿಂಗವಿಲ್ಲ.
ಲಿಂಗವಿಲ್ಲದವಂಗೆ ಜಂಗಮವಿಲ್ಲ, ಜಂಗಮವಿಲ್ಲದವಂಗೆ ಪ್ರಸಾದವಿಲ್ಲ.
ಪ್ರಸಾದವಿಲ್ಲದವಂಗೆ ಮಹಾಲಿಂಗವಿಲ್ಲವಯ್ಯಾ.
ಈ ಆರು ಸಹಿತ ಆಚಾರ, ಆಚಾರಸಹಿತ ಗುರು
ಗುರುಸಹಿತ ಲಿಂಗ, ಲಿಂಗಸಹಿತ ಜಂಗಮ
ಜಂಗಮಸಹಿತ ಪ್ರಸಾದ, ಪ್ರಸಾದಸಹಿತ ಮಹಾಲಿಂಗ.
ಆದಿಲಿಂಗ ಅನಾದಿಶರಣನಾಗಿಬಂದು
ಷಡುಸ್ಥಲವ ನಡೆದು ತೋರಿದ.
ಅಂತಲ್ಲದೆ ಒಂದೊಂದ ಕಳೆದು ನಡೆದನೆಂದಡೆ
ಸೋಪಾನದ ಕಟ್ಟೆಯ ಕಲ್ಲು ಬಿದ್ದಂತೆ.
ಇದು ಆರಿಗೂ ಅಳವಡದು ಬಸವಣ್ಣಂಗಳವಟ್ಟಿತ್ತು.
ಆ ಬಸವಣ್ಣನ ಭೃತ್ಯನಾಗಿರಿಸಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಅರಿಷಡ್ವರ್ಗದುರವಣಿಗೆಗೊಳಗಾಗನಾಗಿ ಭಕ್ತಕಾಯನಾದ.
ಪಂಚೇಂದ್ರಿಯದ ಬಳಿ ಸಲ್ಲನಾಗಿ ಗುರುಭಕ್ತನಾದ.
ಸಪ್ತಧಾತುವಿನ ಗುಣವಿಡಿಯನಾಗಿ ಸಮಯಾಚಾರಿಯಾದ.
ಅಷ್ಟಮದಗಜದ ಬಟ್ಟೆಯ ಮೆಟ್ಟನಾಗಿ ಆಚಾರವಂತನಾದ.
ಕರ್ಮಕಾಯದಲ್ಲಿ ಬಳಿಸಲ್ಲನಾಗಿ ನಿರ್ಮಲ ನಿತ್ಯಸತ್ಯನಾದ.
ಜ್ಞಾನಕಾಂಡದಲ್ಲಿ ಹೊಣೆಹೊಕ್ಕನಾಗಿ ಸೃಷ್ಟಿಯೊಳಗೆ
ಭಕ್ತಿ ಎಂಬ ಅಚ್ಚಾದ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಅರುಹೆಂಬ ಗುರುವಿನ ಕೈಯಲ್ಲಿ,
ವಿರತಿಯೆಂಬ ಶಿವದಾರಮಂ ಕೊಟ್ಟು,
ಸುಮತಿಯೆಂಬ ಸಜ್ಜೆಯಂ ಪವಣಿಸಿ,
ಸಮತೆಯೆಂಬ ಲಿಂಗಸಾಹಿತ್ಯವ ಬಿಜಯಂಗೈಸಿಕೊಂಡು,
ಸರ್ವಜೀವದಯಾಪರನೆಂದು ಲಿಂಗಾರ್ಚನೆಯಂ ಮಾಡುವ ಭಕ್ತನ
ಕರಾಧಾರದ ಲಿಂಗವು ತಪ್ಪಿ ಆಧಾರಸ್ಥಾಪ್ಯವಾದಡೇನು ?
ಶಂಕೆಗೊಳಲಿಲ್ಲ.
ತೆಗೆದುಕೊಂಡು ಮಜ್ಜನಕ್ಕೆರೆವುದೇ ಸದಾಚಾರ.
ಮುನ್ನ ಶ್ರೀಗುರು ಷಟ್ಸ್ಥಲವನು
ಅಂತರಂಗದಲ್ಲಿ ನಿಕ್ಷೇಪಿಸಿದನಾಗಿ
ದೃಶ್ಯಕ್ಕೆ ತ್ಯಾಗವಲ್ಲದೆ ಅದೃಶ್ಯಕ್ಕೆ ತ್ಯಾಗವುಂಟೆ ?ಇಲ್ಲ.
ಉಂಟೆಂದನಾದಡೆ ಗುರುದ್ರೋಹ.
ಆ ಭಕ್ತನಿಂತವನಂತನೆಂದು ದೂಷಿಸಿ ನುಡಿದವರಿಗೆ
ಅಘೋರನರಕ ತಪ್ಪದಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಅರ್ಪಿತದ ಮಹಿಮೆಯ ಅನುವ, ಪ್ರಸಾದದ ಮಹಿಮೆಯ
ಆವಂಗಾವಂಗರಿಯಬಾರದು.
ವಿಷ್ಣ್ವಾದಿ ದೇವ ದಾನವ ಮಾನವ,
ಋಷಿಜನಂಗಳಿಗೆಯೂ ಅರಿಯಬಾರದು.
ಕಿಂಚಿತ್ತರಿದಡೆಯೂ ಅರ್ಪಿಸಬಾರದು.
ಕಿಂಚಿತ್ ಅರ್ಪಿಸಿದಡೆಯೂ ಪ್ರಸಾದವ ಹಡೆಯಬಾರದು.
ಕಿಂಚಿತ್ ಪ್ರಸಾದವ ಹಡೆದಡೆಯೂ,
ಪ್ರಸಾದವ ಭೋಗಿಸಿ ಪರಿಣಾಮದಿಂ ಮುಕ್ತರಾಗಿರಲರಿಯರು.
ಶಿವ ಶಿವಾ ! ಗುರು ಲಿಂಗ ಜಂಗಮಕ್ಕೆ
ತನು ಮನ ಧನವನರ್ಪಿಸಲರಿಯರು.
ಗುರು ಲಿಂಗ ಜಂಗಮವನೇಕೀಭವಿಸಿ
ಮಹಾಲಿಂಗವನು ನೇತ್ರದಲ್ಲಿ ಧರಿಸಿ,
ನೇತ್ರಲಿಂಗಕ್ಕೆ ನೇತ್ರದ ಕೈಯಲೂ ರೂಪವನರ್ಪಿಸಲರಿಯರು.
ಆ ಮಹಾಲಿಂಗವನು ಶ್ರೋತ್ರದಲ್ಲಿ ಧರಿಸಿ
ಶ್ರೋತ್ರಲಿಂಗಕ್ಕೆ ಶ್ರೋತ್ರದ ಕೈಯಲೂ ಮಹಾಶಬ್ದವನರ್ಪಿಸಲರಿಯರು.
ಆ ಮಹಾಲಿಂಗವನು ಘ್ರಾಣದಲ್ಲಿ ಧರಿಸಿ
ಘ್ರಾಣಲಿಂಗಕ್ಕೆ ಘ್ರಾಣದ ಕೈಯಲೂ ಸುಗಂಧವನರ್ಪಿಸಲರಿಯರು.
ಆ ಮಹಾಲಿಂಗವನು ಜಿಹ್ವೆಯಲ್ಲಿ ಧರಿಸಿ
ಜಿಹ್ವೆಯಲಿಂಗಕ್ಕೆ ಜಿಹ್ವೆಯ ಕೈಯಲೂ ಮಹಾರಸವನರ್ಪಿಸಲರಿಯರು.
[ಆ ಮಹಾಲಿಂಗವನು ತ್ವಕ್ಕಿನಲ್ಲಿ ಧರಿಸಿ
ತ್ವಕ್ಲಿಂಗಕ್ಕೆ ಘ್ರಾಣದ ಕೈಯಲ್ಲಿ ಮಹಾಸ್ಪರ್ಶವನರ್ಪಿಸಲರಿಯರು]
ಆ ಮಹಾಲಿಂಗವನು ಭಾವದಲ್ಲಿ ಧರಿಸಿ
ಭಾವಲಿಂಗಕ್ಕೆ ಭಾವದ ಕೈಯಲೂ ಸರ್ವಸುಖಪರಿಣಾಮ
ಮೊದಲಾದ ಭಾವಾಭಾವ ನಿಷ್ಕಲವಸ್ತುವನರ್ಪಿಸಲರಿಯರು.
ಆ ಮಹಾಲಿಂಗವನು ಮನದಲ್ಲಿ ಧರಿಸಿ
ಮನೋಮಯಲಿಂಗಕ್ಕೆ ಮನದ ಕೈಯಲೂ
ಸಕಲ ನಿಷ್ಕಲಾದಿ ರೂಪವನರ್ಪಿಸಲರಿಯರು.
ಆ ಮಹಾಲಿಂಗವನು ವಾಕ್ಕಿನಲ್ಲಿ ಧರಿಸಿ
ವಾಕ್ಲಿಂಗಕ್ಕೆ ವಾಕ್ಕಿನ ಕೈಯಲ್ಲೂ
ಪಡಿಪದಾರ್ಥ ಮೊದಲಾದ ಸಕಲದ್ರವ್ಯಂಗಳ
ರುಚಿ ಮೊದಲಾದ ಸುಖವನರ್ಪಿಸಲರಿಯರು.
ಆ ಮಹಾಲಿಂಗವನು ಇಂತು ಮನೋವಾಕ್ಕಾಯವೆಂಬ ತ್ರಿವಿಧದಲ್ಲಿ
ಏಕಾದಶ ಅರ್ಪಿತ ಸ್ಥಾನವನರಿದು
ಅರ್ಪಿತವಾದ ಏಕಾದಶ ಪ್ರಸಾದವನರಿಯರು.
ಮಹಾರ್ಪಿತವನು ಮಹಾಪ್ರಸಾದವನು ಎಂತೂ ಅರಿಯರು.
ಪರಂಜ್ಯೋತಿಃ ಪರಂ ತತ್ತ್ವಂ ಪರಾತ್ಪರತರಂ ತಥಾ
ಪರವಸ್ತು ಪ್ರಸಾದಃ ಸ್ಯಾದಪ್ರಮಾಣಂ ಪ್ರಸಾದಕಃ
ಎಂಬುದನರಿಯರು.
ಪೂಜಕಾ ಬಹವಸ್ಪಂತಿ ಭಕ್ತಾಶ್ಯತಸಹಸ್ರಶಃ
ಮಹಾಪ್ರಸಾದಪಾತ್ರಂ ತು ದ್ವಿತ್ರಾ ವಾ ನೈವ ಪಂಚಷಃ
ಪ್ರಸಾದಂ ಗಿರಿಜಾದೇವಿ ಸಿದ್ಧಕಿನ್ನರಗುಹ್ಯಕಾಃ
ವಿಷ್ಣುಪ್ರಮುಖದೇವಾಶ್ಚ ನ ಜಾನಂತಿ ಶಿವಂಕರಂ
ಎಂಬ ಪ್ರಸಾದ ಎಲ್ಲರಿಗೆಯೂ ಅಸಾಧ್ಯ.
ಅರ್ಪಿತ ಮುನ್ನವೇ ಅಸಾಧ್ಯ.
ಅರ್ಪಿತವೂ ಪ್ರಸಾದವೂ ಚನ್ನಬಸವಣ್ಣಂಗಾಯಿತ್ತು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಅರ್ಹನ್, ಬುದ್ಧ, ಚಾರ್ವಾಕ, ಮೀಮಾಂಸಕ, ನೀಲಪಟರೆಂಬವರು
ಕಾಯದರುಶನಂಗಳಲ್ಲಿ ದೀಕ್ಷಿತರಾಗಿ
ಸಾರ ಶಾಕ್ತೇಯ ವೈಷ್ಣವ ಗಾಣಾಪತ್ಯ ದರುಶನಂಗಳಂ ಹೊಕ್ಕು,
ಒಡಲ ಮುಡುಹಂ ಸುಟ್ಟು, ಮುಟ್ಟಿಯನಿಟ್ಟು
ಉಭಯಗೆಟ್ಟು ಶಿವಧ್ಯಾನವಿಲ್ಲದೆ ನರಕಕ್ಕಿಳಿದು
ಅಧಮರಾಗಿ ಹೋಗಿ ಎಂದು ಹೇಳಿತ್ತೆಯಾ ವೇದ ?
ಶಿವಾರ್ಚನವಿಹೀನಂ ತು ಜನ್ಮಮೃತ್ಯೂನ ಮುಂಚತಃ’ ಎಂದುದಾಗಿ ಮರಳಿ ಮರಳಿ ಜನ್ಮಕ್ಕೆ ಬಂದು ಮಾಡಿದ ಕರ್ಮದಿಂದ ನರಕಕ್ಕಿಳಿದು ಮಗ್ನರಾಗಹೇಳಿತ್ತೆಯಾ ವೇದ ? ಓಂ ಅಪ್ರಶಿಖಾಯಾಂ ತ್ವಾಮಯಾಧನ್ಯ ಜೀವಾಗಮತ್ (?)’
ಎಂದು ಹೇಳಿದ ಶ್ರುತ್ಯರ್ಥವನರಿಯದೆ
ಹೋತನಂ ಕೊಂದು ಹೋಮಂಗಿಕ್ಕಿ
ಚಾಂಡಾಲರಾಗ ಹೇಳಿತ್ತೆಯಾ ವೇದ ?
ಶಿವಾರ್ಚಕಪದದ್ವಂದ್ವಯಜನಾದ್ಧಾರಣಾದಪಿ
ಶಿವನಾಮ್ನಸ್ಸದಾಕಾಲಂ ಜಪಾದ್ವಿಪ್ರೋ ಭವಿಷ್ಯತಿ
ಎಂಬರ್ಥವನರಿದು ಅರಿಯದೆ
ನರಕಕ್ಕಿಳಿಯ ಹೇಳಿತ್ತೆಯಾ ವೇದ ?
ಏವಂ ರುದ್ರಾಯ ವಿಶ್ವದೇವಾಯ ರುದ್ರಪಾದಾಯ ದತ್ತಮಸ್ತು’ ಎಂದುದಲ್ಲದೆ ವಿಷ್ಣುಪಾದಾಯ ದತ್ತಮಸ್ತು’ ಎಂದು ಹೇಳುವ ವೇದ ಉಳ್ಳರೆ ಹೇಳಿ ?
ಅದಂತಿರಲಿ,
ಕಾಶಿಕಾಂಡದಲ್ಲಿ ಹೇಳಿದ ಪುರಾಣಾರ್ಥದ ಹಾಗೆ
ವ್ಯಾಧನ ಕೈಯಿಂದ ವಿಷ್ಣು ಹತವಾದನೆಂದಡೆ ಪರಿಣಾಮಿಸುವರು,
ವೀರಭದ್ರನ ಕೈಯಿಂದ ವಿಷ್ಣು ಹತವಾದನೆಂದಡೆ ಅದು ಮಿಥ್ಯವೆಂಬರು.
ಮಹಾಭಾರತದಲ್ಲಿ ವಿಷ್ಣು ಈಶ್ವರಂಗೆ ಬಿನ್ನಹಂ ಮಾಡಿದುದು:
ಮನ್ನಾಥೋ ಲೋಕನಾಥಶ್ಚ ಅದ್ಯಕ್ಷರಸಮಾಯುತಃ
ಏಕ ಏವ ಮಹಾದೇವೋ ಮಹೇಶಾನಃ ಪರಸ್ಥಿತಃ
ಈಶ್ವರಸ್ಯ ಸಮೋ ನಾಸ್ತಿ ಬ್ರಹ್ಮಾ ವಿಷ್ಣುಶ್ಚ ಕಿಂಕರಃ
ಶಿವವಾಕ್ಯಸಮೋ ನಾಸ್ತಿ ವೇದಶಾಸ್ತ್ರಾಗಮೇಷು ಚ
ಎಂಬ ಮಹಾವಿಷ್ಣುವಿನ ಮಹಾಭಾಷ್ಯವ ಕೇಳರಿಯಿರೇ,
ಓದಿದ ವೇದದ ಮಾತು ತಥ್ಯವೇ ? ಅಲ್ಲ.
ನಿಮ್ಮಧಿದೇವತೆಯಾಗುತಂ ಇಹ ವಿಷ್ಣುವಿನ ಮಾತು ಮಿಥ್ಯವೆಂದರೆ ಬಿಡಿ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಯ್ಯನ
ಜಾತನೆಂದಿಕ್ಕಿದೆ ಮುಂಡಿಗೆಯನಾರ್ಪವರೆತ್ತಿಕೊಳ್ಳಿರೆ.

ವಚನ
ಅಷ್ಟಾಷಷ್ಠಿತೀರ್ಥಂಗಳ ಮೀಯಲ್ಕೆ
ಆತ ಹಿರಿಯನೇ ? ಅಲ್ಲ, ಆತನ ಅಂತಃಕರಣ ಶುದ್ಧವಿಲ್ಲಾಗಿ.
ಸಂಧ್ಯಾ ಸಮಾಧಿ ಜಪ ತಪ ಮಂತ್ರರೂಢನಾಗಿರಲಿಕೆ
ಆತ ಹಿರಿಯನೇ ? ಅಲ್ಲ, ಆತನ ಮನ ಶುದ್ಧವಿಲ್ಲಾಗಿ.
ವಚನಾರಂಭದಲ್ಲಿ ನುಡಿಗಲಿತಲ್ಲಿ ಆತನನುಭವಿಯೆ ?
[ಅಲ್ಲ] ಆತ ಇದಿರ ಬೋಧಿಸುವ ಭುಂಜಕನಾಗಿ.
ಕೋಪವೇ ರಾಶಿ, ಕುಟಿಲವೇ ಲಚ್ಚಣ,
ಸಟೆಯೇ ಕೊಳಗ, ಮಾಯವೇ ಅಳತೆ,
ಅರಿಷಡ್ವರ್ಗ ಪಂಚೇಂದ್ರಿಯವಿಡಿದಾಡುವನ್ನಕ್ಕ ಭಕ್ತನೇ ? ಭಕ್ತನಲ್ಲ.
ಭಕ್ತನ ನಡೆ ಪಾವನ, ನುಡಿಯೇ ತೀರ್ಥ, ಒಡಲೇ ಕ್ಷೇತ್ರ.
ನಿಮ್ಮ ಶರಣರ ಅಂಗಳವೇ ವಾರಣಾಸಿ, ಕೇವಲ ದಾಸೋಹವೇ ಕರ್ತವ್ಯ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಆಚಾರ ಕರ್ಪರವಳವಟ್ಟಿತ್ತು, ಶಂಕರದಾಸಿಮಯ್ಯಂಗಳಿಗೆ.
ವಿಚಾರಕರ್ಪರವಳವಟ್ಟಿತ್ತು, ಸಕಳೇಶಮಾದಿರಾಜಯ್ಯಂಗಳಿಗೆ.
ಅವಿಚಾರಕರ್ಪರವಳವಟ್ಟಿತ್ತು, ಅಲ್ಲಮಪ್ರಭುದೇವರಿಗೆ.
ಇಂತೀ ತ್ರಿವಿಧಕರ್ಪರವಳವಟ್ಟಿತ್ತು, ನಿಜಗುಣದೇವಂಗೆ.
ಇಂತೀ ನಾಲ್ವರೊಳಡಗಿತ್ತು ಜಂಗಮಸ್ಥಲ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಆಚಾರಕರ್ಪರ, ವಿಚಾರಕರ್ಪರ, ಅವಿಚಾರಕರ್ಪರದ
ನಿರ್ಣಯವಾವುದೆನಲು,
ಅನ್ಯದೈವ ಭವಿಮಿಶ್ರ ಅನಾಚಾರ ಭಕ್ಷಾಭಕ್ಷ ಪೇಯಾಪೇಯ ಅನ್ಯಾಯ
ಇಂತಿವರನುಸರಣಿಗೊಳ್ಳದೆ
ವಿಚಾರಿಸಿ ಭಕ್ತರ ಗೃಹವ ಹೋಗುವುದೀಗ ಆಚಾರಕರ್ಪರ.
ನಾನಾರೊ ? ಎಂದು ವಿಚಾರಿಸಿ
ತನಗೆ ಮುಸುಕಿದ ಮಾಯಾಪಟಲದ ಭ್ರಮೆಯಂ ಪರಿದು
ಶ್ರೀಗುರುವಿನ ಸದ್ಭಾವಜ್ಞಾನಮನಕರಣದಿಂ
ಉದಯಿಸಿದವನಜಾತಸ್ವಯಂಭುವೆಂದರಿದು,
ಆಶೆಯಾಮಿಷ ಕಾಯಗುಣ ಇಂದ್ರಿಯದುರವಣೆ
ಮನೋವಿಕಾರಾದಿಗಳಿಗೆ ಸಿಲ್ಕದೆ,
ಆ ಮನ ಮೊದಲಾದ ಕಾರಣಂಗಳ ತನ್ನರಿವಿನಾಜ್ಞೆಯಿಂ
ಲಿಂಗದಲ್ಲಿ ನೆನಹು ನೆಲೆಗೊಳಿಸಿ, ನೋಟವನಿಮಿಷವೆನಿಸಿ,
ಅನ್ಯನುಡಿ ಅನ್ಯನಡೆಯೆಲ್ಲಮಂ ಮುನ್ನವೆ ತ್ಯಜಿಸಿ,
ಲಿಂಗದ ನಡೆ ನುಡಿ ಚೈತನ್ಯವಳವಟ್ಟು,
ಪರಶಿವನ ಪರತತ್ವವೆ ಪರಮಕರ್ಪರ ವಿಷಯ,
ಶಿಕ್ಷಾದಂಡವೆ ಕಟ್ಟಿಗೆ, ಪಂಚಭೂತಕಾಯವನುಳಿದ ಅಕಾಯವೆ ಕಂಥೆ,
ಪರಮವೈರಾಗ್ಯವೆ ಯೋಗವಟ್ಟಿಗೆ,
ನಿರಾಶಾಪಥವೆ ಯೋಗವಾವುಗೆ, ನಿಷ್ಕಾಮಿತವೆ ಒಡ್ಯಾಣ.
ಬಿಂದುಚಲಿಸಿದ ಸಂಧಾನಗತಿ ನಿಂದು
ಲಿಂಗಸಂಯೋಗದ ಸಮರತಿಯ ಮುಕ್ತ್ಯಂಗನೆಯೆನಿಸುವ
ಚಿಚ್ಛಕ್ತಿಯ ಕೂಟದ ಊಧ್ರ್ವರೇತಸ್ಸಿನ ಪರಮವಿಶ್ರಾಂತಿಯೆ ಕೌಪೀನ,
ಅಪ್ರಮಾಣ ಚಾರಿತ್ರ್ಯವೆ ಆಧಾರಘುಟಿಕೆ,
ಲಿಂಗಗಂಭೀರದ ಮಹದೈಶ್ವರ್ಯವೆ ವಿಭೂತಿ,
ನಿರುಪಾಧಿಕ ತೇಜೋಮಯವಾದ ಮಹಾಲಿಂಗದ ಪ್ರಕಾಶವೆ
ಭಸ್ಮೋದ್ಧೂಳನಾಗಿ,
ಆ ಭಸ್ಮೋದ್ಧೂಳನ ಪ್ರಕಾಶದಿಂ ಅಜ್ಞಾನತಮವಳಿದ ಸಜ್ಞಾನಕ್ಷೇತ್ರದಲ್ಲಿ ಸುಳಿವ
ಸುಳುಹೆ ದೇಶಾಂತರವಾಗಿ ಚರಿಸುವುದೆಂತೆಂದಡೆ:
ಜಂಗಮಸ್ಯ ಗೃಹಂ ನಾಸ್ತಿ ಸ ಗಚ್ಛೇತ್ ಭಕ್ತಮಂದಿರಂ
ಯದಿ ಗಚ್ಛೇತ್ ಭವೇರ್ಗೆಹಂ ತದ್ಧಿಗೋಮಾಂಸಭಕ್ಷಣಂ ಎಂದುದಾಗಿ
ಇಂತೀ ವಿಚಾರದಲ್ಲಿ ಸುಳಿವ ಸುಳುಹೆ ವಿಚಾರಕರ್ಪರ.
ವೇದಾತೀತಾಗಮಾತೀತಃ ಶಾಸ್ತ್ರಾತೀತೋ ನಿರಾಶ್ರಯಃ
ಆನಂದಾಮೃತಸಂತುಷ್ಟೋ ನಿರ್ಮಮೋ ಜಂಗಮಃ ಸ್ಮೃತಃ
ಇಂತೆಂದುದಾಗಿ,
ಕಾಯಗುಣವಳಿದು, ಪರಕಾಯಗುಣವುಳಿದು,
ಇಂದ್ರಿಯಗುಣವಳಿದು, ಅತೀಂದ್ರಿಯತ್ವದಲ್ಲಿ ವಿಶ್ರಾಂತಿಯನೈದಿ,
ರಣಗುಣವಳಿದು, ನಿರಾವರಣ ನಿರ್ಮಲ ನಿರ್ವಿಕಾರ
ನಿಜಲಿಂಗದಲ್ಲಿ ನಿಶ್ಚಲಿತನಾಗಿ,
ಜೀವನ ಗುಣವಳಿದು, ಪರಮಾತ್ಮಲಿಂಗದಲ್ಲಿ
ಘನಚೈತನ್ಯ ತಲ್ಲೀಯವಾಗಿ,
ತನಗಿದಿರಿಟ್ಟು ತೋರುವ ತೋರಿಕೆಯೆಲ್ಲವೂ
ತಾನಲ್ಲದೇನು ಇಲ್ಲವೆಂದರಿದು,
ಕಾಬವೆಲ್ಲವೂ ಶಿವರೂಪು, ಕೇಳುವವೆಲ್ಲವೂ ಶಿವಾನುಭಾವ,
ನಡೆದುದೆಲ್ಲವೂ ಶಿವಮಾರ್ಗ, ನುಡಿದುದೆಲ್ಲವೂ ಶಿವತತ್ವ,
ಕೊಡುವ ಕೊಂಬೆಡೆಯಲ್ಲಿ ಎಡೆದೆರಪಿಲ್ಲದೆ
ಅಖಂಡಾದ್ವಯ ಪರಿಪೂರ್ಣಚಿದಾನಂದರೂಪ ತಾನೆಂದರಿದು,
ನಿಂದ ನಿಲವೆ ಅವಿಚಾರಕರ್ಪರ.
ಅದೆಂತೆಂದಡೆ:
ಚರಾಚರವಿಹೀನಂ ಚ ಸೀಮಾಸೀಮಾವಿವರ್ಜಿತಂ
ಸಾಕ್ಷಾನ್ ಮುಕ್ತಿಪದಂ ಪ್ರಾಹುರುತ್ತಮಂ ಜಂಗಮಸ್ಥಲಂ
ಎಂದುದಾಗಿ,
ಶಬ್ದ ಚಲನೆಯಿಲ್ಲದುದೆ ಲಿಂಗವೆಂದರಿದು,
ಬಿಂದುಚಲನೆಯಿಲ್ಲದುದೆ ಜಂಗಮವೆಂದರಿದು,
ಆ ಬಿಂದುವನೆ ಲಿಂಗಮುಖದಲ್ಲಿ ನಿಲಿಸಿ
ಆ ನಾದವನೆ ಘನಚೈತನ್ಯಜಂಗಮಮುಖದಲ್ಲಿ ನಿಲಿಸಿ,
ಆ ನಾದಬಿಂದುವನೊಂದು ಮಾಡಿ
ನಿಂದ ನಿಲವೆ ಉಪಮಾತೀತವದೆಂತೆಂದಡೆ:
ನಾದನಿಶ್ಚಲತೋ ಲಿಂಗಂ ಬಿಂದುನಿಶ್ಚಲತೋ ಚರಃ
ನಾದಬಿಂದು ಸಮಾಯುಕ್ತ ಶ್ರೇಷ್ಠಂ ತಲ್ಲಿಂಗಜಂಗಮಂ
ಎಂದುದಾಗಿ,
ಮನಶ್ಚಂದಿರ ಇತ್ಯುಕ್ತಂ ಚಕ್ಷುರಾದಿತ್ಯ ಉಚ್ಯತೇ
ಚಂದಿರಾದಿತ್ಯಸಂಯುಕ್ತಂ ಉತ್ತಮಂ ಜಂಗಮಸ್ಥಲಂ
ಎಂದುದಾಗಿ,
ಮನಸ್ಥಂ ಮನೋಮಧ್ಯಸ್ಥಂ ಮನೋಮಧ್ಯಸ್ಥ ವರ್ಜಿತಾಃ
ಮನಸಾ ಮನ ಆಲೋಕ್ಯ ಸ್ವಯಂ ಸಿದ್ಧಾ ಸುಯೋಗಿನಃ
ಇಂತೆಂದುದಾಗಿ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ,
ನಿಮ್ಮ ಶರಣರಜಾತಜನಿತರು, ಅನುಪಮಚರಿತರು.

ವಚನ
ಆತ್ಮಶುದ್ಧಿ:ಗುರು ಹಸ್ತವ ಮಸ್ತಕದಲ್ಲಿ ನ್ಯಸ್ತಮಾಡಿದನಾಗಿ.
ಸ್ಥಾನಶುದ್ಧಿ:ಶಿವಲಿಂಗವಿದ್ದುದೇ ಅವಿಮುಕ್ತಕ್ಷೇತ್ರವಾಗಿ.
ದ್ರವ್ಯಶುದ್ಧಿ:ಶಿವಲಿಂಗಸನ್ನಿಧಿಮಾತ್ರ ಪವಿತ್ರೀಕೃತವಾಗಿ.
ಮಂತ್ರಶುದ್ಧಿ:ಹರಮಂತ್ರಮಯವಾಗಿ
ಅಂಗಶುದ್ಧಿ:ನಿರ್ಮಳ ನಿರುಪಮ ಸತ್ಯಸತ್ಯ ತಾನಾಗಿ.
ಇಂತು ಪಂಚಶುದ್ಧಿ ಎಂದರಿದು,
ಪ್ರಾಣಲಿಂಗಸಂಬಂಧಿಯಾಗಿಪ್ಪುದೇ ಆಗಮ.
ಬೇರೆ ಆಗಮವಿಲ್ಲ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಆತ್ಮಾಹಂ’ ಎಂಬರು ತಾವು ಆತ್ಮವಿತ್ತುಗಳೆಲ್ಲ.
ಆತ್ಮನಂಥವನಿಂಥವನೆಂದು ಕಂಡವರುಂಟೆ ಅಯ್ಯ ?
ಆತ್ಮಜ್ಞಾತಾಡಿಹಂ’ ಎಂಬ ಶ್ರುತಿಪ್ರಮಾಣವುಂಟೆ ಅಯ್ಯ ? ಆತ್ಮ ವಾಙ್ಮನಕ್ಕಗೋಚರನಯ್ಯಾ, ಆತ್ಮತತ್ತ್ವಮಸಿ’ ಎಂಬ ವಾಕ್ಯದಿಂದತ್ತತ್ತಲಯ್ಯಾ.
ಆತ್ಮನ ಕಂಡಿಹೆನೆಂಬ ಅರೆಮರುಳೆ ಕೇಳಾ,
ಆತ್ಮನು ತಾನಾದ ವಸ್ತು,
ನೀರು ನೀರ ಕೂಡಿದಂತೆ, ಇಹ ಸಹಜಾತ್ಮನ ಕಾಬಡೆ
ಕಾಯವಿಡಿದು ಕಾಣಬಹುದೆ ಅಯ್ಯಾ ?
ಓಂ ಆತ್ಮನು ಪ್ರಾಣೇಶಲಿಂಗ, ಪ್ರಸಾದಕಾಯವೆಂದರಿದಾತನು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಆದಿ ಸಿಂಹಾಸನವಾಗಿ, ಫಣಿ ಭೂಷಣವಾಗಿ,
ಕೂರ್ಮನುತ್ತಮಾಂಗವಾಗಿ, ದಿಕ್ಕರಿಗಳೆಂಟೂ ಪುಷ್ಪವಾಗಿ,
ಹದಿನಾಲ್ಕು ಭುವನದೊಳಗೊಂದಾಗಿ,
ಮೇರುಗಿರಿ ನಾಲ್ಕು ದಿಕ್ಕೂ ಶೃಂಗಾರವಾಗಿ,
ಮೇರು ರುದ್ರನ ಹಾವುಗೆಯಾದ ಪರಿಯೆಂತೊ ?
ಹೊತ್ತುದನತಿಗಳೆದು ನಿಜದೊಳಗೆ ನಿಲಬಲ್ಲಡೆ
ನಿರಾಕಾರವ ನಿರ್ಮಿಸಬಾರದು.
ನಿರಾಕಾರವ ನಿಯಮಿಸುವಡೆ ಕರಣಾದಿಕಂಗಳಲ್ಲಿ
ಕಂದೆರದಡೆ ಜನನಕ್ಕೆ ದೂರ.
ಆಕಾರದಾಯು ಆಧಾರವಾಯು ಬ್ರಹ್ಮರಂಧ್ರದೊಳಗೆ
ಕಾರಣಪುರುಷ ತಾನಾಗಿದ್ದು,
ಆರೈದು ಗಮನಿಸುವನಲ್ಲದೆ
ಕಾಯದಿಚ್ಛೆಗೆ ನಡೆದು ಸ್ಥಿತಿಕಾಲಕ್ಕೆ ಗುರಿಯಹನಲ್ಲ.
ಕಾಯ ಭೋಗಿಸುವ ಭೋಗವ ಭುಂಜಿಸುವನ್ನಕ್ಕರ
ವಾಯುಪ್ರಾಣಿ ಸಾಯದಲ್ಲಾ,
ಅದೇನು ಕಾರಣವೆಂದಡೆ
ಕರ್ಪುರದ ಪುತ್ಥಳಿಯ ಕಿಚ್ಚಿನಲ್ಲಿ ಸುಟ್ಟು
ಅಸ್ಥಿಯನರಸಲುಂಟೆ ?
ಜ್ಞಾನಾಗ್ನಿಯಿಂದ ಪ್ರಾಣಭೋಗ ನಷ್ಟ,
ಆಕಾರದ ಪ್ರಾಣದ ಪರಿ ನಷ್ಟ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಆದಿಮಧ್ಯ ಅವಸಾನದಲ್ಲಿಯೂ ಎನ್ನನು
ಆಶೆಯೇ ಗ್ರಹಿಸುತ್ತಿದೆ.
ಶಿವ ಶಿವಾ, ಆಸೆಯಿಂದ ಘಾಸಿಯಾಗುತ್ತಿದ್ದೇನೆ.
ಶಿವ ಶಿವಾ, ಆ ಹೊನ್ನು ಹೆಣ್ಣು ಮಣ್ಣಿನ ಆಶೆ
ಘಾಸಿಮಾಡಿ ಕಾಡುತ್ತಿದೆ.
ಶಿವ ಶಿವಾ, ಈ ಆಶೆಯ ಕೆಡಿಸಿ
ನಿಮ್ಮ ಶ್ರೀಪಾದದಾಸೆಯೆ ನಿವಾಸವಾಗಿರಿಸಯ್ಯಾ ಎನ್ನನು,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಆದಿಲಿಂಗ ಅನಾದಿಶರಣನೆಂಬುದು
ತನ್ನಿಂದ ತಾನಾಯಿತ್ತು ಕೇಳಿರಣ್ಣಾ.
ಆದಿ ಕಾಯ, ಅನಾದಿ ಪ್ರಾಣ
ಈ ಉಭಯದ ಭೇದವ ತಿಳಿದು
ವಿಚಾರಿಸಿ ನೋಡಿರಣ್ಣಾ.
ಅಂತು ಅನಾದಿಯ ಪ್ರಸಾದ ಆದಿಗೆ ಸಲುವುದು.
ಅದೆಂತೆಂದಡೆ,
ಅನಾದಿಜಂಗಮಶ್ಚೈವ ಆದಿಲಿಂಗಸ್ಥಲಂ ಭವೇತ್
ಅನಾದೇಶ್ಚ ವಿರೋಧೇನ ತದುಚ್ಛಿಷ್ಟಂ ತು ಕಿಲ್ಬಿಷಂ
ಇಂತೆಂದುದಾಗಿ,
ಪ್ರಾಣಪ್ರಸಾದವಿರೋಧವಾಗಿ ಪಿಂಡಪ್ರಸಾದವ ಕೊಂಡಡೆ
ಕೊಂಡುದು ಕಿಲ್ಬಿಷ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಆಮಿಸುವ ವಸ್ತು ಕರಸ್ಥಲಕ್ಕೆ ಬಂದ ಬಳಿಕ
ಕಾಮಿಸಲೇನುಂಟುರಿ ಇನ್ನೇನ ಕಾಮಿಸುವುದಯ್ಯಾರಿ
ನಮೋ ಹಿರಣ್ಯಬಾಹವೇ ಸೇನಾನ್ಯೇ ದಿಶಾಂ ಚ ಪತಯೇ ನಮೋ
ನಮೋ ವೃಕ್ಷೇಭ್ಯೋ ಹರಿಕೇಶೇಭ್ಯಃ ಪಶೂನಾಂ ಪತಯೇ ನಮೋ
ಎಂಬ ವಸ್ತು
“ಓಂ ಯೋ ವೈ ರುದ್ರಸ್ವಭಾವಾನ್ ಅನ್ಯಚ್ಚ ಮೃತಂ
ಎಂಬ ವಸ್ತು,
ಸುಖಸ್ವರೂಪನು ಅಭಯಹಸ್ತನು ಶಾಂತನು ಕರುಣಿ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಆಯುಷ್ಯಭಾಷೆಯನು ಲಿಂಗವೆ ಕೊಡುವನಯ್ಯಾ.
ಇನ್ನಾರಿಗೂ ಕಕ್ಕುಲತೆ ಬಡದಿರಿ.
ಲಿಂಗವು ಕೊಡುವ ಕಂಡಾ !
ಆದಡಿನ್ನು ಮತ್ತಾರಿಂಗೂ ಕಕ್ಕುಲತೆಯ ಬಡದಿರಿ.
ಲಿಂಗವಂತಂಗೆ ಕಕ್ಕುಲತೆಯಾದಡೆ ಲಿಂಗವಂತನೆನಿಸನು.
ಕಕ್ಕುಲತೆಯಲ್ಲಿ ಅನ್ಯರನಾಸೆಗೈದಡೆ ಲಿಂಗವು ರಕ್ಷಿಸನು, ಶಿವನಾಣೆ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಆಯುಷ್ಯವ ಹಿರಿದಾಗಿ ಕೊಟ್ಟಡೆ, ಲಿಂಗ ಒಲಿದುದಲ್ಲ.
ಭಾಷೆಯ ಹಿರಿದಾಗಿ ಕೊಟ್ಟಡೆ, ಲಿಂಗ ಒಲಿದುದಲ್ಲ.
ಅಷ್ಟಮಹದೈಶ್ವರ್ಯವ ಹಿರಿದಾಗಿ ಕೊಟ್ಟಡೆ
ಲಿಂಗ ಒಲಿದುದಕ್ಕೆ ಕುರುಹಲ್ಲ.
ಕಾಯ ಬೆರಸಿ ಕೈಲಾಸಕ್ಕೆ ಕೊಂಡು ಹೋದರೂ ಲಿಂಗ ಒಲಿದುದಲ್ಲ.
ಇವೆಲ್ಲಾ ಪೂಜಾ ಫಲಂಗಳು, ಕೈಕೂಲಿಕಾರತನವೈಸೆ.
ಲಿಂಗ ಒಲಿದ ಪರಿ:
ಗುರುಲಿಂಗಜಂಗಮ ಒಂದೆಂದು ಅರಿದು
ನಿಶ್ಚಯ ಭಾವದಿಂ ತನು ಮನ ಧನವಲ್ಲಿಯೇ ಅರ್ಪಿಸುವುದು
ಲಿಂಗ ಒಲಿದುದು.
ಕಾಯಭಾವವಳಿದು ಲಿಂಗವೆಂದು ಭಾವಿಸಿ
ಭಾವಸಿದ್ಧಿಯಾದುದು ಲಿಂಗ ಒಲಿದುದು.
ಲಿಂಗವಲ್ಲದೆ ಇನ್ನಾವುದು ಘನ ? ಎದರಿದುವೆ ಲಿಂಗ ಒಲಿದುದು.
ಲಿಂಗವಂತನೆ ಲಿಂಗವೆಂದರಿದುದು ಲಿಂಗ ಒಲಿದುದು.
ಸದಾಚಾರ ಲಿಂಗ ಒಲಿದುದು.
ನಿರ್ವಂಚನೆ ಲಿಂಗ ಒಲಿದುದು.
ಸರ್ವಭೋಗವನು ಲಿಂಗವಂತರಿಗೆ ಭೋಗಿಸಲಿತ್ತು
ಸಮಭೋಗವಲ್ಲದೆ ಲಿಂಗವಂತಗೆ
ವಿಶೇಷ ಭೋಗ ತಾತ್ಪರ್ಯ ಮೋಹವಾಗದಡೆ ಲಿಂಗ ಒಲಿದುದು.
ಪರಧನ ಪರಸ್ತ್ರೀ ಪರದ್ರವ್ಯ ಪರದೈವದಲ್ಲಿ
ವರ್ತಿಸದಿದ್ದಡೆ ಲಿಂಗ ಒಲಿದುದು.
ಲಿಂಗದಲ್ಲಿ ಭಕ್ತನಲ್ಲಿ ಅವಿನಾಭಾವವಳವಟ್ಟು ಭಾವಶುದ್ಧವಾಗಿ
ಸರ್ವಕ್ರೀ ಲಿಂಗಕ್ರೀಯಾದಡೆ ಲಿಂಗ ಒಲಿದುದು ದೃಷ್ಟವಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಆವಾವ ದ್ರವ್ಯಪದಾರ್ಥಂಗಳನು ಶಿವಲಿಂಗಕ್ಕರ್ಪಿಸಿ
ಪ್ರಸಾದವಾದಲ್ಲದೆ ಕೊಳ್ಳೆವೆಂಬ ಪ್ರಸಾದಿಗಳಿರಾ
ನೀವು ಅರ್ಪಿಸಿದ ಪರಿಯೆಂತು ? ಪ್ರಸಾದವ ಕೊಂಡ ಪರಿಯೆಂತು ಹೇಳಿರೆ ?
ರೂಪಾರ್ಪಿತವಾಯಿತ್ತು ನೇತ್ರದಿಂದ,
ಮೃದು, ಕಠಿಣ, ಶೀತೋಷ್ಣಂಗಳು ಅರ್ಪಿತವಾದವು ಸ್ಪರ್ಶನದಿಂದ.
ನೇತ್ರ ಹಸ್ತವೆರಡಿಂದ್ರಿಯಂಗಳಿಂದವೂ ರೂಪು ಸ್ಪರ್ಶನವೆಂಬೆರಡೆ
ವಿಷಯಂಗಳರ್ಪಿತವಾದವು.
ನೀವಾಗಳೇ ಪ್ರಸಾದವಾಯಿತ್ತೆಂದು ಭೋಗಿಸತೊಡಗಿದಿರಿ.
ಇಂತು ದ್ರವ್ಯಂಗಳ ರಸವನೂ, ಗಂಧವನೂ, ಶಬ್ದವನೂ,
ಶ್ರೋತೃ, ಘ್ರಾಣ, ಜಿಹ್ವೆಗಳಿಂದ ಮೂರು ವಿಷಯಂಗಳನೂ
ಅರ್ಪಿಸದ ಮುನ್ನ ಪ್ರಸಾದವಾದ ಪರಿ ಎಂತೊ ?
ಅರ್ಪಿತವೆಂದನರ್ಪಿತವ ಕೊಂಬ ಪರಿ ಎಂತೊ ?
ಪ್ರಸಾದಿಗಳಾದ ಪರಿ ಎಂತೊ ಶಿವ ಶಿವಾ.
ಪಂಚೇಂದ್ರಿಯಂಗಳಿಂದವೂ, ಶಿವಲಿಂಗಪಂಚೇಂದ್ರಿಯ ಮುಖಕ್ಕೆ
ಪಂಚವಿಷಯಂಗಳನೂ ಅರ್ಪಿಸಬೇಕು.
ಅರ್ಪಿಸಿ ಪ್ರಸಾದವ ಕೊಂಡಡೆ ಪ್ರಸಾದಿ.
ಅಲ್ಲದಿರ್ದಡೆ ಅಷ್ಟವಿಧಾರ್ಚನೆ ಷೋಡಶೋಪಚಾರ ಕ್ರಿಯೆ ಅಲ್ಲ.
ಪ್ರಸಾದಿಯಲ್ಲ, ಭಕ್ತಿಯ ಪರಿಯೂ ಅಲ್ಲ.
ಪೂಜಕರೆಂಬೆನೆ ಪೂಜೆಯ ಒಪ್ಪವಲ್ಲ.
ಸಾಧಾರಣ ಪೂಜಕರಪ್ಪರು ಕೇಳಿರಣ್ಣಾ.
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನ
ಸಾವಧಾನಾರ್ಪಿತದಲ್ಲಿ ಸ್ವಯವಾಗರಯ್ಯ.

ವಚನ
ಆಶೆಯುಳ್ಳನ್ನಬರ ಆಶ್ರಯಿಸುವ ಆಶ್ರಯವು
ದಾಸಿಯಿಂದ ಕರಕಷ್ಟ ಕಾಣಿರೊ !
ಆಸೆಯೆ ದಾಸಿ ಕಾಣಿರೊ, ಅಯ್ಯಾ !
ಆ ನಿರಾಶೆಯೆ ಈಶ ಪದ, ಕಾಣಿರಣ್ಣಾ !
ದಾಸತ್ವದ ಈಶತ್ವದ ಅನುವನು ವಿಚಾರಿಸಿ,
ಆಶೆ ಅಡಗಿದಡೆ ಅದೆ ಈಶ ಪದ, ತಪ್ಪದಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಆಸರಿನ ಭಕ್ತಜಡರುಗಳು ಬೇಸತ್ತು
ಜಂಗಮಕ್ಕೆರಗಿ ಪಾದಪ್ರಕ್ಷಾಲನೆಯಂ ಮಾಡಿ
ಪಾದೋದಕವ ಧರಿಸುತ್ತಿರ್ಪರು.
ಆವುದು ಕ್ರಮವೆಂದರಿಯರು.
ಅರಿದಡೆ ಪಾದೋದಕ, ಅರಿಯದಿರ್ದಡೆ ಬರಿಯ ನೀರೆಂದರಿಯರು.
ಅರಿದರಿದು ಬರುದೊರೆವೋದರು ಮಾನವರೆಲ್ಲ.
ಅರಿವು ಸಾಮಾನ್ಯವೇ ?
ಶಿವಾತ್ಮಕಪದದ್ವಂದ್ವಪ್ರಕ್ಷಾಲನೆ ಜಲಂ ನರಾಃ
ಯೇ ಪಿಬಂತಿ ಪುನಸ್ತನ್ಯಂ ನ ಪಿಬಂತಿ ಕದಾಚನ
ಇಂತೆಂಬ ವಚನವ ಕೇಳಿ ನಂಬುವುದು.
ನಂಬದಿರ್ದಡೆ, ಮುಂದೆ ಭವಘೋರ ನರಕ ತಪ್ಪದು,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಆಹ್ವಾನ ವಿಸರ್ಜನೆಗಳ ಮಾಡಲೇಕಯ್ಯ ಶರಣಂಗೆ ?
ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನೆಂದೆನಿಸಿದ ಬಳಿಕ
ಉಂಟೆ ಲೌಕಿಕರ ಉಪಚಾರಂಗಳು ?
ನಿತ್ಯನಿರಂಜನನೈಕ್ಯನೆಂಬ ನಿರೂಪದಲ್ಲಿ ಸ್ವರೂಪ ತಾನಾದ ಬಳಿಕ
ಉಂಟೆ ಲೌಕಿಕರ ತನುವಿನಂತೆ ತನುಗುಣ ?
ತನುಗುಣ ನಾಸ್ತಿಯಾದ ಬಳಿಕ, ಉಂಟೆ ತಾಮಸಕ್ಕೆ ಎಡೆ ? ಇಲ್ಲ.
ಅದು ಹೇಗೆಂದಡೆ_
ಗುರುಕೃಪಾದೃಷ್ಟಿಯಿಂದ ತಾನೆಯಾದ ಬಳಿಕ
ಇಲ್ಲಿಲ್ಲ ದೇಹಾದಿ ವಿಕಾರಂಗಳು,
ಇಲ್ಲಿಲ್ಲ ಕರಣೇಂದ್ರಿಯಾದಿ ವಿಕಾರಂಗಳು.
ಅದ್ವೈತವ ಮೀರಿದೆ, ಬೊಮ್ಮವ ಸಾರಿದೆ,
ಸಾಕಾರವ ಹರಿದೆನು. [ಇದರಿಂದ] ನೂನೈಶ್ವರ್ಯವದುಂಟೆ ?
ವಾಜ್ಮಾನಸಜಿಹ್ವೆಗೆ ಅಗೋಚರವಾಗುತಿದ್ದಂತಹ ವಸ್ತುವ ಕಂಡೆ.
ಸಕಲ ಶೂನ್ಯಾತೀತವ ಎಯ್ದಿದೆ,
ಸ್ವಾನುಭಾವವನೊಡಗೂಡಿದೆ.
ಮಹಾಲಿಂಗದ ಬಾಧೆ ಬಂದಡೆ ಉಣ್ಣೆನು, ಉಂಡಡೆ ಕಾಣೆ,
ಕಂಡಡೆ ಮುಗಿಲ ಮುಟ್ಟಿದುದರುದ್ದವ ನೋಡಾ.
ಎಂದು ದೀಕ್ಷೆ ಶಿಕ್ಷೆ ಸ್ವಾನುಭಾವವ ಸಂಬಂಧಿಸಿ
ಶುದ್ಧ ನಿಷ್ಕಲವಾದ ಬಳಿಕ ಮರಳಿ ಪ್ರಪಂಚಿನ ಹಂಗುಂಟೆ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ?

ವಚನ
ಇಂತಪ್ಪ ಶಿವಯೋಗಿಯಂ
ಇಂದ್ರಿಯಂಗಳು ಕೂಡಿಯಾಡುವ ಮಾನವನು
ಬಹು ಚೆಚ್ಚಿಯನುಳ್ಳ ವಾನರನಂ ಬಂಧಿಸಿ ತನ್ನಿಚ್ಛೆಯಲಿ ಆಡಿಸುವ
ಯಕ್ಷನ ಹಾಂಗೆ ಉಲಾಯೋಗ ಸ್ಥಾನಂಗಳಲ್ಲಿ ಬ್ರಹ್ಮಾನುಸಂಧಾನದಲ್ಲಿಯುಂ
ಎಲ್ಲಾ ಪದಾರ್ಥಂಗಳು ತಟ್ಟು ಮುಟ್ಟಂಗಳಲ್ಲಿಯವುಬಹುದೆ ?
ಸಂಸಾರ ಪ್ರಪಂಚವ ಪರಿಹರಿಸುವೆ ಪರಮಾರ್ಥವ ಕಾಣಬಹುದೆ ?
ತೆರೆಯಲ್ಲದೆ ಜಲದ ವರ್ತನೆ ನಡೆವುದೆ ?
ಆ ಜಲವನು ಪ್ರಯೋಗಿಸುವಂತೆ
ಪರವನು ಪ್ರಯೋಗಿಸುವುದಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಇಂದ್ರಿಯಂಗಳಿಗೆ ಪ್ರೇಮದಿಂದಾಡಿ ನುಡಿದು,
ಅವರಿಚ್ಚೆಯ ಬಳಿಸಲುವ ಇಚ್ಚೈಕಪುರುಷರು ಅನೇಕರು.
ಆ ಇಂದ್ರಿಯಂಗಳ ನಂದಿಸಿ, ಲಿಂಗೇಂದ್ರಿಯಂಗಳ ಮಾಡಿ,
ಪಂಚೇಂದ್ರಿಯಂಗಳಲ್ಲಿ ಪಂಚಲಿಂಗಪ್ರತಿಷ್ಠೆಯ ಮಾಡಿ,
ಪಂಚಪ್ರೇಮದಿಂದ ನುಡಿದು,
ಶಿವಜ್ಞಾನಪಥವ ಹತ್ತಿಸುವ ಪುರುಷರದೇ ಮಾರ್ಗ.
ಅವರ ಕಂಡಡೆ ನೀನೆಂಬೆನು ಕಾಣಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಇಚ್ಛಾ ಜ್ಞಾನ ಕ್ರಿಯಾ ಶಕ್ತಿ ನಿಮ್ಮಿಚ್ಛೆ ಎಂಬುದಂ ಬಲ್ಲೆ.
ಸರ್ವವೂ ಶಿವನಾಜ್ಞೆಯೆಂಬುದಂ ಬಲ್ಲೆ.
ಸರ್ವವೂ ಶಿವನಾಜ್ಞೆಯೆಂದು ನಿಮ್ಮಡಿಗಳು
ಬೆಸಸಿದ ಸರ್ವಶ್ರುತಿಗಳಂ ಕೇಳಿ ಬಲ್ಲೆನು.
ಈ ಹೀಂಗೆಂದರಿದು ಮನ ಮರಳಿ ಬಿದ್ದು
ಗುರುಲಿಂಗಜಂಗಮಕ್ಕೆ ನಾನೂ ಮಾಡಿದೆನೆಂಬ
ಅವಿಚಾರದ ಮನದ ಮರವೆಯ ನೋಡಾ.
ಇದಿರ ಬೇಡಿದಡೆ
ಕೊಡರೆಂಬ ಮನದ ಘಸಣಿಯ ನೋಡಾ.
ಶಿವ ಶಿವ ಮಹಾದೇವ, ಮನೋನಾಥ ಮನೋಮಯ,
ಎನ್ನ ಮನವ ಸಂತವ ಮಾಡಿ
ನಿಮ್ಮಲ್ಲಿ ಬೆರಸು, ಬೆರಸದಿದ್ದಡೆ ನಿಮಗೆ ಮಹಾಗಣಂಗಳಾಣೆ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಇಚ್ಛೆಯರಿದು, ಕಾಲಕಾಲದಲ್ಲೂ ಇಚ್ಛೆಯ ಸಲಿಸಿ,
ನಿರುಪಾಧಿಕ ದಾಸೋಹವ ಮಾಡಿ,
ಶಿವನಾನೆಂಬ ಅಹಂಕಾರವಡಗಿದಡೆ ಭಕ್ತನು.
ಮಹಾವಸ್ತುಗಳ ಆವ ಕಾಲ ಆವ ಹೊತ್ತು
ಆತ ಬೆಸಸಿತ್ತುದ ಮಹಾಪ್ರಸಾದವೆಂದು,
ಪ್ರತ್ಯುತ್ತರವಿಲ್ಲದೆ ಆಜ್ಞೆಯಲ್ಲಿ ನಡೆದು, ಆಜ್ಞೆಯಲ್ಲಿ ನುಡಿದು
ಇರಬಲ್ಲಡೆ ಆತನೇ ಭಕ್ತನು.
ಈ ಸದ್ಭಕ್ತಿ ಬಸವಣ್ಣಂಗಲ್ಲದೆ
ಸರ್ವಬ್ರಹ್ಮಾಂಡದೊಳಗಣ ಸರ್ವಲೋಕದ
ದೇವ ದಾನವ ಮಾನವರಾರಿಗೂ ಅಳವಡದು, ಆರಿಗೂ ಆಗದು.
ಸದ್ಭಕ್ತಿ ಬಸವಣ್ಣಂಗಳವಟ್ಟಿತ್ತು, ಬಸವಣ್ಣನೇ ಭಕ್ತನು,
ಬಸವಣ್ಣನ ನೆನೆವುದೇ ಭಕ್ತಿಯ ಪಥವು,
ಬಸವಣ್ಣನ ನೆನೆವುದೇ ಮುಕ್ತಿಯ ಪಥವು,
ಬಸವಣ್ಣನ ನೆನೆದು ಬದುಕಿದೆನಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಇನ್ನು ಮುಕ್ತನೆಂದಡೆ ಮುನ್ನಲೇನು ಬದ್ಧನೇ ?
ಮುನ್ನ ಮುನ್ನವೇ ಮುಕ್ತನು.
ಒಂದು ಕಾರಣದಿಂದ ಬದ್ಧನಾದಡೇನು ? ಗುರುಕರುಣದಿಂದ ಮುಕ್ತನು.
ಗುರುಕರುಣದಿಂದ ಗುರುವಾದ ಬಳಿಕ
ಬದ್ಧ_ಮುಕ್ತನೆಂಬ ದಂದುಗದ ನುಡಿ ಹೊದ್ದಲುಂಟೆ ?
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಇಷ್ಟಂ ಪ್ರಾಣಸ್ತಥಾ ಭಾವಸ್ತ್ರಿಧಾ ಏಕಂ?
ಎಂದುದಾಗಿ,
ಶ್ರೀಗುರು ಮಾಡಿದ ಕಾರಣ,
ಲಿಂಗವೇ ಪ್ರಾಣ, ಪ್ರಾಣವೇ ಲಿಂಗ.
ಅಂತರಂಗ ಬಹಿರಂಗ ಸ್ವಾಯತವಾಗಿ ಧರಿಸಿಕೊಂಡಿಪ್ಪ
ಕಾಯವು ಲಿಂಗದ ಕಾಯವು.
ಪ್ರಾಣ ಲಿಂಗವಾದ ಬಳಿಕ ಕಾಯ ಬೇರೆ ಇನ್ನಾರದಯ್ಯಾ ?
ಕಾಯ ಲಿಂಗಕಾಯ, ಆ ಕಾಯ ಲಿಂಗವು
ಇದು ಕಾರಣ, ಭಾವಭೇದವಿಲ್ಲ.
ಲಿಂಗ ಕಾಯ ಒಂದೆಯಾಗಿ ಸರ್ವಾಂಗಲಿಂಗ
ಕಾಯಕ್ರೀ ಎಲ್ಲವೂ ಲಿಂಗಕ್ರೀ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಇಷ್ಟಲಿಂಗಕ್ಕೆ ಕಾಯದ ಕೈಯಿಂದ ಮುಟ್ಟಿ
ಅಷ್ಟವಿಧಾರ್ಚನೆ, ಷೋಡಶೋಪಚಾರ
ಮೈದೋರಿದಲ್ಲದೆ ಆಕಾರನಾಸ್ತಿಯಾಗದು.
ಬೆರಣಿಯಲ್ಲಿ ಅಗ್ನಿ ಮೈದೋರದಿದ್ದಡೆ ಆಕಾರನಾಸ್ತಿಯಾಗದು.
ಲಿಂಗದಲ್ಲಿದ್ದ ಜವನಿಕೆ ಬಗೆದೆಗೆದಡೆಕಾಯವಿಲ್ಲದೆ ಪ್ರಾಣದ ಪರಿ ನಷ್ಟ,
ಜ್ಞಾನಾಗ್ನಿಯಿಂದ ಭೋಗ ನಷ್ಟ.
ಇದು ಕಾರಣ,
ನಿಮ್ಮ ಶರಣರ ಮರ್ತ್ಯರೆಂದಡೆ ನರಕ ತಪ್ಪದು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಈರೇಳು ಭುವನ ಚಾರಾಸಿಲಕ್ಷ ಯೋನಿಮುಖಜೀವರಾಶಿಗಳೊಳಗೆ
ಓರಂತೆ ತೊಳಲುತ್ತಿಪ್ಪ ಹಂಸನ ಗತಿಗೆಡಿಸುವ
ರಮ ಪಶುಪಾಶಪತಿ ಜ್ಞಾನದ ಪದವನರುಹುವ
ಗುರುವಿನ ಮಥನವೆ ಗುರುವಿನ ಶೇಷ.
ಹೃತ್ಕುಂಡಲದ್ವಾದಶಾಂತತ್ರಿತತ್ವದ ಮೇಲೆ ತನ್ನ ಜೀವವು
ಶಾಂತ್ಯತೀತವಾದ ತಾನೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ
ಗುರುಭಕ್ತಪ್ರಸಾದಿಯ ಹೊಲಬಿನ ಸಂಗದಿಂದ ಲಿಂಗಸುಸಂಗವೇದ್ಯ.

ವಚನ
ಉದಯದಲ್ಲಿ ಉತ್ಪತ್ತಿ, ಮಧ್ಯಾಹ್ನದಲ್ಲಿ ಸ್ಥಿತಿ,
ಅಸ್ತಮಾನದಲ್ಲಿ ಲಯವಪ್ಪುದು_
ಸರ್ವರಿಗೆಯೂ ಈ ವಿಧಿ ನೋಡಾ,
ಇನ್ನೇತಕ್ಕೆ ತೆರಹುಂಟು ?
ಮಧ್ಯಾಹ್ನದ ಸ್ಥಿತಿಯಲ್ಲಿ ಸಂಸಾರ ಪ್ರಪಂಚು ಕಾರಣ
ಹೊನ್ನು ಹೆಣ್ಣು ಮಣ್ಣು ಲಾಭನಿಮಿತ್ತ
ಆರಂಬ ವ್ಯವಹಾರ ಸೇವೆ
ಇಂತಿವರಲೂ ಅತಿಲಯವಪ್ಪುದು ತಪ್ಪದು.
ಉದಯೇ ಜನನಂ ನಿತ್ಯಂ ರಾತ್ರಾ ಚ ಮರಣಂ ತಥಾ
ಅಜ್ಞಾನಂ ಸರ್ವಜಂತೂನಾಂ ತದ್ವಿದಿಶ್ಚ ಪುನಃ ಪುನಃ
ಎಂದುದಾಗಿ,
ಮರಳಿ ಮರಳಿ ಈ ವಿಧಿ ನೋಡಾ.
ಉತ್ಪತ್ತಿ ಸ್ಥಿತಿ ಲಯವ ಮೀರುವ
ನಿತ್ಯ ಸದ್ಗುರು ಲಿಂಗ ಜಂಗಮ ಪೂಜಾಕ್ರಿಯೆ
ನಿತ್ಯಂ ಲಿಂಗಾರ್ಚನಂ ಯಸ್ಯ ನಿತ್ಯಂ ಜಂಗಮಪೂಜನಂ
ನಿತ್ಯಂ ಗುರುಪದಧ್ಯಾನಂ ನಿತ್ಯಂ ನಿತ್ಯಂ ನ ಸಂಶಯಃ
ಇಂತೆಂದುದಾಗಿ,
ತ್ರಿವಿಧಲಿಂಗಾರ್ಚನೆಯಂ ಮಾಡಲು ನಿತ್ಯಪದವಪ್ಪುದು ಸತ್ಯ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಎಂಬತ್ತುನಾಲ್ಕು ಲಕ್ಷ ಯೋನಿಯೊಳು ಜನಿಸುವ ಜನನವೆಲ್ಲರಿಗೆಯು.
ಆ ಜನ್ಮಾಂತರದ ಯೋನಿಗಳೊಳು ಜನಿಸದಾತನೆ ಯೋಗಿ.
ಆ ಯೋಗಿ ಜನ್ಮಾಂತರ ಕಳೆದಹನು, ಹೇಗೆಂದಡೆ:
ಶ್ರೀ ಗುರುಕರಪಲ್ಲವದಿಂದ ಬೆಸಲಾಯಿತ್ತಾಗಿ
ನ ಮುಕ್ತಿರ್ನ ಚ ಧರ್ಮಶ್ಚ ನ ಪುಣ್ಯಂ ಚ ನ ಪಾಪಕಂ
ನ ಕರ್ಮಜನ್ಮ ನೇಚ್ಛಾ ವೈ ಗುರೋಃ ಪಾದನಿರೀಕ್ಷಣಾತ್
ಎಂದುದಾಗಿ,
ಇಂತು ಯೋನಿಜನ್ಮಾಂತರವ ಕಳೆದ ಶರಣಂಗೆ
ಮತ್ತೆ ಭವಮಾಲೆಯುಂಟೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ?

ವಚನ
ಎನಗಾದ ಮಹಾಪದವನರಿಯದೆ ನಾನು ಬಳಲಿದೆನಯ್ಯಾ,
ಎನ್ನ ಪದವ ಈಗ ಅರಿದೆನು,
ಬಳಲಿಕೆ ಹೋಯಿತ್ತು ಪರಿಣಾಮವಾಯಿತ್ತು.
ಶಿವ ಶಿವಾ, ಶಿವನೆ ಕರ್ತನು, ನಾನು ಭೃತ್ಯನು
ಮಿಕ್ಕುವೆಲ್ಲಾ ಮಿಥ್ಯವೆಂದರಿದು
ಈ ಮಹಾಜ್ಞಾನಪದಕ್ಕೆ ಈ ಘನತರಸುಖಕ್ಕೆ
ಈ ಮಹಾಪರಿಣಾಮಕ್ಕೆ ಇನ್ನಾವುದೂ ಸರಿಯಲ್ಲ.
ಉಪಮಾತೀತ ವಾಙ್ಮನೋತೀತ ನೀನೆ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಎನ್ನ ಅಂತರಂಗದಲ್ಲಿ ಆವರ್ತಿಸಿ
ಬಹಿರಂಗದಲ್ಲಿ ವರ್ತಿಸಿ ತೋರುವೆಯಯ್ಯಾ.
ಎನ್ನ ಕಂಗಳ ಮೊದಲ_ಕೊನೆಯಲ್ಲಿ ನೀ ತೋರುತ್ತಿಪ್ಪೆಯಯ್ಯಾ.
ಲಿಂಗಂ ಪ್ರಕಾಶಮವ್ಯಕ್ತಂ ಲಿಂಗಂ ಪ್ರತ್ಯಕ್ಷಗೋಚರಂ
ಲಿಂಗಂ ಪ್ರಸನ್ನರೂಪಂ ಚ ತಲ್ಲಿಂಗಂ ಜ್ಯೋತಿರಾತ್ಮಕಂ
ಎನ್ನ ಬ್ರಹ್ಮರಂಧ್ರದಲ್ಲಿ ತೋರುವ ಜ್ಯೋತಿ ನೀನೇ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಎನ್ನ ಕರಸ್ಥಲದಲ್ಲಿಯ ಲಿಂಗಕ್ಕೆ ಬಂದ
ಪದಾರ್ಥಂಗಳನರ್ಪಿಸುವೆನೆ ? ಅರ್ಪಿಸಲಮ್ಮೆ.
ಅದೇನು ಕಾರಣವೆಂದಡೆ:
ಎನ್ನ ಕಂಗಳು ಕಂಡವಾಗಿ, ಎನ್ನ ಶ್ರೋತ್ರಗಳು ಕೇಳಿದವಾಗಿ,
ಎನ್ನ ಕೈಗಳು ಮುಟ್ಟಿದವಾಗಿ, ಎನ್ನ ನಾಸಿಕ ವಾಸಿಸಿತ್ತಾಗಿ,
ಎನ್ನ ಜಿಹ್ವೆ ರುಚಿಸಿತ್ತಾಗಿ.
ಇಂತಪ್ಪ ಎನ್ನ ಅಂಜಿಕೆಯ ನಿಮ್ಮ ಶರಣರು ಬಿಡಿಸಿದರಾಗಿ.
ಅದೆಂತೆಂದಡೆ:
ಎನ್ನ ಶ್ರೋತ್ರದಲ್ಲಿ ನಿಮ್ಮ ಸಾಹಿತ್ಯವ ಮಾಡಿದರಾಗಿ,
ಎನ್ನ ನೇತ್ರದಲ್ಲಿ ನಿಮ್ಮ ಸಾಹಿತ್ಯವ ಮಾಡಿದರಾಗಿ,
ಎನ್ನ ತ್ವಕ್ಕಿನಲ್ಲಿ ನಿಮ್ಮ ಸಾಹಿತ್ಯವ ಮಾಡಿದರಾಗಿ,
ಎನ್ನ ಜಿಹ್ವೆಯಲ್ಲಿ ನಿಮ್ಮ ಸಾಹಿತ್ಯವ ಮಾಡಿದರಾಗಿ,
ಎನ್ನ ನಾಸಿಕದಲ್ಲಿ ನಿಮ್ಮ ಸಾಹಿತ್ಯವ ಮಾಡಿದರಾಗಿ,
ಅಲ್ಲಲ್ಲಿ ಅರ್ಪಿತಂಗಳಾಗುತ್ತಿರ್ದವಾಗಿ, ಇನ್ನಂಜೆ ಅಂಜೆ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಎನ್ನ ಗತಿ, ನಿನ್ನ ಗತಿ
ಎನ್ನ ಕೇಳಿಕೆ, ನಿನ್ನ ಕೇಳಿಕೆ
ಎನ್ನ ನೋಟವೆ, ನಿನ್ನ ನೋಟ.
ಎನ್ನಂಗ ಸ್ಪರ್ಶನವೇ, ನಿನ್ನಂಗ ಸ್ಪರ್ಶನ
ಎನ್ನಂಗ ಸುಖಭೋಗವೇ, ನಿನ್ನಂಗ ಸುಖಭೋಗ.
ನನ್ನೊಳಗೆ ನೀನು, ನಿನ್ನೊಳಗೆ ನಾನು
ಎನ್ನ ಪ್ರಾಣ ನೀನು, ನಿನ್ನ ಪ್ರಾಣ ನಾನಾದ ಕಾರಣ
ಎನ್ನ ಸೋಂಕಿತ್ತೆಲ್ಲ ನಿನ್ನ ಪೂಜೆಯಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಎನ್ನ ನಾನರಿಯದೆ ಪುರಾಕೃತ ಕರ್ಮಫಲದಿಂ ಕರ್ಮವಶನಾಗಿ
ಅಜ್ಞಾನಿಯಾಗಿ ಮಹಾದೀನನಾಗಿದ್ದಲ್ಲಿ
ಪಾಪಪುಣ್ಯ ಸುಖದುಃಖಾದಿಕ್ರಿಯಾಕರ್ಮವೆಲ್ಲವು ಎನ್ನದು, ನಾನೇ ಸಂಸಾರಿ.
ಎನ್ನ ಸಂಸಾರವ ಕೆಡಿಸಿ, ಘೃಣಾಮೂರ್ತಿ ಸದ್ಗುರು ಕೃಪೆಮಾಡಿ
ಪೂರ್ವಜಾತವ ಕಳೆದು ಪುನರ್ಜಾತನ ಮಾಡಿ
ಶಿವಜ್ಞಾನಸಂಪನ್ನನ ಮಾಡೆ ಬದುಕಿದೆನು.
ಎನ್ನ ನಿಜವನರಿದೆನು ನಾನೇ ಗುರುಪುತ್ರನು.
ಕಾಯವು ಪ್ರಸಾದಕಾಯ, ಭಕ್ತಾಕಾಯನಾಗಿ ಕಾಯಲಿಂಗ
ಪ್ರಾಣವು ಲಿಂಗಪ್ರಾಣವಾಗಿ ಪ್ರಾಣಲಿಂಗವು
ಎನ್ನ ಶ್ರೀಗುರುಲಿಂಗ ಎನ್ನ ಜಂಗಮಲಿಂಗವು
ಪ್ರಸಾದ ಲಿಂಗವು ಮಂತ್ರಲಿಂಗವು
ಶ್ರೀವಿಭೂತಿ ಲಿಂಗವು ಮಹಾಜ್ಞಾನ ತಾನೆ ಲಿಂಗವು.
ಸಂಸಾರದಲ್ಲಿ ಕೆಡುವ ಪ್ರಾಣಿಗಳ ಕೆಡದಂತೆ ಮಾಡಿದನು
ಬೇಡಿತ್ತ ಕೊಡುವ ಲಿಂಗವನು ಬೇಡಿಕೊಳ್ಳಿರೆ.
ಅನಾಥನಾಥನು ಅನಾಥಬಂಧುವು
ವರದಮೂರ್ತಿಯು ದಾನಗುಣಶೀಲನು
ಭಕ್ತದೇಹಿಕ ದೇವನು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಎನ್ನ ಮನಕ್ಕೆ ಮತ್ತೊಂದ ನೆನೆಯಲು ತೆರಹಿಲ್ಲಯ್ಯಾ
ಮಹಾದೇವನು ನೀನು, ಎನ್ನ ಮನವನವಗ್ರಹಿಸಿದೆ.
ಆ ಮನವು ನಿನ್ನನೇ ಅವಗ್ರಹಿಸಿತ್ತಾಗಿ.
ಎನ್ನ ವಾಕ್ಕಿಂಗೆ ಮತ್ತೊಂದ ನುಡಿಯಲು ತೆರಹಿಲ್ಲಯ್ಯಾ
ಮಹಾಮಂತ್ರಮಯ ನೀನು, ಎನ್ನ ವಾಕ್ಕನವಗ್ರಹಿಸಿದೆ.
ಎನ್ನ ಮಂತ್ರ ನಿನ್ನನೇ ಅವಗ್ರಹಿಸಿತ್ತಾಗಿ.
ಎನ್ನ ಕಾಯಕ್ಕೆ ಮತ್ತೊಂದ ಭೋಗಿಸೆ ತೆರಹಿಲ್ಲಯ್ಯ.
ಮಹಾಪ್ರಸಾದರೂಪನು ನೀನು, ಎನ್ನ ಕಾಯವನವಗ್ರಹಿಸಿದೆ,
ಆ ಕಾಯವು ನಿನ್ನನೇ ಅವಗ್ರಹಿಸಿದುದಾಗಿ.
ಇಂತು ಮನೋವಾಕ್ಕಾಯದ ಅಂತರಂಗಬಹಿರಂಗದ ಒಳಹೊರಗೂ
ಸರ್ವಾಂಗಲಿಂಗವಾದ ಕಾರಣ
ಮನೋವಾಕ್ಕಾಯದ ಸ್ಥಿತಿಗತಿ ನೀನೆ ಅಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಎನ್ನ ಸದ್ಗುರುವು ಮಾಡುವ ಗುರುತ್ವ ಉಪಮಾತೀತವಯ್ಯ
ಅದೆಂತೆಂದಡೆ:ಎನ್ನ ನೇತ್ರದಲ್ಲಿ ತನ್ನ ರೂಪ ತುಂಬಿ,
ಎನ್ನ ನೇತ್ರವನು ಗುರುವು ಮಾಡಿದ.
ಎನ್ನ ಶ್ರೋತ್ರದಲ್ಲಿ ಮಹಾಮಂತ್ರವ ತುಂಬಿ,
ಎನ್ನ ಶ್ರೋತ್ರವನು ಗುರುವು ಮಾಡಿದ.
ಎನ್ನ ಘ್ರಾಣದಲ್ಲಿ ಗುರುಪಾದಪದ್ಮದಲ್ಲಿಹ ಮಹಾಗಂಧವ ತುಂಬಿ
ಎನ್ನ ಘ್ರಾಣವನು ಗುರುವು ಮಾಡಿದ.
ಎನ್ನ ಜಿಹ್ವೆಯಲ್ಲಿ ತನ್ನ ಕರುಣಪ್ರಸಾದವ ತುಂಬಿ,
ಎನ್ನ ಜಿಹ್ವೆಯನು ಗುರುವು ಮಾಡಿದ.
ಎನ್ನ ಕಾಯವನು ಭಕ್ತಕಾಯ ಮಮಕಾಯವೆಂದು ಪ್ರಸಾದಕಾಯವೆಂದೆನಿಸಿ,
ಎನ್ನ ಕಾಯವನು ಗುರುವು ಮಾಡಿದ.
ಎನ್ನ ಪ್ರಾಣದಲ್ಲಿ ಲಿಂಗಪ್ರಾಣಸಂಬಂಧವ ಮಾಡಿ
ಎನ್ನ ಪ್ರಾಣವನು ಗುರುವು ಮಾಡಿದ.
ಇಂತು ಎನ್ನ ಅಂತರಂಗ ಬಹಿರಂಗವನು ಗುರುವು ಮಾಡಿ,
ಸರ್ವಾಂಗವನೂ ಗುಪ್ತವ ಮಾಡಿದ ಮಹಾಶ್ರೀಗುರುವಿಂಗೆ
ನಾನಿನ್ನೇನ ಮಾಡುವೆನಯ್ಯ :ಮಾಡುವೆನಯ್ಯ ಗುರು ಪೂಜೆಯನು
ಆವಾವ ದ್ರವ್ಯಂಗಳನು ಆವಾವ ಪದಾರ್ಥಂಗಳನು,
ಆವಾವ ಪುಷ್ಪಫಲಾದಿಗಳನು ವಿಚಾರಿಸಿ ನೋಡಿದಡೆ ಅವಾವಕ್ಕು ಗುರುತ್ವವಿಲ್ಲ
ಸರ್ವದ್ರವ್ಯ ಮೂಲ ಮನ ಸರ್ವಪದಾರ್ಥಮೂಲ ಮನ
ಸರ್ವರಸ ಪುಷ್ಪಫಲಾದಿಗಳೆಲ್ಲವಕ್ಕೆಯು ಮೂಲಿಗ ಮನವು
ಇದು ಕಾರಣ ಸರ್ವಗುರುತ್ವವನುಳ್ಳ ಎನ್ನ ಮನೋವಾಕ್ಕಾಯ
ಸಹಿತವಾಗಿ ಗುರುವಿಂಗಿತ್ತು
ಎನ್ನ ಶಿರವನು ಶ್ರೀಗುರುವಿನ ದರ್ಶನ ಸ್ಪರ್ಶನವ ಮಾಡಿ
ಸುಖಿಯಾಗಿಪ್ಪೆನಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಎನ್ನ ಸರ್ವಾಂಗದಲ್ಲಿ ಲಿಂಗವೈದಾನೆ, ಐದಾನೆ,
ಎನ್ನ ಮನವನರಿಯದೆ ಕೆಟ್ಟೆ ಕೆಟ್ಟೆನಯ್ಯಾ.
ಎನ್ನ ಅಂತರಂಗ ಬಹಿರಂಗದಲ್ಲಿ ಲಿಂಗವೈದಾನೆ,
ಮನವನರಿಯದೆ ಕೆಟ್ಟೆ ಕೆಟ್ಟೆ.
ವಿಶ್ವಾಸದಿಂ ಗ್ರಹಿಸಲೊಲ್ಲದೆ ಕೆಟ್ಟೆ ಕೆಟ್ಟೆನಯ್ಯಾ.
ಈ ಮನ ವಿಶ್ವಾಸದಿಂದ ಗ್ರಹಿಸಿದಡೆ
ಸತ್ಯನಹೆ ನಿತ್ಯನಹೆ ಮುಕ್ತನಹೆ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಎನ್ನಂಗದಲ್ಲಿ ನಿನಗೆ ಮಜ್ಜನ,
ಎನ್ನ ಲಲಾಟದಲ್ಲಿ ನಿನಗೆ ಗಂಧಾಕ್ಷತೆ,
ಎನ್ನ ತುರುಬಿನಲ್ಲಿ ನಿನಗೆ ಕುಸುಮಪೂಜೆ.
ಎನ್ನ ನೇತ್ರದಲ್ಲಿ ನಿನಗೆ ನಾನಾರೂಪು ವಿಚಿತ್ರವಿನೋದ,
ಎನ್ನ ಶ್ರೋತ್ರದಲ್ಲಿ ನಿನಗೆ ಪಂಚಮಹಾವಾದ್ಯ ಕೇಳಿಕೆ,
ಎನ್ನ ನಾಸಿಕದಲ್ಲಿ ನಿನಗೆ ಸುಗಂಧ, ಧೂಪಪರಿಮಳ,
ಎನ್ನ ಜಿಹ್ವೆಯಲ್ಲಿ ನಿನಗೆ ಷಡ್ರಸಾನ್ನನೈವೇದ್ಯ,
ಎನ್ನ ತ್ವಕ್ಕಿನಲ್ಲಿ ನಿನಗೆ ವಸ್ತ್ರಾಭರಣಾಲಂಕಾರಪೂಜೆ,
ಎನ್ನ ಸಚ್ಚಿದಾನಂದ ಸಜ್ಜೆಗೃಹದಲ್ಲಿ ನೀನು
ಸ್ಪರ್ಶನಂಗೆಯ್ದು ನೆರೆದಿಪ್ಪೆಯಾಗಿ ನೀ ನಾನೆಂಬೆರಡಳಿದು
ತಾನು ತಾನಾದ ಘನವನೇನೆಂಬೆನು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಎನ್ನೊಳಗೆ ನೀನು ಪ್ರವೇಶ, ನಿನ್ನೊಳಗೆ ನಾನು ಪ್ರವೇಶ,
ದೇವ ನೀನಿಲ್ಲದಿಲ್ಲ, ಭಕ್ತ ನಾನಲ್ಲದಿಲ್ಲ.
ಈ ಪರಿಯ ಮಾಡುವರಿನ್ನಾರು ಹೇಳಾ ?
ಎನಗೆ ನೀನೇ ಗತಿ, ನಿನಗೆ ನಾನೇ ಗತಿ
ಇನ್ನೇಕೆ ಜವನಿಕೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ?

ವಚನ
ಎರಡ ನುಡಿದ ವಿಷ್ಣುವೇನಾದ ? ಎರಡ ನುಡಿದ ಬ್ರಹ್ಮನೇನಾದ ?
ಎರಡ ನುಡಿದ ಇಂದ್ರನೇನಾದ ? ಎರಡ ನುಡಿದ ದಕ್ಷನೇನಾದ ?
ಎರಡ ನುಡಿದ ವ್ಯಾಸನೇನಾದನೆಂದು,
ಇವರುಗಳು ನುಡಿದ ಪರಿಯನೂ, ಅವರ ಪರಿಯನೂ
ವಿಚಾರಿಸಿ ನೋಡಿದಡೆ, ಶಿವನೇ ಕರ್ತನೆಂದು ನುಡಿದು,
ಮರಳಿ `ಅಹಂ ಕರ್ತಾ’ ಎಂದು ನುಡಿದು ಶಾಸ್ತಿಗೊಳಗಾದರು,
ಮಾನಹಾನಿಯಾದರು ನೋಡಿರೇ.
ವಿಶ್ವವೆಲ್ಲವೂ ಪಶು, ಶಿವನೊಬ್ಬನೇ ಪತಿ
ಸರ್ವವೆಲ್ಲವೂ ಶಕ್ತಿರೂಪು, ಶಿವನೊಬ್ಬನೇ ಪುರುಷನು ಎಂದರಿದು
ಸರ್ವರೂ ಭೃತ್ಯರು, ಶಿವನೊಬ್ಬನೇ ಕರ್ತನೆಂದರಿದು
ಮನ ವಚನ ಒಂದಾಗಿ ನೆನೆವುತ್ತಿಪ್ಪವರು
ಶಿವನೊಂದಾದರಯ್ಯಾ. ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ,
ದೇವನೊಬ್ಬನೆ, ಎರಡಲ್ಲ.

ವಚನ
ಎಲ್ಲಾ ವ್ರತಂಗಳಿಗೆ ಮೇಲಾದ ವ್ರತ ವಿಭೂತಿಯ ವ್ರತ.
ಸಕಲ ದುಃಖದುರಿತಗಳ ಪರಿಹಾರವ ಮಾಳ್ಪುದೀ ಭಸ್ಮವ್ರತ.
ತನುಶುದ್ಧತೆ ಮನಶುದ್ಧತೆ, ಶಿವಾತ್ಮೈಕ್ಯಮಾರ್ಗ ಸೋಪಾನಕೆ
ಶ್ರೀವಿಭೂತಿ ಮುಖ್ಯವಯ್ಯ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಏಕ ಏವ ರುದ್ರೋ ನ ದ್ವಿತೀಯಃ’ ನೆಂದು ಶ್ರುತಿ ಸಾರುತ್ತಿರೆ,
ಮರಳಿ ವಿಷ್ಣುವಲ್ಲದೆ ದೈವವಿಲ್ಲವೆಂಬಿರಿ.
ಅಚ್ಯುತಂಗೆ ಭವವುಂಟೆಂಬುದಕ್ಕೆ
ಮತ್ಸ್ಯಕೂರ್ಮವರಾಹನಾರಸಿಂಹಾವತಾರವೆ ಸಾಕ್ಷಿ.
ಹರಿ ಹರನ ಭೃತ್ಯನೆಂಬುದಕ್ಕೆ
ರಾಮೇಶ್ವರಾದಿಯಾದ ಪ್ರತಿಷ್ಠೆಯೇ ಸಾಕ್ಷಿ.
ಇಂತಪ್ಪ ಹರಿಯನು ಹರಂಗೆ ಸರಿಯೆಂದು ನುಡಿವುತ್ತಿಹ ವಿಪ್ರರ ಬಾಯಲ್ಲಿ
ಸುರಿಯವೆ ಬಾಲಹುಳುಗಳು.
ಹರಿಗೆ ಹತ್ತು ಪ್ರಳಯ, ಬ್ರಹ್ಮಂಗೆ ಅನಂತಪ್ರಳಯ.
ನಮ್ಮ ಹರಂಗೆ ಪ್ರಳಯ ಉಂಟಾದರೆ, ಬಲ್ಲರೆ ನೀವು ಹೇಳಿರೆ !
ನಿಮ್ಮ ವೇದದಲ್ಲಿ ಹೇಳಿಸಿರೆ !
ಅರಿಯದಿರ್ದಡೆ ಸತ್ತ ಹಾಂಗೆ ಸುಮ್ಮನಿರಿರೆ.
ಇದು ಕಾರಣ
ನಮ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರದೇವನೊಬ್ಬನೆ, ಎರಡಿಲ್ಲ.

ವಚನ
ಏಕ ಏವ ರುದ್ರೋ ನ ದ್ವಿತೀಯಾಯ ತಸ್ಥೇ’
ಎಂಬ ಶ್ರುತಿಮತವಿಡಿದು ಏಕಲಿಂಗನಿಷ್ಠಾಪರನಾದನು ಮಾಹೇಶ್ವರನು.
ಶಿವ ಏಕೋ ಧ್ಯೇಯಃ ಶಿವಂಕರಃ ಸರ್ವಮನ್ಯತ್ಪರಿತ್ಯಾಜ್ಯಂ’ ಎಂಬ ಶ್ರುತಿ ಮತವಿಡಿದು ಅನ್ಯದೈವಂಗಳಂ ಬಿಟ್ಟು ನಿಮ್ಮನೇ ಧ್ಯಾನಿಸುವನಯ್ಯಾ, ನಿರಂತರ ನಿಮ್ಮ ಮಾಹೇಶ್ವರನು. ಭರ್ಗೊ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್’
ಎಂಬ ಶ್ರುತಿಮತವಿಡಿದು ನಿಮ್ಮನೆ ಉಪಾಸ್ತಿಯ ಮಾಡಿ
ಲಿಂಗಾರ್ಚನೆಯ ಮಾಡುವರಯ್ಯಾ ನಿಮ್ಮ ಮಾಹೇಶ್ವರರು.
ಅದು ಕಾರಣ ನಿಮ್ಮ ಐಕ್ಯವ ನಿಮ್ಮ ಮಾಹೇಶ್ವರನೆ ಬಲ್ಲ.
ನಿಮ್ಮ ಮಾಹೇಶ್ವರಾಧಿಕ್ಯವ ನೀವೇ ಬಲ್ಲಿರಿ.
ಉಳಿದ ದೇವ ದಾನವ ಮಾನವಾದಿಗಳು ಅರಿಯಬಹುದೆ ?
ನಿಮ್ಮ ಘನವನು, ನಿಮ್ಮ ಮಾಹೇಶ್ವರರ ಘನವನು
ಶಿವನೆ ಬಲ್ಲ, ಶಿವನ ಮೀರುವ ಪದವುಂಟೆ ?
ಸಕಲಬ್ರಹ್ಮಾಂಡವನೂ ಅವಗ್ರಹಿಸಿಕೊಂಡಿಪ್ಪನಾಗಿ ಶಿವನು,
ಆ ಶಿವನನವಗ್ರಹಿಸಿಕೊಂಡಿಪ್ಪರು ಮಾಹೇಶ್ವರರು
ಅಣುಮಹತ್ತಿನೊಳಗೆ ಸಂಪೂರ್ಣರಪ್ಪರು.
‘ಅಣೋರಣೀಯಾನ್ಮಹತೋ ಮಹೀಯಾನ್’
ಎಂದುದಾಗಿ,
`ಯಥಾ ಶಿವಸ್ತಥಾ ಭಕ್ತಃ’
ಎಂದುದಾಗಿ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಯ್ಯನ ಶರಣರ
ಮೀರಿದ ಪದ ಉಂಟಾದರೆ ಬಲ್ಲರೆ ಹೇಳ ?

ವಚನ
ಏಕತತ್ತ್ವ ತ್ರಿತತ್ತ್ವ ಪಂಚತತ್ತ್ವ ಪಂಚವಿಂಶತಿತತ್ತ್ವ ಷಟ್ತ್ರಿಂಶತ್ ತತ್ತ್ವ
ಇಂತೀ ತತ್ತ್ವ ಂಗಳೆಲ್ಲವನೂ ಗರ್ಬಿಕರಿಸಿಕೊಂಡಿಪ್ಪ
ಈ ತತ್ತ್ವಂಗಳೆಲ್ಲವಕ್ಕೆಯೂ ಅದಿಕವಾಗಿಪ್ಪ ಮಹಾತತ್ತ್ವವೂ
ನ ಗುರೋರದಿಕಂ ನ ಗುರೋರದಿಕಂ’ ಎಂದುದಾಗಿ ನಾಸ್ತಿ ತತ್ತ್ವಂ ಗುರೋಃ ಪರಂ’ ಎಂದುದಾಗಿ
‘ಅದ್ವೈತಂ ತ್ರಿಷು ಲೋಕೇಷು ನಾದ್ವೈತಂ ಗುರುಣಾ ಸಹ’ ಎಂದುದಾಗಿ
`ಗುರುದೇವೋ ಮಹಾದೇವೋ’ ಎಂದುದಾಗಿ
ಶ್ರೀಗುರುತತ್ತ್ವವೇ ಪರತತ್ತ್ವವು.
ಶಿವ ಶಿವಾ ಸಕಲವೇದ ಶಾಸ್ತ್ರಪುರಾಣ ಆಗಮ
ಅಷ್ಟಾದಶವಿದ್ಯಂಗಳು ಸರ್ವವಿದ್ಯಂಗಳು
ಸಪ್ತಕೋಟಿಮಹಾಮಂತ್ರಂಗಳು ಉಪಮಂತ್ರಂಗಳು
ಅನಂತಕೋಟಿಗಳನೂ ಗರ್ಭಿಕರಿಸಿಕೊಂಡಿಪ್ಪ
ಇವಕೆ ಮಾತೃಸ್ಥಾನವಾಗಿ,
ಇವಕೆ ಉತ್ಪತ್ತಿ ಸ್ಥಿತಿ ಲಯ ಕಾರಣಂಗಳಿಗೆ ಕಾರಣವಾಗಿಪ್ಪ
ಮಹಾತತ್ತ್ವ ಮಹಾಮಂತ್ರರಾಜನು, ಶ್ರೀಮೂಲಮಂತ್ರವು.
ಈ ಮಹಾತತ್ವ್ತವು ಏಕವಾದ ಮಹಾಲಿಂಗವು.
ಈ ಮಹಾಲಿಂಗವೆ ಅಂಗವಾಗಿಪ್ಪ ಮಹತ್ತಪ್ಪ ಮಹಾಸದ್ಭಕ್ತನು.
ಆತನೇ ತತ್ತ್ವಜ್ಞನು, ಆತನೇ ತತ್ತ್ವಮಯನು, ಆತನೇ ತತ್ತ್ವಮೂರ್ತಿ.
ಈ ಮಹಾಮಂತ್ರ ಮುಖೋದ್ಗತವಾದ ಮಹಾಭಕ್ತನು.
ಆತನೇ ವೇದವಿತ್ತು, ಆತನೇ ಶಾಸ್ತ್ರಜ್ಞನು, ಆತನೇ ಪುರಾಣಿಕನು,
ಆತನೇ ಆಗಮಜ್ಞನು, ಆತನೇ ಸರ್ವಜ್ಞನು.
ಈ ಮಹಾಘನ ಮಹತ್ತನೊಳಕೊಂಡ ಸದ್ಭಕ್ತಂಗೆ
ಇತರ ತತ್ತ್ವಂಗಳನೂ ಇತರ ದೇವತೆಗಳನೂ
ಇತರ ದೇವದಾನವಮಾನವರುಗಳನೂ
ಇತರ ಮಂತ್ರಂಗಳನೂ ಇತರ ಪದಂಗಳನೂ ಸರಿ ಎನಬಹುದೆ ?
ಶಿವ ಶಿವಾ ಸರಿ ಎಂದಡೆ ಮಹಾದೋಷವು.
ಈ ಮಹಾಭಕ್ತನೇ ಉಪಮಾತೀತನು ವಾಙ್ಮನೋತೀತನು.
ಈ ಮಹಾದೇವನ ಭಕ್ತನೇ ಮಹಾದೇವನು.
ಈ ಮಹಾಭಕ್ತನ ಪೂಜೆಯೇ ಶಿವಲಿಂಗಪೂಜೆ.
ಈ ಮಹಾಭಕ್ತನ ಪದವೇ ಪರಮಪದವಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಏಕಮೂರ್ತಿ ತ್ರಿಧಾ ಭೇದವಾಯಿತ್ತು
ಗುರುಲಿಂಗಜಂಗಮವೆಂಬುದನರಿಯಿರೆ.
ಅರಿದು ಮತ್ತೇಕೆ ಮರೆದಿರಿ ?
ಲಿಂಗರೂಪಿನಲ್ಲಿ ಹಿರಿದ ಕೊಟ್ಟು
ಜಂಗಮರೂಪಿನಲ್ಲಿ ಕಿರಿದ ಬೇಡಿಕೊಂಡು
ಗುರುರೂಪಿನಲ್ಲಿ ಹಿರಿದು ಪರಿಣಾಮಿಸಿ ಮುಕ್ತಿಯ ಕೊಡುವನು.
ಅಕಟಕಟ ಭಕ್ತಿಯನರಿಯರು, ಮುಕ್ತಿಗೆಟ್ಟಿತ್ತು.
ಕೊಡುವವನು ಶಿವನು, ಶಿವನೆಂದರಿದು ಬದುಕಿರೆ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಏನು ಮನ ಶುದ್ಧವಾದಡೆ
ಸ್ವಲ್ಪದ್ರವ್ಯ ಘನತರವಾಯಿತ್ತು ನೋಡಿರೆ
ಮೋಳಿಗೆಯ ಮಾರತಂದೆಗೆ, ನುಲಿಯ ಚಂದಯ್ಯಂಗೆ
ಆಯ್ದಕ್ಕಿಯ ಮಾರಣ್ಣಗಳಿಗೆ.
ತನು ಮನ ಶುದ್ಧವಲ್ಲದಡೆ
ಬಹಳತರ ಮಹದೈಶ್ವರ್ಯ ಸ್ವಲ್ಪವಾಗಿ ಕರಗಿ
ಕೆಟ್ಟು ಹೋಗದೆ ರಾವಣಂಗೆರಿ ಇಂಗಿ ಹೋಗದೆ ದಕ್ಷಂಗೆರಿ
ಉರಿದು ಉರಿದು ಹೋಗದೆ ತ್ರಿಪುರದಾನವರಿಗೆರಿ
ಇದನರಿತು ತನು ಮನ ಶುದ್ಧವಾಗಲು
ತೃಣ ಮಹಾಮೇರುಪರ್ವತವಪ್ಪುದಯ್ಯಾ.
ಇಹದಲೂ ಮಹಾಗ್ರಾಸ, ಪರದಲೂ ಮಹಾಮುಕ್ತಿ,
ಮಹಾಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಒಂದೇ ವಸ್ತು ತನ್ನ ಲೀಲೆಯಿಂದ
ಪರಮಾತ್ಮ ಜೀವಾತ್ಮನಾಯಿತ್ತು.
ಆ ಪರಮಾತ್ಮನೆ ಲಿಂಗ, ಜೀವಾತ್ಮನೆ ಅಂಗ, ಸಂಗವೆ ಏಕಾತ್ಮ.
ತತ್ಪದವೆ ಪರಮಾತ್ಮ, ತ್ವಂ ಪದವೆ ಜೀವಾತ್ಮ,
ಅಸಿ ಪದವೆ ತಾದಾತ್ಮ್ಯವಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಒಳಗೊಂದು ಗಾಲಿ, ಹೊರಗೊಂದು ಗಾಲಿ
ಎರಡಕ್ಕೆ ಹೂಡಿದುದೊಂದು ಹರಿಯಚ್ಚು,
ಮೇಲೆ ಹಾಸಿದ ನೀಳ ಚಾಕದ ಕುರುಗುಣಿಯ ಕೊಂಬಿಂಗೆ ಈಚೆರಡು.
ಏಳು ಹುರಿಯ ಬಲುಮಿಣಿಯಿಂ ಆಳವನಿಕ್ಕಿದ ಕಾಮನ ನೊಗ.
ಅರೆತ್ತು ಹೂಡಿ, ಹಾಸು ದಡಿಕೆ ಒಂದು, ಮೇಲು ದಡಿಕೆ ಎರಡು,
ಒಂದು ದೊಡ್ಡದು, ಒಂದು ಚಿಕ್ಕದು, ಒಂದುರೆ ಚಿಕ್ಕದು,
ಬಂಡಿಯ ಮೇಲೊಬ್ಬ ಮೊದಲೆತ್ತ ಹೊಡೆವ,
ತಲೆಯಾರು ನಡುವಣಾರು ಹೊಡೆವರಿಬ್ಬರು.
ಬಂಡಿ ನಡೆವ ಬಟ್ಟೆಯಯ್ದು, ತುಂಬಿದ ಭಂಡವೈದು,
ಐದು ಬಟ್ಟೆಯಂ ತಪ್ಪಿಸಿ ಆರು ಬಟ್ಟೆಯಲಿ ನಡೆಸಿ,
ಹೇರಿದ ಭಂಡವನೊಡೆಯಂಗೊಪ್ಪಿಸಲರಿಯದೆ,
ಎಡೆಯ ಕಡಿದು ಭುಂಜಿಸಿ ಒಡೆಯಂಗೆ ದೂರಾಗಿ,
ಬಹುಮುಖದ ದಂಡಣೆಗೊಳಗಾಗಿ ಬಹಳ ಮುಖದಲ್ಲಿ ಬಂದು,
ಹೇರಡವಿಯ ಕಗ್ಗತ್ತಲಲ್ಲಿ ತೊಳಲಿ ಭ್ರಮಿಸುವ ಹೊಲಬರಿಯದೆ
ಹೊಲಬುಗೆಟ್ಟ ಮಲಮಾಯಾಧಿಕರು
ನಿಮ್ಮನೆತ್ತ ಬಲ್ಲರಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾರಿ

ವಚನ
ಓಂ ನಮಃ ಶಿವಾಯ ಎಂಬುದೆ ಆಚಾರಲಿಂಗ,
ಓಂ ನಮಃ ಶಿವಾಯ ಎಂಬುದೆ ಗುರುಲಿಂಗ,
ಓಂ ನಮಃ ಶಿವಾಯ ಎಂಬುದೆ ಶಿವಲಿಂಗ,
ಓಂ ನಮಃ ಶಿವಾಯ ಎಂಬುದೆ ಚರಲಿಂಗ,
ಓಂ ನಮಃ ಶಿವಾಯ ಎಂಬುದೆ ಪ್ರಸಾದಲಿಂಗ,
ಓಂ ನಮಃ ಶಿವಾಯ ಎಂಬುದೆ ಮಹಾಲಿಂಗ.
ಓಂ ನಮಃ ಶಿವಾಯ ಓಂ ನಮಃ ಶಿವಾಯ ಎಂದೆನಲು ಪರಶಿವನು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಓಂ ನಮಃ ಶಿವಾಯ ಎಂಬುದೆ ಋಷಿ,
ಓಂ ನಮಃ ಶಿವಾಯ ಎಂಬುದೆ ಮಂತ್ರ,
ಓಂ ನಮಃ ಶಿವಾಯ ಓಂ ನಮಃ ಶಿವಾಯ ಎಂದೆನೆ ಸದ್ಯೋನ್ಮುಕ್ತಿ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಓಂ ನಮಃ ಶಿವಾಯ ಎಂಬುದೆ ಮಂತ್ರ,
ಓಂ ನಮಃ ಶಿವಾಯ ಎಂಬುದೆ ತಂತ್ರ,
ಓಂ ನಮಃ ಶಿವಾಯ ಎಂಬುದೆ ಯಂತ್ರ,
ಓಂ ನಮಃ ಶಿವಾಯ ಎಂಬುದೆ ವಶ್ಯ.
ಇದು ಕಾರಣ,
ಓಂ ನಮಃ ಶಿವಾಯ ಎಂಬುದೆ ಸಕಲಸಿದ್ಧಿ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಓಂ ನಮಃ ಶಿವಾಯ ಎಂಬುದೆ ವೇದ,
ಓಂ ನಮಃ ಶಿವಾಯ ಎಂಬುದೆ ಶಾಸ್ತ್ರ,
ಓಂ ನಮಃ ಶಿವಾಯ ಎಂಬುದೆ ಪುರಾಣ,
ಓಂ ನಮಃ ಶಿವಾಯ ಎಂಬುದೆ ಆಗಮ,
ಓಂ ನಮಃ ಶಿವಾಯ ಎಂಬುದೆ ಸಕಲಕಲೆ.
ಓಂ ನಮಃ ಶಿವಾಯ, ಓಂ ನಮಃ ಶಿವಾಯ ಎಂದೆನಲು ಸರ್ವಜ್ಞ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಓಂ ನಮಃ ಶಿವಾಯ ಓಂ ನಮಃ ಶಿವಾಯ
ಎನ್ನದಿದ್ದಡೆ ಬಂಧನ,
ಓಂ ನಮಃ ಶಿವಾಯ ಓಂ ನಮಃ ಶಿವಾಯ
ಎಂದಡೆ ಮೋಕ್ಷ, ಅದೆಂತೆಂದಡೆ:
ಷಡಕ್ಷರಜಪಾನ್ನಾಸ್ತಿ ಸರ್ವೇಷಾಂ ಬಂಧನಂ ತಥಾ
ತನ್ಮಂತ್ರಜಪತೋ ಭಕ್ತ್ಯಾ ಸದ್ಯೋ ಮೋಕ್ಷೋ ನ ಸಂಶಯಃ
ಎಂದುದಾಗಿ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಯ್ಯಾ,
ಬಂಧನ ಮೋಕ್ಷವು ಓಂ ನಮಃ ಶಿವಾಯ.

ವಚನ
ಓಂ ನಮಃ ಶಿವಾಯ, ಓಂ ನಮಃ ಶಿವಾಯ ಎಂಬುದೆ ಛಂದ. .
ಓಂ ನಮಃ ಶಿವಾಯ, ಓಂ ನಮಃ ಶಿವಾಯ ಎಂಬುದೆ ಋಷಿ ತಾನು.
ಓಂ ನಮಃ ಶಿವಾಯ, ಓಂ ನಮಃ ಶಿವಾಯ ಎಂಬುದೆ ಅಧಿದೇವತೆ.
ಓಂ ನಮಃ ಶಿವಾಯ, ಓಂ ನಮಃ ಶಿವಾಯ ಎಂದೆನಲು ಸದ್ಯೋನ್ಮುಕ್ತಿ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಓಂಕಾರ ಬಿಂದು ಸಂಯುಕ್ತಂ ನಿತ್ಯಂ ಧ್ಯಾಯಂತಿ ಯೋಗಿಯಃ
ಕಾಮದಂ ಮೋಕ್ಷದಂ ಚೈವ ಓಂಕಾರಾಯ ನಮೋ ನಮಃ
ನಮಂತಿ ಋಷಯೋ ದೇವಾ ನಮಂತ್ಯಪ್ಸರಸಾಂಗಣಾಃ
ನಮಂತಿ ದೇವಾ ದೇವೇಶಂ ನ’ ಕಾರಾಯ ನಮೋ ನಮಃ ಮಹಾದೇವಂ ಮಹಾತ್ಮಾನಂ ಮಹಾಜ್ಞಾನಪರಾಯಣಂ ಮಹಾಪಾಪ ಹರಂ ನಿತ್ಯಂಮ’ ಕಾರಾಯ ನಮೋ ನಮಃ
ಶಿವಂ ಶಾಂತಧರಂ ದೇವಂ ಲೋಕಾನುಗ್ರಹ ಕಾರಣಂ
ಶಿವಮೇಕಂ ಪರಬ್ರಹ್ಮ ಶಿ’ಕಾರಾಯ ನಮೋ ನಮಃ ವಾಹನಂ ವಷಭೋ ಯಸ್ಯ ವಾಸುಕಿಃ ಕಂಠಭೂಷಣಂ ವಾಮಶಕ್ತಿಧರಂ ದೇವಂವ’ಕಾರಾಯ ನಮೋ ನಮಃ
ಯತ್ರ ಯತ್ರ ಸ್ಥಿತೋ ದೇವಃ ಸರ್ವವ್ಯಾಪಿ ಮಹೇಶ್ವರಃ
ಯೋ ಗುರುಃ ಸರ್ವದೇವಾನಾಂ `ಯ’ಕಾರಾಯ ನಮೋ ನಮಃ
ವೇದ:
ನಕಾರಾಯ ಮಕಾರಾಯ ಶಿಕಾರಾಯ ತಥೈವ ಚ
ವಕಾರಾಯ ಯಕಾರಾಯ ಓಂಕಾರಾಯ ನಮೋ ನಮಃ
ವೇದಮಾತಾ ಚ ಗಾಯಿತ್ರೀ ಮಂತ್ರಮಾತಾ ಷಡಕ್ಷರೀ
ಸರ್ವದೇವಪಿತಾ ಶಂಭುಃ ಭರ್ಗೋ ದೇವಸ್ಯ ಧೀಮಹಿ
ಷಡಕ್ಷರಮಿದಂ ಪುಣ್ಯಂ ಯಃ ಪಠತ್ ಶಿವಸನ್ನಿಧೌ
ಶಿವಲೋಕಮವಾಪ್ನೋತಿ ಶಿವೇನ ಸಹ ಮೋದತೆ
ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಎನ್ನದಿರ್ದಡೆ
ಭವಬಂಧನ ಇಹಪರ ಸಂಸಾರಾದಿ ಪ್ರಪಂಚಬಂಧನ ಬಿಡದು.
ಓಂ ನಮಃ ಶಿವಾಯ ಓಂ ನಮಃ ಶಿವಾಯ ಎಂದಡೆ ಮೋಕ್ಷಸಿದ್ಧಿ.
ಸಾಕ್ಷಿ:
ಷಡಕ್ಷರಜಪಾನ್ನಾಸ್ತಿ ಸರ್ವೇಷಾಂ ಬಂಧನಂ ತಥಾ
ತನ್ಮಂತ್ರಂ ಚ ಜಪನ್ ಭಕ್ತ್ಯಾ ಸದ್ಯೋ ಮುಕ್ತೋ ನ ಸಂಶಯಃ
ಎಂಬುದಾಗಿ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಯ್ಯ ಬಂದು
ಮೋಕ್ಷ ತಾನೇ ಓಂ ನಮಃ ಶಿವಾಯ.

ವಚನ
ಓಂಕಾರವೆಂಬ ವೃಕ್ಷದಲ್ಲಿ
ಋಗ್ವೇದ ಯಜುರ್ವೇದ ಸಾಮವೇದ ಅಥರ್ವಣವೇದಗಳೆಂಬ
ನಾಲ್ಕು ಶಾಖೆಗಳು,
ಅನಂತವೈ ಉಪವೇದಂಗಳೆಂಬ ಉಪಶಾಖೆಗಳು,
ಶಾಸ್ತ್ರಂಗಳೆಂಬ ಅಂಕುರ ಪಲ್ಲವ, ಪುರಾಣಂಗಳೆಂಬ ಪುಷ್ಪ
ಆಗಮಂಗಳೆಂಬ ಕಾಯಿ ಬಲಿದು,
ಶ್ರೀ ಪಂಚಾಕ್ಷರಿ ಎಂಬ ಮಧುರಪಣ್ಣುಗಳು.
ಅಗಣಿತಫಲವನೂ ಅನಂತಕಾಲ ಭೋಗಿಸಲು
ಮತ್ತಂ ಜಿಹ್ವೆಯೊಳಗೆ ಬಂದಿರಲು ಭೋಗಿಸಿ ಸುಖಿಯಹುದಲ್ಲದೆ
ಇದಿರ ವಿದ್ಯೆಗಳೆಂಬ ಸಸಿಯ ಸಾಕಿ ಸಲಹಲುಂಟೆ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ?

ವಚನ
ಕಕ್ಷೆ ಕರಸ್ಥಲ ಉತ್ತಮಾಂಗ ಉರಸ್ಥಲ
ಮೊದಲಾದ ಸ್ಥಾನಂಗಳಂ ಶುದ್ಧವ ಮಾಡಿ,
“ಯಾ ತೇ ರುದ್ರ ಶಿವಾತನೂರಘೋರಾ ಪಾಪಕಾಶಿನೀ
ಎಂಬ ಶಿವಲಿಂಗಮೂರ್ತಿಯಂ ಸ್ಥಾಪಿಸಿ,
ತತ್ಶಿಷ್ಯನ ಶರೀರವೆ ನಡೆದೇವಾಲಯವೆಂಬಂತೆ
ಶ್ರೀಗುರು ಪಾವನವ ಮಾಡಿ ತೋರಿದನಾಗಿ
ಅಂಗದ ಮೇಲೆ ಲಿಂಗವುಳ್ಳವರ ಕಂಡು ಮರಳಿ ಮಾನವರೆಂದಡೆ
ನಾಯಕನರಕ ತಪ್ಪದಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಕರಸ್ಥಲದಲ್ಲಿ ಶಿವಲಿಂಗವ ಬಿಜಯಂಗೈಸಿಕೊಂಡು
ಕಣ್ಣ ಮುಚ್ಚಿ, ಬಾಯ ತೆರೆದು, ಅನ್ಯವ ನೆನೆವನ್ನಬರ
ಇನ್ನು ಲಿಂಗದ ಮರ್ಮವನರಿದುದಿಲ್ಲ.
ಉಂಟಾದುದ ಹುಸಿಮಾಡಿ, ಇಲ್ಲದುದ ನೆನೆದಡೆ
ಅದು ಸಹಜವಾಗಬಲ್ಲುದೆ ?
ದೇವದೇಹಿಕ ಭಕ್ತ, ಭಕ್ತದೇಹಿಕ ದೇವನೆಂದುದಾಗಿ,
ತನ್ನೊಳಗೆ ಲಿಂಗ, ಲಿಂಗದೊಳಗೆ ತಾನು,
ನೆನೆಯಲಿಲ್ಲ, ನೆನೆಯಿಸಿಕೊಳ್ಳಲಿಲ್ಲವಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಕರುವಿನ ರೂಪಿಂಗೆ ಒಳಗೊಂದು ಹೊರಗೊಂದಲ್ಲದೆ
ಪರುಷದ ರೂಪಿಂಗೆ ಒಳಗೊಂದು ಹೊರಗೊಂದುಂಟೆ ?
ಅಲ್ಲ, ನಿಲ್ಲು, ಮಾಣು, ಪರೀಕ್ಷಿಸಿ ನೋಡಾ.
ಪಂಚಭೂತಸಮ್ಮಿಶ್ರನಾದಡೆ ದೇವ ದಾನವರೊಳಗಾದ
ಪ್ರಕೃತಿಕಾಯವಾದಾ ತನುವಿಂಗೆ ಒಳಗೊಂದು ಹೊರಗೊಂದು
ಅದೂ ಕ್ರಿಯಾಕರ್ಮ ಬೇರೆ ದ್ವಂದ್ವಗ್ರಸ್ತವಾಗಿಹುದು.
ಆಪ್ರಕಾರವಲ್ಲ ನೋಡಾ.
ಗುರುಲಿಂಗಜಂಗಮ ಪ್ರಸನ್ನವಾದ ಪ್ರಸಾದಕಾಯ ಮಹಾಜ್ಞಾನತನು
ಪ್ರಾಣಲಿಂಗ ಸ್ವಾಯತವಾಗಿಪ್ಪ
ಘನತರ ಶಿವಲಿಂಗಮೂರ್ತಿ ಸರ್ವಾಂಗಲಿಂಗ ಮೂರ್ತಿಯ ಪರೀಕ್ಷಿಸಿ ನೋಡಿ,
ಇಂತು ಸದ್ಗುರುಸ್ವಾಮಿ ಪ್ರಾಣಲಿಂಗಪ್ರತಿಷ್ಠೆಯಂ ಎಂದು ಮಾಡಿದನೋ
ಅಂದೇ ಐಕ್ಯನು, ಅಂದೇ ಶರಣನು, ಅಂದೇ ಪ್ರಾಣಲಿಂಗಿ,
ಅಂದೇ ಪ್ರಸಾದಿ, ಅಂದೇ ಮಾಹೇಶ್ವರ, ಅಂದೇ ಭಕ್ತನು.
ಇಂದಿನ್ನಾವುದು ಹೊಸತಲ್ಲ ನೋಡಾ.
ಗುರುಲಿಂಗಜಂಗಮಕ್ಕೆ ತ್ರಿವಿಧಭಕ್ತಿಯ ಮಾಡುತ್ತಿಪ್ಪ ಭಕ್ತನಾಗಿಪ್ಪನು
ಪರಧನ ಪರಸ್ತ್ರೀ ಪರದೈವಂಗಳ ಬಿಟ್ಟು ಮಾಹೇಶ್ವರನಾಗಿಪ್ಪನು.
ಕರ್ಮಣಾ ಮನಸಾ ವಾಚಾ ಗುರೂಣಾಂ ಭಕ್ತವತ್ಸಲಃ
ಶರೀರಮರ್ಥಂ ಪ್ರಾಣಂ ಚ ಸದ್ಗುರುಭ್ಯೋ ನಿವೇದಯೇತ್
ಎಂಬುದನರಿದು
ಈ ತ್ರಿವಿಧವನೂ ಗುರುಲಿಂಗಜಂಗಮಕ್ಕೆ ಅರ್ಪಿಸಿ
ನಿರಂತರ ಪ್ರಸಾದವನವಗ್ರಹಿಸಿ
ಭಕ್ತಕಾಯ ಮಮಕಾಯವೆಂಬೀ ವಾಕ್ಯದಲೂ
ತನು ಶಿವತನುವೆಂದರಿದು ಸದ್ಗುರು ಪ್ರಾಣಲಿಂಗವನೇಕೀಭವಿಸಿದ
ಲಿಂಗವೇ ಪ್ರಾಣವೆಂಬುದರಿದ ಬಳಿಕ
ಪ್ರಾಣಲಿಂಗವೆಂದರಿದು, ಒಳಗು ಹೊರಗೆಂದರಿಯದೆ
ಸರ್ವಾಂಗಲಿಂಗವೆಂದರಿದು, ಪ್ರಾಣಮಯ ಶಿವನೆಂದರಿದು
ತತ್ವಮಯಶಿವನೆಂದರಿದು
ಸರ್ವಕ್ರಿಯಾಕರ್ಮಂಗಳೆಲ್ಲವನೂ ಶಿವಕ್ರೀ ಎಂದರಿದು
ಕರಣಂಗಳೆಲ್ಲವೂ ಶಿವಕರಣಂಗಳೆಂದರಿದು
ಶಿವಪ್ರೇರಣೆಯಿಂದ ಬಂದ ಪದಾರ್ಥಂಗಳೆಲ್ಲವೂ ಸರ್ವಶುದ್ಧ ಎಂದರಿದು ಶಿವಹಸ್ತದಲ್ಲಿ
ಶಿವಾರ್ಪಿತವಂ ಮಾಡಿ ರೂಪನರ್ಪಿಸಿ
ಶಿವಜಿಹ್ವೆಯಲ್ಲಿ ಶಿವಾರ್ಪಿತವಂ ಮಾಡಿ ರುಚಿಯನರ್ಪಿಸಿ
ಅರ್ಪಿಸಿದೆನೆಂದೆನ್ನದೆ, ಶಿವಕ್ರೀ ಎಂದರಿದು
ಮಹಾಜ್ಞಾನ ಪರಿಣಾಮಪ್ರಸಾದವ ನಿರಂತರ ಗ್ರಹಿಸುವನು.
ಮನೋವಾಕ್ಕಾಯದಲ್ಲಿ ಮಿಥ್ಯವ ಕಳೆದು
ಜಂಗಮಲಿಂಗಕ್ಕೆ ಅಷ್ಟಭೋಗಂಗಳ ಸಲಿಸಿ ಪ್ರಸನ್ನತೆಯಂ ಪಡೆದು
ಪ್ರಸನ್ನಪ್ರಸಾದವ ಪ್ರಸಾದಿಯಾಗಿ ಗ್ರಹಿಸುನವನುಫ.
ಅಲಸುಗಾರನ ಭಕ್ತಿ ಅದ್ವೈತವೆಂಬ ವಾಕ್ಯಕ್ಕಂಜಿ
ಸರ್ವಕ್ರೀಯಲ್ಲಿ ಎಚ್ಚತ್ತು ನಡೆವನು.
ಪ್ರಾಣ ಲಿಂಗವೆಂದರಿದು, ಪ್ರಾಣಲಿಂಗಿಯಾಗಿ
ಸುಖ ದುಃಖ ಭಯಾದಿ ದ್ವಂದ್ವಕರ್ಮಂಗಳು ನಾಸ್ತಿಯಾಗಿಪ್ಪನು.
ಸರ್ವಕ್ರಿಯಾಕರ್ಮಂಗಳೆಲ್ಲವನೂ
ಲಿಂಗದಲ್ಲಿ ಇರಿಸಿ, ಧರಿಸಿ, ಸುಖಿಸಿ, ಶರಣನಾಗಿಪ್ಪನು.
ಸರ್ವಕ್ರೀಯಲ್ಲಿ ನಡೆದು ತನುಮನಧನವ ಸವೆಸಿ
ಮಹಾಜ್ಞಾನವಳವಟ್ಟು, ನಿಸ್ಸಂಗಿಯಾಗಿ ಸರ್ವಕ್ರೀಯನೇಕೀಭವಿಸಿ
ಕ್ರಿಯಾನಾಸ್ತಿಯಾಗಿ ಐಕ್ಯನಾಗಿಪ್ಪನು.
ಕ್ರಿಯಾಕ್ರಿಯೆ ಅಂದು ಇಂದು ಎಂದೂ ಒಂದೇ ಪರಿಯಯ್ಯಾ.
ಈ ವಿಚಾರ ಒಮ್ಮಿಂದೊಮ್ಮೆ ಅರಿಯಬಾರದು.
ಅರಿಯದಿದ್ದರೇನುರಿ
ಬಾಲ್ಯದಲ್ಲಿ ಸತಿಪತಿಗಳೂ ಮಾತಾಪಿತರುಗಳು ವಿವಾಹವ ಮಾಡುವಲ್ಲಿ
ಒಮ್ಮಿಂದೊಮ್ಮೆ ಬಾಲಕ್ರಿಯಾಕರ್ಮ ರತಿಸುಖವನರಿಯಬಾರದು.
ಅರಿಯದಿದ್ದರೇನು?
ಬಾಲ್ಯ ಸತಿಪತಿಗಳಲ್ಲಿ ಮುಂದೆ ಯೌವನದಲ್ಲಿ
ಕ್ರಿಯಾಕರ್ಮಕರದಿ ಸುಖವನರಿವಂತೆ
ಶಿವಾಚಾರ ಸರ್ವಕ್ರಿಯಾ ಸಂಪನ್ನತ್ವವನೂ,
ಮಹಾನುಭಾವರ ಸಂಗದಿಂದಲರಿಯಬಹುದು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ
ರಾಗ ದ್ವೇಷವೆನಿಪ ಒಡಲಿರೆ,
ರಾಗ ದ್ವೇಷ ಗಮಾನಾಗಮನಂಗಳಿರುತ್ತಿರೆ,
ಬ್ರಹ್ಮವಾನೆಂಬ ಬರಿಯ ವಾಗದ್ವೈತದಲ್ಲಿ ಫಲವಿಲ್ಲ.
ನಂಬು, ಸುಖಸಾಗರವನ?,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನ.

ವಚನ
ಕಾಮ ಕ್ರೋಧ ಲೋಭ ಮೋಹಾದಿಗಳ ಆಗರವೆನಿಪ ಒಡಲ
ಒಡತಿ ಎಳದೊಯ್ಯುತ್ತಿರಲು
ವಾಗದ್ವೈತವಾ ಬೊಮ್ಮವೆಂಬೆನು.
ಆಗಳೂ ಇಂದ್ರಿಯಂಗಳ ಬೆನ್ನಲಿ ಹರಿವುತ್ತ
`ಸೋಹಂ’ ಎಂಬರಿವನರಿಯದೆ
ಶಿವಜ್ಞಾನ ಮೊಗೆಯದೆ ವಾಗದ್ವೈತದಲ್ಲಿ ಹುರುಳಿಲ್ಲ.
ನಂಬು, ಸುಖಸಾರಾಯ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ

ವಚನ
ಕಾಮಧೇನು ಕಲ್ಪತರು ಚಿಂತಾಮಣಿ ಪರುಷ ಮೊದಲಾದ
ಮಹಾವಸ್ತುಗಳ ಮುಂದಿಟ್ಟುಕೊಂಡು
ಕಾಮಿಸುವ ಮನಸಿನೊಳಗಿರುತ ಇದಾನೆ ಕಾಣಾ,
ಈ ಕೊಡುವ ಗುಣವುಳ್ಳ ಮಹಾಶಿವನು.
ಹಿರಣ್ಯಪತಿ ಹಿರಣ್ಯಬಾಹು
ವರದಹಸ್ತನು ಅಭಯಹಸ್ತನು ಮಹಾದೇವನಿದಾನೆ.
ಒಲಿಯಲರಿಯಿರಿ ಒಲಿಸಲರಿಯಿರಿ
ಬೇಡಲರಿಯಿರಿ ಕೊಡಲರಿಯಿರಿ, ಕೊಂಡು ಪ್ರಯೋಗಿಸಲರಿಯಿರಿ.
ನೀವು ಕೊಳಲರಿಯಿರಲ್ಲದೆ, ಶಿವನೇನೂ ಕೊಡಲರಿಯನೆ ?
ಅಂಗಭೋಗಕ್ಕೆಂದಡೆ ಕೊಡನು, ಲಿಂಗಭೋಗಕ್ಕೆಂದಡೆ ಕೊಡುವನು.
ಇದು ಸತ್ಯ ಶಿವನಾಣೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಕಾಮಧೇನು ಕಾಮಿಸಿದುದ ಕುಡದಿರ್ದಡೆ
ಆ ಕಾಮಧೇನು ಬಂಜೆ ಆಕಳಿಂದ ಕಷ್ಟ ನೋಡಾ.
ಕಲ್ಪತರು ಕಲ್ಪಿಸಿದುದ ಕುಡದಿರ್ದಡೆ
ಆ ಕಲ್ಪತರು ತರಿತಾರಿ ಬೊಬ್ಬುಲಿಯಿಂದವೂ ಕಷ್ಟ ನೋಡಾ.
ಚಿಂತಾಮಣಿ ಚಿಂತಿಸಿದುದ ಕುಡದಿರ್ದಡೆ
ಆ ಚಿಂತಾಮಣಿ ಗಾಜುಮಣಿಯಿಂದವೂ ಕರಕಷ್ಟ ನೋಡಾ.
ಶ್ರೀಗುರುಕಾರುಣ್ಯವ ಪಡೆದು ಸದ್ಭಕ್ತನಾಗಿ
ಶ್ರೀಗುರುಲಿಂಗಜಂಗಮಕ್ಕೆ ಪ್ರೀತಿಯಿಂದ ದಾಸೋಹವ ಮಾಡದಿರ್ದಡೆ
ಆ ಭಕ್ತನು ಲೋಕದ ಭವಿಗಳಿಂದವೂ ಕರಕಷ್ಟ ನೋಡಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಕಾಮವುಳ್ಳಲ್ಲಿ ಭಕ್ತಿ ಇಲ್ಲ, ಕ್ರೋಧವುಳ್ಳಲ್ಲಿ ಭಕ್ತಿ ಇಲ್ಲ
ಲೋಭವುಳ್ಳಲ್ಲಿ ಭಕ್ತಿ ಇಲ್ಲ, ಮೋಹವುಳ್ಳಲ್ಲಿ ಭಕ್ತಿ ಇಲ್ಲ
ಮದವುಳ್ಳಲ್ಲಿ ಭಕ್ತಿ ಇಲ್ಲ, ಮತ್ಸರವುಳ್ಳಲ್ಲಿ ಭಕ್ತಿ ಇಲ್ಲವಯ್ಯಾ
ಮಹಾ ಅರಿಷಡ್ವರ್ಗವುಳ್ಳಲ್ಲಿ ಭಕ್ತಿ ಇಲ್ಲ.
ಇವು ಉಂಟಾಗಿ ಭಕ್ತರೆಂಬರು
ಅದೇಕಯ್ಯರಿ ಹಗೆಯ ಸಮೂಹವಿದ್ದಲ್ಲಿ ಕೇಳಿರೆ, ಒಬ್ಬನೆಂತಿಪ್ಪನಯ್ಯಾ?
ಇದು ಕಾರಣ,
ಅರಿಷಡ್ವರ್ಗವುಳ್ಳಲ್ಲಿ ಭಕ್ತಿ ಇಲ್ಲ, ಭಕ್ತಿವುಳ್ಳಲ್ಲಿ ಅರಿಷಡ್ವರ್ಗಗಳಿಲ್ಲ.
ಈ ಅರಿಷಡ್ವರ್ಗವಿಲ್ಲದವನೇ ಭಕ್ತ, ಇಂತಹ ಭಕ್ತದೇಹಿಕ ದೇವನು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಕುಲಕಷ್ಟಮತಿಹೀನನಿಗೆ ಉಪದೇಶವ ಕೊಡಲಾಗದು
ವಿಭೂತಿಯ ನೀಡಲಾಗದು, ಕರ್ಣಮಂತ್ರವ ಹೇಳಿ ಲಿಂಗವ ಕಟ್ಟಲಾಗದು.
ಕ್ಟದರೂ ಹಿಂದಣ ಪೂರ್ವಜನ್ಮವ ಬಿಡದಿದ್ದಡೆ
ಹೊಲೆಯರ ಮನೆಯ ಶ್ವಾನಬಳಗದಂತೆ.
ಕುಲಕಷ್ಟನಾದಡೆಯೂ ಆಗಲಿ
ಉಪದೇಶವ ಕೊಡಲಿ, ವಿಭೂತಿಯ ನೀಡಲಿ
ಕರ್ಣಮಂತ್ರವ ಹೇಳಲಿ, ಲಿಂಗವ ಕಟ್ಟಲಿ,
ಕಟ್ಟಿದಡೆ, ಸ್ವಪ್ನ ಜಾಗ್ರದಲ್ಲಿ ಶಿವಜ್ಞಾನಿಯಾಗಿದ್ದಡೆ
ಲೋಕಕ್ಕೆ ಆತನೇ ಉಪದೇಶಕರ್ತ ಕಾಣಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಕೇಳಾ ಹೇಳುವೆನು:
ಮಹಾಘನಲಿಂಗಭಕ್ತನು ಆಚರಿಸುವ ಸದ್ವರ್ತನನಿರ್ಣಯವ,
ಅದು ಪರಶಿವಲಿಂಗದ ನಿತ್ಯಪದದ ಮಾರ್ಗ:
ಗೌರವಂ ಲೈಂಗಿಕಂ ಚಾರಂ ಪ್ರಸಾದಂ ಚರಣಾಂಬುಕಂ
ಭೌಕ್ತಿಕಂ ಚ ಮಯಾ ಪ್ರೋಕ್ತಂ ಷಡ್ವಿಧಂ ವ್ರತಮಾಚರೇತ್
ಗುರುದೇವಃ ಶಿವಃ ಸಾಕ್ಷಾತ್ ತಚ್ಚಿಷ್ಯೋ ಜ್ಞಾನಸಾರವಿತ್
ತ್ರಿವಿಧಂ ಹೃದಿ ಸಂಭಾವ್ಯ, ಕೀರ್ತಿತಂ ಗೌರವಂ ವ್ರತಂ
ಗುರುಣಾ ಚಾರ್ಪಿತಂ ಲಿಂಗಂ ಪ್ರಾಣಲಿಂಗಂ ಪ್ರಕಥ್ಯತೇ
ತಥೈವ ಭಾವನಾದ್ವೈತಂ ತದ್ವ್ರತಂ ಲೈಂಗಿಕಂ ಸ್ಮೃತಂ
ಗುರುಲಿಂಗಚರಾಧೀನಂ ನಿರ್ಮಾಲ್ಯಂ ಭೋಜನಾದಿಕಂ
ತಸ್ಯಾನುಭಾವನಂ ದೇವಿ ತತ್ಪರಂ ವ್ರತಮುತ್ತಮಂ
ಗುರುಪಾದಾಬ್ಜಸಂಭೂತಂ ಉಜ್ಜಲಂ ಲೋಕಪಾವನಂ
ತಜ್ಜಲಸ್ನಾನಪಾನಾದಿ ತದ್ವ್ರತಂ ಚ್ಪರಣಾಂಬುಕಂ||
ಗುರುಲಿಂಗಚರಾಣಾಂ ಚ ಪ್ರಸಾದಂ ಪಾದವಾರುಣಂ|
ಪರ್ಯಾಯಭಜನಂ ಭಕ್ತ್ಯಾ ತದ್ವ್ರತಂ ಸ್ಮೃತಂ||
ಕ್ರಿಯಾದ್ವೈತಂ ನ ಕರ್ತವ್ಯಂ ಭಾವಾದ್ವೈತಂ ಸಮಾಚರೇತ್|
ಕ್ರಿಯಾಂ ನಿರ್ವಹತೇ ಯಸ್ತು ಭಾವಶುದ್ದಂ ತು ಶಾಂಕರಿ||
ಎಚಿದುದಾಗಿ,
ಪೂಜಿತೈಃ ಶಿವಭಕ್ತೈಶ್ಚ ಪರಕರ್ಮ ಪ್ರಪಚಿಚಿತಂ|
ಪುಣ್ಯಸ್ಸಶಿವಧರ್ಮಃ ಸ್ಯಾತ್ ವಜ್ರಸ್ರಚಿಸ್ಸಮಬ್ರವೀತ್||
ಪಾತ್ರಶಾಸನಯೋರ್ಮಧ್ಯೇ ಶಾಸನಂ ತು ವಿಶಿಷ್ಯತೇ|
ತಸ್ಮಾತ್ ಶಾಸನಮೇವಾದೌ ಪೂಜ್ಯತೇ ಚ ಶವೋ ಯಥಾ||
ಗುಣವತ್ಪಾತ್ರಪ್ರಜಾಯಾಂ ವರಂ ಶಾಸನಪೂಜನಂ|
ಶಾಸನಂ ಪೂಜಾಯೇತ್ತಸ್ಮಾಸವಿಚ್ಫರಂ ಶಿವಾಜ್ಙಯಾ||
ಸ ನರೋ ಭೃತ್ಯಸದ್ಭಕ್ತಃ ಪತಿಕರ್ಮಾ ಚ ಜಂಗಮಃ|
ರೂಪಂ ಚ ಗುಣಶೀಲಂ ಚ ಅವಿಚ್ಫರಂ ಶುಭಂ ಭವೇತ್||
ಗುಣೋಗುಣಶ್ಚ ರೂಪಂ ಚ ಅರೂಪಂ ಚ ನ ವಿದ್ಯತೇ
ಪಶ್ಶತ್ಯಮೋಹಭಾವೇನ ಸ ನರಃ ಸುಖಮೇಧತೇ
ದುಶ್ಶೀಲಃ ಶೀಲಸರ್ವಜ್ಞಂ ಮೂರ್ಖಭಾವೇನ ಪಶ್ಯತಿ
ಪಶ್ಯಂತಿ ಲಿಂಗಭಾವೇನ ಸದ್ಭಕ್ತಾ ಮೋಕ್ಷಭಾವನಾಃ
ಯಥಾ ಲಿಂಗಂ ತಥಾ ಭಾವಃ ಸತ್ಯಂ ಸತ್ಯಂ ನ ಸಂಶಯಃ
ಯಥಾ ಭಕ್ತಿಸ್ತಥಾ ಸಿದ್ಧಿಃ ಸತ್ಯಂ ಸತ್ಯಂ ನ ಸಂಶಯಃ
ಸತ್ಯಭಾವಿ ಮಹಾಸತ್ಯಂ ಸತ್ಯಂ ಸ್ಯಾಚ್ಚಿವಲಕ್ಷಣಂ
ಮಿಥ್ಯಭಾವೀತ್ವಹಂ ಮಿಥ್ಯಾ ಸತ್ಯಂ ಸ್ಯಾಚ್ಚಿವಲಕ್ಷಣಂ
ದಕ್ಷಿಣೇ ತು ಮಹಾದೇವೇ ಪದಾರ್ಥೇ ಕಿಂ ಪ್ರಯೋಜನಂ
ಅದಕ್ಷೇ ತು ಮಹಾದೇವೇ ಪದಾರ್ಥೇ ಕಿಂ ಪ್ರಯೋಜನಂ
ಅರಿರ್ಮಿತ್ರಂ ವಿಷಂ ಪಥ್ಯಂ ಅಧರ್ಮೋ ಧರ್ಮವದ್ಭವೇತ್
ಪ್ರಸನ್ನ ಏವ ದೇವೇ ತು ವಿಪರೀತಂ ಭವೇದ್ಧೃವಂ
ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಚ್ಯತೆ
ಜಂಗಮಸ್ಯಾವಮಾನೇನ ಸ್ಥಾವರಂ ನಿಷ್ಪಲಂ ಭವೇತ್
ನ ಮೇ ಪ್ರಿಯಶ್ಚತುರ್ವೇದೀ ಮದ್ಭಕ್ತಃ ಶ್ವಪಚೋಪಿ ವಾ
ತಸ್ಮೈ ದೇಯಂ ತತೋ ಗ್ರಾಹ್ಯಂ ಸಃ ಪೂಜ್ಯಶ್ಚ ಯಥಾ ಹ್ಯಹಂ
ಸದ್ಗುರುರ್ಭಾವಲಿಂಗಂ ಚ ತಲ್ಲಿಂಗಂ ಚಿತ್ಸ್ವರೂಪಕಂ
ತದ್ಭಾವಶುದ್ಧಿಸಿದ್ಧಸ್ಯ ಸದ್ಯೋನ್ಮುಕ್ತಿಃ ಸುಖಂ ಭವೇತ್
ಗುರುಃ ಪರಶಿವಶ್ಚೈವ ಜಂಗಮೋ ಲಿಂಗಮೇವ ಚ
ತದ್ಭಾವಶುದ್ಧಿಸಿದ್ಧಸ್ಯ ಸದ್ಯೋನ್ಮುಕ್ತಿಃ ಸುಖಂ ಭವೇತ್
ಲಿಂಗಾಂಗೀ ಗುರುರ್ಲಿಂಗಂ ತ್ರಿವಿಧಂ ಲಿಂಗಮುಚ್ಯತೇ
…………………………………………………………
ತತ್ತ್ವದೀಪಿಕಾಯಾಂ
ಪ್ರಸಾದೋ ಮುಕ್ತಿಮೂಲಂ ಚ ತತ್ಪ್ರಸಾದಸ್ತ್ರಿಧಾ ಮತಃ
ಶಿವಃ ಸರ್ವಾಧಿದೇವಃ ಸ್ಯಾತ್ ಸರ್ವಕರ್ಮ ಶಿವಾಜ್ಞಯಾ
ತತ್ತ್ವದೀಪಿಕಾಯಾಂ
ಮಾಹೇಶ್ವರಸ್ಯ ಸಂಗಾದ್ಧಿ ಶಿವಯೋಗಂ ಲಭೇನ್ನರಃ
ಪ್ರಸಾದಂ ತ್ರಿವಿಧಂ ಗ್ರಾಹ್ಯಂ ಮಹಾಪಾಪವಿನಾಶಕಂ
ತತ್ತ್ವದೀಪಿಕಾಯಾಂ
ಧನಪುತ್ರಕಲತ್ರಾದಿಮೋಹಂ ಸಂತ್ಯಜ್ಯ ಯೋ ನರಃ
ಶಿವಭಾವೇನ ವರ್ತೆತ ಸದ್ಯೋನ್ಮುಕ್ತಸ್ಸುಖೀ ಭವೇತ್
ಪ್ರಾಣಲಿಂಗೇತ್ವವಿಶ್ವಾಸಾತ್ ಭಕ್ತಿಮುಕ್ತಿದ್ವಯಂ ನ ಚ
ಪ್ರಾಣಲಿಂಗಸ್ಯ ವಿಶ್ವಾಸಾತ್ ಸಿದ್ದಿಃ ಸ್ಯಾತ್ ಭಕ್ತಿಮುಕ್ತಿದಾ
ಪ್ರಾಣಲಿಂಗಮವಿಶ್ವಸ್ಯ ತೀರ್ಥಲಿಂಗಮುಪಾಸತೇ
ಸ ನರಃ ಸ್ವರ್ಗಮಾಪ್ನೋತಿ ಗಣತ್ವಂ ನ ಪ್ರಯುಜ್ಯತೇ
ಪ್ರಾಣಲಿಂಗಸಮಾಯುಕ್ತಃ ಪರಹಸ್ತಸಮರ್ಚನಾತ್
ತತ್ಪೂಜಾ ನಿಷ್ಫಲಾ ದೇವಿ ರೌರವಂ ನರಕಂ ವ್ರಜೇತ್
ಪ್ರಾಣಲಿಂಗಸಮಾಯುಕ್ತಃ ಪರಹಸ್ತೇ ದದಾತಿ ಚೇತ್
ನಿಮಿಷಾರ್ಧವಿಯೋಗೇನ ವಿಶೇಷಂ ಪಾತಕಂ ಭವೇತ್
ಪ್ರಾಣಲಿಂಗಸಮಾಯುಕ್ತ ಏಕಭುಕ್ತೋಪವಾಸತಃ
ಗುರುಲಂಘನಮಾತ್ರೇಣ ಪೂಜಾ ಯಾ ನಿಷ್ಪಲಾ ಭವೇತ್
ಇಷ್ಟಲಿಂಗಂ ಸಮುತ್ಸೃಜ್ಯ ಅನ್ಯಲಿಂಗಸ್ಯ ಪೂಜನಾತ್
ಸ್ವೇಷ್ಟಂ ನ ಲಭತೇ ಮರ್ತ್ಯಃ ಪರಂ ತತ್ತ್ವಂ ನಿಹತ್ಯಸೌ
ಅತ್ಯಂತಮಹಿಮಾರೂಢಂ ಶಿವಮಾಹಾತ್ಮ್ಯವಿಸ್ತರಂ
ಯೋಪಿ ದೃಷ್ಟ್ವಾಪ್ಯವಿಶ್ವಾಸೀ ಸ ಭಕ್ತೋ ನರಕಂ ವ್ರಜೇತ್
ಅಥ ಯೋ ಯಾದವ ಶ್ಚೈವ ರಾಜಾನಶ್ಯವೋ ಗ್ರಹಾ
ನೈವ ಪೀಡ್ಯಸ್ತು ಯತ್ಕೃತ್ವಾ ನರಂ ಹಾರಪರಾಯಣಂ
ಹಿರಣ್ಯರೂಪದೇಹಸ್ತಂ ಹಿರಣ್ಯಪತಿಪ್ರಾಣಿನಾಂ
ಆಶಾದನ್ಯಂ ಹಿರಣ್ಯಂ ಚ ತದ್ದೇಹಂ ಲಿಂಗವರ್ಜಯೇತ್
ಘೃಣಾಮೂರ್ತಿರ್ಮಹಾದೇವೋ ಹಿರಣ್ಯೋದ್ಭಾಹು ಶಂಕರಃ
ವರದಾಭಯ ಮತ್ಸ್ವಾಮಿನ್ ಯೇ ಆಶಾದನ್ಯಂ ವಿವರ್ಜಯೇತ್
ಆಶಾ ಚ ನರಕಂ ಚೈವ ನಿರಾಶಾ ಮುಕ್ತಿರೇವ ಹಿ
ಆಶಾನಿರಾಶಯೋರ್ನಾಸ್ತಿ ತತ್ಸುಖಸ್ಯ ಸಮಂ ಪರಂ
ಶಿವರಹಸ್ಯೇ
ಜಪಶ್ರಾಂತಃ ಪುನಧ್ರ್ಯಾಯೇತ್ ಧ್ಯಾನಶ್ರಾಂತಃ ಪುನರ್ಜಪೇತ್
ಜಪಧ್ಯಾನಾದಿಯೋಗೇನ ಶಿವಃ ಕ್ಷಿಪ್ರಂ ಪ್ರಸೀದತಿ
ಗಚ್ಚನ್ ತಿಷ್ಠನ್ ಸ್ವಪನ್ ಜಾಗ್ರನ್ ಉನ್ಮಿಷನ್ ನಿಮಿಷನ್ನಪಿ
ಶುಚಿರ್ವಾಪ್ಯಶುಚಿರ್ವಾಪಿ ಶಿವಂ ಸರ್ವತ್ರ ಚಿಂತಯೇತ್
ಅಪವಿತ್ರಃ ಪವಿತ್ರೋ ವಾ ಸರ್ವಾವಸ್ಥಾಂ ಗತೋಪಿ ವಾ
ಯಸ್ಸ್ಮರೇತ್ ಸತತಂ ರುದ್ರಂ ಸ ಬಾಹ್ಯಾಭ್ಯಂತರಃ ಶುಚಿಃ
ದುರ್ಲಭಂ ಮಾನುಷಂ ಜನ್ಮ ವಿವೇಕಸ್ತ್ವತಿದುರ್ಲಭಃ
ದುರ್ಲಭಾ ಚ ಶಿವೇ ಭಕ್ತಿಃ ಶಿವಜ್ಞಾನಂ ತು ದುರ್ಲಭಂ
ಇಂ್ರಯಪ್ರೀತಿದಾತಾರಃ ಪುಮಾಂಸೋ ಬಹವಃ ಕಿಲ
ಶಿವಜ್ಞಾನಾರ್ಥದಾತಾರಃ ಪುಮಾಂಸೋ ಲೋಕದುರ್ಲಭಾಃ
ಲಿಂಗಭಕ್ತ್ಯಾ ಮನಃ ಪೂತಂ ಅಂಗಂ ಪೂತಂ ತು ದೇಶಿಕಾತ್
ಭಾವಸ್ತು ಜಂಗಮಾತ್ ಪೂತಸ್ತ್ರಿವಿಧಾ ಭಕ್ತಿರುತ್ತಮಾ
ಅಷ್ಟವಿಧಾರ್ಚನಂ ಲಿಂಗೇ ಅಷ್ಟಭೋಗಸ್ತು ಜಂಗಮೇ
ಲಿಂಗೇ ಷೋಡಶೋಪಚಾರಾಃ ಸರ್ವೇ ತಾತ್ಪರ್ಯಜಂಗಮೇ
ಮನೋ ಲೀನಂ ಮಹಾಲಿಂಗೇ ದ್ರವ್ಯಂ ಲೀನಂ ತು ಜಂಗಮೇ
ತನುರ್ಲೇನೋ ಗುರೌ ಲಿಂಗೇ ಇತಿ ಭಕ್ತಸ್ಯ ವೈ ಧೃವಂ
ಸಕಲಂ ಭಕ್ತರೂಪಂ ಚ ನಿಷ್ಕಲಂ ಶಿವರೂಪಕಂ
ಸಕಲಂ ನಿಷ್ಕಲಂ ಮಿಶ್ರಂ ಚರರೂಪಂ ವಿಧೀಯತೇ
ಸತ್ಕ್ರಿಯಾಂ ಪೂಜಯೇತ್ಪ್ರಾತರ್ಮಧ್ಯಾಹ್ನೇ ಭೋಜನಾವಧಿಂ
ಸಾಯಂಕಾಲೇ ಮಹಾಪೂಜಾಂ ತತ್ಕ್ರಮಸ್ತು ವಿಶಿಷ್ಯತೇ
ಮನಃಪೂತಾರ್ಚನಂ ಭಕ್ತ್ಯಾ ಪ್ರಾತಃಕಾಲವಿಧಿಕ್ರಮಃ
ಸುಜಲಂ ಸುರಸಂ ಚೈವ ಯಥಾಸಂಭವದ್ರವ್ಯಕಂ
ಅರ್ಪಯೇಚ್ಚರಲಿಂಗಾಯ ಮಧ್ಯಾಹ್ನೇ ಪೂಜನಕ್ರಮಃ
ಗಂಧಂ ಪುಷ್ಪಂ ಚ ಕರ್ಪೂರಂ ಚಂದನಂ ಲೇಪನಂ ತಥಾ
ಅರ್ಪಯೇತ್ ಫಲತಾಂಬೂಲಂ ಸಂಧ್ಯಾಪೂಜಾರ್ಚನಾವಿದಿಕ್ರಮಃ
ಧೂಪಮುಷ್ಣಾದಿಕಂ ಸರ್ವಂ ಪ್ರಾತಃಕಾಲಾರ್ಚನಾವಿದಿಃ
ಪೂಜೋಪಚಾರಸ್ಸರ್ವೇಷಾಂ ಶೈತ್ಯಂ ಮಧ್ಯಾಹ್ನಸಂದಿಷು
ತ್ರಿಸಂಧ್ಯಾ ತ್ರಿಷು ಕಾಲೇಷು ಉಷ್ಣಂ ನೈವೇದ್ಯಮುತ್ತಮಂ
ಯಥಾಸಂಭವಂ ಸಂಧ್ಯಾಯಾಂ ನಾದಾದೀನಿ ವಿದಿಕ್ರಮಾತ್
ಶರಸಂಯುಕ್ತಪೂಜಾಯಾಂ ಕೇವಲಂ ನರಕಂ ಭವೇತ್
ನಿಶ್ಶಠಃ ಪೂಜಕಶ್ಚೈವ ಕೇವಲಂ ಮುಕ್ತಿಕಾರಣಂ
ಅಷ್ಟಾದಶಾನಾಂ ಜಾತೀನಾಂ ಶಠಕರ್ಮಸ್ವಭಾವತಃ
ನಿಶ್ಯಠಾಃ ಕುಲಮರ್ಯಾದಾಃ ಸದ್ಭಕ್ತಾಶ್ಚ ಶಿವಪ್ರಿಯಾಃ
ಲಿಂಗಧಾರೀ ಮಹಾಲಿಂಗಂ ನ ಭೇದೋ ತತ್ರ ದೃಶ್ಯತೇ
ಸದ್ವೈತ್ತೋ ಭೃತ್ಯರೂಪಶ್ಚ ಸತ್ಯಂ ಸತ್ಯಂ ಸಮೋ ನ ಚ
ಕರ್ತೃಭೃತ್ಯಸ್ಯ ಸನ್ಮಾರ್ಗದುರ್ಮಾರ್ಗಸಮಭಾವತಃ
ಅಹಂಕಾರೋ ಮಹಾಪಾಪಂ…..
ಜನ್ಮಾಂತರಸಹಸ್ರೇಷು ತಪೋಧ್ಯಾನಪರಾಯಣೈಃ
ನರಾಣಾಂ ಕ್ಷೀಣಪಾಪಾನಾಂ ಶಿವೇ ಭಕ್ತಿಃ ಪ್ರಜಾಯತೇ
ತತೋ ವಿಷಯವೈರಾಗ್ಯಂ ವೈರಾಗ್ಯಾತ್ ಜ್ಞಾನಸಂಭವಃ
ಜ್ಞಾನೇನ ತು ಪರಾ ಭಕ್ತಿಃ ಪ್ರಸಾದಸ್ತದನಂತರಂ
ಪ್ರಸಾದಾನ್ಮುಚ್ಯತೇ ಜಂತುರ್ಮುಕ್ತಃ ಶಿವಸಮೋ ಭವೇತ್
ಅಸಾರೇ ದಗ್ಧಸಂಸಾರೇ ಸಾರಂ ದೇವಿ ಶಿವಾರ್ಚನಂ
ಸತ್ಯಂ ವಚ್ಮಿ ಹಿತಂ ವಚ್ಮಿ ವಚ್ಮಿ ಪಥ್ಯಂ ಪುನಃ ಪುನಃ
ಉಪಾಧಿಃ ಸ್ಯಾನ್ಮಹಾಭಕ್ತಿರುಪಾಧಿಸ್ಯಾತ್ಪ್ರಸಾದಕಃ
ಉಪಾಧಿಃ ಸ್ಯಾತ್ಕ್ರಿಯಾಸ್ಸರ್ವಾಶ್ಯಿವಸ್ಯಾಸ್ಯಾ ಪ್ರಸಾದತಃ
ನಿುಪಾಧಿಕಮದ್ಭಕ್ತಿರ್ನಿರುಪಾಧಿಕಪ್ರಸಾದತಃ
ನಿರೂಪಾಧಿಕ್ರಿಯಾಸ್ಸರ್ವಾಃ ಶಿವಃ ಶೀಘ್ರಂ ಪ್ರಸೀದತಿ
ದಿನೇ ದಿನೇ ವಿಶೇಷಂ ಚ ಮಾಸೇ ಮಾಸೇ ಮಹಾದ್ಭುತಂ
ವತ್ಸರೇ ವತ್ಸರೇ ಚೋದ್ಯಂ ಸದ್ಭಕ್ತಸ್ಯಾಭಿವರ್ಧನಂ
ದಿನೇ ದಿನೇ ವಿಶೇಷಂ ಚ ಮಾಸೇ ಮಾಸೇ ಹಿ ದೃಶ್ಯತಾಂ
ವತ್ಸರೇ ವತ್ಸರೇ ನಷ್ಟಾ ಮಹಾವಾಸಕ್ರಿಯಾಸ್ತಥಾ
ದಾಸೋಹಂ ಚ ಮಹಾಖ್ಯಾತಿರ್ದಾಸೋಹಂ ಲಾಭ ಏವ ಚ
ದಾಸೋಹಂ ಚ ಮಹತ್ಪೂಜ್ಯಂ ದಾಸೋಹಂ ಸತ್ಯಮುಕ್ತಿದಂ
ಸದ್ಭಕ್ತಸಂಗಸಿದ್ಧಿಃ ಸ್ಯಾತ್ ಸರ್ವಸಿದ್ಧಿರ್ನ ಸಂಶಯಃ
ಭಕ್ತಿರ್ಜ್ಞಾನಂ ಚ ವೈರಾಗ್ಯಂ ವರ್ಧತಾಂ ಚ ದಿನೇ ದಿನೇ
ಮಹತ್ಸುಖಂ ಮಹಾತೋಷೋ ಲಿಂಗಭಕ್ತ್ಯಾ ಯಥಾ ಶಿವೇ
ಪ್ರಾಣಲಿಂಗಪ್ರತೀಕಾರಂ ಕುರ್ವಂತೀಹ ದುರಾತ್ಮನಃ
ಅತ್ಯುಗ್ರನರಕಂ ಯಾಂತಿ ಯುಗಾನಾಂ ಸಪ್ತವಿಂಶತಿ
ಹುತಭುಗ್ಪತಿತಾಂಭೋಜಗತಿಃ ಪಾತಕಿನಾಂ ಭವೇತ್
ಸುಜ್ಞಾನ ಸದ್ಭಕ್ತಿ ಪರಮವೈರಾಗ್ಯಕ್ಕೆ ಶಿವನೊಲಿವನಲ್ಲದೆ
ಸಾಮಾನ್ಯ ತಟ್ಟು ಮುಟ್ಟು ತಾಗು ನಿರೋಧದಲ್ಲಿ ಅನುಸರಿಸಿದಡೆ
ಶಿವ ಮೆಚ್ಚುವನೆ ? ಸತ್ಯಶುದ್ಧ ನಿತ್ಯಮುಕ್ತ ಶರಣರು ಮೆಚ್ಚುವರೆ?
ಶಿವನೊಲವು ಶರಣರೊಲವು ಸೂರೆಯೇ?
ದೇವದಾನವ ಮಾನವರಂತೆ ಶಿವನಲ್ಲಿ ಭಕ್ತಿಯನು ಅನುಸರಿಸಿ
ನಡೆವುದು ಭಕ್ತಿಯೇ ಅಲ್ಲ.
ತಾಮಸ ರಾಜಸ ಉಳ್ಳುದು ಭಕ್ತಿಯ ಕುಳವಲ್ಲ, ಸದ್ಭಕ್ತಿಗೆ ಸಲ್ಲದು.
ಗುರು ಲಿಂಗ ಜಂಗಮಕ್ಕೆ ಮರುಗಿ ತ್ರಿವಿಧಪದಾರ್ಥವ
ಮನೋವಾಕ್ಕಾಯದಲ್ಲಿ ವಂಚನೆಯಿಲ್ಲದೆ
ಮನ ಧನವನರ್ಪಿಸಿ ಮನ ಮುಟ್ಟಿದಡೆ
ಗುರು ಲಿಂಗ ಜಂಗಮದ ಘನಮಹಿಮೆಯ
ವೇದಪುರಾಣಾಗಮಂಗಳಿಂ ಗುರುವಾಕ್ಯದಿಂ
ಪುರಾತನರ ಮತದಿಂದರಿದು ಮರೆವುದು ಜ್ಞಾನವಲ್ಲ.
ಅರಿದು ಮರೆವುದು ಶ್ವಾನಜ್ಞಾನವಲ್ಲದೆ
ಇಂತಪ್ಪ ಅಜ್ಞಾನಕ್ಕೆ ಒಲಿವನೇ ಶಿವನು? ಮೆಚ್ಚುವರೇ ಶರಣರು?
ಶ್ರೀಗುರುಲಿಂಗಜಂಗಮವೊಂದೆಂಬರಿವು
ಕರಿಗೊಂಡು ಸದ್ಭಾವದಿಂ ಭಾವಿಸಿ ಭಾವಶುದ್ಧಿಯಾದುದು ಸುಜ್ಞಾನ.
ಗುರುಲಿಂಗಜಂಗಮದ ಅರ್ಚನೆ ಪೂಜನೆ ಅರ್ಪಿತ
ದಾಸೋಹಕ್ರೀವಿಡಿದು ಸಂಸಾರಕ್ರೀ
ಪರಧನ ಪರಸ್ತ್ರೀ ಅನ್ಯದೈವ ಭವಿಯನು
ಅನುಸರಿಸಿ ಹಿಡಿದುದು ವೈರಾಗ್ಯವೇ ? ಅಲ್ಲ, ಅದು ಮರ್ಕಟ ವೈರಾಗ್ಯ.
ಇವ ಬಿಟ್ಟು ಸದ್ಭಕ್ತಿ ಸಮ್ಯಗ್ಜ್ಞಾನ ಪರಮವೈರಾಗ್ಯಯುತನಾಗಿ
ಗುರುಲಿಂಗಜಂಗಮಕ್ಕೊಲಿದು ಒಲಿಸುವುದು,
ಸದ್ಭಕ್ತಿಪ್ರಸಾದಮುಕ್ತಿಯ ಹಡೆವುದು.
ಈ ಸತ್ಕ್ರಿಯಾಭಕ್ತಿಯುಳ್ಳಡೆ ಲೇಸು,
ಅಲ್ಲದಿದ್ದಡೆ ಸಾವುದೇ ಲೇಸಯ್ಯ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

  PRAJAAKEEYA - ಪ್ರಜಾಕೀಯ

ವಚನ
ಕೇಳಿದಾತ ಶಂಕರದಾಸಿಮಯ್ಯ,
ಹೇಳಿದಾತ ಸಕಳೇಶಮಾದಿರಾಜಯ್ಯ, ಕಂಡಾತನಲ್ಲಮಪ್ರಭು,
ಉಂಡಾತ ನಿಜಗುಣನು.
ಇಂತೀ ನಾಲ್ವರ ಕಂಡುನಾಚಿದಾತನಜಗಣ್ಣನಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಕೊಡುವ ಲಿಂಗವನು ಬೇಡಿಕೊಳಲರಿಯದೆ
ಕೊಡದ ಮಾನವರನಾಸೆಗೈದ ಲಿಂಗವಂತನನೇನೆನಬಹುದು?
ಕೊಟ್ಟನು ನೋಡಿರೆ ಲಿಂಗವು,
ಮಾರ್ಕಂಡೇಯಂಗೆ ಮಳೆಯರಾಜಂಗೆ ಆಯುಷ್ಯವ.
ಕೊಟ್ಟನು ನೋಡಿರೆ ಲಿಂಗವು,
ಲಿಂಗವಂತರು ಕುಡ ಹೇಳಿದವರಿಗೆ ಆಯಷ್ಯವ.
ಮುಸುಟೆಯ ಚಾಡಿರಾಯ, ಮಡಿವಾಳ ಮಾಚಿದೇವರು
ಬಸವರಾಜದೇವರು ಹೇಳಿದವರಿಗೆ ಆಯುಷ್ಯವ ಕೊಟ್ಟನು ನೋಡಿರೆ,
ಚೋಳಂಗೆ ಹೊನ್ನಮಳೆಯನೂ, ದಾಸಂಗೆ ತವನಿಧಿಯನೂ
ದೇವದಾನವ ಮಾನವರಿಗೆ ಇಚ್ಛೆಯನರಿದು.
ಬೇಡಿದವರಿಗೆ ಬೇಡಿದ ಪದವ ಕೊಟ್ಟ
ಆಯುಷ್ಯ ಭಾಷೆಯ ಫಲವ ನೋಡಯ್ಯಾ:
ಲಿಂಗವೂ ಸಾಧ್ಯವಾಯಿತ್ತು,
ಗುರುಲಿಂಗವೆಂದರಿದು ಲಿಂಗಾರ್ಚನೆಯ ಮಾಡಿದ ಫಲವ ನೋಡಯ್ಯಾ.
ಜಂಗಮ ಸಾಧ್ಯವಾಯಿತ್ತು,
ಲಿಂಗ ಜಂಗಮವೆಂದರಿದು ಜಂಗಮಾರ್ಚನೆಯ ಮಾಡಿದ ಫಲವ ನೋಡಯ್ಯಾ.
ಪ್ರಸಾದ ಸಾಧ್ಯವಾಯಿತ್ತು,
ಪ್ರಸಾದ ಪ್ರಜ್ಞಾನಪರ ಕೇವಲ ಮುಕ್ತಿಯೆಂದು
ಗ್ರಹಿಸಿದ ಫಲವ ನೋಡಯ್ಯಾ.
ಶ್ರೀಗುರು ಲಿಂಗ ಜಂಗಮ ಒಂದೇ ಎಂದು
ಪ್ರಸಾದ ಒಂದೇ ಎಂದು ಅರಿದೆನು.
ಇದೇ ಜ್ಞಾನ, ಇದೇ ಮುಕ್ತಿ, ಇದೇ ಪದ, ಇದೇ ಮಹಾಫಲ.
ಇನ್ನು ಮೇಲೆ ಈ ಪದಕ್ಕೆ ಪದ ಉಂಟೇ?
ಈ ಫಲಕ್ಕೆ ಫಲ ಉಂಟೇರಿ ಇಲ್ಲ. ನಿಮ್ಮಾಣೆ
ಇದೇ ಮಹತ್ಪರಿಣಾಮವಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಕ್ಷುಧೆಯಾರ್ಥ ಎತ್ತರಹದಲ್ಲಿ ಇಂಬಿಟ್ಟಡೆ
ಅದಕ್ಕದು ವರ್ಮಕಳೆ ಅದಕ್ಕದು ಸಂತಾನವೇ ಅಯ್ಯಾರಿ
ಜಲದ ಬಿಂದುವಿನಲ್ಲಿ ಹುಟ್ಟಿಸಿ ಜಗವ ಲೋಲಾಡಿಸಿದೆಯಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಗುರು ಲಿಂಗ ಜಂಗಮ ಪ್ರಸಾದ-
ಒಂದೆ ಪರಶಿವಮೂರ್ತಿ[ಯ] ಮಹಾವಸ್ತುಗಳು ಕೇಳಿರಣ್ಣಾ.
ಅರಿದು ಧ್ಯಾನಿಸಿ ಪೂಜಿಸಿ ಸೇವಿಸಿ ಅರ್ಚಿಸಿ ಅರ್ಪಿಸಿ ಧರಿ[ಸೆ]
ಧರ್ಮ ಅರ್ಥ ಕಾಮ ಮೋಕ್ಷ
ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯ-
ಈ ಚತುರ್ವಿಧಫಲಪದವಿಯ ಕೊಡುವ[ವು]
ಗುರು ಲಿಂಗ ಜಂಗಮ ಪ್ರಸಾದವೆಂದು ನಂಬುವುದು,
ಇದು ಸತ್ಯ, ಶಿವ ಬಲ್ಲ, ಶಿವನಾಣೆ.
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಗುರುಕಾರುಣ್ಯವ ಪಡೆದು ಲಿಂಗವೇ ಪ್ರಾಣವಾಗಿ
ಶ್ರೀಗುರು ಲಿಂಗ ಪ್ರಾಣ ಒಂದಾಗಿ
ಕರಸ್ಥಲದಲ್ಲಿ ಶ್ರೀಗುರು ಲಿಂಗವನು ಬಿಜಯಂಗೈಸಿ ಕೊಟ್ಟ ಬಳಿಕ
ಲಿಂಗದ ಅಂಗ, ಲಿಂಗದ ನೇತ್ರ, ಲಿಂಗದ ಶ್ರೋತ್ರ
ಲಿಂದ ಘ್ರಾಣ, ಲಿಂಗದ ಜಿಹ್ವೆ, ಲಿಂಗದ ಹಸ್ತ
ಲಿಂಗದ ಪಾದ, ಲಿಂಗದ ಶಿರ, ಲಿಂಗದ ಮನ
ಲಿಂಗದ ಬುದ್ಧಿ, ಲಿಂಗದ ಚಿತ್ತ, ಲಿಂಗದ ಅಹಂಕಾರ.
ಅಂಗತತ್ತ್ವವೆಲ್ಲ ಲಿಂಗತತ್ತ್ವ, ಅಂಗಕ್ರೀಯೆಲ್ಲ ಲಿಂಗಕ್ರೀ.
ಇದು ಕಾರಣ, ಸೋಹಂಕ್ರೀ ಸೋಹಂಭಾವ
ಶ್ರೀಗುರು ಮಾಡಿದ ಕ್ರೀ ಉಪಮಾತೀತ.
ವೇದಶಾಸ್ತ್ರ ಪುರಾಣಾಗಮಂಗಳ ಕ್ರೀಯಲ್ಲ,
ವಿಷ್ಣ್ವಾದಿಗಳ ಹವಣಲ್ಲ, ಲೋಕಾದಿ ಲೋಕಂಗಳ ಪರಿಯಲ್ಲ.
ಇವೆಲ್ಲವ ಮೀರಿದ ವಿಪರೀತ ಮಹಾಘನ ಕ್ರೀಯ
ಶ್ರೀಗುರು ತಾನೆ ಬಲ್ಲನಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಗುರುತ್ವವುಳ್ಳ ಮಹದ್ಗುರುವನರಿಯದೆ
ನಾನು ಗುರು ತಾನು ಗುರುವೆಂದು ನುಡಿವಿರಿ.
ಧನದಲ್ಲಿ ಗುರುವೆ? ಮನದಲ್ಲಿ ಗುರುವೆ?
ತನುವಿನಲ್ಲಿ ಗುರುವೆ? ನಿತ್ಯದಲ್ಲಿ ಗುರುವೆ?
ವಿದ್ಯೆಯಲ್ಲಿ ಗುರುವೆ? ಭಕ್ತಿಯಲ್ಲಿ ಗುರುವೆ?
ಜ್ಞಾನದಲ್ಲಿ ಗುರುವೆ? ವೈರಾಗ್ಯದಲ್ಲಿ ಗುರುವೆ?
ದೀಕ್ಷೆಯಲ್ಲಿ ಗುರುವೆರಿ ಶಿಕ್ಷೆಯಲ್ಲಿ ಗುರುವೆರಿ
ಸ್ವಾನುಭಾವದಲ್ಲಿ ಗುರುವೆರಿ ಮಾತಾಪಿತರಲ್ಲಿ ಗುರುವೆರಿ
ದೇವದಾನವ ಮಾನವರೆಲ್ಲರು ನೀವೆಲ್ಲರು
ಆವ ಪರಿಯಲ್ಲಿ ಗುರು ಹೇಳಿರಣ್ಣಾ?
ಗುರುವಾರು ಲಘುವಾರೆಂದರಿಯರಿ,
ಮನ ಬಂದಂತೆ ನುಡಿದು ಕೆಡುವಿರಾಗಿ.
ಹರಿಬ್ರಹ್ಮರು ಗುರುತ್ವಕ್ಕೆ ಸಂವಾದಿಸಿ
ಮಹದ್ಗುರುವಪ್ಪ ಪರಂಜ್ಯೋತಿರ್ಲಿಂಗದ
ಆದಿಮಧ್ಯಾವಸಾನದ ಕಾಲವನರಿಯದೆ ಲಘುವಾಗಿ ಹೋದರು.
ಮತ್ತಂ ಅದೊಮ್ಮೆ ವಿಷ್ಣ್ವಾದಿ ದೇವಜಾತಿಗಳೆಲ್ಲರೂ ನೆರೆದು
ನಾ ಘನ, ತಾ ಘನ, ನಾನು ಗುರು, ತಾನು ಗುರುವೆಂದು
ಮಹಾಸಂವಾದದಿಂದ ಅತಿತರ್ಕವ ಮಾಡಿ
ಗುರುತ್ವವುಳ್ಳ ಪುರುಷನ ನಿಶ್ಚೈಸಲರಿಯದೆ,
ಆ ಸಭಾಮಧ್ಯದಿ ಪರಮಾಕಾಶದಿ
ಅತ್ಯತಿಷ್ಠದ್ದಶಾಂಗುಲನೆನಿಪ’ ಮದ್ಗುರುವಪ್ಪ ಮಹಾಲಿಂಗವು ಇವರುಗಳ ಅಜ್ಞಾನವ ಕಂಡು ಮಹಾವಿಪರೀತಕ್ರೀಯಲ್ಲಿ ನಗುತಿರಲು ನಮ್ಮೆಲ್ಲರನೂ ನೋಡಿ ನಗುವ ಪುರುಷನಾರು? ಈ ಪುರುಷನ ನೋಡುವ, ಈ ಪುರುಷನಿಂದ ನಮ್ಮಲ್ಲಿ ಆರು ಘನ ಆರು ಗುರುವೆಂದು ಕೇಳುವೆವೆಂದು ಆ ಮಹಾಪುರುಷನ ಸಮೀಪಕ್ಕೆ ಅಗ್ನಿ ವಾಯು ಮೊದಲಾಗಿಹ ದೇವಜಾತಿಗಳೆಲ್ಲರೂ ಪ್ರತ್ಯೇಕರಾಗಿ ಹೋಗಲು ಅತ್ಯತಿಷ್ಠದ್ದಶಾಂಗುಲಮಾಗಿರ್ದು ಇವರುಗಳ ಗುರುತ್ವವೆಲ್ಲವನೂ ಒಂದೇ ತೃಣದಲ್ಲಿ ಮುರಿದು ತೃಣದಿಂದವೂ ಕಷ್ಟ ಲಘುತ್ವವ ಮಾಡಿದನು. ಇದು ಕಾರಣ, ಪರಶಿವನೆ ಮದ್ಗುರು ಕಾಣಿರೆ. ಧನದಲ್ಲಿ ಗುರುವೆರಿ ನೀವೆಲ್ಲರು ಧನದಲ್ಲಿ ಗುರುವೆಂಬಡೆ ನೀವು ಕೇಳಿರೆ, ಕಾಣಿವುಳ್ಳವಂಗೆ ಶತಸಂಖ್ಯೆ ಉಳ್ಳವನೆ ಗುರು, ಶತಸಂಖ್ಯೆ ಉಳ್ಳವಂಗೆ ಸಹಸ್ರಸಂಖ್ಯೆ ಉಳ್ಳವನೆ ಗುರು, ಸಹಸ್ರಸಂಖ್ಯೆ ಉಳ್ಳವಂಗೆ ಮಹದೈಶ್ವರ್ಯ ಉಳ್ಳವನೆ ಗುರು, ಮಹದೈಶ್ವರ್ಯ ಉಳ್ಳವಂಗೆ ಕಾಮಧೇನು ಕಲ್ಪವೃಕ್ಷ ಚಿಂತಾಮಣಿ ಮೊದಲಾದ ಮಹದೈಶ್ವರ್ಯವುಳ್ಳ ಇಂದ್ರನೆ ಗುರು. ಇಂದ್ರಂಗೆ ಅನೂನೈಶ್ವರ್ಯವನುಳ್ಳ ಬ್ರಹ್ಮನೆ ಗುರು, ಆ ಬ್ರಹ್ಮಂಗೆ ಐಶ್ವರ್ಯಕ್ಕೆ ಅಧಿದೇವತೆಯಪ್ಪ ಮಹಾಲಕ್ಷ್ಮಿಯನುಳ್ಳ ವಿಷ್ಣುವೆ ಗುರು, ಆ ವಿಷ್ಣುವಿಂಗೆ ಅಷ್ಟಮಹದೈಶ್ವರ್ಯವನುಳ್ಳ ರುದ್ರನೆ ಗುರು, ಆ ರುದ್ರಂಗೆ ಈಶ್ವರನೆ ಗುರು, ಈಶ್ವರಂಗೆ ಸದಾಶಿವನೆ ಗುರು. ಬ್ರಹ್ಮಾ ವಿಷ್ಣುಶ್ಚ ರುದ್ರಶ್ಚ ಈಶ್ವರಶ್ಚ ಸದಾಶಿವಃ ಯೇ ತೇ ಗರ್ಭಗತಾ ಯಸ್ಯ ತಸ್ಮೈ ಶ್ರೀಗುರವೇ ನಮಃ ಎಂದುದಾಗಿ, ಅಂತಹ ಸದಾಶಿವಂಗೆ ಎಮ್ಮ ಪರಶಿವಮೂರ್ತಿ ಶ್ರೀಗುರುವೆ ಗುರು ಕಾಣಿರೆ. ಮನದಲ್ಲಿ ಗುರುವೇ ನೀವೆಲ್ಲರು ದುರ್ಮನಸ್ಸಿಗಳು ಪರಧನ ಪರಸ್ತ್ರೀ ಅನ್ಯದೈವಕ್ಕೆ ಆಸೆ ಮಾಡುವಿರಿ. ಇಂತಹ ದುರ್ಮನಸ್ಸಿನವರನೂ ಸುಮನವ ಮಾಡಿ ಸುಜ್ಞಾನಪದವ ತೋರುವ ಪರಶಿವಮೂರ್ತಿ ಶ್ರೀಗುರುವೆ ಗುರು ಕಾಣಿರೆ. ತನುವಿನಲ್ಲಿ ಗುರುವೆ? ಜನನ ಮರಣ ಎಂಬತ್ತುನಾಲ್ಕು ಲಕ್ಷ ಯೋನಿಯಲ್ಲಿ ಜನಿಸುವ ಅನಿತ್ಯತನು ನಿಮಗೆ. ಇಂತಪ್ಪ ತನುವನುಳ್ಳವರ ಪೂರ್ವಜಾತನ ಕಳೆದು, ಶುದ್ಧತನುವ ಮಾಡಿ ಪಂರ್ಚಭೂತತನುವ ಕಳೆದು, ಶುದ್ಧತನುವ ಮಾಡಿ ಭಕ್ತಕಾಯ ಮಮಕಾಯವೆಂದು ಶಿವನುಡಿದಂತಹ ಪ್ರಸಾದಕಾಯವ ಮಾಡಿ ನಿತ್ಯಸುಖದೊಳಿರಿಸಿದ ಪರಶಿವಮೂರ್ತಿ ಶ್ರೀಗುರುವೇ ಗುರು ಕಾಣಿರೆ. ವಿದ್ಯೆಯಲ್ಲಿ ಗುರುವೆ? ನೀವೆಲ್ಲರು ವೇದದ ಬಲ್ಲಡೆ, ಶಾಸ್ತ್ರವನರಿಯರಿ, ವೇದಶಾಸ್ತ್ರವ ಬಲ್ಲಡೆ, ಪುರಾಣವನರಿಯರಿ, ವೇದಶಾಸ್ತ್ರಪುರಾಣವ ಬಲ್ಲಡೆ, ಆಗಮವನರಿಯರಿ, ವೇದಶಾಸ್ತ್ರಪುರಾಣ ಆಗಮನ ಬಲ್ಲಡೆ ಅವರ ತಾತ್ಪರ್ಯವನರಿಯರಿ, ಅಷ್ಟಾದಶವಿದ್ಯೆಗಳ ಮರ್ಮವನರಿಯರಿ. ವೇದಂಗಳು, ಏಕ ಏವ ರುದ್ರೋ ನ ದ್ವಿತೀಯಾಯ ತಸ್ಥೇ’ ಎಂದವು.
ಅದನ್ನರಿಯರಿ ನೀವು, ಅನ್ಯವುಂಟೆಂಬಿರಿ,
ಶಿವ ಏಕೋ ದ್ಯೇಯಃ ಶಿವಶಂಕರಃ ಸರ್ವಮನ್ಯತ್ಪರಿತ್ಯಾಜ್ಯಂ’ ಅಂದವು, ನೀವು ಅನ್ಯವ ಧ್ಯಾನಿಸುವಿರಿ, ಅನ್ಯವ ಪೂಜಿಸುವಿರಿ, ವಿದ್ಯೆ ನಿಮಗಿಲ್ಲ, ನಿಮಗೆ ಹೇಳಿಕೊಡುವ ವ್ಯಾಸಾದಿಗಳಿಗಿಲ್ಲ, ಅವರಿಗೆ ಅಧಿಕನಾಗಿಹ ವಿಷ್ಣುಬ್ರಹ್ಮಾದಿಗಳಿಗಿಲ್ಲ, ವೇದಾದಿ ಅಷ್ಟಾದಶವಿದ್ಯೆಗಳ ಶಿವನೆ ಬಲ್ಲನು. ಸರ್ವವಿದ್ಯೆಗಳನೂ ಶಿವನೇ ಮಾಡಿದನು, ಶಿವನೇ ಕರ್ತನು ಆದಿಕರ್ತಾ ಕವಿಸ್ಸಾಕ್ಷಾತ್ ಶೂಲಪಾಣಿರಿತಿಶ್ರುತಿಃ
ಎಂದುದಾಗಿ.
ನಮೋ ಮಂತ್ರಿಣೇ ವಾಣಿಜಾಯ ಕಕ್ಷಾಣಾಂ ಕತಯೇ ನಮಃ ಎಂದುದಾಗಿ, ಈಶಾನಸ್ಸರ್ವವಿದ್ಯಾನಾಂ
ಎಂದುದಾಗಿ,
ವಿದ್ಯಾರೂಪನಪ್ಪ ಎಮ್ಮ ಪರಶಿವಮೂರ್ತಿ ಶ್ರೀಗುರುವೇ
ವಿದ್ಯೆಯಲ್ಲಿ ಗುರು ಕಾಣಿರೆ,
ದೀಕ್ಷೆಯಲ್ಲಿ ಗುರುವೇರಿ
ನೀವು ವರ್ಣಾನಾಂ ಬ್ರಾಹ್ಮಣೋ ಗುರುಃ’ ಎಂಬಿರಿ, ಆ ವಿಷ್ಣುವ ಭಜಿಸಿ ವಿಷ್ಣುವೇ ಗುರುವೆಂಬಿರಿ. ಅಂತಹ ವಿಷ್ಣುವಿಂಗೆಯೂ ಉಪಮನ್ಯು ಗುರು ಕಾಣಿರೆ. ಅಂತಹ ಉಪಮನ್ಯು ಮೊದಲಾದ ದೇವಋಷಿ ಬ್ರಹ್ಮಋಷಿ ರಾಜಋಷಿ ದೇವಜಾತಿ ಮಾನವಜಾತಿಗಳಿಗೆ ಪರಶಿವನಾಚಾರ್ಯನಾಗಿ ಉಪದೇಶವ ಮಾಡಿದನು. ವೇದಶಾಸ್ತ್ರ ಆಗಮ ಪುರಾಣಂಗಳಲ್ಲಿ, ವಿಚಾರಿಸಿ ನೋಡಿರೆ. ಅದು ಕಾರಣ ಮಹಾಚಾರ್ಯನು ಮಹಾದೀಕ್ಷಿತನಪ್ಪ ಎಮ್ಮ ಪರಶಿವಮೂರ್ತಿ ಮಹಾಸದ್ಗುರುವೇ ಗುರು ಕಾಣಿರೆ. ಶಿಕ್ಷೆಯಲ್ಲಿ ಗುರುವೇರಿ ನಿಮಗೆ ಶಿಕ್ಷಾಸತ್ವವಿಲ್ಲ. ವೀರಭದ್ರ ದೂರ್ವಾಸ ಗೌತಮಾದಿಗಳಿಂ ನೀವೆಲ್ಲಾ ಶಿಕ್ಷೆಗೊಳಗಾದಿರಿ. ಶಿಕ್ಷಾಮೂರ್ತಿ ಚರಲಿಂಗವಾಗಿ ಶಿಕ್ಷಿಸಿ ರಕ್ಷಿಸಿದನು ಪರಶಿವನು. ಯೇ ರುದ್ರಲೋಕಾದವತೀರ್ಯ ರುದ್ರಾ ಮಾನುಷ್ಯಮಾಶ್ರಿತ್ಯ ಜಗದ್ಧಿತಾಯ ಚರಂತಿ ನಾನಾವಿಧಚಾರುಚೇಷ್ಟಾಸ್ತೇಭ್ಯೋ ನಮಸ್ತ್ರ್ಯಂಬಕಪೂಜಕೇಭ್ಯಃ ಎಂದುದಾಗಿ, ದಂಡಕ್ಷೀರದ್ವಯಂ ಹಸ್ತೇ ಜಂಗಮೋ ಭಕ್ತಿಮಂದಿರಂ ಅತಿಭಕ್ತ್ಯಾ ಲಿಂಗಸಂತುಷ್ಟಿರಪಹಾಸ್ಯಂ ಯಮದಂಡನಂ ಎಂದುದಾಗಿ, ಶಿಕ್ಷೆಯಲ್ಲಿ ಗುರು ಎಮ್ಮ ಪರಶಿವಮೂರ್ತಿ ಮದ್ಗುರುವೇ ಗುರು ಕಾಣಿರೆ. ಸ್ವಾನುಭಾವದಲ್ಲಿ ಗುರುವೆ? ನೀವು ದೇವದಾನವಮಾನವರೆಲ್ಲರು ದೇಹಗುಣವಿಡಿದು ಮದಾಂಧರಾಗಿ ಸ್ವಾನುಭಾವ[ರಹಿತರಾದಿರಿ]. ಸ್ಕಂದ ನಂದಿ ವೀರಭದ್ರ ಭೃಂಗಿನಾಥ ಬಸವರಾಜ ಮೊದಲಾದ ಎಮ್ಮ ಮಾಹೇಶ್ವರರೇ ಸ್ವಾನುಭಾವಸಂಪನ್ನರು. ಇಂತಹ ಮಹಾಮಹೇಶ್ವರರಿಗೆ ಸ್ವಾನುಭಾವವ ಕರುಣಿಸಬಲ್ಲ ಎಮ್ಮ ಪರಶಿವಮೂರ್ತಿ ಮಹದ್ಗುರು[ವೇ] ಸ್ವಾನುಭಾವದಲ್ಲಿ ಗುರು ಕಾಣಿರೆ. ಮಾತಾಪಿತರ ಗುರುವೆಂಬಿರಿ, ಲಘುವಿನಲ್ಲಿ ತಾವೆಲ್ಲರು ಜನಿಸಿದಿರಿ. ತಮ್ಮ ಸ್ಥಿತಿಯೂ ಲಘು, ಲಘುವಾಗಿ ಲಯವಪ್ಪುದು ಗುರುವೆ? ಅಲ್ಲ. ಸೋಮಃ ಪವತೇ ಜನಿತಾ ಮತೀನಾಂ ಜದಿತಾ ದಿವೋ ಜನಿತಾ ಪೃಥ್ವಿವ್ಯಾ ಜನಿತಾಗ್ನೇರ್ಜನಿತಾ ಸೂರ್ಯಸ್ಯ ಜನಿತೋಥವಿಷ್ಣೋಃ
ಎಂದುದಾಗಿ,
ಶಿವೋ ಮಮೈವ ಪಿತಾ ಎಂದುದಾಗಿ, ಸರ್ವರಿಗೂ ಮಾತಾಪಿತನಪ್ಪ ಎಮ್ಮ ಪರಶಿವಮೂರ್ತಿ ಮಹಾಸದ್ಗುರುವೇ ಗುರು ಕಾಣಿರೊ. ಭಕ್ತಿಯಲ್ಲಿ ಗುರುವೆ? ನಿಮಗೆ ಲವಲೇಶ ಭಕ್ತಿಯಿಲ್ಲ, ನೀವೆಲ್ಲರು ಉಪಾಧಿಕರು. ನಿರುಪಾಧಿಕರು ಎಮ್ಮ ಮಹಾಸದ್ಭಕ್ತರು ತನು ಮನ ಧನವನರ್ಪಿಸಿ ಉಂಡು ಉಣಿಸಿ ಆಡಿ ಹಾಡಿ ಸುಖಿಯಾದರು ಶರಣರು. ಇಂತಹ ಶರಣಭರಿತ ಸದಾಶಿವಮೂರ್ತಿ ಮಹಾಸದ್ಗುರುವೇ ಭಕ್ತಿಯಲ್ಲಿ ಗುರು ಕಾಣಿರೆ. ಜ್ಞಾನದಲ್ಲಿ ಗುರುವೇ? ನೀವೆಲ್ಲರು ದೇವದಾನವ ಮಾನವರು ಅಜ್ಞಾನಿಗಳು. ಜ್ಞಾತೃ ಜ್ಞಾನ ಜ್ಞೇಯವಪ್ಪ ಪರಶಿವಲಿಂಗವನರಿಯದೆ ಅಹಂಕಾರದಿಂ ಲಘುವಾದಿರಿ. ಪರಧನ ಪರಸ್ತ್ರೀ ಪರಕ್ಷೇತ್ರಕ್ಕೆ ಆಸೆಮಾಡಿ ಲಘುವಾದಿರಿ ನಿರಾಶಸಂಪೂರ್ಣರು ಶಿವಜ್ಞಾನಸಂಪನ್ನರು ಎಮ್ಮ ಮಾಹೇಶ್ವರರು ಇಂತಹ ಮಾಹೇಶ್ವರರಿಂಗೆ ಶಿವಜ್ಞಾನವ ಕರುಣಿಸುವ ಎಮ್ಮ ಪರಶಿವಮೂರ್ತಿ ಮಹಾಸದ್ಗುರುವೇ ಗುರು ಕಾಣಿರೆ. ವೈರಾಗ್ಯದಲ್ಲಿ ಗುರುವೆ? ನೀವು ಆಶಾಬದ್ಧರು, ನಿರಾಶಾಸಂಪೂರ್ಣರು ಎಮ್ಮ ಸದ್ಭಕ್ತರು. ಇಂತಹ ಭಕ್ತದೇಹಿಕನಪ್ಪ ದೇವ ಎಮ್ಮ ಪರಶಿವಮೂರ್ತಿ ಮಹಾಸದ್ಗುರುವೇ ವೈರಾಗ್ಯದಲ್ಲಿ ಗುರು ಕಾಣಿರೆ. ಇದು ಕಾರಣ, ನಿತ್ಯದಲ್ಲಿ, ಸತ್ಯದಲ್ಲಿ, ಅಷ್ಟಮಹದೈಶ್ವರ್ಯದಲ್ಲಿ ದೀಕ್ಷೆಯಲ್ಲಿ, ಸ್ವಾನುಭಾವದಲ್ಲಿ, ಜ್ಞಾನದಲ್ಲಿ ವಿದ್ಯೆಯಲ್ಲಿ, ಬುದ್ಧಿಯಲ್ಲಿ, ವೈರಾಗ್ಯದಲ್ಲಿ, ಮಾತಾಪಿತರಲ್ಲಿ ಉಪಮಾತೀತನಪ್ಪ ಎಮ್ಮ ಪರಶಿವಮೂರ್ತಿ ಮಹಾಸದ್ಗುರುವೇ ಗುರು ಕಾಣಿರೆ. ನಾಸ್ತಿ ತತ್ತ್ವಂ ಗುರೋಃ ಪರಂ’ ಎಂದುದಾಗಿ,
ಮಹಾಘನತರವಪ್ಪ ಪರಶಿವಮೂರ್ತಿ
ಮಹಾಸದ್ಗುರುವೇ ಗುರು ಕಾಣಿರೆ.
ಲಲಾಟಲೋಚನಂ ಚಾಂದ್ರೀಂ ಕಲಾಮಪಿ ಚ ದೋದ್ರ್ವಯಂ
ಅಂತರ್ನಿಧಾಯ ವರ್ತೇಹಂ ಗುರುರೂಪೋ ಮಹೇಶ್ವರಿ
ಎಂದುದಾಗಿ ಪರಶಿವನೇ ಗುರು, ಶ್ರೀಗುರುವೇ ಪರಶಿವನು.
ಇಂತಹ ಮಹಾಸದ್ಗುರುವಪ್ಪ ಪರಶಿವಮೂರ್ತಿ
ಕಾರುಣ್ಯವ ಮಾಡಿ, ಸದ್ಭಕ್ತಿಪದವ ತೋರಿದ
ಎಮ್ಮ ಗಣನಾಥದೇವರೇ ಗುರು ಕಾಣಿರೆ.
ಇದು ಕಾರಣ,
ಶರಣಮೂರ್ತಿ ಶ್ರೀಗುರು.
ಶ್ರೀಗುರು ಲಿಂಗ ಜಂಗಮ ಒಂದೆಯಾಗಿ
ಶ್ರೀಗುರುವೇ ಗುರು, ಉಳಿದದ್ದೆಲ್ಲಾ ಲಘು.
ಪರಶಿವಲಿಂಗವೇ ಗುರು, ಉಳಿದವೆಲ್ಲವೂ ಲಘು.
ಜಂಗಮವೇ ಗುರು, ಉಳಿದವೆಲ್ಲವೂ ಲಘು.
ಇದನರಿದು ಶ್ರೀಗುರುವನೇ ನಂಬುವುದು.
ತನು ಮನ ಧನವನರ್ಪಿಸುವುದು,
ನಿರ್ವಂಚಕನಾಗಿ ನಿರುಪಾಧಿಕನಾಗಿ ನಿರಾಶಾಸಂಪೂರ್ಣನಾಗಿ,
ಧ್ಯಾನಿಸಿ ಪೂಜಿಸಿ ಸದ್ಭಕ್ತಿಯಿಂ ವರ್ತಿಸಿ
ಪ್ರಸಾದವ ಪಡೆದು ಮುಕ್ತನಪ್ಪುದಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಗುರುಲಿಂಗ ಪರಂಜ್ಯೋತಿರ್ಲಿಂಗವೆಂದರಿದವನು ಬಲ್ಲವನು,
ಗುರುಲಿಂಗ ಪ್ರಾಣ ಏಕೀಭವಿಸಿದ ಲಿಂಗ,
ಪರಂಜ್ಯೋತಿರ್ಲಿಂಗವೆಂದರಿದವನು ಬಲ್ಲವನು.
ಈ ಮಹಾವಸ್ತುಗಳನರಿಯದವನು ಅರಿಯದವನು.
ಈ ಮಹಾವಸ್ತುಗಳನರಿಯದವರನು ಅರಿದವನು ಅರಿಯದವನು,
ಅರಿಯದವಂಗೆ ಪೂಜೆ ಎಂತಕ್ಕು ?
ಪೂಜೆ ಇಲ್ಲದವಂಗೆ ಭಕ್ತಿಯಿಲ್ಲ,
ಭಕ್ತಿ ಇಲ್ಲದವಂಗೆ ಗುರುಲಿಂಗಜಂಗಮಪ್ರಸನ್ನವೆಂತಪ್ಪುದು ?
ಪ್ರಸನ್ನತೆಯ ಹಡೆಯದವಂಗೆ ಪ್ರಸಾದವಿಲ್ಲ,
ಪ್ರಸಾದ ಪ್ರಸನ್ನತೆಯ ಹಡೆಯದವಂಗೆ ಮುಕ್ತಿ ಎಂತೂ ಇಲ್ಲ.
ಇದನರಿದರಿವುದು, ಪ್ರಸನ್ನತೆಯಪ್ಪಂತೆ ನಡೆವುದು,
ಪ್ರಸಾದವ ಹಡೆವುದು, ಭೋಗಿಸಿ ಮುಕ್ತರಪ್ಪುದಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಗುರುಲಿಂಗಜಂಗಮವೆ ಶಿವನೆಂದು ಅರಿದು
ಮರೆವನು ಶಿವಭಕ್ತನೆ ಅಲ್ಲ,
ಶಿವಭಕ್ತನು ಅರಿದ ಬಳಿಕ ಮರೆಯನು.
ಅರಿದು ಮರೆವನು ಮದ್ದುಕುಣಿಕೆಯ ಕಾಯ ಮೆದ್ದವನು,
ಮದ್ಯ ಮಾಂಸವ ಸೇವಿಸಿದವನು,
ಅರಿದು ಮರೆವವನು ಅಜ್ಞಾನಿಗಳ ಸಂಗವ ಮಾಡಿದವನು,
ಶ್ವಾನನ ಮಿತ್ರನು.
ಅವಂದಿರುಗಳಿಗೆ ಅರಿವು ಮರವೆ ಸಹಜವಾದ ಕಾರಣ
ಅರಿದು ಮರೆವವನಲ್ಲ ಶಿವಭಕ್ತನು,
ಮರೆದು ಅರಿವವನಲ್ಲ ಶಿವಭಕ್ತನು,
ನಂಬಿದವನಲ್ಲ ಶಿವಭಕ್ತನು, ನಂಬಿ ಕೆಡದವನಲ್ಲ ಶಿವಭಕ್ತನು,
ವಿಶ್ವಾಸವ ಮಾಡುವವನಲ್ಲ ಶಿವಭಕ್ತನು ಅವಿಶ್ವಾಸ ಮಾಡುವವನಲ್ಲ ಶಿವಭಕ್ತನು.
ಮರೆದಡೆಯು ಮರೆದವನಂತೆ, ಅರಿದಡೆಯು ಶಿವನಂತೆ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಗುರುವ ಕಂಡಲ್ಲಿ ನಿನ್ನನೇ ಕಾಬೆ,
ಲಿಂಗವ ಕಂಡಲ್ಲಿ ನಿನ್ನನೇ ಕಾಬೆ,
ಜಂಗಮವ ಕಂಡಲ್ಲಿ ನಿನ್ನನೇ ಕಾಬೆ.
ನಿನ್ನಲ್ಲದ ಮತ್ತೊಂದ ತೋರದಿಹ ಅರಿವು ನೀನೇ ಬಲ್ಲೆ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಗುರುವನರಿವನ್ನಕ್ಕರ ಅಷ್ಟಾದಶ ವಿದ್ಯೆಯನರಿಯಲುಂಟು
ಓದಲುಂಟು ಕೇಳಲುಂಟು ಹೇಳಲುಂಟು.
ಗುರುಕರುಣದಿಂದ ಗುರುವನರಿದ ಬಳಿಕ, ಗುರುವಲ್ಲದೆ ತಾನಿಲ್ಲ.
ಕೇಳಲಿಲ್ಲ ಹೇಳಲಿಲ್ಲ, ಹೇಳಲಿಲ್ಲಾಗಿ ಅರಿಯಲಿಲ್ಲ.
ಅರಿಯಲಿಲ್ಲದ ಅರಿವನರುಹಿಸಿದ ಗುರುವನರಿಯಲುಂಟೆ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಗುರುವಿನ ಮಹತ್ವವನು, ಶಿಷ್ಯನ ಗುರುತ್ವವನು
ಆರಯ್ಯ ಬಲ್ಲವರು?
ಗುರು ಶಿಷ್ಯನಾದ ಪರಿಯನು, ಶಿಷ್ಯ ಗುರುವಾದ ಪರಿಯನು
ಆರಯ್ಯ ಬಲ್ಲವರು?
ವಾಙ್ಮನೋತೀತ ಉಪಮಿಸಬಾರದ ಘನವು, ಮಹಾಕ್ರೀಯನು.
ಭಕ್ತಿಯಿಂದ ಗುರು ಭಕ್ತಿವತ್ಸಲನಾಗಿ ಶಿಷ್ಯ ಗುರುವಾದ ಪರಿ,
ಅದು ಬೀಜವೃಕ್ಷನ್ಯಾಯದಂತೆ ಅವಿನಾಭಾವವಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಗುರುವೆ ಪರಶಿವನು
ಪರಶಿವನೇ ಶರಣಭರಿತನಾಗಿ ಎಮ್ಮ ಶರಣರೇ ಗುರು.
ಒಂದು ದೀಕ್ಷೆಯಲ್ಲಿ ಗುರುವೆಂದಡೆ,
ನಿಮಗೆಲ್ಲಕೆ ಕರ್ತನಹ ವಿಷ್ಣು ಎಮ್ಮ ಶರಣ ಉಪಮನ್ಯುವಿನ ಕೈಯಲ್ಲಿ
ದೀಕ್ಷೆಯ ಪಡೆದು ಶಿಷ್ಯನಾದನು,
ಅಂತಾಗೆ ಎಮ್ಮ ಶರಣರೆ ಗುರು.
ಲಿಂಗಿನಾ ಸಹ ವರ್ತಿತ್ವಂ ಲಿಂಗಿನಾ ಸಹ ವಾದಿತಾ
ಲಿಂಗಿನಾ ಸಹ ಚಿಂತಾ ಚ ಲಿಂಗಯೋಗೋ ನ ಸಂಶಯಃ
ಲಿಂಗಾಂಗಿನಾ ಚ ಸಂಗಶ್ಶ ಲಿಂಗಿನಾ ಸಹವಾಸಿತಾ
ಲಿಂಗೇನ ಸಹ ಭುಕ್ತಿಶ್ಯ ಲಿಂಗಯೊಗೋ ನ ಸಂಶಯಃ
ಒಂದು ದೀಕ್ಷೆಯಲ್ಲಿ ಗುರುವೆ ನೀವು ?
ನಿಮಗೆ ಕರ್ತರಹ ವಿಷ್ಣು ಬ್ರಹ್ಮ ಮೊದಲಾದವರನು
ನಮ್ಮ ಶರಣರೆ ಶಿಕ್ಷಿಸಿಕೊಳ್ಳುತಿಹರಾಗಿ
ನಮ್ಮ ಶರಣರೇ ಗುರು ಕಾಣಿರೋ ಸ್ವಾನುಭಾವದಲ್ಲಿ.
ಗುರುವೆ ದೇವ ದಾನವ ಮಾನವರೆಲ್ಲರೂ ?
ಪರಸ್ತ್ರೀಯರಿಗೆ ಅಳಪುವುದು ಹಿರಿದು ಗುರುತ್ವವೇ ? ಅಲ್ಲ.
ಪರಧನ ಅನ್ಯದೈವ ಉಭಯವಿಜ್ಞಾನ ಅಜ್ಞಾನ,
ದ್ವಂದ್ವಕ್ರಿಯಾ ವರ್ತಿಸುತ್ತಿಹರಾಗಿ.
ಅದು ಕಾರಣ, ಸರ್ವರೂ ಲಘುವಾದರು
ಅನುಭಾವಸಿದ್ಧಿಯಾದ ನಿಮ್ಮ ಶರಣರೇ ಗುರು.
ಶಿವತನು ಲಿಂಗಪ್ರಾಣವಾದ ಬಳಿಕ
ಉತ್ಪತ್ತಿಸ್ಥಿತಿಲಯವೆಂದು ಧ್ಯಾನಿಸುವೆ ಚಿಂತಿಸುವೆ ಅಂಜುವೆ ಮನವೇ
ನೀನೊಂದು ಕ್ರಿಯಾಕರ್ಮ ಉಪಾಧಿಯಿಂದ.
ತ್ರಿವಿಧಕ್ಕೆ ತತ್ಕ್ರಿಯಾಕರ್ಮ ಉಪಾಧಿಯಿಂದ
ಈ ತ್ರಿವಿಧಕ್ಕೆ ತತ್ಕ್ರಿಯಾಕರ್ಮವ ಮಾಡಿ ಸಂಸಾರವ ಗೆಲಿವೆನೆಂಬೆ
ಮನವೆ, ಇದು ಜ್ಞಾನವಲ್ಲ.
ನಿರುಪಾಧಿಕನಾಗಿ ಮಹಾಲಿಂಗ ಕರುಣಿ
ಶ್ರೀಗುರುವಾದ ಲಿಂಗವಾದ ಜಂಗಮವಾದ ಪ್ರಸಾದವಾದ
ಲಿಂಗತನುವಾದ ಲಿಂಗಪ್ರಾಣವಾದ ಲಿಂಗಕ್ರೀಯಾದ.
ಸರ್ವಕ್ರಿಯಾ ಕರ್ಮಂಗಳು ಲಿಂಗಕ್ರಿಯಾಕರ್ಮ,
ಉತ್ಪತ್ತಿಸ್ಥಿತಿಲಯವೆಂಬುದಿಲ್ಲ ಸರ್ವವೂ ಲಿಂಗಸ್ಥಿತಿ,
ದುಶ್ಚಿಂತೆಯ ಬಿಡು ನಿರುಪಾಧಿಕನಾಗು.
ಗುರುಕರುಣಿಸಿದ ಲಿಂಗಕ್ಕೆ ನೀನು ಉಪಾಧಿಕ ಕ್ರೀಯ ಮಾಡದೆ
ಸುಚಿತ್ತದಿಂದ ಮಹಾಲಿಂಗವನು ಧ್ಯಾನಿಸಿ ಪೂಜಿಸಿ ಚಿಂತಿಸಿ
ಅಲ್ಲಿಯೇ ಸುಖಿಯಾಗು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ರಕ್ಷಿಸುವನು.

ವಚನ
ಗುರುಸ್ವರೂಪನಾಗಿ ಮಹಾಸ್ಥಾನದಲ್ಲಿರುತ್ತಿದ್ದೆ,
ಲಿಂಗಸ್ವರೂಪನಾಗಿ ಭ್ರೂಮಧ್ಯದಲ್ಲಿರುತ್ತಿದ್ದೆ,
ಜಂಗಮಸ್ವರೂಪನಾಗಿ ಹೃದಯಕಮಲಮಧ್ಯದಲ್ಲಿರುತ್ತಿದ್ದೆ,
ಈ ಪರಿಯಲ್ಲಿ ಅಂತರಂಗದಲ್ಲಿ ಭರಿತನಾಗಿದ್ದೆಯಯ್ಯಾ.
ಬಹಿರಂಗದಲ್ಲಿ, ಶ್ರೀಗುರುಲಿಂಗವಾಗಿ ದೀಕ್ಷಿಸಿ ರಕ್ಷಿಸಿದೆ,
ಶಿವಲಿಂಗವಾಗಿ ಕರಸ್ಥಲದಲ್ಲಿ ಪೂಜೆಗೊಂಡು ರಕ್ಷಿಸಿದೆ,
ಜಂಗಮಲಿಂಗವಾಗಿ ಅವಗುಣಂಗಳೆಲ್ಲವನೂ ಕಳೆದು ಶಿಕ್ಷಿಸಿ ರಕ್ಷಿಸಿದೆ.
ಇಂತೀ ತ್ರಿವಿಧವು ಒಂದೇ ರೂಪಾಗಿ,
ಎನ್ನ ಅಂತರಂಗಬಹಿರಂಗಭರಿತನಾಗಿ
ಪ್ರಸಾದವ ಕರುಣಿಸಿ ಮುಕ್ತನ ಮಾಡಿದೆಯಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಗೃಹ ಗ್ರಾಮ ನಾಡು ದೇಶಂಗಳೆಂಬ ಭೂಮಿಯ
ಆಗುಚೇಗೆಯ ರಾಗದ್ವೇಷ,
ಮರಳಿ ಭೂಮಿಯ ಆಶೆ, ಅಲ್ಪಭೂಮಿಯ ಆಶೆ.
ಅಲ್ಪಭೂಮಿ ಅಲ್ಪಂಗಲ್ಲದೆ
ಪಂಚಾಶತಕಕೋಟಿ ಯೋಜನ ಭೂಮಿಯನೂ ಒಳಕೊಂಡ ಬ್ರಹ್ಮಾಂಡ
ಅಂತಹ ಬ್ರಹ್ಮಾಂಡವನೇಕವನೂ
ಆಭರಣವ ಮಾಡಿಯಿಟ್ಟುಕೊಂಡಿಪ್ಪ,
ಅಂತಹ ಆಭರಣದಿಂದ ಪೂಜೆಗೊಂಡಿಪ್ಪ,
ಲಿಂಗವೇ ಪ್ರಾಣವಾಗಿ ಭೂಮಿಯಲ್ಲಿ ನಿಂದ ಲಿಂಗೈಕ್ಯಂಗೆ
ಭೂಮಿಯ ಚಿಂತೆ ಇನ್ನೆಲ್ಲಿಯದೋ ? ಕಾಣೆ.
ಕೋಟಿ ಕ್ಷಿತಿಪರಿಯಂತರ ಧನದಾಗುನಿರೋಧ
ಆಗುಚೇಗೆಯ ನಿರೋಧಸುಖದುಃಖ ತನುಮನಧನಕಾಂಕ್ಷೆ ಅಲ್ಪಂಗಲ್ಲದೆ
ಮಹಾಲಕ್ಷ್ಮಿಯೊಡೆಯನಾಗಿ, ಮಹದೈಶ್ವರ್ಯಸಂಪನ್ನನಾಗಿ,
ಹಿರಣ್ಯಪತಿಯೇ ಪ್ರಾಣವಾಗಿ, ಹಿರಣ್ಯಪತಿಯೇ ಕಾಯವಾದ
ಮಹಾಲಿಂಗೈಕ್ಯಂಗೆ ಧನದ ಚಿಂತೆ ಇನ್ನೆಲ್ಲಿಯದು ?
ಉತ್ತಮ ಮಧ್ಯಮ ಕನಿಷ್ಠ ನಿಕೃಷ್ಟ
ಹಸ್ತಿನಿ ಚಿತ್ತಿನಿ ಶಂಕಿನಿ ಪದ್ಮಿನಿಯರೆಂಬ ನಾಲ್ಕು ತೆರದ ಸ್ತ್ರೀಯರ ಸಂಗ;
ಪಾತರ, ದಾಸಿ, ವೇಶ್ಯಾಗಮನ, ಪರಸ್ತ್ರೀ ಪರಸಂಗ
ಅವಿಚಾರ ಅನ್ಯಜಾತಿಯ ಸಂಗ ಇವುಗಳಿಗಾಶಿಸುವ
ಕ್ರೂರಾತ್ಮಂಗೆ ಹೆಣ್ಣಿನ ಚಿಂತೆಯಲ್ಲದೆ,
ಇಚ್ಛಾಶಕ್ತಿ ಜ್ಞಾನಶಕ್ತಿ ಕ್ರಿಯಾಶಕ್ತಿಯ ವರ್ತನೆಯ ಮೀರಿ
ಮಹಾಶಕ್ತಿ ತಾನಾಗಿ(ಹ) ಮಹಾಪುರುಷನಲ್ಲಿ
ಮಹಾಸಂಗವಾದ ಮಹಾಶರಣಂಗೆ ಹೆಣ್ಣಿನ ಚಿಂತೆ ಇನ್ನೆಲ್ಲಿಯದೋ ?
ವೇದಶಾಸ್ತ್ರ ಪುರಾಣಾಗಮಾದಿಯಾಗಿ
ಅಷ್ಟಾದಶವಿದ್ಯಂಗಳನೋದುವ ಕೇಳುವ ವಿಚಾರಿಸುವ ತಿಳಿವ
ವಿದ್ಯದ ಚಿಂತೆ ಅಲ್ಪಮತಿಯ ಅಲ್ಪಂಗಲ್ಲದೆ
ವಾಗ್ದೇವತೆಗೆ ಅಧಿದೈವಮಪ್ಪ ಮಹಾವಿದ್ಯೆಯೇ ದೇಹವಪ್ಪ
ವಿದ್ಯಾರೂಪ ಮಹಾದೇವನೇ ಪ್ರಾಣವಾಗಿ, ಮಹಾದೇವನೇ ಕಾಯವಾಗಿ ಮಹಾದೇವನೇ
ಜಿಹ್ವೆಯಾಗಿ, ಮಹಾದೇವನೇ ಮನವಾಗಿಹ
ಮಹಾಲಿಂಗೈಕ್ಯಂಗೆ ಇನ್ನುಳಿದ ಚಿಂತೆ ಇನ್ನೆಲ್ಲಿಯದೋ ?
ಭಕ್ತಕಾಯ ಶಿವನಾಗಿ ಶಿವನೇ ಪ್ರಾಣವಾಗಿ ನಿಂದ ಸದ್ಭಕ್ತಂಗೆ
ಆವ ಚಿಂತೆಯೂ ಇಲ್ಲ, ಆತ ನಿಶ್ಚಿಂತ, ಪರಮಸುಖಪರಿಣಾಮಿ
ಸತ್ಯನು ನಿತ್ಯನು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಗ್ರಂಥ:
ಅಘ್ರ್ಯಂ ಪಾದ್ಯಂ ತಥಾಚಮ್ಯಂ ಸ್ನಾನಂ ಪಂಚಾಮೃತಾದಿಭಿಃ
ದರ್ಪಣಂ ಧೂಪದೀಪಂ ಚ ಚಾಮರಂ ಆತಪತ್ರಕಂ
ಗೀತಂ ವಾದ್ಯಂ ತಥಾ ನೃತ್ಯಂ ನಮಸ್ಕಾರಂ ಜಪಂ ತಥಾ
ಪ್ರದಕ್ಷಿಣಂ ಕ್ರಮೇಣೋಕ್ತಂ ಷೋಡಶಸ್ಯೋಪಚಾರಕಂ
ಗಂಧಾಕ್ಷತಂ ಚ ಪುಷ್ಪಂ ಚ ವಸ್ತ್ರಾಭರಣಾನುಲೇಪನಂ
ನೈವೇದ್ಯಂ ಚ ತಾಂಬೂಲಂ ಅರ್ಚನಂ ಚಾಷ್ಟಮಂ ಭವೇತ್
ಇಂತು ಅಷ್ಟವಿಧಾರ್ಚನೆ ಷೋಡಶೋಪಚಾರವು.
ಗುರುವಿಂಗೆ ತನು, ಲಿಂಗಕ್ಕೆ ಮನ,
ಜಂಗಮಕ್ಕೆ ಧನ ಮುಂತಾಗಿ ಮಾಡುವುದು.
ಭಕ್ತಿ ಜ್ಞಾನ ವೈರಾಗ್ಯವಿದೆಂದರಿಯಲು ಮೋಕ್ಷ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಘನಕ್ಕೆ ಘನ ಮಹಿಮೆಯ ಪಡೆವರೆಲ್ಲರು ರುದ್ರಾಕ್ಷಿಯ ಧರಿಸಿಪ್ಪರು,
ಆ ಮನುಜರು ಮರ್ತ್ಯರಲ್ಲ ನೋಡಿರೆ.
ಮುನ್ನೊಬ್ಬ ವ್ಯಾಧನು ಶ್ವಾನನ ಕೊರಳಲ್ಲಿ ರುದ್ರಾಕ್ಷಿಯ ಕಟ್ಟಲು
ಆ ಶ್ವಾನವೂ ರುದ್ರಲೋಕಕ್ಕೆ ಐದಿತೆಂಬುದು ಪುರಾಣಿಸಿದ್ಧ ನೋಡಿರೆ.
ಅದು ಕಾರಣ,
ಶಿಖೆಯಲ್ಲಿ ಒಂದು, ಶಿರದಲ್ಲಿ ಮೂವತ್ತಾರು
ಗಳದಲ್ಲಿ ಮೂವತ್ತೆರಡು, ಕರ್ಣದ್ವಯದಲ್ಲೆರಡು
ಹಾರದಲ್ಲಿ ನೂರೆಂಟು, ತೋಳಿನಲ್ಲಿ ಹದಿನಾರು
ಕರದಲ್ಲಿ ಹನ್ನೆರಡು, ಜಪದಲ್ಲಿ ಇಪ್ಪತ್ತೆಂಟು
ಈ ಕ್ರಮವರಿದು ರುದ್ರಾಕ್ಷಿಯ ಧರಿಸಿದಾತನೇ ರುದ್ರನು,
ಆತನೇ ಸದ್ಯೋನ್ಮುಕ್ತನು,
ಆತನೇ ಇಹಲೋಕ ಪರಲೋಕ ಪೂಜ್ಯನು, ಅಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ
ವಾಙ್ಮಾನಸಾಗೋಚರವೆಂದು ಹೇಳುತ್ತೈದಾವೆ ವಾಕ್ಯಂಗಳು.
ಅದಂತಿರಲಿ,
ಐತಿಹಾಸಿಕರು ಪೌರಾಣಿಕರು ಆಗಮಿಕರು ಅರಿದರಾದಡೆ
ದೃಶ್ಯನೆಂಬರೆ ಶಿವನನು? ಅದೃಶ್ಯನೆಂಬರೆ ಶಿವನನು?
ವಾಙ್ಮಾನಸಾಗೋಚರನೆಂಬರೆ ಶಿವನನು?
ಅತ್ಯತಿಷ್ಠದ್ದಶಾಂಗುಲಂಏಕ ಏವ ಪುರುಷಃ
ಎಂಬ ಶ್ರುತಿಯಿರಲು
ಮತ್ತಚಿತ್ತನೆ ಶರಣನು?
ಅಣುವಿನೊಳಗಣುವಾಗಿ, ಮಹತ್ತಿನೊಳಗೆ ಮಹತ್ತಾಗಿ,
ಇಹಪರವೆಂಬ ಸಂದ ಹರಿದು, ಅಧ್ಯಕ್ಷತನಕ್ಕೆ ಕಾರಣಿಕನಾಗಿ
ಇಹಲೋಕವೆ ಪರ, ಪರವೆ ಇಹಲೋಕ.
ಅದು ಹೇಗೆಂದಡೆ:
ನಿತ್ಯಂ ಲಿಂಗಾರ್ಚನಂ ಯಸ್ಯ ನಿತ್ಯಂ ಜಂಗಮಪೂಜನಂ
ನಿತ್ಯಂ ಗುರುಪದಧ್ಯಾನಂ ನಿತ್ಯಂ [ನಿತ್ಯಂ]ನ ಸಂಶಯಃ
ಎಂಬ ಆಗಮವಾಕ್ಯವನರಿದು,
ಗುರುವಿಂಗೆ ತನುಮುಟ್ಟಿ, ತ್ರಿವಿಧಲಿಂಗಕ್ಕೆ ಮನಮುಟ್ಟಿ,
ತ್ರಿವಿಧಜಂಗಮಕ್ಕೆ ಧನಮುಟ್ಟಿ, ತ್ರಿವಿಧ ನಿವೇದಿಸಿ,
ಆ ಗುರುವಿಂ ಶುದ್ಧ[ಪ್ರಸಾದವ] ಆ ಲಿಂಗದಿಂ ಸಿದ್ಧನಪ್ರಸಾದವಫ
ಅ ಜಂಗಮದಿಂ ಪ್ರಸಿದ್ಧ[ಪ್ರಸಾದವ]ನವಗ್ರಹಿಸಿ
ಈ ಲಿಂಗಾರ್ಚನೆಯ ಸ್ವಾನುಭಾವದಿಂದೇಕವ ಮಾಡಿ ಅರ್ಚಿಸಲಲ್ಲಿ
ಶರಣರು ಸ್ವತಂತ್ರರು.
ಅಂಗದಾಸೆಯಲ್ಲಿ ಹರಿವುದ ಬಿಟ್ಟ ನಿಸ್ಸಂಗಿಗಳು.
ಶ್ರೋತ್ರ ನೇತ್ರ ತ್ವಕ್ಕು ಜಿಹ್ವೆ ಘ್ರಾಣ ಪಂಚೇಂದ್ರಿಯಂಗಳ
ಶಿವನ ಮುಖವೆಂದರಿದು ಅನ್ಯಸಂಗಂಗಳಿಗೆ
ಎಳಸಿ ಬಳಸಿ ಬಣ್ಣಕರಪ್ಪರೆ ಶರಣರು?
ಲಿಂಗಾರ್ಚನವಿಹೀನಸ್ತು ದ್ವಿಜೋಪಿ ಶ್ವಪಚಾಧಮಃ
ಲಿಂಗಾರ್ಚನಪರೋ ನಿತ್ಯಂ ಶ್ವಪಚೋಪಿ ದ್ವಿಜೋತ್ತಮಃ
ಎಂದುದಾಗಿ,
ಅಮ್ಮ ಶರಣರಿಗೆ ಸರಿ ಉಂಟೆ ಲೋಕದೊಳಗೆ?
ಶೂನ್ಯವೆನಿಸುವ ವಸ್ತುವ ರೂಹಿಂಗೆ ತಂದು
ನೆರೆದು ತಾನೆ ರೂಪಾಗಬಲ್ಲ ಶರಣನು.
ಆತನ ಮಹಾಮಹಿಮೆಗೆ ನಮೋ ನಮೋ ಎಂಬೆನು ಕಾಣಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಜಗದೊಳಗೆ ಸೂರ್ಯನಂತಿರ್ಪನಯ್ಯ ಶಿವನು.
ಲೋಕಾದಿ ಲೋಕಂಗಳೊಳಗಿರ್ದಡೇನು,
ಜಗದ ಪುಣ್ಯ, ಪಾಪ, ಸ್ವರ್ಗ, ನರಕ, ಬಂಧ, ಮೋಕ್ಷಕ್ಕೊಳಗಾದಾತನೇ ಅಲ್ಲ.
ಅದೆಂತೆಂದಡೆ,
ಜಲದೊಳಗಣ ಪ್ರಕೃತಿ ವಿಕೃತಿಗಳು ಜಲಕ್ಕಲ್ಲದೆ ಸೂರ್ಯಂಗಿಲ್ಲವಾಗಿ,
ಲೋಕದ ಸ್ಥಿತಿಗತಿ ಲೋಕಕ್ಕಲ್ಲದೆ, ಶಿವನಿಗಿಲ್ಲವಾಗಿ.
ಅನಂತಕೋಟಿ ಬ್ರಹ್ಮಾಂಡಗಳು ತನ್ನ ಒಡಲೊಳಗೆ ಅಡಗಿದವೆಂದಡೆ
ತಾ ಹೊರಗಾಗಿ ಅಡಗಲೆಡೆ ಏನುಂಟು?
ಇದು ಕಾರಣ,
ನಮ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನು
ವಿಶ್ವದೊಳಗೆ ಹೊದ್ದಿಯೂ ಹೊದ್ದದಿರಬಲ್ಲ,
ವಿಶ್ವಾಧಿಪತಿಯಾಗಲೂ ಬಲ್ಲ.

ವಚನ
ಜಗವೊಂದೆಸೆ, ತಾನೊಂದೆಸೆ,
ಮತ್ತಾ ಜಗದೊಳಗೆ ತಾ, ತನ್ನೊಳಗೆ ಜಗ.
ಆಗಮವೊಂದೆಸೆ, ತಾನೊಂದೆಸೆ,
ಮತ್ತಾ ಆಗಮದೊಳಗೆ ತಾ, ತನ್ನೊಳಗೆ ಆಗಮ.
ವಿಧಿಯೊಂದೆಸೆ, ತಾನೊಂದೆಸೆ,
ಮತ್ತಾ ವಿಧಿಯೊಳಗೆ ತಾ, ತನ್ನೊಳಗೆ ವಿಧಿ.
ಕ್ರೀಯೊಂದೆಸೆ, ತಾನೊಂದೆಸೆ,
ಮತ್ತಾ ಕ್ರೀಯೊಳಗೆ ತಾ, ತನ್ನೊಳಗೆ ಕ್ರೀ.
ಇಂತೀ ಜಗ, ಆಗಮ, ವಿಧಿ, ಕ್ರೀ ನಿಷೇಧವಾಗಿ,
ಹೊದ್ದಿಯೂ ಹೊದ್ದನು, ನೀರ ತಾವರೆಯಂತೆ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಜನನವೆಲ್ಲರಿಗುಳ್ಳ ಯೋನಿಗಳಲ್ಲಿ ಜನಿಸದೆ
ವಿಚಾರ ವಿಜ್ಞಾನದಿಂದ ವಿಚಾರಿಸಿ
ಶ್ರೀಗುರು ಕರುಣಾಮೃತಸಾಗರದಲ್ಲಿ ಜನಿಸಿದ ಶಿಷ್ಯನ ಪರಮವಿವೇಕವೆ
ವೇದಾದಿವಿದ್ಯೆಗಳ ಸರ್ವಸಾರ.
ಆ ಸರ್ವಸಾರಾಯದ ಸಮರಸಸ್ವರೂಪೆ
`ಓಂ ನಮಃ ಶಿವಾಯ’ ಎಂಬ ಮಂತ್ರವೇದ್ಯವಾವುದೆಂದಡೆಃ
ಆ ಷಡಕ್ಷರಿಮಂತ್ರವೆ ಷಡಂಗ ಷಟ್ಸ್ಥಲಲಿಂಗ
ಹಸ್ತ ಮುಖ ದ್ರವ್ಯ ಅರ್ಪಣ ಪ್ರಸಾದ ಪ್ರಸಾದಭೋಗ ಸಂತೃಪ್ತಿ.
ಇಂತೀ ಸತ್ಯ ನಿತ್ಯ ನಿರಂಜನ ಸಹಜ ಸನ್ಮಾರ್ಗವ ಸಾಧಿಸಿದರು
ನಮ್ಮ ಪುರಾತನರು.
ಇದನರಿದ ಮಹಾಂತನೆ ವೇದ್ಯನು,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಜನಿತವಿಲ್ಲದ [ಜನಿತ]ನಾದ ಹರನೆ, ನೀನು ನಿರೂಪನು.
ಎನ್ನ ಭಕ್ತರು ರೂಪರುಯೆಂದಹರೆ ಅಲ್ಲಲ್ಲ,
ಎನ್ನ ಭಕ್ತರೆ ನಿರೂಪರು.
ಹೆಸರಿಲ್ಲದ ವಸ್ತುವ ತಂದು ಹೆಸರಿಟ್ಟು
ಕರುಹುಗೊಂಡುದಿದೆಂದು
ಅರಿಯಬಾರದಾತನ ತಂದು ಕುರುಹಿಟ್ಟು
ಪಾಲಿಸಿದರಾದಕಾರಣ ದೇವನಾದೆ.
ಒಡಲುಗೊಂಡವರ ಜರಿಯಲೇತಕೆ?
ನೀನೊಮ್ಮೆ ಒಡಲುಗೊಂಡು ನೋಡಾ.
ಜಾಗ್ರತ್ಸ್ವಪ್ನಸುಷುಪ್ತಿಯಲ್ಲಿ ನಿನ್ನ ಧ್ಯಾನವಲ್ಲದೆ
ಅನ್ಯಧಾನ್ಯವುಂಟೆ ಎನ್ನವರಿಗೆ?
ನಿನ್ನ ಹೊಗಳಿ ಹೊಗಳಲಾರದೆ
ಆ ವೇದಂಗಳು ವಾಙ್ಮನಕ್ಕಗೋಚರನೆಂದವು,
ಕಾಣಬಾರದ ಶೂನ್ಯನೆಂದವು.
ಇಂತೀ ಪರಿಯಲಿ ಶ್ರುತಿಗಳು ಹೊಗಳಿದವು.
`ಯಜ್ಞೇನ ಯಜ್ಞಮಯಜನ್ತ ದೇವಾಃ
ತಾನಿ ಧರ್ಮಾಣಿ ಪ್ರಥಮಾನ್ಯಾಸನ್
ತೇ ಹ ನಾಕಂ ಮಹಿಮಾನಸ್ಸಚಂತೇ
ಯತ್ರಪೂರ್ವೇ ಸಾಧ್ಯಾಸ್ಸಂತಿ ದೇವಾಃ
ಎಂದವು ಶ್ರುತಿ.
ನಿನ್ನಾಯತವ ಎಮ್ಮ ಶರಣರೇ ಬಲ್ಲರು.
ಆಗಮ ಶ್ರುತಿ ಪುರಾಣಂಗಳ ಹಾಂಗೆ
ಶೂನ್ಯವ ಹೇಳುವರೆ ನಿಮ್ಮ ಶರಣರು?
.ನಿತ್ಯನೆಂದು ದಿಟಪುಟ ಮಾಡಿ ಸದ್ಭಕ್ತರ ಹೃದಯ ಮನ ಶಾಸನ
ಮಾಡಬಲ್ಲ ಶರಣರು, ಶಿವಂಗೆ ಜನಕರು ಕಾಣಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಜನಿತವಿಲ್ಲದೆ ಜನಿಸಿ ಸ್ವಯವಾದ ಹರನೇ ನೀನು ನಿರೂಪನೇರಿ
ಜನಿಸಿ ಜನಿತವ ಬಗೆಯರಾಗಿ ಎಮ್ಮ ಪುರಾತನರೇ ನಿರೂಪರು,
ಕುಲದಲ್ಲಿ ಹುಟ್ಟಿ ಕುಲವ ಬೆರೆಸರಾಗಿ ಎಮ್ಮ ಪುರಾತನರೇ ಕುಲಜರು.
ಆದಿಲಿಂಗ ಅನಾದಿಶರಣ.
ಹೆಸರಿಲ್ಲದ ದೆಶೆಗೇಡಿ ಲಿಂಗವ ವಶಕ್ಕೆ ತಂದು
ಹೆಸರಿಟ್ಟು ಕರೆದರೆ ನೀನು ಸುಲಭನೇ? ಅಲ್ಲ.
ನೀನು ಕುಲಗೇಡಿ, ನಿನ್ನನಾರು ಬಲ್ಲರು? ನೀನಗೋಚರ.
ಹರನೇ, ನೀ ಬೇಡಿತ್ತ ಕೊಟ್ಟು ನೀ ಬಂದರೆ ನಿನ್ನನಾಗುಮಾಡಿದರಲ್ಲದೆ
ಎಮ್ಮ ಪುರಾತನರು ನಿಮ್ಮಲ್ಲಿಗೆ ಬಂದು ದೈನ್ಯಬಟ್ಟು ಬೇಡಿದರಲ್ಲೈ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಜನ್ಮದ ಭವಬಂಧನವ ತೊಡೆಯಬಲ್ಲಡೆ
ಷಡಕ್ಷರವೇ ಬೀಜಮಂತ್ರ,
ಕಾಲಕರ್ಮದ ದೆಸೆಯನೊರಸಬಲ್ಲಡೆ
ಶಿವನ ತನುಧೂಳಿತಮಪ್ಪ ಶ್ರೀವಿಭೂತಿ,
ಸಟೆ ಕುಹಕ ಪ್ರಪಂಚ ಗೆಲಬಲ್ಲಡೆ ಮಹಂತರ ಸಂಗ,
ಶುಕ್ಲಶೋಣಿತದ ತನುವಿನ ಕಲ್ಮಷವ ತೊಡೆಯಬಲ್ಲಡೆ
ಜಂಗಮದ ಪಾದೋದಕ ಪ್ರಸಾದ,
ಮನ ಬುದ್ಧಿ ಚಿತ್ತ ಅಹಂಕಾರವ ಗೆಲುವಡೆ ಏಕೋಭಾವನಿಷ್ಠೆ.
ಇವು ತಾನೆ ತನ್ನೊಳಗಾಗೆ ಬೇರಾವುದೂ ಘನವಿಲ್ಲ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಜನ್ಮಾಂತರಸಹಸ್ರೇಷು ತಪೋಧ್ಯಾನಸಮಾಧಿಭಿಃ
ನರಾಣಾಂ ಕ್ಷೀಣಪಾಪಾನಾಂ ಶಿವಭಕ್ತಿಃ ಪ್ರಜಾಯತೇ
ಇಂತೆಂದುದಾಗಿ,
ಅನೇಕ ಜನ್ಮದ ಪಾಪಂಗಳು ಸವೆದು, ಶ್ರೀಗುರುಕಾರುಣ್ಯಮಂ ಪಡೆದು
ಶಿವಭಕ್ತನಾಗಿ ಶಿವಲಿಂಗವಂ ಧರಿಸಿ, ಶಿವಲಿಂಗದರ್ಶನಸ್ಪರ್ಶನಂ ಮಾಡಿ
ಇಷ್ಟಲಿಂಗ ಪ್ರಾಣಲಿಂಗಸಂಬಂಧ, ಅಂತರಂಗ ಬಹಿರಂಗ ಸರ್ವಾಂಗವಾದ ಬಳಿಕ
ಮರಳಿ ಆತ್ಮತತ್ತ್ವವ ವಿಚಾರಿಸಿ,
ಪರಮಾತ್ಮನಲ್ಲಿ ಯೋಗವ ಮಾಡಿ ಯೋಗಿಗಳಾದೆವೆಂಬಿರಿ.
ಅದೇನು ಕಾರಣ,
ಆತ್ಮನೇ ಪ್ರಾಣ, ಪರಮಾತ್ಮನೇ ಶಿವಲಿಂಗ.
ಇಂತೀ ಪ್ರಾಣಾತ್ಮನನೂ ಪರಮಾತ್ಮನಪ್ಪ ಶಿವಲಿಂಗವನೂ
ಶ್ರೀಗುರು ಯೋಗವ ಮಾಡಿ ತೋರಿಕೊಟ್ಟು, ಕರುಣಿಸಿದ ಬಳಿಕ
ಗುರ್ವಾಜ್ಞೆಯಂ ಮೀರಿ, ದ್ವಿಜರನು ಸನ್ಯಾಸಿಯನು
ಶ್ರೀಗುರ್ವಾಜ್ಞೆಯನರಿಯದ, ಶಿವನ ಮಹಾತ್ಮೆಯನರಿಯದ
ಶಿವಲಿಂಗವೇ ಪರಮಾತ್ಮನೆಂಬ ತಾತ್ಪರ್ಯವನರಿಯದ
ಈ ಭ್ರಷ್ಟರ ಮರಳಿ ಮರಳಿ ಗುರುವೆಂದು ಮಾಡಿ
ಉಪದೇಶವಂ ಮಾಡಿಸಿಕೊಳಬಹುದೆ?
ಶಿವ ಶಿವಾ! ಅದು ಗುರುದ್ರೋಹ, ಶ್ರೀಗುರು ತಪ್ಪಿ ಮಾಡಿದುದಿಲ್ಲ.
ಶ್ರೀಗುರು ಸರ್ವಧರ್ಮಂಗಳಿಗೆಯೂ
ಅಧಿಕಾಧಿಕವೆಂದು ಹೇಳಿ ತೋರಿಕೊಟ್ಟು ಕರುಣಿಸಿದ ಬಳಿಕ
ಆತ್ಮಯೋಗವೆಂದು ವೈದಿಕವೆಂದು ಸಕಲವೆಂದು ನಿಷ್ಕಲವೆಂದು
ವೈಷ್ಣವವೆಂದು ಮಾಯಾವಾದಿಗಳೆಂದು ಚಾರ್ವಾಕರೆಂದು ಬೌದ್ಧರೆಂದು
ಇತ್ಯಾದಿ ಭಿನ್ನದರ್ಶನಂಗಳಲ್ಲಿ ಧರ್ಮಶಾಸ್ತ್ರಂಗಳ ಕೇಳಿ
ಮರಳಿ ಉಪದೇಶವಂ ಮಾಡಿಸಿಕೊಳಬಹುದೆ?
ಶಿವ ಶಿವಾ ಅದು ಗುರುದ್ರೋಹ, ಶ್ರೀಗುರು ತಪ್ಪಿ ಮಾಡಿದುದಿಲ್ಲ.
ಶ್ರೀಗುರುವೇ ಪರಶಿವನಾಗಿ
ಏಕ ಏವ ರುದ್ರೋ ನ ದ್ವಿತೀಯಾಯ ತಸ್ಥೇ ಎಂದುದಾಗಿ, ಶಿವ ಏಕೋ ಧ್ಯೇಯಃ
ಎಂದುದಾಗಿ,
ಶಿವನನೇ ಪೂಜಿಸಿ ಶಿವನನೇ ಧ್ಯಾನಿಸಿ
_ಎಂದು ಹೇಳಿ ತೋರಿಕೊಟ್ಟು ಕರುಣಿಸಿದ ಬಳಿಕ
ಶಿವನಿರ್ಮಾಲ್ಯಕಂ ಶುದ್ಧಂ ಭುಂಜೀಯಾತ್ ಸರ್ವತೋ ದ್ವಿಜ
ಅನ್ಯದೈವಸ್ಯ ನಿರ್ಮಾಲ್ಯಂ ಭುಕ್ತ್ಯಾಚಾಂದ್ರಾಯಣಂ ಚರೇತ್
ಇಂತೆಂದುದಾಗಿ,
ಪ್ರಸಾದವ ಕರುಣಿಸಿದನು ಶ್ರೀಗುರು.
ಆ ಶ್ರೀಗುರುವ ಭ್ರಷ್ಟನ ಮಾಡುವಿರಿ, ಗುರು ನಿಮ್ಮಿಚ್ಛೆಗೆ ಬಾರನಾಗಿ,
ಪೂರ್ವಪುರುಷರು ಮರುಳರು, ನೀನೊಬ್ಬನೇ ಬುದ್ಧಿವಂತನೇ?
ಕೆಡದಿರು ಕೆಡದಿರು.
ದೂರ್ವಾಸ, ಅಗಸ್ತ್ಯ. ಭೃಗು, ದಧೀಚಿ, ಮಾರ್ಕಂಡೇಯ
ಮೊದಲಾದ ಋಷಿಜನಂಗಳೆಲ್ಲರೂ
ಶಿವಲಿಂಗಪ್ರತಿಷ್ಠೆಯ ಮಾಡಿ ಶಿವಲಿಂಗಾರ್ಚನೆಯಂ ಮಾಡಿದರು.
ಇವರೆಲ್ಲರು ಮರುಳುಗಳು, ನೀನೊಬ್ಬನೇ ಬುದ್ಧಿವಂತನೇ?
ಕೆಡದಿರು ಕೆಡದಿರು.
ಮತ್ತೆ ವಿಷ್ಣು ಬ್ರಹ್ಮ ಇಂದ್ರ ಮೊದಲಾಗಿ
ಶಿವಲಿಂಗಪ್ರತಿಷ್ಠೆಯಂ ಮಾಡಿ ಶಿವಲಿಂಗಾರ್ಚನೆಯಂ ಮಾಡಿದರು.
ಇವರು ಮಾಡಿದುದಕ್ಕೆ ದೃಷ್ಟವ ನೋಡಿರೆ:
ಮತ್ಸ್ಯಕೇಶ್ವರ, ಕೂರ್ಮೆಶ್ವರ, ಮಾಹೇಶ್ವರ, ರಾಮೇಶ್ವರವೆಂದು
ಲಿಂಗಪ್ರತಿಷ್ಠೆಯಂ ಮಾಡಿ ಶಿವಲಿಂಗಾರ್ಚನೆಯಂ ಮಾಡಿದರು.
ಇವರುಗಳೆಲ್ಲರು ಮರಳರು, ನೀನೊಬ್ಬನೇ ಬುದ್ಧಿವಂತನೇ?
ಕೆಡದಿರು ಕೆಡದಿರು.
ಹರಿಶ್ಚಂದ್ರ ಮೊದಲಾದ ಚಕ್ರವರ್ತಿಗಳು
ಶಿವಲಿಂಗಪ್ರತಿಷ್ಠೆಯಂ ಮಾಡಿ ಶಿವಲಿಂಗಾರ್ಚನೆಯಂ ಮಾಡಿದರು.
ಇವರು ಮಾಡಿದುದಕ್ಕೆ ದೃಷ್ಟವ ನೋಡಿರೆ:
ಕಾಶೀಪುರದಲ್ಲಿ ಇಂದ್ರೇಶ್ವರ, ಬ್ರಹ್ಮೇಶ್ವರ, ಯಕ್ಷಸಿದ್ಧೇಶ್ವರವೆಂದು
ಲಿಂಗಪ್ರತಿಷ್ಠೆಯಂ ಮಾಡಿ ಶಿವಲಿಂಗಾರ್ಚನೆಯ ಮಾಡಿದರು.
ಇವರೆಲ್ಲರೂ ಮರುಳುಗಳು, ನೀನೊಬ್ಬನೇ ಬುದ್ಧಿವಂತನೇ?
ಕೆಡದಿರು, ಕೆಡದಿರು.
ತಾರಕಾಸುರ ರಾವಣಾದಿಗಳೆಲ್ಲರೂ
ಶಿವಲಿಂಗಪ್ರತಿಷ್ಠೆಯಂ ಮಾಡಿ, ಶಿವಲಿಂಗಾರ್ಚನೆಯಂ ಮಾಡಿದರು.
ಇವರೆಲ್ಲರೂ ಮರುಳುಗಳು, ನೀನೊಬ್ಬನೇ ಬುದ್ಧಿವಂತನೇ?
ಇದು ಕಾರಣ,
ಶ್ರೀಗುರುವೆ ಅಧಿಕ, ಶಿವಲಿಂಗವೇ ಅಧಿಕ
ಶಿವಲಿಂಗಾರ್ಚನೆಯೇ ಅಧಿಕ, ಆ ಸಂಗವೇ ಸಂಗ,
ಶ್ರೀಗುರುಲಿಂಗಜಂಗಮದ ಪೂಜೆಯೇ ಪೂಜೆ,
ಅರ್ಚನೆಯೇ ಅರ್ಚನೆ, ಆ ಸಂಗವೇ ಸಂಗ ಕಾಣಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಜಲ ಮಲಿನ[ವಪ್ಪು]ವ ತೊಳೆವಂತೆ, ಮನದ ತಮಂಧವ ತೊಳೆ[ದು]
ದರ್ಪಣದೊಳಗಣ ಪ್ರತಿಬಿಂಬದಂತೆ ಇಪ್ಪಿರಿಯಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಜಲಕುಂಭಚಂದ್ರವತ್ತೆಂಬ ಯಥಾ ನ್ಯಾಯವನರುಹಿಸಿ
ಕುಂಭ ಹಲವಾದಡೆ ಚಂದ್ರನೊಬ್ಬನೊ? ಇಬ್ಬರೊ?
ಬಲ್ಲರೆ, ನೀವು ಹೇಳಿರೆ.
ಆ ಭೂಮಿಯಲ್ಲಿ ಅಡಿಗೊಂದೊಂದು ಸ್ಥಲವಾಗಿ
ಸ್ಥಲಕ್ಕೊಂದು ಬಣ್ಣವಪ್ಪ ಮೃತ್ತಿಕೆಯ ತಂದು ಘಟವಂ ಮಾಡಿ
ಆ ಘಟವ, ಬಹುವಿಧಮಂ ಕೂಡಿ ದಗ್ಧವ ಮಾಡಿ
ಏಕಶಾಯಿಯಂ ಮಾಡೆ, ಉಪಯೋಗಕ್ಕೆ ಸಂದುದೊ ಘಟವು?
ಇಂತೀ ಪರಿಯಲ್ಲಿ ತಿಳಿದು ಕೇಳಿರೆ.
ಇಂತು ಗುರುಕಾರುಣ್ಯವುಳ್ಳ ದೇಹಕ್ಕೆ
ವರ್ಣಾಶ್ರಮವನತಿಗಳೆಯದಿದ್ದಡೆ
ಆ ಗುರುಕಾರುಣ್ಯ ತಾನೆಂತಿಪ್ಪುದು ಹೇಳಿರೆ?
ಆ ಗುರುಸ್ವಾಮಿ ಹಸ್ತಮಸ್ತಕಸಂಯೋಗವ ಮಾಡಿ,
ಮಾಂಸಪಿಂಡವ ಕಳೆದು ಮಂತ್ರಪಿಂಡವಂ ಮಾಡಿ,
ವಾಯುಪ್ರಾಣಿಯ ಕಳೆದು ಲಿಂಗಪ್ರಾಣಿಯ ಮಾಡಿದ.
ಶಿವಜನ್ಮಕುಲಯುತರಾಗಿ
ಶಿವನ ಶರಣರು ವಾಙ್ಮಾನಸಾಗೋಚರರೆನ್ನದಿದ್ದಡೆ
ಕುಂಭೀಪಾತಕನಾಯಕನರಕ ತಪ್ಪದು, ಸತ್ಯಸತ್ಯ ಅವರಿಗಿದೇ ಗತಿ.
ಇನ್ನು ಅನಂತಕೋಟಿಬ್ರಹ್ಮಕಲ್ಪ ಉಳ್ಳನ್ನಕ್ಕರ
ಇಹರು ಕಾಣಾ ನರಕದಲ್ಲಿ,
ಇದಕಿನ್ನು ಶ್ರುತಿ:
ಪಾತಕಂತು ಮನುಷ್ಯಾಣಾಂ ತನುಭಾವೇಷು ವರ್ಧನಂ
ಜನ್ಮಕರ್ಮಾಮರಣಾಂತಂ ಅಜಕಲ್ಪಾವಧಿಂ ಭವೇತ್
ಮುಕ್ತಿ ಎಂಬುದು ಉಂಟಾದುದಕ್ಕೆ ಉಪದೃಷ್ಟವ ಹೇಳಿಹೆನು:
ಹಿಂದೆ ಅರಿಯಿರೆ, ನಿಮ್ಮ ಋಷಿ ಮೂಲಾಂಕುರವನು, ಉಪದೇಶಗಮ್ಯರಾಗಿ
ಅಷ್ಟಾದಶಕುಲಂಗಳನೂ ಏಕವರ್ಣವ ಮಾಡಿರೆ
ಉಪದೇಶಗಮ್ಯದಿಂದಲೂ ಇನ್ನರಿದು
ಹಡೆದ ಪದಫಲಾದಿಗಳ ನೋಡಿರೆ.
ಜನ್ಮಕರ್ಮನಿವೃತ್ತಿಯಾಗದೆ ಒಬ್ಬ ಋಷಿಗೆ?
ಜೀವನದ ಮೊದಲಲ್ಲಿ ಆವ ಬೇಡ ಕಾಣಾ.
ಜ್ಞಾನದಿಂದ ಅಂತಂತು ಮಾಡಿದಡೆ,
ಶಿವಭಕ್ತನಿಂದೆಯಿಂದ ಒಂದು ಬ್ರಹ್ಮಕಲ್ಪಪರಿಯಂತರ
ಕುಂಭೀಪಾತಕನಾಯಕನರಕದಲ್ಲಿ ಅಯಿದಾನೆ ಎಂದುದು ಶ್ರುತಿ:
ಲಿಂಗಸ್ಯಾರಾಧನೇ ವಿಘ್ನಂ ಯತ್ಕೃತಂ ಸ್ವಾರ್ಥಕಾರಣಾತ್
ನಿಮೇಷಮಪಿ ತತ್ಪಾಪಂ ಕರೋತಿ ಚ ಕುಲಕ್ಷಯಂ
ಸೂಕರಃ ಕೋಟಿಜನ್ಮಾನಿ ಲಭತೇ ಶತಕೋಟಿಭಿಃ
ಮೃಗಶ್ಚ ಕೋಟಿಜನ್ಮಾನಿ ಶೃಗಾಲಃ ಕೋಟಿಜನ್ಮಭಿಃ
ಅಂಧಶ್ಚ ಲಕ್ಷಜನ್ಮಾನಿ ಕುಬ್ಜಸ್ಸ್ಯಾದಬ್ಜಜನ್ಮಬಿಃ
ಪಂಗುಲಃ ಕೋಟಿಜನ್ಮಾನಿ ಶಿಖಂಡೀ ಜಾಯತೇ ತಥಾ
ಉಲೂಕೋ ವಾಯಸೋ ಗೃಧ್ರಶ್ಸೂಕರೋ ಜಂಬುಕಸ್ತಥಾ
ಮಾರ್ಜಾಲೋ ವಾನರಶ್ಚೈವ ಯುಗಕೋಟಿ ಶತ ನರಃ
ಲಿಂಗಾರ್ಚನರತಂ ವಾಚಾ ಸಕೃಲ್ಲಿಂಗಂ ಚ ದೂಷಯನ್
ಯುಗಕೋಟಿಕ್ರಿಮಿರ್ಭೂತ್ವಾ ವಿಷ್ಟಾಯಾಂ ಜಾಯತೇ ಪುನಃ
ಕೀಟಃ ಪತಂಗೋ ಜಾಯೇತ ಕೃತವೃಶ್ಚಿಕದರ್ದುರಃ
ಜಾಯಂತೇ ಚ ಮ್ರಿಯಂತೇ ಚ ನರಾಸ್ತೇ ನಾಸ್ತಿ ವೈ ಸುಖಂ
ಇಂತೆಂದುದಾಗಿ-
ಅಂದೊಮ್ಮೆ ಬಂದುದು ದೂರ್ವಾಸನೆಂಬ ಋಷಿಗೆ
ಮರ್ತ್ಯಲೋಕದಲ್ಲಿ ಮಹಾಪವಾದ.
ಅದ ಮರಳಿ ಪರಿಹರಿಸಿಕೊಳನೆ ಮರ್ತ್ಯಲೋಕದಲ್ಲಿ
ಶಿವಾರ್ಚನೆಯಂ ಮಾಡಿ?
ಶಿವಭಕ್ತರಿಗೆ ಮನೋಹರವಂತಹ ಪೂಜೆಯ ಮಾಡಿ
ಆ ಪರಶಿವನ ಘನಲಿಂಗವೆಂದರಿದು ಅರ್ಚಿಸಿ,
ಪರಮಭಕ್ತರ ಪಾದತೀರ್ಥಪ್ರಸಾದದಿಂದ
ಆ ಋಷಿ ಅಮರಕಾಯನೆಂಬ ನಾಮವ ಪಡೆಯನೆರಿ
ಆಕಾರಾಧ್ಯಕ್ಷರಂಗಳಿಗೆ ನಾಯಕವಂತಹ ಅಕ್ಷರ
ಪಂಚಾಕ್ಷರವೆಂಬುದನರಿದು
ಶಿವನೇ ಸರ್ವದೇವರಿಗೆ ಅಧಿದೈವವೆಂದರಿದು
ವೇದಶಾಸ್ತ್ರಪುರಾಣಾನಿ ಸ್ಪಷ್ಟಾ ವೇಶ್ಯಾಂಗನಾ ಇವ
ಯಾ ಪುನಶ್ಯಾಂಕರೀ ವಿದ್ಯಾ ಗುಪ್ತಾ ಕುಲವಧೂರಿವ
ಎಂದುದಾಗಿ:
ಶಿವಾರ್ಚಕಪದದ್ವಂದ್ವಸ್ಯಾರ್ಚನಾತ್ ಸ್ಮರಣಾದಪಿ
ಕೋಟಿಜನ್ಮಸು ಸೌಖ್ಯಂ ಸ್ಯಾತ್ ಸ ರುದ್ರೋ ನಾತ್ರ ಸಂಶಯಃ
ಎಂಬರ್ಥವನರಿದು ಆಂಗಿರಸ, ಶಾಂಡಿಲ್ಯ, ವೇದವ್ಯಾಸ,
ವಾಲ್ಮೀಕಿ, ಮಾಂಡವ್ಯ ಮೊದಲಾದ ಋಷಿಗಳೆಲ್ಲರೂ
ಶಿವನಿಂದೆ, ಶಿವಭಕ್ತರ ನಿಂದೆಯ ಮಾಡಿ
ಶಿವನ ಕ್ಷೇತ್ರವಹ ವೇದಾದಿಶಾಸ್ತ್ರಗಮಂಗಳಿಗೆ
ಪ್ರತಿಯಿಟ್ಟು ಕರ್ಮಶಾಸ್ತ್ರಂಗಳನೆಸಗಿ
ಅಕ್ಷಯನರಕವನೈದಿರಲಾಗಿ,
ತ್ರ್ಯಕ್ಷನ ಶರಣ ಕೃಪಾವರದಾನಿ ಏಕನಿಷ್ಠ
ಪರಮಮಾಹೇಶ್ವರ ಸಾನಂದನು
ಕರುಣದಿಂದಲೆತ್ತನೆ ಅವರೆಲ್ಲರ ನರಕಲೋಕದಿಂದ?
ಇಂತಿವಕ್ಕೆ ಸಾಕ್ಷಿದೃಷ್ಟಾಂತಗ್ರಂಥಗಳ ಪೇಳುವಡೆ,
ಅಂತಹವು ಅನಂತ ಉಂಟು,
ಆಗಮ ಪುರಾಣದಲ್ಲಿ ಅರಿವುಳ್ಳವರು
ತಿಳಿದು ನೋಡುವುದು.
ಶಾಪಹತರೆನಿಸುವ ಪಾಪಿಗಳು ಅವ ಮುಚ್ಚಿ ವಿತಥವ ನುಡಿವರು.
ಇದನರಿದು ನಿತ್ಯಸಹಜ ಶಿವಲಿಂಗರ್ಚನೆಯಂ ಮಾಡಿ
`ತತ್ವಮಸಿ’ ವಾಕ್ಯಂಗಳನರಿದು
ತತ್ಪದೇನೋಚ್ಯತೇ ಲಿಂಗಂ ತ್ವಂಪದೇನಾಂಗಮುಚ್ಯತೆ
ಲಿಂಗಾಂಗಸಂಗೋಸಿಪದಂ ಪರಮಾರ್ಥನಿರೂಪಣೇ
ಎಂಬುದನರಿದು ನಿತ್ಯನಿರ್ಮಳಜ್ಞಾನಾನಂದ ಪ್ರಕಾಶವೆಂಬ
ಮಹಾಮನೆಯಲ್ಲಿ ಪರಮಸುಖದಲ್ಲಿ
ಆಕಾರಂಗಳ ಲಯವನು ತಮ್ಮಲ್ಲಿ ಎಯ್ದಿಸಿ
ಮಹಾನುಭಾವರನೆನಗೆ ತೋರಯ್ಯಾ.
ನಾ ನಿನ್ನನರಿದುದಕ್ಕೆ ಫಲವಿದು
ನೀನೆನ್ನ ನೋಡಿದುದಕ್ಕೆ ಫಲವಿದು.
ಸುಖಸಚ್ಚಿದಾನಂದಸ್ವರೂಪ
ಅನಿತ್ಯವ ಮೀರಿದ ನಿತ್ಯ ನೀನಲ್ಲದೆ ಮತ್ತೊಂದುಂಟೆ?
ಎನಗೆ ನಿನ್ನಂತೆ ನಿರ್ಮಲಜ್ಞಾನಾನಂದಪದವನಿತ್ತು
ಎನ್ನ ನಿನ್ನಂತೆ ಮಾಡಿ ಉದ್ಧರಿಸಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಜಾತವೇದಸ್ಸಿನಲ್ಲಿ ಶೋಧಿಸಿ
ಪುಟವಿಟ್ಟ ಬೂದಿಯಂತಾದೆನಯ್ಯಾ ನಿಮ್ಮನಾರಾಧಿಸಿ.
ಅದೆಂತೆಂದಡೆ:
ಜ್ಞಾನಾಗ್ನಿಸ್ಸರ್ವಕರ್ಮಾಣಿ ಭಸ್ಮಸಾತ್ಕುರುತೇ ಎಂದುದಾಗಿ
ಕಾದ ಲೋಹದ ಮೇಲೆ ಉದಕವನೆರೆದಂತಾದೆನಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಜಾತಿಬ್ರಾಹ್ಮಣಂಗೆ ಕರಸ್ಥಲದಲ್ಲಿ ಲಿಂಗ,
ಉರಸ್ಥಲದಲ್ಲಿ ರುದ್ರಾಕ್ಷಿಮಾಲೆ, ಉಪನಯನ ನೊಸಲಕಣ್ಣು,
ಕಾಯ ಧೋತ್ರ, ಗಾಯತ್ರಿಮಂತ್ರ
ಪುರುಷಪ್ರಮಾಣ ದಂಡ, `ಭವತಿಬಿಕ್ಷಾಂದೇಹಿ’ಯೆಂದು
ಪರಬ್ರಹ್ಮವನಾಚರಿಸಿಕೊಂಡಿಪ್ಪಾತನೆ ಬ್ರಾಹ್ಮಣ.
ಇಂತಲ್ಲದೆ ಮಿಕ್ಕವರೆಲ್ಲ ಶಾಪಹತ ವಿಪ್ರರು ನೀವು ಕೇಳಿರೊ.
ಕೃತಯುಗ ಮೂವತ್ನಾಲ್ಕು ಲಕ್ಷದ ಐವತ್ಮೂರು ಸಾವಿರ
ವರುಷಂಗಳಲ್ಲಿ ಗಜಾಸುರನೆಂಬ ಆನೆಯ ಕೊಂದು
ಹೋಮಕ್ಕಿಕ್ಕಿ ಮಾಂಸವ ತಿನ್ನಹೇಳಿತ್ತೇ ವೇದರಿ
ಅಹುದು ತಿನ್ನ ಹೇಳಿತ್ತು. ಅದೆಂತೆಂದಡೆ:
ಕುಲ ಚಲ ಯೌವನ ರೂಪು ವಿದ್ಯಾ ರಾಜ್ಯ ತಪವೆಂಬ
ಅಷ್ಟಮದಂಗಳ ಕೊಲ್ಲ ಹೇಳಿತ್ತಲ್ಲದೆ
ಆನೆಯ ತಿಂಬ ಹೀನ ಹೊಲೆಯರ ಮುಖವ ನೋಡಲಾಗದು.
ತ್ರೇತಾಯುಗದ ಹದಿನೇಳು ಲಕ್ಷದ ಇಪ್ಪತ್ತೆಂಟು ಸಾವಿರ ವರುಷಂಗಳಲ್ಲಿ
ಅಶ್ವನೆಂಬ ಕುದುರೆಯ ಕೊಂದು ಹೋಮಕ್ಕಿಕ್ಕಿ
ಮಾಂಸವ ತಿನ್ನಹೇಳಿತ್ತೇ ವೇದ?
ಅಹುದು ತಿನ್ನಹೇಳಿತ್ತು ವೇದ. ಅದೆಂತೆಂದಡೆ:
ಪ್ರಾಣ ವ್ಯಾನ ಅಪಾನ ಉದಾನ ಸಮಾನ ನಾಗ ಕೂರ್ಮ ಕೃಕರ
ದೇವದತ್ತ ಧನಂಜಯವೆಂಬ ಕುದುರೆಯ ತಿಂಬ
ತಿನ್ನ ಹೇಳಿತ್ತಲ್ಲದೆ, ಕುದುರೆಯ ತಿಂಬ
ಜಿನುಗು ಹೊಲೆಯರ ಮುಖವಂ ನೋಡಲಾಗದು.
ದ್ವಾಪರ ಎಂಟು ಲಕ್ಷದ ಐವತ್ಕಾಲ್ಕು ಸಾವಿರ ವರುಷಂಗಳಲ್ಲಿ
ಮಹಿಷಾಸುರನೆಂಬ ಕೋಣನ ಕೊಂದು ಹೋಮಕ್ಕಿಕ್ಕಿ
ಮಾಂಸವ ತಿನ್ನ ಹೇಳಿತ್ತೇ ವೇದ?
ಅಹುದು ತಿನ್ನ ಹೇಳಿತ್ತು. ಅದೆಂತೆಂದಡೆ:
ಜಾತಿ ವರ್ಣ ಆಶ್ರಮ ಕುಲಗೋತ್ರ ನಾಮವೆಂಬ
ಕೋಣನ ಕೊಲ್ಲ ಹೇಳಿತ್ತಲ್ಲದೆ, ಕೋಣನ ತಿಂಬ
ಕುನ್ನಿ ಹೊಲೆಯರ ಮುಖವ ನೋಡಲಾಗದು.
ಕಲಿಯುಗದ ನಾಲ್ಕು ಲಕ್ಷ ಮೂವತ್ತೆರಡು ಸಾವಿರ ವರುಷಂಗಳಲ್ಲಿ
ಮಾಂಸವ ತಿನ್ನ ಹೇಳಿತ್ತೇ ವೇದ?
ಅಹುದು ತಿನ್ನ ಹೇಳಿತ್ತು, ಅದೆಂತೆಂದಡೆ,
ಮನ ಬುದ್ಧಿ ಚಿತ್ತ ಅಹಂಕಾರವೆಂಬ
ಹೋತನ ಕೊಲ್ಲ ಹೇಳಿತ್ತಲ್ಲದೆ,
ಹೋತನ ಕೊಂದು ತಿಂಬ ಹೊಲೆಯರ ಮುಖವ ನೋಡಲಾಗದು.
ಇಂತೀ ನಾಲ್ಕು ಯುಗದಲ್ಲಿ ಮಾಂಸವ ತಿಂಬ
ಅನಾಚಾರಿ ಹೊಲೆಯರ ಮುಖವಂ ನೋಡಲಾಗದು
ಅಜಂಗೆ ದ್ವಿಜನೆ ಗುರು, ದ್ವಿಜಂಗೆ ಹರಿಯೆ ಗುರು.
ಹರಿ ಹರಿಣಾವತಾರವಾದಲ್ಲಿ ಎರಳೆಯ ತಿಂಬುದಾವಾಚಾರ?
ಹರಿ ಮತ್ಸ್ಯಾವತಾರವಾದಲ್ಲಿ ಮೀನ ತಿಂಬುದಾವಾಚಾರ?
ಇಂತೀ ಹೊನ್ನಗೋವ ತಿಂಬ ಕುನ್ನಿಗಳ ತೋರದಿರಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಜ್ಞಾತೃವ ಜ್ಞಾನ ನುಂಗಿ, ಜ್ಞಾನವ ಜ್ಞೇಯ ನುಂಗಿ,
ಜ್ಞೇಯವು ತನ್ನಲೆ ತಾ ವಿಶ್ರಮಿಸಿ,
ಶ್ರವಣ ಮನನ ನಿಧಿಧ್ಯಾಸನದಲ್ಲಿ ತಲ್ಲೀಯವಾಗಿ,
ಸ್ಥೂಲ ಸೂಕ್ಷ್ಮ ಕಾರಣಂಗಳನೇಕೀಭವಿಸಿ,
ಒಂದೇ ಸಂವಿಧಾನವಾಗಿ, ಅನ್ಯಸಂಧಾನವರತು.
ಪರಮಾನಂದವೆ ಆಲಿಂಗನವಾಗಿ, ಆಲಿಂಗನವೇ ಪರಮಾನಂದವಾಗಿ,
ಪ್ರತಿದೋರದ ಅಪ್ರತಿಯಾಗಿ,
ಉರಿಯೊಳು ಬೈಚಿಟ್ಟು ಕರ್ಪುರದಂತಿರ್ದುದೆ ಭಕ್ತಮಾಹೇಶ್ವರೈಕ್ಯ,
ಇಂತಿರ್ದುದೆ ಪ್ರಸಾದಿ ಪ್ರಾಣಲಿಂಗಿಗಳೈಕ್ಯ, ಇಂತಿರ್ದುದೆ ಶರಣ ಲಿಂಗೈಕ್ಯ,
ಇಂತಿರ್ದುದೆ ಜೀವಪರಮೈಕವಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಜ್ಞಾನ ಸದ್ಭಕ್ತಿ ಸನ್ನಹಿತವಾಗಿ, ಲಿಂಗ ಮುಂತಾಗಿ ಮಾಡಿದ ಕ್ರೀ ಲಿಂಗಕ್ರೀ.
ಧ್ಯಾನ ಪೂಜೆ ಭಕ್ತಿಯರ್ಪಿತ ಪ್ರಸಾದ ಮುಕ್ತಿ- ಇವೆಲ್ಲವು ತನ್ನೊಳಗೆ,
ಅಜ್ಞಾನ ಅಭಕ್ತಿ ಮರವೆ ಮುಂತಾದ ಕ್ರೀ ಅಂಗಕ್ರೀ, ಅದು ಹೊರಗು.
ಇದು ಕಾರಣ, ಜ್ಞಾನ ಸದ್ಭಕ್ತಿ ಸನ್ನಹಿತವಾದುದೆ ಮುಕ್ತಿ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಜ್ಞಾನವೇ ಗುರು, ಜ್ಞಾನವೇ ಲಿಂಗ, ಜ್ಞೇಯವೇ ಜಂಗಮ.
ಈ ತ್ರಿವಿಧವ ಶ್ರೀಗುರು
ಅಂಗತ್ರಯ, ಮನತ್ರಯ, ಆತ್ಮತ್ರಯದ ಮೇಲೆ ತೋರಿದನಾಗಿ,
ಜ್ಞಾತ್ರ ಜ್ಞಾನ ಜ್ಞೇಯ ಬೇರಿಲ್ಲದರಿವು ತಾನೆ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಜ್ಞಾನವೇ ಪ್ರಸಾದಕಾಯ ಜ್ಞೇಯವೇ ಚಿನ್ಮಯಲಿಂಗ,
ಜ್ಞಾನ ಜ್ಞೇಯ ಸಂಪುಟದಿಂದ
ಶರಣನೆನಿಸಿಕೊಂಡ ಜಂಗಮದ ಅಂತರಂಗದಲ್ಲಿಯೂ ನೀನೇ,
ಬಹಿರಂಗದಲ್ಲಿಯೂ ನೀನೇ,
ಎಂತು ನೋಡಿದಡೆ ಶರಣರ ಕಣ್ಣ ಮೊದಲಲ್ಲಿಯೂ ನೀನೇ.
ಶಿವಜ್ಞಾನಸಂಪನ್ನನಾದ ಶರಣಂಗೆ
ಅಹ್ವಾನವಿಲ್ಲ, ವಿಸರ್ಜನೆ ಎಂಬುದಿಲ್ಲ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಜ್ಯೋತಿಕರ್ಪುರದ ಸಂಗ ಜ್ಯೋತಿಯಪ್ಪಂತೆ,
ಅಪ್ಪುವಿನ ಸಂಗದಿಂದ ಉಪ್ಪುವಪ್ಪುವಪ್ಪಂತೆ,
ಶ್ರೀಗುರುವಿನ ಸಂಗವ ಶಿಷ್ಯಮಾಡಿ ಶ್ರೀಗುರುವಪ್ಪುದು ತಪ್ಪದು.
ಶಿವನಾಣೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ತಂದೆ-ತಾಯಿ ಸಂಯೋಗಸಂಭೂತನಲ್ಲದವನು,
ಶ್ವೇತ, ಪೀತ, ಕಪೋತ, ಹರೀತ, ಕೃಷ್ಣ
ಮಾಂಜಿಷ್ಟವೆಂಬ ಷಡುವರ್ಣರಹಿತನು,
ಆದಿಮಧ್ಯಾವಸಾನಂಗಳಿಲ್ಲದ ಸ್ವತಂತ್ರಮಹಿಮನು,
ವೇದವಿಂತುಂಟೆಂದು ರೂಹಿಸಬಾರದವನು,
ನಾ ಬಲ್ಲೆನೆಂಬ ಹಿರಿಯರ ಒಗ್ಗೆಗೂ ಮಿಕ್ಕಿಪ್ಪ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ತತ್ ಪದ ಲಿಂಗವೆಂದರುಹಿ
ತ್ವಂ ಪದ ಅಂಗವೆಂದರುಹಿ
ಅಸಿ ಪದ ಪ್ರಾಣವೆಂದರುಹಿ
ಅಂಗವೇ ಲಿಂಗ, ಲಿಂಗವೇ ಪ್ರಾಣವೆಂದು
ಶ್ರೀಗುರು ಇಷ್ಟಲಿಂಗವ ಕೊಟ್ಟು, ದೃಷ್ಟಲಿಂಗವ ತೋರಿದ ಬಳಿಕ
“ತತ್ತ್ವಮಸಿ ಪದ ನಿಮ್ಮ ಶರಣರು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ತನು ತನ್ನದಾದಡೆ, ದಾಸೋಹಕ್ಕೆ ಕೊರತೆಯಿಲ್ಲ,
ದಾಸೋಹ ಸಂಪೂರ್ಣ, ದಾಸೋಹವೇ ಮುಕ್ತಿ.
ಮನ ತನ್ನದಾದಡೆ, ಜ್ಞಾನಕ್ಕೆ ಕೊರತೆಯಿಲ್ಲ
ಜ್ಞಾನ ಸಂಪೂರ್ಣ, ಆ ಜ್ಞಾನವೇ ಮುಕ್ತಿ.
ಧನ ತನ್ನದಾದಡೆ, ಭಕ್ತಿಗೆ ಕೊರತೆಯಿಲ್ಲ.
ಭಕ್ತಿ ಸಂಪೂರ್ಣ, ಭಕ್ತಿಯಲ್ಲಿ ಮುಕ್ತಿ.
ತನುಮನಧನವೊಂದಾಗಿ ತನ್ನದಾದಡೆ
ಗುರುಲಿಂಗಜಂಗಮವೊಂದೆಯಾಗಿ ತಾನಿಪ್ಪನು
ಬೇರೆ ಮುಕ್ತಿ ಎಂತಪ್ಪುದಯ್ಯಾ?
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ತನ್ನ ತಾನರಿಹವೇ ಪರಮಾತ್ಮಯೋಗ,
ತನ್ನ ತಾಮರಹವೇ ಮಾಯಾಸಂಬಂಧ.
ಅಂತರಂಗ ಬಹಿರಂಗ ಪರಮಾಕಾಶಮಧ್ಯದಲ್ಲಿ
ಪರಮಾತ್ಮನು ಪರಬ್ರಹ್ಮಸ್ವರೂಪನು,
ನಿತ್ಯ, ನಿರಂಜನ, ಉಪಮಾತೀತ
ನಿಷ್ಪತಿ, ಕೇವಲ ನಿಷ್ಕಲಸ್ವರೂಪನು.
ಭ್ರೂಮಧ್ಯದಲ್ಲಿ ಪರಮಾತ್ಮನೇ
ಅಂತರಾತ್ಮನೆನಿಸಿ ಸಕಲ ನಿಷ್ಕಲನಾಗಿಪ್ಪ.
ಹೃದಯಸ್ಥಾನದಲ್ಲಿ ಆ ಪರಮಾತ್ಮನೇ
ಜೀವಾತ್ಮನಾಗಿ ಕೇವಲ ಸಕಲನಾಗಿಪ್ಪ.
ಬ್ರಹ್ಮರಂಧ್ರಸ್ಥಾನದಲ್ಲಿ ನಿಷ್ಕಳಗುರುಮೂತಿರ್ಲಿಂಗ
ಭ್ರೂಮಧ್ಯದಲ್ಲಿ ಸಕಲನಿಷ್ಕಲ ಪರಂಜ್ಯೋತಿರ್ಲಿಂಗ
ಹೃದಯಸ್ಥಾನದಲ್ಲಿ ಕೇವಲ ಸಕಲ ಜಂಗಮಲಿಂಗ
ಇಂತು ಪರಮಾತ್ಮನೇ ಪರಬ್ರಹ್ಮ,
ಪರಮಾತ್ಮನೇ ಅಂತರಾತ್ಮ, ಪರಮಾತ್ಮನೇ ಜೀವಾತ್ಮ.
ಬಹಿರಂಗದಲ್ಲಿ ಪರಮಾತ್ಮನೇ ಗುರುಲಿಂಗ
ಪರಮಾತ್ಮನೇ ಶಿವಲಿಂಗ
ಪರಮಾತ್ಮನೇ ಜಂಗಮಲಿಂಗ.
ಇಂತು,
ಪರಮಾತ್ಮನೇ ಪರಬ್ರಹ್ಮ, ಪರಮಾತ್ಮನೇ ಸರ್ವಾತ್ಮ,
ಪರಮಾತ್ಮನೇ ಸರ್ವಗತ,
ಪರಮಾತ್ಮನೇ ಆತ್ಮಗತ.
ಇದು ಕಾರಣ,
ಪರಮಾತ್ಮನೇ ಅಂತರಂಗ, ಬಹಿರಂಗಭರಿತ ಪ್ರಾಣಲಿಂಗ.
ಇಂತು ಅರಿವುದೇ ಪರಮಾತ್ಮಯೋಗ, ಮರವೇ ಮಾಯಾ ಸಂಗ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ತಾನಾರೆಂದರಿವುದು ಭಕ್ತಿ.
ಭಕ್ತಿಯೆಂಬುದು ಹಿಂದೋ ಮುಂದೋ?
ಗುರುಲಿಂಗ ಜಂಗಮವೆಂದರಿಯದೆ ಮಾಡುವ ಭಕ್ತಿ
ಅದೇ ಅನಾಚಾರ:ಅವರು ಪ್ರಸಾದಕ್ಕೆ ದೂರ.
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ, ನಿಮ್ಮ ಶರಣರಿಗಲ್ಲದಳವಡದು.

ವಚನ
ತಾನು ಸಾವ ಕನಸ ಕಂಡಡೆ ಎದ್ದು ಕುಳ್ಳಿರಿ ಎಂಬ ಲೋಕದ
ನಾಣ್ನುಡಿ ದಿಟ ಲೇಸು.
ಸಾಯಬಹುದೆ ಸತಿಯ ಬಿಟ್ಟು, ಸುತರ ಬಿಟ್ಟು, ಸಕಲಭೋಗಾಕ್ರೀಗಳಂ ಬಿಟ್ಟು?
ಇನ್ನು ದಿಟ ದಿಟ ಕೃತಯುಗ ತ್ರೇತಾಯುಗ ದ್ವಾಪರಯುಗದಲ್ಲಿ
ಹರಿಶ್ಚಂದ್ರ, ರಾಮ, ರಾವಣಾದಿಗಳು ಸತ್ತರು.
ಕಲಿಯುಗದಲ್ಲಿ ಅನಂತರು ಸತ್ತರು.
ನಿನ್ನ ಪಿತೃಪಿತಾಮಹರೂ ಸತ್ತರು.
ನಿನ್ನ ಜೇಷ್ಠಕನಿಷ್ಠರುಗಳೂ ಸತ್ತರು ಕಾಣಾ.
ಹೀಗೆ ಕಂಡು ಕೇಳಿಯೂ ಮರುಳು ಮಾನವಾ,
ಸಾವು ದಿಟವೆಂದರಿ, ಸಂದೇಹ ಬೇಡ.
ಸಾಯಲ್ಕೆ ಮುನ್ನ ಧನ ಕೆಡದ ಹಾಗೆ ಸತ್ಪಾತ್ರಕ್ಕೆ ಮಾಡಿ,
ಮನ ಕೆಡದ ಹಾಗೆ ಶಿವನನ್ನೇ ಧ್ಯಾನಿಸಿ,
ತನು ಕೆಡದ ಹಾಗೆ ಶಿವನನ್ನೇ ಪೂಜಿಸು.
ಬಾಲಂ ವೃದ್ಧಂ ಮೃತಂ ದೃಷ್ಟ್ವಾ ಮೃತಂ ವಿಷ್ಣ್ವಾದಿದೈವತಂ
ಅಹಂ ಮೃತೋ ನ ಸಂದೇಹೋ ಶೀಘ್ರಂ ತು ಶಿವಪೂಜನಂ
ಎಂಬುದನರಿದು, ಮರೆಯಬೇಡ.
ಹೆಣ್ಣ ನಚ್ಚಿ, ಅಶುಭವ ಮಚ್ಚಿ, ಮರೆಯಬೇಡ,
ಅವಳು ನಿನ್ನ ನಂಬಳು.
ನೀನು ತನು ಮನ ಧನವನಿತ್ತಡೆಯೂ
ಪರಪುರುಷರ ನೆನೆವುದ ಮಾಣಳು.
ಅದನು ನೀನೇ ಬಲ್ಲೆ.
ಹೊನ್ನ ನಚ್ಚಿ ಕೆಡದಿರು
ಸತಿಸುತದಾಯಾದ್ಯರಿಂದಂ ರಾಜಾದಿಗಳಿಂದಂ ಕೆಡುವುದು.
ಅಲ್ಲಿ ನೀನು ಸುಯಿಧಾನದಿಂ ರಕ್ಷಿಸಲು
ಧರ್ಮಹೀನನ ಸಾರೆ, ನಿಲ್ಲೆನೆಂದು ನೆಲದಲಡಗಿ ಹೋಗುತ್ತಲಿದೆ,
ನೋಡ ನೋಡಲು,
ಹೋಗದ ಮುನ್ನ ಅರಿವನೆ ಅರಿದು, ಮರೆವನೆ ಮರೆದು
ಮಾಡಿರಯ್ಯಾ, ಶಿವಮಹೇಶ್ವರರಿಗೆ ತನು ಮನ ಧನವುಳ್ಳಲ್ಲಿ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ತೃಣಾದಿ ವಿಷ್ಣ್ವಂತ್ಯವಾಗಿ ಸರ್ವರ ಉತ್ಪತ್ತಿಸ್ಥಿತಿಲಯಂಗಳೂ ಶಿವಾಧೀನ.
ಇದನರಿದು ಸುಖಿಯಾಗಿ, ಲಿಂಗವಂತನು
ಲಿಂಗಾರ್ಚನೆಯ ಮಾಡಿ, ಪರಿಣಾಮಿಯಾದಡೆ
ಇಹಪರಸಿದ್ಧಿ, ಸದ್ಯೋನ್ಮುಕ್ತನು.
ಈ ವಿಚಾರಜ್ಞಾನವರಿಯದೆ ಮನಭ್ರಮಿಸಿ ಬಳಲಿದಡೆ ಕಾರ್ಯವಿಲ್ಲ.
ಲಿಂಗವು ಮೆಚ್ಚನು, ಲಿಂಗವಂತರೆಂತೂ ಮೆಚ್ಚರು.
ಇದನರಿದು, ಲಿಂಗವ ನಂಬಿ ಬದುಕಿರಯ್ಯಾ ಕೆಡಬೇಡ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ದಿಟದಿಟ ಈ ಬಂದುತ್ತೆ, ಈ ಬಂದುತ್ತೆ ಸಾವು, ಎನಗಿನ್ನೆಂತಯ್ಯಾ?
ಸ್ಥಿರಾಯುಗಳೆನಿಪ ದೇವಜಾತಿಗಳೆಲ್ಲ ಸತ್ತುದ ಕೇಳುತ್ತಿದ್ದೇನೆ.
ಮತ್ತೆಯೂ ಅರಿದು ಅಧರ್ಮವನೆ ಮಾಡುವೆನು.
ಧರ್ಮವ ಮಾಡೆನು, ದುಷ್ಕರ್ಮಿ ನಾನು, ಎನಗೆಂತಯ್ಯಾ?
ಸುಧರ್ಮಿ ನೀನು,
ಭಕ್ತಿಜ್ಞಾನವೈರಾಗ್ಯವ ಬೇಗ ಬೇಗ ಇತ್ತು ಸಲಹಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ದೂರ್ವಾಸ ಉಪಮನ್ಯು ದಧೀಚಿ ಜಮದಗ್ನಿ ಮಾರ್ಕಂಡೇಯ ಪರಾಶರ,
ಮೊದಲಾದ ಋಷಿಜನಂಗಳೆಲ್ಲ ಶಿವಲಿಂಗಾರ್ಚನೆಯ ಮಾಡಿದರು.
ಬ್ರಹ್ಮ ವಿಷ್ಣು ಮೊದಲಾದ ದೇವಜಾತಿಗಳೆಲ್ಲರೂ
ಶಿವಲಿಂಗಾರ್ಚನೆಯ ಮಾಡಿದರು,
ಕೇಳಿರೇ ದೃಷ್ಟವ:
ಮತ್ಸ್ಯೇಶ್ವರ, ಕೂರ್ಮೆಶ್ವರ, ನಾರಸಿಂಹೇಶ್ವರ, ರಾಮೇಶ್ವರನೆಂದು
ದಶಾವತಾರಂಗಳಲ್ಲಿ ವಿಷ್ಣು ಶಿವಲಿಂಗವ ಪ್ರತಿಷ್ಠೆಯ ಮಾಡಿದುದಕ್ಕೆ
ವೇದಶಾಸ್ತ್ರಾಗಮಪುರಾಣಂಗಳ ಕೇಳಿ ನೋಡಿರೆ, ಅದೆಂತೆಂದಡೆ:
ಯಂ ಯಂ ಕಾಯಯತೇ ಕಾಮ ತಂ ತಂ ಲಿಂಗಾರ್ಚನಂ ಲಭೀತ್
ನ ಲಿಂಗೇನವಿನಾ ಸಿದ್ಧ ದುರ್ಲಭಂ ಪರಮಂ ಪದಂ
ಎಂಬುದಾಗಿ ಮತ್ತಂ;
ಅಗ್ನಿಹೋತ್ರಶ್ಚ ವೇದಶ್ಚ ಯಜ್ಞಶ್ಚ ಬಹುದಕ್ಷಿಣಾಂ
ಶಿವಲಿಂಗರ್ಚನಂ ಶ್ವೇತ ಕೋಟ್ಯೋಂಸಿನಾಪಿನೋ ಸಮಃ
ಎಂಬುದಾಗಿ,
ಇಂದ್ರ ಮೊದಲಾದ ದೇವಜಾತಿಗಳೆಲ್ಲರು
ಶಿವಲಿಂಗಾರ್ಚನೆಯ ಮಾಡಿದರು.
ಇವರೆಲ್ಲರು ಮರುಳರೆ, ನೀವೇ ಬುದ್ಧಿವಂತರೆ?
ಕೇಳಿರೇ, ಕೆಡದಿರಿ ಕೆಡದಿರಿ, ಶ್ರೀ ಗುರುವಾಕ್ಯವನೆ ನಂಬಿ,
ಗುರು ಲಿಂಗ ಜಂಗಮವನೊಂದೆ ಎಂದು ನಿಶ್ಚೈಸಿ, ಇದೇ ಅಧಿಕ,
ಇದರಿಂದ ಬಿಟ್ಟು ಮತ್ತಿನ್ನಾವುದು ಅಧಿಕವಿಲ್ಲ.
ಗುರುಲಿಂಗಜಂಗಮದಲ್ಲಿಯ ಭಕ್ತಿಯೇ ಭಕ್ತಿ,
ಅರ್ಚನೆಯೇ ಅರ್ಚನೆ, ಸಂಗವೇ ಶಿವಯೋಗ,
ಇದು ಸತ್ಯ, ಶಿವನಾಣೆ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ದೇವ ದಾನವ ಮಾನವ ಋಷಿಜಂಗಳೆಲ್ಲರನು
ಮಹಾಲಿಂಗವ ಕಂಡೆಹೆವೆಂದು
ಅನೇಕಕಾಲಂಗಳಲ್ಲಿ ತಪವ ಮಾಡಿ, ಧ್ಯಾನವ ಮಾಡಿ,
ಜಪವ ಮಾಡಿಯೂ ಕಾಣಲರಿಯದೆ ಬಳಲುತ್ತೈದಾರೆ.
ಅವರಲ್ಲಿ ಸಮರ್ಥಪುರುಷರು ಕಂಡಡೆಯೂ ಕಂಡರೇನು ಫಲ?
ಲಿಂಗಕ್ಕೆ ಒಲಿಯರು, ಲಿಂಗವನೊಲಿಸಿಕೊಳಲರಿಯರು,
ಕೂಡಲರಿಯರು.
ಅಲ್ಪಭೋಗಂಗಳನಿಚ್ಛೈಸಿ, ಆ ಭೋಗಪದವ ಪಡೆದು,
ಪುಣ್ಯಪಾಪಂಗಳ ಬಲೆಯೊಳು ಬೀಳುತ್ತಿಹರು.
ಅವರುಗಳ ಪರಿಯಿಲ್ಲ, ಎನಗೆ.
ಶಿವ ಶಿವಾ ಮಹಾದೇವ, ಮಹಾಲಿಂಗನ ಕರುಣವನು ಏನೆಂದುಪಮಿಸಬಹುದು
ಶ್ರೀಗುರುವಾಗಿ ಕರುಣಿಸಿ ಶ್ರೀಹಸ್ತದಿಂದೆನಗೆ ಜನನವ ಮಾಡಿ
ಮಾತಾಪಿತನು ತಾನೆಯಾದನು.
ಮಹಾದೀಕ್ಷೆಯ ಮಾಡಿ ಶ್ರೀಗುರು ತಾನೆಯಾದನು.
ಮಹಾಮಂತ್ರೋಪದೇಶವ ಮಾಡಿ ಮಂತ್ರರೂಪಾಗಿ
ಕರ್ಣದಲ್ಲಿ ಭರಿತವಾದನು,
ಪ್ರಸಾದರೂಪಾಗಿ ಜಿಹ್ವೆಯಲ್ಲಿ ಭರಿತವಾದನು,
ಮಹಾವಿಭೂತಿಯಾಗಿ ಬಾಳದಲ್ಲಿ ಭರಿತವಾದನು,
ಸರ್ವಾಂಗಭರಿತವಾದನು.
ಮತ್ತೆ ಮತ್ತೆ ಮಹಾಚೋದ್ಯ,
ಶ್ರೀಗುರು ಲಿಂಗಮೂರ್ತಿಯನು ಪ್ರಾಣವನೇಕೀಭವಿಸಿ
ಪ್ರಾಣಲಿಂಗವಾದನಾಗಿ
ಅಂಗದ ಮೇಲೆ ಬಿಜಯಂಗೈದು ಅಂಗಲಿಂಗವಾದನು.
ಮಹಾಲಿಂಗವಾಗಿ ಕರಸ್ಥಲದಲ್ಲಿ ನಿರಂತರ ಪೂಜೆಗೊಳ್ಳುತ್ತಿದ್ದನು, ಇದೂ ವಿದಿತ.
ಸುಜ್ಞಾನವನೂ ಪ್ರಸಾದವನೂ ಕರುಣಿಸಲೆಂದು
ಶರಣಭರಿತನಾಗಿ ಬಂದು ಕರುಣಿಸಿದನು.
ಇಂತು,
ಶ್ರೀಗುರು ಲಿಂಗಜಂಗಮರೂಪಾಗಿ ಕರುಣಿಸಿ, ಪ್ರಸನ್ನನಾಗಿ
ಮಹಾಪ್ರಸಾದವ ಕರುಣಿಸಿ, ಪ್ರಸಾದರೂಪವಾಗಿ ಸಲುಹಿದನು.
ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯ
ಚತುರ್ವಿಧಪದಕ್ಕೆ ಘನಪದದಾಸೋಹದಲ್ಲಿರಿಸಿದನು.
ಸರ್ವಪದ ಮಹಾಪದಕ್ಕೆ ವಿಶೇಷ ಲಿಂಗಪದದಲ್ಲಿರಿಸಿದೆನು.
ಶಿವ ಶಿವಾ ಮಹಾಪದವ ನಾನೇನೆಂದುಪಮಿಸಲರಿಯೆ.
ಸದ್ಗುರುಕೃಪೆ, ವಾಙ್ಮನೋತೀತ.
ಮಹಾಘನಪರಿಣಾಮಸುಖವನು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ತಾನೆ ಬಲ್ಲ.

ವಚನ
ದೇವ, ಮಂಗಳಮಜ್ಜನಮಂ ಮಾಡಲು,
ಶಿವಲಿಂಗೋದಕದಿಂ ಪಾದಾರ್ಚನೆಯಂ ಮಾಡಿ,
ಹೊಂಗಳಸದೊಳಗಘ್ರ್ಯಂಗಳಂ ತುಂಬಿ ಮಧುಪರ್ಕಮಂ ಮಾಡಿ,
ದೇವಾಂಗವಸ್ತ್ರಂಗಳನುಡಿಸಿ, ಷೋಡಶಾಭರಣಂಗಳಂ ತೊಡಿಸಿ,
ದೇವಂಗೆ ಗಂಧಾಕ್ಷತೆ ಪುಷ್ಪಂಗಳಿಂ ಪೂಜೆಯ ಮಾಡಿ,
ಅಗರು ಧೂಪಂಗಳಿಂ ಧೂಪಿಸಿ,
ಮಂಗಳಾಚರಣೆ ಆರೋಗಣೆ ವೀಳ್ಯೆಯವನಳವಡಿಸಿ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಂಗೆ,
ಗೀತವಾದ್ಯನೃತ್ಯವನಾಡಿ ಮೆಚ್ಚಿಸುವ ಗಣಂಗಳಿಗೆ
ನಮೋ ನಮೋ ಎಂಬೆನು.

ವಚನ
ದೇವನೊಂದೆ ವಸ್ತು, ಮನವೊಂದೆ ವಸ್ತು.
ಸತ್ಯ, ನಿತ್ಯ, ಸಹಜ, ಉತ್ತಮ ವಸ್ತುವೆ ಉತ್ತಮ ವಸ್ತು.
ಈ ಒಂದನೊಂದು ಮೆಚ್ಚಿ ಒಂದಾದಡೆ
ಇಹ ಪರ ಒಂದು, ದ್ವಂದ್ವವೆಂಬುದಿಲ್ಲ.
ಒಂದೆ ಇದು, ಘನಪರಿಣಾಮ ಮುಕ್ತಿಯಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ದೇವರಾರೋಗಣೆಯಂ ಮಾಡಿಸಿ,
ಪ್ರಸನ್ನತ್ವಮಂ ಪಡೆದು
ಪ್ರಸಾದಮಂ ಧರಿಸಿ ಮುಕ್ತರಪ್ಪರಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ದೇಹವೆಂಬ ಮನೆಯಲ್ಲಿ ಮಹಾಲಿಂಗವೆಂಬರಸು
ಮನವೆಂಬ ಪೀಠದ ಮೇಲೆ ಮೂರ್ತಿಗೊಂಡಿರಲು,
ಅಂತಃಕರಣವೆಂಬ ಪರಿಚಾರಕರುಗಳ ಕೈಯಿಂದ
ಪಂಚೇಂದ್ರಿಯಗಳೆಂಬ ಪರಿಯಾಣದಲ್ಲಿ
ಶಬ್ದ ಸ್ಪರ್ಶ ರೂಪು ರಸ ಗಂಧಂಗಳೆಂಬ
ಪದಾರ್ಥಂಗಳನೆಡೆಮಾಡಿಸಿಕೊಂಡು ಸವಿವುತ್ತಿರಲು
ಆನಂದವೆ ಮಹಾಪ್ರಸಾದವಾಗಿ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನು ಸದಾ ಸನ್ನಹಿತ ಕಾಣಿರೆ.

ವಚನ
ಧರ್ಮದೊಳಗೆ ಶಿವಧರ್ಮವೇ ಧರ್ಮವೆಂದರಿದೆನಾಗಿ,
ಧರ್ಮ ಸಾಧ್ಯವಾಯಿತ್ತೆನಗೆ.
ಗುರುಲಿಂಗಜಂಗಮವ ಪಡೆದೆನಾಗಿ,
ಅರ್ಥ ಸಾಧ್ಯವಾಯಿತ್ತೆನಗೆ.
ಶರಣಸತಿ ಲಿಂಗಪತಿ ಎಂದರಿದೆನಾಗಿ,
ಕಾಮ ಸಾಧ್ಯವಾಯಿತ್ತೆನಗೆ.
ಮಹಾಪ್ರಸಾದವನಿಂಬುಗೊಂಡು ಧರಿಸಿದೆನಾಗಿ,
ಮೋಕ್ಷ ಸಾಧ್ಯವಾಯಿತ್ತೆನಗೆ.
ಇಂತೀ ಧರ್ಮಾರ್ಥಕಾಮಮೋಕ್ಷಂಗಳೆಂಬ
ಚತುರ್ವಿಧಫಲವೆನಗಾಯಿತ್ತು,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ನ ಗುರೋರಧಿಕಂ, ನ ಗುರೋರಧಿಕಂ,
ನ ಗುರೋರಧಿಕಂ, ನ ಗುರೋರಧಿಕಂ,
ವಿದಿತಂ ವಿದಿತಂ ವಿದಿತಂ ವಿದಿತಂ ಶಿವಶಾಸನತಃ
ಎಂದು[ದು] ವಚನ.
ಶ್ರೀಗುರು ಮರ್ತ್ಯಕ್ಕೆ ಬಂದು
ಅಷ್ಟಾದಶಜಾತಿಗಳೊಳಗಿದ್ದರೇನು ಮರ್ತ್ಯನೆರಿ ಅಲ್ಲ.
ಸಾಕ್ಷಿಃ ಗುರುದೇವೋ ಮಹಾದೇವೋ ಗುರುದೇವಸ್ಸದಾಶಿವಃ
ಗುರುದೇವಾತ್ಪರಂ ನಾಸ್ತಿ ತಸ್ಮೈ ಶ್ರೀಗುರವೇ ನಮಃ ಎಂದುದಾಗಿ,
ಲಲಾಟಲೋಚನೇ ಚಾಂದ್ರೀ ಕಲಾಮಪಿ ಚ ದೋದ್ರ್ವಯಂ
ಅಂತರ್ನಿಧಾಯ ವರ್ತೇಹಂ ಗುರುರೂಪೋ ಮಹೇಶ್ವರಃ
ಎಂದುದಾಗಿ, ಶಿವನು ಗುರುರೂಪಾಗಿ ವರ್ತಿಸುತ್ತಿರ್ದನು.
ಪರಶಿವೋ ಗುರುಮೂರ್ತಿಃ ಶಿಷ್ಯದೀಕ್ಷಾದಿಕಾರಣಾತ್
ಶಿಷ್ಯಾತೀತಂ ಮಹಾಚೋದ್ಯಂ ಚೋದ್ಯರೂಪಾಯ ವೈ ನಮಃ ಎಂದುದಾಗಿ,
ಶಿಷ್ಯಂಗೆ ದೀಕ್ಷೆಯ ಮಾಡಿ ಕರುಣಿಸಿ ಬಂದ
ಮಹಾಕರುಣಾಮೂರ್ತಿ ಸದಾಶಿವ ತಾನೆ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ನ ಭೂಮಿ ನರವಿಂದಾಪೋನವಹ್ನಿ ಪ್ರಾಣಾನಿಲಂಗನನೋನ ಚ ವಿದ್ಯತೇ
ನಯಾತ್ಮಧ್ಯಕ್ಷಾರಂ ಪರಮಾಕಾಶಮದೇ ಭಾತೀ ತತ್ಪರಂ ಬ್ರಹ್ಮಾಂ
ಎಂದು ಶ್ರುತಿ ಸಾರುತ್ತಿರಲು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನೊಬ್ಬನೆ ದೇವಧ್ಯಾಯನು.

ವಚನ
ನಗೆ ನೀನು ಪ್ರಾಣ, ನಿನಗೆ ನಾನು ಪ್ರಾಣ.
ಇನ್ನೇನೋ ಇನ್ನೇನೋ ಹಂಗಿಲ್ಲ, ಹರಿ ಇಲ್ಲ.
ಮತ್ತೇನೂ ಪ್ರಪಂಚಿಲ್ಲಾಗಿ,
ನೀ ನಡೆಸಿದಂತೆ ನಡೆದೆ, ನೀ ನುಡಿಸಿದಂತೆ ನುಡಿದೆ,
ನೀ ನೋಡಿಸಿದಂತೆ ನೋಡಿದೆ, ನೀ ಆಡಿಸಿದಂತೆ ಆಡಿದೆ,
ನೀ ಮಾಡಿಸಿದಂತೆ ಮಾಡಿದೆ.
ಈ ಸುಖದುಃಖ ಪುಣ್ಯಪಾಪಕ್ಕೆ ಕಾರಣನು ನೀನೇ ಅಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ನಾನಾ ಪ್ರಯತ್ನದಿಂದ ಹೊನ್ನನಾರ್ಜಿಸುವಂತೆ,
ನಾನಾ ಪ್ರಯತ್ನದಿಂದ ಹೊನ್ನ ಸುರಕ್ಷಿತವ ಮಾಡುವಂತೆ,
ನಾನಾ ಪ್ರಯತ್ನದಿಂದ ಬೇಡಿದವರಿಗೆ ಕೊಡದೆ
ಲೋಭವ ಮಾಡಿ ಸ್ನೇಹಿಸುವಂತೆ,
ನಾನಾ ವಿಧದಿಂದ ವಿಚಾರಿಸಿ ವಿಚಾರಿಸಲು ಪ್ರಾಣವೇ ಹೊನ್ನೆಂಬಂತೆ,
ನಾನಾ ಪರಿಯಲು ಮನ ಬುದ್ಧಿ ಚಿತ್ತಹಂಕಾರಂಗಳು
ಪಂಚೇಂದ್ರಿಯಂಗಳು ಪ್ರಾಣವನು ಅವಗ್ರಹಿಸಿಕೊಂಡಿಪ್ಪಂತೆ
ಶಿವಲಿಂಗವನು ಅವಗ್ರಹಿಸಿಕೊಂಡಿರಬೇಕು. ಏಕೆ?
ಆ ಹೊನ್ನೇ ಶಿವನಾದ ಕಾರಣ,
ಓಂ ನಮೋ ಹಿರಣ್ಯಬಾಹವೇ ಸೇನಾನ್ಯೇ ದಿಶಾಂ ಚ ಪತಯೇ ನಮೋ ನಮೋ ವೃಕ್ಷೇಭ್ಯೋ ಹರಿಕೇಶೇಭ್ಯಃ ಪಶೂನಾಂ ಪತಯೇ ನಮಃ, ಎಂದುದಾಗಿ ಶಿವನೇ ಹೊನ್ನು ಕಾಣಿರೋ ಶಿವಶಿವಾ ನಾನಾ ಪ್ರಯತ್ನದಿಂದ ಕುಲವುಳ್ಳವರು ಅತ್ಯಂತ ಯೌವನೆಯಪ್ಪ ಹೆಣ್ಣಿಂಗೆ ಪ್ರಾಣಕ್ಕೆ ಪ್ರಾಣವಪ್ಪಂತೆ, ಆ ಹೆಣ್ಣಿಂಗೆ ಅಂತಃಕರಣ ಚತುಷ್ಟಯಂಗಳು ಸ್ನೇಹಿಸುವಂತೆ ಆ ಹೆಣ್ಣು ಪ್ರಾಣವಾಗಿಪ್ಪಂತೆ, ಆ ಲಿಂಗವೇ ಪ್ರಾಣವಾಗಿರಬೇಕು. ಅದಕ್ಕೆ ಹೆಣ್ಣೇ ಶಿವನಾದ ಕಾರಣ ಶಕ್ತ್ಯಾಧಾರೋ ಮಹಾದೇವಃ ಶಕ್ತಿರೂಪಾಯ ವೈ ನಮಃ ಶಕ್ತಿಃ ಕರ್ಮ ಚ ಕರ್ತಾ ಚ ಮುಕ್ತಿಶಕ್ತೈ ನಮೋ ನಮಃ ಎಂದುದಾಗಿ- ಆ ಹೆಣ್ಣು ತಾನೇ ಶಿವನು ಕಾಣಿರೋ. ನಾನಾ ಪ್ರಯತ್ನದಿಂದ ಮಣ್ಣನಾರ್ಚಿಸುವಂತೆ, ಆ ಭೂಮಿಯ ಅಗುಚಾಗಿಗೆ ಅರ್ಥಪ್ರಾಣಾಭಿಮಾನವನಿಕ್ಕಿ ಆ ಭೂಮಿಯ ರಕ್ಷಿಸಿ ಆ ಭೂಮಿಯ ಸರ್ವಭೋಗೋಪಭೋಗಂಗಳನು ಭೋಗಿಸಿ ಸುಖಿಸುವಂತೆ, ಶಿವಲಿಂಗದಿಂದ ಭೋಗಿಸಬೇಕು. ಅದೇಕೆಂದಡೆ- ಭೂಮಿಯೇ ಶಿವನಾದ ಕಾರಣ, ಓಂ ಯಜ್ಞಸ್ಯ ರುದ್ರಸ್ಯ ಚಿತ್ಪೃಥಿವ್ಯಾಭೂರ್ಭುವಃ ಸ್ವಃ
ಶಿವಂ ಶಿವೋ ಜನಯತಿ’ ಎಂದುದಾಗಿ
ಭೂಮಿಯೇ ಶಿವನು ಕಾಣಿರೋ
ಸರ್ವಾಧಾರ ಮಹಾದೇವ.
ಇದು ಕಾರಣ,
ಹೊನ್ನು ಹೆಣ್ಣು ಮಣ್ಣು ತ್ರಿವಿಧವು ಶಿವನು ಕಾಣಿರೋ.
ಈ ತ್ರಿವಿಧದ ಮರೆಯಲ್ಲಿ ಶಿವನಿಪ್ಪನು ಕಾಣಿರೋ.
ಇದು ಕಾರಣ, ಈ ತ್ರಿವಿಧಕ್ಕೆ ಮಾಡುವ ಸ್ನೇಹ,
ಇಂತೀ ತ್ರಿವಿಧದಲ್ಲಿ ಮಾಡುವ ಲೋಭ,
ಇಂತೀ ತ್ರಿವಿಧಕ್ಕೆ ಮಾಡುವ ತಾತ್ಪರ್ಯವ ಶಿವಲಿಂಗಕ್ಕೆ ಮಾಡಿದಡೆ,
ಶಿವನಲ್ಲಿ ಸಾಯುಜ್ಯನಾಗಿ ಸರ್ವಭೋಗೋಪಭೋಗವ ಭೋಗಿಸಿ
ಪರಮಪರಿಣಾಮ ಸುಖಸ್ವರೂಪನಾಗಿಪ್ಪನಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ನಾನಾವಿಧದ ಪೂಜೆಗಳ ಪೂಜಿಸಿದವರೆಲ್ಲಾ ಭಕ್ತರೆ, ಹೇಳಿರಣ್ಣಾ.
ವಿಷ್ಣು ಮೊದಲಾದ ದೇವಜಾತಿಗಳು
ತಾರಕ ರಾವಣಾದಿ ದೇವ ದಾನವ ಮಾನವರನೇಕರು
ಮಹಾದೇವನ ಪೂಜಿಸಿ ಫಲದಾಯಕರಾಗಿ
ಪದಂಗಳ ಪಡೆದರು.
ಈ ಫಲದಾಯಕರೆಲ್ಲರೂ ಸದ್ಭಕ್ತರಪ್ಪರೆ? ಅಲ್ಲ,
ಅವರೆಲ್ಲರೂ ಉಪಾಧಿಕರು.
ಪರಧನ ಪರಸ್ತ್ರೀ ಪರದೈವವ ಬಿಟ್ಟು ಪಂಚೇಂದ್ರಿಯ ಷಡ್ವರ್ಗಂಗಳ ಬಿಟ್ಟು
ನಿರುಪಾಧಿಕರಾಗಿ ನಿರಂತರ ಪೂಜಿಸಿದಡೆ, ಆತನೇ ಸದ್ಭಕ್ತನು,
ಆತನೇ ಮಹಾಮಹಿಮನು, ಆತನೇ ಮಹಾದೇವನಯ್ಯಾ.
ಆ ಭಕ್ತಂಗೆ ಭಕ್ತದೇಹಿಕ ದೇವನು,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ನಾನು ಕಾಮಿಸುತ್ತಿಪ್ಪ ವಸ್ತುವಿನಲ್ಲಿ
ಸಾಲೋಕ್ಯವಿದೆ, ಸಾಮೀಪ್ಯವಿದೆ, ಸಾರೂಪ್ಯವಿದೆ, ಸಾಯುಜ್ಯವಿದೆ.
ಧರ್ಮವಿದೆ, ಅರ್ಥವಿದೆ, ಕಾಮವಿದೆ, ಮೋಕ್ಷವಿದೆ,
ನಾನರಸುವ ಬಯಕೆ ಎಲ್ಲವೂ ಇದೆ.
ಎನ್ನ ಧ್ಯಾನ ಜಪತಪದಿಂದ ಸಾಧ್ಯವಪ್ಪ ಸಿದ್ಧಿ
ಎಲ್ಲವೂ ಇದೆ ನೋಡಾ
ಶ್ರೀಗುರುವಿನ ಕಾರುಣ್ಯದಿಂದ ಮಹಾವಸ್ತು
ಕರಸ್ಥಲಕ್ಕೆ ಬಂದ ಬಳಿಕ
ಸರ್ವಸುಖಂಗಳೆಲ್ಲವೂ ಇವೆ, ಇವೆ ನೋಡಾ.
ಇನ್ನು ಎನ್ನ ಬಯಲ ಭ್ರಮೆಯೊಳಗೆ ಹೊಗಿಸದಿರಯ್ಯ
ನಿಮ್ಮ ಬೇಡಿಕೊಂಬೆನು, ನಿಮಗೆ ಎನ್ನಾಣೆ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ನಾನು ಕಾಮಿಸುವ ವಸ್ತು ಕರಸ್ಥಲಕೆ ಬಂದ ಬಳಿಕವೂ
ಕಾಮಿಸಲೇನುಂಟುರಿ ಇನ್ನೇನ ಕಾಮಿಸುವೆನೆಯ್ಯಾ.
ಓಂ ನಮೋ ಹಿರಣ್ಯಬಾಹವೇ ಹಿರಣ್ಯವರ್ಣಾ ಹೇ ಹಿರಣ್ಯರೂಪಾಯ ಹಿರಣ್ಯಪತಯೆ’ ಎಂಬ ವಸ್ತು, ಓಂ ಎವೈ ರುದ್ರಸ್ಯ ಭವಾನ್ಯ ಸ್ಯಾಮೃತಂ ಎಂಬ ವಸ್ತು,
ಸುಖಸ್ವರೂಪನು ಅಭಯಹಸ್ತನು ಶಾಂತನು ಕರುಣಿ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ನಾನೊಂದು ಮಾಡೆಹೆನೆಂಬ ಪ್ರತಿಜ್ಞೆ ಎನಗೊಡ್ಡಿ,
ನೀನದ ಕೆಡಸಿಹೆನೆಂಬ ಸ್ವತಂತ್ರಿಕೆಯ ನೀ ತಾಳುವೆ.
ನಾ ಮುನ್ನ ಎಲ್ಲಿಯವನು ನೀ ಮಾಡದನ್ನಕ್ಕರರಿ
ಆನೆಂಬ ಹರಿಬ್ರಹ್ಮಾದಿಗಳ ಚೈತನ್ಯಸ್ವರೂಪ ನೀನವಧಾರು ದೇವಾ,
ಇಚ್ಛಾ ಜ್ಞಾನ ಕ್ರಿಯಾಶಕ್ತಿ ನಿಮ್ಮಿಚ್ಛೆ, ಎನ್ನಿಚ್ಛೆಯೆ?
ಮಾಡಿಕೊಂಡ ಮದುವೆಗೆ ಹಾಡುತ್ತ ಹಂದರವನಿಕ್ಕೆಂಬ
ನಾಡಗಾದೆಯ ಮಾತು ನಿಮಗಾಯಿತ್ತು,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ನಿಃಕಾಮಿತ ಫಲವ ಕಾಮಿಸುವ ಮಹಾಕಾಮಿಯೆ ಶಿವಭಕ್ತನು,
ಕ್ರೋಧಕ್ಕೆ ಕ್ರೋದಿಸುವ ಮಹಾಕ್ರೋದಿಯೆ ಲಿಂಗನಿಷ್ಠಾಪರನು,
ನಿರ್ಲೋಭಕ್ಕೆ ಲೋಬಿಸುವ ಮಹಾಲೋಬಿಯೆ ಲಿಂಗಾವಧಾನಿ.
ನಿರ್ಮೊಹಕ್ಕೆ ಮೋಹಿಸುವ ಮಹಾಮೋಹಿಯೆ ಲಿಂಗಾನುಭಾವಿ.
ಅಷ್ಟಮದಂಗಳೊಡನೆ ಮದೋಹಂ ಎಂಬ
ನಿರ್ಮದಗ್ರಾಹಿಯೆ ಲಿಂಗಾನಂದಸಾಖ್ಯನು.
ಮತ್ಸರಕ್ಕೆ ಮತ್ಸರಿಸುವ ಮಹಾಮತ್ಸರಗ್ರಾಹಕನೆ
ಲಿಂಗಸಮರಸಸಂಬಂಧವೇದ್ಯನು.
ಇಂತೀ ಷಡ್ವರ್ಗಂಗಳಿಗೆ ವೈರಿಯಾಗಿರ್ಪ ಶಿವಭಕ್ತನೆ ಸದ್ಭಕ್ತನು.
ಆ ಭಕ್ತದೇಹಿಕದೇವ ನಮ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನು.

ವಚನ
ನಿಕ್ಷೇಪನಿಧಿಯ ಸಾಧ್ಯವ ಮಾಡಲೆಂದು
ಅಂಜನಕ್ಕೆ ಭಸ್ಮವ ಮಾಡಿ, ಕೃಪಾಮೃತದಿಂ ಮರ್ದಿಸಿ
ಅಂಜನವನಿಕ್ಕಿಕೊಂಡು ನಿಧಾನವ ತೆಗೆದುಕೊಂಡು ಸರ್ವಭೋಗವ ಮಾಡಬೇಕು.
ಆ ಧನವನೆ ಭಸ್ಮವ ಮಾಡಿದ ಬಳಿಕ
ಆ ಅಂಜನವ ಪ್ರಯೋಗಿಸುವ ಪರಿ ಎಂತಯ್ಯಾ?
ಆ ನಿಧಾನವ ಗ್ರಹಿಸಿಕೊಂಡು ಇರ್ದ ಮಹಾಭೂತವು
ನಾಥನನೇ ಬಲಿಯ ಬೇಡಿದಡೆ,
ಆ ನಿಧಾನವ ತಂದು ಭೋಗಿಸುವವರಿನ್ನಾರಯ್ಯಾ?
ಭಕ್ತಿಯನೂ ಪೂಜೆಯನೂ ಮಾಡಿಸಿಕೊಂಡು
ಪ್ರಸಾದವ ಕರುಣಿಸಿ ಮುಕ್ತಿಯ ಕೊಡುವ
ಶ್ರೀಗುರುಲಿಂಗಜಂಗಮವನೂ ಆಜ್ಞೆಯ ಮಾಡಿ
ಆಯಸಂ ಬಡಿಸಿ, ಅವರನಪಹರಿಸಿ
ದ್ರವ್ಯಮಂ ಕೊಂಡು ಅದಾರಿಗೆ ಭಕ್ತಿಯ ಮಾಡುವದು?
ಅದಾರಿಗೆ ಪೂಜಿಸುವದುರಿ ಅದಾರಿಗೆ ಅರ್ಪಿಸುವದುರಿ ಹೇಳಿರೆ.
ಪೂಜೆಗೊಂಬ ಲಿಂಗವ ಅಪೂಜ್ಯವಾಗಿ ಕಂಡಡೆ
ಆ ಮಹಾಪಾಪಿಗೆ ಸದ್ಯವೇ ನರಕ, ಸಂದೇಹವಿಲ್ಲಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ನಿತ್ಯನಿರಂಜನಪರಂಜ್ಯೋತಿಲಿಂಗವು
ಪ್ರತ್ಯಕ್ಷವಾಗಿ ಎನ್ನ ಕರಸ್ಥಲಕ್ಕೆ ಬಂದಿರಲು
ಮತ್ತೊಂದ ನೆನೆದು ಬದುಕಿಹೆನೆಂಬುದು ಅಜ್ಞಾನ ನೋಡಾ.
ಸತ್ಯವು ಸರ್ವಾಂಗಲಿಂಗವೆಂಬುದನರಿಯದೆ
ಮತ್ತೆ ಕಾಯವೆರಸಿ ಕೈಲಾಸಕ್ಕೆ ಹೋದೆಹೆನೆಂಬ ಬಯಕೆ
ಕ್ರಮವಲ್ಲವಯ್ಯಾ.
ಪಂಚಾಮೃತ ಮುಂದಿರಲು ಹಸಿದೆನೆಂದು
ಲೋಗರ ಮನೆಯಲ್ಲಿ ಅನ್ನವ ಬೇಡಿ ಬಯಸುವರೆ?
ಅಣ್ಣಮುಂದೆ ನಿಧಾನವಿರಲು ಬಳಸಲರಿಯದೆ ಬಡತನದಲ್ಲಿಹರೆ?
ಲಿಂಗವಿಲ್ಲದವರು ಮೊದಲಾಗಿ ಲಿಂಗವ ನೆನೆದು ಬದುಕಿಹೆನೆಂಬರು.
ಕಂಡು ಕಂಡು ನಂಬದಿಹುದುಚಿತವೆ?
ಮುಂಗೈಯ ಕಂಕಣಕ್ಕೆ ಕನ್ನಡಿ ಬೇಡ.
ಲಿಂಗವು ಅಂಗದೊಳಗಿರಲು
ಲಿಂಗದ ಪರಿಯ ಅನ್ಯರ ಕೈಯಿಂದ ಕೇಳಬೇಡ.
ಇದನರಿದು ಬೇರೆ ಮತ್ತೆ ಅರಸಲು ಬೇಡ
ಕಾಣಿಸೆಂದು ಮನದಲ್ಲಿ ಮರುಗಬೇಡ
ಮುಂದೆ ಜನ್ಮವುಂಟೆಂದು ಮನಸ್ಸಿನಲ್ಲಿ ನೋಯಬೇಡ.
ಇದು ಕಾರಣ, ತನ್ನ ಕರಸ್ಥಲದಲ್ಲಿದ್ದ ವಸ್ತುವ
ತಾನೆಂದರಿದಡೆ ತಾನೆ ಶಿವನು.
ಇದು ಸತ್ಯ, ಶಿವ ಬಲ್ಲ, ಶಿವರ್ನಾಗೆ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ನಿಮ್ಮ ಶರಣನು ಲಿಂಗಭರಿತನು,
ವಿಚಾರಿಸಿ, ಅರಿದು, ಧ್ಯಾನದಿಂದ ಜಪಿಸಿ, ಆ ಮಹಾವಸ್ತುವನು ಕಂಡು
ಒಲಿದೊಲಿಸಿ, ಕೂಡಿ ಸುಖಿಸಿಹೆನೆಂಬನ್ನೆವರ
ಶ್ರೀಗುರುಸ್ವಾಮಿಯ ಕರುಣಾಮೃತಸಾಗರ ಮೇರೆವರಿದು
ವಿಚಾರಿಸಿ ಶಿವನಾಯಿತ್ತು, ಅರಿವು ಶಿವನಾಯಿತ್ತು;
ಜ್ಞಾತ ಜ್ಞಾನ ಜ್ಞೇಯ ಶಿವನಾಯಿತ್ತು, ಜಪಮಂತ್ರ ಶಿವನಾಯಿತ್ತು,
ಜಪಿಸುವ ಜಿಹ್ವೆ ಶಿವನಾಯಿತ್ತು, ಕಂಡೆಹೆನೆಂಬ ಕಣ್ಣು ಶಿವನಾಯಿತ್ತು.
ಈ ಪರಿ ನೋಡ ನೋಡಲು ಮತ್ತೆ ಚೋದ್ಯ
ಪ್ರಾಣಲಿಂಗವಾಗಿ ಸದ್ಗುರು ತಾನೆ ಕೃಪೆಮಾಡಿ
ಕರಸ್ಥಲಕ್ಕೆ ಬಿಜಯಂಗೈದು ಪ್ರಾಣಲಿಂಗವಾದನು, ಕಾಯಲಿಂಗವಾದನು.
ಮನ ಬುದ್ಧಿ ಚಿತ್ತ ಅಹಂಕಾರ ಜ್ಞಾನ ಭಾವವೆಲ್ಲ ಲಿಂಗವಾಯಿತ್ತು.
ಸರ್ವಾಂಗಲಿಂಗವಾಗಿ ಸಲಹಿದನು.
ಶ್ರೀಗುರುಲಿಂಗವು ಒಲಿದೊಲಿಸಿ ಕೂಡುವ ಪರಿ ಎಂತಯ್ಯಾ?
ಒಲಿಸುವ ಪರಿ ದಾಸೋಹ, ಒಲಿದ ಪರಿ ಪ್ರಸಾದ,
ಕೂಟದ ಪರಿ ನಿರ್ವಂಚಕತ್ವ,
ಒಲಿದೊಲಿಸಿ ಕೂಡಿದ ಪರಿ ಪರಿಣಾಮವಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ನಿರಾಳದ ಅಷ್ಟದಳಕಮಲದೊಳಗೆ ನಿರಂಜನ ಚೌಕಮಧ್ಯ ನೋಡಾ.
ಇದರ ಬೀಜಾಕ್ಷರದ ಭೇದವನರಿಯೆ,
ನಿರಂಜನಪ್ರಣವ, ಅವಾಚ್ಯಪ್ರಣವ, ಕಲಾಪ್ರಣವ,
ಆದಿಪ್ರಣವ, ಅನಾದಿಪ್ರಣವ,
ಜ್ಯೋತಿಃಪ್ರಣವ, ಅಖಂಡಜ್ಯೋತಿಃಪ್ರಣವ,
ಅಖಂಡಮಹಾಜ್ಯೋತಿಃಪ್ರಣವ,
ಗೋಳಕಾಕಾರಪ್ರಣವ, ಅಖಂಡಗೋಳಕಾಕಾರಪ್ರಣವ.
ಅಖಂಡಮಹಾಗೋಳಕಾಕಾರಪ್ರಣವ,
ಇಂತೀ ನಿರಾಳದ ಅಷ್ಟದಳಕಮಲದೊಳಗೆ ನಿರಂಜನ ಚೌಕಮಧ್ಯ ನೋಡಾ.
ಇದರ ಬೀಜಾಕ್ಷರದ ಭೇದವನೆನಗೆ ಕರುಣಿಸಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ನಿರುಪಾಧಿಕನಾಗಿ, ನಿರ್ವಂಚಕತ್ವದಿಂದ ದಾಸೋಹವ ಮಾಡಿ,
ಪರಿಣಾಮದಿಂದ ನಿತ್ಯದಾಸೋಹಿಯೆನಿಸಿದೊಡೆ,
ಆ ದಾಸೋಹಿಯೆ ಸದ್ಭಕ್ತನು, ಆತನೆ ಮಾಹೇಶ್ವರ,
ಆತನೇ ಪ್ರಸಾದಿ, ಆತನೇ ಪ್ರಾಣಲಿಂಗಿ,
ಆತನೇ ಶರಣ, ಆತನೇ ಐಕ್ಯ.
ಆತನೇ ಇಹಲೋಕ[ಪರಲೋಕ] ಪೂಜ್ಯನು, ಆತನೇ ಶ್ರೇಷ್ಠ,
ಆತನೇ ವಿದ್ವಾನ್, ಆತನೇ ಸುಜ್ಞಾನಿ,
ಇನಿತಲ್ಲದೆ ಶ್ರೀಗುರುಲಿಂಗಜಂಗಮ ಒಂದೆಯೆಂದು
ಭಾವಿಸದರ್ಚಿಸದೆ ವಿಚಾರಿ[ಸದ] ದುರ್ಭಾವಿ ಉಪಾಧಿಕನು, ವಂಚಕನು,
ದಾಸೋಹವ ಮಾಡಲರಿಯದಹಂಕಾರಿ, ಅಭಾಸನು, ಅಪೂಜ್ಯನು.
ಭಕ್ತನಲ್ಲ, ಮಾಹೇಶ್ವರನಲ್ಲ.
ಪ್ರಸಾದಿಯಲ್ಲ, ಪ್ರಾಣಲಿಂಗಿಯಲ್ಲ,
ಶರಣನಲ್ಲ; ಐಕ್ಯನಲ್ಲ;
ಆತನೇ ಮೂರ್ಖನು, ಆತನೇ ಅಜ್ಞಾನಿ, ಆತನೇತಕ್ಕೆಯೂ ಬಾತೆಯಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ನೆಲನನೊಳಕೊಂಡ ಸಲಿಲ, ಸಲಿಲವನೊಳಕೊಂಡ ಅನಲ
ಅನಲನನೊಳಕೊಂಡ ಅನಿಲ, ಅನಿಲನನೊಳಕೊಂಡ ಆಕಾಶ
ಆಕಾಶವನೊಳಕೊಂಡ ಮನ, ಮನವನೊಳಕೊಂಡ ಬುದ್ಧಿ
ಬುದ್ಧಿಯನೊಳಕೊಂಡ ಪ್ರಕೃತಿ,
ಪ್ರಕೃತಿಪುರುಷಜಗವೆಲ್ಲನೊಳಕೊಂಡ
ವಿಶುದ್ಧಕಾಯನು ಭಕ್ತದೇಹಿಕದೇವನು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ನೇತ್ರದಲ್ಲಿ ಷಡುವರ್ಣಸಂಬಂಧವಹ
ಪವಿತ್ರ ಅಪವಿತ್ರವ ನೋಡಿ ಅರಿದು ಮಹಾಪವಿತ್ರವ ಮಾಡಿ
ನೇತ್ರದ ಕೈಯಲೂ ಲಿಂಗನೇತ್ರಕ್ಕೆ ಅರ್ಪಿಸುವಲ್ಲಿ ನೇತ್ರೋದಕವು.
ಶ್ರೋತ್ರದಲ್ಲು ಶಬ್ದ ಕುಶಬ್ದವನರಿದು ಮಹಾಶಬ್ದದಲ್ಲು ವರ್ತಿಸಿ
ಶ್ರೋತ್ರದ ಕೈಯಲೂ ಲಿಂಗಶ್ರೋತ್ರಕ್ಕೆ ಅರ್ಪಿಸುವಲ್ಲಿ ಶ್ರೋತ್ರೋದಕವು.
ಘ್ರಾಣದಿಂ ಸುಗಂಧ ದುರ್ಗಂಧವನರಿದು ಮಹಾಗಂಧದಲೂ ವರ್ತಿಸಿ
ಘ್ರಾಣದ ಕೈಯಲೂ ಲಿಂಗಘ್ರಾಣಕ್ಕೆ ಅರ್ಪಿಸುವಲ್ಲಿ ಘ್ರಾಣೋದಕವು.
ಜಿಹ್ವೆಯಿಂ ಮಧುರ ಆಮ್ಲ ಲವಣ ತಿಕ್ತ ಕಟು ಕಷಾಯವೆಂಬ
ಷಡುರುಚಿಯನರಿದು ಮಹಾರುಚಿಯನರಿದು ರುಚಿಮಾಡಿ
ಲಿಂಗಜಿಹ್ವೆಗೆ ಜಿಹ್ವೆಯ ಕೈಯಲೂ ಅರ್ಪಿಸುವಲ್ಲಿ ಜಿಹ್ವೋದಕವು.
ಪರುಷನದಿಂ ಶೀತೋಷ್ಣವನರಿದು ಇಚ್ಚೆಯ ಕಾಲವನರಿದು
ಪರುಷನದಿಂ ಲಿಂಗಪರುಷನಕ್ಕೆ ಅರ್ಪಿತವ ಮಾಡುವಲ್ಲಿ ಸ್ಪರ್ಶನೋದಕವು.
ಸದ್ಭಕ್ತಿಯಿಂ ಪಾದಾರ್ಚನೆಯ ಮಾಡುವಲ್ಲಿ ಪಾದೋದಕವು.
ಮಜ್ಜನಕ್ಕೆರೆವಲ್ಲಿ ಮಜ್ಜನೋದಕವು.
ಆರೋಗಣೆಯಲ್ಲಿ ಆರೋಗಿಸಲಿತ್ತುದು ಅರ್ಪಿತೋದಕವು.
ಆರೋಗಣೆಯಲ್ಲಿ ಮೇಲೆ ಹಸ್ತಕ್ಕೆರೆದುದು ಹಸ್ತೋದಕವು.
ಗುರುಲಿಂಗ ಶಿವಲಿಂಗ ಜಂಗಮಲಿಂಗ ಒಂದೆಂದರಿದು
ಸರ್ವಕ್ರಿಯಾಕರ್ಮಕ್ಕೆ ಲಿಂಗಸಂಬಂಧವ ಮಾಡಿ
ಪ್ರಯೋಗಿಸುವುದು ಲಿಂಗೋದಕವು.
ಈ ದಶೋದಕ ಕ್ರೀಯನರಿದು ವರ್ತಿಸುವುದು
ಆಗಮಾಚಾರ ಕ್ರಿಯಾಸಂಪತ್ತು.
ಅಯ್ವತೊಂದಕ್ಷರದಿಂ ಪುಟ್ಟಿದಂತಹ ವೇದಾದಿವಿದ್ಯಂಗಳು
ಮೊದಲಾದ ಸರ್ವಕ್ರೀ ಕುಶಲಶಬ್ದಂಗಳನೂ
ಶ್ರೋತ್ರದಿಂ ಲಿಂಗಶ್ರೋತ್ರಕ್ಕೆ ಅರ್ಪಿತವ ಮಾಡಿ
ಶಬ್ದಭೋಗವ ಭೋಗಿಸುವರಲ್ಲಿ ಶಬ್ದಪ್ರಸಾದ.
ಮೃದು ಕಠಿಣ ಶೀತೋಷ್ಣಂಗಳನೂ
ಅಷ್ಟತನು ನೆಳಲು ಬಿಸಿಲು ಮೊದಲಾದ ವಸ್ತುಗಳನೂ
ಪರುಷನದಿಂ ಲಿಂಗಪರುಷನಕ್ಕೆ ಅರ್ಪಿತವ ಮಾಡಿ
ಪರುಷನ ಭೋಗವ ಭೋಗಿಸುವಲ್ಲಿ ಪರುಷನ ಪ್ರಸಾದ.
ಶ್ವೇತ ಪೀತ ಹರೀತ ಮಾಂಜಿಷ್ಠ ಕೃಷ್ಣ ಕಪೋತ
ಷಡುವರ್ಣ ಮೊದಲಾದ ಚಿತ್ರವಿಚಿತ್ರವರ್ಣಂಗಳನೆಲ್ಲವನೂ
ನೇತ್ರದಿಂ ಲಿಂಗನೇತ್ರಕ್ಕೆ ಅರ್ಪಿಸಿ ನಿರೀಕ್ಷಿಸಿ ಅರ್ಪಿಸುವಲ್ಲಿ ರೂಪಪ್ರಸಾದ.
ಸಫಲ ಪಾಕಾದಿಗಳನೂ ಸರ್ವದ್ರವ್ಯಂಗಳನೂ
ಷಡುರುಚಿ ಭಿನ್ನರುಚಿ ಮೂವತ್ತಾರನರಿದು
ಜಿಹ್ವೆಯ ಕೈಯಲೂ ಲಿಂಗಜಿಹ್ವೆಗೆ ಅರ್ಪಿಸಲು ರಸಪ್ರಸಾದ.
ಪುಷ್ಪಧೂಪ ನಾನಾ ಸರ್ವಸುಗಂಧವಸ್ತುಗಳನೂ
ಘ್ರಾಣದಿಂ ಲಿಂಗಘ್ರಾಣಕ್ಕೆ ಅರ್ಪಿಸುವುದು
ಸುಗಂಧಭೋಗವ ಭೋಗಿಸುವುದು ಗಂಧಪ್ರಸಾದ.
ಈ ಪಂಚೇಂದ್ರಿಯದ ಕೈಯಲೂ
ಪಂಚವಿಷಯಂಗಳ ಗುಣಂಗಳವಗುಣಂಗಳರಿದು
ಅವಧಾನದಿಂದಪ್ರ್ಪಿಸಿ ಸರ್ವಭೋಗವ ಭೋಗಿಸುವಲ್ಲಿ ಸನ್ನಹಿತಪ್ರಸಾದ.
ಗುರುವಿಗೆ ತನು ಮನ ಧನವನರ್ಪಿಸಿ
ಪ್ರಸನ್ನತೆಯ ಪಡೆವಲ್ಲಿ ಶುದ್ಧಪ್ರಸಾದ.
ಲಿಂಗಕ್ಕೆ ತನು ಮನ ಧನವನರ್ಪಿಸಿ
ಪ್ರಸನ್ನತೆಯ ಪಡೆವಲ್ಲಿ ಸಿದ್ಧಪ್ರಸಾದ.
ಜಂಗಮಕ್ಕೆ ತನು ಮನ ಧನವನರ್ಪಿಸಿ
ಪ್ರಸನ್ನತೆಯ ಪಡೆವಲ್ಲಿ ಪ್ರಸಿದ್ಧಪ್ರಸಾದ.
ಗುರು ಲಿಂಗ ಜಂಗಮಕ್ಕೆ ಸರ್ವಪದಾರ್ಥ
ಸರ್ವಭೋಗಂಗಳ ಭೋಗಿಸಲಿತ್ತು
ಶೇಷಪ್ರಸಾದವ ಭೋಗಿಸುವುದು ಪದಾರ್ಥಪ್ರಸಾದ.
ಕಾಮಾದಿಸರ್ವಭೋಗಂಗಳನೂ
ಮನ ಬುದ್ಧಿ ಚಿತ್ತ ಅಹಂಕಾರವ ಏಕೀಭವಿಸಿ
ಭಾವಲಿಂಗಕ್ಕೆ ಅರ್ಪಿಸಿ ಭೋಗಿಸುವುದು ಭಾವಪ್ರಸಾದ.
ಪ್ರಾಣಲಿಂಗಕ್ಕೆ ಕಾಯವೆಂಬ ಭಕ್ತನು ಭಿನ್ನದೋರದೆ
ಅವಿನಾಭಾವದಿಂ ಸರ್ವಕ್ರಿಯೆ ಲಿಂಗಕ್ರೀಯಾಗಿ
ಏಕಾದಶಮುಖವರಿದು ಅರ್ಪಿಸಿ
ಲಿಂಗಭೋಗೋಪಭೋಗಿಯಾಗಿಹುದೆ ಏಕಾದಶಪ್ರಸಾದ.
ಇಂತೀ ಏಕಾದಶಪ್ರಸಾದವರಿದು ವರ್ತಿಸುವುದು
ಸಹಜಶಿವಾಗಮಾಚಾರಕ್ರಿಯಾಸಂಪತ್ತು.
ಇವೆಲ್ಲವನು ಮೀರಿ
ಅತ್ಯಶಿಷ್ಟದ್ಧಶಾಂಗುಲಲಿಂಗಕ್ಕೆ ಕಾಯವಾಗಿ
ಆ ಲಿಂಗವೇ ಪ್ರಾಣವಾಗಿಪ್ಪ ಶರಣನು
ವೇದ ಶಾಸ್ತ್ರಾಗಮ ಪುರಾಣಕ್ಕೆ, ದೇವ ದಾನವ ಮಾನವರಿಗೆ
ಅತ್ಯತಿಷ್ಟದ್ಧಶಾಂಗುಲವೆನಿಸಿ
`ಲಿಂಗಮಧ್ಯೇ ಶರಣಃ ಶರಣಮಧ್ಯೇ ಲಿಂಗಂ’ ಎಂದೆನಿಸಿಪ್ಪ
ಅವಿನಾಭಾವಸರ್ವಾಂಗಲಿಂಗಕ್ರೀಯ ನೀನೇ ಬಲ್ಲೆ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಪಂಕವಿಲ್ಲದ ಕಮಲಕ್ಕೆ ಸುಗಂಧ ಸುಲಲಿತವೆಂತಪ್ಪುದಯ್ಯಾ?
ಹೊನ್ನು ಹೆಣ್ಣು ಮಣ್ಣಿಲ್ಲದೆ ದೇವತಾಯೋಗ್ಯವೆಂತಪ್ಪುದಯ್ಯಾ?
ಕಮಲ ಪಂಕದಲಿ ವರ್ತಿಸಿದಂತೆ ವರ್ತಿಸುತಿಪ್ಪರು ನಿಮ್ಮ ಶರಣರು,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಪಂಚಗವ್ಯದಿಂದಾದ ಗೋಮಯವಂ ತಂದಾರಿಸಿ
ಪಂಚಾಮೃತಸಂಪರ್ಕದಿಂ ಪಂಚಾಕ್ಷರಿಯ ಮಂತ್ರದಿಂ ಅಭಿವಂದಿಸಿ
ಶಿವನ ವಹ್ನಿಯಲ್ಲಿ ದಹಿಸಿ
ಆ ವಿಭೂತಿಯಂ ಸುಕೃತದಿಂ ತೆಗೆದುಕೊಂಡು
ಎಡದ ಹಸ್ತದೊಳ್ಪಿಡಿದುಕೊಂಡು, ಬಲದ ಹಸ್ತದಿಂ ಮುಚ್ಚಿ
ಜಲಮಿಶ್ರವಂ ಮಾಡಿ, ಲಲಾಟ ಮೊದಲಾಗಿ ದಿವ್ಯಸ್ಥಾನಂಗಳೊಳು ಧರಿಸಿ
ಲಿಂಗಾರ್ಚನೆಯಂ ಮಾಡುವ ಶರಣ, ಆತನೇ ವೇದವಿತ್ತು,
ಆತನೇ ಶಾಸ್ತ್ರಜ್ಞ, ಆತನೇ ಸದ್ಯೋನ್ಮುಕ್ತನಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಪಂಚಭೂತದನುವರಿದು
ಸುಸಂಗನಾದಬಳಿಕ ಪಂಚಮುಖನು ಬೇರುಂಟೆ ತನ್ನೊಳಗಲ್ಲದೆ?
ವಂಚನೆಯೊಳು ಪಂಚಬ್ರಹ್ಮವನೋದಿ ಫಲವೇನು?
ಈಚುವೋದ ತೆನೆಯಂತೆ ವಂಚನೆಯಿಲ್ಲದೆ ಸಂಚಿಸಿಕೊಳ್ಳನೆ
ಕಂಚಿಯ ಕೈಲಾಸಕ್ಕೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ?

ವಚನ
ಪಂಚಭೂತವಂಗವಾಗಿಪ್ಪ ಆತ್ಮಂಗೆ
ಪಂಚೇಂದ್ರಿಯಂಗಳೇ ಮುಖಂಗಳು,
ಪಂಚಕರಣಂಗಳೇ ಕೈಗಳು, ಪಂಚವಿಷಯಂಗಳೇ ಪೂಜೆ,
ಪಂಚಪದಾರ್ಥವೇ ಭೋಗ.
ಇದನೆಲ್ಲವ ನಿಜಮೂರ್ತಿಯಪ್ಪ ಘನಕ್ಕೆಯ್ದಿಸಬಲ್ಲಡೆ,
ಆತ ಸರ್ವನಿರ್ವಾಣಿ, ಸಕಲನಿಷ್ಕಲಾತ್ಮಕನು,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಪಂಚಾಕ್ಷರಿಯೆ ಸರ್ವಮಂತ್ರವೆಲ್ಲವಕ್ಕೆಯು,
ಉತ್ಪತ್ತಿ, ಸ್ಥಿತಿ, ಲಯಸ್ಥಾನ, ಸರ್ವಕಾರಣವೆಲ್ಲವಕ್ಕೆಯು ಮೂಲ.
ಅದೆಂತೆಂದಡೆ:
ಸಪ್ತಕೋಟಿ ಮಹಾಮಂತ್ರಂ ಉಪಮಂತ್ರಸ್ತನೇಕತಃ
ಪಂಚಾಕ್ಷರ ಪ್ರತಿಲೀಯಂತೇ ಪುನಸ್ತಸ್ಯವಸರ್ಗತಃ
ತಸ್ಮಿನ್ ವೇದಶ್ಚ ಶಾಸ್ತ್ರಾಣಿ ಮಂತ್ರೇ ಪಂಚಾಕ್ಷರಿ ಸ್ಥಿತಂ
ಎಂದುದಾಗಿ, ಇದು ಕಾರಣ
ಶ್ರೀ ಪಂಚಾಕ್ಷರಿಯುಳ್ಳ ಸದ್ಭಕ್ತನೇ ವೇದವಿತ್ತು. ಆತನೇ ಶಾಸ್ತ್ರವಾನ್,
ಆ ಮಹಾಮಹಿಮನೆ ಪುರಾಣಿಕನು, ಆತನೇ ಆಗಮಿಕನು,
ಆತನೇ ಸರ್ವಜ್ಞನಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಪದ ಪದವಿಗಳ ವಿಚಾರಿಸಲು
ಸಾಧಾರಣಪ್ರಾಣಿಗಳ ಪದವಿಗಳಿಂದ ಮಾನವಪದ ವಿಶೇಷ,
ಮಾನವರ ಪದವಿಗಳಿಂದ ದೇವಜಾತಿಗಳ ಪದ ವಿಶೇಷ,
ದೇವಜಾತಿಗಳ ಪದವಿಯಿಂದ ಇಂದ್ರಪದ ವಿಶೇಷ,
ಇಂದ್ರಪದವಿಯಿಂದ ಬ್ರಹ್ಮಪದ ವಿಶೇಷ,
ಬ್ರಹ್ಮಪದವಿಯಿಂದ ವಿಷ್ಣುಪದ ವಿಶೇಷ,
ವಿಷ್ಣುಪದವಿಯಿಂದ ರುದ್ರಪದ ವಿಶೇಷ,
ರುದ್ರಪದವಿಯಿಂದ ಲಿಂಗಪದ ವಿಶೇಷ,
ಲಿಂಗಾಲಿಂಗೀ ತು ಮತ್ಕರ್ತಾ ಲಿಂಗಾಲಿಂಗೀ ಮಮ ಪ್ರಭುಃ
ಲಿಂಗಾಲಿಂಗೀ ಮಮ ಸ್ವಾಮೀ ಲಿಂಗಾಲಿಂಗೀ ಮನೋಹರಃ
ಇಂತೆಂದುದಾಗಿ ಮಹಾಪದವಿಯಲ್ಲಿರ್ದು,
ಲಿಂಗಭೋಗೋಪಭೋಗವನರಿಯದೆ, ಭೋಗಿಸಲರಿಯದೆ,
ಅಲ್ಪಪದವಿಯಲ್ಲಿರ್ದು ಅಲ್ಪರನಾಶೆಗೈದಡೆ
ಜ್ಞಾನಿಯಲ್ಲ, ಭಕ್ತನಲ್ಲ, ಶರಣನಲ್ಲ.
ಆವಂಗೆ ಲಿಂಗವಿಲ್ಲಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಪರಬ್ರಹ್ಮನಿಂದ ಜೀವನಾಯಿತ್ತೆಂಬುವನೊಬ್ಬ ವಾದಿ.
ಆತ್ಮನು ಪಶು, ಪಾಶಬದ್ಧನು, ಅನಾದಿಮಲಯುಕ್ತನೆಂಬುವನೊಬ್ಬ ವಾದಿ.
ಇವರಿಬ್ಬರು ತರ್ಕಕ್ಕೆ ಸಿಲುಕಿ ದುಃಖಕ್ಕೊಳಗಾದರು.
ಅದೆಂತೆಂದಡೆ:ಆತ್ಮನು ಅನಾದಿಮಲಸಂಬಂಧಿಯಾದಡೆ
ಆತ್ಮನ ಸ್ವರೂಪ ಮಲಸ್ವರೂಪ ಬಲ್ಲಡೆ ನೀವು ಹೇಳಿರೋ.
ಅರಿಯದಿರ್ದಡೆ ಕೇಳಿರೋ:
ಪೃಥ್ವಿ ಅಪ್ಪು ಕೂಡಿ ಸ್ಥೂಲತನು,
ವಾಯು ತೇಜ ಕೂಡಿ ಸೂಕ್ಷ್ಮತನು,
ಅಂಬರ ಅಹಂಕಾರ ಕೂಡಿ ಕಾರಣತನು.
ಈ ತನುತ್ರಯವಿಲ್ಲದಂದು, ಪಂಚತತ್ತ್ವಂಗಳ ಶಾಖೆ ತಲೆದೋರದಂದು,
ಆದಿ-ಅನಾದಿ, ಸ್ವರೂಪು-ನಿರೂಪು, ಹಮ್ಮು-ಬಿಮ್ಮು,
ಯುಗ-ಜುಗ, ಸುರಾಳ-ನಿರಾಳವಿಲ್ಲದಂದು,
ಆತ್ಮನಲ್ಲಿ ಮಲ ಹುದುಗಿರ್ದ ಭೇದವ
ತಿಳಿದು ರೂಹಿಸಿ ಹೇಳಬಲ್ಲಡೆ ಸಿದ್ಧಾಂತಿಯೆಂಬೆ,
ಹಮ್ಮಿದ ಶಿವನೆ ಜೀವನು, ಹಮ್ಮಳಿದ ಜೀವನೆ ಶಿವನಾದಡೆ
ಸೃಷ್ಟಿಸ್ಥಿತಿಸಂಹಾರಂಗಳೇಕಾದವು? ವಾಚ್ಯಾವಾಚ್ಯಂಗಳೇಕಾದವು?
ಸ್ಥಾನಸ್ಥಾನಂಗಳೇಕಾದವು? ಪಕ್ಷಾಪಕ್ಷಂಗಳೇಕಾದವು?
ದೇಹದೇಹಂಗಳೇಕಾದವು?
ಆದಡಾಗಲಿ ಬ್ರಹ್ಮಕ್ಕೆ ತಥ್ಯ-ಮಿಥ್ಯ, ರಾಗ-ದ್ವೇಷ,
ಹಮ್ಮು-ಬಿಮ್ಮು, ಮದ-ಮತ್ಸರ,
ನಾ ನೀನೆಂಬ ಭ್ರಾಂತುಸೂತಕವುಂಟೆ?
ಅದಲ್ಲ ನಿಲ್ಲು.
ಬ್ರಹ್ಮಕ್ಕೆ ಹಮ್ಮು ಹೋಹ-ಬ್ರಹ್ಮ ಭೇದವ ತಿಳಿದು,
ಸಂಕಲ್ಪ-ವಿಕಲ್ಪವಿಲ್ಲದೆ, ಸ್ತುತಿ-ನಿಂದೆಗಳನರಿಯದೆ,
ಪಕ್ಷಾಪಕ್ಷಂಗಳನರಿದೆ, ಕಾಮ-ನಿಃಕಾಮವಿಲ್ಲದೆ,
ಭೀತಿ-ನಿರ್ಭಿತಿಯಿಲ್ಲದೆ, ನಿರಂಗಸ್ವರೂಪನಾದಡೆ ವೇದಾಂತಿಯೆಂದೆ.
ಈ ಉಭಯ ವಾದ ಹೊದ್ದರು ಶಿವಶರಣರು.
ಆದಿ ಅನಾದಿಯಿಂದತ್ತಲಾದ ಶರಣಲಿಂಗಸಂಬಂಧವನರಿದರಾಗಿ
ಅಭೇದ್ಯರಯ್ಯಾ. ಅದೆಂತೆಂದಡೆ:
ಸತ್ತುವೆನಿಸಿ ಶಬ್ದನಿಃಶಬ್ದಕ್ಕೆ ಬಾರದ ನಿಶ್ಶೂನ್ಯ ಲಿಂಗವೆ ಪ್ರಾಣವಾಗಿ,
ಚಿತ್ತುವೆನಿಸಿ ನಾಮನಿರ್ನಾಮಕ್ಕೆ ಬಾರದ ಸ್ವರೂಪು
ನಿರೂಪವಲ್ಲದ ಶರಣನೆ ಅಂಗವಾಗಿ,
ಈ ಉಭಯ ಸಂಪುಟದಿಂದ ಸಕಲನಿಷ್ಕಲವೆನಿಸಿತ್ತು.
ಈ ಸಕಲ ನಿಷ್ಕಲತತ್ತ್ವವೆ
ತನ್ನ ಶಕ್ತಿಸಮರಸಸಂಭಾಷಣೆಯಿಂದ ಲೀಲೆದೋರಲಾಗಿ
ತಾನೆ ಗುರುವಾದ, ತಾನೆ ಶಿಷ್ಯನಾದ, ತಾನೆ ಲಿಂಗವಾದ, ತಾನೆ ಜಂಗಮವಾದ,
ತಾನೆ ಮಂತ್ರವಾದ, ತಾನೆ ಪ್ರಸಾದವಾದ,
ತಾನೆ ಸರ್ವಚೈತನ್ಯಾತ್ಮಕನಾದ.
ಇಂಥಾ ಭೇದವ ತನ್ನಿಂದ ತಾನೆ ಅರಿದನಾಗಿ
ವೇದಾಂತ ಸಿದ್ಧಾಂತವೆಂಬ ವಾಗ್ಜಾಲವ ನುಡಿಯನು.
ತಾನೆ ಪರಿಪೂರ್ಣನಾಗಿ ತರ್ಕಕ್ಕತಕ್ರ್ಯನು, ಸಾಧ್ಯಕ್ಕಸಾಧ್ಯನು,
ಭೇದ್ಯಕ್ಕಭೇದ್ಯನು,
ಇದು ಕಾರಣ ದ್ವೈತಾದ್ವೈತವ ಮೀರಿನಿಂದ ನಿಜಸುಖಿ ನಿಮ್ಮ ಶರಣನಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಪರಲೋಕದಲ್ಲಿ ಲಾಭವನರಸುವರು
ಇಹಲೋಕದಲ್ಲಿ ಲೋಭವ ಮಾಡದೆ, ಮಾಡಿರೆ ದಾಸೋಹವ.
ಹಲವು ಕಾಲದಿಂದ ನೆಯ್ದ ವಸ್ತ್ರವ ಲೋಭವ ಮಾಡದೆ ಇತ್ತಡೆ
ಶಿವ ಮೆಚ್ಚಿ ತವನಿಧಿಯ ಕೊಡನೆ ದಾಸಮಯ್ಯಂಗೆ?
ದೇವಾಂಗವಸ್ತ್ರವನು ಶಿವಗಣಂಗಳಿಗೆ ತೃಪ್ತಿಬಡಿಸಿದ ಅಮರನೀತಿ
ಶಿವನ ಕೌಪೀನಕ್ಕೆ ತನ್ನ ಗುರಿಯ ಮಾಡಿದಡೆ
ಕಾಯವೆರಸಿ ಕೈಲಾಸಕ್ಕೆ ಹೋಗನೆ?
ಇದು ಕಾರಣ,
ನಮ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನ ಶರಣರಿಗೆ
ಉಣಲಿಕ್ಕಿ ಉಡಕೊಟ್ಟು ಉಪಚರಿಸಿದಡೆ
ಶಿವನೊಲಿದು ಇತ್ತ ಬಾ ಎಂದೆತ್ತಿಕೊಳ್ಳನೆ?

ವಚನ
ಪರಶಿವನು ಸುಖಮಯನು, ಸುಖಾತ್ಮನು, ಸುಖಸ್ವರೂಪನು,
ನಿಷ್ಕಳನಿರೂಪನು, ಅಪ್ರಮೇಯನು, ಅನಾಮಯನು,
ಪರಾತ್ಪರನು, ಅತಿಸೂಕ್ಷ್ಮನು, ಮಹಾಸ್ಥೂಲನು.
ಶಿವಂ ಪರಾತ್ಪರಂ ಸೂಕ್ಷ್ಮಂ ನಿತ್ಯಂ ಸರ್ವಗತಾವ್ಯಯವ್
ನಿಂದಿತಮಾನಾಪಮ್ಯಮಪ್ರಮೇಯಮನಾಮಯಮ್
ಶುದ್ಧತ್ವಾಚ್ಚಿವಮುದ್ದಿಷ್ಟಂ ಪರಾದೂಧ್ರ್ವಂ ಪರಾತ್ಪರಮ್
ಎಂದುದಾಗಿ,
`ಅಣೋರಣೀಯಾನ್ ಮಹತೋ ಮಹೀಯಾನ್
ಎಂದುದಾಗಿ,
ಇಂತಹ ಶಿವನು ಭಕ್ತಕಾಯನಾಗಿ
ಭಕ್ತವತ್ಸಲನಾಗಿಪ್ಪ ಕಾಣಿರೋ.
ಅಕಾಯೋ ಭಕ್ತಕಾಯಸ್ತು ಮಮ ಕಾಯಸ್ತು ಭಕ್ತಿಮಾನ್
ಭಕ್ತಸಂಗವಿಶೇಷಣ ಅವಿಕಾರಂ ಶಿವಾತ್ಮನೋಃ
ಎಂದುದಾಗಿ,
ಸದ್ಭಕ್ತಿಯುಳ್ಳ ಮಹಾಲಿಂಗವಂತಂಗೆ ಪ್ರಾಣವಾಗಿಪ್ಪ ಕಾಣಿರೋ.
ಲಿಂಗಾಲಿಂಗೀ ಮಮ ಪ್ರಾಣೋ ಲಿಂಗಾಲಿಂಗೀ ಮಮಾತ್ಮಭೂಃ
ಲಿಂಗಾಲಿಂಗೀ ಮಮೋಜ್ಜೀವೀ ಲಿಂಗಾಲಿಂಗೀ ಚ ರಕ್ಷಕಃ
ಎಂದುದಾಗಿ,
ಇಂತಹ ಭಕ್ತನ ಜಿಹ್ವೆಯಲ್ಲಿ ಆರೋಗಣೆಯ ಮಾಡಿ ಸುಖಿಸುವನು.
ನೈವೇದ್ಯಂ ಪುರತೋ ನ್ಯಸ್ತಂ ದರ್ಶನಾತ್ ಸ್ವೀಕೃತಂ ಮಯಾ
ರಸಂ ಭಕ್ತಸ್ಯ ಜಿಹ್ವಯಾ ಆಶ್ನಾಮಿ ಕಮಲೋದ್ಭವ
ಇಂತೆಂದುದಾಗಿ,
ಈ ಪರಿ ಶಿವಂಗೆ ಸದ್ಭಕ್ತನೇ ದೇಹ, ಸದ್ಭಕ್ತನೇ ಪ್ರಾಣ,
ರಕ್ತನ ಜಿಹ್ವೆಯಲ್ಲಿ ಆರೋಗಿಸುವನು.
ಇದು ಕಾರಣ,
ಸದ್ಭಕ್ತಂಗೆ ಮಾಡಿದುದೆಲ್ಲವು
ಶಿವಂಗೆ ಮಾಡಿದುದು, ಶಿವಂಗೆ ಪ್ರೀತಿ.
ಇದು ಕಾರಣ,
ಸದ್ಭಕ್ತಂಗೆ ಶರಣೆಂದು
ಅರ್ಚಿಸಿ ಪೂಜಿಸಿ ಆರೋಗಿಸಲಿತ್ತು
ಪ್ರಸನ್ನತೆಯ ಪಡೆದು ಆ ಪ್ರಸಾದವಂ
ಕೊಂಡ್ಪುರಿಣಾಮಿಯಪ್ಪುದು ಸುಖಿಯಪ್ಪುದು ಭಕ್ತನಪ್ಪುದಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಪರಶಿವನೇ ಶ್ರೀಗುರು, ಶ್ರೀಗುರುವೇ ಪರಶಿವನು,
ಶ್ರೀಗುರುವೇ ಶಿವಲಿಂಗ, ಆ ಶಿವಲಿಂಗವೇ ಜಂಗಮಲಿಂಗ,
ಆ ಜಂಗಮಲಿಂಗವೆಂದಲ್ಲಿಯೇ ಪ್ರಸಾದಲಿಂಗ,
ಪ್ರಸಾದಲಿಂಗವೆಂದಲ್ಲಿಯೇ ಮುಕ್ತಿ.
ಇದು ಸ್ವಭಾವ, ಇದು ಮಹಾಸದ್ಭಾವ.
ಈ ಭಾವವು ಅಣುಮಾತ್ರ ಕಿಂಚಿತ ದುರ್ಭಾವವಾಗಿ ತಪ್ಪಿದಡೆ
ಆ ಕ್ಷಣ ಜಾರಿ ಮೀರಿತ್ತು ಆ ಸಾಧ್ಯ.
ಭಾವ ತಪ್ಪಿದ ಬಳಿಕ ಶಿವನೊಲವು ತಪ್ಪುವುದಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಪರಾಂಗನೆಯರ ಅಂಗವ ಹಿಂಗಿಹುದೆ ಶೌಚ.
ಅನ್ಯಾರ್ಜಿತದಲ್ಲಿ ಉದರವ ಹೊರೆಯದಿಹುದೆ ಸ್ನಾನ.
ಮನದ ಮೈಲಿಗೆಯ ಕಳೆವುದೆ ಮಡಿವರ್ಗ.
ಶರಣರಲ್ಲಿ ಮಂಗಳಭಾವದಿರವೆ ಭಸ್ಮಲೇಪನ.
ವಿಶ್ವತೋಮುಖನ ನೋಟಕಾರುಣ್ಯ ತನ್ನ ಮೇಲಿರಲು ರುದ್ರಾಕ್ಷಧಾರಣ.
ಹಿಂಸೆಯ ಮಾಡದಿಹುದೆ ಆತ್ಮಶುದ್ಧಿ.
ನಿರಂಹಕಾರವೆ ಪದ್ಮಾಸನ, ಸುಚಿತ್ತವೆ ದೃಷ್ಟಿ,
ಸತ್ಯವೆ ಲಿಂಗ, ಸಾಹಿತ್ಯವೆ ಅಗ್ಗವಣಿ,
ದಯಾವಾಕ್ಯವೆ ಗಂಧ, ಅಕ್ಷರವಿಚಾರವೆ ಅಕ್ಷತೆ,
ನಿರ್ಮಲವೆ ಪುಷ್ಪ, ನಿಸ್ಸಂದೇಹವೆ ಧೂಪ,
ನಿಸ್ಸಂಕಲ್ಪವೆ ದೀಪ, ನಿಂದೆಯ ಮಾಡದಿಹುದೆ ಜಪ,
ಪರಿಣಾಮವೆ ಆರೋಗಣೆ, ಅಖಂಡಿತವೆ ತಾಂಬೂಲ.
ಇಂತೀ ಇಷ್ಟಲಿಂಗದ ಪೂಜೆಯ ಪರಿಯಲ್ಲಿ
ಪ್ರಾಣಲಿಂಗದ ಪೂಜೆಯ ಮಾಡಲು
ಅಂತರಂಗ ಬಹಿರಂಗ ಸರ್ವಾಂಗಲಿಂಗವಾಗಿರ್ಪುದು.
ಇದು ಸಹಜ, ಸತ್ಯ, ಶಿವನಾಣೆ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಪರುಷದ ಗೃಹದೊಳಗಿದ್ದು, ತಿರಿವನೆ ಮನೆ ಮನೆಯ?
ತೊರೆಯೊಳಗಿದ್ದವನು, ತೃಷೆಯಾಗಲರಸುವನೆ ಕೆರೆಯುದಕವ?
ಮಂಗಳಲಿಂಗ ಅಂಗದ ಮೇಲೆ ಇದ್ದು,
ಅನ್ಯಲಿಂಗಗಳ ನೆನೆವನೆ ನಿಮ್ಮ ಭಕ್ತನು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ?

ವಚನ
ಪರುಷವು ಪಾಷಾಣದಂತೆ ಇಪ್ಪುದು,
ಆ ಪರುಷವು ಪರುಷವೇದಿಗಳಿಗಲ್ಲದೆ ಅರಿಯಬಾರದು,
ಆ ಪರುಷದ ಫಲಸಿದ್ಧಿ ಪರುಷವೇದಿಗಳಿಗಲ್ಲದೆ ಅಳವಡದು.
ಲಿಂಗವೂ ಲಿಂಗವಂತನಾಗಿ
ದೇವದಾನವಮಾನವರೊಳಗಾಗಿ
ಅವರಂತೆ ಇಪ್ಪನು.
ಆ ಲಿಂಗವು ಲಿಂಗವೇದ್ಯಂಗಲ್ಲದೆ ಅರಿಯಬಾರದು.
ಪರುಷವೇದಿ ಪರುಷದ ಫಲಸಿದ್ಧಿಯಿಂದ ಸುಖಿಸುವಂತೆ
ಲಿಂಗವೇದಿ ಲಿಂಗವಂತರ ಸಂಗದಿಂದ ಸುಖಿಸಿ ಮುಕ್ತನಪ್ಪನಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಪಾಪ ನನ್ನದೇ? ಪುಣ್ಯ ನಿನ್ನದೆ? ಹೇಳಾ ಅಯ್ಯಾ.
ದ್ವಂದ್ವಕರ್ಮ ಎನಗೆ ನಿನಗೆ ಬೇರಾದ ಪರಿ ಎಂತಯ್ಯಾ?
ವಿಚಾರವಾದ ಬಳಿಕ ನಾನು ಲಿಂಗಪ್ರಾಣಿ, ನೀನು ಭಕ್ತಕಾಯನು.
ಇದು ಕಾರಣ ದ್ವಂದ್ವನಾಸ್ತಿ, ದ್ವಂದ್ವಕರ್ಮ ಮುನ್ನವೇ ನಾಸ್ತಿ.
ಇನ್ನು ಭಾವದ ಭೇದವೆಂದಡೆ ನಗೆಗೆಡೆಯಪ್ಪುದು.
ಹೆಚ್ಚು-ಕುಂದು ನನ್ನದಲ್ಲ, ನಿನ್ನದಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಪುಣ್ಯಾಂಗನೆಯ ಸುತಂಗೆ
ಪಿತನುಂಟು, ಪಿತಾಮಹನುಂಟು, ಪ್ರಪಿತಾಮಹನುಂಟು.
ಪಣ್ಯಾಂಗನೆಯ ಸುತಂಗೆ ಪಿತನಿಲ್ಲ, ಮೇಲೇನೂ ಇಲ್ಲ,
ಅವನ ಬದುಕು ನಗೆಗೆಡೆ.
ಭಕ್ತಾಂಗನೆಯ ಸುತನಹ ಸದ್ಭಕ್ತಂಗೆ
ಪಿತನು ಗುರು, ಪಿತಾಮಹನು ಜಂಗಮ,
ಪ್ರಪಿತಾಮಹನು ಮಹಾಲಿಂಗ ಉಂಟು ಕೇಳಿರಣ್ಣಾ.
ಅಭಕ್ತಾಂಗನೆಯ ಸುತನಹ ತಾಮಸಭಕ್ತಂಗೆ
ಪಿತನಹ ಗುರುವಿಲ್ಲ, ಪಿತಾಮಹ ಜಂಗಮವಿಲ್ಲ,
ಪ್ರಪಿತಾಮಹ ಮಹಾಲಿಂಗವಿಲ್ಲ.
ಅವನ ಸ್ಥಿತಿ ಗತಿ ನಗೆಗೆಡೆ ಕೇಳಿರಣ್ಣಾ, ಇದು ದೃಷ್ಟ ನೋಡಿರೆ.
ಇದು ಕಾರಣ,
ಭಕ್ತಿಹೀನನಾದ ಅಭಕ್ತಾಂಗನೆಯ ಮಗನ ಸಂಗವ ಬಿಡಿಸಿ
ಸದ್ಭಕ್ತಿ ಸದಾಚಾರಸಂಪನ್ನರಪ್ಪ
ಶರಣರ ಸಂಗದಲ್ಲಿರಿಸಯ್ಯಾ, ನಿಮ್ಮ ಬೇಡಿಕೊಂಬೆ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಪುಣ್ಯೆರಾಪ್ನೋತಿ ದೇವತ್ವಂ ಪಾಪೈಃ ಸ್ಥಾವರಮೇವ ಚ
ಪುಣ್ಯಪಾಪಸಮಾನೇಭ್ಯೋ ಮಾನುಷಂ ಲಭತೇ ನರಃ
ಎಂಬುದಾಗಿ,
ದುಃಕರ್ಮ ಫಲಭೋಗರೂಪಮಾದ ವ್ಯಾಧಿ ಕಾಡಿದಲ್ಲದೆ ಬಿಡವು.
ಮರುಳೇ ಶಿವಾಶಿವಾಯೆಂಬ ಮಂತ್ರವ ಮರೆಯದಿರೋ.
ವ್ಯಾಧಿನಾಶ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಯೆಂಬುದ
ಮರೆಯದಿರಿ, ಮರುಳೆ.

ವಚನ
ಪುತ್ರ ಮಿತ್ರ ಕಳತ್ರಕ್ಕೆ ಸ್ನೇಹಿಸುವಂತೆ
ಶ್ರೀಗುರು ಲಿಂಗ ಜಂಗಮಕ್ಕೆ ಸ್ನೇಹಿಸಬೇಕು.
ಸ್ನೇಹವೇ ಬಾತೆ ಕಾಣಿರೋ,
ಲಿಂಗಕ್ಕೆ ಸ್ನೇಹವೇ ಭಕ್ತಿ ಕಾಣಿರೋ,
ಸ್ನೇಹವೇ ಭಕ್ತಿಗೆ ಮೂಲ ಕಾಣಿರೋ,
ಕಣ್ಣಪ್ಪ, ಮಾದಾರ ಚೆನ್ನಯ್ಯ, ಚೋಳಿಯಕ್ಕನ ಸ್ನೇಹವ ನೋಡಿ ಭೋ.
ಅವರಂತೆ ಸ್ನೇಹವ ಮಾಡಲು ಭಕ್ತಿ ಮುಕ್ತಿ ಪರಿಣಾಮ ಮಹಾಸುಖ.
ಆ ಸುಖಸ್ವರೂಪ ತಾನಾಗಿ ಇಪ್ಪನು ಶಿವನು,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಪುರಾಕೃತಪುಣ್ಯಫಲದ ಪರಿಯ ನೋಡಿರೆ !
ಶ್ರೀಗುರು, ಲಿಂಗಿ ಜಂಗಮ ಪ್ರಸಾದವಾಗಿ ಪ್ರತ್ಯಕ್ಷವಾದ !
ಶಿವ ಶಿವಾ, ಗುರುವೆಂಬ ಕಲ್ಪವೃಕ್ಷ, ಲಿಂಗವೆಂಬ ಕಾಮಧೇನು,
ಜಂಗಮವೆಂಬ ಚಿಂತಾಮಣಿ, ಪ್ರಸಾದವೆಂಬ ಮಹಾಮೃತವು.
ಈ ಚತುರ್ವಿಧಪ್ರಸಾದಾಮೃತವ ಭೋಗಿಸದೆ
ಅಜ್ಞಾನಸಂಸಾರವೆಂಬ ಅಂಬಿಲವ ಬಯಸುವರನೇನೆಂಬೆ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಪೃಥ್ವಿ ಅಂಗ, ಚಿತ್ತ ಹಸ್ತ, ನಾಸಿಕ ಮುಖ, ಗಂಧ ಪದಾರ್ಥ,
ಆಚಾರಲಿಂಗಕರ್ಪಿತ ಭಕ್ತ.
ಅಪ್ಪು ಅಂಗ, ಬುದ್ದಿ ಹಸ್ತ, ಜಿಹ್ವೆ ಮುಖ, ರುಚಿ ಪದಾರ್ಥ,
ಗುರುಲಿಂಗಕರ್ಪಿತ ಮಹೇಶ್ವರ.
ಅನಿಲ ಅಂಗ, ನಿರಹಂಕಾರ ಹಸ್ತ, ನೇತ್ರ ಮುಖ, ರೂಪು ಪದಾರ್ಥ,
ಶಿವಲಿಂಗಕರ್ಪಿತ ಪ್ರಸಾದಿ.
ಪವನ ಅಂಗ, ಮನ ಹಸ್ತ, ತ್ವಕ್ಕು ಮುಖ, ಸ್ಪರ್ಶ ಪದಾರ್ಥ,
ಜಂಗಮಲಿಂಗಕರ್ಪಿತ ಪ್ರಾಣಲಿಂಗಿ.
ವ್ಯೋಮ ಅಂಗ, ಜ್ಞಾನ ಹಸ್ತ, ಶ್ರೋತ್ರ ಮುಖ, ಶಬ್ದ ಪದಾರ್ಥ,
ಪ್ರಸಾದಲಿಂಗಕರ್ಪಿತ ಶರಣ.
ಹೃದಯ ಅಂಗ, ಭಾವ ಹಸ್ತ, ಅರ್ಥ ಮುಖ, ಪರಿಣಾಮ ಪದಾರ್ಥ,
ಮಹಾಲಿಂಗಕರ್ಪಿತ ಐಕ್ಯ.
ಇಂತೀ ಷಟ್ಸ್ಥಲವಳವಟ್ಟಾತನು ಪರಶಕ್ತಿಸ್ವರೂಪನು,
ಆತನು ನಿಜಶಿವಯೋಗಸಂಪನ್ನನು,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಪ್ರಕೃತಿವಿಡಿದಿಹುದು ಪ್ರಾಣ,
ಪ್ರಾಣವಿಡಿದಿಹುದು ಜ್ಞಾನ,
ಜ್ಞಾನವಿಡಿದಿಹುದು ಗುರುಲಿಂಗಜಂಗಮ.
ಇಂತಿವರ ಪ್ರಸಾದ ಸಗುಣವೆಂದು ಹಿಡಿದು,
ನಿರ್ಗುಣವೆಂದು ಬಿಡುವ ವ್ರತಗೇಡಿಗಳ ತೋರದಿರು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಪ್ರಣವವೆ ಸರ್ವವರ್ಣಂಗಳ ಕಾರ್ಯಕಾರಣವ್ಯಾಪ್ತಿ ಮೂಲವು,
ಪ್ರಣವವೆ ಸರ್ವದೇವತಾಮಯವು,
ಪ್ರಣವವೆ ಸರ್ವಮಂತ್ರಗಳೆಲ್ಲವಕ್ಕೂ ಪ್ರಾಣಕಳೆ.
ಪ್ರಣವವೆ ಸರ್ವದೇವತಾಮಯ ಎಂದುದಾಗಿ
ಸದ್ಗುರುವಿನುಪದೇಶದಿಂದವು ಪ್ರಣವಾಧಿಕವಪ್ಪ
ಮಹಾಮಂತ್ರವ ಜಪಿಸುವ ಸದ್ಭಕ್ತನೆ ದೈವಜ್ಞನು, ಮಂತ್ರಜ್ಞನು.
ಇಂತಪ್ಪ ಸದ್ಭಕ್ತದೇಹಿಕದೇವನಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಪ್ರಥಮದಲ್ಲಿ ಬೀಜವಿಲ್ಲದಿದ್ದಡೆ
ವೃಕ್ಷ ಅಂಕುರ ಪಲ್ಲವ ಶಾಖೆ ಕುಸುಮ ಫಲವೆಲ್ಲಿಯವಯ್ಯಾ ?
ಆ ಫಲದ ಮಹಾಮಧುರವೆಲ್ಲಿಯದಯ್ಯಾ ?
ಪರಶಿವಲಿಂಗಮೂರ್ತಿ ಪರಮಾತ್ಮ ಬ್ರಹ್ಮ ಬಯಲಾದಡೆ
ನಿಷ್ಕಳತತ್ತ್ವಂಗಳೆಂತಾದವು ? ಕೇವಲ ಸಕಲತತ್ತ್ವಂಗಳೆಂತದಾವು ?
ತಾನು ಹುಟ್ಟಿ ತಮ್ಮವ್ವೆ ಬಂಜೆ ಎನ್ನಬಹುದೇ ?
ಅರಸು ಒಬ್ಬನು ಸ್ವತಂತ್ರನು, ಸರ್ವಕ್ರೀ ವರ್ತಿಸಬಾರದು.
ಪರಶಿವಲಿಂಗಮೂರ್ತಿ ಸರ್ವತತ್ತ್ವಮಯನಪ್ಪ, ಸರ್ವಕಾರಣಕ್ಕೆ ಕಾರಣನಪ್ಪ.
ತನ್ನ ವಿನೋದಕ್ಕೆ ಪಂಚಭೂತಂಗಳನು
ಇಚ್ಛಾಜ್ಞಾನಕ್ರಿಯಾಶಕ್ತಿಗಳನೂ
ಬ್ರಹ್ಮವಿಷ್ಣಾದಿಗಳನೂ, ಅಷ್ಟಾದಶವಿದ್ಯಂಗಳನೂ ಮಾಡಿ
ಉತ್ಪತ್ತಿ ಸ್ಥಿತಿಯನೂ ನೋಡಿ, ವಿನೋದಿಸಿ
ಮಹಾಲೀಲೆಯಿಂ ಸಂಹರಿಸಿ ಪರಮಸುಖಿಯಾಗಿಪ್ಪನು.
ಮತ್ತೆ ಯಥಾಪೂರ್ವಮಕಲ್ಪಯತ್’ ಎಂದುದಾಗಿ ಮರಳಿ ವಿನೋದಿಸುತಿರ್ಪನು. ಪರಶಿವಲಿಂಗಮೂರ್ತಿಪರಮಾತ್ಮನಲ್ಲಿ ಪರಬ್ರಹ್ಮ ಬಯಲಾದಡೆ ಗುರುವೆಂತಾದ ಜಂಗಮವೆಂತಾದ ಹೇಳಿರೆ ? ಅಂತರಂಗ ಬಹಿರಂಗ ಪರಮಾಕಾಶಮಧ್ಯದಲ್ಲಿ ನಿಷ್ಕಳನು ಶಿವಂ ಪರಾತ್ಪರಂ ಶೂನ್ಯಂ’ ಎಂದುದಾಗಿ
ಶಿವಂ ಪರಮಾಕಾಶಮಧ್ಯೇ ಧ್ರುವಂ’ ಎಂದುದಾಗಿ ಶ್ರೀಗುರುಮೂರ್ತಿಯಾಗಿಪ್ಪನು. ಭ್ರೂಮಧ್ಯದಲ್ಲಿ ಪರಂಜ್ಯೋತಿರ್ಲಿಂಗಮೂರ್ತಿಯಾಗಿಪ್ಪನು. ಪರಾತ್ಪರಂ ಪರಂಜ್ಯೋತಿರ್ಭ್ರೂಮಧ್ಯೇ ತು ವ್ಯವಸ್ಥಿತಂ ಎಂದುದಾಗಿ.
ಹೃದಯಸ್ಥಾನದಲ್ಲಿ ಪ್ರಾಣಲಿಂಗವು ಜಂಗಮಲಿಂಗವಾಗಿ
ಸಕಲವ್ಯಾಪಾರನಾಗಿಪ್ಪನು.
ಹೃದಯಸ್ಯ ಮಧ್ಯೇ ವಿಶ್ವೇದೇವಾ ಜಾತವೇದಾ ವರೇಣ್ಯಃ’ ಬ್ರಹ್ಮರಂಧ್ರದಲ್ಲಿ ಲಿಂಗಮೂರ್ತಿ ಪರಮಾತ್ಮ, ಭ್ರೂಮಧ್ಯದಲ್ಲಿ ಲಿಂಗಮೂರ್ತಿ ಅಂತರಾತ್ಮ, ಹೃದಯದಲ್ಲಿ ಜಂಗಮಮೂರ್ತಿ ಜೀವಾತ್ಮ, ಬಹಿರಂಗದಲ್ಲಿ ದೀಕ್ಷೆಗೆ ಗುರು, ಪೂಜೆಗೆ ಲಿಂಗ, ಶಿಕ್ಷೆಗೆ ಜಂಗಮ. ಏಕಮೂರ್ತಿಸ್ತ್ರಿಧಾ ಭೇದಃ’ ಎಂದುದಾಗಿ
ಅಂತರಂಗ ಬಹಿರಂಗ ಸಕಲ ನಿಷ್ಕಲವೆಲ್ಲವೂ ಏಕೀಭವಿಸಿ
`ಇಷ್ಟಂ ಪ್ರಾಣಸ್ತಥಾ’ ಎಂದುದಾಗಿ
ಲಿಂಗವಾಗಿ ಪೂಜೆಗೊಳ್ಳುತ್ತಿದ್ದಾನು.
ಇದು ಕಾರಣ,
ಸಕಲತತ್ತ್ವ ಸರ್ವಕಾರಣವಯ್ಯ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಪ್ರಸಾದ ಪ್ರಸಾದವೆನುತಿಪ್ಪಿರಿ.
ಪ್ರಸಾದವೆಂತಿಪ್ಪುದು ? ಪ್ರಸಾದಿಯೆಂತಿಪ್ಪ ?
ಪ್ರಸಾದಗ್ರಾಹಕ ಎಂತಿರಬೇಕು ? ಎಂದರಿಯದೆ
ಪ್ರಸಾದವೆಂದು ಇಕ್ಕಿಹೆವೆಂಬರು, ಕೊಂಡೆಹೆವೆಂಬರು.
ಕೊಂಡು ನಗೆಗೆಡೆಯಾಗುತಿಪ್ಪರಯ್ಯಾ.
ಪ್ರಸಾದ ಪರಾಪರವಾದುದು,
ಶಾಂತನಾಗಿ, ಸತ್ಯನಾಗಿ, ಪ್ರಸನ್ನವಾಗಿಹುದು ಪ್ರಸಾದಿ.
ಕರ್ಮಣಾ ಮನಸಾ ವಾಚಾ ಗುರುಭಕ್ತಿವಿಚಕ್ಷಣಃ
ಶರೀರಂ ಪ್ರಾಣಮರ್ಥಂ ಚ ಸದ್ಗುರುಭ್ಯೋ ನಿವೇದಯೇತ್
ಎಂದು
ದೀಕ್ಷಾಮೂರ್ತಿ ಪರಶಿವಗುರುಲಿಂಗಕ್ಕೆ
ತನುಮನಧನವನರ್ಪಿಸುವುದು.
ಪೂಜಾಕಾರಮೂರ್ತಿ ಪರಮಗುರುಮಹಾಲಿಂಗಕ್ಕೆ
ತನುಮನಧನವರ್ಪಿಸಿ,
ಶಿಕ್ಷಾಮೂರ್ತಿ ಪರಮಗುರುಜಂಗಮಲಿಂಗಕ್ಕೆ
ತನು ಮನ ಧನವನರ್ಪಿಸಿ,
ಪ್ರಸನ್ನಪ್ರಸಾದವ ಪಡೆದು ಭೋಗಿಸಿ,
ಆ ಪ್ರಸಾದವ ಶುದ್ಧವ ಮಾಡಿ ನಿಲಿಸಿ,
ಶಾಂತನಾಗಿ, ನಿತ್ಯನಾಗಿ, ಪ್ರಸನ್ನಮೂರ್ತಿಯಾಗಿಪ್ಪ
ಆ ಪ್ರಸಾದಿಯೇ ಪ್ರಸಾದಗ್ರಾಹಕ.
ಆ ಪ್ರಸಾದಿಯೇ ಗುರುವೆಂದು, ಆ ಪ್ರಸಾದಿಯೇ ಲಿಂಗವೆಂದು
ಆ ಪ್ರಸಾದಿಯೇ ಜಂಗಮವೆಂದು
ತನುಮನಧನದಲ್ಲಿ ವಂಚನೆ ಇಲ್ಲದೆ
ಕೇವಲ ವಿಶ್ವಾಸದಿಂದ ನಂಬಿ ಪ್ರಸಾದವ ಗ್ರಹಿಸುವುದು.
ಇದು ಕಾರಣ,
ಪ್ರಸಾದಗ್ರಾಹಕನ ಪರಿಯೆಂಬ ಭಾವ ಹಿಂಗದೆ
ಇಕ್ಕುವ ಪರಿಯ ನೋಡಾ.
ಇದು ಕಾರಣ.
ಮಹಾನುಭಾವರ ಸಂಗದಿಂದ ಅರಿಯಬಹುದಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಪ್ರಸಾದವೆಂದು ಪ್ರಸಾದಿಗಳೆಂದು,
ಪ್ರಸಾದವ ಕೊಂಡೆನೆಂದು ನುಡಿವುತ್ತಿರ್ಪರು.
ಇನ್ನೆಂತಯ್ಯಾ ಶಿವಶಿವಾ !
ಅರ್ಪಿತವಿಲ್ಲದೆ ಪ್ರಸಾದವಾದ ಪರಿಯೆಂತಯ್ಯಾ ?
ಆವಾವ ಪದಾರ್ಥಂಗಳನು ಆವಾವ ದ್ರವ್ಯಂಗಳನು
ಎಹಗೆಹಗರ್ಪಿಸಿದಿರಿ, ಹೇಳಿರಣ್ಣಾ ?
ಪ್ರಸಾದವೇ ಹೇಂಗಾದುದು ಹೇಳಿರೆ ?
ಶಬ್ದ ಸ್ಪರ್ಶ ರೂಪು ರಸ ಗಂಧಂಗಳನು
ಎಹಗೆಹಗೆ ಅರ್ಪಿಸುವಿರಿ ಹೇಳಿರೆ ? ಅದು ಹೇಂಗರ್ಪಿಸಬಹುದು ?
ಪ್ರಸಾದವಲ್ಲದೆ ಕೊಳ್ಳೆನೆಂಬವರಿಗೆ ಅರ್ಪಿಸುವದಂತಿರಲಿ,
ಮುನ್ನಿನ ಪ್ರಸಾದಿಗೆ ಅನರ್ಪಿತವ ನೆನೆವ ಪರಿಯೆಂತೊ ?
ಅನರ್ಪಿತವ ನೋಡುವ ಪರಿಯೆಂತೋ ?
ಅನರ್ಪಿತವ ಕೇಳುವ ಪರಿಯೆಂತೊ ?
ಅನರ್ಪಿತವ ವಾಸಿಸುವ ಪರಿಯೆಂತೊ ?
ಅನರ್ಪಿತವ ರುಚಿಸುವ ಪರಿಯೆಂತೊ ?
ಅನರ್ಪಿತವ ಸ್ಪರ್ಶಿಸುವ ಪರಿಯೆಂತೊ ?
ನೆನೆಯಬಾರದು, ನೋಡಬಾರದು, ಕೇಳಬಾರದು,
ವಾಸಿಸಬಾರದು, ರುಚಿಸಬಾರದು, ಮುಟ್ಟಬಾರದು,
ಶಿವಶಿವಾ, ತೊಡಕು ಬಂದಿತ್ತಲ್ಲಾ !
ಅನರ್ಪಿತವ ಕೊಳಬಾರದು.
ಸರ್ವಂ ಚ ತೃಣಕಾಷ್ಠಂ ಚ ಭಕ್ಷ್ಯಂ ಭೋಜ್ಯಾನುಲೇಪನಂ
ಶಿವಾರ್ಪಿತಂ ವಿನಾ ಭುಂಜೇ ಭುಕ್ತಂ ಸದ್ಯೋಖಪಿ ಕಿಲ್ಬಿಷಂ
_ಎಂದುದಾಗಿ, ಅರ್ಪಿಸಿದ ಪ್ರಸಾದವ ಕೊಳ್ಳಲೇ ಬೇಕು. ಇನ್ನೆಂತಯ್ಯಾ?
ಆವನಾನೊಬ್ಬ ಪ್ರಸಾದಿಗೆ ಅನರ್ಪಿತವ ನೆನೆಯಬಾರದು.
ಅರ್ಪಿಸುವ ಪರಿ ಇನ್ನೆಂತಯ್ಯಾ, ವರ್ಮ ಜ್ಞಾನಗದನ್ನಕ್ಕ ?
ಭಾವಶುದ್ಧವಾಗದನ್ನಕ್ಕ ? ಆ ಲಿಂಗವಂತನು ಲಿಂಗಪ್ರಾಣವಾಗದನ್ನಕ್ಕ ?
ಮಹಾನುಭಾವರ ಸಂಗವಿಲ್ಲದನ್ನಕ್ಕ ?
ಇದು ಕಾರಣವಾಗಿ,
ವರ್ಮಜ್ಞನಾಗಿ, ಭಾವಶುದ್ಧವಾಗಿ, ಲಿಂಗಪ್ರಾಣವಾಗಿ,
ಮಹಾನುಭಾವರ ಸಂಗದಿಂದರಿದು ಅರ್ಪಿಸಿದ ಪ್ರಸಾದವ ಕೊಂಡು
ಮುಕ್ತರಪ್ಪುದಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

  ಸರ್ವಜ್ಞ ವಚನ 13 : ಜಂಗಮ

ವಚನ
ಪ್ರಾಣ ಲಿಂಗಸಂಬಂಧಿ,
[ಲಿಂಗವೂ ಪ್ರಾಣಸಂಬಂಧಿ].
ಕಾಯ ಲಿಂಗಸಂಬಂಧಿ,
ಲಿಂಗವೂ ಕಾಯ ಸಂಬಂಧಿ.
ಈ ಸತ್ಕ್ರಿಯಾ ಸಂಬಂಧವ ಶ್ರೀಗುರು ಮಾಡಿದನಾಗಿ
ಲಿಂಗವಂತನು ಮುಟ್ಟಿತ್ತೆ ಅರ್ಪಿತ, ಕೊಂಡುದೆ ಪ್ರಸಾದ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಪ್ರಾಣಲಿಂಗ ಸ್ವಾಯತವಾದ ಶಿವಭಕ್ತಂಗೆ, ಸದ್ಭಕ್ತಿಮಾರ್ಗವ ಕ್ರೀ ನೋಡಾ,
ಲೋಕಾಚಾರವ ಮಾಡಲಾಗದು, ಲೋಕದ ಬಳಕೆಯ ಬಳಸಲಾಗದು.
ಲೋಕ ಲೌಕಿಕರಲ್ಲಿ ವರ್ತಿಸಲಾಗದು, ಲೋಕಾಚಾರವೆಲ್ಲವನು ಬಿಡಬೇಕು.
ಲೋಕಾಚಾರನಿಬಂಧೇನ ಲೋಕಾಲೋಕವಿವರ್ಜಿತಂ
ಲೋಕಾಚಾರಂ ಪರಿತ್ಯಜ್ಯ ಪ್ರಾಣಲಿಂಗಸ್ಥಲಂ ಭವೇತ್
ಎಂದುದಾಗಿ,
ಲೋಕಾಚಾರವ ತ್ಯಜಿಸಿ, ಶಿವಾಚಾರ ಸನ್ಮಾರ್ಗದಲ್ಲಿ
ಪಂಚಾಚಾರ ನಿಯತಾತ್ಮನಾದ ಸದ್ಭಕ್ತನೆ ಪ್ರಾಣಲಿಂಗಿ.
ಆ ಸದಾಚಾರವೆ ಸರ್ವಾಂಗಲಿಂಗವಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಪ್ರಾಣಲಿಂಗ, ಲಿಂಗ ಪ್ರಾಣ’ವೆಂಬ ಧ್ಯಾನಾಮೃತದಿಂದ
ಪಂಚಾಕ್ಷರಂಗಳ ಪಂಚಾಮೃತದಿಂದ
ಮಜ್ಜನಕ್ಕೆರೆದಡೆ ಆ ಲಿಂಗಕ್ಕೆ
ಮನವೇ ಪುಷ್ಪ, ಬುದ್ಧಿಯೇ ಗಂಧ
ಚಿತ್ತವೇ ನೈವೇದ್ಯ, ನಿರಹಂಕಾರದಿಂದಾರೋಗಣೆಯ ಮಾಡಿಸಿ,
ಪರಿಣಾಮದ ವೀಳೆಯವನಿತ್ತು
ಸ್ನೇಹದಿಂದ ವಂದನೆಯಂ ಮಾಡಿ
ಪ್ರಾಣಲಿಂಗಕ್ಕೆ ಅಂತರಂಗಪೂಜೆಯ ಮಾಡುವುದು.
ಅಂತರಂಗದ ವಸ್ತುಗಳನೆಲ್ಲವನೂ ಬಹಿರಂಗದ ವಸ್ತುವಿನಲ್ಲಿ ಕೂಡಿ
ಲಿಂಗಾರ್ಚನೆಯಂ ಮಾಡಲು
ಅಂತರಂಗಬಹಿರಂಗದಲ್ಲಿ ಭರಿತನಾಗಿಪ್ಪನು ಶಿವನು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಪ್ರಾಣಲಿಂಗ, ಲಿಂಗಪ್ರಾಣ
`ಇಷ್ಟಂ ಪ್ರಾಣಸ್ತಥಾ ಭಾವಸ್ತ್ರಿಧಾ ಚೈಕಂ ಎಂದುದಾಗಿ
ಪಂಚಭೂತಕಾಯವಳಿದು ಪ್ರಸಾದಕಾಯವ ಮಾಡಿ
ಭಕ್ತದೇಹಿಕನೆನಿಸಿದನು.
ಈ ಸತ್ಕ್ರೀಯನು ಶ್ರೀಗುರು ಕರುಣಿಸಿ ಮಾಡಿದನಾಗಿ
ಪ್ರಾಣಲಿಂಗ, ಕಾಯಭಕ್ತನು ಇದೂ ಸ್ವಭಾವ.
ದಾಸೋಹಿಯಾಗಿ ಅರ್ಚನೆ ಪೂಜನೆ
ಸರ್ವದ್ರವ್ಯ ಸಕಲಭೋಗವನೂ ಅರ್ಪಿತವ ಮಾಡುತ್ತಿಹನು,
ಪ್ರಸಾದವ ಭೋಗಿಸುತ್ತಿಹನು.
ಸತ್ಕ್ರೀಯಲ್ಲಿ ಲಿಂಗಕ್ಕೆ ಕಾಯಶೂನ್ಯನಾಗಿ
ಭಕ್ತಕಾಯ ಮಮಕಾಯನೆಂದು ಅವಗ್ರಹಿಸಿಕೊಂಡ ಭಕ್ತಂಗೆ
ಬೇರೆ ಪ್ರಾಣವಿಲ್ಲಾಗಿ ಪ್ರಾಣವೆಂದು ಅವಗ್ರಹಿಸಿಕೊಂಡ.
ಇಂತಹ ಪ್ರಾಣಲಿಂಗವು, ಕಾಯಭಕ್ತನು
ತನ್ನೊಳಗೆ ತಾನೇ ಐಕ್ಯವಾಯಿತ್ತು.
ಭಕ್ತನೇ ಲಿಂಗ, ಲಿಂಗವೇ ಭಕ್ತನು,
ದಾಸೋಹಕ್ರೀಯೆ ಸೋಹಕ್ರೀ, ಸೋಹಕ್ರೀಯೆ ದಾಸೋಹಕ್ರೀ.
ಈ ಕ್ರೀಯನು ಅದ್ವೈತವೆನ್ನಿ, ಸೋಹವೆನ್ನಿ, ದಾಸೋಹವೆನ್ನಿ
ಬಲ್ಲವರುಗಳು ಬಲ್ಲಂತೆ ನಿಮ್ಮ ನಿಮ್ಮ ಅರಿವಿನ ಹವಣಿಂಗೆ ನುಡಿಯಿರಿ.
ಆ ಲಿಂಗಾಯತವ, ಆ ಲಿಂಗದ ಮರ್ಮವ
ಅರ್ಪಿತದ ಮರ್ಮವ, ಪ್ರಸಾದದ ಮಹಿಮೆಯ
ಮಹಾಪರಿಣಾಮದ ಕ್ರೀಯು ಸಾಮಾನ್ಯರಿಗೆ ಅರಿಯಬಾರದು.
ಈ ಮಹಾ ಕ್ರೀ ವಾಙ್ಮನೋತೀತ.
ಈ ಮಹಾಕುಳವ ಮಹಾನುಭಾವರೇ ಬಲ್ಲರು,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಪ್ರಾಣಲಿಂಗಸಂಬಂಧಿಯಾಗಿ, ಅಂಗಲಿಂಗಸಂಬಂಧಿಯಾಗಿ,
ಕರಸ್ಥಲದಲ್ಲಿ ಲಿಂಗವ ಬಿಜಯಂಗೈಸಿಕೊಟ್ಟು,
ಶ್ರೀಗುರು ರಕ್ಷಿಸಿದ ಬಳಿಕ, ಲಿಂಗವೇ ಪ್ರಾಣ, ಪ್ರಾಣವೇ ಲಿಂಗ
ಲಿಂಗವೇ ಅಂಗ, ಅಂಗವೇ ಲಿಂಗ.
ಇಂತು ಅಂತರಂಗ ಬಹಿರಂಗ ಲಿಂಗವಾಗಿ ಸರ್ವಾಂಗ ಲಿಂಗವಾದ ಬಳಿಕ
ಲಿಂಗದ ನಡೆ, ಲಿಂಗದ ನುಡಿ, ಪಂಚೇಂದ್ರಿಯಗಳೆಲ್ಲವೂ ಲಿಂಗೇಂದ್ರಿಯಂಗಳು.
ಅಂತಃಕರಣ ಚತುಷ್ಟಯಂಗಳು ಲಿಂಗಕರಣಂಗಳು.
ವರ್ತಕ ನಿವರ್ತಕ ಇದು ಸಹಜ ಸತ್ಯ ಪ್ರಾಣಲಿಂಗಸಂಬಂಧಿ,
ಅನ್ಯವರ್ತಕ ವರ್ತಿಸಿದಡೆ ಪ್ರಾಣಲಿಂಗಸಂಬಂಧಿಯಲ್ಲ,
ಅವನೂ ಪೂಜಕರಂತೆ ಪೂಜಕನಪ್ಪನು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಪ್ರಾಣಲಿಂಗಸಂಬಂಧಿಯಾದ ಸದ್ಭಕ್ತನು
ಏಕಭಕ್ತೋಪವಾಸಂ ಮಾಡಲಾಗದು.
ಅದೆಂತೆಂದಡೆ:
ದೇವರಾರೋಗಣೆ ತಪ್ಪುವುದು,
ಅಷ್ಟವಿಧಾರ್ಚನೆ ಷೋಡಶೋಪಚಾರ ಶ್ರೀ ತಪ್ಪುವುದು,
ಶ್ರೀಗುರುವಾಜ್ಞೆ ತಪ್ಪುವುದು.
ದೋಷಕಾರಿಯಪ್ಪನು ಕೇಳಿರಣ್ಣಾ.
ಪ್ರಾಣಲಿಂಗಸಮಾಯುಕ್ತಾ ಏಕಭುಕ್ತೋಪವಾಸಿನಃ
ಪ್ರಸಾದೋ ನಿಷ್ಫಲಶ್ಚೈವ ರೌರವಂ ನರಕಂ ಭವೇತ್
ಎಂದುದಾಗಿ,
ಇದು ಕಾರಣ, ನಿತ್ಯನೈಮಿತ್ತಿಕ ಪಂಚಪರ್ವ ವಿಶೇಷತಿಥಿಗಳಲ್ಲಿ
ಆವ ದಿನದಲ್ಲಿಯೂ ಒಂದೆ ಎಂದು
ಅಷ್ಟವಿಧಾರ್ಚನೆ ಷೋಡಶೋಪಚಾರವೆ ಕರ್ತವ್ಯವೆಂದು
ದೇವರಾರೋಗಣೆಯ ಮಾಡಿಸಿ, ಪ್ರಸನ್ನತ್ವವ ಪಡೆದು
ಪ್ರಸಾದವ ಗ್ರಹಿಸಿ ಮುಕ್ತರಪ್ಪುದು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಬಸವ, ಬಸವ, ಬಸವ’ ಎನುತಿರ್ಪವರೆಲ್ಲರು
ಬಸವನ ಘನವನಾರೂ ಅರಿಯರಲ್ಲ?
ಅನಾದಿ ಪರಶಿವನಲ್ಲಿ ಅಂತರ್ಗತಮಾಗಿರ್ದ
ಮಹಾಪ್ರಕಾಶವೆ ಬಹಿಷ್ಕರಿಸಿತ್ತು.
ಆ ಚಿತ್ತೆ ಚಿದಂಗ ಬಸವ,
ಚಿದಂಗ ಬಸವನಿಂದುದಯಿಸಿದ
ಚಿದ್ವಿಭೂತಿಯನೊಲಿದು ಧರಿಸಿದ ಶರಣರೆಲ್ಲರು
ಜ್ಯೋತಿರ್ಮಯಲಿಂಗವಪ್ಪುದು ತಪ್ಪದು ಕಾಣಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಬಹಿರಂಗದಲ್ಲಿ ಶಿವಲಿಂಗ, ಅಂತರಂಗದಲ್ಲಿ ಅನ್ಯದೈವ
ಬಹಿರಂಗದಲ್ಲಿ ಲಿಂಗಕ್ರೀ, ಅಂತರಂಗದಲ್ಲಿ ಅನ್ಯಕ್ರೀ
ಬಹಿರಂಗದಲ್ಲಿ ಭಕ್ತರು, ಅಂತರಂಗದಲ್ಲಿ ಭವಿಗಳು
ಇಂತಿವರುಗಳ ಭಕ್ತರೆಂಬೆನೆ ? ಎನಬಾರದು,
ನಿಮ್ಮ ಪೂಜಿಸಿಹರಾಗಿ ಭಕ್ತರೆಂಬೆನೆ ? ಸದಾಚಾರಕ್ಕೆ ಸಲ್ಲರು.
ಲಿಂಗವಂತರು ಮೆಚ್ಚರು.
ಈ ಉಭಯ ಸಂಕೀರ್ಣವ ನೀನೆ ಬಲ್ಲೆ.
ಎನ್ನ ಮನವಿಡಿಯದು, ಎನಗಿನ್ನಾವುದು ಬುದ್ಧಿ ಎಂಬುದ
ವಿಚಾರಿಸಿ ಕರುಣಿಸಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಬಳ್ಳ ಬೇವಿನಕೊರಡು ಆಡಿನಹಿಕ್ಕೆ ಲಿಂಗವೆ ?
ಸದ್ಭಾವದಿಂ ಭಾವಿಸಿ ಲಿಂಗವ ಮಾಡಿ ಸದ್ಭಕ್ತರಾದರು ಪುರಾತನರು.
ಕೇವಲ ಪರಶಿವಮೂರ್ತಿಲಿಂಗವು.
ಶ್ರೀಗುರು ಪರಶಿವನು, ಲಿಂಗವು ಪರಶಿವನು,
ಜಂಗಮವು ಪರಶಿವನು,
ದಿಟವ ಸೆಟೆಮಾಡಿ ನರಕಕ್ಕಿಳಿಯದಿರಿ, ಅಭಕ್ತರಾಗದಿರಿ.
ಇವಂದಿರಂತಿರಲಿ ತಮ್ಮ ಬಲ್ಲಂಗತಾಲಿ.
ಮನವೇ ನಾ ನಿಮ್ಮ ಬೇಡಿಕೊಂಬೆನು ನಂಬು ಕಂಡಾ.
ಸದ್ಭಾವದಿಂ ಲಿಂಗವ ನಂಬಲು ಭಕ್ತಿ ಸದ್ಭಕ್ತಿ
ಕೇವಲ ಮುಕ್ತಿಯಪ್ಪುದು ನೆರೆ ನಂಬು,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಬೆಡಗಿನಲಿಪ್ಪ ಅಗ್ನಿ ಮೈದೋರದಿದ್ದಲ್ಲಿ ಆಕಾರ ನಾಸ್ತಿಯಾಗದು.
ಇಷ್ಟಲಿಂಗಕ್ಕೆ ಕಾಯದ ಕೈ ಮುಟ್ಟಿ ಮಾಡುವ
ಅಷ್ಟವಿಧಾರ್ಚನೆ ಷೋಡಶೋಪಚರ್ಯದಿಂದ
ಬೆಡಗಿನಲಿಪ್ಪ ಜ್ಞಾನಾಗ್ನಿ ಮೈದೋರದಲ್ಲಿ ಆಕಾರನಾಸ್ತಿಯಾಯಿತ್ತು.
ಅಂಗದ ಮೇಲಣ ಲಿಂಗದ ಜವನಿಕೆ ಬಗೆದಗೆದಡೆ
ಕಾಯದ ಪರಿ ನಷ್ಟ, ಜ್ಞಾನಾಗ್ನಿಯಿಂದ ಪ್ರಾಣನ ಭೋಗ ನಷ್ಟ.
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನ ಪೂಜಿಸುವ ಶರಣನ
ಮರ್ತ್ಯಜನೆಂದಡೆ ನಾಯಕ ನರಕ.

ವಚನ
ಬ್ರಹ್ಮ ವಿಷ್ಣು ಮೊದಲಾದ ದೇವದಾನವ ಮಾನವರೆಲ್ಲರನೂ
ಆಸೆ ಘಾಸಿಮಾಡಿ ಕಾಡಿತ್ತು.
ಮಹತ್ತಪ್ಪ ವ್ರತನಿಯಮ ಗುರುತ್ವ ಉಳ್ಳವರನೂ
ಕೆಡಿ ಲಘುಮಾಡಿ ನಗೆಗೆಡೆಮಾಡಿತ್ತು.
ಈ ಸಾಮಥ್ರ್ಯವುಳ್ಳ ಪುರುಷರನು ಘಾಸಿಮಾಡಿ ಸೋಲಿಸಿ
ತಾನು ಗೆಲ್ಲುವ ಸಾಮಥ್ರ್ಯವುಳ್ಳ ಆಸೆ ಇದೇನೋ !
ಎಂದು ವಿಚಾರಿಸಲು, ಶಿವಸಂಬಂಧಿ ಆಸೆಗೆ ಆಸಕ್ತನಾದಡೆ
ಶಿವನಾಜ್ಞೆಯಿಂದ ಕಾಡುವುದು,
ಶಿವನೊಲಿದವರ ಹೊದ್ದಲಮ್ಮದಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಬ್ರಹ್ಮದೇವರಾದರೆ ತಾನೇರುವ ಹಂಸೆಯಿಂದಲಿ ಬಿತ್ತಿ ಬೆಳೆದು
ಅದರ ಕ್ಷೀರಪ್ರಸಾದದಿಂದ ತೃಪ್ತರಾಗಿ
ಅದರ ಮೂತ್ರ ಹಿಕ್ಕೆಯಿಂದ ಪವಿತ್ರ ಪಾವನನಾಗನೇತಕ್ಕೆ ?
ವಿಷ್ಣು ತಾ ದೈವನಾದರೆ ತಾನೇರುವ ಗರುಡನಿಂದ ಬಿತ್ತಿ ಬೆಳೆದು
ಅದರ ಕ್ಷೀರ ಪ್ರಸಾದದಿಂದ ತೃಪ್ತರಾಗಿ
ಅದರ ಮೂತ್ರ ಹಿಕ್ಕೆಯಿಂದ ಪವಿತ್ರ ಪಾವನನಾಗನೇತಕ್ಕೆ ?
ವಿನಾಯಕ ಭೈರವ ಮೈಲಾರ ಜಿನ ಇವರು ದೇವರಾದರೆ
ತಾವು ಏರುವ ಇಲಿ ಚೇಳು ಕುದುರೆ ಕತ್ತೆಗಳಲ್ಲಿ ಬಿತ್ತಿ ಬೆಳೆದು
ಅವರ ಕ್ಷೀರ ಪ್ರಸಾದದಿಂದ ತೃಪ್ತರಾಗಿ
ಅವರ ಮೂತ್ರದಿಂದ ಪವಿತ್ರರಾಗರೇತಕ್ಕೆ ?
ಅಯ್ಯಾ ಇಂತೀ ಭೇದವನರಿಯದ
ಅವಿಚಾರಿ ಹೀನರ ಮಾತದಂತಿರಲಿ,
ಬ್ರಹ್ಮರು ಇಂದ್ರ ದಿಕ್ಪಾಲಕರು ಮುಂತಾಗಿ
ಸಮಸ್ತದೇವರ್ಕಳೆಲ್ಲ ಕೊಂಬ ಉಂಬುದು
ಗೋ ವೃಷಭನ ಅಮೃತ ಪ್ರಸಾದ,
ಆ ಗೋಮಯದಿಂದ ಪಾವನ ಶುದ್ಧ
ಆ ಮೂತ್ರದಿಂದ ಪವಿತ್ರ ಪಾವನ ಶುದ್ಧರಯ್ಯ.
ಆ ವೃಷಭನ ವಿಭೂತಿಯಿಂದ ಸಮಸ್ತದೇವತಾದಿಗಳು
ಸರ್ವಮುನಿಜನಂಗಳೆಲ್ಲ ಧರಿಸಿ ಬ್ರಹ್ಮತ್ವಂ ಪಡೆದು
ಮುಕ್ತಿಫಲಪದವಾಯಿತ್ತು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಬ್ರಹ್ಮವೆಂಬುದನರಿದ ಬಳಿಕ
ಅಷ್ಟಾದಶ ವಿದ್ಯವ ನೋಡುವ ಕೇಳುವ ಆಯಸವಿನ್ನದೇತಕಯ್ಯಾ ?
ಶ್ರೀಗುರುವನರಿದ ಬಳಿಕ
ಮೇಲೆ ಬಯಸುವಾಯಸವದೇತಕಯ್ಯಾ ?
ಮನವೇ ಮಹಾವಸ್ತುವನರಿದ ಬಳಿಕ
ಅಜ್ಞಾನಪ್ರಂಪಚು ಏತಕಯ್ಯಾ ?
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಬ್ರಹ್ಮಸೃಷ್ಟಿ ಪಂಚಭೂತ ಸಮ್ಮಿಶ್ರದಿಂದಾದ
ಕಾಯವು ಭೂತಕಾಯವು.
ವಾಯುಪ್ರಾಣಿಗೆ ಉತ್ಪತ್ತಿಸ್ಥಿತಿಲಯ
ಕಾರಣಕಾಯವು.
ಈ ಪರಿಯ ಉತ್ಪತ್ತಿಯು ದೇವದಾನವ
ಮಾನವರಿಗೆಯೂ ಒಂದೇ ಪರಿ.
ಶ್ರೀಗುರುವಿನ ಸೃಷ್ಟಿಯಿಂದಲೂ, ಮಹಾಪ್ರಸಾದದಿಂದಲೂ
ಮಹಾಮಂತ್ರಸಮ್ಮಿಶ್ರದಿಂದಾದ ಕಾಯವು ಪ್ರಸಾದಕಾಯವು.
ಮಹಾಮಂತ್ರಪಿಂಡವು ಭಕ್ತಿಕಾಯವು.
ಲಿಂಗಪ್ರಾಣಿಗೆ ಉತ್ಪತ್ತಿಸ್ಥಿತಿಲಯವಿಲ್ಲ.
ಸತ್ಯನು ಸದ್ಯೋನ್ಮುಕ್ತನು.
ಈ ಪರಿಯ ಶ್ರೀಗುರುಕಾರುಣ್ಯವ ಪಡೆದ ಮಹಾತ್ಮರಿಗೆ ಒಂದೇ ಪರಿ.
ಶ್ರೀಗುರುವಿನ ಕಾರುಣ್ಯದ ಪರಿ ಶಿವಭಕ್ತನ ಇರವಿನ ಪರಿ ಇಂತುಟಯ್ಯಾ.
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ,
ನಿಮ್ಮ ಶರಣರಿಗೆ ಲೋಕದ ಮಾನವರು ಸರಿ ಎಂದಡೆ
ನಾಯಕನರಕ ತಪ್ಪದು.

ವಚನ
ಬ್ರಹ್ಮಾಬ್ರಹ್ಮರಿಲ್ಲದಂದು,
ವಿಷ್ಣುಮಾಯೆ, ಜಗಮಾಯೆಯಿಲ್ಲದಂದು,
ಸೃಷ್ಟಿಯಸೃಷ್ಟಿ ಇಲ್ಲದಂದು, ಕಾಳಿಂಗ ಕರಿಕಂಠರಿಲ್ಲದಂದು,
ಉಮೆಯ ಕಲ್ಯಾಣವಿಲ್ಲದಂದು, ದ್ವಾದಶಾದಿತ್ಯರಿಲ್ಲದಂದು,
ನಂದಿಕೇಶ್ವರ ದಂಡನಾಥರಿಲ್ಲದಂದು, ವಿಷವನಮೃತ ಮಾಡದಂದು,
ಲಿಂಗಸ್ಥಲ, ಜಂಗಮಸ್ಥಲ, ಪ್ರಸಾದಿಸ್ಥಲವಿಲ್ಲದಂದು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ
ನಿಮ್ಮ ನಿಲವನಾರು ಬಲ್ಲರು ?

ವಚನ
ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ
ಶರಣನೈಕ್ಯನೆಂಬ ಭೇದ ಸಂದಿಲ್ಲದೊಂದಾಗಿ ಹೇಳುವೆನು:
ಭಕ್ತನೆಂಬಾತ ತನುಗುಣನಾಸ್ತಿಯಾಗಿ
ಕಾಯದ ಕ[ರಂ]ಗಳಿಂದ ಬಂದ ಪದಾರ್ಥವ
ಸುಕ್ಷ್ಮಕರದಲ್ಲಿ ರೂಪಿಂಗರ್ಪಿಸಿ
ರುಚಿಯ ನಿರೂಪಿಂಗರ್ಪಿಸುವ ಭೇದ
ಅಂಗಾನಾಂ ಲಿಂಗಸಂಬಂಧೋ ಅಂಗಭಾವವಿಮುಕ್ತಯೇ
ಅಂಗಲಿಂಗಸಮಾಯುಕ್ತೋ ಜೀವೋ ಲಿಂಗಂ ಸದಾಶಿವಃ
ಲಿಂಗಸಂಗಸ್ಯ ಮಾತ್ರೇಣ ಮನಃಪ್ರಾಪ್ನೋತಿ ಲಿಂಗತಾಂ
ಲಿಂಗಾರ್ಪಣಮಿದಂ ದೇವಿ ಪ್ರಾಣಲಿಂಗಾರ್ಚನಂ ಸದಾ
ಲಿಂಗಪ್ರಸಾದಂ ಭುಂಜೀಯಾತ್ ಕೇವಲಂ ಜ್ಯೋತಿರೂಪವತ್
ಅಸಂಸ್ಕಾರಿಕೃತಾ ಪೂಜಾ ಪ್ರಸಾದೋ ನಿಷ್ಫಲೋ ಭವೇತ್
ಎಂದುದಾಗಿ,
ಇಂತು ವರ್ಮಸಕೀಲಂಗಳನರಿದು
ತಾತ್ಪರ್ಯವರ್ಮ ಕಳೆಗಳನರಿದು
ಶಿವಲಿಂಗಾರ್ಚನೆಯಂ ಮಾಡಲಾಗಿ
ಆತನೀಗ ಲಿಂಗಭಕ್ತ.
ಇನ್ನು ಮಾಹೇಶ್ವರಾದಿಭೇದಂಗಳಂ ಪೇಳ್ವೆ:
ಕಂಗಳು ಭಕ್ತ, ಎನ್ನ ಕಿವಿಗಳು ಭಕ್ತ
ಎನ್ನ ನಾಸಿಕ ಭಕ್ತ, ಎನ್ನ ಇವು ಮೊದಲಾದ
ಕರಚರಣಾದ್ಯವಯವಂಗಳೆಲ್ಲವನೂ
ಸದ್ಗುರುಸ್ವಾಮಿ ಭಕ್ತನ ಮಾಡಿದನಾಗಿ
ಮನವ ಬಯಲನೈದಿಸಿದನಾಗಿ
ಬಾಹ್ಯಕರದರ್ಪಣೆಯಂ ತ್ಯಜಿಸಿ
ಸುಕ್ಷ್ಮಮನದ ಕರದಿಂದ ಬಂದ
ಪದಾರ್ಥದ ಪೂರ್ವಾಶ್ರಯವ ಕಳದು
ರುಚಿಪದಾರ್ಥದ ನಿರೂಪ ಲಿಂಗಕ್ಕೆ
ಅನಾಹತಕಾಯದ ಕರದಿಂದ ನಿರಂತರ ಅರ್ಪಿಸಿ
ಮನ ಆನಂದವನೈದಲಾಗಿ ಮಾಹೇಶ್ವರ.
ಪ್ರಾಣೀ ತು ಲಿಂಗಸಂಬಂಧೀ ಪ್ರಾಣಲಿಂಗೀ ಪ್ರಕೀರ್ತಿತಃ
ಸದಾಚಾರಮಿದಜ್ಞೇಯಂ ಪ್ರಾಣಲಿಂಗಪ್ರಸಾದತಃ
ಪ್ರಾಣ ಪರಿಣಾಮ ಈ ಗುಣ ಅಳವಟ್ಟುದಾಗಿ ಪ್ರಸಾದಿ [ಪ್ರಾಣಲಿಂಗಿ]ಸ್ಥಲಃ
ಆಚಾರಲಿಂಗಸಂಬಂಧಂ ಪ್ರಾಣಮೇವ ಪ್ರಕೀರ್ತಿತಂ
ಇದಂ ಜ್ಞಾನಂ ತು ಭುಂಜೀಯಾತ್ ಪದಮೇವ ಪದಂ ಶ್ರುಣು
ದ್ವಯಮೇವಮಿದಂ ದೇವಿ ವಿಶೇಷಂ ಭಕ್ತಿಬುದ್ಧಿಮಾನ್
ಶರಣಸ್ಥಲ[ವೈ]ಕ್ಯಮಂ ಪೇಳ್ವೆ :
ಅರಿವರಿತು ಮರಹು ನಷ್ಟವಾದಲ್ಲಿ ?
ಆಚಾರಪ್ರಾಣ ಭಕ್ತ
ಆಚಾರವರಿತು ಅನಾಚಾರವ ನಷ್ಟವಾದಲ್ಲಿ ಮಾಹೇಶ್ವರ,
ಕ್ರಿಯಾಕಾರವರಿತು ನಿಷ್ಕಳ ನೆಲೆಗೊಂಡಲ್ಲಿ ಪ್ರಸಾದಿ,
ಸಕಲಶೂನ್ಯವಾಗಿ ನಿಷ್ಕಳ ನೆಲೆಗೊಂಡಲ್ಲಿ ಪ್ರಾಣಲಿಂಗಿ,
ಸ್ವಾನುಭಾವ ಸಂಬಂಧಿಸಿ ಅವಧಾನ ತಾನೆ ಗುರುವಾದಲ್ಲಿ ಶರಣ,
ಆಚಾರಪ್ರಾಣವಾಗಿ ಬಾಹ್ಯಪೂಜೆಯನರಿದು
ಮನದ ಕರದಲ್ಲಿ ಇಷ್ಟಲಿಂಗಾರ್ಚನೆಯಂ ಮಾಡಬಲ್ಲಡೆ ಐಕ್ಯ.
ಷಡುಸ್ಥಲಾಧಿಕಾರಮಂ ಪೇಳ್ವೆ :
ಲಿಂಗಾರ್ಚನಮಿದಂ ದೇವಿ ನ ಕುರ್ಯಾದ್ವರ್ಣಮೋಹಿತಃ
ಅಸಂಸ್ಕಾರಿಕೃತಾ ಪೂಜಾ ಸಾ ಪೂಜಾ ನಿಷ್ಫಲಾ ಭವೇತ್
ಅಂಗಾಂಗಲಿಂಗಸಂಬಂಧಿಯಾದ ಶರಣರು,
ಅನಾಹತಶೂನ್ಯರಾದವರಲ್ಲದೆ,
ಬದ್ಧದ್ವೇಷಿಗಳು, ಬಧಿರಹೃದಯರು, ಅಜ್ಞಾನವರ್ಧನರು
ಕೇವಲ ತಾತ್ಪರ್ಯವರ್ಮ ಕಳೆಗಳ
ಸುಧಾಸುಚಿತ್ತ ಸದಾಸ್ವಾನುಭಾವ ಸಂಬಂಧಿಗಳ
ಮಹಾನಿಲವನೆತ್ತಬಲ್ಲರಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಭಕ್ತಕಾಯ ಮಮಕಾಯ’ ಎಂಬ ವಾಕ್ಯದಲ್ಲಿ ಕಾಯಲಿಂಗವೆಂದಿರಿದಿಪ್ಪ,
ಗುರು ಲಿಂಗಪ್ರಾಣವ ಮಾಡಿದನಾಗಿ ಲಿಂಗಪ್ರಾಣವೆಂದರಿದಿಪ್ಪ,
ಸರ್ವಕ್ರೀ ಲಿಂಗಕ್ರೀ ಎಂದರಿದಿಪ್ಪನಯ್ಯಾ.
ಎರಡೆಂದು ಭಾವಿಸ, ಒಂದೆಂದು ನಡೆಯ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಭಕ್ತಕಾಯ ಮಮಕಾಯ ಕಂಡಾ ಲಿಂಗವು,
ಲಿಂಗವಂತಂಗೆ ಏಕಿನ್ನು ಬೇರೆ ಚಿಂತೆ ?
ಲಿಂಗವಂತಂಗೆ ಗುರು ಲಿಂಗ ಪ್ರಾಣ ಏಕವಾಗಿ, ಪ್ರಾಣಲಿಂಗವಾಗಿ
ಅಂತರಂಗ ಬಹಿರಂಗಭರಿತನಾಗಿ, ಪ್ರಾಣಲಿಂಗವಾಗಿ
ಅಂಗದ ಮೇಲೆ ಲಿಂಗಸ್ವಾಯತವಾಗಿ ನಿರಂತರ ಇಪ್ಪ ಕಂಡಾ.
ಏಕಿನ್ನು ಬೇರೆ ಅನ್ಯರಾಸೆ !
ಲಿಂಗವಂತರು ಲಿಂಗವನೇ ಚಿಂತಿಸುವುದು
ಲಿಂಗವನೇ ಆಸಗೈವುದು
ಲಿಂಗವನೇ ಕೊಂಬುದು, ಲಿಂಗವಂತರಿಗೆ ಕೊಡುವುದು.
ಲಿಂಗವಂತಂಗೆ ಅನುವಿದು, ಆಯತವಿದು
ಬುದ್ಧಿಯಿದು, ಸಿದ್ಧಿಯಿದು, ಮುಕ್ತಿಯಿದು, ಯುಕ್ತಿಯಿದು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಭಕ್ತನಂಗಾಫಗಲಿ ಜಂಗಮಕ್ಕಾಗಲಿ ಸಹಪಂತಿ ಶಿವಭೋಜನದಲ್ಲಿ
ಮನವೆರನಕಫದಿಂದ ಸಂಪ್ರೀತಿಯಿಂದ ಪಾದೋದಕ ಪ್ರಸಾದವಿಲ್ಲದೆ
ಭೋಜನವ ಮಾಡಲು ವಿಪ್ರಭೋಜನವಾಯಿತ್ತಾಗಿ,
[ಕೆ]ಟ್ಟ ಸೂಕರನ ಬಸುರಲಿ ಬಪ್ಪುದು ತಪ್ಪದು,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಭಕ್ತನು ರುದ್ರಗಣಂಗಳ ಮಠಕ್ಕೆ ಬಂದಡೆ
ಭೃತ್ಯನಾಗಿರಬೇಕು.
ಕರ್ತನಾಗಿ ಕಾಲ ತೊಳೆಯಿಸಿಕೊಂಡಡೆ
ಹಿಂದೆ ಮಾಡಿದ ಭಕ್ತಿ ಹಾನಿಯಪ್ಪುದು.
ಲಕ್ಷಗಾವುದ ಹೋಗಿಯಾದಡೂ
ಭಕ್ತನು ಗಣಂಗಳ ಕಾಂಬುದು ಸದಾಚಾರ.
ಅಲ್ಲೇ ಕೂಡಿ ದಾಸೋಹವ ಮಾಡಿ
ಗುರುಲಿಂಗಜಂಗಮಕ್ಕೆ ಅರ್ಥಪ್ರಾಣಾಭಿಮಾನವ ಕೊಟ್ಟು
ಅಹಂಕಾರವಳಿದಿಹ ಪುರಾತನರು ಮೆಟ್ಟುವ ಪಾದರಕ್ಷೆಗಳ
ಮಸ್ತಕದ ಮೇಲಿರಿಸಿಕೊಂಡು,
ಕೃತಾರ್ಥನಪ್ಪದಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಭಕ್ತರಲ್ಲದವರನಾಸೆಗೈದಡೆ ಕಕ್ಕುಲತೆಯಲ್ಲದೆ ಕಾರ್ಯವಲ್ಲ.
ಆಸೆಗೈದಡೆ, ಆಸೆಗೈವುದು ಭಕ್ತರನು.
ಆಸೆಗೈದು ಬಂದ ಶಿವಂಗೆ
ಸುತನ ಕೊಟ್ಟರು, ಧನವ ಕೊಟ್ಟರು,
ಮನವ ಕೊಟ್ಟರು, ಅಸುವ ಕೊಟ್ಟರು.
ಶರಣನ ಪರಿ ಯಾವ ಲೋಕದೊಳಗೂ ಇಲ್ಲ.
ಶರಣಭರಿತಲಿಂಗವಾಗಿ ಬೇಡಿದ್ದ ಕೊಡುವರಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಭಕ್ತಸ್ಥಲ ಸಾಧ್ಯವಾಯಿತ್ತು ಸಂಗನಬಸವರಾಜದೇವರಿಗೆ.
ಮಾಹೇಶ್ವರಸ್ಥಲ ಸಾಧ್ಯವಾಯಿತ್ತು ಮಡಿವಾಳಮಾಚಿತಂದೆಗಳಿಗೆ.
ಪ್ರಸಾದಿಸ್ಥಲ ಸಾಧ್ಯವಾಯಿತ್ತು ಬಿಬ್ಬಿಬಾಚಯ್ಯಗಳಿಗೆ.
ಪ್ರಾಣಲಿಂಗಿಸ್ಥಲ ಸಾಧ್ಯವಾಯಿತ್ತು ಅನುಮಿಷದೇವರಿಗೆ.
ಶರಣಸ್ಥಲ ಸಾಧ್ಯವಾಯಿತ್ತು ಅಲ್ಲಮಪ್ರಭುದೇವರಿಗೆ.
ಐಕ್ಯಸ್ಥಲ ಸಾಧ್ಯವಾಯಿತ್ತು ಅಜಗಣ್ಣಗಳಿಗೆ.
ಸರ್ವಾಚಾರಸ್ಥಲ ಸಾಧ್ಯವಾಯಿತ್ತು, ಚೆನ್ನಬಸವಯ್ಯಗಳಿಗೆ.
ಎನಗೆ ಷಟಸ್ಥಲಸರ್ವಾಚಾರವೆ ಸಾಧ್ಯವಾಗಿ ಇಂತಿವರ ನೆನೆದು ಶುದ್ಧನಾದೆನು
ಕಾಣಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಭಕ್ತಿ ಭಕ್ತಿಯೆಂಬರು:
ಭಕ್ತಿ ಹಿಂದೊ ಮುಂದೊ ಬಲ್ಲಡೆ ನೀವು ಹೇಳಿರೆ.
ಗುರುಲಿಂಗಜಂಗಮ ಒಂದೆ ಎಂದರಿಯದೆ,
ಮಾಡುವ ಭಕ್ತಿ ಅದೆ ಅನಾಚಾರ.
ಅವರು ಪ್ರಸಾದಕ್ಕೆ ದೂರ. ಅದಲ್ಲ ನಿಲ್ಲು ಮಾಣು.
ಜಂಗಮವಿರಹಿತವಾದ ಭಕ್ತಿ ಇಲ್ಲ.
ಭಕ್ತಂಗಾದಡೂ ಜಂಗಮವೆ ಬೇಕು,
ಜಂಗಮಕ್ಕಾದಡೂ ಜಂಗಮವೆ ಬೇಕು.
ಇದು ಕಾರಣ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ,
ಭಕ್ತಿಸ್ಥಲ ನಿಮ್ಮ ಶರಣರಿಗಲ್ಲದಳವಡದು.

ವಚನ
ಭಕ್ತಿಭಾಂಡದ ಶಿವಭಕ್ತರ ನಿಷೇಧವ ಮಾಡುವ
ಕರ್ಮಭಾಂಡದ ದ್ವಿಜರು ನೀವು ಕೇಳಿಭೋ :
ಸತ್ಯಂ ಭೋ ಬ್ರೂತ ಪಂಚಪ್ರಾಣ ಇಂದ್ರಿಯನಿಗ್ರಹಮೆಂದೋದಿ ಗುದ್ದಿ ಗುದ್ದಿ ಹೋತನ ತಿಂಬುದಾವಾಚಾರವೊ ? ಪಿತಾಮಹಶ್ಚ ವೈಶ್ಯಸ್ತು ಕ್ಷತ್ರಿಯೋ ಪರಯೋ ಹರಿಃ
ಬ್ರಾಹ್ಮಣೋ ಭಗವಾನ್ ರುದ್ರಃ ಸರ್ವೆಷ್ವ್ಯುತ್ತಮೋತ್ತಮಃ
ಎಂಬ ಶ್ರುತಿಯ ನೋಡಿ,
ತಮ್ಮ ಕುಲದೈವವಹ ಬ್ರಾಹ್ಮಣನಹ ರುದ್ರನ ನಿಂದಿಸಿ,
ತಮಗಿಂದ ಕೀಳುಜಾತಿಯಹ ಕ್ಷತ್ರಿಯ ಹರಿಯ ಆರಾಧಿಸುವ
ಕುಲಹೀನರು ನೀವು ಕೇಳಿಭೋ :
ಜನ್ಮನಾ ಜಾಯತೇ ಶೂದ್ರಃ ಕರ್ಮಣಾ ದ್ವಿಜ ಉಚ್ಯತೇ ವೇದಾಭ್ಯಾಸೇನ ವಿಪ್ರಸ್ತು ಬ್ರಹ್ಮಣಾ ಚರಂತೀತಿ ಬ್ರಾಹ್ಮಣಃ
ಎಂಬ ಶ್ರುತಿಯನೋದಿ,
ಪರಬ್ರಹ್ಮನಂತಹ ಶಿವಲಿಂಗಪೂಜೆಯನಾಚರಿಸಿ ಬ್ರಾಹ್ಮಣತ್ವವನೈ[ದದೆ]
ಶತಯಾಗಂಗಳ ಮಾಡಿ ಶೂದ್ರನಹ ಇಂದ್ರತ್ವವ ಬಯಸುವ
ಅಧಮರು ನಿವು ಕೇಳಿಭೋ :
ಜನ್ಮನಾ ಜಾಯತೇ ಶೂದ್ರಃ ಮಾತಾ ಸಾ ಪ್ರಥಮಂ ಶೂದ್ರಾಣಿ ನಚೋಪದೇಶಃ ಗಾಯತ್ರೀ ನ ಚ ಮೌಂಜೀ ನ ಚ ಕ್ರಿಯಾ ಎಂದುದಾಗಿ, ದೀಕ್ಷೆಯಿಲ್ಲದೆ ಸತಿಶೂದ್ರಗಿತ್ತಿಗೆ ಹುಟ್ಟಿದವನೊಡನುಂಬ ಅನಾಚಾರಿಗೆ ಎಲ್ಲಿಯದೊ ಬ್ರಾಹ್ಮಣತ್ವ ? ಆವ ಜಾತಿಯವನಾದರೇನು ಶಿವಭಕ್ತನೆ ಬ್ರಾಹ್ಮಣ. ಅದಕ್ಕೆ ಸಾಕ್ಷಿ : . ತಪಸಾ ಬ್ರಾಹ್ಮಣೋಖಭವತ್ ಸಾಂಖ್ಯಾಯನ ಮಹಾಮುನಿಃ
ತಪಸಾ ಬ್ರಾಹ್ಮಣೋಖಭವತ್ ಗೌತಮಸ್ತು ಮಹಾಮುನಿಃ
ಜಾತಿಂ ನ ಕಾರಯೇತ್ತೇಷು ಶ್ರೇಷ್ಠಾಃ ಸಮಭವಂಸ್ತತಃ
ತಜ್ಜಾತಿರಭವತ್ತೇನ’ ಎಂದುದಾಗಿ,
ತಮ್ಮ ತಮ್ಮ ಗೋತ್ರಂಗಳೆ ಸಾಕ್ಷಿಯಾಗಿ ಸಾರುತ್ತಿರಲು
ಕುಭ್ರಮೆಯಾತಕ್ಕೆ ?
ಶ್ವಪಚೋಖಪಿ ಮುನಿಶ್ರೇಷ್ಠಃ ಶಿವಭಕ್ತಿಸಮನ್ವಿತಃ
ಶಿವಭಕ್ತಿವಿಹೀನಸ್ತು ಶ್ವಪಚೋಖಪಿ ದ್ವಿಜಾಧಮಃ ಎಂದುದಾಗಿ
ಶಿವಭಕ್ತನೆ ಕುಲಜ, ಶಿವಭಕ್ತಿ ಇಲ್ಲದವನೆ ಶ್ವಪಚನೆಂದರಿಯದ
ಅಜ್ಞಾನಿಗಳು ನೀವು ಕೇಳಿಭೋ !
ಏಕ ಏವ ರುದ್ರೋ ನ ದ್ವಿತೀಯಾಯತಸ್ಥೇ’ ಎಂದು ವೇದವನೋದಿಪಶುಪತಯೇ ನಮಃ’ ಎಂದಾ ರುದ್ರವನೋದಿ
ಶಿವನೆ ಪತಿ ಮಿಕ್ಕಿನ ದೈವಂಗಳೆಲ್ಲ ಪಶುಗಳೆಂಬುದ ತಿಳಿದು
ಮತ್ತೆಯೂ ಈ ದ್ವಿಜರು ಕಾಣಲರಿಯರು.
ಹರಹರನೊಂದೆಯೆಂಬ ನರಗುರಿಗಳು ನೀವು ಕೇಳಿಭೋ !
ಪಾರಾಶ[ರ] ಪುರಾಣೇ :
ಆದೌ ರುದ್ರಾಂಗಮುತ್ಪತ್ತಿಃ ಮುಖೇ ಬ್ರಾಹ್ಮಣವೀಶ್ವರಃ
ವಿಷ್ಣುಂ ಕ್ಷತ್ರಿಯಮಿತ್ಯಾಹುರ್ಬಾಹುನಾ ಚ ಅವಸ್ಥಿತಃ
ವೈಶ್ಯಶ್ಚ ಬ್ರಹ್ಮಾ ಇತ್ಯಾಹುಃ ಲಿಂಗಾದೇವ ಅವಸ್ಥಿತಃ
ಸುರಪೋ ಶೂದ್ರಯಿತ್ಯಾಹುಃ ದೇವಪಾದಾದವಿಸ್ಥಿತಃ ಎಂದುದಾಗಿ,
ರುದ್ರನ ಮುಖದಲ್ಲಿ ಹುಟ್ಟಿದವನೆ ಬ್ರಾಹ್ಮಣ,
ಮಿಕ್ಕಾದ ವಿಪ್ರರೆಲ್ಲರು ಋಷಿಗೋತ್ರದಲ್ಲಿ ಹುಟ್ಟಿದರು.
ಆ ಋಷಿಮೂಲದ ವಿಪ್ರರೆಲ್ಲರು ಅಧಮಜಾತಿ
ಅಧಮಜಾತಿಯಾದರೇನು ?
ರುದ್ರಭಕ್ತರಾದ ಕಾರಣ ಬ್ರಾಹ್ಮಣರಾದರು.
ಈ ವರ್ಮವನರಿಯದ ಚಾಂಡಾಲ ವಿಪ್ರರ್ಗೆನೂ ಸಂಬಂಧವಿಲ್ಲ.
ಕಾಕ ರುದ್ರನ ಮುಖದಲ್ಲಿ ಉದ್ಭವವೆಂಬುದಕ್ಕೆ
ಶ್ವಾನಸೂಕರರೂಪೇ ಪ್ರೇತಪಿಂಡ ಪ್ರದಾನತಃ
ಪ್ರೇತತ್ವಂ ಚ ಸದಾ ಸ್ಯಾತ್ ತಥಾ ಧರ್ಮೆಣ ಲುಪ್ಯತೇ
ಎಂದುದಾಗಿ ಆಗಮಾರ್ಥವನರಿಯದೆ,
ಪ್ರೇತಪಿಂಡವನಿಕ್ಕುವ ಪಾತಕರು,
[ಪ್ರಾಣಾಯಸ್ವಾಹಾ]ಅಪಾನಾಯ ಸ್ವಾಹಾ, ವ್ಯಾನಾಯ ಸ್ವಾಹಾ
ಉದಾನಾಯ ಸ್ವಾಹಾ, ಸಮಾನಾಯ ಸ್ವಾಹಾ’ ಎಂದು
ಭೂತಬಲಿಯ ಬೆಕ್ಕು ನಾಯಿಗೆ ಹಾಕಿ
ಮಿಕ್ಕ ಭೂತಶೇಷವ ಕೊಂಬ ಅಕುಲಜರು, ನೀವು ಕೇಳಿಭೋ !
ವಸುರೂಪೋ ಮಧ್ಯಪಿಂಡಃ ಪುತ್ರಪಾತ್ರಪ್ರವರ್ಧನಃ’ ಎಂದು, ರುದ್ರಪ್ರಸಾದವನೆ ಕೊಂಡು ರುದ್ರಪಿಂಡದಿಂದ ಹುಟ್ಟಿ, ದೀಕ್ಷಾಕಾಲದಲ್ಲಿ ಭಸಿತವ ಧರಿಸಿ, ಬ್ರಹ್ಮಕಪಾಲಪಾತ್ರೆಯಂ ಪಿಡಿದು, ಪಲಾಶಕಂಕಾಳದಂಡಮಂ ಪಿಡಿದು, ಭವತೀ ಬಿಕ್ಷಾಂ ದೇಹಿ’ಯೆಂದು ಬಿಕ್ಷಮಂ ಬೇಡಿ
ಪಿತೃಕಾರ್ಯದಲ್ಲಿ ವಿಶ್ವೇ ದೇವಾಂಸ್ತರ್ಪಯಾಮಿ’ಯೆಂದರ್ಚಿಸಿ, ಮರಣಕಾಲದಲ್ಲಿ ರುದ್ರಭೂಮಿಯಲ್ಲಿ ರುದ್ರಾಗ್ನಿಯಿಂದ ದಹನ ರುದ್ರವಾಹನದ ಬಾಲವಿಡಿದು ಸ್ವರ್ಗವನೆಯ್ದಿದರು, ರುದ್ರಭಕ್ತಿವಿರುದ್ಧ ವಿಚಾರಹೀನರು. ತ್ರ್ಯಾಯುಕ್ಷಂ ಜಮದಗ್ನೇಃ ಕಶ್ಯಪಸ್ಯ ತ್ರಿಯಾಯುಷಂ,
ಅಗಸ್ತ್ಯಸ್ಯ ತ್ರಿಯಾಯುಷಂನತನ್ಮೇಡಿಸ್ತುಫತ್ರಿಯಾ ಶತಸಯುಷಂ ಎಂದು
ಸಕಲಋಷಿಗಳು ಶ್ರೀ ವಿಭೂತಿಯನು ಧರಿಸಿ,
ಬಹಳಾಯುಷ್ಯಮಂ ಪಡೆದರೆಂದು
ಮತ್ತೆಯು ಯಜುಸ್ಸಿನಲ್ಲಿ ದೀಕ್ಷೆಯನೈದಲ್ಲಿ,
ಭೂತಿವಾಂಶ್ಚ ಪ್ರಿಯಂ ಹೋತವ್ಯಂ’ಯೆಂದು, ಶ್ರೀವಿಭೂತಿಯನೆ ಧರಿಸಹೇಳಿತ್ತು ವೇದವು. ಗೋಪೀ ಮಲಿನಧಾರೀ ತು ಶಿವಂ ಸ್ಪೃಶತಿ ಯೋ ದ್ವಿಜಃ
ತದೈಕವಿಂಶತಿಕುಲಂ ಸಾಕ್ಷಾತ್ತು ನರಕಂ ವ್ರಜೇತ್ ‘ ಎಂದು,
ಗೋಪಿ ಮಲಿನ ಚಂದನವನಿಟ್ಟು, ಪಾತಕರು[ವ] ಶಿವಲಿಂಗ ಮುಟ್ಟಿದರೆ
ತಮ್ಮಿಪ್ಪತ್ತೊಂದು ಕುಲಸಹಿತ
ಕೇಡಿಲ್ಲದ ನರಕದಲ್ಲಿ ಬೀಳುವರೆಂದರಿಯದೆ
ಮುಟ್ಟಿಯನಿಟ್ಟ ಭ್ರಷ್ಟರು,
ಮತ್ಸ್ಯ ಕೂರ್ಮ ವರಾಹ ನಾರಸಿಂಹ ಈ ನಾಲ್ಕೂ ಅವತಾರದಲ್ಲಿ
ನೀರಿಂದ ಬಲಿ ಧಾರೆಯನೆರೆದನೆಂಬುದನರಿದು,
ವಿಷ್ಣುವಿನ ಪಾದದಲ್ಲಿ ಗಂಗೆ ಹುಟ್ಟಿತೆಂಬ ವಿಚಾರಹೀನರು
ವಿಯದ್ವಿಷ್ಣುಪದಂ ಪ್ರೋಕ್ತಂ ಪುಂಸ್ಯಾಕಾಶವಿಹಾಯಸೀ ವಿಹಾಯಸೋಖಪಿನಾಕೋಖಪಿ ದ್ಯುರಪಿ ಸ್ಯಾತ್ತಿದವ್ಯಯಂ’ ಎಂದು ನಿಘಂಟಿನಲ್ಲಿ ಆಕಾಶದ ಹೆಸರು ವಿಷ್ಣುಪದಿ, ಆಕಾಶಗಂಗೆ ಮುನ್ನಲುಂಟೆಂಬುದನರಿತು, ವಿಷ್ಣುವಿನ ಕಾಲಲ್ಲಿ ಗಂಗೆ ಹುಟ್ಟಿತೆಂಬ ದುಷ್ಟರು, ವೇದಕ್ಕೆ ನೆಲೆಗಟ್ಟು ಓಂಕಾರ, ಬ್ರಾಹ್ಮಣಕ್ಕೆ ನೆಲೆಗಟ್ಟು ಗಾಯತ್ರಿಯಲ್ಲಿ ಶಿವನೆ ದೈವವೆಂದಿತ್ತು. ಓಂ ಭೂಃ ಓಂ ಭುವಃ ಓಂ ಸುವಃ ಓಂ ಮಹಃ ಓಂ ಜನಃ
ಓಂ ತಪಃ ಓಂ ಸತ್ಯಂ ಓಂ ತತ್ಸವಿತುರ್ವರೇಣ್ಯಂ
ಭರ್ಗೊ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್
ಹರ ಹರಿಭಕ್ತನೆಂದನಿಸುವ ವಿಚಾರಹೀನರು ನೀವು ಕೇಳಿಭೋ !
ಹರಿ ಶಿವನ ಭಕ್ತನೆಂಬುವದಕ್ಕೆ ಸಾವಿರಕಮಲ ಕೊರತೆಗೆ
ತನ್ನ ನಯನ ಕಮಲಮಂ ಕಳೆದು ಶಿವನಂಘ್ರಿಗರ್ಪಿಸಿ,
ಚಕ್ರಮಂ ಪಡೆದನೆಂದು ಮಹಿಮದಲ್ಲಿ
ಹರಿಸ್ತೇ ಸಾಹಸ್ರಂ ಕಮಲಬಲಿಯಾಧಾಯ ಪದಯೋಃ’ ಎಂದೋದಿ
ಮರೆದ ಮತಿಭ್ರಷ್ಟರು ನೀವು ಕೇಳಿಭೋ !
ಹರನೆ ಕರ್ತ, ಹರಿಯೆ ಭೃತ್ಯನೆಂಬುದಕ್ಕೆ
ರಾಮಪ್ರತಿಷ್ಠೆ ಶಿವಲಿಂಗ[ದ] ಮೂರ್ತಿಗಳಿಂ ಕಾಣಿರೆ,
ಕಂಡು ತಿಳಿಯಲರಿಯದ ಹುಲಮನುಜರು
ಶ್ರೀರಾಮನ ಗುರು ವಶಿಷ್ಠ
ಹಂಪೆಯಲ್ಲಿ ವಿರೂಪಾಕ್ಷಲಿಂಗನ ಭಕ್ತನೆಂದರಿದು,
ಕೃಷ್ಣಾವಿಷ್ಣುವಿನ ಗುರು ಉಪಮನ್ಯು
ಅಹಿಪುರದಲ್ಲಿ ಸೋಮೇಶ್ವರಲಿಂಗನ ಭೃತ್ಯನೆಂಬುದನರಿದು,
ಇಂತು ಭೃತ್ಯನ ಶಿಷ್ಯಂಗೆ ಕರ್ತನ ಸರಿಯೆಂಬ
ಕರ್ಮಚಂಡಾಲರು ನೀವು ಕೇಳಿಭೋ !
ಅಸಂಖ್ಯಕೋಟಿಬ್ರಹ್ಮಾಣಾಂ ಕೋಟಿವಿಷ್ಣುಗಣಂ ತತಃ ಗಂಗಾವಾಲುಕ ಸಮೌ ಹೇತಾ ಕಿಂಚಿದಜ್ಞಾಃ ನ ಮಹೇಶ್ವರಾತ್ ಎಂದು ರುದ್ರನ ಎವೆಯಾಡುವನಿತಕ್ಕೆ ಲೆಕ್ಕವಿಲ್ಲದ ಕೋಟಿ ಬ್ರಹ್ಮವಿಷ್ಣುರು ಸತ್ತುಹೋದರೆಂದು ಓದಿ ತಿಳಿದು ಇಂಥ ಹುಲುದೈವಂಗಳಮೃತ್ಯುಂಜಯಃ ನಿತ್ಯಃ ಏಕೋ ದೇವಃ ನ ದ್ವಿತೀಯಃ’
ಎಂದೆನಿಸುವ ಶಿವಗೆ ಸರಿಯಂದೆನಿಸುವ ಭವಿವಿಪ್ರರಿಗೆ
ತಾವು ಓದುವ, ವೇದಾಗಮಂಗಳು ತಮಗೆ ಹಗೆಯಾಗಿ
ನಡೆಯೊಂದು ಪರಿ ನುಡಿಯೊಂದು ಪರಿ ಆಗಿಹುದು.
ಅದೆಂತೆಂದರೆ:ಗೌತಮ ದಧೀಚಿ ಭೃಗುವಾದಿಯಾಗಿ ಹಿರಿಯರುಗಳೇ
ಶಾಪದಿಂದ ಶಾಪಹತರಾಗಿ ಶಿವದ್ರೋಹಿಗಳಾಗಿ
ನರಕಕ್ಕಿಳಿವ ಚಾಂಡಾಲರಿಂದ ವಿಪ್ರರ ಸತ್ಪಾತ್ರರೆಂದಾರಾಧಿಸುವರ
ನರಕದ ಕುಳಿಯೊಳು ಮೆಟ್ಟಿ
ನರಕಾಗ್ನಿಯಿಂದ ಸುಡುತಿರ್ಪ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಭವಿತನಕ್ಕೆ ಹೇಸಿ ಭಕ್ತನಾಗಬೇಕೆಂಬಾತನು ಸದ್ಗುರುವನರಸಿಕೊಂಡು ಬಂದು,
ಅವನ ಕಾರುಣ್ಯದಿಂದ ಮುಕ್ತಿಯಂ ಪಡೆದೆವೆಂದು
ಆ ಶ್ರೀಸದ್ಗುರುವಿಗೆ ದಂಡಪ್ರಣಾಮವಂ ಮಾಡಿ
ಭಯಭಕ್ತಿಯಿಂದ ಕರಂಗಳಂ ಮುಗಿದು ನಿಂದಿರ್ದು,
ಎಲೆ ದೇವಾ, ಎನ್ನ ಭವಿತನವನಂ ಹಿಂಗಿಸಿ
ನಿಮ್ಮ ಕಾರುಣ್ಯದಿಂದ ಎನ್ನ ಭಕ್ತನಂ ಮಾಡುವುದೆಂದು
ಶ್ರೀಗುರುವಿಂಗೆ ಬಿನ್ನಹಂ ಮಾಡಲು,
ಆ ಶ್ರೀಗುರುವು ಅಂತಪ್ಪ ಭಯಭಕ್ತಿ ಕಿಂಕರತೆಯೊಳಿಪ್ಪ ಶಿಷ್ಯನಂ ಕಂಡು,
ತಮ್ಮ ಕೃಪಾವಲೋಕನದಿಂ ನೋಡಿ,
ಆ ಭವಿಯ ಪೂರ್ವಾಶ್ರಯಮಂ ಕಳೆದು, ಪುನರ್ಜಾತನಂ ಮಾಡಿ
ಆತನ ಅಂಗದ ಮೇಲೆ ಲಿಂಗಪ್ರತಿಷ್ಠೆಯ ಮಾಡುವ
ಕ್ರಮವೆಂತೆಂದಡೆ:
`ಜ್ವಲತ್ಕಾಲಾನಲಾಭಾಸಾ ತಟಿತ್ಕೋಟಿಸಮಪ್ರಭಾ
ತಸ್ಯೋರ್ಧ್ಯೆ ತು ಶಿಖಾ ಸೂಕ್ಷ್ಮಾ ಚಿದ್ರೂಪಾ ಪರಮಾ ಕಲಾ
ಯಾ ಕಲಾ ಪರಮಾ ಸೂಕ್ಷ್ಮಾ ತತ್ತ್ವಾನಾಂ ಬೋಧಿನೀ ಪರಾ
ತಾಮಾಕಷ್ರ್ಯ ಯಥಾನ್ಯಾಯಂ ಲಿಂಗೇ ಸಮುಪವೇಶಯೇತ್
ಪ್ರಾಣಪ್ರತಿಷ್ಠಾಮಂತ್ರಂ ಚ ಮೂಲಮತ್ರಂ ಪೆಠದಪಿ
ಅಥಾಸ್ಮಿನ್ ಸಂಸ್ಕೃತೇ ಲಿಂಗೇ ಸುಸ್ಥಿರೋ ಭವ ಸರ್ವದಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಮಜ್ಜನಕ್ಕೆರೆವ ಶರಣರ ಮಹಿಮೆಯನೇನೆಂಬೆನು !
ಆವ ಪದಾರ್ಥವೇನಾದಡೆ ಲಿಂಗಕ್ಕೆ ಬಂದಲ್ಲದೊಲ್ಲನು,
ಲಿಂಗಾನುಗ್ರಹದಿ ಅನಿಮಿಷನಾಗಿಪ್ಪ ಮಹಿಮನು,
ನಾಲ್ಕು ವೇದ ಹದಿನಾರು ಶಾಸ್ತ್ರಕ್ಕೆ ಅಗಮ್ಯ ಅಗೋಚರನು,
ಶರಣನು ಸಾರಾಯಸಂಪನ್ನನು,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಮಣ್ಣ ಬೆಲ್ಲವ ಮಾಡಿ, ಮಗುವಿನ ಕೈಯಲ್ಲಿ ಕೊಟ್ಟು,
ಊರ ತಿರುಗುವ ತುಡುಗುಣಿಯಂತೆ.
ಪ್ರಾಣಲಿಂಗವನರುಹುವ ಜ್ಞಾನಗುರುವಿನ
ಕೈಯ ದೀಕ್ಷೆಯ ಪಡೆಯಲರಿಯದೆ,
ಇಷ್ಟಲಿಂಗವನೊಬ್ಬ ಭ್ರಷ್ಟನ ಕೈಯಲೀಸಿಕೊಂಡು,
ಅಲ್ಲಿ ಭಜಿಸಿ ಭ್ರಾಂತುಗೊಂಬ ಮಿಟ್ಟಿಯ ಭಂಡರನೇನೆಂಬೆ ಹೇಳಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಮದ್ಗುರುವೆ ಸದ್ಗುರುವೆ ತ್ರಿಜಗದ್ಗುರುವೆ
ಶಿವಂಗೆ ಮಾತೆಯಾದ ಮನೋರಥವೀವ ಮಹದ್ಗುರುವೆ
ಶಿವ ಇವ ಉಪಮಾತೀತನೆ
ಮನ್ನಾಥಃ ಶ್ರೀಜಗನ್ನಾಥೋ ಮದ್ಗುರುಃ ಶ್ರೀಜಗದ್ಗುರುಃ
ಮಮಾತ್ಮಾ ಸರ್ವಭೂತಾತ್ಮಾ ತಸ್ಮೈ ಶ್ರೀಗುರವೇ ನಮಃ
ಎಂದುದಾಗಿ,
ಶ್ರೀಗುರುವೆ, ನಿನ್ನ ನಿರೀಕ್ಷಣೆ ಮಾತ್ರದಲ್ಲಿ ಸಕಲಯೋನಿಜರು ಪಶುಪಾಶಹರರು,
ಪಶುರ್ನಾಥಃ ಶಿವಸ್ತಸ್ಮಾತ್ ಪಶೂನಾಂ ಪತಿರಿತ್ಯಭೂತ್
ಎಂದುದಾಗಿ ಪಶುಪಾಶವಿನಿರ್ಮುಕ್ತೈ ಗುರೋರಾಜ್ಞಾಂ ನಿರೀಕ್ಷಯೇತ್
ಸಂಸ್ಕಾರಿಗಳಿಗಲ್ಲದೆ ಅಪ್ಪುದೆ ನಿನ್ನ ನಿರೀಕ್ಷಣೆ?
ಹೋಹುದೆ ಅವನ ಭವಪಾಶವು ?
“ಅಣುರೇಣುತೃಣಕಾಷ್ಠ ಶಿಲಾಗುಲ್ಮಲತಾವಳಿ
ಭೂತೋಯಾನಲಮರುದಾಕಾಶಸ್ಥಃ
“ಏಕ ಏವ ನ ದ್ವಿತೀಯಾವಸ್ಥೇ
ಎಂದುದಾಗಿ,
ಇದು ಕಾರಣ, ಪರಿಪೂರ್ಣ ಶಿವನು.
ಅದು ಹೇಗೆಂದಡೆ :
ಘಟದೊಳಗೆ ಇದ್ದ ಜಲಕ್ಕೆ ಉಷ್ಣವಿಸಿ ಆ ಜಲವು ತದ್ರೂಪಹಂಗೆ
ಸದ್ಗುರುಸ್ವಾಮಿ ಅಂಗಲಿಂಗವ ಸಂಬಂಧಮಾಡಿದ ಬಳಿಕ
ಪ್ರಾಣಲಿಂಗಸಂಬಂಧವಾದ ಭೇದ :
ಸ್ವಾನುಭಾವೇ ತು ಸಂಬಂಧಿ ಕ್ರಿಯಾಲಿಂಗಸ್ಯ ಪೂಜನಂ
ನಿಷ್ಕ್ರಿಯಂ ಪ್ರಾಣಲಿಂಗಂ ತು ಕ್ರಿಯಾಲಿಂಗಸ್ಯ ಪೂಜನಂ
ಬಾಹ್ಯಲಿಂಗಾರ್ಚನಂ ಯತ್ ಸ್ಯಾತ್ ತತ್ ಕ್ರಿಯಾಲಿಂಗಪೂಜನಂ
ಎಂದುದಾಗಿ,
ಕ್ರಿಯಾಕಾರದಿಂ ಗುರು ತೋರಿದ ಲಿಂಗದಿಂದ
ಸ್ವಾನುಭಾವಲಿಂಗವ ಕಂಡರಿತು ಬದುಕಿದೆನಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಮನ ಮುಟ್ಟದು, ಬುದ್ಧಿ ಒಂದಾಗದು, ಚಿತ್ತವಿಡಿಯದು,
ಅಹಂಕಾರವನುಭವಿಸದು, ಸ್ನೇಹ ಪರಿಣಾಮಿಸದು,
ಭಕುತಿ ಎಂತೊ, ಮಾಟವೆಂತೊ, ಕೂಟವೆಂತೊ ?
ನಿಮ್ಮ ಭಕ್ತಿ ಬಯಲನಪ್ಪುವಂತೆ,
ಸಮುದ್ರವನೀಸಾಡುವಂತೆ ಪೂರೈಸದು.
ಭಕ್ತ್ಯಂಗನೆಯ ರತಿಸುಖವಿಲ್ಲ,
ಮೇಲೆ ಫಲಭೋಗವೆಂತೂ ಇಲ್ಲ.
ಅಂತಃಕರಣವೇಕೀಭವಿಸಿ,
ಸಮರಸದಲ್ಲಿ ನಿಂದ ಸ್ನೇಹದ ಮಾಟವೆ ಶಿವನ ಕೂಟ.
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನಲ್ಲಿ ಇದೆ ಭಕ್ತಿರತಿ.

ವಚನ
ಮನದಲ್ಲಿ ಮಹವನರಿದು ಮನ ನಿರ್ದೆಶವಾಗಿ
ದೇಶಾಂತರಿಯಾಗದೆ, ಮನ ವಿಕಳವಾಗಿ ಹೊರಹೊಂಟುದು
ವೇಷಾಂತರವಯ್ಯಾ.
ಕಂಡವರ ಕಾಡಿ, ನಿಂದವರ ಬೇಡಿ,
[ಜಾತಿ ಎನ್ನದೆ] ಅಜಾತಿ ಎನ್ನದೆ,
ಆಚಾರವೆನ್ನದೆ, ಅನಾಚಾರವೆನ್ನದೆ, ತಿರಿದುಂಡು
ವೇಷಡಂಭಕತ್ವದಿಂ ಲಾಂಛನವ ಹೊತ್ತು ಕಂಡಲ್ಲಿ ಲಜ್ಜೆಗೆಡುವುದು
ತನ್ನ ಮುನ್ನಿನ ದುಷ್ಕೃತ ಪೂರ್ವಕರ್ಮದ ಫಲವಯ್ಯ.
ಮತ್ತೆಂತೆಂದಡೆ :
ಮನ ನಿರ್ವಾಣವಾಗಿ ವಿವೇಕಜ್ಞಾನಪರಮಾರ್ಥದಲ್ಲಿ ಪರಿಣಾಮಿಯಾಗಿ
ಸುಳಿದು ಸೂತಕಿಯಲ್ಲದೆ, ನಿಂದು ಬದ್ಧನಲ್ಲದೆ,
ಸುಜ್ಞಾನದಲ್ಲಿ ಸುಳಿದು, ನಿರ್ಮಲದಲ್ಲಿ ನಿಂದವರು
ಅವರು ಪರದೇಶಾಂತರಿಗಳು, ಅವರು ನಿಜನಿವಾಸಿಗಳು,
ಅವರುಗಳಿಗೆ ನಮೋ ಎಂಬೆ,
ಉರಿಲಿಂಗಿಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಮನವೇ, ನಿನ್ನ ನೆನಹು ಸಿದ್ಧಿಯಾದುದಲ್ಲಾ,
ಪರಶಿವನೇ ಶ್ರೀಗುರುರೂಪಾಗಿ ನಿನ್ನ ಮನಕ್ಕೆ ಬಂದನು.
ಬುದ್ಧಿಯೇ ನಿನ್ನ ಬುದ್ಧಿ ಸುಬುದ್ಧಿಯಾದುದಲ್ಲಾ,
ಶ್ರೀಗುರುವೇ ಶಿವ[ಲಿಂಗ]ರೂಪಾಗಿ ನಿನ್ನ ಬುದ್ಧಿಗೆ ಬಂದನು.
ಚಿತ್ತವೇ ನೀ ನಿನ್ನ ಚಿತ್ತ ನಿಶ್ಚಿಂತವಾದುದಲ್ಲಾ,
ಶಿವಲಿಂಗವೇ ಜಂಗಮರೂಪಾಗಿ ನಿನ್ನ ಚಿತ್ತಕ್ಕೆ ಬಂದನು.
ಅಹಂಕಾರವೇ, ನಿನ್ನಹಂಕಾರ ನಿಜವಾದುದಲ್ಲಾ,
ಶ್ರೀ ಗುರು ಲಿಂಗ ಜಂಗಮ ತ್ರಿವಿಧವು ಏಕೀಭವಿಸಿ
ನಿನಗೆ ಪ್ರಸನ್ನಪ್ರಸಾದವ ಕರುಣಿಸಿದನು.
ಆ ಪ್ರಸಾದಲಿಂಗಸ್ವಾಯತವಾಗಿ
ನಿಮಗೆ ನಾಲ್ವರಿಗೂ ಪರಿಣಾಮವಾಯಿತ್ತು ಕಾಣಾ.
ಪ್ರಾಣವು ನಿನಗೆ ಲಿಂಗಪ್ರಾಣವಾದುದಲ್ಲಾ,
ನಮ್ಮೆಲ್ಲರನೂ ಗರ್ಭಿಕರಿಸಿಕೊಂಡಿಪ್ಪ ಅಂಗವೇ ಲಿಂಗವಾದುದಲ್ಲಾ.
ಪ್ರಾಣವೇ ನಿನ್ನ ಸಂಗದಿಂದ ನಿನ್ನನಾಶ್ರಯಿಸಿಕೊಂಡಿಪ್ಪ
ಸರ್ವತತ್ತ್ವಂಗಳೂ ಸರ್ವಪಂಚಾಧಿಕಾರಿಗಳೂ
ಸರ್ವಯೋಗಿಗಳೆಲ್ಲ ಶಿವಪದಂಗಳ ಪಡೆದರಲ್ಲಾ.
ಅಹಂಗೆ ಅಹುದು ಕಾಣಾ, ಪ್ರಾಣವೇ ಇದು ದಿಟ,
ನೀನೇ ಮಗುಳೆ ಮಹಾಬಂಧುವಾಗಿ
ನಿನಗೊಂದು ಏಕಾಂತವ ಹೇಳುವೆನು ಕೇಳು.
ನಾನು ನೀನು ಅನೇಕ ಕಲ್ಪಂಗಳಲ್ಲಿಯೂ
ಅನೇಕ ಯೋನಿಗಳಲ್ಲಿಯೂ ಜನಿಸಿ
ಸ್ಥಿತಿ ಲಯಂಗಳನೂ ಅನುಭವಿಸಿ, ಪಾಪಪುಣ್ಯಂಗಳನುಂಡುದ ಬಲ್ಲೆ.
ಅವೆಲ್ಲವನೂ ಕಳೆದುಳಿದು,
ಶ್ರೀಗುರುವಿನ ಕರುಣ ಮೇರೆವರಿದು ಮಹಾಪದವಾಯಿತ್ತು.
ಶ್ರೀಗುರುವಿನ ಹಸ್ತದಲ್ಲಿ ಜನನವಾಯಿತ್ತು.
ಶ್ರೀಗುರುವಿನ ಕರುಣವಾಯಿತ್ತು.
ಶಿವಲಿಂಗ ಸ್ವಾಯತವಾಯಿತ್ತು.
ಜಂಗಮವೆಂದರಿದು ಜ್ಞಾನವಾಯಿತ್ತು.
ಶ್ರೀಗುರು ಲಿಂಗ ಜಂಗಮದಿಂದ ಪ್ರಸಾದವ ಪಡೆದು
ಪ್ರಸಾದವನು ಗ್ರಹಿಸಿ ಶಿವಮಹಾಮುಕ್ತಿಪದವಾಯಿತ್ತು.
ಇನ್ನೊಂದ ನಾ ನಿಮ್ಮ ಬೇಡಿಕೊಂಬೆನು :
ಮಾಯಾಂಗನೆ ಆಸೆ ಮಾಡಿಕೊಂಡು ಬಂದಹಳು,
ಅವರಿಬ್ಬರೂ ಹೋಗಲೀಸದಿರಿ,
ನಿಮಗೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನಾಣೆ
ಎನಗೆಯೂ ಅದೇ ಆಣೆ.

ವಚನ
ಮನೋವಾಕ್ಕಾಯಮೇಕಸ್ಯ ಗುರುಶ್ಚರಃ ಶಿವಸ್ತಥಾ’
ಶ್ರೀಗುರುಪೂಜೆಯ ಬೊಟ್ಟಿನಷ್ಟು ವಿಭೂತಿಯನಿಟ್ಟಡೆ
ಬೆಟ್ಟದಷ್ಟು ಪಾಪ ಹರಿವುದು.
ನೆಟ್ಟನೆಯರಿದು ಸರ್ವಾಂಗದಲ್ಲಿ ಭಸ್ಮವ ಧರಿಸಿದ ಶರಣಂಗೆ
ಮುಂದೆ ಹುಟ್ಟಲು ಹೊಂದಲು ಇಲ್ಲ ನೋಡಾ.
ಅಷ್ಟಾಷಷ್ಠಿತೀರ್ಥವಂ ಮಿಂದ ಫಲ
ಒಂದು ದಿನದ ಭಸ್ಮಸ್ನಾನಕ್ಕೆ ಸರಿಬಾರದು.
ಮುನ್ನ ಆದಿಯ ಋಷಿಜನಂಗಳು
ಭಸ್ಮಸ್ನಾನದಿಂದ ಕೃತಕೃತ್ಯರಾದರು.
ಇದು ಕಾರಣ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನಲ್ಲಿ
ಭಸ್ಮಸ್ನಾನದಿಂದ ಕೃತಕೃತ್ಯರಾದರು ನೋಡಾ.

ವಚನ
ಮಹಾಜ್ಯೋತಿಯು ಸೋಂಕಿದ ಉತ್ತಮಾಧಮತೃಣ ಮೊದಲಾದವೆಲ್ಲವೂ
ಮಹಾಜ್ಯೋತಿಯಪ್ಪವು ತಪ್ಪದು, ನೋಡಿರೇ ದೃಷ್ಟವ,
ಮತ್ತಂತಿಂತೆಂದುಪಮಿಸಲುಂಟೇ ?
ಪರಂಜ್ಯೋತಿ ಸದ್ಗುರುಲಿಂಗವು ಸೋಂಕಿದ ಸದ್ಭಕ್ತನ
ಅಂತರಂಗಬಹಿರಂಗಸರ್ವಾಂಗ ಪರಂಜ್ಯೋತಿರ್ಲಿಂಗವು,
ಮತ್ತೆ, ದೇಹವೆಂದು ಪ್ರಾಣವೆಂದು
ಆಧಾರಸ್ವಾಧಿಷ್ಠಾನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞೆ ಬ್ರಹ್ಮರಂಧ್ರವೆಂದು
ವರ್ಣ ದಳ ಛಾಯೆ ಅಧಿದೇವತೆಯೆಂದು ವಿವರಿಸಿ ನುಡಿಯಲುಂಟೆ ?
ಪಂಚಭಾತಿಕದ ತನುವಿನಂತೆ ಪಂಚವಿಂಶತಿ ತತ್ತ್ವವನು
ಸಂಬಂಧಿಸಿ ನುಡಿಯಲುಂಟೇ, ಕೇವಲ ಜ್ಯೋತಿರ್ಮಯಲಿಂಗತನುವಿಂಗೆ ?
ಸದ್ಭಕ್ತನ ಅಂಗ ಲಿಂಗ, ಮನ ಲಿಂಗ, ಪ್ರಾಣ ಲಿಂಗ, ಭಾವ ಲಿಂಗ,
ಪಂಚವಿಶಂತಿ ತತ್ತ್ವಂಗಳೆಲ್ಲವೂ ಲಿಂಗತತ್ವ.
ಇದು ಕಾರಣ, ಲಿಂಗವಂತನ ತನು
ಸರ್ವಾಂಗಲಿಂಗವೆಂಬುದಯ್ಯ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಮಹಾರಾಜನನೆಲ್ಲರೂ ಬಲ್ಲರು
ಆ ರಾಜನು ಆರನೂ ಅರಿಯನು.
ಅರಿಯನಾಗಿ. ಪದವಿಲ್ಲ ಫಲವಿಲ್ಲ ಭೋಗವಿಲ್ಲ ಪರಿಣಾಮವಿಲ್ಲ.
ಮಹಾರಾಜಾಧಿರಾಜ ಶಿವನನೆಲ್ಲರೂ ಬಲ್ಲರು.
ಆ ಶಿವನು ಅರಿಯನು,
ಅರಿಯನಾಗಿ ಪದವಿಲ್ಲ ಭೋಗವಿಲ್ಲ ಪರಿಣಾಮವಿಲ್ಲ.
ಇದು ಕಾರಣ,
ಶಿವನನರಿದ ಸದ್ಭಕ್ತರ ಸಂಗದಿಂದ
ಆ ಮಹಾಶಿವನು ತನ್ನನು ಅರಿವಂತೆ ಮಾಡಿಕೊಂಡನಾಗಿ
ಪದ ಫಲ ಭೋಗ ಪರಿಣಾಮ ಮತ್ತೆ ಉಂಟೇ ?
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಮಹಾಸ್ಥಾನದಲ್ಲಿ ಗುರುಸ್ವರೂಪನಾಗಿರುತಿರ್ದೆ,
ಭ್ರೂಮಧ್ಯಸ್ಥಾನದಲ್ಲಿ ಲಿಂಗಸ್ವರೂಪನಾಗಿರುತಿರ್ದೆ,
ಹೃದಯಕಮಲದಲ್ಲಿ ಜಂಗಮಸ್ವರೂಪನಾಗಿರುತಿರ್ದೆ,
ಈ ಪರಿಯೆಲ್ಲಿ ಅಂತರಂಗ ಬಹಿರಂಗ ಭರಿತನಾಗಿರ್ದೆಯಯ್ಯಾ.
ಇನ್ನು ಬಹಿರಂಗದಲ್ಲಿ ಶ್ರೀಗುರುಲಿಂಗವಾಗಿ ದೀಕ್ಷಿಸಿ ರಕ್ಷಿಸಿದೆ.
ಶಿವಲಿಂಗವಾಗಿ ಕರಸ್ಥಲದಲ್ಲಿ ಪೂಜೆಗೊಂಡು ರಕ್ಷಿಸಿದೆ,
ಜಂಗಮಲಿಂಗವಾಗಿ ಎನ್ನವಗುಣಗಳನೆಲ್ಲವ ಕಳೆದು ರಕ್ಷಿಸಿದೆ.
ಇಂತು ತ್ರಿವಿಧಲಿಂಗವು ಒಂದೆಯಾಗಿ ಅಂತರಂಗ ಬಹಿರಂಗ ಭರಿತ
ಮಹಾಪ್ರಸಾದವ ಕರುಣಿಸಿ ಮುಕ್ತನ ಮಾಡಿದೆಯಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಮಾತಂಗ ಪಾರಮೇಶ್ವರೇ :
ಪ್ರೇರಣ ಪ್ರೇರಕಃ ಶ್ರೀಮಾನ್ ದ್ವಯರೂಪಿ ಸುಮಂತ್ರರಾಟ್
ಅನುಗ್ರಹಂ ವಿನಾ ಸತ್ಯ ಅನುಗ್ರಾಹತಾ ಕುತಃ
ಕಾರುಣ್ಯತ್ವೇನ ಯೋ ಯಸ್ಮಾದಾತ್ಮಯೋಗಸ್ಸುದುರ್ಲಭಃ
ಎಂದುದಾಗಿ_
ಶಿವಲಿಂಗಧಾರಣೆ ಮಾಡಬೇಕೆಂದು[ದು] ಶ್ರುತಿ.
ಶಿವಶಿವಾ ! ಶಿವಲಿಂಗವನೆ ಧರಿಸಬೇಕೆಂದುದಥರ್ವಣ
“ತದಂತ ಗ್ರಹಣಾಚ್
ಎಂಬ ಶ್ರುತಿ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಮಾತಾಪಿತಸಂಯೋಗಸಂಭೂತನಲ್ಲದವನು
ಶ್ವೇತ ಪೀತ ಹರಿತ ಕಪೋತ ಮಾಂಜಿಷ್ಠ ಗೌರ
ಇಂತು ಷಡುವರ್ಣರಹಿತನಯ್ಯಾ.
ಆದಿ ಮಧ್ಯ ಅವಸಾನವೆಂಬುದಿಲ್ಲದವನ
ವೇದವೆಂತುಂಟೆಂದು ನಿರೂಪಿಸಲುಬಾರದು ಅಯ್ಯಾ.
ಇವರೆಲ್ಲರೊಳಹೊರಗೆ ತಾನಿಲ್ಲದಿಲ್ಲದವನ
ನಾ ಬಲ್ಲೆನೆಂಬ ಹಿರಿಯರ ಟಿಪ್ಪಣ ಮಿಕ್ಕುವು,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನು ಭಕ್ತಿಗಮ್ಯನು.

ವಚನ
ಮೂರು ಮಲ ಮೊದಲಾದ ಸಂಸಾರ ಸಂಗವ ಬಿಟ್ಟು,
ಮೂರು ಬಾಳಿನ ಭೇದವ ತಿಳಿದು,
[ಅಂಗ ಲಿಂ]ಗ ಸಂಬಂಧವನರಿದು,
ಅಂಗ ಲಿಂಗ ಪ್ರಮಾಣವ ಕಂಡು,
ಅಂಗಕ್ಕೊಂದು ಕಾಶಾಂಬರದ ಕಾಪು,
ಕಪ್ಪಡ ಕಂಬಳಿಯ ಕಟ್ಟಿಹೊದ್ದು,
ನಲಿಂಗಕ್ಕೊಂದುಫ ಶಿವದಾರ ಸೆಜ್ಜೆ ಸಿಂಹಾಸನವನಿಕ್ಕಿ,
ಮೇಲು ವಸ್ತ್ರವ ಕಟ್ಟಿ,
ಶ್ರೀ ರುದ್ರಾಕ್ಷಿ ಭಸ್ಮಾಧಾರವನಳವಡಿಸಿಕೊಂಡು,
ಶಿವಮಂತ್ರ ಸಂಬಂಧಿ[ಯಾ]ಗಿ,
ತ್ರಿಕಾಲಲಿಂಗಾರ್ಚನೆಯಂ ಮಾಡಿ,
ಲಿಂಗಭಕ್ತರ ಮನೆಗೆ ಹೋಗಿ,
`ಲಿಂಗಾರ್ಪಿತ ಬಿಕ್ಷಾ’ಯೆಂದು ಬೇಡಿ,
ಲಿಂಗಾಣತಿಯಿಂದ ಬಂದ [ಪದಾರ್ಥವ]
ಕರಪಾತ್ರೆಯ ನಿರುತತ್ವದಿಂ ಕೈಕೊಂಡು ಭೋಗಿಸುವಲ್ಲಿ,
ಲಿಂಗದ ವಸ್ತ್ರವ ಬಿಟ್ಟು ಕಟ್ಟಿ,
ಲಿಂಗನಿರೀಕ್ಷಣೆಯಿಂದ ಲಿಂಗಾರ್ಪಣ ಪ್ರಸಾದಭೋಗ.
ಲಿಂಗದ ಆತ್ಯಾಶ್ರಮವನಾಶ್ರೈಸಿ,
ಲಿಂಗಧ್ಯಾನದಲ್ಲಿ ಲಿಂಗಪರಿಣಾಮಿಯಾಗಿ,
ಸದಾಕಾಲ ಸನ್ನಹಿತನಾಗಿಪ್ಪ ವಿರಕ್ತನಾದ
ಪರಜ್ಞಾನಿಯೆಂದಡೆ ಜನ್ಮಪವಿತ್ರ.
ಭಿಕ್ಷವ ನೀಡದಡೆ ಮಹಾಪುಣ್ಯ,
ಆತನ ದಿವ್ಯೋಪದೇಶವ ಕೇಳಿ ನಡೆದವರಿಗೆ ಜೀವನ್ಮುಕ್ತಿ,
ಆ ಮಹಾ[ಮಹಿಮ] ಮಾಡಿದುದು ಬ್ರಹ್ಮಾರ್ಪಣ.
ಇದು ಸತ್ಯ,
ಶಿವ ಬಲ್ಲ ಶಿವನಾಣೆ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಮೃಗಾದಿಗಳಂತೆ [ಆಚರಿಸಿದಡೇನುರಿ] ದಾನಾದಿಗಳ ಕೊಟ್ಟಡೇನು ?
ಕ್ಷತ್ರಿಯರಂತೆ.
ಅದೆಂತೆಂದಡೆ, ಶಿವನ ವಾಕ್ಯ:
ಪಯೋಹಾರೀ ತು ಮಾರ್ಜಾಲೋ ನಗ್ನೋ ಮುಗ್ಧಃ ಪಿಶಾಚವತ್
ನಿತ್ಯಸ್ನಾನಶ್ಚ ಕಾಕಶ್ಚ ವಾಲ್ಮೀಕಾಃ ಸರ್ಪಜಾತಯಃ
ತೃಣಂ ಭಕ್ಷಂತಿ ಪಶವಃ ವನವಾಸಿಮೃಗಾಸ್ತಥಾ
[ಮಾ]ಸ್ತು ಚೈತಾನಿ ಕಾರ್ಯಾಣಿ ನ ಕರೋತಿ ಹಿ ಪಾರ್ವತಿ
ಎಂದುದಾಗಿ,
ಆವ ಸಿದ್ಧಿಗಳಿಂದಲೂ ಫಲವಿಲ್ಲ,
ಏನನೋದಿ ಏನ ಕೇಳಿ ಏನ ಹೇಳಿಯೂ ಫಲವಿಲ್ಲ,
ಇವು ಭಕ್ತಿಯೊಳಗಲ್ಲ, ಮುಕ್ತಿಗೆ ಸಲ್ಲವು.
ಇದನರಿದು ಆವನಾನೊಬ್ಬನು ಲಿಂಗವರಿತು ಲಿಂಗಾರ್ಚನೆಯಂ ಮಾಡಿ,
ಗುರುಲಿಂಗಜಂಗಮಕ್ಕೆ ತನುಮನಧನವ ಸವೆಸಿದಡೆ
ಅದೇ ಚಲ್ವ ಭಕ್ತಿ, ಅದೇ ಚಲ್ವ ಮುಕ್ತಿ, ಅದೇ ಸರ್ವಸಿದ್ಧಿ.
ಅದೇ ಸರ್ವಕಾರಣವಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ’
ಎಂದೆನಿಸುವ ಲಿಂಗವು,
ಅತ್ಯತಿಷ್ಠದ್ಧಶಾಂಗುಲಂ’ ಎಂದೆನಿಸುವ ಲಿಂಗವು, ಚಕಿತಮಭಿದತ್ತೇ ಎಂದೆನಿಸುವ ಲಿಂಗವು,
ಅಣೋರಣೀಯಾನ್ ಮಹತೋ ಮಹೀಯಾನ್’ ಎಂದೆನಿಸುವ ಲಿಂಗವು, ಅಯಂ ಮೇ ಹಸ್ತೋ ಭಗವಾನ್ ಅಯಂ ಮೇ ಭಗವತ್ತರಃ
ಎಂದೆನಿಸುವ ಲಿಂಗವು,
ಏಕಮೂರ್ತಿಸ್ತ್ರಿಧಾ ಭೇದಾಃ’ ಎಂದೆನಿಸಿ ಶ್ರೀಗುರುಲಿಂಗಜಂಗಮರೂಪಾಗಿ, ಇಷ್ಟಂ ಪ್ರಾಣಿಸ್ತಥಾ ಭಾವಸ್ತ್ರಿಧಾ ಚೈಕಂ ವರಾನನೇ’ ಎಂದುದಾಗಿ
ತ್ರಿವಿಧ ಏಕೀಭವಿಸಿ ಲಿಂಗರೂಪಾಗಿ,
ಎನ್ನ ಕರಸ್ಥಲಕ್ಕೆ ಬಂದು ಕರತಳಾಮಳಕದಂತೆ ತೋರುವೆ.
ಆಹಾ ಎನ್ನ ಸತ್ಯವೆ, ಆಹಾ ಎನ್ನ ನಿತ್ಯವೆ,
ಆಹಾ ಎನ್ನ ಪುಣ್ಯವೇ, ಆಹಾ ಎನ್ನ ಭಾಗ್ಯವೇ,
ಶಿವ ಶಿವ ಮಹಾದೇವ ! ನೀನೇ ಬಲ್ಲೆ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಯಥಾ ಬೀಜಂ ತಥಾಖಂಕುರಂ’ ಎಂಬ ವಾಕ್ಯ ತಪ್ಪದು
ಕಲ್ಪವೃಕ್ಷದ ಬೀಜದಿಂದಾದ ಸಸಿ, ಕಲ್ಪವೃಕ್ಷವಪ್ಪುದು ತಪ್ಪದು,
ದಿಟದಿಟ ತಪ್ಪದು ನೋಡಾ.
ಕಾಮಧೇನುವಿನ ಶಿಶು ಕಾಮಧೇನುವಪ್ಪುದು ತಪ್ಪದು
ದಿಟದಿಟ ನೋಡಾ.
ಸದ್ಗುರುವಿನಿಂದಾದ ಶಿಷ್ಯನು ಸದ್ಗುರುವಪ್ಪುದು ತಪ್ಪದು
ದಿಟದಿಟ ನೋಡಾ.
`ಯಥಾ ಬೀಜಂ ತಥಾಂಕುರಂ’ ಎಂಬ ವಾಕ್ಯ ತಪ್ಪದು
ಶಿವನೇ ಬಲ್ಲನು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಯೋಗಾಭ್ಯಾಸ ಯೋಗಾಭ್ಯಾಸವೆಂದೆಂಬಿರಿ
ಯೋಗವು ಅಭ್ಯಾಸವೆ ? ಅಭ್ಯಾಸವು ಯೋಗವೆ ಅಯ್ಯಾ ?
ಯೋಗಾಭ್ಯಾಸವೆಂಬನ್ನಕ್ಕ ತಾನಾ ಯೋಗಿಯೆ ಅಯ್ಯಾ ?
ಯೋಗವ ನುಡಿವರೆ ಅಯ್ಯಾ ?
ಗುರುಮತದಿಂ ಭಾವಿಸಲು ಸರ್ವವೂ ಪರಬ್ರಹ್ಮ,
ಶ್ರೀಗುರುವಿನ ಶ್ರೀಪಾದಧ್ಯಾನವೇ ಯೋಗ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ರತ್ನಂಗಳೊಳಗೆ ಚಿಂತಾಮಣಿ ಮಹಾರತ್ನವೆಂತು
ಪೂಜ್ಯವಾಗಿ ಒಪ್ಪುವುದು,
ಧೇನುಗಳೊಳಗೆ ಕಾಮಧೇನುವೆಂತು
ಪೂಜ್ಯವಾಗಿ ಒಪ್ಪುವುದು,
ಅಂತೆ, ಕಾಣಿರೆ ತತ್ವಂಗಳೊಳಗೆ ಶ್ರೀಗುರುತತ್ವವೆ ಪೂಜ್ಯವು.
ಶ್ರೀಗುರುತತ್ವವೆ ಒಪ್ಪುವುದಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ರಾವಣ ಪಡೆದ ಲಿಂಗ ಚಂದ್ರಾಯುಧ ಪಾರ್ವತಿಯ ಗಜಮುಖನ
ಹರಿಯಜರು ಬಿಡಿಸಿದರೆಂದೆಂಬರು, ಸ್ವಾಮಿಭೃತ್ಯ ನ್ಯಾಯಕ್ಕದೇನು ಚೋದ್ಯ !
ಹರಿಯಜರು ಹರನ ಕೊಲ್ಲುವೆನೆಂದಸುರನ
ಹೆಣ್ಣು ರೂಪಾಗಿ, ಅವನ ಕೈಯಿಂದಲವನ ಸುಟ್ಟು,
ಇವರು ಮೊದಲಾದ ಶಿವದ್ರೋಹಿಗಳ ಹರಿಸಂಹರಿಸಿದರೇನು ?
ದೈತ್ಯರಂ ಗೆಲುವ ಸಾಹಸಮಂ ಶಿವನು
ತನ್ನ ಭೃತ್ಯರ ಸಾಹಸಮಂ ಮೆರೆಸುವ ವಿನೋದವಲ್ಲದೆ
ಶಿವನ ಕೃಪೆಯಿಂದ ಪಡೆದು ಮಾಡುವ
ಸ್ವಾಮಿಭೃತ್ಯ ನ್ಯಾಯಕ್ಕದೇನು ಚೋದ್ಯ !
ಬಲೆಯೊಳಗೆ ಸಿಡಿಲುವಕ್ಕಿ ಬಿದ್ದರೆ ಬೇಂಟೆಕಾರಗೆ ಸಾಧ್ಯವಾಗಲ್ಲುದೆ ?
ಮರಣವಿರಹಿತ ಶಿವನ ಕೊಲಬಲ್ಲುವರುಂಟೆ ?
ಸರ್ವಜ್ಞ ಶಿವನ ಸತಿಯ ಮತ್ತೊಬ್ಬರಾಳುವರುಂಟೆ ?
ಸೂತ್ರಕನಾಡಿಸುವಂತೆ ಆಡುವ ಬೊಂಬೆ ಆ ಸೂತ್ರಕನ ಕೊಲಬಲ್ಲವೆ ?
ಆ ಸೂತ್ರಧಾರಕನ ಸತಿಯ ಬಂದು ಬೊಂಬೆಯಾಳಬಲ್ಲುದೆ ?
ಮತ್ತೊಂದು ಬೊಂಬೆ ಬುದ್ಧಿಯಿಂದ ಸೆಳೆದುಕೊಳಬಲ್ಲುದೆ ?
ಅದು ಕಾರಣ ಬ್ರಹ್ಮನಿಂದಲಾಯಿತು! ವಿಷ್ಣುವಿಂದಲಾಯಿತ್ತು!
ಮತ್ತೆ ಕೆಲವು ದೈವಗಳಿಂದವಾಯಿತ್ತೆಂಬ ಅಜ್ಞಾನಿಗಳ ಮಾತಂತಿರಲಿ,
ಬ್ರಹ್ಮವಿಷ್ಣುಗಳು ಸ್ವತಂತ್ರರಾದರೆ ಬ್ರಹ್ಮನ ತಲೆ ಹೋಗಲೇತಕ್ಕೆ ?
ಸರಸ್ವತಿಯ ಮೂಗು ಹೋಗಲೇತಕ್ಕೆ ?
ಬ್ರಹ್ಮನ ಮಗ ಸನತ್ಕುಮಾರ ಒಂಟೆಯಾಗಲೇತಕ್ಕೆ ?
ಹರಿಯ ಮಗ ಕಾಮನುರಿದು ಹೋಗಲೇತಕ್ಕೆ ?
ನಾರಸಿಂಹನು [ವ]ಧೆಗೆ ಒಳಗಾಗಲೇತಕ್ಕೆ ?
ಕೃಷ್ಣನ ಹದಿನಾರು ಸಾವಿರ ಸ್ತ್ರೀಯರ ಮೇಲೆ ಬೇಡರು ನೆರೆಯಲೇತಕ್ಕೆ ?
ಕಾಳುಬೇಡನೆಚ್ಚಂಬು ತಾಗಿ ಕೃಷ್ಣ ಗೋಳುಗುಟ್ಟಿ ಸಾಯಲೇತಕ್ಕೆ ?
ಅದು ಕಾರಣ, ನಮ್ಮ ಶಿವನು ಆಡಿಸಿದಂತೆಯಾಡಿ,
ಹುಟ್ಟೆಂದರೆ ಹುಟ್ಟಿ, ನಡೆಯಂದರೆ ನಡದು, ನುಡಿಯೆಂದರೆ ನುಡಿದು
ಸಾಯಂದರೆ ಸತ್ತು, ಕೆಡಹಿದಂತೆ ಬಿದ್ದಿಹ ತೃಣದೊಂಬೆಗಳಿಗುಂಟೆ ಸ್ವತಂತ್ರ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ರುದ್ರಪಿಂಡದಲ್ಲಿ ಉತ್ಪತ್ತಿ
ರುದ್ರವಾಹನನ ಮುಖದಲ್ಲಿ ಸ್ತುತಿ
ನಂದಿಮುಖದಿಂದ ಶುಚಿ
ಪಂಚಶಿಖಿ ಉದ್ಧೂಳಿತ ಅಗ್ನಿಕಾರ್ಯನೆವದಿಂದ ವಿಭೂತಿಯ ಧರಿಸಿದಿರಿ,
ಇದ್ದಿದ್ದೇನ ನೆನೆದಿರಿ.
ಎಡೆಯಂತರದಲ್ಲಿ ಮಲಿನವ ಧರಿಸಿ ಹೆಡ್ಡರಾದಿರಿ,
ಅರಿದು ಬರಿದೆ ಬರಿದೊರೆವೋದಿರಿ,
ಶ್ವಾನಜ್ಞಾನಿಗಳಾದಿರಿ, ಕೆಟ್ಟಿರಯ್ಯೋ ದ್ವಿಜರು.
ತದ್ಧಿನಂಗಳ ಮಾಡುವಲ್ಲಿ ಪಿತೃಗಳನ್ನುದ್ಧರಿಸುವಲ್ಲಿ
ಶ್ರೀ ರುದ್ರಪಾದೇ ದತ್ತಮಸ್ತು’ ಎಂಬಿರಿ ಏಕ ಏವ ರುದ್ರಃ’ ಎಂದು
ಅಧ್ಯಾಯಂಗಳಲ್ಲಿ ಹೇಳುವಿರಿ
ನಿಮಗಿಂದ ನಾವು ಬುದ್ಧಿವಂತರೇ ?
ದಧೀಚಿ ಗೌತಮಾದಿಗಳ ಶಾಪವ ಹೊತ್ತಿರಿ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಲಘು ಗುರುವಪ್ಪನೆ ? ಗುರು ಲಘುವಪ್ಪನೆ ? ಆಗದಾಗದು.
ಗುರು ಗುರುವೆ, ಲಘು ಲಘುವೆ.
ಶ್ರೀಗುರು ಲಘುವರ್ತನದಲ್ಲಿ ವರ್ತಿಸಿದಡೆ ಆಗದು ಆಚಾರ.
ಶ್ರೀಗುರು ಲಿಂಗಜಂಗಮಪ್ರಸಾದವನು
ತಾನೆ ಲಘುಮಾಡಿ ಲಘುವಾದನಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಲಿಂಗ ಪ್ರಾಣ, ಪ್ರಾಣ ಲಿಂಗ,
ಆ ಮಹಾಲಿಂಗಕ್ಕೆ ಕಾಯವೆ ಭಕ್ತನು,
`ಭಕ್ತಕಾಯ ಮಮಕಾಯ’ ಎಂದುದಾಗಿ
ಆ ಪ್ರಾಣ ಲಿಂಗವು, ಕಾಯ ಭಕ್ತನು
ಆ ಲಿಂಗಕ್ಕೆ ಆ ಭಕ್ತನು ದಾಸೋಹವ ಮಾಡಿದಡೆ
ಭಿನ್ನ ಭೇದವೆ ? ಅಲ್ಲ, ಸ್ವಭಾವ ನೈಜ.
ಅಂಗಕ್ರೀಯೆಲ್ಲ ಲಿಂಗಕ್ರೀ, ಲಿಂಗಕ್ರೀಯೆಲ್ಲ ಅಂಗಕ್ರೀ.
ಕೈಕಲಸಿದಡೆ ಬಾಯಿಗೆ, ಹಾಂಗೆ ಸರ್ವಾಂಗ ಲಿಂಗಕ್ಕೆ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಲಿಂಗ ಲಿಂಗಿಗಳ ದರ್ಶನ:ಸಾಲೋಕ್ಯಪದ.
ಲಿಂಗ ಲಿಂಗಿಗಳ ಸ್ನೇಹ ನಿರಂತರ ಸ್ನೇಹಸಂಗ:ಸಾಮಿಪ್ಯಪದ.
ಲಿಂಗ ಲಿಂಗಿಗಳ ಸಂಗ ಹಿಂಗದೆ, ಮನೋವಾಕ್ಕಾಯದಲ್ಲಿ ವಂಚನೆಯಿಲ್ಲದೆ
ತನುಮನಧನವನರ್ಪಿಸಿ ಲಿಂಗಭರಿತ ಶರಣಮೂರ್ತಿಯನು
ಕಂಗಳಲ್ಲಿ ಮನದಲ್ಲಿ ಹೃದಯದಲ್ಲಿ ಭರಿತನಾಗಿ
ಮೂರ್ತಿಗೊಳಿಸುವುದು:ಸಾರೂಪ್ಯಪದ.
ಲಿಂಗ ಲಿಂಗಿಗಳ ಶ್ರೀಪಾದಪದ್ಮದಲ್ಲಿ, ಮನೋವಾಕ್ಕಾಯದಲ್ಲಿ
ನಿರಂತರ ಐಕ್ಯನಾಗಲು ಸಾಯುಜ್ಯಪದವಯ್ಯಾ.
ಇದೇ ಚತುರ್ವಿಧಪದ, ಇದೇ ಚತುರ್ವಿಧಪದಕ್ಕೆ ವಿಶೇಷಪದ.
ಸಾಲೋಕ್ಯಂ ಚ ತು ಸಾಮಿಪ್ಯಂ ಸಾರೂಪ್ಯಂ ಚ ಸಾಯುಜ್ಯತಾ
ತತ್ಪದೇಭ್ಯೋ ವಿಶೇಷಶ್ಚ ಶಿವದಾಸೋಹ ಉತ್ತಮಃ
ಎಂದುದಾಗಿ, ಇತರ ಪದವ ನಿಶ್ಚೈಸಲು
ಸಾಲೋಕ್ಯಂ ಚ ತು ಸಾಮಿಪ್ಯಂ ಸಾರೂಪ್ಯಂ ಚ ಸಾಯುಜ್ಯತಾ
ಸಕೃತಾಪೇಕ್ಷಿಭಕ್ತಾನಾಂ ನಾಸ್ತಿ ಲಿಂಗಂ ಗುರೋಃ ಪರು
ಎಂದುದಾಗಿ,
ಇತರ ಪದವ ಬಯಸದಿರಿ.
ಮಹಾಪದ ಚತುರ್ವಿಧಪದಕ್ಕೆ ವಿಶೇಷಃ.
ಶರಣರಿಗೆ ಶರಣೆಂಬುದೇ ಪದ ಕಾಣಿರಣ್ಣಾ,
ಶರಣೆನ್ನದೆ ಪದವ ಬಯಸಿದ ದಕ್ಷ ನಾರಸಿಂಹಾದಿಗಳು ಕೆಟ್ಟರು,
ಶರಣೆಂದು ಮಹಾಪದವ ಪಡೆದರು.
ಶರಣರಿಗೆ ಶರಣೆನ್ನದೆ ನಂಬಿಯಣ್ಣನು ಶರಣರಿಗೆ ಹೊರಗಾಗಿ
ಅರಿದು ಸದ್ಭಕ್ತಿಯಿಂ ಶರಣೆಂದು ಶರಣರೊಳಗಾದನು,
ಇಹಪರಭೋಗವನು ವಿಶೇಷವಾಗಿ ಹಡೆದನು.
ಶರಣರಿಗೆ ಶರಣೆನ್ನದೆ ಕೆಟ್ಟರು ಕಾಲ, ಕಾಮ, ಇಂದ್ರ
ಮೊದಲಾದವರನೇಕರು.
ಅವರಂತಾಗದಿರಿ. ಶರಣರಿಗೆ ಶರಣೆನ್ನಿ, ಇದೇ ಭಕ್ತಿ, ಇದೇ ಮುಕ್ತಿ.
ಶರಣರಿಗೆ ಶರಣೆನ್ನದೆ,
ಭಕ್ತಿಯೆಂದಡೆ ಮುಕ್ತಿಯೆಂದಡೆ ಪದವ ಬಯಸಿದಡೆ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಲಿಂಗವು ನಗುವು ನಗುವನು,
ನಾಯಕನರಕದಲ್ಲಿಕ್ಕುವನಯ್ಯಾ.

ವಚನ
ಲಿಂಗಕ್ಕೆಯೂ ತನಗೆಯೂ ಭಿನ್ನಭಾವವಿಲ್ಲೆಂಬರು,
ಲಿಂಗಕ್ಕೆಯೂ ತನಗೆಯೂ ಭಾಜನವೆರಡೆಂಬರು.
ಬಂದಿತ್ತು ನೋಡಾ ತೊಡಕು.
ಭಾಜನವೆರಡೆಂಬ ಮಾತೆರಡು,
ಮಾತೆರಡಾದವಾಗಿ ಅಂಗವೆರಡಹುದು,
ಅಂಗವೆರಡಿಪ್ಪಾತಂಗೆ ಲಿಂಗವಿಲ್ಲೆಂದೆನಿಸಿತ್ತು.
ಲಿಂಗವಿಲ್ಲದಾತನು ಭವಿ ಎಂದೆನಿಸುವನು.
ಇದು ಕಾರಣ, ಲಿಂಗದಲ್ಲಿ ಅವಿರಳವಾಗಿ
ಅಂಗಗುಣಭಂಗವ ಕಳೆದು, ನಿರ್ಭಿನ್ನ ಮತನಾಗಿ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನಲ್ಲಿ, ಏಕಭಾಜನ ಸಮನಿಸಿತಯ್ಯ.

ವಚನ
ಲಿಂಗಚ ಮರ್ಮವನರಿವುದರಿದು,
ಲಿಂಗದ ಸಂಜ್ಞೆಯ[ನ]ರಿವುದರಿದು,
ಲಿಂಗವಂತಹದಿಂತಹದೆಂದರಿವುದರಿದು ನೋಡಾ.
ಲಿಂಗದಲ್ಲಿಯೇ ಆಗಮವಯ್ಯ,
ಭೂಮಿಯೇ ಪೀಠಿಕೆ, ಆಕಾಶವೇ ಲಿಂಗವೆಂದರಿದಾತನು
ಲಿಂಗವನರಿದವನಲ್ಲ.
ಲಿಂಗದಲ್ಲಿಯೇ ಆಗಮವಯ್ಯ,
ಲಿಂಗದಾದಿ ಬ್ರಹ್ಮ, ಮಧ್ಯ ವಿಷ್ಣು, ಅಂತ್ಯ ರುದ್ರ
ಇಂತು ತ್ರೈಲಿಂಗವೆಂದರಿದಾತನು ಲಿಂಗವನರಿದವನಲ್ಲ.
ಲಿಂಗದಲ್ಲಿಯೇ ಅಗಮವಯ್ಯಾ,
ಲಿಂಗಮಧ್ಯೇ ಜಗತ್ಸರ್ವಂ ಎಂಬ ಭಾವಭರಿತಲಿಂಗ ಬ್ರಹ್ಮವಿಷ್ಣಾದಿದೇವನಾಮಪ್ಯಗೋಚರಂ’ ಎಂದು,
ಮಾಹೇಶ್ವರಜ್ಯೋತಿರಿದಮಾಪಾತಾಲೇ ವ್ಯವಸ್ಥಿತಂ
ಅತೀತಂ ಸತ್ಯಲೋಕಾಧೀನನಂತಂ ದಿವ್ಯಮೀಶ್ವರಂ
ಇಂತಾದನು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನು
ಎಂದರಿದ ಶರಣಂಗೆ ಸುಲಭ, ಮಿಕ್ಕಿದವರ್ಗೆ ಅಸುಲಭ.

ವಚನ
ಲಿಂಗದಲ್ಲಿ ಮನ ಲೀಯವಾಗಿ,
ಜಂಗಮದಲ್ಲಿ ಧನ ಲೀಯವಾಗಿ,
ಸದ್ಗುರುಲಿಂಗದಲ್ಲಿ ತನು ಲೀಯವಾಗಿ ಹೊಗಲು
ಭಕ್ತ ಲಿಂಗದೊಳಗೆ, ಲಿಂಗ ಭಕ್ತನೊಳಗೆ.
ವಂಚನೆಯಿಲ್ಲದೆ ದಾಸೋಹ ಕೇವಲ ಮುಕ್ತಿ,
ಇದು ಸತ್ಯ ನಿತ್ಯ ಶಿವ ಬಲ್ಲನಯ್ಯಾ.
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಲಿಂಗದೇವನ ನಂಬಿದವಂಗೆ ಜ್ಞಾನವಿದೆ,
ಅಷ್ಟಮಹದೈಶ್ವರ್ಯ ಲಿಂಗಭೋಗ ಆವುದೂ ಕೊರತೆ ಇಲ್ಲ.
ಸುಖಪರಿಣಾಮಿ, ಆ ಮಹಿಮಂಗೆ ಮಾನವರಾರೂ ಪಡಿಯಲ್ಲ.
ಲಿಂಗದೇವನ ನಂಬದವಂಗೆ ಜ್ಞಾನವಿಲ್ಲ,
ಐಶ್ವರ್ಯ ಭೋಗ ಆವುದೂ ಇಲ್ಲ, ಇಹಪರವಿಲ್ಲ.
ಇದನರಿದು ತನ್ನ ತಾನು ವಿಚಾರಿಸಿಕೊಂಬುದಯ್ಯಾ.
ಲಿಂಗವ ನಂಬಿದಡೆ ಸರ್ವಸಿದ್ಧಿ, ಲಿಂಗವ ನಂಬದಿರ್ದಡೆ ನಾಯಕನರಕ.
ಇನ್ನಾದಡೂ ನಂಬಿ ಬದುಕಿ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಲಿಂಗದೊಡನೆ ಸಹಭೋಜನ ಮಾಡುವ
ಸದ್ಭಕ್ತನ ಆಚರಣೆ ಕ್ರಿಯೆಗಳೆಂತುಂಟಯ್ಯಾ ಎಂದಡೆ;
ಲಿಂಗ ಜಂಗಮದ ಕುಂದು ನಿಂದೆಯಂ ಕೇಳಲಾಗದು,
ಕೇಳಿದಡೆ ಆ ನಿಂದಕನಂ ಕೊಲುವುದು,
ಕೊಲಲಾರದಿರ್ದಡೆ ತನ್ನ ತಾನಿರಿದುಕೊಂಡು ಸಾವುದು,
ಸಾಯಲಾರದಿರ್ದಡೆ ಅವನ ಬಯ್ವದು.
ತನ್ನ ಅರ್ಥಪ್ರಾಣಾಭಿಮಾನವು ಶಿವಾರ್ಪಣವಾಯಿತ್ತೆಂದು
ಮನದಲ್ಲಿ ಸಂತೋಷವ ತಾಳಿದಡೆ ಪ್ರಸಾದವುಂಟು.
ಇಂತಲ್ಲದೆ ಮನದಲ್ಲಿ ನೋವ ತಾಳಿದಡೆ ಆಚಾರಭ್ರಷ್ಟನು.
ಎನ್ನ ಮನೆ, ಎನ್ನ ಧನ, ಎನ್ನ ಸತಿಯೆಂಬನ್ನಕ್ಕರ ಅವನು ಭವಿಯ ಸಮಾನ.
ಭಕ್ತನಲ್ಲ, ಪ್ರಸಾದಿಯಲ್ಲ, ಶೀಲವಂತನಲ್ಲ.
ಅವನಿಗೆ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ,
ಪಾದತೀರ್ಥವಿಲ್ಲ, ಪ್ರಸಾದ ಮುನ್ನವೇ ಇಲ್ಲ.
ಅವನಿಗೆ ಕುಂಭೀಪಾತಕನಾಯಕನರಕ ತಪ್ಪದು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಲಿಂಗಪ್ರಸಾದದಲ್ಲಿ ಸುಯಿಧಾನಿಯಾಗದವರಲ್ಲಿ
ಜಂಗಮವೆಂದು ಪ್ರಸಾದವ ಕೊಳ್ಳಲಾಗದು.
ಅದೇನು ಕಾರಣವೆಂದಡೆ:
ತಾನುಂಬುವುದು ಎಂಜಲು, ಪರರಿಗಿಕ್ಕುವುದು ಪ್ರಸಾದವೆ ?
ಬಿಡು ಬಿಡು, ಸುಡು ಸುಡು, ಈ ಕಷ್ಟದ ನುಡಿಯ ಕೇಳಲಾಗದು.
ಪರುಷ ನಿರ್ಮಲವಾದಲ್ಲದೆ, ಅದು ಲೋಹದ ದುರ್ಗುಣವ ಕೆಡಿಸಲರಿಯದು.
ಜಂಗಮನಾಗಿಯಲ್ಲದೆ ತಾ ಭಕ್ತನಾಗಲರಿಯ.
ಮಡಿಯರ್ಧ, ಮೈಲಿಗೆಯರ್ಧವಾದಡೆ ಕೆಡಹಿ ನಾಯಕ ನರಕದಲ್ಲಿಕ್ಕುದೆ ಬಿಡುವನೆ
ನಮ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ?

ವಚನ
ಲಿಂಗಪ್ರಸಾದವಂ ಚೆಲ್ಲಿ, ಜಂಗಮಪ್ರಸಾದದ ಸುಯಿಧಾನಿಯೆಂಬ
ಅಂಗಹೀನ ಮೂಕೊರೆಯ ಹೊಲೆಯನ ಮುಖವ ನೋಡಲಾಗದು !
ಅದೇನು ಕಾರಣವೆಂದಡೆ :
ಗುರುವಾವುದು ? ಲಿಂಗವಾವುದು ? ಜಂಗಮವಾವುದು ?
ಇಂತೀ ತ್ರಿವಿಧವು ಒಂದಾದ ಕಾರಣ
ಏಕಮೂರ್ತಿಸ್ತ್ರಯೋ ಭಾಗಃ ಗುರುಲಿಂಗಂತು ಜಂಗಮಃ
ಜಂಗಮಶ್ಚ ಗುರುರ್ಲಿಂಗಂ ತ್ರಿವಿಧಂ ಲಿಂಗಮುಚ್ಯತೇ
ಎಂದುದಾಗಿ, ಒಂದಬಿಟ್ಟೊಂದ ಹಿಡಿದ ಸಂದೇಹಿ ಹೊಲೆಯನ ಕಂಡರೆ
ಹಂದಿ ನಾಯ ಬಸುರಲ್ಲಿ ಹಾಕದೆ ಬಿಡುವನೇ ?
ನಮ್ಮ [ಉರಿಲಿಂಗಪೆದ್ದಿಪ್ರಿ]ಯ ವಿಶ್ವೇಶ್ವರ.

ವಚನ
ಲಿಂಗಭರಿತ ಶರಣ, ಶರಣಭರಿತ ಲಿಂಗವದೆಂತೆಂದಡೆ:
`ಶರಣಮಧ್ಯೇ ತು ಲಿಂಗಂ ಸ್ಯಾತ್ ಲಿಂಗಮಧ್ಯೇ ತು ಶರಣಃ’
ಎಂದುದಾಗಿ,
ಶರಣ ಬೇರೆಯೆ ? ಲಿಂಗ ಬೇರೆಯೆ ? ಶಿವ ಶಿವಾ ಒಂದೇ ಕಾಣಿರಣ್ಣಾ.
ಶರಣನ ಕ್ರೀ ಎಲ್ಲವೂ ಲಿಂಗಕ್ರೀ, ಎಲ್ಲವೂ ಶರಣಕ್ರೀ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಲಿಂಗವ ನಂಬಿ ಲಿಂಗಾರ್ಚನೆಯ ಮಾಡಿ
ಲಿಂಗವಾದರು ಅಸಂಖ್ಯಾತಪುರಾತನರು.
ಲಿಂಗವ ನಂಬದೆ ಅಂಗದಿಚ್ಛೆಯ ನಡೆದು ಭಂಗಿತರಾದರು
ದೇವದಾನವಮಾನವರನೇಕರು, ಇದು ದೃಷ್ಟ.
ಇಷ್ಟಾನಿಷ್ಟವಿದೆ:
ಅನಿಷ್ಟವ ಬಿಟ್ಟು ಇಷ್ಟವ ಹಿಡಿದು ಬದುಕಿರಯ್ಯಾ ಕೆಡಬೇಡ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಲಿಂಗವಂತ ಲಿಂಗವಂತ ಎಂಬಿರಿ,
ಎಂತು ಲಿಂಗವಂತರಾದಿರೋ, ಅನ್ಯದೈವದ ಭಜನೆ ಮಾಣದನ್ನಕ್ಕ ?
ಭವಿಗಳ ಸಂಗವ ಮಾಣದನ್ನಕ್ಕ, ಎಂತು ಲಿಂಗವಂತರಾದಿರೋ ನೀವು ?
ಅದೆಂತೆಂದಡೆ,
ಶಿವಾಚಾರಸಮಾಯುಕ್ತಃ ಅನ್ಯದೈವಸ್ಯ ಪೂಜನಾತ್
ಶ್ವಾನಯೋನಿಶತಂ ಗತ್ವಾ ಚಂಡಾಲಗೃಹಮಾವಿಶೇತ್
ಅಶನೇ ಶಯನೇ ಯಾನೇ ಸಂಪರ್ಕೆ ಸಹಭೋಜನೇ
ಸಂಚರಂತಿ ಮಹಾಘೋರೇ ನರಕೇ ಕಾಲಮಕ್ಷಯಂ
ಇಂತೆಂದುದಾಗಿ,
ಅನ್ಯದೈವ ಭವಿವುಳ್ಳನಕ,
ನೀವು ಲಿಂಗವಂತರೆಂದಿರೋ, ಮರುಳುಗಳಿರಾ ?
ಇದನರಿತು ಭಕ್ತಿಪಥವ ಸೇರದಿರ್ದಡೆ,
ನೀವೆಂದೆಂದಿಗೂ ಭವಭವದ ಲೆಂಕರು.
ಇದು ಕಾರಣ, ನಮ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಲಿಂಗ
ಮುನ್ನವೇ ದೂರವಯ್ಯ.

ವಚನ
ಲಿಂಗವಂತಂಗೆ ಲಿಂಗವು ಮಾಡಿದ ಪದವನು ಲಿಂಗವಂತರೆ ಬಲ್ಲರು.
ಕೇವಲ ಸಾಕ್ಷಾತ್ಪರವಸ್ತುವನು ಕರಸ್ಥಲದಲ್ಲಿ ಮೂರ್ತಿಯಾಗಿ
ಬಿಜಯಂಗೈಸಿ ಕೊಟ್ಟನಾಗಿ ಸಾಲೋಕ್ಯಪದ,
ಅಂಗದ ಮೇಲೆ ನಿರಂತರ ಪೂಜೆಗೊಳ್ಳುತ್ತಿಹನಾಗಿ ಸಾಮೀಪ್ಯಪದ,
ಸದ್ಭಕ್ತರೂಪ ಮಾಡಿದವನಾಗಿ ಸಾರೂಪ್ಯಪದ,
ಪ್ರಾಣಲಿಂಗವ ಮಾಡಿ ಅವಿನಾಭಾವವ ಮಾಡಿದನಾಗಿ ಸಾಯುಜ್ಯಪದ,
ಇಂತೀ ಚತುರ್ವಿಧ ಪದವಾಯಿತ್ತು.
`ಲಿಂಗಮಧ್ಯೇ ಶರಣಂ ಶರಣಮಧ್ಯೇ ಲಿಂಗಂ’ ಎಂಬುದಾಗಿ
ಸರ್ವಭೋಗಂಗಳನೂ ಸಹವಾಗಿ ಭೋಗಿಸಿ
ಪ್ರಸಾದವನಿಕ್ಕಿ ಸಲಹಿದನಾಗಿ ಸದ್ಯೋನ್ಮುಕ್ತನು, ಸರ್ವಾಂಗಲಿಂಗವು.
ಈ ತಾತ್ಪರ್ಯದ ಮರ್ಮವನು ಲೋಕದ ಜಡಜೀವಿಗಳೆತ್ತ ಬಲ್ಲರಯ್ಯಾ ?
ಬಲ್ಲಡೆ, ಲಿಂಗಾನುಭಾವಿಗಳೇ ಬಲ್ಲರಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಲಿಂಗವಂತನು ಕೇವಲ ಲಿಂಗಮೂರ್ತಿ.
ಲಿಂಗಾರ್ಚನೆಯಂ ಮಾಡಿ, ಲಿಂಗಪ್ರಸಾದವ ಧರಿಸಿ,
ಲಿಂಗವಂತರಲ್ಲಿ ವರ್ತಿಸಿ, ಸರ್ವವೂ ಲಿಂಗಕ್ರೀಯಾಗಿದ್ದು
ಲಿಂಗವಿಲ್ಲದವರಲ್ಲಿ ಧನದ ಕೊಳುಕೊಡೆ ಮನದ ಕೊಳುಕೊಡೆ
ತನುವಿನ ಕೊಳುಕೊಡೆಯನೂ ಮಾಡಿದಡೆ
ನಾಚದೆ ಶಿವಾಚಾರ? ನಾಚದೇ ಪ್ರಸಾದ? ನಾಚರೆ ಲಿಂಗವಂತರು.
ಸುಡು, ಸುಡು, ಕಡು ಕಷ್ಟ, ಅವರನು ಬಿಡು ಬಿಡು.
ಆ ತನುವನು ಲಿಂಗವಂತರಲ್ಲಿಯೇ ಸರ್ವಕ್ರೀಯ ಅರ್ತಿಸುವುದು.
ತನಗೆ ಇಚ್ಛೈಸಿತ್ತ ಕೊಂಡು ಕೊಂಬುದು,
ಅವರು ಇಚ್ಛೈಸಿತ್ತ ಕೊಡುವುದು,
ಅವರಲ್ಲಿಯೆ ಅನುಭವವನಾಸೆಗೈವುದು.
ಅ[ನ್ಯ]ರ ವಿಚಾರದಲ್ಲಿ ನಡೆದು ನರಕಕ್ಕಿಳಿಯಲಾಗದು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಲಿಂಗವಂತನು ಲಿಂಗವಂತಂಗೆ
ಅಣುಮಾತ್ರ ಅವಮಾನವ ಮಾಡಿದಡೆ ಮನ ನೋವುದಯ್ಯಾ.
ಲಿಂಗವಂತನು ಶುಚಿ ಸತ್ಯನು ಶಾಂತನು ಲಿಂಗಸುಖಿ,
ಲಿಂಗದಲ್ಲಿ ತನುಮನಧನ ಬೆರಸಿಪ್ಪುದಾಗಿ, ಲಿಂಗವೂ ಒಲಿವುದಯ್ಯಾ.
ಬಳಿಕ ಮಹಾಪರ್ವತಪ್ರಮಾಣ ಸತ್ಕಾರವ ಮಾಡಿದರೂ
ನೋವು ಮಾಣದು, ಶಿವನೊಲವು ತಪ್ಪದು.
ಹಿಂದೆ ವಿಷ್ಣು, ಬ್ರಹ್ಮ, ಇಂದ್ರ, ದಕ್ಷನು
ಇದನರಿದು ತನು ಮನ ಧನದಲ್ಲಿ ವಂಚನೆಯಿಲ್ಲದೆ
ಭಯಭಕ್ತಿಯಿಂದರಿದು ನಡೆದು ಸುಖಸಂಗತಾತ್ಪರ್ಯ
ಸಹಜವಿಡಿದಿಪ್ಪುದಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಲಿಂಗವಂತನು ಲಿಂಗವಂತರಲ್ಲಿಯೇ ಸಂಗವ ಮಾಡುವುದು,
ಲಿಂಗಬಾಹ್ಯರ ಸಂಗವ ಮಾಡಲಾಗದು.
ಸ್ತ್ರೀ ಪುತ್ರರು ಮೊದಲಾದವರ ಕೂಡ
ಲಿಂಗವಿಲ್ಲದವರೊಡನೆ ಸಂಗವ ಮಾಡಲಾಗದು.
ಅದೆಂತೆಂದೆಡೆ :
ಶಿವಲಿಂಗಾಂಗಸಂಪನ್ನೋ ಲಿಂಗಬಾಹ್ಯಸತೀಸುತಾನ್
ಆಲಿಂಗ್ಯ ಚುಂಬನಂ ಕೃತ್ವಾ ರೌರವಂ ನರಕಂ ವ್ರಜೇತ್
ಎಂದುದಾಗಿ ಮತ್ತೆಯೂ_
ಲಿಂಗೀ ಲಿಂಗಿ ಸಹಾವಾಸೀ ಲಿಂಗಿನಾ ಸಹ ವರ್ತಯೇತ್
ಲಿಂಗಿನಾ ಸಹ ಭುಂಜಿತ ಲಿಂಗಯೋಗೋ ನ ಸಂಶಯಃ
ಎಂದುದಾಗಿ ಲಿಂಗವಂತನು ಲಿಂಗವಂತರಲ್ಲಿಯೇ
ಸಂಗವ ಮಾಡುವುದು ಶಿವಪಥವಯ್ಯಾ.
ಲಿಂಗವಿಲ್ಲದವರೊಡನೆ ಸಂಗವ ಮಾಡುವುದು ಮಹಾಪಾತಕವಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಲಿಂಗವಂತನು ಲಿಂಗವಂತರೊಡನೆ ಸತ್ಯವ ನುಡಿವುದು, ಸಹಜದಲ್ಲಿ ನಡೆವುದು,
ಪ್ರೇಮದಲ್ಲಿ ಸಂಗವ ಮಾಡುವುದು.
ಈ ಕ್ರೀ ಇಹಪರ ಸಿದ್ಧಿ, ಲಿಂಗವನರಿವುದಕ್ಕೆ ದೃಷ್ಟ.
ಲಿಂಗಾರ್ಚನೆಯೇ ಕ್ರೀ, ಲಿಂಗ ಒಲಿದುದಕ್ಕೆ ಚಿಹ್ನ, ಇದು ನಿತ್ಯ.
ಲಿಂಗವಂತನು ಲಿಂಗವಂತರೊಡನೆ
ಹೇಮದಾಸೆಗೆ ಪ್ರೇಮಗುಂದಿ ನುಡಿಯಲಾಗದು,
ಅಸತ್ಯವ ನುಡಿಯಲಾಗದು,
ಕ್ರೋಧಿಸಿ ನುಡಿಯಲಾಗದು, ವಂಚಿಸಿ ನುಡಿಯಲಾಗದು.
ವೇದಶಾಸ್ತ್ರ ಆಗಮ ಪುರಾಣ ಪುರಾತನರ ಚರಿತ್ರವನರಿಯದೆ
ಆದಿ ಮಧ್ಯ ಪರಿಪಕ್ವತೆಯನರಿಯದೆ,
ತರ್ಕಿಸಿ ನುಡಿಯಲಾಗದು, ದುಶ್ಚರಿತ್ರದಲ್ಲಿ ನಡೆಯಲಾಗದು.
ಆಜ್ಞಾನಕ್ರೀಯಲ್ಲಿ ವರ್ತಿಸಿ ನಡೆಯಲು
ಇಹಪರವಿಲ್ಲ, ಲಿಂಗವನರಿಯಬಾರದು,
ಲಿಂಗವಂತರನೆಂತೂ ಅರಿಯಬಾರದು.
ಅರಿಯದವಂಗೆ ಪೂಜಿಸಲೆಂತಹುದು ?
ಪೂಜೆ ಇಲ್ಲದವಂಗೆ ಭಕ್ತಿ ಎಂತಹುದು ?
ಭಕ್ತಿ ಇಲ್ಲದವಂಗೆ ಪ್ರಸಾದವೆಂತಹುದು ?
ಪ್ರಸಾದವಿಲ್ಲದವಂಗೆ ಮುಕ್ತಿ ಎಂತಹುದು ?
ಇದನರಿದು, ಲಿಂಗವಂತನು ಲಿಂಗವಂತರಲ್ಲಿ
ಸತ್ಯಸಂಭಾಷಣೆ ಯೋಗವಾದಡೆ ಕೇವಲ ಮುಕ್ತಿ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಲಿಂಗವಂತನು ಲಿಂಗವಿಲ್ಲದರ ಬಯಸಿದಡೆ ಆತಂಗೆ ಲಿಂಗವಿಲ್ಲ,
ಲಿಂಗವಿಲ್ಲದವನು ಆರಿಗೂ ಬಾತೆ ಅಲ್ಲ.
ಬಾತೆ ಅಲ್ಲದವಂಗೆ ಆರೂ ಸ್ನೇಹಿಸರು, ಆರು ಏನನೂ ಕೊಡರು.
ಇದು ಕಾರಣ,
ದುರಾಶೆಯಂ ಬಿಟ್ಟು ನಿರಾಶೆಯಾಗಿ ಲಿಂಗವನಾಶ್ರೈಸಿದಡೆ ಪ್ರಸಾದವಪ್ಪುದು
ಪ್ರಸಾದದಿಂದಿಹಪರ ಸಿದ್ಧಿ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಲಿಂಗವಂತನು ಲಿಂಗಾಚಾರ, ಸದಾಚಾರ,
ಭೃತ್ಯಚಾರ, ಗಣಾಚಾರ, ಶಿವಾಚಾರ,
ಸರ್ವಾಚಾರಸಂಪನ್ನನೆನಿಸಿಕೊಳಬಹುದಲ್ಲದೆ
ಭಕ್ತನೆನಿಸಿಕೊಳಬಾರದು.
ಅನೇಕ ವ್ರತನಿಯಮಂಗಳ ಹಿಡಿದು ನಡೆದು
ವ್ರತಸ್ಥನೆನಿಸಿಕೊಳಬಹುದಲ್ಲದೆ
ಭಕ್ತನೆನಿಸಿಕೊಳಬಾರದು.
ಕರುಣಿ ಶಾಂತ ನಿಸ್ಪೃಹನೆನಿಸಿಕೊಳಬಹುದಲ್ಲದೆ
ಭಕ್ತನೆನಿಸಿಕೊಳಬಾರದು.
ತನುವ ಕೊಟ್ಟು, ಮನವ ಕೊಟ್ಟು, ಧನವ ಕೊಟ್ಟು
ದಾತೃವೆನಿಸಿಕೊಳಬಹುದಲ್ಲದೆ.
ಭಕ್ತನೆನಿಸಿಕೊಳಬಾರದು.
ಏಕ ಮೂರ್ತಿಸ್ತ್ರಿಧಾ ಭೇದಾ’ ಎಂಬ ಕ್ರಿಯೆಯಲ್ಲಿ ಶ್ರೀಗುರುಲಿಂಗಜಂಗಮವೊಂದೆಯೆಂದು ಸದ್ಭಾವದಿಂ ತ್ರಿವಿಧದಲ್ಲಿ, ಆ ಮುಖವೊಂದೊಂದರಲ್ಲಿ ತ್ರಿವಿಧವನೂ ಏಕೀಭವಿಸಿ ಕಂಡು ಕಾಲಕರ್ಮಕಲ್ಪಿತ ಉಪಾಧಿರಹಿತನಾಗಿ ಆ ವಸ್ತುಗಳ ಮನೋವಾಕ್ಕಾಯದಲ್ಲಿ ಇಚ್ಚೈಸುತ್ತಂ ತನ್ನ ಮನೋವಾಕ್ಕಾಯದಲ್ಲಿ ತಡವಿಲ್ಲದೆ [ನೆಲೆಗೊಳಿಸಬೇಕು] ನ ಗುರೋರಧಿಕಂ ಗುರುಣಾ ದೀಯತೇ ಲಿಂಗಂ ಗುರುಃ ಪಿತಾ ಗುರುರ್ಮಾತಾ
ಎಂದುದಾಗಿ,
ದೀಕ್ಷಾಮೂರ್ತಿರ್ಗುರುರ್ಲಿಗಂ ಪೂಜಾಮೂರ್ತಿಸ್ಸದಾಶಿವಃ
ಶಿಕ್ಷಾಮೂರ್ತಿಶ್ಚರಸ್ತಸ್ಮಾತ್ ಏವಂ ಭೇದತ್ರಯೋ ಭವೇತ್
ದೀಕ್ಷಾ ಪೂಜಾ ಚ ಶಿಕ್ಷಾ ಚ ಸರ್ವಕರ್ತಾ ಚ ಜಂಗಮಃ
ಎಂದುದಾಗಿ,
ಭಕ್ತ್ಯಾಪೂಜಾಂ ಅಹಂ ಕರ್ತಾ’ ನಿಷ್ಪ್ರಪಂಚೋ ನಿರಾಮಯಃ’
ಎಂದುದಾಗಿ,
ಪ್ರಪಂಚಯುಕ್ತೋ ದಾಸೋಹೀ ನಿಷ್ಪ್ರಪಂಚೋ ಹಿ ಜಂಗಮಃ
ಪ್ರಪಂಚಯುಕ್ತೋ ಭಕ್ತಸ್ಸ್ಯಾತ್ ನಿಷ್ಪ್ರಪಂಚೋ ಹಿ ಜಂಗಮಃ
ಎಂದುದಾಗಿ,
ಸರ್ವಶಕ್ತಿಮಯಃ ಪ್ರೋಕ್ತಃ ಪುರುಷ ಏಕಶ್ಶಿವಸ್ತಧಾ
ಭಕ್ತಿಪ್ರಸನ್ನಸ್ಸರ್ವೆಷಾಂ ಯಥಾ ಭಕ್ತಿಸ್ತಥಾ ಶಿವಃ
ಸಕಲಶ್ಶಕ್ತಿರೂಪಶ್ಚ ಶಿವ ಏಕೋ ನಿಷ್ಕಲಸ್ತಥಾ
ಶಕ್ತ್ಯಧೀನಃ ಪ್ರಪಂಚಸ್ಸ್ಯಾದ್ಯಥಾಭಕ್ತಿಸ್ಸ್ತಥಾ ಶಿವಃ
ಗುರುಣಾ ಭಾವಿತಂ ಲಿಂಗಂ ಏಕಮೇವಾದ್ವಿತೀಯಕಂ
ತಲ್ಲಿಂಗಸ್ಯ ಪ್ರಭಾ ಲಿಂಗಂ ಸರ್ವಲಿಂಗಂ ನ ಸಂಶಯಃ
ಏಕ ಏವ ರುದ್ರೋ ನ ದ್ವಿತೀಯಾಯ ತಸ್ಥೇ’ ಎಂದುದಾಗಿ, ಏವ ಏಕೋ ಧ್ಯೇಯಃ’ ಎಂದುದಾಗಿ
`ಅಣೋರಣೀಯಾನ್ಮಹತೋ ಮಹೀಯಾನ್’ ಎಂದುದಾಗಿ
ಸರ್ವಶಕ್ತಿಮಯಂ ಪ್ರೋಕ್ತಂ ಪುರುಷಮೇಕಂ ಶಿವಸ್ತಥಾ
ಯಥಾ ಶಕ್ತಿಶ್ಚ ಸಂಯೋಗಂ ತಥಾ ತತ್ತ್ವಂ ಪರಶ್ಶಿವಃ
ಸರ್ವೆಷಾಂ ಶಕ್ತಿರೂಪಂ ಚ ಪುರುಷಾದ್ವೈತಂ ಪರಶಿವಃ
ಯಥಾಶಕ್ತಿಸ್ಸ್ತಥಾ ಪುರುಷ ಏಕ ರುದ್ರ ಇತಿ ಸ್ಮೃತಃ
ಎಂದುದಾಗಿ,
ಯಸ್ಯ ಚಿತ್ತಂ ಶಿವೇ ಲೀನಂ ತಸ್ಯ ಜಾತ್ಯಾದಿ ನ ಸ್ಮರೇತ್
ಶಿವಲಿಂಗೇ ಶಿಲಾಬುದ್ಧಿಂ ಕುರ್ವಾಣ ಇವ ಪಾತಕೀ
ಸತ್ಯಭಾವಿ ಮಹತ್ಸತ್ಯಂ ಸತ್ಯಂ ಸ್ಯಾಚ್ಚಿವಲಕ್ಷಣಂ
ನಿತ್ಯಭಾವಿ ಮಹನ್ನಿತ್ಯಂ ಸತ್ಯಂ ಸ್ಯಾಚ್ಚಿವಲಕ್ಷಣಂ
ನಾನಾರೂಪಧರೋ ದೇವೋ ನಾನಾರೂಪಸಮನ್ವಿತಃ
ನಾನಾಚಿಹ್ನಸಮೋಪೇತೋ ನಾನಾಲೀಲಾಧರೋ ಹರಃ
ವೇದಾತೀತಂ ಮನೋತೀತಮಾಗಮಾತೀತಮಾರ್ಗೆಕಂ
ಶಾಸ್ತ್ರಾತೀತಂ ಮಹಾಶಾಸ್ತ್ರೀ ತತ್ಸ್ಯಾಜ್ಜಂಗಮಲಕ್ಷಣಂ
ಲಿಂಗಧಾರೀ ಮಹಾಲಿಂಗೀ ಲಿಂಗಧ್ಯಾನೀ ನಿರಂತರಂ
ಲಿಂಗಾಲಿಂಗೀ ಮಹತ್ಸಂಗೀ ತತ್ಸ್ಯಾಜ್ಜಂಗಮಲಕ್ಷಣಂ
ಜಂಗಮೋ ಜಂಗಮಂ ದಃಷ್ಟ್ವಾ ನಮಸ್ಕಾರಂ ತು ಸಂಭ್ರಮಾತ್
ಆಲಿಂಗನಂ ಮಹಾಪ್ರೀತ್ಯಾ ಕುರ್ಯಾಜ್ಜಂಗಮಲಕ್ಷಣಂ
ಭೃತ್ಯಪೂಜಾರ್ಹಕರ್ತಾ ಚ ದೀಕ್ಷಾಮೂರ್ತಿರ್ಮಹಾಪ್ರಭುಃ
ಶಿಕ್ಷಾಮೂರ್ತಿರ್ಮಹಾಕರ್ತಾ ತತ್ಸ್ಯಾಜ್ಜಂಗಮಲಕ್ಷಣಂ
ಸರ್ವಸಂಗಪರಿತ್ಯಾಗೀ ಲಿಂಗಸಂಗೀ ನಿರಂತರಂ
ದ್ವಂದ್ವೇ ತು ಸಮದೃಷ್ಟಿಸ್ಸ್ಯಾತ್ ತತ್ಸ್ಯಾಜ್ಜಂಗಮಲಕ್ಷಣಂ
ಘೃಣಾದೃಷ್ಟಿಘೃಣಾವಾಕ್ಯಂ ಘೃಣಾಮೂರ್ತಿರ್ನಿರಂತರಂ
ಕ್ರಿಯಾಕರ್ಮಸು ವಿಜ್ಞಶ್ಚ ಶಿಕ್ಷಾಚಾರ್ಯ ಇತಿ ಸ್ಮೃತಃ
ಮೂರ್ತಿಶ್ಚ ಲಿಂಗಮೂರ್ತಿಶ್ಚ ಸುಶೀಲಂ ಲಿಂಗಶೀಲವತ್
ಗುಣಂ ಸರ್ವಸ್ಯ ಲಿಂಗಸ್ಯ ತತ್ಸ್ಯಾಜ್ಜಂಗಮಲಕ್ಷಣಂ
ಎಂದುದಾಗಿ,
ಹನ್ಯಾತ್ಕ್ರುದ್ಧೋಪಿ ಚಾಕಾಶಂ ಕ್ಷುಧಾರ್ತಾ ಖಾದಯೇತ್ತುಷಂ
ತ್ಯಕ್ತ್ವಾ ಲಿಂಗಾರ್ಚನಂ ಮೂಢೋ ಮುಕ್ತ್ಯರ್ಥಿ ತ್ರಿತಯಂ ವೃಥಾ
ಶ್ವಪಚೋಖಪಿ ಮುನಿಶ್ರೇಷ್ಠಃ ಶಿವಭಕ್ತೋ ದ್ವಿಜಾಧಿಕಃ
ಶಿವಭಕ್ತಿವಿಹೀನಸ್ತು ದ್ವಿಜೋಖಪಿ ಶ್ವಪಚಾಧಮಃ
ಸ ಲಿಂಗೀ ಸರ್ವದೈವಜ್ಞೋ ಯಸ್ಸ ಚಾಂಡಾಲವದ್ಭುವಿ
ಲಿಂಗಾರ್ಚಕಸ್ತು ಶ್ವಪಚೋ ದ್ವಿಜಕೋಟ್ಯಾ ವಿಶಿಷ್ಯತೇ
ಶಿವಧರ್ಮೆ,
ಉಪನೀತಸಹಸ್ರೇಭ್ಯೋ ಬ್ರಹ್ಮಚಾರೀ ವಿಶಿಷ್ಯತೇ
ಬ್ರಹ್ಮಚಾರಿಸಹಸ್ರೇಭ್ಯೋ ವೇದಾಧ್ಯಾಯೀ ವಿಶಿಷ್ಯತೇ
ವೇದಾಧ್ಯಾಯಿಸಹಸ್ರೇಭ್ಯಸ್ಸಾಗ್ನಿಹೊತ್ರೀ ವಿಶಿಷ್ಯತೇ
ಅಗ್ನಿಹೋತ್ರಿಸಹಸ್ರೇಭ್ಯೊ ಯಜ್ಞಯಾಜೀ ವಿಶಿಷ್ಯತೇ
ಯಜ್ಞಯಾಜಿಸಹಸ್ರೇಭ್ಯಃ ಸತ್ರಯಾಜೀ ವಿಶಿಷ್ಯತೇ
ಸತ್ರಯಾಜಿಸಹಸ್ರೇಭ್ಯಃ ಸರ್ವವಿದ್ಯಾರ್ಥಪಾರಗಃ
ಸರ್ವವಿದ್ಯಾರ್ಥವಿತ್ಕೋಟ್ಯಾ ಶಿವಭಕ್ತೋ ವಿಶಿಷ್ಯತೇ
ಎಂದುದಾಗಿ,
ನಿಕೃಷ್ಟಾಚಾರಜನ್ಮಾನೋ ವಿರುದ್ಧಾಲೋಕವೃತ್ತಿಷು
ಕೋಟಿಭ್ಯೋ ವೇದವಿದುಷಾಂ ಶ್ರೇಷ್ಠಾ ಮದ್ಭಾವಭಾವಿತಾಃ
ಎಂದುದಾಗಿ,
ದೇಶಾಂತರ ಸಂಹಿತೆಯಲ್ಲಿ:
ಕ್ರಿಮಿಕೀಟಪತಂಗೇಭ್ಯಃ ಪಶವಃ ಪ್ರಜ್ಞಯಾಧಿಕಾಃ
ಪಶುಭ್ಯೋಖಪಿ ನರಾಶ್ಯ್ರೇಷ್ಠಾಸ್ತೇಷು ಶ್ರೇಷ್ಠಾ ದ್ವಿಜಾತಯಃ
ದ್ವಿಜಾತಿಷ್ವಧಿಕಾ ವಿಪ್ರಾ ವಿಪ್ರೇಷು ಕ್ರತುಬುದ್ಧಯಃ
ಕ್ರತುಬುದ್ಧಿಷು ಕರ್ತಾರಸ್ತೇಭ್ಯಃ ಸನ್ಯಾಸಿನೋಡಿಧಿಕಾಃ
ತೇಭ್ಯೋ ವಿಜ್ಞಾನಿನಃ ಶ್ರೇಷ್ಠಾಸ್ತೇಷು ಶಂಕರಪೂಜಕಾಃ
ತೇಷು ಶ್ರೇಷ್ಠಾ ಮಹಾಭಾಗಾ ಮಮ ಲಿಂಗಾಂಗಸಂಗಿನಃ
ಲಿಂಗಾಂಗಸಂಗಿಷ್ವಧಿಕಃ ಷಟ್ಸ್ಥಲಜ್ಞಾನವಾನ್ಪುಮಾನ್
ತಸ್ಮಾದಪ್ಯದಿಕೋ ನಾಸ್ತಿ ತ್ರಿಷು ಲೋಕೇಷು ಸರ್ವದಾ
ಎಂದುದಾಗಿ,
ಭೋಗಮೂರ್ತಿರ್ಮಹಾಲಿಂಗಂ ಜಂಗಮಶ್ಚ ನ ಸಂಶಯಃ
ಜಂಗಮೋ ಲಿಂಗರೂಪಂ ಚ ಸತ್ಯಂ ಸತ್ಯಂ ನ ಸಂಶಯಃ
ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಯತೇ
ಜಂಗಮಸ್ಯಾವಮಾನೇನ ಸ್ಥಾವರಂ ನಿಷ್ಫಲಂ ಭವೇತ್
ಆಚಾರಶ್ಚ ಗುರುರ್ಲಿಂಗಂ ಜಂಗಮಶ್ಚ ಪ್ರಸಾದಕಃ
ಪಂಚವಕ್ತ್ರಸಮಾಯುಕ್ತಂ ಮಹಾಲಿಂಗಸ್ಯ ಲಕ್ಷಣಂ
ಜಂಗಮೋ ಲಿಂಗಮಾಚಾರೋ ಮಹಾಲಿಂಗಂ ಗುರುಸ್ತದಾ
ಪಂಚವಕ್ತ್ರಸಮಾಯುಕ್ತಃ ಪ್ರಸಾದೋ ಲಿಂಗಲಕ್ಷಣಂ
ಆಚಾರೋ ಗುರುಲಿಂಗಂ ಚ ಮಹಾಲಿಂಗಪ್ರಸಾದಕಂ
ಪಂಚವಕ್ತ್ರಸಮಾಯುಕ್ತಂ ಸತ್ಯಂ ಜಂಗಮಲಕ್ಷಣಂ
ಪ್ರಸಾದೋ ಜಂಗಮಶ್ಚೈವ ಆಚಾರೋ ಗುರುದೇವ ಚ
ಮಹಾಲಿಂಗಸಮಾಯುಕ್ತಂ ಶಿವಲಿಂಗಸ್ಯ ಲಕ್ಷಣಂ
ಜ್ಞಾನಾಚಾರೋ ಮಹಾಲಿಂಗಂ ಶಿವಲಿಂಗಂ ಚ ಜಂಗಮಃ
ಪಂಚವಕ್ತ್ರಸಮಾಯುಕ್ತಂ ಇತ್ಯೇತೇ ಗುರುಲಕ್ಷಣಂ
ಮಹಾಲಿಂಗಂ ಪ್ರಸಾದಶ್ಚ ಜಂಗಮೋ ಗುರುಲಿಂಗಕಂ
ಪಂಚವಕ್ತ್ರಸಮಾಯುಕ್ತ ಆಚಾರೋ ಲಿಂಗಲಕ್ಷಣಂ
ಅಂಗಮಾಚಾರಮಾಶ್ರಿತ್ಯ ಆಚಾರಃ ಪ್ರಾಣಮಾಶ್ರಿತಃ
ತತ್ಪ್ರಾಣೋ ಶಿವಲಿಂಗ ಚ ತಲ್ಲಿಂಗಂ ಜಂಗಮಾಶ್ರಿತಂ
ಇಂತೆಂದುದಾಗಿ,
ಕ್ಷಣದಲ್ಲಿ ಅರಿ ಲಿಂಗವನು,
ಕ್ಷಣಾರ್ಧದಲ್ಲಿ ಲಿಂಗವೂ ನಿನ್ನರಿವ.
ಕ್ಷಣಾರ್ಧದಲ್ಲಿ ಅರಿ ಭಕ್ತಕಾಯನೆಂದು.
ಪ್ರಾಣಲಿಂಗವೆಂದರಿದು
ಲಿಂಗವನು ಒಂದು ಕ್ಷಣದಲ್ಲಿ ಮರೆದಡೆ
ಕ್ಷಣಾರ್ಧದಲ್ಲಿ ಮರೆದಡೆ, ನಿನ್ನನೂ ಅಜ್ಞಾನಿಯ ಮಾಡಿ
ಆಯಸಂ ಬಡಿಸಿ ಆಸೆಗೆ ಒಪ್ಪಿಸಿ ಘಾಸಿಮಾಡದೆ ಬಿಡನು ಲಿಂಗವು.
ಕ್ಷಣಾರ್ಧದಲ್ಲಿ ಸರ್ವಪ್ರಪಂಚವೆಲ್ಲವನೂ ಮರೆದು
ನಿತ್ಯವಾಗಿ ಲಿಂಗವನರಿ ಮನವೆ.
ನಿರಂತರ ಲಿಂಗದಲ್ಲಿದ್ದು ಲಿಂಗವ ಹಾ[ಡೆ] ಸುಖಿಯಪ್ಪೆ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನೆ ಸಾಕ್ಷಿ.

ವಚನ
ಲಿಂಗವಂತನು ಲಿಂಗಾಚಾರಿ ಸದಾಚಾರಿ ಭೃತ್ಯಾಚಾರಿಯೆನಿಸಿದಡೆ
ಲಿಂಗವನೊಲಿಸಬಹುದು.
ಲಿಂಗದ ನಚ್ಚು, ಲಿಂಗವಂತರ ಮೆಚ್ಚು.
ಇದು ಸತ್ಯ ಮುಕ್ತಿ ಕೇಳಿರಣ್ಣಾ.
ಲಿಂಗವಂತನು ಪರಧನ, ಪರಸ್ತ್ರೀ, ಪರದೈವಕ್ಕಳುಪಿ
ಅಲ್ಲಿಯೇ [ವರ್ತಿಸಿ]
ಮಾಹೇಶ್ವರಶೋಭೆಯಂ ಮಾಡಿಹೆನೆಂಬ,
ಮತ್ತೆ ಲಿಂಗಾರ್ಚನೆಯಂ ಮಾಡಿಹೆನೆಂಬ,
ಲಿಂಗವನೊಲಿಸಿಹೆನೆಂಬ,
ಲಿಂಗವಂತರಲ್ಲಿ ಸಲುವೆನೆಂಬ,
ಲಿಂಗವೇನು ತೊತ್ತಿನ ಮುನಿಸೆ ?
ವೇಶ್ಯೆಯ ಸರಸವೇ ?
ವೈತಾಳಿಕನ ಕಲಹವೆ ?
ತಪ್ಪಿ ನಡೆದು, ತಪ್ಪಿ ನುಡಿದು, ತಪ್ಪಿ ಕೂಡಿ
ಮರಳಿ ಮರಳಿ ಪ್ರಯೋಗಿಸುವಂತಾಗಿ, ಅಂತಲ್ಲ ಕೇಳಿರಣ್ಣಾ.
ಪತಿವ್ರತೆಯು ಸತ್ಪುರುಷನ ಕೂಡಿದಂತೆ,
ಸಜ್ಜನಮಿತ್ರರ ಸಂಗದಂತೆ,
ಮಹಾಜ್ಞಾನಿಗಳ ಅರಿವಿನಂತೆ,
ಶುದ್ಧವಾದುದನೇ ಕೂಡಿಕೊಂಡಿಪ್ಪ, ಶುದ್ಧವಿಲ್ಲದುದನೇ ಬಿಡುವ.
ನಮ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನು
ಅಣುಮಾತ್ರ ತಪ್ಪ, ಕ್ಷಣಮಾತ್ರ ಸೈರಿಸ.

ವಚನ
ಲಿಂಗವಂತರ ಲಿಂಗವೆಂಬುದೇ ಶೀಲ,
ಲಿಂಗವಂತರ ರಾಣಿವಾಸವ ಲಿಂಗದ ರಾಣಿವಾಸವೆಂಬುದೇ ಶೀಲ,
ಲಿಂಗವಂತರ ಅರ್ಥ ಪ್ರಾಣ ಅಭಿಮಾನಕ್ಕೆ ತಪ್ಪದಿಪ್ಪುದೇ ಶೀಲ,
ಲಿಂಗವಂತರ ಪಾದೋದಕ ಪ್ರಸಾದ ಸೇವನೆಯ ಮಾಡುವುದೇ
ಮಹಾಶೀಲವಯ್ಯಾ,
ಇಂತಪ್ಪ ಶೀಲ ಸುಶೀಲದೊಳಗಾದ ಶೀಲವೇ ಶೀಲ.
ಈ ಕ್ರೀಯನರಿದು ನಂಬಿ ಭಯಭಕ್ತಿಯಿಂ
ತನು ಮನ ಧನದಲ್ಲಿ ದುರ್ಭಾವ ಹುಟ್ಟದೆ
ಸ್ವಭಾವ ಸದ್ಭಾವದಿಂ ಏಕಭಾವವಾದಡೆ, ಆತನೇ ಸದ್ಭಕ್ತನು.
ಅಂತಹ ಸದ್ಭಕ್ತದೇಹಿಕದೇವನಾಗಿಪ್ಪನು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಲಿಂಗವನರಿದ ಲಿಂಗವಂತನು ಸರ್ವಾಂಗಲಿಂಗಮೂರ್ತಿ.
ಆತನ ನುಡಿಯೆ ವೇದ, ಆತನ ನಡೆಯೆ ಶಾಸ್ತ್ರ ಪುರಾಣ ಆಗಮ ಚರಿತ್ರವು.
ಆ ಮಹಾಮಹಿಮನ ನುಡಿಯಲ್ಲಿ ತರ್ಕವ ಮಾಡಲಾಗದು.
ನಡೆಯಲ್ಲಿ ನಾಸ್ತಿಕವ ಮಾಡಿದಡೆ ನರಕ ತಪ್ಪದಯ್ಯಾ.
ಲಿಂಗವನರಿದ ಮಹಾಮಹಿಮಂಗೆ ನಮೋ ನಮೋ ಎಂಬೆನು,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಲಿಂಗವನರಿದು ಲಿಂಗಾರ್ಚನೆಯ ಮಾಡಿ
ಗುರು ಲಿಂಗ ಜಂಗಮಕ್ಕೆ, ತನು ಮನ ಧನವ ನಿವೇದಿಸಿ
ಲಿಂಗವನಲ್ಲದೆ ಅನ್ಯವನರಿಯದಿಪ್ಪ ಮಹಾಮಹಿಮನು.
ಆತನ ನುಡಿಯೇ ವೇದ, ಆತನ ನಡೆಯೇ ಆಗಮ,
ಆತ ಮಾಡಿತ್ತೇ ಶಾಸ್ತ್ರ, ಆತ ಹೇಳಿತ್ತೇ ಪುರಾಣ,
ಆತನಿದ್ದುದೇ ದೇವಲೋಕ.
ಆತನುಪಮಾತೀತನು, ಆತನ ದರ್ಶನ ಸ್ಪರ್ಶನದಿಂದ ಪಾಪಕ್ಷಯ.
ಆತನ ಪಾದೋದಕಸೇವನೆಯೊಳೆಲ್ಲರು ಜೀವನ್ಮಕ್ತರು ಕೇಳಿರಣ್ಣ.
ಆ ಮಹಾಮಹಿಮನ
ಶ್ರುತ ದೃಷ್ಟ ಅನುಮಾನದಿಂದ ವಿಚಾರಿಸಿ ನೋಡಿರಣ್ಣ,
ಬಸವರಾಜದೇವರು ಮೊದಲಾದ ಪುರಾತನರ ಚರಿತ್ರವನು.
ಅವರು ಲಿಂಗವನರಿದು ಲಿಂಗಾರ್ಚನೆಯ ಮಾಡಿ
ಗುರು ಲಿಂಗ ಜಂಗಮಕ್ಕೆ ತನು ಮನ ಧನವನರ್ಪಿಸಿ ಅಹುದೆನಿಸಿಕೊಂಡರಲ್ಲವೆ ?
ಇದನರಿತು ಆವನಾನೊಬ್ಬನು ಆಷ್ಟಾದಶವಿದ್ಯೆ
ಪುರಾಣವನೋದಿ ಕೇಳಿ ಹೇಳಿದರೇನೋ ಗಿಣಿ ಓದಿದಂತೆ ?
ಸರ್ವಸಂಗಪರಿತ್ಯಾಗಿಯಾಗಿ
ಅರಣ್ಯದೊಳಗಿದ್ದಡೇನು, ವನಚರವ್ಯಾಧನಂತೆ ?
ಭೂಪ್ರದಕ್ಷಿಣೆ ಮಾಡಿ ಬಂದಡೇನು, ಮೃಗದಂತೆ ?
ಅಶನವ ಬಿಟ್ಟಡೇನು, ಪರಾಕಿಯಂತೆ ?
ವಿಷಯವ ಬಿಟ್ಟಡೇನು, ಅಶಕ್ತನಪುಂಸಕನಂತೆ ?
ನಿದ್ರೆಯ ಬಿಟ್ಟಡೇನು, ಜಾರಚೋರರಂತೆ ?
ಸಾಮಥ್ರ್ಯಪುರುಷರೆನಿಸಿ ಖೇಚರತ್ವದಲ್ಲಿದ್ದಡೇನು, ಪಕ್ಷಿಗಳಂತೆ ?
ಜಲದಲ್ಲಿ ಚರಿಸಿ ಸಮುದ್ರಲಂಘನೆಯ ಮಾಡಿದಡೇನು, ಮತ್ಸ್ಯಾದಿಗಳಂತೆ ?
ದಾನಾದಿಗಳ ಮಾಡಿದಡೇನು, ಕ್ಷತ್ರಿಯನಂತೆ ?
ಏನ ಮಾಡಿದಡೇನು ? ಏನ ಕೇಳಿದಡೇನು ?
ಸಾಮಾಥ್ರ್ಯಪುರುಷರೆನಿಸಿಕೊಂಡರೇನು ? ಫಲವಿಲ್ಲ,
ಭಕ್ತಿಗೆ ಸಲ್ಲದು, ಮುಕ್ತಿಗೆ ಸಲ್ಲದು.
ಇದರಿದು ಶಿವಲಿಂಗಾರ್ಚನೆಯ ಮಾಡುವುದು
ಗುರು ಲಿಂಗ ಜಂಗಮಕ್ಕೆ ತನು ಮನ ಧನವ ನಿವೇದಿಸುವುದು.
ನಿವೇದಿಸಿದಡೆ ಸರ್ವಸಿದ್ಧಿಯಹುದು.
ಸಕಲಲೋಕಕ್ಕೆ ಪೂಜ್ಯನಹ,
ಇದೇ [ಸ]ಲುವ ಯುಕ್ತಿ, ಇದೆ ಸದ್ಭಕ್ತಿ, ಇದೇ ಕೇವಲ ಮುಕ್ತಿ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಲಿಂಗವನರಿಯರು ಲಿಂಗದ ಮುಖವನರಿಯರು.
ಪೂಜಿಸಲರಿಯರು ಅರ್ಚಿಸಲರಿಯರು ಅರ್ಪಿಸಲರಿಯರು.
ನಾನೇ ಭಕ್ತನು ನಾನೇ ಮಾಹೇಶ್ವರನು ನಾನೇ ಪ್ರಸಾದಿಯೆಂಬರು.
ಶಿವಾಚಾರಪರಾಙ್ಮುಖರು ನೋಡಾ.
ಶಿವ ಶಿವಾ, ಪ್ರಾಣಲಿಂಗಿ ಐಕ್ಯನೆಂಬುದು ಮಹಾಕ್ರೀ.
ಅದನೆಂತೂ ಅರಿಯರು.
ಗುರು ಲಿಂಗ ಜಂಗಮ ಒಂದೆಂಬುದನೂ
ವೇದ ಶಾಸ್ತ್ರ ಆಗಮ ಪುರಾಣ ಪುರಾತನರ ನಡೆ ನುಡಿಯಿಂದರಿದು
ಕ್ರೀಯನರಿದು ಕಾಲವನರಿದು
ಮನ ವಂಚನೆಯಿಲ್ಲದೆ ಶಿವಲಿಂಗವ ಪೂಜಿಸಬೇಕು, ಸದ್ಭಕ್ತಿಯಿಂ ಭಕ್ತನಾಗಿ.
ನ ಗುರೋರಧಿಕಂ ನ ಗುರೋರಧಿಕಂ ಎಂಬುದನರಿದು ಪರಧನ ಪರಸ್ತ್ರೀ ಪರದೈವವ ತ್ಯಜಿಸಿ ತನು ಮನ ಧನದಲ್ಲಿ ವಂಚನೆಯಿಲ್ಲದೆ ಮನೋವಾಕ್ಕಾಯಶುದ್ಧನಾಗಿ ಅಷ್ಟವಿಧಾರ್ಚನೆ ಷೋಡಶೋಪಚಾರದಿಂ ಅರ್ಚಿಸಬೇಕು ಶ್ರೀಗುರುಲಿಂಗಕ್ಕೆ ಮಾಹೇಶ್ವರನಾಗಿ. ಜಂಗಮ ಪರಶಿವನೆಂದರಿದು ಭೋಗಮೂರ್ತಿ ಎಂದರಿದು ಮನೋವಾಕ್ಯಾಯಶುದ್ಧನಾಗಿ ಧನವಂಚನೆಯಿಲ್ಲದೆ ಸರ್ವಪದಾರ್ಥ ಸರ್ವಭೋಗಂಗಳನರ್ಪಿಸಿ ಜಂಗಮಲಿಂಗಾರ್ಚನೆಯಂ ಮಾಡಿ ಜಂಗಮಪ್ರಸಾದವಂ ಪಡೆದು ಪ್ರಸಾದವ ಭೋಗಿಸಿ ಪ್ರಸಾದಿಯಾಗಿ ಜಂಗಮಲಿಂಗಾರ್ಚನೆಯಂ ಮಾಡುವುದಯ್ಯಾ ಪ್ರಸಾದಿಯಾಗಿ. ಇಂತು ಭಕ್ತ ಮಾಹೇಶ್ವರ ಪ್ರಸಾದಿ ತನುವಿಡಿದು ಏಕ ಮೂರ್ತಿಸ್ತ್ರಧಾ ಭೇದಾಃ ಎಂಬುದನರಿದು
ಕ್ರಿಯೆಯಲ್ಲಿ ಕ್ರಿಯೆಯನರಿದು
ತನುವಿಡಿದು ಸಕಲನಾಗಿ ನಡೆವ ಸ್ಥಲ ಈ ಮೂರು
ಪ್ರಾಣಲಿಂಗಿ ಶರಣನೈಕ್ಯನೆಂಬುದು ಇವು ಮೂರುಸ್ಥಲ.
ಮನವಿಡಿದು ನಡೆವುದು ನಿಷ್ಕಲಸ್ಥಲವನೊಂದುಮಾಡಿ
ಏಕೀಭವಿಸಿ ನಡೆವುದು.
ಇವು ಮೂರುಸ್ಥಲಕ್ಕೆ ನಿಷ್ಕ್ರಿಯಾಸಂಬಂಧ.
ಈ ಮಹಾವರ್ಮವನೂ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ
ನಿಮ್ಮ ಶರಣರೇ ಬಲ್ಲರು,
ವಾಙ್ಮನೋತೀತರು ಉಪಮಾತೀತರು, ಘನ ಮಹಾ[ಕ್ರೀಯ].

ವಚನ
ಲಿಂಗವಿದ್ದುದೇ ಕೈಲಾಸ, ಲಿಂಗವಿದ್ದುದೇ ಕಾಶೀಕ್ಷೇತ್ರ
ಲಿಂಗವಿದ್ದುದೇ ಅಷ್ಠಾಷಷ್ಟಿಮುಕ್ತಿಕ್ಷೇತ್ರ ಕಾಣಿರಣ್ಣಾ.
ಇದು ಕಾರಣ, ಲಿಂಗವಿದ್ದ ಠಾವ ಕೇಳಿರೆ:
ಲಿಂಗವಿದ್ದ ಠಾವು, ಭಕ್ತಕಾಯ ಮಮಕಾಯವೆಂದುದಾಗಿ
ಭಕ್ತನ ಕಾಯ ಲಿಂಗಕಾಯ,
`ಲಿಂಗಾಲಿಂಗೀ ಮಹಜ್ಜೀವಿ’ ಎಂದುದಾಗಿ
ಲಿಂಗವಂತನೇ ಲಿಂಗಪ್ರಾಣಿ ಕಾಣಿರಣ್ಣಾ.
ಇಂತೆಂದುದಾಗಿ,
ಶಿವಭಕ್ತನ ಸಂಗ ಲಿಂಗಸಂಗ,
ಶಿವಭಕ್ತನ ಪಾದವೇ ಮುಕ್ತಿ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಲಿಂಗವು ಕೊಟ್ಟ ಆಯುಷ್ಯದಲ್ಲಿ
ನಿಮಿಷಾರ್ಧ ನಿಮಿಷಾರ್ಧ ಹೆಚ್ಚಿಸಬಾರದು, ನಿಮಿಷಾರ್ಧ ಕುಂದಿಸಬಾರದು.
ಶಿವಲಿಂಗವು ಕೊಟ್ಟ ಭಾಷೆಯಲ್ಲಿ
ಕಾಣಿಯ ಕುಂದಿಸಬಾರದು, ಕಾಣಿಯ ಹೆಚ್ಚಿಸಬಾರದು.
ಹರಿಬ್ರಹ್ಮಾದಿಗಳಿಗೂ ತೃಣದಂತಪ್ಪ ಕಾರ್ಯವ ಮಾಡಬಾರದು.
ಉತ್ಪತ್ತಿ ಸ್ಥಿತಿ ಲಯಕ್ಕೆ ಶಿವನೆ ಕರ್ತನು, ಮತ್ತಾರೂ ಇಲ್ಲ.
ಇದನರಿದು ಇನ್ನೇಕನ್ಯರಾಸೆ ಮಾಡದಿರು.
ಅನ್ಯರು ಆಯುಷ್ಯ [ಭವಿಷ್ಯ] ಭೋಗಾದಿಭೋಗಂಗಳ
ಕೊಟ್ಟರೆಂಬ ಸಂತೋಷ ಬೇಡ, ಕೊಡರೆಂಬ ಕ್ಲೇಶ ಬೇಡ.
ಶಿವಾಧೀನವೆಂಬುದನರಿದು,
`ತೇನ ವಿನಾ ತೃಣಾಗ್ರಮಪಿ ನ ಚಲತಿ’
ಎಂಬುದನರಿದು ಪರಿಣಾಮಿಸು.
ಪರಿಣಾಮದಿಂ ಲಿಂಗವನರ್ಚಿಸು ಪೂಜಿಸು
ಕೇವಲ ವಿಶ್ವಾಸಂ ಮಾಡಿದಡೆ ಬೇಡಿತ್ತ ಕೊಡುವ
ಇಹಪರ ಸಿದ್ಧಿ, ನೆರೆ ನಂಬು ನಂಬು ಮನವೇ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಲಿಂಗವು ಸರ್ವಾಂಗದಲ್ಲಿ ಭರಿತವಾಗಿರಲು
ಮನ ಅರಿಯದು, ತನು ಸೋಂಕದು,
ಜ್ಞಾನ ಕಾಣಿಸದು, ಭಾವ ಮುಟ್ಟದು.
ಶಿವಶಿವಾ ವಿಶ್ವಾಸದಿಂ ಗ್ರಹಿಸಿ ಹಿಡಿಯದೆ ಕೆಟ್ಟೆ.
ಅಂತರಂಗ ಬಹಿರಂಗ ಭರಿತವಾಗಿ ಲಿಂಗವಿದಾನೆ ಇದಾನೆ.
ಮನವೇ, ನಿಮಿಷದಲಿ ವಿಶ್ವಾಸದಿಂ ಗ್ರಹಿಸಿದಡೆ
ಸತ್ಯನಪ್ಪೆ ನಿತ್ಯನಪ್ಪೆ ಮುಕ್ತನಪ್ಪೆ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಲಿಂಗವೆಂಬುದು ಪರಶಕ್ತಿಯುತ ಪರಶಿವನ ನಿಜದೇಹ,
ಲಿಂಗವೆಂಬುದು ಪರಶಿವನ ಘನತೇಜ,
ಲಿಂಗವೆಂಬುದು ಪರಶಿವನ ನಿರತಿಶಯಾನಂದಸುಖವು,
ಲಿಂಗವೆಂಬುದು ಪರಶಿವನ ಪರಮಜ್ಞಾನ,
ಲಿಂಗವೆಂಬುದು ಷಡಧ್ವಮಯ ಜಗಜ್ಜನ್ಮಭೂಮಿ,
ಲಿಂಗವೆಂಬುದು ಅಖಂಡಿತವೇದ ಪಂಚಸಂಜ್ಞೆ,
ಲಿಂಗವೆಂಬುದು ತಾ ಹರಿಬ್ರಹ್ಮರ ನಡುಮನೆಗಳ ಜ್ಯೋತಿರ್ಲಿಂಗ,
ಅಖಿಲಾರ್ಣವಾ ಲಯಾನಾಂ ಲಿಂಗಂ ಮುಖ್ಯಂ ಪರಂ ತಥಾ
ಪರಂ ಗೂಢಂ ಶರೀರಸ್ಥಂ ಲಿಂಗಕ್ಷೇತ್ರಮನಾದಿವತ್
ಯದಾದ್ಯಮೈಶ್ವರಂ ತೇಜಸ್ತಲ್ಲಿಂಗಂ ಪಂಚಸಂಜ್ಞಕಂ
ಎಂದಿದು ಲಿಂಗದ ಮರ್ಮ.
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
ಲಿಂಗದೊಳಿದ ತಿಳಿಯಬಲ್ಲವನೇ ಬಲ್ಲವನು.

ವಚನ
ಲಿಂಗವೇ ಪ್ರಾಣ, ಪ್ರಾಣವೇ ಲಿಂಗವಾದ ಪ್ರಾಣಲಿಂಗಿಯ ಪ್ರಾಣಲಿಂಗಕ್ಕೆ,
ಧ್ಯಾನಾಮೃತ ಪಂಚಾಕ್ಷರಂಗಳ ಪಂಚಾಮೃತದಿಂ ಮಜ್ಜನಕ್ಕೆರೆದು,
ಆ ಲಿಂಗಕ್ಕೆ ಮನವೇ ಪುಷ್ಪ, ಬುದ್ಧಿಯೆ ಗಂಧ, ಚಿತ್ತವೇ ನೈವೇದ್ಯ.
ಅಹಂಕಾರವಳಿದ ನಿರಹಂಕಾರದ ಆರೋಗಣೆಯ ಮಾಡಿಸಿ,
ಪರಿಣಾಮದ ವೀಳ್ಯವನಿತ್ತು, ಸ್ನೇಹದಿಂದ ವಂದನೆಯಂ ಮಾಡಿ,
ಆ ಪ್ರಾಣಲಿಂಗಕ್ಕೆ ಬಹಿರಂಗದ ಪೂಜೆಯ ಪರಿಯಲಿ
ಅಂತರಂಗದ ಪೂಜೆಯ ಮಾಡುವುದು.
ಬಹಿರಂಗದ ಪೂಜೆಯ ಪ್ರಾಣಲಿಂಗಕ್ಕೆ
ಅಂತರಂಗದ ವಸ್ತುಗಳೆಲ್ಲವನ್ನು ತಂದು,
ಬಹಿರಂಗದ ವಸ್ತುವಿನಲ್ಲಿ ಕೂಡಿ,
ಅಂತರ್ಬಹಿರುಭಯ ಲಿಂಗಾರ್ಚನೆಯ ಮಾಡಲು,
ಅಂತರಂಗ ಬಹಿರಂಗ ಭರಿತನಾಗಿಪ್ಪನಾ ಶಿವನು,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಲಿಂಗಾರ್ಚನೆಯ ಮಾಡಿ
ಪ್ರಸಾದವ ಪಡೆದು, ಪ್ರಸಾದವ ಭೋಗಿಸುವುದು.
ಅಲ್ಲಲ್ಲಿಗೆ ಹೋಗಿ ತೋಳಲಿ, ಬಳಲಿ, ಕಲ್ಲು ತಾಗಿದ ಮಿಟ್ಟೆಯ[ವೊ]ಲಾಗದೆ
ಎಲೆ ಎಲೆ ಜಡಜೀವನೆ ಮತ್ತೆಲ್ಲಿಯೂ ಅರಸ[ದಿರು].
ದೇವರೆಂಬ ಬಲ್ಲಹನ ಬಿಟ್ಟು ಕಟಕವಿಹುದೆ ?
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನ
ಶ್ರಿಪಾದದಲ್ಲರಸಿಕೊ ದೇವರೆಂಬವರನು.

ವಚನ
ಲಿಂಗಾರ್ಪಿತವ ಮಾಡಿ ಪ್ರಸಾದವನಲ್ಲದೆ ಭೋಗಿಸೆನೆಂಬ
ಪ್ರಸಾದಿಗಳಿಗೆ ಇನ್ನೆಂತಯ್ಯಾ ?
ಅನರ್ಪಿತ ಭೋಗವು ಸಂಭವಿಸಿ
ದೋಷವೇ ಪ್ರಾಪ್ತಿಯಾದ ಪರಿಯ ನೋಡಾ.
ಅದೆಂತೋ ಅನರ್ಪಿತವ ಮನದಲ್ಲಿ ನೆನೆಯಬಹುದು ?
ಅದೆಂತೋ ಅನರ್ಪಿತವ ಪಂಚೇಂದ್ರಿಯಗಳಲ್ಲಿ ಮುಟ್ಟಬಹುದು ?
ಅಕಟಕಟಾ, ಅರ್ಪಿತವಿಲ್ಲದೆ ಸರ್ವವಸ್ತುವ ಅಂಗವಿಸಿ ಭೋಗಿಸಬಹುದೆ?
ಅಂಗ ಲಿಂಗವಾಗಿ ಲಿಂಗ ಪ್ರಾಣವಾಗಿ
ಪ್ರಾಣ ಮನವಾಗಿ ಮನವು ಲಿಂಗಸ್ವಾಯತವಾಗಿ
ಭಾವಶುದ್ಧವಾನಗೆಫ ಮನವೇ ಲಿಂಗವು.
ಲಿಂಗ ಮುಂದು ಮನ ಹಿಂದಾಗಿ ಸರ್ವಕ್ರೀಯ ವರ್ತಿಸುವುದು,
ಈ ಕ್ರೀ ಸರ್ವಾರ್ಪಿತ.
ಇದು ತಾತ್ಪರ್ಯ ಕಳೆ, ಇದೇ ಅರ್ಪಿತಕ್ಕೆ ಜೀವ ಕಳೆ,
ಇಂತಹ ಮಹಿಮೆಗೆ ಸರ್ವಪ್ರಸಾದ, ಅದು:
ಪಂಚೇಂದ್ರಿಯವೆಲ್ಲವು ಲಿಂಗಾರ್ಪಿತ,
ಆತನ ಭೋಗವೆಲ್ಲವೂ ಪ್ರಸಾದಭೋಗ,
ಆತನು ಸದ್ಯೋನ್ಮುಕ್ತನಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಲಿಂಗಿನಾ ಸಹವರ್ತಿತ್ವಂ ಲಿಂಗಿನಾ ಸಹ ವಾದಿತಾ
ಲಿಂಗಿನಾ ಸಹಚಿಂತಾ ಚ ಲಿಂಗಯೋಗೋ ನ ಸಂಶಯಃ
ಶಿವಲಿಂಗದ ಮಹಾತ್ಮೆಯನು ಶಿವಲಿಂಗದ ಮರ್ಮವನು
ಶಿವಲಿಂಗದ ನಿಶ್ಚಯವನು ಇದಾರಯ್ಯ ಬಲ್ಲವರು ?
ಆರಯ್ಯ ಅರಿವವರು, ಶ್ರೀಗುರು ಕರುಣಿಸಿ ತೋರಿ ಕೊಡದನ್ನಬರ ?
ಸರ್ವೈಶ್ವರ್ಯಸಂಪನ್ನಃ ಸರ್ವೆಶತ್ವಸಮಾಯುತಃ’ ಎಂದುದಾಗಿ, ಅಣೋರಣೀಯಾನ್ ಮಹತೋ ಮಹಿಮಾನ್’
ಎಂದುದಾಗಿ,
ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ’ ಎಂದುದಾಗಿ, ವೇದಪುರುಷರಿಗೂ ಅರಿಯಬಾರದು, ಅರಿಯಬಾರದ ವಸ್ತುವ ಕಾಣಿಸಬಾರದು, ಕಾಣಿಸಬಾರದ ವಸ್ತುವ ರೂಪಿಸಲೆಂತೂ ಬಾರದು, ರೂಪಿಸಬಾರದ ವಸ್ತುವ ಪೂಜಿಸಲೆಂತೂ ಬಾರದು. ಪೂಜೆಯಿಲ್ಲಾಗಿ ಭಕ್ತಿ ಇಲ್ಲ, ಭಕ್ತಿ ಇಲ್ಲಾಗಿ ಪ್ರಸಾದವಿಲ್ಲ, ಪ್ರಸಾದವಿಲ್ಲಾಗಿ ಮುಕ್ತಿ ಇಲ್ಲ, ಮುಕ್ತಿ ಇಲ್ಲಾಗಿ ದೇವದಾನವಮಾನವರೆಲ್ಲರೂ ಕೆಡುವರು. ಕೆಡುವವರನು ಕೆಡದಂತೆ ಮಾಡಿ ರಕ್ಷಿಸಿದನು ಸದ್ಗುರು ಮದ್ಗುರು ಶ್ರೀಗುರು. ನ ಗುರೋರಧಿಕಂ ನ ಗುರೋರದಿಕಂ
ಎಂದುದಾಗಿ,
ಮಹಾಗುರು ಶಾಂತಮೂರ್ತಿ ಕೃಪಾಮೂರ್ತಿ ದಯಾಮೂರ್ತಿ
ಲಿಂಗಪ್ರತಿಷ್ಠೆಯ ಮಾಡಿದನು.
ಅದೆಂತೆನಲು ಕೇಳಿರೆ :
ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಸಹ
ನಾದಬಿಂದುಕಳಾತೀತಂ ಗುರುಣಾ ಲಿಂಗಮುದ್ಭವಂ
ಎಂದುದಾಗಿ,
ಸದ್ಗುರೋರ್ಭಾವಲಿಂಗಂ ತು ಸರ್ವಬ್ರಹ್ಮಾಂಡಗಂ ಶಿವಂ
ಸರ್ವಲೋಕಸ್ಯ ತ್ರಾಣತ್ವಾತ್ ಮುಕ್ತಿಕ್ಷೇತ್ರಂ ತದುಚ್ಯತೇ
ಎಂದುದಾಗಿ,
ಗುರುಣಾ ದೀಯತೇ ಲಿಂಗಂ’ ಸರ್ವಲೋಕಕ್ಕೆಯೂ ಸರ್ವರಿಗೆಯೂ ಲಿಂಗಪ್ರತಿಷ್ಠೆಯಂ ಮಾಡಿಕೊಟ್ಟನು ಅರೂಪೇ ಭಾವನಂ ನಾಸ್ತಿ ಯದ್ದೃಶ್ಯಂ ತದ್ವನಶ್ಯತಿ ಅದೃಶ್ಯಸ್ಯ ತು ರೂಪತ್ವೇ ಸಾದಾಖ್ಯಮಿತಿ ಕಥ್ಯತೇ ಎಂದುದಾಗಿ, ನಿಷ್ಕಳರೂಪ ನಿರವಯ ಧ್ಯಾನಪೂಜೆಗೆ ಅನುವಲ್ಲ. ಸಕಲತತ್ತ್ವ ಸಾಮಾನ್ಯವೆಂದು ಸಕಲಂ ನಿಷ್ಕಲಂ ಲಿಂಗಂ
ಎಂದುದಾಗಿ,
ಲಿಂಗಂ ತಾಪತ್ರಯಹರಂ ಎಂದುದಾಗಿ, ಲಿಂಗಂ ದಾರಿದ್ರ್ಯನಾಶನಂ
ಎಂದುದಾಗಿ,
ಲಿಂಗಂ ಪ್ರಸಾದರೂಪಂ ಚ ಲಿಂಗಂ ಸರ್ವಾರ್ಥಸಾಧನಂ ಎಂದುದಾಗಿ, ಲಿಂಗಂ ಪರಂಜ್ಯೋತಿಃ ಲಿಂಗಂ ಪರಬ್ರಹ್ಮಂ
ಎಂದುದಾಗಿ,
ಲಿಂಗವನು ಪೂಜಿಸಿ ಭಕ್ತಿಪ್ರಸಾದ ಮುಕ್ತಿಯ ಪಡೆಯಲೆಂದು
ಮಹಾದಾನಿ ಗುರುಲಿಂಗವು ಲಿಂಗಪ್ರತಿಷ್ಠೆಯಂ ಮಾಡಿಕೊಟ್ಟನು.
ಬ್ರಹ್ಮಾ ವಿಷ್ಣುಶ್ಚ ರುದ್ರಶ್ಚ ಈಶ್ವರಶ್ಚ ಸದಾಶಿವಃ
ಸರ್ವೆ ಲಿಂಗಾರ್ಚನಂ ಕೃತ್ವಾ ಜಾತಾಸ್ತೇ ಲಿಂಗಪೂಜಕಾಃ
ಗೌರೀಪತಿರುಮಾನಾಥೋ ಅಂಬಿಕಾಪಾರ್ವತೀ ಪತಿಃ
ಗಂಗಾಪತಿರ್ಮಹಾದೇವೋ ಸತತಂ ಲಿಂಗಪೂಜಕಾಃ
ಎಂದುದಾಗಿ,
ಈ ಮಹಾಪುರುಷರಪ್ಪ ದೇವಗಣ ರುದ್ರಗಣ ಪ್ರಮಥಗಣಂಗಳು
ಬ್ರಹ್ಮವಿಷ್ಣ್ವಾದಿ ದೇವದಾನವಮಾನವರುಗಳು
ಮಹಾಲಿಂಗವ ಧ್ಯಾನಿಸಿ ಪೂಜಿಸಿ ಪರಮಸುಖ ಪರಿಣಾಮವ
ಪಡೆಯಲೆಂದು ಮಾಡಿದನು ಕೇವಲ ಸದ್ಭಕ್ತಜನಕ್ಕೆ.
ಇಷ್ಟಂ ಪ್ರಾಣಸ್ತಥಾ ಭಾವಸ್ತ್ರಿಧಾ ಏಕಂ’ ಎಂದುದಾಗಿ, ಆ ಸದ್ಗುರು, ಆ ಪರಶಿವನನು ಆ ಸತ್ಪ್ರಾಣವನು ಏಕೀಭವಿಸಿ ಸದ್ಭಾವದಿಂ ಲಿಂಗಪ್ರತಿಷ್ಠೆಯ ಮಾಡಿ ಪ್ರಾಣಲಿಂಗವಾಗಿ ಕರಸ್ಥಲದಲ್ಲಿ ಬಿಜಯಂಗೈದು ಅಂತರಂಗ ಬಹಿರಂಗ ಭರಿತನಾಗಿ ಪೂಜೆಗೊಳಲೆಂದು ಕರುಣಿಸಿದನು. ಏಕಮೂರ್ತಿಸ್ತ್ರಿಧಾ ಭೇದೋ’
ಎಂದುದಾಗಿ,
ಶ್ರೀಗುರುಲಿಂಗ ಪರಶಿವಲಿಂಗ ಜಂಗಮಲಿಂಗ ಒಂದೇ;
`ದೇಶಿಕಶ್ಯರಲಿಂಗೇ ಚ ತ್ರಿವಿಧಂ ಲಿಂಗಮುಚ್ಯತೇ’
ಎಂದುದಾಗಿ,
ಲಿಂಗದ ಮರ್ಮವನು, ಲಿಂಗದ ಸಂಜ್ಞೆಯನು, ಲಿಂಗದ ನಿಶ್ಚಯವನು
ಆದಿಯಲ್ಲೂ ಧ್ಯಾನ ಪೂಜೆಯ ಮಾಡಿದವರನೂ
ಭಕ್ತಿಪ್ರಸಾದ ಮುಕ್ತಿಯ ಪಡೆದವರನೂ
ವೇದ ಶಾಸ್ತ್ರ ಪುರಾಣ ಆಗಮಂಗಳು ಹೇಳುತ್ತಿವೆ, ಶಿವನ ವಾಕ್ಯಂಗಳಿವೆ.
ಇದು ನಿಶ್ಚಯ, ಮನವೇ ನಂಬು ಕೆಡಬೇಡ.
ಮಹಾಸದ್ಭಕ್ತರನೂ ನಂಬುವುದು,
ಶಿವಲಿಂಗಾರ್ಚನೆಯ ನಿರಂತರ ಮಾಡುವುದು,
ಇದು ನಿಶ್ಚಯ, ಶಿವನು ಬಲ್ಲನಯ್ಯಾ.
ಈ ಕ್ರೀಯಲ್ಲಿ ಲಿಂಗವನರಿದು ವಿಶ್ವಾಸಂ ಮಾಡಿ
ಕೇವಲ ಸದ್ಭಕ್ತಿಯಿಂದ ಪೂಜಿಸುವುದು
ನಿರ್ವಂಚಕತ್ವದಿಂದ ತನು ಮನ ಧನವನರ್ಪಿಸುವುದು,
ಕ್ರೀಯರಿದು ಮರ್ಮವರಿದು ಸದ್ಭಾವದಿಂ ಲಿಂಗಾರ್ಚನೆಯಂ
ಮಾಡುವುದಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಲೋಕದ ಜಡಜೀವಿಗಳಿಗೆ
ಚಿದ್ವಿಭೂತಿರುದ್ರಾಕ್ಷಿಮಂತ್ರವ ಹೇಳುವನೊಬ್ಬ ಗಣದ್ರೋಹಿ ನೋಡ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಲೋಕಹಿತಾರ್ಥವಾಗಿ, ಪ್ರಾಣಿಗಳೆಲ್ಲ ಕೆಟ್ಟಹರೆಂದು
ಶರಣ ಲಿಂಗವಾಗಿ, ಲಿಂಗಭರಿತ ಶರಣನಾಗಿ ಬದುಕಿಸಿದನು ಕೇಳಿರಣ್ಣಾ.
ಯೇ ರುದ್ರಲೋಕಾದವತೀರ್ಯ ರುದ್ರಾ ಮಾನುಷ್ಯಮಾಶ್ರಿತ್ಯ ಜಗದ್ಧಿತಾಯ
ಚರಂತಿ ನಾನಾವಿಧಚಾರುಚೇಷ್ಟಾಸ್ತೇಭ್ಯೋ ನಮಸ್ತ್ರ್ಯಂಬಕಪೂಜಕೇಭ್ಯಃ
ಎಂದುದಾಗಿ,
ಶರಣರೂಪಾಗಿ ಬಂದು ಶ್ರೀಮೂರ್ತಿಯ ತೋರಿ ಪಾಪವ ಕಳೆದನು.
ಉಪಪಾತಕಕೋಟೀನಾಂ ಬ್ರಹ್ಮಹತ್ಯಶತಾನಿ ಚ
ದಹಂತ್ಯಶೇಷಪಾಪಾನಿ ಶಿವಭಕ್ತಸ್ಯ ದರ್ಶನಾತ್
ಭಕ್ತಜನಂಗಳ ಕೂಡೆ ಸಂಭಾಷಣೆಯ ಮಾಡಿ ಮಹಾಪಾತಕಂಗಳ ಕಳೆದನು.
ಮಹಾಪಾತಕಕೋಟಿಘ್ನಃ ಶ್ವಪಚೋಖಪಿ ಲಿಂಗಪೂಜಕಃ
ತತ್ಸಂಭಾಷಣಾನ್ಮುಕ್ತಿರ್ಗಣಮುಖ್ಯಗಣೇಶ್ವರಃ
ಶ್ರೀಗುರುಮೂರ್ತಿಯ ತೋರಿ ಸಂಭಾಷಣೆಯಂ ಮಾಡಿ
ಪಾದೋದಕ ಪ್ರಸಾದವನಿತ್ತು ಸಲಹಿ ರಕ್ಷಿಸಲು ಬಂದನು ಕಾಣಿರಣ್ಣಾ.
ಇದನರಿಯದೆ, ಶರಣರು ದ್ರವ್ಯಾರ್ಥಿಗಳಾಗಿ ಬಂದರೆಂಬಿರಿ,
ನಾನು ಮಾಡಿದೆನು ಶರಣರು ಮಾಡಿಸಿಕೊಂಡಹರೆಂದೆಂಬಿರಿ,
ಉಂಟೆಂದಿರಿ, ಇಲ್ಲೆಂದಿರಿ,
ಈ ಪರಿ ಅಜ್ಞಾನದಲ್ಲಿ ಕಂಡು, ನುಡಿದು, ದೋಷಿಗಳಹಿರಿ.
ಶರಣರ ಶಿವನೆಂದು ನಂಬಿಮಾಡಲು
ಸಿರಿಯಾಳನು ಮಗನ ಕೊಟ್ಟಡೆ ಕೈಲಾಸವ ಕೊಟ್ಟನು.
ದಾಸ ವಸ್ತ್ರನಿತ್ತಡೆ ಮಹಾವಸ್ತು ತವನಿಧಿಯ ಕೊಟ್ಟನು.
ಬಲ್ಲಾಳ ವಧುವನಿತ್ತಡೆ, ತನ್ನನೇ ಕೊಟ್ಟನು.
ಈ ಪರಿ ಅಣುವಿಂಗೆ ಅಣು, ಮಹತ್ತಿಂಗೆ ಮಹತ್ತವನೆ ಕೊಟ್ಟನು.
ಸಕೃತ್ ಲಿಂಗಾರ್ಚಕೇ ದತ್ವಾ ಸುವರ್ಣಂ ಚಾಣುಮಾತ್ರಕಂ
ದೇವಸಂಪೂಜ್ಯಮಾನೇಷು ಗಣಮುಖ್ಯೋ ಗಣೇಶ್ವರಃ
ಭಕ್ತಿಯಿಂ ನಂಬಿ ಮಾಡಿರೆ, ದುಭಾರ್ವಿಸಿ ಕೆಡಬೇಡ.
ಶರಣರೇ ಶಿವನೆಂದು ನಂಬಿ ಮಾಡಿರಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನ ಕೂಡುವುದಯ್ಯಾ.

ವಚನ
ವಂಚನೆಯಿಲ್ಲದುದೇ ಭಕ್ತಿ,
ಗುರು ಲಿಂಗ ಜಂಗಮ ಒಂದೆಂದರಿವುದೇ ಜ್ಞಾನ,
ಆಶೆಯಿಲ್ಲದುದೇ ವೈರಾಗ್ಯ, ಪ್ರಸಾದ ಕೇವಲ ಮುಕ್ತಿ,
ಇದು ಸತ್ಯ, ನಿತ್ಯ, ಶಿವ ಬಲ್ಲನಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ವಂಚಿಸುವ ಸತಿ ಸುತ ಬಂಧು ಮೊದಲಾದ ಲೋಕವ ನಂಬಿ,
ನಿರ್ವಂಚಕರಪ್ಪ ಗುರು ಲಿಂಗ ಜಂಗಮರ ವಂಚಿಸಿ
ನರಕಕ್ಕಿಳಿವರನೇನೆಂಬೆನಯ್ಯಾ ? ಅಕಟಕಟಾ,
ಈ ಹೀಂಗೆ ಶಿವಾಚಾರ ? ಈ ಹೀಂಗೆ ಭೃತ್ಯಾಚಾರ ?
ಭಕ್ತಿ ಮುಕ್ತಿಯನರಿಯದೆ ಹೋದರು.
ತನು ಮನ ಧನ ಕೆಟ್ಟುಹೋಹುದೆಂಬ ಯುಕ್ತಿಯನರಿಯಿರಿ.
ಇದನರಿದು, ವಂಚಿಸುವವರನೆ ವಂಚಿಸಿ
ನಿರ್ವಂಚಕರಾಗಿ ಗುರು ಲಿಂಗ ಜಂಗಮಕ್ಕೆ ದಾಸೋಹವ ಮಾಡಲು
ತನು ಕೆಡದು, ಮನ ಕೆಡದು, ಧನ ಕೆಡದು.
ಮುಕ್ತಿಯುಂಟು ಭಕ್ತಿಯುಂಟು, ಇದು ಸತ್ಯ ಶಿವ ಬಲ್ಲ, ಶಿವನಾಣೆ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ವಟಬೀಜ ವಟವೃಕ್ಷಕೋಟಿಯ ನುಂಗಿಪ್ಪಂತೆ
ಸಟೆಯಿಂದಾದ ಅಜಾಂಡ ಬ್ರಹ್ಮಾಂಡ ಕೋಟಿಗಳ ನುಂಗಿಪ್ಪ ಲಿಂಗವೇ,
ದಿಟಪುಟವಾಗಿ ಕಣ್ಣುಮನಕರಸ್ಥಲಕ್ಕೆ ಪ್ರಕಾಶವಾದೆ.
ಮಝಭಾಪು ಮಝಭಾಪು ಲಿಂಗವೇ
`ನ ಚ ರೇಣುರ್ನಚಾಕ್ಷುಷಂ ಎಂದೆನಿಸುವ ಲಿಂಗವೇ,
ನಿಮ್ಮ ಮುಟ್ಟಿ ಉತ್ಪತ್ತಿಸ್ಥಿತಿಲಯಕ್ಕೆ ಹೊರಗಾದೆನಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ವಟಬೀಜವು ವಟವೃಕ್ಷಕೋಟಿಯನೊಳಕೊಂಡಿಪ್ಪಂತೆ,
ಸಟೆಯಿಂದಲಾದಜಾಂಡಕೋಟಿಯನೊಳಕೊಂಡಿಹ ಲಿಂಗವೆ,
ಅಯಂ ಮೇ ಹಸ್ತೋ ಭಗವಾನ್’ ಎಂದೆನಿಸುವ ಲಿಂಗವೆ, ಚಕಿತಮಭಿದತ್ತೇ ಶ್ರುತಿರಪಿ’ ಎಂದೆನಿಸುವ ಲಿಂಗವೆ,
ಎನ್ನ ಕರಸ್ಥಕ್ಕೆ ಬಂದು ಸೂಕ್ಷ್ಮವಾದೆ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ವಶಿಷ್ಠಗೋತ್ರದಲ್ಲಿ ಹುಟ್ಟಿದವನು ವಶಿಷ್ಠಗೋತ್ರದವನೆಂಬಂತೆ,
ಭಾರದ್ವಾಜಗೋತ್ರದಲ್ಲಿ ಹುಟ್ಟಿದವನು ಭಾರದ್ವಾಜಗೋತ್ರದವನೆಂಬಂತೆ,
ಕಾಶ್ಯಪಗೋತ್ರದಲ್ಲಿ ಹುಟ್ಟಿದವನು ಕಾಶ್ಯಪಗೋತ್ರದವನೆಂಬಂತೆ,
ವಿಶ್ವಾಮಿತ್ರಗೋತ್ರದಲ್ಲಿ ಹುಟ್ಟಿದವನು ವಿಶ್ವಾಮಿತ್ರಗೋತ್ರದವನೆಂಬಂತೆ
ಆ ಪರಿ ಆವಾವ ಗೋತ್ರದಲ್ಲಿ ಆವಾವ ಋಷಿಗಳ ವಂಶದಲ್ಲಿ ಜನಿಸಿದವನು
ಆ ಗೋತ್ರ, ಆ ಸಂತತಿ, ಆ ಸುತನು
ಎಂಬುದು ಉಪಚರ್ಯವೆ ? ಅಸತ್ಯವೇ ಹೇಳಿರಣ್ಣಾ ?
ಅದು ತಾತ್ಪರ್ಯ, ಅದು ಸತ್ಯ.
ಆ ಪರಿ ಬ್ರಾಹ್ಮಣನ ಮಗ ಬ್ರಾಹ್ಮಣನು, ಕ್ಷತ್ರಿಯನ ಮಗ ಕ್ಷತ್ರಿಯನು,
ವೈಶ್ಯನ ಮಗ ವೈಶ್ಯನು, ಶೂದ್ರನ ಶೂದ್ರನು, ಆ ಪರಿ ತಪ್ಪದು.
ದಿಟ ದಿಟ ವಿಚಾರಿಸಿ ನೋಡಿರೆ.
ಅದು ಹೇಗೆಂದಡೆ ಶ್ರುತಿ:
ಮಹಾಬ್ರಾಹ್ಮಣಮೀಶಾನಂ’ ಎಂದುದಾಗಿ ಮತ್ತಂವಿರೂಪಾಕ್ಷಂ ದ್ವಿಜೋತ್ತಮಂ’ ಎಂದುದಾಗಿ
ಮಹಾಬ್ರಾಹ್ಮಣನೇ ಮಹಾದೇವನು.
ಇದಕ್ಕೆ ಮತ್ತೆ ಶಿವರಹಸ್ಯದಲ್ಲಿ
ಗುರುದೇವೋ ಮಹಾದೇವೋ ಗುರುದೇವಸ್ಸದಾಶಿವಃ
ಗುರುದೇವಃ ಪರಂ ತತ್ತ್ವಂ ತಸ್ಮೈ ಶ್ರೀಗುರುವೇ ನಮಃ
ಎಂದುದಾಗಿ,
ಮಹಾದೇವನೇ ಶ್ರೀಗುರು ಕಾಣಿರಣ್ಣಾ.
ಆ ಶ್ರೀಗುರುವಿನ ಕರಕಮಲದಲ್ಲಿ ಉದ್ಭವಿಸಿದ
ತಚ್ಛಿಷ್ಯನೇ ಮಹಾಬ್ರಾಹ್ಮಣನು, ಇಂತೆಂಬುದು ಹುಸಿಯಲ್ಲ.
ಜಾತಿ ಅಜಾತಿ ಎಂದು ಅಷ್ಟಾದಶಜಾತಿಯೊಳಗೆ ಇಕ್ಕಲಾಗದು.
ಅಷ್ಟಾದಶಜಾತಿಯೊಳಗೊಂದೂ ಭಾವಿಸಲಾಗದು.
ಆ ಮಹಿಮನೇ ಸತ್ಕುಲಜನು.
ಇದಕ್ಕೆ ಮತ್ತುಂ
ಬ್ರಹ್ಮಣಾ ಚರತೀ ಬ್ರಾಹ್ಮಣಃ’ ಎಂದುದಾಗಿ ಆ ಮಹಾಮಹಿಮನು ಬ್ರಹ್ಮವ ಆಚರಿಸುವನಾಗಿ ಬ್ರಾಹ್ಮಣ ಮತ್ತಂ ಕೂರ್ಮಪುರಾಣದಲಿ ಸ ಏವ ಭಸ್ಮಜ್ಯೋತಿಃ’ ಎಂದುದಾಗಿ
ವಿಭೂತಿಯ ಧರಿಸಿಪ್ಪವನಾಗಿ ಆ ಮಹಾತ್ಮನೇ ಜ್ಯೋತಿರ್ಲಿಂಗವು.
ಮತ್ತಂ ಶಿವಧರ್ಮದಲ್ಲಿ
ರುದ್ರಾಕ್ಷಂ ಧಾರಯೇನ್ನಿತ್ಯಂ ರುದ್ರಸ್ಸಾಕ್ಷಾದಿವ ಸ್ಮೃತಃ’ ಎಂದುದಾಗಿ ರುದ್ರಾಕ್ಷಿಯಂ ಧರಿಸಿಪ್ಪವ ತಾನಾಗಿ ಆ ಮಹಾಮಹಿಮನೇ ರುದ್ರನು. ಮತ್ತಂ ಕಾಳಿಕಾಗಮದಲ್ಲಿ ತಸ್ಮಿನ್ವೇದಾಶ್ಚ ಶಾಸ್ತ್ರಾಣಿ ಮಂತ್ರಃ ಪಂಚಾಕ್ಷರೀ ತಥಾ ಎಂದುದಾಗಿ,
ಶ್ರೀ ಪಂಚಾಕ್ಷರಿಯ ಜಪಿಸುವನಾಗಿ
ಆ ಮಹಿಮನೇ ವೇದವಿತ ಶಾಸ್ತ್ರಜ್ಞನು.
ಮತ್ತಂ ಲೈಂಗೇ
ಮೂಢನಾಮಪ್ಯಯುಕ್ತಾನಾಂ ಪಾಪಿನಾಂ ಚಾಭಿಚಾರಿಣಾಂ
ಯಮಲೋಕೋ ನ ವಿದ್ಯೇತ ಸದಾ ವೈ ಲಿಂಗಧಾರಣಾತ್
ಎಂದುದಾಗಿ
ಲಿಂಗವ ಧರಿಸಿಪ್ಪನಾಗಿ ಆ ಮಹಾಮಹಿಮನೇ ಲಿಂಗದೇಹಿ,
ಲಿಂಗಕಾಯನು, ಲಿಂಗಪ್ರಾಣನು
ಶಿವಲಿಂಗಾರ್ಚನೆಯಂ ಮಾಡುವನಾಗಿ, ಆ ಮಹಾಮಹಿಮನೇ ಶಿವನು
ಮತ್ತಂ ಆದಿತ್ಯಪುರಾಣೇ
ಅಕೃತ್ವಾ ಪೂಜನಂ ಶಂಭೋರ್ಯೊ ಭುಂಕ್ತೇ ಪಾಪಕೃದ್ದ್ವಿಜಃ
ಕುಣಪಂ ಚ ಮಲಂ ಚೈವ ಸಮಶ್ನಾತಿ ದಿನೇ ದಿನೇ
ಎಂದುದಾಗಿ
ಶಿವಲಿಂಗಕ್ಕೆ ಅರ್ಪಿಸದೇ ಕೊಳ್ಳನಾಗಿ ಆ ಮಹಾಮಹಿಮನೇ ರುದ್ರನು.
ಮತ್ತಂ ಶಾಂಕರಸಂಹಿತೆಯಲ್ಲಿ
ತಿಲಷೋಡಶಭಾಗಂ ತು ತೃಣಾಗ್ರಾಂಬುಕಣೋಪಮಂ
ಪಾದೋದಕಪ್ರಸಾದಾನಾಂ ಸೇವನಾನ್ ಮೋಕ್ಷಮಾಪ್ನುಯಾತ್
ಎಂದುದಾಗಿ
ಪಾದೋದಕ ಪ್ರಸಾದವಂ ಕೊಂಬನಾಗಿ
ಆ ಮಹಾತ್ಮರು ತಾನೇ ಲಿಂಗೈಕ್ಯನು.
ಇನ್ನು ನಾನಾವೇದಶಾಸ್ತ್ರಪುರಾಣಾಗಮಂಗಳ ಸಮ್ಮತ
ದೃಷ್ಟವಾಕ್ಯಂಗಳನು ವಿಚಾರಿಸಿ ನೋಡಿದಡೆಯೂ
ಶಿವಭಕ್ತನೇ ಕುಲಜನು, ಶಿವಭಕ್ತನೇ ಉತ್ತಮನು.
ಇಂತಹ ಶಿವಭಕ್ತನನು ಜಾತಿವಿಜಾತಿ ಎಂದು ಭಾವಿಸಿದಡೆ,
ಮರ್ತ್ಯನೆಂದು ಭಾವಿಸಿದಡೆ ನರಕ ತಪ್ಪದು.
ವಶಿಷ್ಠ ಪುರಾಣದಲ್ಲಿ ಕೇಳಿರೆ:
ಮರ್ತ್ಯವನ್ಮನುತೇ ಯಸ್ತು ಶಿವನಿಷ್ಠಂ ದ್ವಿಜಂ ನರಃ
ಕುಂಭೀಪಾಕೇ ತು ಪತತಿ ನರಕೇ ಕಾಲಮಕ್ಷಯಂ
ಎಂದುದಾಗಿ ಇದು ಕಾರಣ
ಅಷ್ಟಾದಶವಿದ್ಯಂಗಳನು ವಿಚಾರಿಸಿ ತಿಳಿದು ನೋಡಿದಡೆ
ಋಷಿಪುತ್ರನ ಋಷಿ ಎಂಬಂತೆ
ಶ್ರೀಗುರುಪುತ್ರನನು ಶ್ರೀಗುರು ಎಂಬುದಯ್ಯಾ.
ಆ ಮಹಾಮಹಿಮನ ದರ್ಶನವ ಮಾಡಿ ಪಾದೋದಕ ಪ್ರಸಾದವ
ಕೊಂಡು ಮುಕ್ತರಪ್ಪುದಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ವಿತ್ತಂ ಚ ರಾಜವಿತ್ತಂ ಚ ಕಾಮಿನೀ ಕಾಮಕಾವಶಾ
ಪೃಥಿವೀ ವೀರಭೋಜ್ಯಾ ಚ ಸ್ವಧನಂ ಧರ್ಮ ಏವ ಚ
ಎಂಬುದನರಿದು,
ಮಾಡಿ ಮಾಡಿ, ಮಾಹೇಶ್ವರರಿಗೆ ಧನ ಕೆಡದ ಹಾಂಗೆ.
ಅಧರ್ಮಾತ್ ಜಾಯತೇ ಕಾಮಃ ಕ್ರೋಧೋಖ ಧರ್ಮಾಚ್ಚ ಜಾಯತೇ
ಧರ್ಮಾತ್ ಸಂಜಾಯತೇ ಮೋಕ್ಷಃ ತಸ್ಮಾದ್ಧರ್ಮಂ ಸಮಾಚರೇತ್
ಎಂಬುದನರಿದು,
ಮಾಡಿ ಮಾಡಿ, ಮಾಹೇಶ್ವರರಿಗೆ ಧನ ಕೆಡದ ಹಾಂಗೆ.
ಕ್ಷಣಂ ಚಿತ್ತಂ ಕ್ಷಣಂ ವಿತ್ತಂ ಕ್ಷಣಂ ಜೀವನಮೇವ ಚ
ಯಮಸ್ಯ ಕರುಣೋ ನಾಸ್ತಿ ಧರ್ಮಸ್ಯ ತ್ವರಿತಾ ಗತಿಃ
ಎಂಬುದನರಿದು,
ಮಾಡಿ ಮಾಡಿ, ಮಾಹೇಶ್ವರರಿಗೆ.
ಇಂತು, ನಾನಾ ವೇದ ಶಾಸಸ್ತ್ರ ಪುರಾಣಾಗಮಂಗಳಲ್ಲಿ ವಿಚಾರಿಸಿ ನೋಡಿದರೆ
ಸತ್ಪಾತ್ರಕ್ಕೆ ಮಾಡಿ ಧನ ಕೆಡದ ಹಾಂಗೆ.
ಪಾತ್ರಪರೀಕ್ಷೆಗಳಲ್ಲಿ ಸತ್ಪಾತ್ರರು ಮಾಹೇಶ್ವರರು.
ಅಲ್ಲಿ ಪ್ರೇಮ ಪ್ರೀತಿ ಕಿಂಕರತೆಯಿಂದ ದಾಸೋಹವ ಮಾಡಿ ಬದುಕಿರೆ.
ನ ಮೇ ಪ್ರಿಯಶ್ಚತುರ್ವೆದೀ ಮದ್ಭಕ್ತ ಶ್ವಪಚೋಪಿ ವಾ
ತಸ್ಮೈ ದೇಯಂ ತತೋ ಗ್ರಾಹ್ಯಂ ಯಥಾ ಪೂಜ್ಯಸ್ತಧಾಹಿ ಸಃ
ಎಂಬುದನರಿದು,
ಮಾಡಿ ಮಾಡಿ, ಮಾಹೇಶ್ವರರಿಗೆ.
ನಿಕೃಷ್ಟಚಾರಜನ್ಮಾನೋ ವಿರುದ್ಧಾ ಲೋಕವೃತ್ತಿಷು
ಕೋಟಿಭ್ಯೋ ವೇದವಿದುಷಾಂ ಶ್ರೇಷ್ಠಾ ಮದ್ಭಾವಭಾವಿತಾಃ
ಎಂಬುದನರಿದು,
ಮಾಡಿ ಮಾಡಿ, ಮಾಹೇಶ್ವರರಿಗೆ.
ಚತುರ್ವೆದಧರೋ ವಿಪ್ರಃ ಶಿವಭಕ್ತಿವಿವರ್ಜಿತಃ
ದುಷ್ಟಚಾಂಡಾಲಭಾಂಡಸ್ಥಂ ಯಥಾ ಭಾಗೀರಥೀಜಲಂ
ಚುರ್ವೆದಧರೋ ವಿಪ್ರಃ ಶಿವದೀಕ್ಷಾವಿವರ್ಜಿತಃ
ತಸ್ಯ ಭೋಜನದಾನೇನ ದಾತಾ ಚ ನರಕಂ ವ್ರಜೇತ್
ಚದುರ್ವೆದಧರೋ ವಿಪ್ರಃ ಸರ್ವಶಾಸ್ತ್ರವಿಶಾರದಃ
ಶಿವಜ್ಞಾನಂ [ನ]ಜಾನಾತಿ ದರ್ವಿ ಪಾಕರಸಂ ಯಥಾ
ಎಂಬುದನರಿದು,
ಮಾಡಿ ಮಾಡಿ, ಮಾಹೇಶ್ವರರಿಗೆ.
ಇಂತು ನಾನಾವೇದಶಾಸ್ತ್ರಪುರಾಣಾಗಮಂಗಳಲ್ಲಿ
ವಿಚಾರಿಸಿ ನೋಡಿ, ಮಾಡಿ ಮಾಡಿ, ಮಾಹೇಶ್ವರರಿಗೆ.
ಫಲವ ಬಯಸಲು ಫಲವಹುದು.
ಮುಕ್ತಿಯ ಬಯಸಲು ಮುಕ್ತಿಯಹುದು.
ಅನಿಮಿತ್ತಂ ನಿಮಿತ್ತಂ ಚ ಉಪಾದಿರ್ನಿರುಪಾಧಿಕಂ
ದಾಸೋಹಯುಕ್ತ ಕರ್ಮಾ ಚ ಯಥಾ ಕರ್ಮ ತಥಾ ಫಲಂ
ಎಂಬುದನರಿದು,
ಮಾಡಿ ಮಾಡಿ, ಮಾಹೇಶ್ವರರಿಗೆ.
ಅನಾದರಾದಹಂಕಾರಾತ್ ಮೋಹಾದ್ಭೀತಿರುಪಾಧಿಕಾ
ಕೀರ್ತಿಶ್ಚ ಷಡ್ಗುಣೋ ನಾಸ್ತಿ ದಾಸೋಹಶ್ಚ ಸ್ವಯಂ ಶಿವಃ
ಎಂಬುದನರಿದು,
ಮಾಡಿ ಮಾಡಿ, ಮಾಹೇಶ್ವರರಿಗೆ.
ಕೆಡಬೇಡ ಕೆಡಬೇಡ.
ಸಾಲೋಕ್ಯಾದಪಿ ಸಾಮೀಪ್ಯಾತ್ ಸಾರೂಪ್ಯಾಚ್ಚ ಸಯುಜ್ಯಕಾತ್
ಶಿವತತ್ತ್ವಾದಿಶೇಷಶ್ಚ ಸ್ವಯಂ ದಾಸೋಹ ಉತ್ತಮಃ
ಎಂಬುದನರಿದು,
ಮಾಡಿ ಮಾಡಿ, ಮಾಹೇಶ್ವರರಿಗೆ.
ಸಕೃಲ್ಲಿಂಗಾರ್ಚಕೇ ದತ್ವಾ ವಸ್ತ್ರಮಾತ್ರಂ ಯಥೇಪ್ಸಿತಂ
ಏಕತಂತ್ರಂ ಲಭೇದ್ರಾಜ್ಯಂ ಶಿವಸಾಯುಜ್ಯಮಾಪ್ನುಯಾತ್
ಸಕೃಲ್ಲಿಂಗಾರ್ಚಕೇ ದತ್ವಾ ಗೋಷ್ಟದಂ ಭೂಮಿಮಾತ್ರಕಂ
ಭೂಲೋಕಾದಿಪತಿರ್ಭೂತ್ವಾ ಶಿವೇನ ಸಹ ಮೋದತೇ
ಸಕೃಲ್ಲಿಂಗಾರ್ಚಕೇ ದತ್ವಾ ಸುವರ್ಣಂ ಚಾಣುಮಾತ್ರಕಂ
ದೇವೈಶ್ಚ ಪೂಜ್ಯಮಾನಸ್ತು ಗಣಮುಖ್ಯೋ ಗಣೇಶ್ವರಃ
ಸಕೃಲ್ಲಿಂಗಾರ್ಚಕೇ ದತ್ವಾ ಭಿಕ್ಷಾಮಾತ್ರಂ ಚ ಸಾದರಂ
ಪದ್ಮಾನಿ ದಶಸಾಹಸ್ರಂ ಪಿತ್ರೂಣಾಂ ದತ್ತಮಕ್ಷಯಂ
ಎಂಬುದನರಿದು,
ಮಾಡಿ ಮಾಡಿ, ಮಾಹೇಶ್ವರರಿಗೆ.
ಸಾವು, ದಿಟ ದಿಟ.
ದಾಸೋಹವ ಮಾಡಲು ತನು ಕೆಡದ ಹಾಂಗೆ
ಸತ್ಪಾತ್ರದತ್ತವಿತ್ತಂ ಚ ತದ್ದಾನಾದಸುಖಂ ಭವೇತ್
ಅಪಾತ್ರದತ್ತವಿತ್ತಂ ಚ ತದ್ದಾನಾದಸುಖಂ ಭವೇತ್
ಎಂಬುದನರಿದುದಕ್ಕೆ ಸತ್ಪಾತ್ರವಾವುದೆಂದಡೆ:
ಕಿಂಚಿದ್ವೇದಮಯಂ ಪಾತ್ರಂ ಕಿಂಚಿತ್ಪಾತ್ರಂ ತಪೋಮಯಂ
ಆಗಮಿಷ್ಯತಿ ಯತ್ಪಾತ್ರಂ ತತ್ಪಾತ್ರಂ ತಾರಯಿಷ್ಯತಿ
ಸರ್ವೆಷಾಮೇವ ಪಾತ್ರಾಣಮತಿಪಾತ್ರಂ ಮಹೇಶ್ವರಃ
ಎಂಬುದನರಿದು,
ಮಾಡಿ ಮಾಡಿ, ಮಾಹೇಶ್ವರರಿಗೆ,
ನಿತ್ಯಂ ಲಿಂಗಾರ್ಚನಂ ಯಸ್ಯ ನಿತ್ಯಂ ಜಂಗಮಪೂಜನಂ
ನಿತ್ಯಂ ಗುರುಪದಧ್ಯಾನಂ ನಿತ್ಯಂ ನಿತ್ಯಂ ಸಂಶಯಃ
ಇಂತೆಂದುದಾಗಿ, ಅರಿದು
ಇದು ಕಾರಣ,
ಅರಿವನೇ ಅರಿದು, ಮರವೆಯನೇ ಮರದು,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನ[ನ]ರಿದು,
ಪೂಜಿಸಲು ಇಹಪರಸಿದ್ಧಿ ಸದ್ಯೋನ್ಮುಕ್ತಿ ಕೇಳಿರಣ್ಣಾ.

ವಚನ
ವಿಶ್ವಾಸವೆ ಭಕ್ತಿ, ಗುರುಲಿಂಗಜಂಗಮವೊಂದೆಂದರಿವುದೆ ಜ್ಞಾನ,
ತ್ರಿವಿಧದಲ್ಲಿ ನಿರ್ವಂಚನೆಯೆ ವೈರಾಗ್ಯ, ಪ್ರಸಾದವೆ ಮುಕ್ತಿ.
ಇದು ಸತ್ಯ, ಶಿವ ಬಲ್ಲ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ವೇದಂಗಳು ದೈವವೆಂಬ ವಿಪ್ರರಂತಹ ಮರುಳರುಂಟೇ ತ್ರಿಜಗದಲ್ಲಿ ?
ವೇದವೆಂಬುದೊಂದು ಸಾಧಕ ಸಂಪತ್ತು.
ವೇದಂಗಳು ಶ್ವೇತ, ಅಗಸ್ತ್ಯ, ವಿಶ್ವಾಮಿತ್ರಮುನಿಗಳಿಂದಾದವು.
ಶಬ್ದಗಾಂಭೀರ್ಯ ಶ್ರುತಿಕೋಟಿ ಚರಣಕಮಲನೆಂಬ
ಲಿಂಗದ ಕೈಯಲ್ಲಿ ಕಲಿತ ವೇದಂಗಳು
ಅಜ್ಞಾನಸಂಗವಾಗಿ ಅಗೋಚರವಾಗಿ ನುಡಿದವು.
ಋಗ್ವೇದನಾಹಂಕಾರೋ ಬ್ರಹ್ಮತೇಜಃ ಎಂದುದಾಗಿ, ಯಜುರ್ವೆದ_ನಾಹಂಕಾರೋ ಲಕ್ಷ್ಮೀಪತಿರ್ವಿಷ್ಣುತೇಜಃ ಎಂದುದಾಗಿ, ಸಾಮವೇದನಾಹಂ ದೇವೋ ರುದ್ರತೇಜಃ ಎಂದುದಾಗಿ, ಅಥರ್ವಣವೇದ_ನಾಹಂ ಸ್ಥಲಂ ಎಂದುದಾಗಿ,
ಕುಲಮದದಿಂದ ಬ್ರಹ್ಮ ಕೆಟ್ಟ, ಬಲಮದದಿಂದ ವಿಷ್ಣು ಕೆಟ್ಟ,
ದೈವಮದದಿಂದ ರುದ್ರ ಕೆಟ್ಟ, ಛಲಮದದಿಂದ ಇಂದ್ರ ಕೆಟ್ಟ,
ಇಂತೀ ನಾಲ್ಕು ಶ್ರುತಿಗಳು ತಮ್ಮ ಗರ್ವದಿಂದ
ನೂಂಕಿಸಿಕೊಂಡವು ಶಿವನ ಅರಮನೆಯ ಬಾಗಿಲಲ್ಲಿ.
ಮತ್ತಾ ಚತುರ್ವೆದಂಗಳು ಬಂದು
ಲಿಂಗದ ಚತುರ್ದಿಶೆಯಲ್ಲಿ ಓಲೈಸಿ,
ಕೈಮುಗಿದುಕೊಂಡು ಹೊಗಳುತ್ತಿದ್ದವು.
ಅದೆಂತೆಂದಡೆ ಶ್ರುತಿ,
`ಓಂ ಜಯತತ್ವಾನಾಂ ಪುರುಷಮೇರು ಕಾಮ್ಯಾನಾಂ
ಪುಣ್ಯಜಪಧ್ಯಾನಾನಾಂ ಸರ್ವಜನ್ಮವಿನಾಶಿನಾಂ
ಆದಿ ಅನಾದಿ ಪಿತ್ರೂಣಾಂ ಅಜಕೋಟಿಸಹಸ್ರವಂದ್ಯಾನಾಂ
ದೇವಕೋಟಿಚರಣಕಮಲಾನಾಂ ಎಂದು
ವೇದಂಗಳು ದೇವರ ಚರಣದ ಕುರುಹ ಕಾಣವು.
ಆದಿಯಲ್ಲಿ ನಮ್ಮ ಪುರಾತನರು ವೇದವನೋದಿದರೆ ? ಇಲ್ಲ.
ಕಲ್ಲಿಲಿಟ್ಟರು, ಕಾಲಿಲೊದೆದರು,
ಬಿಲ್ವಪತ್ರದ ಮರದ ಕೆಳಗೆ ಲಿಂಗವಂ ಪುಟ್ಟಿಸಿ ನಿಷ್ಠೆಯ ಪಡೆದರು.
ಮನೆಯ ಬಾಗಿಲ ಕಾಯಿಸಿಕೊಂಡರು,
ಆಡಿಸಿದರು, ಅಡಗಿಸಿದರು,
ಓಡಿದ ಲಿಂಗವಂ ತಂದು ಪ್ರತಿಷ್ಠೆಯಂ ಮಾಡಿದರು.
ಇಂತಪ್ಪ ದೃಷ್ಟವ ಸಾಧಿಸಿದರು ನಮ್ಮ ಪುರಾತನರು.
ನಿಮ್ಮವರು ವೇದವನೋದಿದರೆಂಬುದನರಿದು.
ಅವರನೊಲ್ಲದೆ ಬಿಟ್ಟ ಕಾಣಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ವೇದಮಾರ್ಗವ ಮೀರಿದರು ಮಹಾವೇದಿಗಳು ಲಿಂಗವಂತರು,
ಆ ಲಿಂಗವಂತರ ಮಹಾವೇದಮಾರ್ಗವ ಲಿಂಗವೇ ಬಲ್ಲನಯ್ಯಾ.
ಶಾಸ್ತ್ರಮಾರ್ಗವ ಮೀರಿದರು ಮಹಾಶಾಸ್ತ್ರಜ್ಞರು ಲಿಂಗವಂತರು.
ಆ ಲಿಂಗವಂತರ ಮಹಾಶಾಸ್ತ್ರಮಾರ್ಗವ ಲಿಂಗವೇ ಬಲ್ಲನಯ್ಯಾ.
ಆಗಮಕ್ರೀಯ ಮೀರಿದರು ಮಹಾ ಆಗಮಿಕರು ಲಿಂಗವಂತರು,
ಲಿಂಗವಂತರ ಮಹಾ ಆಗಮಕ್ರೀಯ ಲಿಂಗವೇ ಬಲ್ಲನಯ್ಯಾ.
ಪುರಾಣದ ಪರಿಯ ಮೀರಿದರು ಮಹಾಪುರಾಣಿಕರು ಲಿಂಗವಂತರು,
ಆ ಲಿಂಗವಂತರ ಪುರಾಣದ ಪರಿಯ ಆ ಲಿಂಗವೇ ಬಲ್ಲನಯ್ಯಾ.
ದೇವ ದಾನವಮಾನವರಿಗೆಯೂ ಅರಿಯಬಾರದು.
ವೇದಶಾಸ್ತ್ರಪುರಾಣಾನಿ ಸ್ಪಷ್ಟಂ ವೇಶ್ಯಾಂಗನಾ ಇವ
ಯಾ ಪುನಶ್ಶಾಂಕರೀ ವಿದ್ಯಾ ಗುಪ್ತಾ ಕುಲವಧೂರಿವ
ಎಂದುದಾಗಿ,
ಆರಿಗೆಯೂ ಅರಿಯಬಾರದು.
ಲಿಂಗವಂತರು ಉಪಮಾತೀತರು, ವಾಙ್ಮನೋತೀತರು, ಆರ ಪರಿಯೂ ಇಲ್ಲ.
ಸ್ವೇಚ್ಛಾವಿಗ್ರಹೇಣೈವ ಸ್ವೇಚ್ಛಾಚಾರಗಣೇಶ್ವರಾಃ
ಶಿವೇನ ಸಹ ತೇ ಭುಙ್ತ್ವಾ ಭಕ್ತಾ ಯಾಂತಿ ಶಿವಂ ಪದಂ
ಲೋಕಾಚಾರನಿಬಂಧೇನ ಲೋಕಾಲೋಕವಿವರ್ಜಿತಾಃ
ಲೋಕಾಚಾರಂ ಪರಿತ್ಯಜ್ಯ ಪ್ರಾಣಲಿಂಗಪ್ರಸಾದಿನಃ
ಎಂದುದಾಗಿ,
ಈ ಲೋಕದ ಮಾರ್ಗವ ನಡೆಯರು,
ಲೋಕದ ಮಾರ್ಗವ ನುಡಿಯರು.
ಲಿಂಗವಂತರ ನಡೆ ನುಡಿ ಆಚಾರ ಅನುಭವ ಆಯತ
ಬೇರೆ ಕಾಣಿರಣ್ಣಾ.
ಶ್ರೀಗುರುಲಿಂಗದಿಂದಲುದಯಿಸಿ ಪ್ರಾಣಲಿಂಗಸಂಬಂಧಿಗಳಾದ
ಮಹಾಲಿಂಗವಂತರಿಗೆ
ಪ್ರಾಣಲಿಂಗ, ಕಾಯಲಿಂಗ
ಭಕ್ತಕಾಯ ಮಮಕಾಯವಾಗಿ ದೇಹಾದಿ ತತ್ತ್ವವೆಲ್ಲಾ ಶಿವತತ್ತ್ವ.
ಇದು ಕಾರಣ,
ಸರ್ವಾಂಗಲಿಂಗಮಹಾಮಹಿಮ ಲಿಂಗವಂತರ ಕ್ರೀಯೆಲ್ಲವೂ ಲಿಂಗಕ್ರೀ.
ಮುಟ್ಟಿದುದೆಲ್ಲಾ ಅರ್ಪಿತ, ಕೊಂಡುದೆಲ್ಲಾ ಪ್ರಸಾದ.
ಸದ್ಯೋನ್ಮುಕ್ತರು, ಸರ್ವಾಂಗಲಿಂಗವಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ವೇದವನೋದಿ ಕೇಳಿ
ವೇದದ ವರ್ಮವನರಿದ ಫಲ ದಾಸೋಹವಯ್ಯಾ.
ಶಾಸ್ತ್ರವನೋದಿ ಕೇಳಿ
ಶಾಸ್ತ್ರದ ವರ್ಮವನರಿದ ಫಲ ದಾಸೋಹವಯ್ಯಾ.
ಪುರಾಣವನೋದಿ ಕೇಳಿ
ಪುರಾಣದ ವರ್ಮವನರಿದ ಫಲ ದಾಸೋಹವಯ್ಯಾ.
ಆಗಮವನೋದಿ ಕೇಳಿ
ಆಗಮದ ವರ್ಮವನರಿದ ಫಲ ದಾಸೋಹವಯ್ಯಾ.
ಪುರಾತನರ ಗೀತ ವಚನ ಪ್ರಸಂಗಾನುಭವದಲ್ಲಿ ದೃಷ್ಟಫಲ ದಾಸೋಹವಯ್ಯಾ.
ವೇದಶಾಸ್ತ್ರ ಪುರಾಣ ಆಗಮ ಪುರಾತನರ ಗೀತದ ವಚನ ಪ್ರಸಂಗವನರಿದು
ದಾಸೋಹವಿಲ್ಲದಿದ್ದಡೆ ಆ ಓದು ಗಿಳಿ ಓದಿದಂತೆ.
ಆ ಕೇಳುವೆ, ಮರುಳ ಕೇಳುವೆಯಂತೆ.
ಅವನೇತಕ್ಕೂ ಬಾರ್ತೆಯಲ್ಲಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ವೇದವನೋದಿ ಕೇಳಿದಡೇನು? ವೇದಜ್ಞನಪ್ಪನಲ್ಲದೆ ಭಕ್ತನಲ್ಲ.
ಶಾಸ್ತ್ರಗಳನೋದಿ ಕೇಳಿದಡೇನು? ಮಹಾಶಾಸ್ತ್ರಜ್ಞನಪ್ಪನಲ್ಲದೆ ಭಕ್ತನಲ್ಲ.
ಪುರಾಣವನೋದಿ ಕೇಳಿದಡೇನು? ಪುರಾಣಿಕನಪ್ಪನಲ್ಲದೆ ಭಕ್ತನಲ್ಲ.
ಆಗಮಂಗಳನೋದಿ ಕೇಳಿದಡೇನು? ಆಗಮಿಕನಪ್ಪನಲ್ಲದೆ ಭಕ್ತನಲ್ಲ.
ಇಂತೀ ಸರ್ವವಿದ್ಯೆಂಗಳನೋದಿ ಕೇಳಿದಡೇನು?
ಇದಿರ ಬೋಧಿಸಿ ಉದರವ ಹೊರೆವ ಉದರಪೋಷಕನಪ್ಪನಲ್ಲದೆ ಭಕ್ತನಲ್ಲ.
ಯಮಬಾಧೆಗಂಜಿ ಧರ್ಮವ ಮಾಡಿದಡೆ ಧರ್ಮಿಯಪ್ಪನಲ್ಲದೆ ಭಕ್ತನಲ್ಲ.
ಸ್ವರ್ಗಭೋಗಿಯಪ್ಪನಲ್ಲದೆ ಭಕ್ತನಲ್ಲ.
ಇದು ಕಾರಣ,
ಶ್ರೀಗುರು ಲಿಂಗ ಜಂಗಮಕ್ಕೆ
ತನು ಮನ ಧನವನರ್ಪಿಸುವ ಭಕ್ತಿವುಳ್ಳಡೆ
ಭಕ್ತದೇಹಿಕ ದೇವ ಪರಶಿವನು,
ಭಕ್ತಕಾಯ ಮಮಕಾಯ’ ಎಂದುದಾಗಿ. ಲಿಂಗಾಲಿಂಗೀ ಮಹಾಜೀವೀ’ ಎಂದುದಾಗಿ
ಇಂತಪ್ಪ ಮಹಾಭಕ್ತಿಯುಳ್ಳ ಭಕ್ತನ
ಸತ್ಯನೆಂಬೆ, ಮುಕ್ತನೆಂಬೆ,
ಜಂಗಮವೆಂಬೆ, ಪ್ರಸಾದಿಯೆಂಬೆ, ಪರಮಸುಖಿಯೆಂಬೆನು.
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ವೇದವಾಕ್ಯ ವಿಚಾರಕ್ಕೆ ಬೀಜ,
ಶಾಸ್ತ್ರವಾಕ್ಯ ಸಂದೇಹಕ್ಕೆ ಬೀಜ,
ಪುರಾಣವಾಕ್ಯ ಪುಣ್ಯಕ್ಕೆ ಬೀಜ,
ಭಕ್ತಿಯ ಫಲ ಭವಕ್ಕೆ ಬಿಜ,
ಏಕೋಭಾವನಿಷ್ಠೆ ಸಮ್ಯಜ್ಞಾನಕ್ಕೆ ಬೀಜ,
ಸಮ್ಯಕ್ಜ್ಞಾನ ಅದ್ವೈತಕ್ಕೆ ಬೀಜ,
ಅದ್ವೈತ ಅರಿವಿಂಗೆ ಬೀಜ.
ಅರಿವನಾರಡಿಗೊಂಡು ಕುರುಹಿಲ್ಲದ ಲಿಂಗದಲ್ಲಿ
ತೆರಹಿಲ್ಲದಿಪ್ಪಂದವನರಿಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ವೇದವಾವುದು? ವೇದ್ಯವಾವುದು? ಎಂದು ಭೇದವನರಿದಾತ ಕೃತಾರ್ಥನು.
ವೇದವೆಂಬುದಿದುವೆಂದು ವೇದಿಸಿದರು ನಮ್ಮ ಪುರಾತನರು:
ವೇದ್ಯ? `ಓಂ ನಮಃ ಶಿವಾಯ’ ಎಂಬ ಮಂತ್ರ. ವೇದ್ಯರು? ನಮ್ಮ ಶರಣರು,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ವೇದಶಾಸ್ತ್ರಪುರಾಣಾಗಮಗ್ರಂಥಂಗಳ
ನೋಡಿದವರೆಲ್ಲರೇನು ಹಿರಿಯರೆಂಬೆನೆ ? ಅಲ್ಲಲ್ಲ, ನಿಲ್ಲು, ಮಾಣು.
ಅವರೇ ಹಿರಿಯರಾದಡೆ, [ಟ್ಟುನವೆ], ಗಳೆಯಾಟ,
ಮಿಣಿಯಾಟ, ಅದೃಶ್ಯಕರಣ, ಅಗ್ನಿಸ್ತಂಭ, ಆಕರ್ಷಣ,
ಜಾಷಷ್ಠಿಕಲಾವಿದ್ಯೆಯ ಸಾಧಿಸಿದ ಡೊಂಬನೇನು ಕಿರಿಯನೇ ?
ಇದು ಹಿರಿದು ಕಿರಿದಿನ ಪರಿಯಲ್ಲ.
ಹಿರಿದು ಕಿರಿದಿನ ಪರಿ ಬೇರೆ ಕಾಣಿರಣ್ಣಾ.
ಇದು ಉದರಪೋಷಣವಿದ್ಯೆ ಎನಿಸುವುದು.
ಅವರನೆಂತು ಸರಿ ಎಂಬೆನಯ್ಯ, ಲಿಂಗವಂತಂಗೆ ?
ಇದು ಕಾರಣ, ಗುಣ, ಜ್ಞಾನ, ಧರ್ಮ, ಆಚಾರ,
ಶೀಲ ಸಾಧಿಸಿದಾತನೇ ಹಿರಿಯ ಕಾಣಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

  ಬಸವಣ್ಣನವರ ಸಂಪೂರ್ಣ ವಚನಗಳು

ವಚನ
ವೇದಶಾಸ್ತ್ರಾಗಮಪುರಾಣಿಯಾದವರಿಂದತ್ತತ್ತ ನೀನು.
ನಾದ ಬಿಂದು ಕಳಾತೀತ ಮೂರು ದೇವರರುವಿಂಗತ್ತತ್ತಗೋಚರ.
ಭೇದಿಸುವ ಭೇದಕರಿಗಭೇದ್ಯನು, ಉರಿಲಿಂಗ ಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ವೇದಾದಿ ಅಷ್ಟಾದಶವಿದ್ಯೆಗಳ ಸರ್ವಮಂತ್ರಗಳ ಮೂಲವು ಶ್ರೀಪಂಚಾಕ್ಷರಿ.
ಶಿವಾದಿಸರ್ವತತ್ತ್ವ ಮೂಲವು,
ಶ್ರೀಗುರುಲಿಂಗಜಂಗಮ ಪ್ರಾಣಸರ್ವಮೂಲವು,
ಶ್ರೀಗುರು ಕರುಣಿಸಿದ ಮಹಾಲಿಂಗದೀಕ್ಷೆ ಶಿಕ್ಷೆ
ಸರ್ವಭೋಗಾದಿ ಭೋಗಂಗಳೆಲ್ಲವಕ್ಕೆಯು
ಶಿವನ ಸಾಕಾರಮೂರ್ತಿ ಮೂಲವು,
ಜಂಗಮ ಕೇವಲ ಮುಕ್ತಿಮೂಲವು,
ದಾಸೋಹ ಜ್ಞಾನಮೂಲವು,
ಶಿವನಾಣೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ವ್ಯಾಸಾದಿಗಳಂತೆ ಶ್ವಾನಜ್ಞಾನಿಗಳಪ್ಪರೆ ಸತ್ಯಶುದ್ಧಶರಣರು ?
ನ ದೇವಃ ಕೇಶವಾತ್ಪರಂ’ ಎಂದ ವ್ಯಾಸ, ತನ್ನ ತೋಳುಗಳನೆರಡನು ಹೋಗಲಾಡನೆ ? ಹಿಡಿಯರೆ ಅಂದು ಆಕಾಶಗಣಂಗಳು ? ಮರಳಿ ಈಶ್ವರನಲ್ಲದೆ ದೈವವಿಲ್ಲೆಂದು ಶ್ರುತ್ಯರ್ಥವನರಿದು ದೇವಾರ್ಚನೆಯಂ ಮಾಡಲಾಗಿ ಆ ವ್ಯಾಸನ ಎರಡು ಕರಂಗಳು ಬಂದು, ಅಶೇಷವಹಂತಹ ಚರ್ಮ ಈಶ್ವರನ ಆಲಯದ ಮುಂದೆ ಧ್ವಜಪತಾಕೆಗಳಾಗದೆ ? ಈರೇಳು ಲೋಕವು ಅರಿಯೆ. ಅನಂತಪುರಾಣಾಗಮಗಳಲ್ಲಿ ಕೇಳಿರೆ: ಈಶ್ವರಾರ್ಚನೆಯ ಮಾಡಿ ಮರಳಿ ವಿತಥವಾಗಿ ಪರದಾರಕಿಚ್ಚೈಸಿದಡೆ ಇವಂಗಿದೆ ಪ್ರಿಯವೆಂದು ಆ ಇಂದ್ರನ ಮೈಯೆಲ್ಲಾ ಅನಂಗನಹಂತಹ ಅಂಗವಾಗದೆ ? ಈರೇಳು ಭುವನವರಿಯೆ. ಮರಳಿ ಈಶ್ವರಾರ್ಚನೆಯ ಮಾಡಲು ಆ ಅಂಗದ ಯೋನಿ[ಕೂ]ಪೆಲ್ಲಾ ನಯನಂಗಳಾಗವೆ ಇಂದ್ರಂಗೆ ? ಇದನರಿದು ಶಿವಾರ್ಚನೆಯಂ ಮಾಡಿ ಶಿವನವರಿಗೆ ಧನಸಹಿತ ತ್ರಿವಿಧವ ನಿವೇದಿಸುವುದು ಶಿವಾಚಾರ ಕೇಳಿರಣ್ಣಾ. ಅರಿದರಿದು ಬರಿದೊರೆ ಹೋಗಬೇಡ. ಋಷಿಗಳ ಶಿವಾರ್ಚನೆಯ ವಿಶೇಷವಹಂತಹ ಫಲವ ಕೇಳಿರಣ್ಣಾ: ಕೀಳುಗುಲದ ಋಷಿಗಳ ಕುಲನಾಮಂಗಳ ತೊಡೆದು ಮೇಲುಗುಲನಾಮವ ಕೇಳಿರಣ್ಣಾ. ಅದು ಹೇಗೆಂದಡೆ: ಮುಖದಿಂದುತ್ಪತ್ಯವಾದ ಬ್ರಾಹ್ಮಣನು ಆ ಋಷಿಗಳ ಶಾಖೆಯಾದನು, ಅವರ ಗೋತ್ರವಾದನು. ಶಿವಾಚಾರ ವಿಶೇಷವೊ ? ಕುಲ ವಿಶೇಷವೊ ? ಹೇಳಿರಣ್ಣಾ. ವರ್ಣಾನಾಂ ಬ್ರಾಹ್ಮಣೋ ಗುರುಃ’
ಎಂಬ ಕ್ರೂರಹೃದಯರ ಮಾತ ಕೇಳಲಾಗದು.
ಹೋಹೋ ಶಿವನ ಮುಖದಿಂದ ಹುಟ್ಟಿ
ಉತ್ತಮವಹಂತಹ ಬ್ರಾಹ್ಮಣಧರ್ಮದಲ್ಲಿ
ಜನಿಸಿದಂತಹ ವರ್ಣಿಗಳು
ಕ್ಷತ್ರಿಯನ ಭಜಿಸ ಹೇಳಿತ್ತೆ ಈ ವೇದ ?
`ಶಿವ ಏಕೋ ಧ್ಯೇಯಃ ಶಿವಂಕರಃ ಸರ್ವಮನ್ಯತ್ಪರಿತ್ಯಜೇತ್’
ಎಂದುದಾಗಿ_
ಶಿವನನೆ ಧ್ಯಾನಿಸಿ, ಇತರ ದೇವತೆಗಳ ಬಿಡಹೇಳಿತ್ತಲ್ಲವೆ ?
ಅದಂತಿರಲಿ,
ಬಡಗಿ ಮಾಚಲದೇವಿಯ ಕುಲಜೆಯ ಮಾಡಿಹೆವೆಂದು
ಸತ್ತ ಕಪಿಲೆಯ ಕಡಿದು ಹಂಚಿ ತಿನ್ನ ಹೇಳಿತ್ತೆ ವೇದ ?
ಆಗದು ಅವದಿರ ಸಂಗ.
ಅಧಮರ ವರ್ಣಾಶ್ರಮಹೀನರ
ಕರ್ಮವ ಕಳೆದೆಹೆವೆಂದು ದತ್ತಪುತ್ರರಾಗಿ
ಹೊರಸಿ[ನಡಿ]ಯಲಿ ನುಸುಳ ಹೇಳಿತ್ತೇ ಆ ವೇದ ?
ಭುಂಜಿಸಿ ಮುಕ್ತಿಯನಿತ್ತಿಹೆವೆಂದಡೆ ಅದಂತಿರಲಿ,
ಹಲ ಕೆಲ ಕಾಲ ವಂದಿಸಿದ ಗೌತಮಂಗೆ
ಬಾರದೆ ಅಂದು ಗೋವಧೆ ?
ಅದಂತಿರಲಿ,
ಬ್ರಾಹ್ಮಣರೆ ದೈವವೆಂದು ದಾನಾದಿಗಳ ಮಾಡಿದ
ಕರ್ಣನ ಶಿರಕವಚ ಹೋಗದೆ ಜಗವರಿಯೆ ?
ವಿಷ್ಣುದೈವವೆಂದರ್ಚಿಸಿದ ಬಲಿ ಬಂಧನಕ್ಕೆ ಬಾರನೆ
ಮೂಜಗವರಿಯೆ ?
ಶಿಬಿಯ ಮಾಂಸವ ಕೊಂಡು ಇತ್ತ ಮುಕ್ತಿಯ ಕೇಳಿರಣ್ಣಾ.
ಅವಂಗೆ ಬಂದ ವಿಧಿಯ ಹೇಳಲಾಗದು.
ಅದಂತಿರಲಿ,
ಶಿವನ ಭಕ್ತರಿಗೆ ಪರಮಾಣುವಿನಷ್ಟು ಕಾಂಚನವನೀಯೆ
ಅಣಿಮಾದ್ಯಷ್ಟಮಹದೈಶ್ವರ್ಯವನೀವರು, ಮೇಲೆ ಮುಕ್ತಿಯಹುದು.
ಸಕೃತ್ ಲಿಂಗಾರ್ಚಕೇ ದತ್ವಾ ಸುವರ್ಣಂ ಚಾಣುಮಾತ್ರಕಂ
ಭೂಲೋಕಾಧಿಪತಿರ್ಭೂತ್ವಾ ಶಿವ ಸಾಯುಜ್ಯಮಾಪ್ನುಯಾತ್
ಎಂದುದಾಗಿ,
ಅದಲ್ಲದೆ ಮತ್ತೆ ದಾನಪರಿಗ್ರಹಂಗಳಂ ಕೊಂಡ
ಕೆಲಬರ ಮುಕ್ತರ ಮಾಡಿ ಶಿವಲೋಕಕ್ಕೆ
ಕೊಂಡೊಯ್ದುದುಂಟಾದಡೆ ಹೇಳಿರಣ್ಣಾ ?
ನಿತ್ಯಂ ಲಿಂಗಾರ್ಚನಂ ಯಸ್ಯ ನಿತ್ಯಂ ಜಂಗಮಪೂಜನಂ
ನಿತ್ಯಂ ಗುರುಪದಧ್ಯಾನಂ ನಿತ್ಯಂ ನಿತ್ಯಂ ನ ಸಂಶಯಃ
ಇದು ಕಾರಣ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಯ್ಯನ
ಶರಣಮಹಾತ್ಮೆಯನ್ನು ಯಜುರ್ವೆದ ಸಾಕ್ಷಿಯಾಗಿ ಪೇಳುವೆ
ಕಾಶಿಯ ಕಾಂಡದಲ್ಲಿ.

ವಚನ
ಶರಣನ ಇಂದ್ರಿಯ ಕರಣಂಗಳು ಶಿವಾಚಾರದಲ್ಲಿ
ವರ್ತಿಸುವ ಪರಿಯೆಂತೆಂದಡೆ:
ಶ್ರೋತ್ರ ತ್ವಕ್ಕು ನೇತ್ರ ಜಿಹ್ವೆ ಘ್ರಾಣ ಇಂತಿವು ಪಂಚಜ್ಞಾನೇಂದ್ರಿಯಂಗಳು,
ಇವಕ್ಕೆ ವಿವರ:
ಶ್ರೋತ್ರದಲ್ಲಿ ಗುರುವಚನ, ಶಿವಾಗಮ, ಶಿವಪುರಾಣ,
ಆದ್ಯರ ವಚನವಲ್ಲದೆ ಅನ್ಯವ ಕೇಳದಿಹ.
ತ್ವಕ್ಕಿನಲ್ಲಿ ಶ್ರೀವಿಭೂತಿರುದ್ರಾಕ್ಧಿ ಶಿವಲಿಂಗವಲ್ಲದೆ
ಅನ್ಯವ ಧರಿಸದಿಹ.
ನೇತ್ರದಲ್ಲಿ ಶಿವಲಿಂಗವಲ್ಲದೆ ಅನ್ಯವ ನೋಡದಿಹ.
ಜಿಹ್ವೆಯಲ್ಲಿ ಶಿವಮಂತ್ರವಲ್ಲದೆ ಅನ್ಯವ ಸ್ಮರಿಸದಿಹ.
ಘ್ರಾಣದಲ್ಲಿ ಶಿವಪ್ರಸಾದವಲ್ಲದೆ ಅನ್ಯವ ವಾಸಿಸದಿಹ.
ಇನ್ನು ಶಬ್ದ ಸ್ಪರ್ಶ ರೂಪು ರಸ ಗಂಧ ಇಂತಿವು
ಪಂಚವಿಷಯಂಗಳು, ಇವಕ್ಕೆ ವಿವರ:
ಶಬ್ದವೆ ಗುರು, ಸ್ಪರ್ಶವೆ ಲಿಂಗ, ರೂಪೆ ಶಿವಲಾಂಛನ,
ರಸವೆ ಶಿವಪ್ರಸಾದ, ಗಂಧವೆ ಶಿವಾನುಭಾವ,
ಇನ್ನು ವಾಕು, ಪಾಣಿ, ಪಾದ, ಪಾಯು, ಗುಹ್ಯ ಇಂತಿವು
ಪಂಚಕರ್ಮೆಂದ್ರಿಯಂಗಳು. ಇವಕ್ಕೆ ವಿವರ:
ಶಿವಯೆಂಬುದೆ ವಾಕು, ಶಿವಾಚಾರಸದ್ಭಕ್ತಿವಿಡಿವುದೆ ಪಾಣಿ,
ಗುರುಮಾರ್ಗಾಚಾರದಲ್ಲಿ ಆಚರಿಸುವುದೆ ಪಾದ,
ಅಧೋಗತಿಗಿಳಿವ ಮಾರ್ಗವ ಬಿಡುವುದೆ ಪಾಯು,
ಶಿವಾನುಭಾವಿಗಳ ಸತ್ಸಂಗದಲ್ಲಿ ಆನಂದಿಸುವುದೆ ಗುಹ್ಯ.
ಇನ್ನು ಜ್ಞಾನ ಮನ ಬುದ್ಧಿ ಚಿತ್ತ ಅಹಂಕಾರ ಇಂತಿವು
ಪಂಚಕರಣಂಗಳು, ಇವಕ್ಕೆ ವಿವರ:
ಶಿವಜ್ಞಾನವೆ ಜ್ಞಾನ, ಶಿವಧ್ಯಾನವೆ ಮನ,
ಶಿವಶರಣರಲ್ಲಿ ವಂಚನೆಯಿಲ್ಲದಿಹುದೆ ಬುದ್ಧಿ, ಶಿವದಾಸೋಹವೆ ಚಿತ್ತ,
ಶಿವೋಹಂ ಭಾವವೆ ಅಹಂಕಾರ.
ಇನ್ನು ಅನ್ನಮಯ ಪ್ರಾಣಮಯ ಮನೋಮಯ ವಿಜ್ಞಾನಮಯ
ಆನಂದಮಯ ಇಂತಿವು ಪಂಚಕೋಶಂಗಳು. ಇವಕ್ಕೆ ವಿವರ:
ಅನ್ನಮಯವೆ ಪ್ರಸಾದ, ಪ್ರಾಣಮಯವೆ ಲಿಂಗ,
ಮನೋಮಯವೆ ಶಿವಧ್ಯಾನ, ವಿಜ್ಞಾನಮಯವೆ ಶಿವಜ್ಞಾನ,
ಆನಂದಮಯವೆ ಶಿವಾನಂದಮಯವಾಗಿರ್ಪುದು,
ಇಂತಿ ಸರ್ವತತ್ವಂಗಳೆಲ್ಲವು ಲಿಂಗತತ್ವಂಗಳಾದ ಕಾರಣ
ಶಿವಶರಣಂಗೆ ಶಿವಧ್ಯಾನವಲ್ಲದೆ ಮತ್ತೊಂದ ಧ್ಯಾನವಿಲ್ಲವಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಶರಣರ ಕೂಡೆ ನುಡಿ ದಿಟವಿಲ್ಲ,
ಮೇಲೆ ಇನ್ನೇನಾದೀತು ?
ತನು ಸವೆಯದು, ಮನ ಸವೆಯದು, ಧನ ಸವೆಯದು,
ಸತ್ಯದ ನುಡಿ ಸಾಧ್ಯವಾಗದು.
ಕೇಳಿ ಕೇಳಿ, ಮೇಲೆ ಇನ್ನೇನಾದೀತು ?
ಪುರಾತರ ಚರಿತ್ರವನರಿದು, ಅಸತ್ಯಕ್ಕೆ ಲಿಂಗ ಒಲಿಯನೆಂಬುದನರಿದು
ಅಸತ್ಯವನು [ನೀಗಿಸಿ] ವಾಙ್ಮನಪ್ರಾಣಾಧಿನಾಥ ಶರಣರಲ್ಲಿ
ಸತ್ಯಸಂಭಾಷಣೆಯ ಕರುಣಿಸುವುದು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಶರಣರ ಸಂಗ ಸಾಲೋಕ್ಯಪದವಯ್ಯಾ.
ಗಣಂಗಳ ಮುಖಾವಲೋಕನ ಪ್ರಿಯಸಂಭಾಷಣೆ
ಸಾಮೀಪ್ಯಪದವಯ್ಯ.
ಶ್ರೀವಿಭೂತಿ ರುದ್ರಾಕ್ಷಿ ಪ್ರಮಥರ ಶ್ರೀಮೂರ್ತಿಯ ಕಂಡು
ಮನದಲ್ಲಿ ಧರಿಸಿದಡೆ, ಸಾರೂಪ್ಯಪದವಯ್ಯಾ.
ಪುರಾತನರ ಶ್ರೀಪಾದಂಗಳಲ್ಲಿ ಎನ್ನ ಶಿರಸ್ಪರ್ಶನದಿಂದ
ಸಾಷ್ಟಾಂಗವೆರಗಲು, ಸಾಯುಜ್ಯಪದವಯ್ಯಾ.
ಇಂತೀ ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯವೆಂಬ
ಚತುರ್ವಿಧಪದವೆನಗಾಯಿತ್ತಯ್ಯಾ ನಿಮ್ಮ ಗಣಂಗಳ ಕರುಣದಿಂದ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಶರಣರಲ್ಲದವರನಾಸೆಗೈದಡೆ ಕಕ್ಕುಲತೆಯಪ್ಪುದಲ್ಲದೆ ಕಾರ್ಯವಿಲ್ಲ,
ಆಸೆಗೈದಡೆ ನಿರಾಸೆಯಪ್ಪುದು.
ಶರಣರನಾಸೆಗೈದು ಬಂದ ಶಿವಶರಣಂಗೆ ಸತಿಯ ಕೊಟ್ಟರು
ಸುತನ ಕೊಟ್ಟರು ಧನವ ಕೊಟ್ಟರು
ಅಸುವ ಕೊಟ್ಟರು ಮನವ ಕೊಟ್ಟರು
ಶರಣರ ಪರಿ ಆವ ಲೋಕದೊಳಗಿಲ್ಲ.
ಶರಣಭರಿತಲಿಂಗವಾಗಿ ಬೇಡಿತ್ತ ಕೊಡುವರಯ್ಯಾ ಶರಣರು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಶರಣಲಿಂಗಸಂಬಂಧಿಯಾದಾತನು ತನ್ನಂಗದ ಲಿಂಗದಲ್ಲಿ
ಗೋಳಕ ಕಟಿ ಭಿನ್ನವಾದಲ್ಲಿ ಒಡನೆ ಪ್ರಾಣವಂ ಬಿಡು[ವುದ]ಲ್ಲದೆ
ಬಂದಿಸಿ ಧರಿಸಿಕೊಂಡನಾದಡೆ,
ಜನ್ಮಜನ್ಮಾಂತರ ಸೂಕರನ ಬಸುರಲ್ಲಿ ಬಪ್ಪುದು ತಪ್ಪದು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಶಿವ ಜಗವಾಗಲ್ಲ, ಶಿವ ಜಗವಾಗದಿರಲೂ ಬಲ್ಲ.
ಶಿವ ರೂಪಾಗಬಲ್ಲ, ಶಿವ ರೂಪಾಗದಿರಲೂ ಬಲ್ಲ.
ಶಿವ ಅಜಾಂಡಕೋಟಿಗಳ ಮಾಡಬಲ್ಲ, ಮಾಡದಿರಲೂ ಬಲ್ಲ.
ಶಿವ ಕೆಡಿಸಬಲ್ಲ, ಕೆಡಿಸದಿರಲೂ ಬಲ್ಲ.
ಶಿವ ಜಂಗಮವಾಗಿ ಪೂಜಿಸಬಲ್ಲ.
ಶಿವ ಲಿಂಗವಾಗಿ ತಾನೇ ಪೂಜೆಯ ಕೊಳಲೂ ಬಲ್ಲ.
ಶಿವ ಹೊರಗಾಗಿ ಮತ್ತನ್ಯವಿಲ್ಲವೆಂಬ ವೇದ ಉಂಟೇ ?
ಎಂದೆಡೆ ಉಂಟು.
ಅಥರ್ವವೇದ:
`ಶಿವೋ ಉಮಾ ಪಿತರೌ ಎಂದುದಾಗಿ
ದೇವನು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನು,
ನಮಗೆಲ್ಲ ಮಾತಾಪಿತನು.

ವಚನ
ಶಿವ ತನ್ನ ವಿನೋದಕ್ಕೆ ರಚಿಸಿದನು, ಅನಂತ ವಿಶ್ವವನು.
ರಚಿಸಿದವನು ವಿಶ್ವಕ್ಕೆ ಹೊರಗಾಗಿರ್ದನೆ ? ಇಲ್ಲ.
ವಿಶ್ವಮಯ ತಾನಾದನು, ವಿಶ್ವವೆಲ್ಲವೂ ತಾನಾದಡೆ
ವಿಶ್ವದುತ್ಪತ್ತಿಸ್ಥಿತಿಲಯಕ್ಕೊಳಗಾದನೇ ? ಇಲ್ಲ.
ಅದೇನು ಕಾರಣವೆಂದಡೆ;
ಅಜಾತನಾಗಿ ಉತ್ಪತ್ತಿ ಇಲ್ಲ, ಕರ್ಮರಹಿತನಾಗಿ ಸ್ಥಿತಿಗೊಳಗಲ್ಲ.
ಮರಣರಹಿತನಾಗಿ ಲಯಕ್ಕೊಳಗಲ್ಲ, ಇಂತೀ ಗುಣತ್ರಯಂಗಳ ಹೊದ್ದಲರಿಯ.
ತಾನಲ್ಲದೆ ವಿಶ್ವಕ್ಕಾಧಾರವಿಲ್ಲಾಗಿ ದೂರಸ್ಥನಲ್ಲ.
ತನ್ನಲ್ಲಿ ತಾನಲ್ಲದ ಅನ್ಯವು ತೋರಲರಿಯದಾಗಿ, ಇದಿರಿಲ್ಲ.
ಇದಿರಿಲ್ಲಾಗಿ ವಿಶ್ವಮಯ ತಾನಾದುದೇ ಸತ್ಯ.
ಅರಸು ಕಾಲಾಳಾಗಬಲ್ಲ ತನ್ನ ವಿನೋದಕ್ಕೆ,
ಮರಳಿ ಅರಸಾಗಬಲ್ಲ.
ನಮ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನು,
ಜಗವಾಗಲೂ ಬಲ್ಲ, ಜಗವಾಗದಿರಲೂ ಬಲ್ಲನಯ್ಯ.

ವಚನ
ಶಿವ ಶಿವ ! ಪರಶಿವಮೂರ್ತಿ ಮಹಾಲಿಂಗವು
ಕರುಣಿಸಿದ ಕರುಣದಿಂದ ನಾನಂಜೆ ಅಂಜೆನು.
ವಾಙ್ಮನೋತೀತವು ಲಿಂಗವಾಗಿ
ಅಂಗದ ಮೇಲೆ ನಿರಂತರವಾಗಿ ಸನ್ನಹಿತವಾಗಿ
ಅಂಗಲಿಂಗ ಗುರುಲಿಂಗ ಏಕವಾಗಿ
[ಪ್ರಾ]ಣಲಿಂಗವಾದನಾಗಿ [ಪ್ರಾ]ಣಲಿಂಗ.
ಜಿಹ್ವೆಯಲ್ಲಿ ಮಂತ್ರಮಯ ಗುರುಲಿಂಗವಾಗಿ ಬಿಜಯಂಗೈದನಾಗಿ ಜಿಹ್ವೆಲಿಂಗ.
ಕಂಗಳಲ್ಲಿ ಶಿವಲಿಂಗಮೂರ್ತಿಯಂ ತುಂಬಿದನಾಗಿ ಕಂಗಳು ಲಿಂಗ.
ತ್ವಕ್ಕಿನಲ್ಲಿ ಜಂಗಮಲಿಂಗಮೂರ್ತಿಯಂ ತುಂಬಿದನಾಗಿ ತ್ವಕ್ಕು ಲಿಂಗ.
ಕಿವಿಗಳಲ್ಲಿ ಲಿಂಗಮಹಾತ್ಮೆಯ ಶ್ರುತಿ ಪುರಾಣ
ಪುರಾತರ ವಚನಂಗಳ ತುಂಬಿದನಾಗಿ ಶ್ರೋತ್ರ ಲಿಂಗವು.
ಶಿವನ ಶ್ರೀಪಾದಕಮಲಪ್ರಸಾದವ
ವಾಸಿಸುವಂತೆ ಮಾಡಿದನಾಗಿ ಘ್ರಾಣಲಿಂಗವು.
ಲಿಂಗವ ನಿರಂತರ ಸ್ಪರ್ಶವ ಮಾಡುವಂತೆ
ಮಾಡಿದನಾಗಿ ಹಸ್ತ ಲಿಂಗವಾದವು.
ಲಿಂಗವನೆ ಭಾವಿಸುವಂತೆ ಮಾಡಿದನಾಗಿ ಭಾವ ಲಿಂಗವು.
ಮನದಲ್ಲಿ ನೆನಹು ಭರಿತವಾಗಿ ಮನ ಲಿಂಗವು.
ಸುವಿಚಾರ ಸಂಪೂರ್ಣವ ಗ್ರಹಿಸಿತ್ತಾಗಿ ಬುದ್ಧಿ ಲಿಂಗವು.
ನಿಶ್ಚಯಪದವ ಹಿಡಿಯಿತ್ತಾಗಿ ಅಹಂಕಾರ ಲಿಂಗವು.
ನಿರಂತರ ಮರೆಯದಂತೆ ಮಾಡಿದನಾಗಿ ಚಿತ್ತ ಲಿಂಗವು.
ಇಂತು ಅಂತರಂಗ ಬಹಿರಂಗ ಲಿಂಗ, ಸರ್ವಾಂಗಲಿಂಗವ ಮಾಡಿ,
ಸದ್ಗುರುಲಿಂಗವಾಗಿ ಜಂಗಮಲಿಂಗವಾಗಿ
ಪ್ರಾಣಲಿಂಗವಾಗಿ ಪ್ರಸಾದಲಿಂಗವಾಗಿ
ಪ್ರಸಾದವನಿಕ್ಕಿ ಸಲಹಿದನು.
ಈ ಮಹಾಘನಪರಿಣಾಮವ ಶಿವ! ಶಿವ ನೀನೇ ಬಲ್ಲೆ
ಶಿವ ಶಿವ! ಮಹಾದೇವ, ಶಿವ ಶಿವ! ಮಹಾದೇವ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ನೀನೇ ಬಲ್ಲೆ.

ವಚನ
ಶಿವ ಶಿವ! ಮಹಾದೇವ ಶಿವನೇ
ನೀನು ಸರ್ವಜ್ಞನಾಗಿ ಎನ್ನನೂ ನೀನು ಬಲ್ಲೆ.
ಈ ಪರಿಯನು ಹರಿಬ್ರಹ್ಮದೇವದಾನವಮಾನವರು
ಅರಿಯದೆ ಭ್ರಮಿಸುತ್ತಮಿಪ್ಪರು.
ಈ ವಿಧಿಯನು ತಾತ್ಪಯ್ರ್ಯವೆಂದರಿದೆನಾಗಿ
ಸದ್ಯೋನ್ಮುಕ್ತನು, ನಿರಂತರ ಪರಿಣಾಮಿ, ಪರಮಸುಖಸ್ವರೂ[ಪಿ]
ನಾನೇ ಅಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಶಿವ ಶಿವ! ಮಹಾದೇವ,
ಎನ್ನ ಗುಣಾವಗುಣವರಿಯದೆ ಇದಿರ ಗುಣವ ವಿಚಾರಿಸುವೆ.
ಅವರು ವಂಚಿಸಿಹರೆಂದು ಕೊಡರೆಂದು ನಿಂದಿಸಿಹರೆಂದು
ಮಾತಾಪಿತ ಸತಿಸುತರುಗಳಿಗೆ ಸ್ನೇಹಿಸಿಹರೆಂದು
ಶಿವ ಶಿವಾ! ಬುದ್ಧಿಯನರಿಯದೆ
ನಾ ನಿಮಗೆ ವಂಚನೆಯಿಲ್ಲದೆ ಒಲಿದೆನಾದಡೆ
ನೀವೆನಗೆ ಒಳ್ಳಿದರು.
`ಸತ್ಯಭಾವಿ ಮಹತ್ಸತ್ಯಂ’ ಎಂಬುದಾಗಿ,
ನಿಮ್ಮಡಿಗಳ ಸ್ನೇಹಿತರು, ಎನಗೆ ಒಳ್ಳಿದರು.
ಸ್ನೇಹ ತಾತ್ಪರ್ಯವ ಮಾಡಿ ಬೇಡಿತ್ತನಿತ್ತು ದೇವಾ ಎನುತಿಪ್ಪರು.
ಒಳ್ಳಿತ್ತು ಹೊಲ್ಲೆಹ ಎನ್ನಲ್ಲಿ, ಇದಿರಿಂಗೆ ಅದು ಸ್ವಭಾವ ಗುಣ.
ಎನ್ನ ದುರ್ಗುಣಂಗಳ ಕಳದು ಸದ್ಗುಣವ ಮಾಡಿ
ನಿನ್ನೊಳಗು ಮಾಡಿಕೊಳ್ಳಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಶಿವ ಶಿವ! ಮಾಹೇಶ್ವರರ ಮಹಾತ್ಮೆಯನೇನೆಂದುಪಮಿಸಬಹುದಯ್ಯಾ,
ವಾಙ್ಮನೋತೀತರು.
ಕೋಟಿ ಕೋಟಿಯಾಯುಷ್ಯ ಕೋಟಿ ಕೋಟಿ ಜಿಹ್ವೆಯುಳ್ಳರೆಯೂ
ಸ್ತುತಿಸಲರಿಯದು.
ಶಂಭೋರ್ಮಾಹಾತ್ಮ್ಯಮಣುಪ್ರಮಾಣಜಾನಂತಃ ಎಂದು ಲಿಂಗದ ಮಹಾತ್ಮೆಯನು ಅಣುಪ್ರಮಾಣವೂ ಅರಿಯಬಾರದೆಂದಡೆ ಲಿಂಗವಂತರ ಮಹಾತ್ಮೆಯನೇನೆಂದುಪಮಿಸಬಹುದಯ್ಯಾ ! ಲಿಂಗಾಲಿಂಗೀ ಮಹಜ್ಜೀವೀ ಲಿಂಗಾಲಿಂಗೀ ತು ರಕ್ಷಕಃ ಲಿಂಗಾಲಿಂಗೀ ಮಮ ಸ್ವಾಮೀ ಲಿಂಗಾಲಿಂಗೀ ಮನೋಹರಃ ಈ ಪರಿ ದೇಹಲಿಂಗಕ್ಕೆ ಪ್ರಾಣಲಿಂಗಕ್ಕೆ ತಾನಾಗಿಹ ಲಿಂಗವಂತನ ಮಹಾತ್ಮೆಯನೇನೆಂದುಪಮಿಸಬಹುದಯ್ಯಾ ! ಶಿವನೇ ಬಲ್ಲ, ಶಿವನೇ ಬಲ್ಲ. ಮದ್ಭಕ್ತಜನಮಾಹಾತ್ಮ್ಯಂ ಕೋ ವಾ ಜಾನಾತಿ ತತ್ತ್ವತಃ ಜಾನೇಹಂ ತ್ವಂ ತು ಜಾನಾಸಿ ನಂದೀ ಜಾನಾತಿ ವಾ ಗುಹಃ ಶಿವನು, ನಂದೀಶ್ವರ, ಗುಹನು ಇವರೇ ಬಲ್ಲರು. ಸಜ್ಜನಶುದ್ಧಶಿವಾಚಾರಸಂಪನ್ನರಪ್ಪ ನಮ್ಮ ಸದ್ಭಕ್ತರೇ ಬಲ್ಲರು. ಸಾಮಾನ್ಯ ತರದ ದೇವದಾನವ ಮಾನವರಿಗೆಯೂ ಅರಿಯಬಾರದು. ಅದೆಂತೆನಲು ಕೇಳಿರೆ: ಬ್ರಹ್ಮ ವಿಷ್ಣು ಇಂದ್ರ ಚಂದ್ರ ರವಿ ಕಾಮ ದಕ್ಷ ಮೊದಲಾದ ದೇವಜಾತಿಗಳು, ತಾರಕ ರಾವಣಾದಿ ದಾನವರು, ವ್ಯಾಸಋಷಿಯರುಗಳು, ದಕ್ಷಾಧ್ವರಕ್ಕೆ ಬಂದ ಋಷಿಗಳನೇಕರು ವೇದಶಾಸ್ತ್ರ ಪುರಾಣ ಆಗಮಾದಿಯಾದ ಅಷ್ಟಾದಶ ವಿದ್ಯಂಗಳನೂ ಓದಿ ಕೇಳಿ ತಮ್ಮನು ಕೇಳಿದವರಿಗೆಯೂ ಹೇಳಿ, ಸರ್ವಜ್ಞರೆನಿಸಿಕೊಂಡರು. ಮಹದೈಶ್ವರ್ಯಸಂಪನ್ನರಾಗಿ ಮದಂಗಳು ಹೆಚ್ಚಿ ಶಿವನನು ಮರೆದರು. ಅಹಂ ಬ್ರಹ್ಮ’ ಎಂದು ಪರಧನ ಪರಸ್ತ್ರೀಯರಿಗೆ ಅಳುಪಿದರು.
ಶಿವಮಾಹೇಶ್ವರನಿಂದೆಯಂ ಮಾಡಿದರು.
ಈ ಪರಿಯಲೂ ತಪ್ಪಿ ನಡೆದು, ತಪ್ಪಿ ನುಡಿದು
ಹಸ್ತಚ್ಛೇದನ ಶಿರಚ್ಛೇದನವ ಮಾಡಿಕೊಂಡು ಹೋದರು.
ಅನೇಕ ಪರಿಯಲೂ ಭಂಗಿತರಾದರು. ಮಾನಹಾನಿ ಹೊಂದಿದರು,
ಕಷ್ಟಜನ್ಮಂಗಳಲ್ಲಿ ಜನಿಸಿದರು.
ಮರಳಿ ಮತ್ತೆ ಅರಿದು ಶಿವಾರಾಧನೆಯ ಮಾಡಿ, ಶಿವಸ್ತೋತ್ರಮಂ ಮಾಡಿ
ಮಾಹೇಶ್ವರರ ಪೂಜಿಸಿ, ಮರಳಿ ನಿಜಪದಂಗಳ ಹಡೆದರು.
ಈ ಪರಿಯ, ಅರಿವು ಮರವೆಯುಳ್ಳ ದ್ವಂದ್ವಗ್ರಸ್ತರು ಬಲ್ಲರೆ ?
ಮಾಹೇಶ್ವರರ ಮಹಾತ್ಮೆಯ ನಮ್ಮ ಸದ್ಭಕ್ತರೇ ಬಲ್ಲರು.
ಅದೆಂತೆಂದಡೆ ಕೇಳಿರೆ:
ವೇದಾದಿ ಅಷ್ಟದಶವಿದ್ಯಾಪರಿಚಿತರು,
ಅಂತಾಗಿ ಎಮ್ಮ ಮಾಹೇಶ್ವರರೇ ಬಲ್ಲರು.
ಉಳಿದ ದೇವ ದಾನವ ಮಾನವರುಗಳಿಗೆಯೂ ಅರಿಯಬಾರದು.
ಅಂತಪ್ಪವರಿಗೆ ಆ ವಿಧಿ.
ಇನ್ನು ಅಲ್ಪಾಯುಷ್ಯರಪ್ಪ ಮನುಷ್ಯರುಗಳಿಗೆ
ವೇದಶಾಸ್ತ್ರ ಪುರಾಣಂಗಳ ಬಹಳ ಓದಲಿಕೆ ತೆರಹಿಲ್ಲ.
ಕಿಂಚಿತ್ತೋದಿದರೂ ಕೇಳಿದರೂ ಇಲ್ಲ, ಮಹಾಜ್ಞಾನಿಗಳ ಸಂಗವಿಲ್ಲ.
ಅಹಂಕಾರಿಗಳು ಮದಾಂಧರು ಶಾಪಹತರು ಜಡಜೀವಿಗಳು ಎಂತರಿಯಬಹುದಯ್ಯಾ.
ಶಿವಮಾಹೇಶ್ವರರ ಮಹಿಮೆಯನರಿಯದ ದೋಷಿಗಳ ಕೂಡೆ ಸಂವಾದಿಸಲುಂಟೆ ?
ಅವರುಗಳ ಮನದನುವರಿತು, ಅರಿವಿನ ಹವಣಿಂದರಿದು,
ಅವಾಚಕವಾಗಿಪ್ಪುದಲ್ಲದೆ ಆ ಪಾಪಿಗಳ ನೋಡಲಾಗದು. ನುಡಿಸಲಾಗದು,
ಸಮಾನದಲ್ಲಿ ಕುಳ್ಳಿರ್ದು ತರ್ಕಿಸಲಾಗದು.
ಶಿವಜ್ಞಾನವಿಲ್ಲದವರ ಕೂಡೆ ನುಡಿಯಲು ತೆರಹುಂಟೆ ಶಿವಮಾಹೇಶ್ವರಂಗೆ ?
[ಅವರು] ಶಿವಲಿಂಗಾರ್ಚನೆಯಂ ಮಾಡಿ
ಮಹಾನುಭಾವರ ಸಂಗದಲ್ಲಿ ಅನುಭಾವಸಂಗದಲ್ಲಿಹರಲ್ಲದೆ
ಕೇಳಿರಣ್ಣಾ, ದೇವದಾನವ ಮಾನವರ ಪರಿಯಲ್ಲ.
ಎಮ್ಮ ಮಾಹೇಶ್ವರರು ಸರ್ವಾಚಾರಸಂಪನ್ನರು ಸರ್ವವಿದ್ಯಾಪರೀಕ್ಷಿತರು,
ತಾತ್ಪರ್ಯಕಳಾಗ್ರಾಹಿಗಳು, ವಿಶ್ವಾಧಿಕರು,
ಎಮ್ಮ ಮಾಹೇಶ್ವರರು ಪರಧನ ಪರಸ್ತ್ರೀಯನೊಲ್ಲರು,
ಸತ್ಯರು ನಿತ್ಯರು ನಿರುಪಾಧಿಕರು,
ನಿರಾಶಾಸಂಪೂರ್ಣರು ಪರಿಣಾಮಿಗಳು.
ಅವರ ಸಂಗದಿಂದ ಗುರುಸಿದ್ಧಿ ಲಿಂಗಸಿದ್ಧಿ ಜಂಗಮಸಿದ್ಧಿ
ಪರಸಿದ್ಧಿ ಪದಸಿದ್ಧಿ ಸರ್ವಸಿದ್ಧಿ ಮಹಾಸಿದ್ಧಿ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಶಿವ ಶಿವಾ, ನೀನೆನ್ನ ಮನವ ನೋಡಿಹೆನೆಂಬೆ.
ಎನ್ನ ಗುಣಾವಗುಣವ ಹಿಡಿವೆ.
ಮನವಾರು? ನೀನಾರು? ಎಂಬುದನರಿಯಾ.
ನೀನರಿಯದಿದ್ದಡೆ ನಾನರಿಯೆನೆ?
ನಾನರಿಯದಿದ್ದಡೆ ನೀನರಿಯಾ?
ಎಂದೆನಗೆ ನೀನು ಪ್ರಾಣಲಿಂಗವಾದೆ, ಅಂದೇ ಲಿಂಗಪ್ರಾಣಿಯಾದೆನು ನಾನು.
ಇನ್ನು ಮನಸಿನ್ನಾರದು ಹೇಳಾ?
ಅದು ಕಾರಣ ದ್ವಂದ್ವಕರ್ಮ ಮುನ್ನವೇ ನಾಸ್ತಿ.
ಇದನು ಶ್ರೀಗುರು ಲಿಂಗ ಜಂಗಮದ ಪ್ರಸಾದವೆಂದ ಶಾಸ್ತ್ರಪುರಾಣಾಗಮಂಗಳು
ಈಸಬಲ್ಲುದ ನಾ ತೋರಲೇಕಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ?

ವಚನ
ಶಿವ ಶಿವಾ, ಬಸವಣ್ಣನೇ ಗುರುತತ್ತ್ವವುಳ್ಳ ಮಹಾವಸ್ತುವಾಗಿ
ಶ್ರೀಗುರುಲಿಂಗವೂ ಬಸವಣ್ಣನೇ.
ಶಿವಸುಖಸಂಪನ್ನನಾಗಿ ಶಿವಲಿಂಗವೂ ಬಸವಣ್ಣನೇ.
ಜಂಗಮಪ್ರಾಣಿಯಾಗಿ, ಜಂಗಮಲಿಂಗವೂ ಬಸವಣ್ಣನೇ.
ಪ್ರಸಾದಗ್ರಾಹಕನಾಗಿ, ಪ್ರಸಾದಲಿಂಗವೂ ಬಸವಣ್ಣನೇ.
ಭಾವಶುದ್ಧವುಳ್ಳ ಮಹಾನುಭಾವಿಯಾಗಿ, ಭಾವಲಿಂಗವೂ ಬಸವಣ್ಣನೇ.
ಪಂಚಾಚಾರ ನಿಯತಾತ್ಮನಾಗಿ, ಆಚಾರಲಿಂಗವೂ ಬಸವಣ್ಣನೇ.
ಗುರುಲಿಂಗಜಂಗಮಕ್ಕೆ, ಎನಗೆ ಇಷ್ಟವಾಗಿ,
ಇಷ್ಟಲಿಂಗವೂ ಬಸವಣ್ಣನೇ.
ಇಂತೀ ಚತುರ್ವಿಧ ಪ್ರಾಣವಾಗಿ, ಪ್ರಾಣಲಿಂಗವೂ ಬಸವಣ್ಣನೇ.
ಮಹಾಮಹಿಮನೂ ಬಸವಣ್ಣನೇ.
ಮಹಾವಸ್ತುವ ಗರ್ಭಿಕರಿಸಿಕೊಂಡಿಪ್ಪಾತನೂ ಬಸವಣ್ಣನೇ.
ಮಹಾಸತ್ಯನೂ ಬಸವಣ್ಣನೇ, ಮಹಾನಿತ್ಯನೂ ಬಸವಣ್ಣನೇ.
ಮಹಾಶಾಂತನೂ ಬಸವಣ್ಣನೇ, ಮಹಾಸುಖಿಯೂ ಬಸವಣ್ಣನೇ.
ಮಹಾಪರಿಣಾಮಿಯೂ ಬಸವಣ್ಣನೇ, ಮಹಾಲಿಂಗವೂ ಬಸವಣ್ಣನೇ.
ಇಂತೀ ನವವಿಧಲಿಂಗವೂ ಬಸವಣ್ಣನೇ.
ಇಂತಿವನೆಲ್ಲವನೊಳಕೊಂಡು ಎನ್ನ ಕರಸ್ಥಲಕ್ಕೆ ಬಂದು
ಎನಗೆ ಪ್ರಸಾದವನಿಕ್ಕಿ ಸಲಹಿದನಯ್ಯಾ ಬಸವಣ್ಣನು.
ಇದು ಕಾರಣ, ಅನವರತ ನಾನು ಬಸವಾ, ಬಸವಾ, ಬಸವಯ್ಯಾ,
ಬಸವ ಗುರುವೇ, ಬಸವಲಿಂಗವೇ, ಬಸವ ತಂದೆಯೇ
ಬಸವಪ್ರಭುವೇ ನಮೋ ನಮೋ ಎನುತಿರ್ದೆನಯ್ಯಾ.
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಶಿವ ಶಿವಾ, ಲಿಂಗವಂತರ ಚಿತ್ತಕ್ಕೆ, ಲಿಂಗದ ಚಿತ್ತಕ್ಕೆ
ಬಹಹಾಂಗೆ ನುಡಿದು ನಡೆದು
ಸದ್ಭಕ್ತಿಯ ಮಾಡಿ ಸದ್ಭಕ್ತರೆನಿಸಿಕೊಳ್ಳಿರೆ, ಮೂಕರಾಗಿಯಿರದೆ.
ಹಿಡಿವುದ ಹಿಡಿಯದೆ, ಬಿಡುವುದ ಬಿಡದೆ ನಗೆಗೆಡೆಯಾದಿರಿ,
ಅಭಕ್ತರಾದಿರಿ, ನರಕಕ್ಕೆ ಹೋದಿರಿ.
ಹಿಡಿವುದಾವುದೆಂದಡೆ:
ಗುರು ಲಿಂಗ ಜಂಗಮ ಒಂದೆಂದು ನಂಬಿ
ಲಿಂಗವಿದ್ದುದೆಲ್ಲಾ ಲಿಂಗವೆಂದು ನಂಬಿ
ತನು ಮನ ಧನ ವಂಚನೆಯಿಲ್ಲದೆ ಅರ್ಪಿಸಿ
ಶ್ರೀಗುರುಲಿಂಗಜಂಗಮದ ಶ್ರೀಪಾದವನು
ತನು ಮನ ಧನದಲ್ಲಿ ಹಿಡಿವುದು.
ಪರಸ್ತ್ರೀ ಪರಧನ ಪರದೈವವನು, ಮನೋವಾಕ್ಕಾಯದಲ್ಲಿ
ಅಣುರೇಣು ಮಾತ್ರ ಆಸೆದೋರದೆ ಬಿಡುವುದು.
ಇವ ಬಿಟ್ಟು ನಡೆ[ದುದೆ] ನಡೆ, ಇವ ಬಿಟ್ಟೆನೆಂಬ ಸತ್ಯದ ನುಡಿಯೇ ನುಡಿ.
ಇದೇ ಆಚಾರ, ಇದೇ ವ್ರತ, ಇದೇ ಶೀಲ
ಇದೇ ಭಕ್ತಿಯ ಕುಳ, ಇದೇ ಶಿವಭಕ್ತಿಸ್ಥಳ
ಇದೇ ಸತ್ಕ್ರಿಯಾ, ಈ ಸತ್ಕ್ರಿಯೆಯಲ್ಲಿ ನಡೆದಾತನೇ ಭಕ್ತನು.
ಆತನೇ ಮುಕ್ತನಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಶಿವಂ ಪರಾತ್ಪರಂ ಸೂಕ್ಷ್ಮಂ ನಿತ್ಯಂ ಸರ್ವಗತಾವ್ಯಯಮ್
ಅನಿಂದಿತಮನಾಪಮ್ಯಮಪ್ರಮೇಯಮನಾಮಯಮ್
ಎಂದು ವೇದಾಗಮಗಳು ಹೇಳಿದ ಹಾಗೆ
ಶಿವಶಿವಾ ಹರಹರಾ ಎಂದೆನ್ನದೆ
ಭೃಗು ಶಾಪದಿಂದ ಭವಕ್ಕೆ ಬಂದು ಸತ್ತು ಕೆಟ್ಟು ಹೋದ.
ದಶರಥರಾಯನು ನಾಚಿಕೆಯಿಲ್ಲದೆ
ರಾಮ ರಾಮ ಎಂದು ನೆನೆದರೂ, ಆ ರಾಮ,
ರಾವಣನ ಕೊಂದ ಬ್ರಹ್ಮಹತ್ಯಾದೋಷಕ್ಕೆ
ಅನೇಕ ಶಿವಲಿಂಗಗಳ ಪ್ರತಿಷ್ಠೆಯ ಮಾಡಿ ಪೂಜಿಸಿದ.
ಹರಿಯು ಆ ಮಹಾಲಿಂಗವ ನೆನೆವುದಕ್ಕೆ
ನಾಲಗೆ ಮೂಗ ನಂಜುತ್ತ ಇಹನು.
ಕೃಷ್ಣನ ಅಂಗಾಲಕಣ್ಣ ಬೇಡನೆಚ್ಚು ಕೊಂದನೆಂದರೆ,
ನಾಚದೆ ಪರಿಣಮಿಸುತ್ತಿಹರು.
ನಾರಸಿಂಹನವತಾರವ ಶರಭರುದ್ರ ತೀರ್ಚಿಸಿದನೆಂದರೆ
ಉರಿದೇಳುತ್ತಿಹರು.
ಗೋವಳರೊಡನುಂಡಯೆಂದರೆ
ಪರಿಣಮಿಸಿ ಸಂತೋಷವಹರು.
ಆ ಹರಿ ರಾಮೇಶ್ವರದೇವರ ಪ್ರಸಾದವ ಕೊಂಡನೆಂದರೆ
ಅವಮಾನಿಸುತ್ತಿಹರು.
ಸತ್ತು ಕೆಟ್ಟು ಹುಟ್ಟಿದ ಅಜ್ಞಾನಿ ವಸುದೇವನ ಮಗ
ಹರಿಯೆಂದರೆ ನಲಿದುಬ್ಬುವರು.
ಆ ಹರಿ ಮಹಾದೇವನ ಮಗನೆಂದರೆ
ಸಿಡಿಮಿಡಿಗೊಂಬರು.
ಹಲವು ಗಂಡರ ನೆರೆದ ಕುಂತಿಯ ಕಾಲಿಗೆ
ಹರಿ ಎರಗಿದನೆಂದರೆ ನಲಿದುಬ್ಬಿ ಕೊಂಡಾಡುವರು.
ಆ ಹರಿ ಕಾಮಿತಫಲದಾಯ[ಕ]ನಾದ ಶಿವನ ಶ್ರೀಪಾದಕ್ಕೆ
ನಯನಕಮಲಮನರ್ಪಿಸಿ ಚಕ್ರಮಂ ಪಿಡಿದನೆಂದರೆ
ಚಿಂತಿಸಿ [ಕರ]ಕರಸುತ್ತಿಹರು.
ದ್ವಾರವತಿ ನೀರಿಲಿ ನೆರೆದಾಗ, ಕೃಷ್ಣನ ಹದಿನಾರುಸಾವಿರ ಸ್ತ್ರೀಯರಂ
ಹೊಲೆಬೇಡರು ಸೆರೆಯನೊಯ್ದುದಕ್ಕಾಗಿ
ಹೀನಜಾತಿಯ ಬಸುರಲ್ಲಿ ಉತ್ತಮಸ್ತ್ರೀಯರು
ಹುಟ್ಟುವರೆಂದು ನಲಿದಾಡುವರು.
ಮಹಾಲಕ್ಷ್ಮಿ ಸರ್ವರೊಡೆಯ ಶಿವನ ದಾಸಿಯೆಂದರೆ
ಅಲಗು ತಾಕಿದಂತೆ ನೋವುತಿಹರು.
ಶಿವಲಿಂಗವ ತಪಧ್ಯಾನದಿಂದರ್ಚಿಸಿ ಪೂಜಿಸಿ ಪಡೆದರು
ಏಕಾದಶರುದ್ರರಾದಿಯಾದ ರುದ್ರಗಣಂಗಳು.
ಬ್ರಹ್ಮವಿಷ್ಣುರುಗಳು ಇಂದ್ರಾದಿ ದಿಕ್ಪಾಲರು ರವಿಚಂದ್ರಾದಿಗಳು
ಶಿವನ ಪೂಜಿಸಿ ಕಾಮಿತಫಲಪದವಿಯ ಪಡೆದರಯ್ಯ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಶಿವನು ನರಕಾಯವ ತೊಟ್ಟು ಗುರುರೂಪಾಗಿ ಮರ್ತ್ಯಕ್ಕೆ ಬಂದು
ಅಷ್ಟಾದಶಜಾತಿಯೊಳಗಿದ್ದಡೇನು ಮರ್ತ್ಯನೇ ? ಅಲ್ಲ.
ಅದೆಂತೆಂದಡೆ:ಶಿವರಹಸ್ಯೇ
ಗುರುದೇವೋ ಮಹಾದೇವೋ ಗುರುದೇವಸ್ಸದಾಶಿವಃ
ಗುರುದೇವಾತ್ಪರಂ ನಾಸ್ತಿ ತಸ್ಮೈ ಶ್ರೀಗುರವೇ ನಮಃ
ಎಂದುದಾಗಿ,
ಮಹಾದೇವನು ತಾನೇ_
ಲಲಾಟಲೋಚನಂ ಚಾಂದ್ರೀಕಲಾಮಪಿ ಚ ದೋದ್ರ್ವಯು
ಅಂತರ್ನಿಧಾಯ ವರ್ತೆಹಂ ಗುರುರೂಪೋ ಮಹೇಶ್ವರಿ
ಎಂದುದಾಗಿ,
ಶಿವನು ಗುರುರೂಪಾಗಿ ವರ್ತಿಸುತ್ತಿಹನು.
ಪರಶಿವೋ ಗುರುಮೂರ್ತಿಶ್ಶಿಷ್ಯದೀಕ್ಷಾದಿಕಾರಣಾತ್
ಶಿಷ್ಯಾತೀತಂ ಮಹಾಚೋದ್ಯಂ ಚೋದ್ಯರೂಪಾಯ ವೈ ನಮಃ
ಎಂದುದಾಗಿ,
ಶಿಷ್ಯಂಗೆ ಕರುಣಿಸಿ ದೀಕ್ಷೆಯಂ ಮಾಡಬೇಕೆಂದು ಬಂದನಯ್ಯಾ,
ಮಹಾಕಾರುಣ್ಯಮೂರ್ತಿ ಪರಮಶಿವನು ತಾನೆ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಶಿವನು ಸರ್ವಗತನು, ಸಕಲಬ್ರಹ್ಮಾಂಡಗಳಿಗೆಲ್ಲ ಸಕಲನೆಂದು ಹೇಳಿತ್ತು ಶ್ರುತಿ.
`ವಿಶ್ವತಶ್ಚಕ್ಷುರುತ ವಿಶ್ವಾಧಿಕೋ ರುದ್ರೋ
ಮಹಾಋಷಿಸ್ಸರ್ವೊ ಹಿ ರುದ್ರಃ’ ಎಂದು ಶ್ರುತಿ
ಸಕಲಜೀವಚೈತನ್ಯ ಶಿವನೆಂದು ಹೇಳಿತ್ತು,
ಇಂತಪ್ಪ ಶಿವಲಿಂಗಾರ್ಚನೆಯ ಮಾಡುವ
ಸದ್ಭಕ್ತರ ಶ್ರೀಮೂರ್ತಿಗಿನ್ನು ಸರಿ ಉಂಟೆ ?
ವಾಚಾತೀತಂ ಮನೋತೀತಂ ಭಾವಾತೀತಂ ಪರಂ ಶಿವಂ
ಸರ್ವಶೂನ್ಯಂ ನಿರಾಕಾರಂ ನಿತ್ಯಂ ತತ್ಪರಮಂ ಪದಂ
ಇಂತಪ್ಪ ಶರಣರ ಕಂಡಡೆ ಕರ್ಮಕ್ಷಯ,
ನೋಡಿ ನುಡಿಸಿ ಏಕರಾತ್ರಿ ಸಂಭಾಷಣೆಯ ಮಾಡಿದಡೆ
ಜನ್ಮಕರ್ಮನಿವೃತ್ತಿ, ಜೀವನ್ಮುಕ್ತನಹನು ಇದು ಸತ್ಯ ಕೇಳಿರಣ್ಣಾ.
ದರ್ಶನಾತ್ ಶಿವಭಕ್ತಾನಾಂ ಸಕೃತ್ಸಂಭಾಷಣಾದಪಿ
ಅತಿರಾತ್ರಸ್ಯ ಯಜ್ಞಸ್ಯ ಫಲಂ ಭವತಿ ನಾರದ
ಎಂದು ನಾರದೀಯ ಬೋಧೆಯಲ್ಲಿ ಈಶ್ವರನು ಹೇಳಿಹನು.
ಇಂತಪ್ಪ ಈಶ್ವರನ ಕಾಣವು ವೇದಂಗಳು.
ಇಂತು ವೇದಕ್ಕತೀತವಹಂತಹ ಶಿವಶರಣರ
ಮಹಾತ್ಮೆಯ ಹೊಗಳಲಿಕ್ಕೆ ವೇದಕ್ಕಳವಲ್ಲ,
ಮಂದಮತಿ ಮಾನವರ ಮಾತದಂತಿರಲಿ.
ಶಿವಶರಣರ ಮಹಾಮಹಿಮೆಗೆ ನಮೋ ನಮೋ ಎನುತಿಪ್ಪೆ ಕಾಣಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಶಿವನೆ, ನಿಮ್ಮ ನಾ ಬಲ್ಲೆನು.
`ಗುರುದೇವೋ ಮಹಾದೇವೋ’ ಎಂದುದಾಗಿ
ಶ್ರೀಗುರು ರೂಪಾಗಿ ಬಂದು ದೀಕ್ಷೆಯಂ ಮಾಡಿ
ಶಿವಲಿಂಗವ ಬಿಜಯಂಗೈಸಿ ಕೊಟ್ಟಿರಿ, ಜಂಗಮವ ತೋರಿದಿರಿ.
ಇದು ಕಾರಣ,
ನಿಮ್ಮ ನಾ ಬಲ್ಲೆನು, ಎನ್ನನೂ ನೀವು ಬಲ್ಲಿರಿ.
ನಿಮ್ಮ ಶಿಶುವೆಂದು ಕರುಣಿಸಿ ಪ್ರಸಾದವನಿಕ್ಕಿ ರಕ್ಷಸಿದಿರಿ.
ಇದು ಕಾರಣದಿಂದವೂ,
ನಿಮ್ಮ ನಾ ಬಲ್ಲೆನು, ಎನ್ನನೂ ನೀವು ಬಲ್ಲಿರಿ.
ಮತ್ತೆ ಮರೆಮಾಡಿ,
ಜ್ಞಾನವನೂ ಅಜ್ಞಾನವನೂ, ಭಕ್ತಿಯನೂ ಅಭಕ್ತಿಯನೂ
ಸುಖವನೂ ದುಃಖವನೂ ಒಡ್ಡಿ ಕಾಡಿದಿರಯ್ಯಾ .
ಇವೆಲ್ಲವಕ್ಕೆಯೂ ನೀವೆ ಕಾರಣ.
ಇದು ಕಾರಣ,
ನಿಮ್ಮ ಬೇರಬಲ್ಲವರಿಗೆ ಎಲೆಯ ತೋರಿ
ಆಳವಾಡಿ ಕಾಡುವರೆ ? ಕಾಡದಿರಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಶಿವನೇ ದೈವ, ಶಿವಭಕ್ತನೇ ಕುಲಜ, ಷಡಕ್ಷರವೇ ಮಂತ್ರ,
ಕೊಲ್ಲದಿರ್ಪುದೇ ಧರ್ಮ, ಅಧರ್ಮದಿಂದ ಬಂದುದ ಒಲ್ಲದಿಪ್ಪುದೇ ನೇಮ,
ಆಶೆ ಇಲ್ಲದಿಪ್ಪುದೇ ತಪ, ರೋಷವಿಲ್ಲದಿಪ್ಪುದೇ ಜಪ,
ವಂಚನೆ ಇಲ್ಲದಿಪ್ಪುದೇ ಭಕ್ತಿ,
ಹೆಚ್ಚು ಕುಂದಿಲ್ಲದಿಪ್ಪುದೇ ಸಮಯಾಚಾರ.
ಇದು ಸತ್ಯ, ಶಿವಬಲ್ಲ, ಶಿವನಾಣೆ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಶಿವಭಕ್ತನ ಕಂಡಲ್ಲಿ ಪಾಪ ಕೇಡುವುದು
ಉಪಪಾತಕ ಕೋಟೀನಾಂ ಬ್ರಹ್ಮಹತ್ಯಶತಾನಿ ಚ
ದಹತ್ಯಶೇಷಪಾಪಾನಿ ಶಿವಭಕ್ತಸ್ಯ ದರ್ಶನಂ
ಎಂದು, ಪ್ರಿಯಸಂಭಾಷಣೆಯಿಂದ ಕಾಮಿತ ಫಲವಪ್ಪುದು.
ಆ ಪ್ರಸಾದಮಹಿಮನ ಪ್ರಸಾದದಿಂದ
ಕೇವಲ ಮುಕ್ತಿಯಪ್ಪುದು.
ಇದು ಸತ್ಯ, ಶಿವನಾಣೆ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಶಿವಭಕ್ತರ ಮಠವಲ್ಲದೆ ಒಲ್ಲೆನೆಂದು
ಅರಸಿಕೊಂಡು ಹೋದಲ್ಲಿ,
ಆ ಭಕ್ತರು ಕಾಣುತ್ತ ಆದರಣೆಯಿಂದ ಸಾಷ್ಟಾಂಗವೆರಗಿ
ಶರಣೆಂದು ಪಾದಾರ್ಚನೆಯಂ ಮಾಡಿ, ವಿಭೂತಿಯಂ ಕೊಟ್ಟು,
‘ನಿಮ್ಮ ಲಿಂಗದ ಆಳಿವನು ದೇವಾ’ ಎಂದು ಬಿನ್ನೈಸಿದಲ್ಲಿ,
ಭಕ್ತರ ನಡೆ ಭಕ್ತರ ನುಡಿಯ ವಿಚಾರಿಸಿದಡೆ ಪ್ರಥಮಪಾತಕ,
ಭಾಂಡ ಭಾಜನದ ಶುದ್ಧಿಯನರಸಿದಡೆ ಎರಡನೆಯ ಪಾತಕ,
ಜಲಶುದ್ಧಿಯನರಸಿದಡೆ ಮೂರನೆಯ ಪಾತಕ,
ವಾಕ್ಶುದ್ಧಿಯನರಸಿದಡೆ ನಾಲ್ಕನೆಯ ಪಾತಕ,
ಆ ಭಕ್ತರ ಹಸ್ತ ಮುಟ್ಟಲಾಗದೆಂದಡೆ
ಐದನೆಯ ಪಾತಕ.
ಇಂತೀ ಪಂಚಮಹಾಪಾತಕಕ್ಕೆ ಗುರಿಯಾದವರು
ನಿಮ್ಮನೆತ್ತ ಬಲ್ಲರಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ?

ವಚನ
ಶಿವಲಿಂಗದ ಮಹಾತ್ಮೆಯನು
ಶಿವಲಿಂಗದ ವರ್ಮವನು
ವಲಿಂಗದ ನಿಶ್ಚಯನು ಅದಾರಯ್ಯಾ ಬಲ್ಲವರು ?
ಅದಾರಯ್ಯಾ ಅರಿದವರು,
ಶ್ರೀಗುರು ತೋರಿ ಕೊಡದನ್ನಕ್ಕರ.
ಸರ್ವೈಶ್ವರ್ಯಸಂಪನ್ನಂ ಮಧ್ಯಧ್ರುವ ತತ್ವಾಧಿಕಂ ಎಂದುದಾಗಿಅಣೋರಣೀಯಾನ್
ಮಹತೋ ಮಹೀಯಾನ್’ ಎಂದುದಾಗಿ
ಯತೋ ವಾಚೋ ನಿವರ್ತಂತೇ’ ಎಂದುದಾಗಿ, ಅತ್ಯತಿಷ್ಠದ್ದಶಾಂಗುಲಮ್’ ಎಂದುದಾಗಿ,
ಈ ಪ್ರಕಾರದಲ್ಲಿ ವೇದಾಗಮಂಗಳು ಸಾರುತ್ತಿರಲು,
ಲಿಂಗವನು ಹರಿಬ್ರಹ್ಮಾದಿ ದೇವದಾನವ ಮಾನವರಿಗೆಯು
ಅರಿಯಬಾರದು.
ಚಕಿತಮಭಿದತ್ತೇ ಶ್ರುತಿರಪಿ ಎಂದುದಾಗಿ ವೇದ ಪುರುಷರಿಗೆಯು ಅರಿಯಬಾರದು. ಅರಿಯಬಾರದ ವಸ್ತುವ ರೂಪಿಸಲೆಂತೂ ಬಾರದು. ರೂಪಿಸಬಾರದ ವಸ್ತುವ ಪೂಜಿಸಲೆಂತುಬಹುದು ? ಪೂಜೆಗಿಲ್ಲವಾಗಿ ಭಕ್ತಿಗಿಲ್ಲ, ಭಕ್ತಿಗಿಲ್ಲವಾಗಿ ಪ್ರಸಾದಕ್ಕಿಲ್ಲ, ಪ್ರಸಾದಕ್ಕಿಲ್ಲವಾಗಿ ಮುಕ್ತಿಗಿಲ್ಲ. ಮುಕ್ತಿಗಿಲ್ಲದೆ ದೇವದಾನವ ಮಾನವರೆಲ್ಲರು ಕೆಡುವರು ಕೆಡುವರು. ಕೆಡದಂತೆ ಮಾಡಿ ರಕ್ಷಿಸಿದನು ಸದ್ಗುರು, ಮಹಾಗುರು, ಶ್ರೀಗುರು. ನ ಗುರೋರಧಿಕಂ’ ಎಂದುದಾಗಿ ಮಹಾಗುರು ಶಾಂತಮೂರ್ತಿ
ಕೃಪಾಮೂರ್ತಿ
ಲಿಂಗ ಪ್ರತಿಷ್ಠೆಯಂ ಮಾಡಿದನು.
ಅದೆಂತೆನಲು ಕೇಳಿರೆ:
ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ
ನಾದಬಿಂದುಕಲಾತೀತಂ ಗುರುಣಾ ಲಿಂಗಮುದ್ಭವಂ
ಎಂದುದಾಗಿ,
ಸದ್ಗರೋರ್ಲಿಂಗಭಾವಂ ಚ ಸರ್ವ ಬ್ರಹ್ಮಾಂಡವಾಸಿನಾಂ
ಸರ್ವಲೋಕಸ್ಯ ವಾಸಸ್ಯ ಮುಕ್ತಿಕ್ಷೇತ್ರ ಸುವಾಸಿನಾಂ
ಎಂದುದಾಗಿ,
ಸದ್ಗರೋರ್ದಿಯತೇ ಲಿಂಗಂ ಸದ್ಗುರೋರ್ದಿಯತೇ ಕ್ರಿಯಾ
ಸದ್ಗುರೋರ್ದಿಯತೇ ಮಂತ್ರಂ ಸದ್ಗುರುಸ್ಸರ್ವಕಾರಣಂ
ಎಂದುದಾಗಿ,
ಸರ್ವಲೋಕಕ್ಕೆಯು ಸರ್ವರಿಗೆಯು ಲಿಂಗಪ್ರತಿಷ್ಠೆಯಂ ಮಾಡಿಕೊಟ್ಟನು.
ಅರೂಪೇ ಭಾವನೋ ನಾಸ್ತಿ ಯದೃಷ್ಟಂ ತದ್ವಿನಶ್ಯತಿ
ದೃಶ್ಯಾದೃಶ್ಯ ಸ್ವರೂಪತ್ವಂ ತಥಾಪ್ಯೇವಂ ಸದಾಭ್ಯಸೇತ್
ಎಂದುದಾಗಿ,
ನಿಃಕಲ ಅರೂಪ ನಿರವಯ ಧ್ಯಾನಪೂಜೆಗನುವಲ್ಲ,
ಸಕಲ ತತ್ವಸಾಮಾನ್ಯನೆಂದು ಸಕಲನಿಷ್ಕಲವನೊಂದಡಗಿ ಮಾಡಿದನು.
ಲಿಂಗಂ ತಾಪತ್ರಯಹರಂ ಲಿಂಗಂ ದಾರಿದ್ರ್ಯನಾಶನಂ
ಲಿಂಗಂ ಪಾಪವಿನಾಶಂ ಚ ಲಿಂಗಂ ಸರ್ವತ್ರ ಸಾಧನಂ
ಎಂದುದಾಗಿ,
ಲಿಂಗವು ಪರಂಜ್ಯೋತಿ ಲಿಂಗವು ಪರಬ್ರಹ್ಮವೆಂದು ಲಿಂಗವನೆ ಪೂಜಿಸಿ,
ಭಕ್ತಿಪ್ರಸಾದ ಮುಕ್ತಿಯ ಪಡೆಯಲೆಂದು
ಮಹಾಘನ ಗುರು ಲಿಂಗಪ್ರತಿಷ್ಠೆಯ ಮಾಡಿ ತೋರಿಕೊಟ್ಟನು.
ಅದೆಂತೆಂದಡೆ_
ಬ್ರಹ್ಮಾವಿಷ್ಣುಶ್ಚ ರುದ್ರಶ್ಚ ಈಶ್ವರಶ್ಚ ಸದಾಶಿವಃ
ಸರ್ವೆ ಲಿಂಗಾರ್ಚನಾರತಾ ಜಾತಾಸ್ತೇ ಲಿಂಗಪೂಜಕಾಃ
ಮತ್ತಂ_
ಗೌರೀಪತಿರುಮಾನಾಥೋ ಅಂಬಿಕಾ ಪಾರ್ವತೀಪತಿಃ
ಗಂಗಾಪತಿರ್ಮಹಾದೇವೋ ಸತತಂ ಲಿಂಗಪೂಜಕಾಃ
ಎಂದುದಾಗಿ,
ಈ ಮಹಾಪುರುಷರಪ್ಪ ದೇವಗಣ ರುದ್ರಗಣ ಪ್ರಮಥಗಣಂಗಳು
ವಿಷ್ಣ್ವಾದಿ ದೇವದಾನವ ಮಾನವಾದಿಗಳು ಮಹಾಲಿಂಗವನೆ ಧ್ಯಾನಿಸಿ, ಪೂಜಿಸಿ,
ಪರಮ ಸುಖಪರಿಣಾಮವ ಹಡೆದರೆಂದು ಮಾಡಿದನು,
ಕೇವಲ ಸದ್ಭಕ್ತ ಜನಂಗಳಿಗೆ.
ಅದೆಂತೆಂದಡೆ_
ಇಷ್ಟಂ ಪ್ರಾಣಂ ತಥಾ ಭಾವಂ ತ್ರಿಧಾ ಏಕಂ ವರಾನನೇ’ ಎಂದುದಾಗಿ, ಆ ಸದ್ಗುರು ಆ ಪರಶಿವನನು ತತ್ಪ್ರಾಣವನು ಏಕೀಭವಿಸಿ ಸದ್ಭಾವದಿಂ ಲಿಂಗಪ್ರತಿಷ್ಠೆಯಂ ಮಾಡಿ, ಲಿಂಗವಾಗಿ ಕರಸ್ಥಲದಲ್ಲಿ ಬಿಜಯಂಗೈದು, ಅಂತರಂಗ ಬಹಿರಂಗ ಭರಿತನಾಗಿ ಪೂಜೆಗೊಳಲೆಂದು ಕರುಣಿಸಿದನು. ಮತ್ತಂಏಕಮೂರ್ತಿಸ್ತ್ರಿಧಾ ಭೇದಃ’ ಎಂದುದಾಗಿ,
ಗುರುಲಿಂಗ ಜಂಗಮಲಿಂಗ ಪರಶಿವಲಿಂಗ ಒಂದೆ.
`ದೇಶಿಕಶ್ಚರಲಿಂಗಂ ಚ ತ್ರಿವಿಧಂ ಲಿಂಗಮುಚ್ಯತೇ’ ಎಂದುದಾಗಿ,
ಲಿಂಗದ ವರ್ಮವನು ಲಿಂಗದ ಸ್ವರೂಪವನು ಲಿಂಗದ ನಿಶ್ಚಯವನು
ಆದಿಯಲ್ಲು ಧ್ಯಾನಪೂಜೆಯ ಮಾಡಿದವರನು, ಭಕ್ತಿಪ್ರಸಾದ
ಮುಕ್ತಿಯ ಪಡೆದವರನು ವೇದ ಶಾಸ್ತ್ರ ಪುರಾಣಾಗಮಂಗಳು ಹೇಳುತ್ತಿವೆ.
ಶಿವನ ವಾಕ್ಯಂಗಳಿಗಿದೆ ದಿಟ.
ಮನವೆ ನಂಬು, ಕೆಡಬೇಡ ಕೆಡಬೇಡ,
ಮಹಾಸದ್ಭಕ್ತರ ನಂಬುವುದು, ಶಿವಲಿಂಗಾರ್ಚನೆಯ ನಿರಂತರ ಮಾಡುವುದು.
ಇದು ನಿಶ್ಚಯವ ಶಿವನು ಬಲ್ಲನಯ್ಯ.
ಈ ಕ್ರಿಯೆಯಲ್ಲಿ ಲಿಂಗಜಂಗಮನರಿತು, ವಿಶ್ವಾಸಮಂ ಮಾಡಿ,
ಕೇವಲ ಸದ್ಭಕ್ತಿ ಕ್ರೀಯನರಿದು, ವರ್ಮವನರಿದು,
ಸದ್ಭಾವದಿಂದ ಲಿಂಗಾರ್ಚನೆಯಂ ಮಾಡುವುದಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಶಿವಲಿಂಗಧಾರಣವ ಮಾಡಬೇಕೆಂದುದು ಶ್ರುತಿ.
ಶಿವಶಿವಾ ! ಶಿವಲಿಂಗವನೆ ಧರಿಸಬೇಕೆಂದುದಥರ್ವಣಾ:
ತದಂತರ್ ಗ್ರಹಣಾ’ಯೆಂಬ ಶ್ರುತಿ.
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ,
ಲಿಂಗವನೆ ಧರಿಸೆಂದು, ಶಿವಲಿಂಗಧಾರಣವೆ ಪಥವೆಂದುದಥರ್ವಣಾ !

ವಚನ
ಶಿವಶರಣರಿಗೆ ಶರಣೆನ್ನದೆ
ಅಹಂಕಾರದಿಂದ ನಾರಸಿಂಹ ಶಿರವ ಹೋಗಾಡಿಕೊಂಡ.
ಶಿವಶರಣರಿಗೆ ಶರಣೆನ್ನದೆ
ಅಹಂಕಾರದಿಂದ ದಕ್ಷ ಶಿರವ ಹೋಗಾಡಿಕೊಂಡ.
ಶಿವಶರಣರಿಗೆ ಶರಣೆನ್ನದೆ
ಅಹಂಕರಿಸಿ ಇಂದ್ರ ಮಹದೈಶ್ವರ್ಯವ ಹೋಗಾಡಿಕೊಂಡ.
ಇವರುಗಳು ಶಿವಶರಣರಿಗೆ ಶರಣೆನ್ನದೆ
ಅಹಂಕರಿಸಿ ಅನೇಕ ಪರಿಯಲ್ಲಿ ಭಂಗಿತರಾದರು.
ಅರಿದು ಅಹಂಕಾರವಡಗಿ ಶರಣರಿಗೆ ಶರಣೆಂದು
ಮರಳಿ ನಿಜಪದಂಗಳ ಪಡೆದು ಭಕ್ತರಾದರು.
ಇದನರಿದು ಅಹಂಕರಿಸಿ ಕೆಡದೆ, ಶಿವಶರಣರಿಗೆ ಶರಣೆಂದು
ಭಕ್ತಿಯನೂ ಮಹಾಪದವನೂ ಮುಕ್ತಿಯನೂ ಹಡೆವುದಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಶಿವಶಿವಾ, ಭಕ್ತಿಹೀನನ ಬಟ್ಟೆಯಲ್ಲಿ ಕಂಡು
ನೆಟ್ಟನೆ ಶಿವಭಕ್ತ ಜೋಹಾರ ಎಂದಡೆ,
ಸುರಾಪಾನದಲ್ಲಿ ಮಜ್ಜನಮಾಡಿದಂತಾಯಿತ್ತು ಅವನ ಶಿವಪೂಜೆ?
ಕಟ್ಟಿದ ಕೆರೆಯನೊಡೆದಂತಾಯಿತ್ತು ಅವನ ಶಿವಪೂಜೆ.
ಅಮೇಧ್ಯವ ಭುಂಜಿಸಿದಂತಾಯಿತ್ತು ಅವನ ಶಿವಪೂಜೆ.
ಹೇಲೊಳಗಣ ಹುಳವ ಕೋಳಿ ಕೆದರಿದಂತಾಯಿತ್ತು ಅವನ ಶಿವಪೂಜೆ.
ಒಣಗಿದೆಲುವ ಸೊಣಗ ಕಡಿದು
ತನ್ನ ರಕ್ತವ ತಾನೇ ಭುಂಜಿಸಿದಂತಾಯಿತ್ತು ಅವನ ಶಿವಪೂಜೆ.
ಅವನ ಸರ್ವಾಂಗವು ಪಾಕುಳದ ಕುಳಿಯಂತಾಯಿತ್ತು.
ಕನ್ನಡಿಯ ಮೇಲೆ ಉದ್ದುರುಳಿದಂತಾಯಿತ್ತು ಅವನ ಶಿವಪೂಜೆ.
ಅರೆಯ ಮೇಲೆ ಆಡು ಹಿಕ್ಕೆಯನಿಟ್ಟಂತಾಯಿತ್ತು ಅವನ ಶಿವಪೂಜೆ.
ಲೋಳಸರದ ಮೇಲೆ ಬಂಡಿ ಹರಿದಂತಾಯಿತ್ತು ಅವನ ಶಿವಪೂಜೆ.
ಅದೆಂತೆಂದಡೆ:ವಿಷ್ಣು ಪುರಾಣೇ,
ಬ್ರಹ್ಮಬೀಜಂ ತೃಣಂ ನಾಸ್ತಿ ಕೇಶವಶ್ಚಾಧಿದೇವತಾ
ಗುರುಭ್ರಷ್ಟಶ್ಚ ಚಾಂಡಾಲೋ ವಿಪ್ರಃ ಶ್ವಾನೋ ಹಿ ಜಾಯತೇ
ವಿಪ್ರಸ್ಯ ದರ್ಶನಂ ಚೈವ ಪಾಪಪಂಜರಮೇವ ಚ
ವಿಪ್ರಸ್ಯ ವಂದನಂ ಚೈವ ಕೋಟಿಜನ್ಮಸು ಸೂಕರಃ
ಎಂದುದಾಗಿ ರೇಣುಕಾದೇವಿಯ ಮಗನೇ ಬ್ರಾಹ್ಮಣನು,
ಮಾತಂಗಿಯ ಮಗನೇ ಹೊಲೆಯನು,
ಇವರಿಬ್ಬರೂ ಜಮದಗ್ನಿಗೆ ಹುಟ್ಟಿದರಾಗಿ,
ಇದಕ್ಕೆ ಸಾಕ್ಷಿ, ಭಾರದ್ವಾಜ ವಿಶ್ವಾಮಿತ್ರ ಅಗಸ್ತ್ಯ ನಾರದ ಕೌಂಡಿಲ್ಯ
ಈಯೈವರು ಸಾಕ್ಷಿಯಲ್ಲಿ,
ನಿಮ್ಮ ನಿಮ್ಮೊಳಗೆ ಸಂವಾದವು ಬೇಡೆಂದು
ವಿಭಾಗವಂ ಮಾಡಿಕೊಟ್ಟ ವಿವರಮಂ ಕೇಳಿರಣ್ಣಾ
ಗ್ರಾಮದೊಳಗಣ ಸೀಮೆಯ ಗೃಹವನೇ ಹೊಲೆಯರಿಗೆ ಕೊಟ್ಟರು,
ಸತ್ತ ಹಸುವನೆಳೆದುಕೊಂಡು ಹೋಹವರನೇ
ಹೊಲೆಯರ ಮಾಡಿದರು.
ಜೀವದ ಹಸುವ ಹದಿನೆಂಟು ಜಾತಿಯ ಮಂಚದಡಿಯಲ್ಲಿ ನುಸಿದು
ಗೋದಾನಮುಖದಲ್ಲಿ ಕೊಂಡು ಹೋಹರನೇ
ಬ್ರಾಹ್ಮಣರ ಮಾಡಿದರು.
ಇನ್ನು ನಿಮಗೂ ತಮಗೂ ಸೊಮ್ಮು ಸಂಬಂಧವಿಲ್ಲವೆಂದು ಕಂಡಾಗ
ತೊಲಗುವಂತೆ ಸಂಬೋಳಿಯೆಂಬ ನಾಮಾಂಕಿತವಂ ಕೊಟ್ಟು
ತೊರೆ ಪತ್ರಮಂ ಬರೆದರಾಗಿ.
ಇದನರಿಯದಿದ್ದಡೆ ಇನ್ನೂ ಕೇಳಿರಣ್ಣ:
ನಳಚಕ್ರವರ್ತಿರಾಯನು ಪಿಂಡ ಪಿತೃಕಾರ್ಯವ ಮಾಡುವಲ್ಲಿ,
ಹೊನ್ನ ಗೋವಂ ತಂದು ಬಿನ್ನಾಣದಲ್ಲಿ ದಾನವ ಕೊಟ್ಟಲ್ಲಿ,
ಹೊಲೆಯರು ನಾಡಕೂಟವ ಕೂಡಿ ಆ ಸ್ಥಲ ತಾರ್ಕಣೆಯಲ್ಲಿ
ಪೂರ್ವಸಾಧನ ಸಂಬಂಧದಿಂದ ನ್ಯಾಯವನಾಡಿ
ಇತ್ತಂಡವ ಹಂಚಿಕೊಂಡ ವಿವರವ ಕೇಳಿರಣ್ಣಾ:
ಕೊಂಬುಕೊಳಗನೇ ತೆಗೆದು ಏಳುನೂರೆಪ್ಪತ್ತು ತೂಕ ಚಿನ್ನವ ಹಂಚಿಕೊಂಡು
ಉಳಿದ ಕೊಂಬು ಕೊಳಗವ ವಿಪ್ರರು ಎತ್ತಿಕೊಂಡರಾಗಿ,
ಈ ಹೊನ್ನಗೋವನಳಿದು ತಿಂಬ ಕುನ್ನಿಗಳ
ಕಂಡು ಕೇಳಿಯೂ ಅರಿದು ಮರೆದೂ
ಉತ್ತಮಕುಲದ್ವಿಜರೆಂದು ಅಲ್ಲಿ ಉಪದೇಶವಂ ಕೊಂಡು
ನಮಸ್ಕರಿಸುವ ಅಜ್ಞಾನಿ ಹೊಲೆಯರ ನಾನೇನೆಂಬೆನಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಶಿವಾಚಾರ ಶಿವಕಾರ್ಯಕ್ಕೆ ವಕ್ರವಾದವರ
ಗುರುಲಿಂಗಜಂಗಮವ ನಿಂದಿಸಿ ನುಡಿದವರ,
ಬಾಯ ಸೀಳಿ ನಾಲಗೆಯ ಕಿತ್ತು ಕೊಲುವೆನು.
ಅದೆಂತೆಂದಡೆ:
ಯೋ ವಾಪ್ಯುತ್ಪಾಟಯೇಜ್ಜಿಹ್ವಾಂ ಶಿವನಿಂದಾರತಸ್ಯ ತು
ತ್ರಿಸಪ್ತಕುಲಮುದ್ಧರೇತ್ ಶಿವಲೋಕೇ ಮಹೀಯತೇ
ಎಂದುದಾಗಿ,
ಮತ್ತಂ ಶಿವಭಕ್ತನಿಂದಯನು ಎನ್ನ ಕಿವಿಯಲ್ಲಿ ಕೇಳಿ
ಆ ನಿಂದಕರ ಕೊಲ್ಲುವೆನು, ಅಲ್ಲದಿರ್ದಡೆ ನಾನು ಸಾವೆನು.
ಅದೆಂತೆಂದಡೆ:
ಶ್ರುತ್ವಾ ನಿಂದಾಂ ಶಿವಸ್ಯಾಥ ತತ್ಕ್ಷಣಾದ್ದೇಹಮುತ್ಸೃ ಜೇತ್
ತಸ್ಯ ದೇಹನಿಹಂತಾ ಚೇತ್ ರುದ್ರಲೋಕಂ ಸ ಗಚ್ಛತಿ
ಎಂದುದಾಗಿ,
ಇದನರಿತು ಶಿವನಿಂದಕರ ಸಂಹರಿಸಿದಲ್ಲದೆ
ಎನಗೆ ಸಂತೋಷವಿಲ್ಲವಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಶಿಷ್ಯನ ಗುರುತ್ವವನು, ಗುರುವಿನ ಮಹತ್ವವನು,
ಗುರು ಶಿಷ್ಯನಾದ ಪರಿಯನು,
ಶಿಷ್ಯ ಗುರುವಾದ ಪರಿಯನು, ಆರಯ್ಯ ಬಲ್ಲವರು?
ವಾಙ್ಮನೋತೀತ ಉಪಮಿಸಬಾರದು ಮಹಾಕ್ರೀಯನು.
ಭಕ್ತಿಯಿಂದ ಗುರುಭಕ್ತಿವತ್ಸಲನಾಗಿ ಶಿಷ್ಯನಾದ ಪರಿ
ಬೀಜವೃಕ್ಷನ್ಯಾಯದಂತೆ ಅವಿನಾಭಾವವಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಶೀಲ ಸಮಾನವಿಲ್ಲೆಂದು ಅಲಿಂಗವಂತರ ಮಗಳಿಗೆ
ಉದ್ದೇಶದಿಂದ ಲಿಂಗಸ್ವಾಯತವ ಮಾಡಲು ಆಚಾರವಲ್ಲ.
ಅದೇನು ಕಾರಣವೆಂದಡೆ, ಅದು ಶಿವಾಚಾರಕ್ಕೆ ಸಲ್ಲದಾಗಿ,
ಮುಂದೆ ಗುರೂಪದೇಶಕ್ಕೆ ದೂರವಾಗಿ.
ಚಿತ್ತಶುದ್ಧದಿಂದ ಸತ್ಯಸದಾಚಾರವ ಬಯಸಿ ಬಂದು ಕೇಳಿದಡೆ
ತನ್ನ ಕೈಯ ಧನವ ವೆಚ್ಚಿಸಿ
ಗುರುದೀಕ್ಷೆ ಲಿಂಗಸ್ವಾಯತವ ಮಾಡಿಸುವುದು ಸದಾಚಾರ.
ಈ ಗುಣವುಳ್ಳಾತನೇ ಲಿಂಗದ ವರ್ಮಿಗನು,
ಆತನೇ ಲಿಂಗದಾತೃ, ಆತನೇ ಲಿಂಗಸನ್ನಹಿತನಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಶ್ರೀಗಂಧದ ತರು ಕಾಮರನಾದುದುಂಟೆ?
ಹೇಮದ ಪರ್ವತ ಹುಲುಮೊರಡಿಯಾದುದುಂಟೆ?
ಮಹಾಸಿಂಹ ಹುಲುಮೃಗವಾದುದುಂಟೆ?
ಜ್ಞಾನಿ ಅಜ್ಞಾನಿಯಾದುದುಂಟೆ?
ವಿರಕ್ತ ಸಂಸಾರಿಯಾದುದುಂಟೆ?
ಲಿಂಗವೆ ತಾನೆಂದರಿದ ಶರಣಂಗೆ
ಬೇರೆ ಅಂಗೇಂದ್ರಿಯಂಗಳ ವಿಕಾರವೆಂಬುದುಂಟೆ?
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ !

ವಚನ
ಶ್ರೀಗುರು ಕರುಣಿಸಿ ಪ್ರಾಣಲಿಂಗಸಂಬಂಧವ ಮಾ[ಡೆ]
ಸದ್ಭಕ್ತನೆನಿಸಿದ ಬಳಿಕ ಇನ್ನೇನೆಂದುಪಮಿಸಬಹುದಯ್ಯಾ,
ಈ ಮಹಾಪಥವನುರಿ
ಅಕಾಯೋ ಭಕ್ತಕಾಯಸ್ತು ಮಮಕಾಯಸ್ತು ಭಕ್ತಿಮಾನ್ ಎಂದುದಾಗಿ ಲಿಂಗಕಾಯ. ಲಿಂಗಾಂಗೀ ಮಹಜ್ಜೀವೋ
ಎಂದುದಾಗಿ ಲಿಂಗಪ್ರಾಣಿ.
ಇದು ಕಾರಣ,
ಕಾಯ ಲಿಂಗ, ಪ್ರಾಣ ಲಿಂಗ ಅಂತರಂಗ ಬಹಿರಂಗ ಸರ್ವಾಂಗಲಿಂಗ,
ಲಿಂಗವಂತನ ಕ್ರೀ ಎಲ್ಲವೂ ಲಿಂಗಕ್ರೀ.
ಲಿಂಗ ಮಾಡಿತ್ತೇ ಅರ್ಪಿತ,
ಲಿಂಗವಂತನ ಆರೋಗಣೆ ಲಿಂಗದಾರೋಗಣೆ.
ಈ ಮಹಾಜ್ಞಾನದ ಪರಿಣಾಮವೇ ಪ್ರಸಾದ,
ಇದ್ದುದೇ ದೇವಲೋಕ.
ಈ ಮಹಾಕ್ರೀಯ ಲಿಂಗಾಯತದ ಲಿಂಗವಂತರೆ ಬಲ್ಲರು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಶ್ರೀಗುರು ಮಾಡಿದ ಗುರುತ್ವ ಉಪಮಾತೀತವು.
ನೇತ್ರದಲ್ಲಿ ತನ್ನ ರೂಪು ತುಂಬಿ
ನೇತ್ರವ ಗುರು ಮಾಡಿದನು.
ಶ್ರೋತ್ರದಲ್ಲಿ ಮಹಾಮಂತ್ರವ ತುಂಬಿ
ಶ್ರೋತ್ರವ ಗುರು ಮಾಡಿದನು.
ಘ್ರಾಣದಲ್ಲಿ ಮಹಾಗಂಧವ ತುಂಬಿ
ಘ್ರಾಣವ ಗುರು ಮಾಡಿದನು.
ಜಿಹ್ವೆಯಲ್ಲಿ ಕರುಣಪ್ರಸಾದವ ತುಂಬಿ
ಜಿಹ್ವೆಯ ಗುರು ಮಾಡಿದನು.
ಕಾಯವ ಮಹಾಕಾಯವೆನಿಸಿ, ಪ್ರಸಾದಕಾಯವೆನಿಸಿ,
ಕಾಯವ ಗುರು ಮಾಡಿದನು.
ಪ್ರಾಣವನೂ ಲಿಂಗಪ್ರಾಣಸಂಬಂಧವ ಮಾಡಿ
ಪ್ರಾಣವ ಗುರು ಮಾಡಿದನು.
ಇಂತು ಅಂತರಂಗ ಬಹಿರಂಗವನು ಗುರು ಮಾಡಿದನು.
ಸರ್ವಾಂಗವನು ಗುರುವ ಮಾಡಿದ ಗುರುವಿಂಗೆ
ನಾನಿನ್ನೇನ ಮಾಡುವೆನಯ್ಯಾ?
ಗುರುಪೂಜೆಗನುವಾದ ದ್ರವ್ಯಂಗಳನೂ, ಆವಾವ ಪದಾರ್ಥಂಗಳನೂ
ಆವಾವ ಪುಷ್ಪಫಲಾದಿಗಳನೂ
ವಿಚಾರಿಸಿ ನೋಡಿದಡೆ ಆವುವು ಗುರುತ್ವವಿಲ್ಲ.
ಸರ್ವದ್ರವ್ಯಮೂಲವೂ ಸರ್ವಪದಾರ್ಥಮೂಲವೂ
ಸರ್ವರಸಪುಷ್ಪಫಲಾದಿಗಳಿಗೆ ಎಲ್ಲದಕ್ಕೂ
ಮೂಲಿಗ ಮನವು ಗುರುತ್ವವನ್ನುಳ್ಳದ್ದು.
ತನ್ನ ಮನೋವಾಕ್ಸಹಿತ ಕಾಯವನೂ ಸದ್ಗುರುವಿಂಗಿತ್ತು
ಶ್ರೀಗುರು ದರ್ಶನ ಸ್ಪರ್ಶನ ಮಾಡಿ ಸುಖಿಯಪ್ಪೆ ನಾನು,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಶ್ರೀಗುರು ಲಿಂಗ ಜಂಗಮ ಒಂದೆ ಎಂಬುದು,
ಸದ್ಭಾವದಿಂ ಭಾವಿಸಿದುದಕ್ಕೆ ದೃಷ್ಟ.
ಸದ್ಗುರುಕಾರುಣ್ಯವ ಪಡೆಹ,
ಸದ್ಗುರುಕಾರುಣ್ಯವ ಪಡೆದುದಕ್ಕೆ ದೃಷ್ಟ.
ಲಿಂಗವನರಿದು ಲಿಂಗಾರ್ಚನೆಯಂ ಮಾಡುಹ,
ಲಿಂಗವನರಿದುದಕ್ಕೆ ದೃಷ್ಟ.
ಜಂಗಮವನರಿಹ,
ಜಂಗಮವನರಿದುದಕ್ಕೆ ದೃಷ್ಟ.
ಸತ್ಯಪ್ರೇಮಿಯಾಗಿಹ,
ಸತ್ಯಪ್ರೇಮಿಯಾದುದಕ್ಕೆ ದೃಷ್ಟ.
ಪ್ರಸಾದವ ಪಡೆಹ,
ಪ್ರಸಾದವ ಪಡೆದುದಕ್ಕೆ ದೃಷ್ಟ.
ಪ್ರಸಾದವ ಧರಿಸಿ ಶಾಂತಿಯಾಗಿರುಹ,
ಶಾಂತನಾದುದಕ್ಕೆ ದೃಷ್ಟ.
ಪರಿಣಾಮವ ನೆಲೆಗೊಳುಹ,
ಪರಿಣಾಮಿಯಾದುದಕ್ಕೆ ದೃಷ್ಟ.
ಶ್ರೀಗುರುಲಿಂಗಜಂಗಮಕ್ಕೆ ತನುಮನಧನವನರ್ಪಿಸುಹ,
ತನುಮನಧನವನರ್ಪಿಸಿದುದಕ್ಕೆ ದೃಷ್ಟ.
ಅಹಂಕಾರ ಅಡಗುಹ,
ಅಹಂಕಾರ ಅಡಗಿದುದಕ್ಕೆ ದೃಷ್ಟ.
ತಾನೆಂಬುದಳಿದು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನಲ್ಲಿ
ತಾನೆ ದಿಟ, ಮಿಕ್ಕವೆಲ್ಲಾ ಸಟೆಯೆಂದರಿವುದು.

ವಚನ
ಶ್ರೀಗುರು ಲಿಂಗ ಜಂಗಮ ತ್ರಿವಿಧವೆಂದು ನಾನರಿವಂದು
ಗುರುವೆ ಸ್ವಾನುಭಾವಲಿಂಗವಾದಂದು
ಸ್ವಾನುಭಾವಲಿಂಗಂ ಪ್ರಕೀರ್ತಿತಂ' ಎಂದುದಾಗಿ ಆ ಲಿಂಗ ಪ್ರಸಾದವಾದಂದು ಅರಿದೆನು, ಮಹಾವಸ್ತುವ. ಆ ವಸ್ತು ವಾಙ್ಮನಸಗೋಚರವಪ್ಪ ಒಂದು ಚರವಾಗಿ ದೀಕ್ಷೆಯೆಂದಡೂ ತಾನೆ, ಶಿಕ್ಷೆಯೆಂದಡೂ ತಾನೆ ಸ್ವಾನುಭಾವವೆಂದಡೂ ತಾನೆ, ಸಕಲ ನಿಷ್ಕಲವೆಂದಡೂ ತಾನೆ ಅಣು ಮಹತ್ತೆಂದಡೂ ತಾನೆ, ಮಹತ್ ಅಣುವೆಂದಡೂ ತಾನೆ ಧಿಕ್ಕರಿಸಿದ ಅಣುಗಳೊಳಗೆ ಸ್ವಾನುಭಾವಸಾಕ್ಷಿಕಮಪ್ಪ ಮಹತ್ತಿನೊಳಗೆ ಸಾಕ್ಷಿಕ ನೋಡಾ. ಇಂತಿವರೊಳಗೆ ಅವಿರಳವಾಗಿ, ತನ್ನ ಪರಿ ಬೇರಾದ ಘನವನೊಡಗೂಡಿದ, ಮಹ ಮಹತ್ತನೊಡಗೂಡಿದ, ಜ್ಯೋತಿ ಜ್ಯೋತಿಯನೊಡಗೂಡಿದ, ದೀಪ್ತಿ ದೀಪ್ತಿಯನೊಡಗೂಡಿದ ವಸ್ತುವೆ ಇದಂ ವಸ್ತು ಶಿವಸ್ಸಾಕ್ಷಾತ್ ಶಿವನಾಮ್ನಾ ವಿಧೀಯತೇ ಸರ್ವವಸ್ತುಮಯೋ ದೇವಃ ಸಕಲೋ ನಿಷ್ಕಲೋ ಭವೇತ್ ಎಂದುದಾಗಿ, ಮನೋತೀತೋ ಮಹಾದೇವೋ ವಾಚಾತೀತಸ್ಸದಾಶಿವಃ
ಎಂದುದಾಗಿ,
ಶಿವನು ಸರ್ವಗತನು.
ಇಂತಪ್ಪ ವಸ್ತುವ ತಂದು ಶ್ರೀಗುರು [ಅಂಗ]ವೆಂಬ ಸುಕ್ಷೇತ್ರದಲ್ಲಿ
ಲಿಂಗವೆಂಬ ಮಹವ ಬಿತ್ತಿ, ಶಿಷ್ಯನೆಂಬ ಅತಿರಸಮಹಾಜಲವನೆರೆದು
ಫಲ ಫಲಿತವಾದಡೆ ಇದೇ ಗುರು.
ಗುರುವಿಂಗೊಂದನರ್ಪಿಸುವೆ, ಲಿಂಗಕ್ಕೊಂದ ಬೇರು ಸಹಿತ ಕೊಡುವೆ.
ಆ ಫಲವ ಜಂಗಮಕ್ಕಿತ್ತಲ್ಲಿ ಪದವಿಲ್ಲ ಪದಾರ್ಥವಿಲ್ಲ.
ಚತುರ್ವಿಧದ ಹಂಗುಹರಿದು, ಮತ್ತೆಂದಿಗೂ
ಪದ ಫಲಾದಿಗಳಿಗೆ ಬಯಸದಿ[ಪ್ಪೆ].
ಅದು ಹೇಗೆಂದಡೆ:
ದಗ್ಧಸ್ಯ ದಹನಂ ನಾಸ್ತಿ ಪಾಕಸ್ಯ ಪಚನಂ ಯಥಾ
ಜ್ಞಾನಾಗ್ನಿದಹನಂ ನಾಸ್ತಿ ನ ಚ ತತ್ರ ಕ್ರಿಯಾಧಿಕಾ
ಎಂದುದಾಗಿ,
ಇಂತಪ್ಪ ಮಹಾವಸ್ತುಗಳಿಗೆ ಮುಂದೊಂದರಿದಪ್ಪ ಅಧಿಕವಿಲ್ಲ ಕಾಣಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಶ್ರೀಗುರು ಲಿಂಗ ಜಂಗಮ ಪ್ರಸಾದ
ಒಂದೇ ಪರಶಿವಮೂರ್ತಿ ಮಹಾವಸ್ತುಗಳು ಕೇಳಿರಣ್ಣಾ.
ಅರಿದು ಧ್ಯಾನಿಸಿ ಪೂಜಿಸಿ ಸೇವಿಸಿ ಅರ್ಚಿಸಿ ಅರ್ಪಿಸಿ ಧರಿಸಿ,
ಧರ್ಮ ಅರ್ಥ ಕಾಮ ಮೋಕ್ಷ
ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯ
ಈ ಚತುರ್ವಿಧ ಪದವಿಯನೂ ಕೂಡುವರೆ,
ಗುರು ಲಿಂಗ ಜಂಗಮ ಪ್ರಸಾದವ ನಂಬುವುದು.
ಇದು ಸತ್ಯ, ಶಿವನಾಣೆ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಶ್ರೀಗುರು ಶಿಷ್ಯಂಗೆ ಮಂತ್ರವ ಮೂರ್ತಿಗೊಳಿಸಬೇಕಾಗಿ,
ಪೃಥ್ವಿಯ ಮೇಲಣ ಕಣಿಯ ತಂದು, ಇಷ್ಟಲಿಂಗಮಂ ಮಾಡಿ,
ಶಿಷ್ಯನ ತನುವಿನ ಮೇಲೆ ಧರಿಸಿದ ಲಿಂಗವು
ಅವತಳವಾಗಿ ಭೂಮಿಯಲ್ಲಿ ಸಿಂಹಾಸನಂಗೊಂಡಿತ್ತೆಂದು
ಸಮಾಧಿಯ ಹೋಗುವರಯ್ಯಾ.
ಲಿಂಗಕ್ಕೆ ಅವತಳವಾದಡೆ, ಭೂಮಿ ತಾಳಬಲ್ಲುದೆ?
ಮಾರಾಂತನ ಗೆಲಿವೆನೆಂದು ಗರಡಿಯ ಹೊಕ್ಕು
ಕಠಾರಿಯ ಕೋಲ ನತಫಳೆದುಕೊಂಡು, ಸಾಧನೆಯ ಮಾಡುವಲ್ಲಿ
ಕೈತಪ್ಪಿ ಕೋಲು ನೆಲಕ್ಕೆ ಬಿದ್ದಡೆ, ಆ ಕೋಲ ಬಿಟ್ಟು
ಸಾಧನೆಯಂ ಬಿಟ್ಟು ಕಳೆವರೇ ಅಯ್ಯ?
ತಟ್ಟಿ ಮುಟ್ಟಿ ಹಳಚುವಲ್ಲಿ
ಅಲಗು ಬಿದ್ದಡೆ ಭಂಗವಲ್ಲದೆ ಕೋಲು ಬಿದ್ದಡೆ ಭಂಗವೇ ಅಯ್ಯ?
ಆ ಕೋಲ [ತ]ಳೆದುಕೊಂಡು ಸಾಧನೆಯಂ ಮಾಡುವದೇ ಕರ್ತವ್ಯ.
ಆ ಲಿಂಗ ಹುಸಿ ಎಂದಡೇನಯ್ಯ?
ಶ್ರೀ ವಿಭೂತಿವೀಳೆಯಕ್ಕೆ ಸಾಕ್ಷಿಯಾಗಿ ಬಂದ ಶಿವಗಣಂಗಳು ಹುಸಿಯೇರಿ
ಆ ಗಣಂಗಳು ಹುಸಿಯಾದಡೆ,
ಕರ್ಣಮಂತ್ರ ಹುಸಿಯೇ?
ಆ ಕರ್ಣಮಂತ್ರ ಹುಸಿಯಾದಡೆ,
ಶ್ರೀಗುರುಲಿಂಗವು ಹುಸಿಯೇ?
ಶ್ರೀಗುರುಲಿಂಗ ಹುಸಿಯಾದಡೆ ಜಂಗಮಲಿಂಗ ಹುಸಿಯೇ?
ಆ ಜಂಗಮಲಿಂಗ ಹುಸಿಯಾದಡೆ,
ಪಾದತೀರ್ಥ ಪ್ರಸಾದ ಹುಸಿಯೇ?
ಇಂತೀ ಷಟ್ಸ್ಥಲವ ತುಚ್ಛವ ಮಾಡಿ,
ಗುರೂಪದೇಶವ ಹೀನವ ಮಾಡಿ, ಸಮಾಧಿಯ ಹೊಗುವ
ಪಂಚಮಹಾಪಾತಕರ ಮುಖವ ನೋಡಲಾಗದು,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಶ್ರೀಗುರುಕಾರುಣ್ಯವ ಪಡೆದು ಲಿಂಗಸ್ವಾಯತವಾದ ಬಳಿಕ
ಸರ್ವಾಂಗಲಿಂಗಮೂರ್ತಿ ಪರಶಿವನು.
ಇನ್ನು ಮತ್ತೆ ಸಾಮಾನ್ಯಕ್ರೀಯ ವರ್ತಿಸುವ
ಅಜ್ಞಾನಿಗಳನು ಏನೆಂದೆನ್ನಬಹುದಯ್ಯಾ?
ಹೃದಯ ಭ್ರೂಮಧ್ಯ ಬ್ರಹ್ಮರಂಧ್ರದಲ್ಲಿ ಶಿವನಿಪ್ಪನು.
ಇಡಾ ಪಿಂಗಲಾ ಸುಷುಮ್ನಾ ನಾಡಿಯಲ್ಲಿ
ಪ್ರಾಣವಾಯುಗಳಡಸಿಕೊಂಡು ಹೋಗಿ
ಕೂಡಿ ಒಂದಪ್ಪ ಆಯಸವ ನೋಡಾ.
ಬಹಿರಂಗದಲ್ಲಿ ಮುಕ್ತಿಕ್ಷೇತ್ರಂಗಳ ಹೊಕ್ಕು
ಲಿಂಗದರ್ಶನ ಸ್ಪರ್ಶನಯುಕ್ತರ ಆಯಸವ ನೋಡಾ.
ಶಿವ ಶಿವ ಶ್ರೀಗುರು ಸಾಮಾನ್ಯವೇ?
ಸಾಮಾನ್ಯವಾಗಿ ಕಾಣಲಹುದೆ?
ಇಹಿಂಗೆ ಜ್ಞಾನ? ಈ ಪರಿಯ ಕೇಳುವುದೆ?
ಅದೃಷ್ಟವ ದೃಷ್ಟಮಾಡಿ ಕೊಟ್ಟನು ಶ್ರೀಗುರು.
ಅಪವಿತ್ರೋದಕ, ಗಂಗೆಯ ಕೂಡಿ ಗಂಗೆಯಾಯಿತ್ತು ನೋಡಿರಿ,
ಕಾಷ್ಠ, ಅಗ್ನಿಯ ಕೂಡಿ ಅಗ್ನಿಯಾಯಿತ್ತು ನೋಡಿರಿ,
ಸದ್ಭಕ್ತನು ಲಿಂಗವ ಕೂಡಿ ಲಿಂಗವಾದನು.
ನಗರೀನಿರ್ಜರಾದ್ಯಂಬು ಗಂಗಾಂ ಪ್ರಾಪ್ಯ ಯಥಾ ತಥಾ
ದೀಕ್ಷಾಯೋಗಾತ್ತಥಾ ಶಿಷ್ಯಃ ಶೂದ್ರೋಪಿ ಶಿವತಾಂ ವ್ರಜೇತ್
ಭಕ್ತದೇಹೀ ಮಹಾದೇವೋ ತದ್ದೇಹೋ ಲಿಂಗಮೇವ ಚ
ಅಂತರ್ಬಹಿಶ್ಚ ಲಿಂಗಂ ಚ ಸರ್ವಾಂಗಂ ಲಿಂಗಮೇವ ಚ
ಇಂತೆಂದುದಾಗಿ,
ಇನ್ನು ಸಂದೇಹ ಬೇಡ.
ಶ್ರೀಗುರುಕಾರುಣ್ಯದಿಂದ ಲಿಂಗವ ಧರಿಸಿ
ಲಿಂಗಾರ್ಚನೆಯ ಮಾಡಿ ಸರ್ವಾಂಗಲಿಂಗವಾಗಿಪ್ಪುದಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಶ್ರೀಗುರುಪ್ರೇಮವಿಲ್ಲದೆ ಲಿಂಗಾರ್ಚನೆಯ ಮಾಡಿದಡೆ
ಅದು ಲಿಂಗಾರ್ಚನೆಯಲ್ಲ.
ಜಂಗಮಪ್ರೇಮವಿಲ್ಲದೆ ಲಿಂಗಾರ್ಚನೆಯ ಮಾಡಿದಡೆ
ಅದೂ ಲಿಂಗಾರ್ಚನೆಯಲ್ಲ.
ಶಿವಲಿಂಗಪ್ರೇಮವಿಲ್ಲದೆ ಲಿಂಗಾರ್ಚನೆಯ ಮಾಡಿದಡೆ
ಅದೂ ಲಿಂಗಾರ್ಚನೆಯಲ್ಲ.
ಅರ್ಪಿತವನರಿತು, ಅರ್ಪಿಸಿ ಪ್ರಸನ್ನತೆಯ ಹಡೆದು
ಪ್ರಸಾದವ ಗ್ರಹಿಸದೆ ಲಿಂಗಾರ್ಚನೆಯ ಮಾಡಿದಡೆ
ಅದೂ ಲಿಂಗಾರ್ಚನೆಯಲ್ಲ.
ಸರ್ವಾಚಾರಸಂಪತ್ತಿಲ್ಲದೆ ಲಿಂಗಾರ್ಚನೆಯ ಮಾಡಿದಡೆ
ಅದೂ ಲಿಂಗಾರ್ಚನೆಯಲ್ಲ.
ವಿಚಾರಜ್ಞಾನ ಸುಜ್ಞಾನ ಮಹಾಜ್ಞಾನವೆಂಬ
ಪರಿಯನರಿಯದೆ ಲಿಂಗಾರ್ಚನೆಯ ಮಾಡಿದಡೆ
ಅದೂ ಲಿಂಗಾರ್ಚನೆಯಲ್ಲ.
ಪ್ರಸಾದವ ಹಡೆದು ಮುಕ್ತನಲ್ಲ
ಪೂಜಕಾ ಬಹವಸ್ಸಂತಿ ಭಕ್ತಾಶ್ಚ ಲಕ್ಷಮೇವ ಚ
ಮತ್ಪ್ರಸಾದಧರಾ ದೇವಿ ದ್ವೌ ತ್ರಯೋ ದ[ಶ]ಪಂಗಕಃ
ಇಂತು ಪೂಜಕರಪ್ಪರು.
ಬೆಟ್ಟವನೆಚ್ಚ ಕೋಲ್ತಪ್ಪದಂತೆ, ಪೂಜೆಯ ಫಲವುಂಟು.
ಸಜ್ಜನಸದ್ಭಕ್ತಿಶಿವಾಚಾರ ಸಂಪತ್ತಿಗೆ ಸಲ್ಲದು.
ಇದನರಿದು
ಶ್ರೀಗುರುಲಿಂಗ ಶಿವಲಿಂಗ ಜಂಗಮಲಿಂಗದಲ್ಲಿ
ಅತ್ಯಂತ ಪ್ರೇಮಿಯಾಗಿ,
ಆವಾವ ವಸ್ತು ತನಗೆ ಪ್ರೇಮವಾದುದನಿತ್ತು
ಪ್ರಸಾದಿಯಾಗಿ, ಶಿವಲಿಂಗಾರ್ಚನೆಯಂ ಮಾಡಿದಡೆ
ಸರ್ವಲೋಕಕ್ಕೆ ಪೂಜ್ಯನಪ್ಪನಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಶ್ರೀಗುರುಲಿಂಗ ಸಾಕ್ಷಾತ್ಪರಶಿವಲಿಂಗ ತಾನೆ.
`ಗುರುದೇವೋ ಮಹಾದೇವೋ’ ಎಂದುದಾಗಿ
ಆ ಶ್ರೀಗುರು ಹರಿಬ್ರಹ್ಮಾದಿ ದೇವದಾನವ ಮಾನವರಿಗೆಲ್ಲಾ
ಗುರು ಕಾಣಿಭೋ.
ಸರ್ವಋಷಿಜನಂಗಳಿಗೆಲ್ಲಾ ಗುರು ಕಾಣೀಭೋ.
ಇವರೆಲ್ಲರಿಗೂ ಗುರುವಾಗಿ ಇರಬೇಕು,
ಕೆಲಂಬರಿಗೆ ಲಘುವಾಗಿ ಇರಬಾರದು.
ಬಲ್ಲವಂಗೆ ಗುರು, ಅರಿಯದವಂಗೆ ಲಘುವಾಗಿರಲಾಗದು.
ಇಷ್ಟಂಗೆ ಗುರು, ಅನಿಷ್ಟಂಗೆ ಲಘುವಾಗಿರಲಾಗದು.
ಸರ್ವರಿಗೂ ಸಮಾನವಾಗಿರಬೇಕು ಕಾಣಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಶ್ರೀಗುರುಲಿಂಗಜಂಗಮಕ್ಕೆ ತನುಮನಧನವನು
ವಂಚನೆಯಿಲ್ಲದೆ ಸದ್ಭಕ್ತಿಯಿಂದ ಅರ್ಪಿಸಿ
ದಾಸೋಹಿಯಾದಡೆ ಸದ್ಭಕ್ತನು.
ಆ ಸದ್ಭಕ್ತನ ಭಕ್ತಕಾಯ ಮಮಕಾಯ’ ಎಂಬ ಶಿವವಾಕ್ಯದಿಂದ ಅದು ಶಿವನ ತನು. ಯತೋ ವಾಚೋ ನಿವರ್ತಂತೇ’ ಎಂಬ ಲಿಂಗವನು
ಶ್ರೀಗುರು ಕಣ್ಗೆ ಗೋಚರವ ಮಾಡಿ
ಕರಸ್ಥಳವಲ್ಲಿ ಬಿಜಯಂಗೈಸಿ ಕೊಟ್ಟ ಬಳಿಕ
ಲಿಂಗಪ್ರಾಣಿ ಶಿವತನುವಾಯಿತ್ತು.
ಶಿವಜ್ಞಾನಸದ್ಭಕ್ತಿಸಂಪೂರ್ಣವಾದಡೆ ಸರ್ವಾಂಗಲಿಂಗ,
ಆ ಅಂಗಗುಣವೆಲ್ಲ ಲಿಂಗಗುಣ,
ಪಂಚೇಂದ್ರಿಯಂಗಳು ಲಿಂಗೇಂದ್ರಿಯಂಗಳು,
ಆ ಮಹಾಸದ್ಭಕ್ತನ ಕ್ರೀ ಲಿಂಗಕ್ರೀ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಶ್ರೀಗುರುಲಿಂಗದಲ್ಲಿ ಬಸವಣ್ಣನ ಕಂಡೆನು,
ಬಸವಣ್ಣನಲ್ಲಿ ಶ್ರೀಗುರುಲಿಂಗವ ಕಂಡೆನು.
ಶಿವಲಿಂಗದಲ್ಲಿ ಬಸವಣ್ಣನ ಕಂಡೆನು,
ಬಸವಣ್ಣನಲ್ಲಿ ಶಿವಲಿಂಗವ ಕಂಡೆನು.
ಜಂಗಮಲಿಂಗದಲ್ಲಿ ಬಸವಣ್ಣನ ಕಂಡೆನು.
ಬಸವಣ್ಣನಲ್ಲಿ ಜಂಗಮಲಿಂಗವ ಕಂಡೆನು.
ಪ್ರಸಾದದಲ್ಲಿ ಬಸವಣ್ಣನ ಕಂಡೆನು,
ಬಸವಣ್ಣನಲ್ಲಿ ಪ್ರಸಾದವ ಕಂಡೆನು.
ಈ ಚತುರ್ವಿಧದಲ್ಲಿ ಬಸವಣ್ಣನ ಕಂಡೆನು,
ಬಸವಣ್ಣನಲ್ಲಿ ಚತುರ್ವಿಧವ ಕಂಡೆನು.
ಇಂತಹ ಮಹಾಮಹಿಮರುಂಟೆ?
ಶಿವ ಶಿವಾ, ಮಹಾದೇವ, ಇಂತಹ ಸದ್ಭಕ್ತರುಂಟೆ?
ಇದು ಕಾರಣ, ಶ್ರೀಗುರುಲಿಂಗವೂ ಬಸವಣ್ಣನೇ,
ಶಿವಲಿಂಗವೂ ಬಸವಣ್ಣನೇ, ಜಂಗಮಲಿಂಗವೂ ಬಸವಣ್ಣನೇ,
ಪ್ರಸಾದಲಿಂಗವೂ ಬಸವಣ್ಣನೇ.
ಇಷ್ಟಲಿಂಗವೂ ಬಸವಣ್ಣನೇ, ಪ್ರಾಣಲಿಂಗವೂ ಬಸವಣ್ಣನೇ,
ಭಾವಲಿಂಗವೂ ಬಸವಣ್ಣನೇ,
ಆಚಾರಲಿಂಗವೂ ಬಸವಣ್ಣನೇ, ಮಹಾಲಿಂಗವೂ ಎನಗೆ ಬಸವಣ್ಣನಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಶ್ರೀಗುರುವಿನಲ್ಲಿ ಸಕಲಮಾಹೇಶ್ವರರಲ್ಲಿ, ಅನುಕೂಲವ ನುಡಿಯದೆ
ಪ್ರತಿಭಟಿಸಿ ನುಡಿಯಲಾಗದು.
ನುಡಿದಡೆ ಅದು ಶ್ರದ್ಧೆಯಲ್ಲ.
ಶ್ರದ್ಧೆಯಿಲ್ಲದವರ ಶಿವನೊಲ್ಲನಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಶ್ರೀಗುರುವೇ ಪರಶಿವಲಿಂಗ,
ಪರಶಿವಲಿಂಗವೇ ಜಂಗಮ, ಜಂಗಮವೇ ಪರಶಿವಲಿಂಗ.
ಗುರು ಲಿಂಗ ಜಂಗಮ ತ್ರಿವಿಧವೂ ಪರಶಿವಲಿಂಗವೆಂದರಿದು
ಮನೋವಾಕ್ಕಾಯವನೊಂದು ಮಾಡಿ
ತನು ಮನ ಧನವನೊಂದು ಮಾಡಿ
ಆ ಒಂದುಮಾಡಿದ ಮನವನೂ,
ಆ ತ್ರಿವಿಧವನೊಂದುಮಾಡಿದ ಪರಶಿವಲಿಂಗದಲ್ಲಿ ಅರ್ಪಿಸಲು
ಆ ಲಿಂಗಪ್ರಸನ್ನವೇ ಪ್ರಸಾದ,
ಆ ಪ್ರಸಾದವೇ ಪರಶಿವಲಿಂಗ.
ಇಂತು ಬೀಜ-ವೃಕ್ಷ, ಪುಷ್ಪ-ಫಲ ಒಂದೇ.
ಪರಶಿವನು ಭಕ್ತಜನಂಗಳ ರಕ್ಷಿಸಲೋಸುಗ[ರ]
ದೇವದಾನವ ಮಾನವರಿಗೆ ಕೃಪೆಮಾಡಿ
ದೀಕ್ಷೆಯ ಮಾಡಲೋಸುಗರ,
ಬಹುವಿಧದಲ್ಲಿ ಶ್ರೀಗುರುರೂಪಾದನು.
ಆದರೆ ಶ್ರೀಗುರು ಒಂದೇ ವಸ್ತು, ಪರಶಿವನು.
ಸ್ಥಾವರಂ ಜಂಗಮಾಧಾರಂ’ ಎಂದುದಾಗಿ, ಪರಶಿವನು ಶಕ್ತಿವಿನೋದಕಾರಣ ಸದ್ಭಕ್ತಜನಂಗಳಿಗೆ ಪ್ರಸನ್ನವಾಗಲೋಸುಗರ, ದೇವ ದಾನವ ಮಾನವರಲ್ಲಿ ವಿನೋದಿಸಿ ಉತ್ಪತ್ತಿಸ್ಥಿತಿಲಯವ ಮಾಡಲೋಸುಗರ, ಅನೇಕತತ್ತ್ವರೂಪಾದನು ಸರ್ವತತ್ತ್ವರೂಪು ಪರಶಿವನೊಂದೇ ವಸ್ತು, ತತ್ತ್ವಂ ವಸ್ತುಕಂ’ ಎಂದುದಾಗಿ,
ನಾನಾರೂಪಧರಂ ದೇವಂ’ ಎಂದುದಾಗಿ, ಪರಶಿವನೊಂದೇ ವಸ್ತು. ಸರ್ವಲೋಕವ ರಕ್ಷಿಸಲೋಸುಗರ, ತನು ಮನ ಧನವನೂ ತನ್ನಲ್ಲಿಗೆ ತೆಗೆದುಕೊಂಡು ಪಾದೋದಕ ಪ್ರಸಾದವನಿತ್ತು ರಕ್ಷಿಸಲೋಸುಗರ, ನಾನಾರೂಪು ಬಹುವಿಧಶೀಲದಿಂ ಜಂಗಮರೂಪಾದನು. ದಂಡಕ್ಷೀರದ್ವಯಂ ಹಸ್ತೇ’ ಎಂದುದಾಗಿ, ಪರಶಿವನೊಂದೇ ವಸ್ತು.
ಯೇ ರುದ್ರಲೋಕಾದವತೀರ್ಯ ರುದ್ರಾ ಎಂದುದಾಗಿ, ಜಂಗಮ ಪರಶಿವನೂ ಒಂದೇ ವಸ್ತು. ಪರಶಿವನ ಪ್ರಸನ್ನವೇ ಪ್ರಸಾದ, ಗುರುಲಿಂಗಜಂಗಮ ತ್ರಿವಿಧಲಿಂಗದಲ್ಲಿ ತನು ಮನ ಧನವನೂ ಸರ್ವಪದಾರ್ಥ ಸರ್ವದ್ರವ್ಯವನೂ ನೇತ್ರದ ಕೈಯಲೂ ಘ್ರಾಣದ ಕೈಯಲೂ ಜಿಹ್ವೆಯ ಕೈಯಲೂ ಪರುಷಭಾವ ಮನವಾಕ್ಕಿನ ಕೈಯಲೂ ಈ ಪ್ರಕರದಿಂದೆಲ್ಲಾ ತೆರದಲ್ಲಿ ಸಕಲನಿಷ್ಕಲವನೆಲ್ಲವನೂ ಅರ್ಪಿಸಿದಲ್ಲಿ ಆ ಪರಶಿವನು ಅನೇಕ ವಿಧದಲ್ಲಿ, ಅನೇಕ ಮುಖದಲ್ಲಿ, ಅರ್ಪಿತವ ಕೈಕೊಂಡು ಪ್ರಸನ್ನವಾಗಲು, ಸದ್ಬಕ್ತಂಗೆ ಬಹುವಿಧ: ಗುರುಮುಖದಲ್ಲಿ ಶುದ್ಧಪ್ರಸಾದ, ಲಿಂಗಮುಖದಲ್ಲಿ ಸಿದ್ಧಪ್ರಸಾದ, ಜಂಗಮಮುಖದಲ್ಲಿ ಪ್ರಸಿದ್ಧಪ್ರಸಾದ. ಗುರುಮುಖದಲ್ಲಿ ನೇತ್ರ ಪ್ರಸಾದ, ಶ್ರೋತ್ರ ಪ್ರಸಾದ, ಘ್ರಾಣ ಪ್ರಸಾದ, ಜಿಹ್ವೆ ಪ್ರಸಾದ, ಪರುಶನ ಪ್ರಸಾದ, ಭಾವ ಪ್ರಸಾದ, ಮನ ಪ್ರಸಾದ ವಾಕ್ ಪ್ರಸಾದ, ಕಾಯ ಪ್ರಸಾದ ಇವುವಿಡಿದು ನಡೆವುವು ತ್ರಿವಿಧಸಂಪತ್ತುಗಳು. ಭಕ್ತ ಮಹೇಶ್ವರ ಪ್ರಸಾದಿ ಮನವಿಡಿದು ನಡೆವುವು ತ್ರಿವಿಧಸಂಪತ್ತುಗಳು. ಪ್ರಾಣಲಿಂಗಿ ಶರಣನೈಕ್ಯವಾಗಿ ನಡೆದರಯ್ಯಾ ಕ್ರಿಯಾನುಭಾವವಿಡಿದು. ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಯತೇ ಜಂಗಮಸ್ಯಾವಮಾನೇನ ಸ್ಥಾವರಂ ನಿಷ್ಫಲಂ ಭವೇತ್ ಈ ಭೇದವನು ಭೇದಿಸಬಲ್ಲಡೆ ಇಂದೇ ಇಹವಿಲ್ಲ ಪರವಿಲ್ಲ. ಈ ಒಂದೇ ನಾನಾವಿಧಪ್ರಸಾದ ಅನೇಕದಿನದಿಂ ಪ್ರಸನ್ನನಾಗಲು ಪ್ರಸಾದ ಒಂದೇ ವಸ್ತು ಪರಶಿವನು. ಇದು ಕಾರಣ, ಶ್ರೀಗುರು ಪರಶಿವನು ಜಂಗಮವು ಪ್ರಸಾದವು ಒಂದೇ ಕಾಣಿರಣ್ಣಾ. ಚತುಷ್ಟವನು ವೇದ ಶಾಸ್ತ್ರ ಆಗಮ ಪುರಾಣದಿಂ ವಿಚಾರಿಸಲು ಒಂದೇ ವಸ್ತು. ಆ ವಿಚಾರವ ನಂಬದೇ ಕೆಡಬೇಡ. ಜಂಗಮವೆಯಿದುಸ ಭಗವಾನ್ ಯಸ್ಯ ಸರ್ವೆ’ ಎಂದುದಾಗಿ
`ಸರ್ವಕಾರಣಕಾರಣಾತ್’ ಎಂದು ಪರಶಿವಲಿಂಗವಲ್ಲದೆ ಇಲ್ಲ.
ಆತನ ಪ್ರಸನ್ನವೇ ಪ್ರಸಾದ, ಆ ಪ್ರಸಾದವೇ ಮುಕ್ತಿ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಶ್ರೀಗುರುಸ್ವಾಮಿ ಕರುಣಿಸಿಕೊಟ್ಟು ಪ್ರಾಣಲಿಂಗವು
ಪಂಚಬ್ರಹ್ಮಮುಖವುಳ್ಳ ವಸ್ತುವೆಂದರಿವುದು.
ಆ ಪಂಚಬ್ರಹ್ಮಮುಖಸಂಜ್ಞೆಯ ಭೇದವೆಂತೆಂದಡೆ:
ಆವುದಾನೊಂದು ಶಿವಸಂಬಂಧವಾದ ಪರಮತೇಜೋಲಿಂಗವು
ತನ್ನ ಭೋಗಾದಿಕಾರಣ ಮೂರ್ತಿಗಳಿಂದುದಯವಾದ
ಬ್ರಹ್ಮಾದಿತೃಣಾಂತವಾದ ದೇಹಿಗಳಿಂದಲೂ
ವೋಮಾದಿಭೂತಂಗಳಿಂದಲೂ
ಇತ್ಯಾದಿ ಸಮಸ್ತತತ್ತ್ವಂಗಳಿಂದಲೂ
ಮೇಲಣ ತತ್ತ್ವವುಪ್ಪುದೇ ಕಾರಣವಾಗಿ
ಪರವೆಂಬ ಸಂಜ್ಞೆಯದುಳ್ಳುದಾಗಿಹುದು.
ಅನಂತಕೋಟಿಬ್ರಹ್ಮಾಂಡಗಳ ತನ್ನೊಳಡಗಿಸಿಕೊಂಡು
ಸಮಸ್ತಜಗಜ್ಜನಕ್ಕೆ ತಾನೇ ಕಾರಣವಾಗಿ
ಅವ್ಯಕ್ತಲಕ್ಷಿತವಾದ ನಿಮಿತ್ತಂ
ಗೂಢವೆಂಬ ಸಂಜ್ಞೆಯದುಳ್ಳುದಾಗಿಹುದು.
ತಾನು ಶೂನ್ಯ ಶಿವತತ್ತ್ವಭೇದವಾಗಿ
ಆಯಸ್ಕಾಂತ ಸನ್ನಿಧಿಯಿಂದ ಲೋಹವೇ
ಹೇಗೆ ಭ್ರಮಿಸುವುದೋ ಹಾಗೆ
ಬ್ರಹ್ಮಾದಿಗಳ ಹೃತ್ಕಮಲಮಧ್ಯದಲ್ಲಿದ್ದು
ತನ್ನ ಚಿಚ್ಛಕ್ತಿಯ ಸನ್ನಿಧಿಮಾತ್ರದಿಂದ ಅಹಮಾದಿಗಳಿಂ
ವ್ಯೋಮಾದಿಭೂತಂಗಳಂ ಸೃಷ್ಟಿಸುವುದಕ್ಕೆ
ತಾನೇ ಕಾರಣವಪ್ಪುದರಿಂದ
ಶರೀರಸ್ಥವೆಂಬ ಸಂಜ್ಞೆಯದುಳ್ಳುದಾಗಿಹುದು.
ತನ್ನ ಸೃಷ್ಟಿಶಕ್ತಿಯಿಂದುದಯವಾದ
ಸಮಸ್ತಸಂಸಾರಾದಿ ಪ್ರಪಂಚವು
ತನ್ನಿಂದಲೇ ಕಾರಣವಪ್ಪುದರಿಂ
ಅನಾದಿವತ್ತೆಂಬ ಸಂಜ್ಞೆಯದುಳ್ಳುದಾಗಿಹುದು.
ತನ್ನ ಮಾಯಾಶಕ್ತಿಯಿಂದುದಯವಾದ
ಸ್ತ್ರೀಲಿಂಗ ಪುಲ್ಲಿಂಗ ನಪುಸಕಲಿಂಗವೆಂಬ
ತ್ರಿಲಕ್ಷಿತವಾದ ಸಮಸ್ತಪ್ರಪಂಚವು ವರ್ತಿಸುವುದಕ್ಕೆ
ತಾನೇ ಕ್ಷೇತ್ರವಾದ ಕಾರಣ
ಲಿಂಗಕ್ಷೇತ್ರವೆಂಬ ಸಂಜ್ಞೆಯದುಳ್ಳುದಾಗಿಹುದು.
ಈ ಪ್ರಕಾರದಿಂ ಪರಬ್ರಹ್ಮಲಿಂಗವು ಪಂಚಮುಖಸಂಜ್ಞೆಯ
ನುಳ್ಳುದಾಗಿಹುದೆಂದರಿವುದು.
ಅದೆಂತೆಂದಡೆ:ಅದಕ್ಕೆ ವಾತುಳಾಗಮದಲ್ಲಿ,
ಅಖಿಳಾರ್ಣವಲಯಾನಾಂ ಲಿಂಗತತ್ತ್ವಂ ಪರಂ ತತಃ
ಪರಂ ಗೂಢಂ ಶರೀರಸ್ಥಂ ಲಿಂಗಕ್ಷೇತ್ರಮನಾದಿವತ್
ಯದಾದ್ಯಮೈಶ್ವರಂ ತೇಜಸ್ತಲ್ಲಿಂಗಂ ಪಂಚಸಂಜ್ಞಕಂ
ಎಂದೆನಿಸುವ ಲಿಂಗವು.
ಮತ್ತಂ, ವಾಶಿಷ್ಠದಲ್ಲಿ:
ಪಿಂಡಬ್ರಹ್ಮಾಂಡಯೋರೈಕ್ಯಂ ಲಿಂಗಸೂತ್ರಾತ್ಮನೋರಪಿ
ಸ ಬಾಹ್ಯಾಂತರಯೋರೈಕ್ಯಂ ಕ್ಷೇತ್ರಜ್ಞಪರಮಾತ್ಮನೋಃ
ಎಂದೆನಿಸುವ ಲಿಂಗವು.
ಮತ್ತಂ ಬ್ರಹ್ಮಾಂಡಪುರಾಣದಲ್ಲಿ,
ಅಧಿಷ್ಠಾನಂ ಸಮಸ್ತಸ್ಯ ಸ್ಥಾವರಸ್ಯ ಚರಸ್ಯ ಚ !
ಜಗತೋ ಯದ್ಭವೇತ್ತತ್ತ್ವಂ ತದ್ದಿವ್ಯಂ ಸ್ಥಲಮುಚ್ಯತೇ
ಎಂದೆನಿಸುವ ಲಿಂಗವು.
ಮತ್ತಂ ಶಿವರಹಸ್ಯದಲ್ಲಿ,
ಮಹಾಲಿಂಗಮಿದಂ ದೇವಿ ಮನೋತೀತಮಗೋಚರಂ
ನಿರ್ನಾಮಂ ನಿರ್ಗುಣಂ ನಿತ್ಯಂ ನಿರಂಜನಂ ನಿರಾಮಯಂ
ಎಂದೆನಿಸುವ ಲಿಂಗವು.
ಮತ್ತಂ ಉತ್ತರವಾತುಳದಲ್ಲಿ,
ಆದ್ಯಂತಶೂನ್ಯಮಮಲಂ ಪರಿಪೂರ್ಣಮೇಕಂ
ಸೂಕ್ಷ್ಮಂ ಪರಾತ್ಪರಮನಾಮಯಮಪ್ರಮೇಯಂ
ಚಿಚ್ಛಕ್ತಿಸಂಸ್ಫುರಣರೂಢಮಹಾತ್ಮಲಿಂಗಂ
ಭಾವೈಕಗಮ್ಯಮಜಡಂ ಶಿವತತ್ತ್ವಮಾಹುಃ
ಎಂದೆನಿಸುವ ಲಿಂಗವು.
ಮತ್ತಂ ಅಥರ್ವಣವೇದದಲ್ಲಿ,
ಶಿವಂ ಪರಾತ್ಪರಂ ಸೂಕ್ಷ್ಮಂ ನಿತ್ಯಂ ಸರ್ವಗತಾವ್ಯಯಂ
ಅನಿಂದಿತಮನಾಪಮ್ಯಮಪ್ರಮಾಣಮನಾಮಯಮ್
ಶುದ್ಧತ್ವಾಚ್ಛಿವಮುದ್ದಿಷ್ಟಂ ಪರಾದೂಧ್ರ್ವಂ ಪರಾತ್ಪರಂ
ಎಂದೆನಿಸುವ ಲಿಂಗವು.
ಮತ್ತಂ ಸಾಮವೇದದಲ್ಲಿ,
ಅನಂತಮವ್ಯಕ್ತ ಮಚಿಂತ್ಯಮೇಕಂ
ಹರಂ ತಮಾಶಾಂಬರಮಪ್ರಮೇಯಂ
ಲೋಕೈಕನಾಥಂ ಭುಜಗೇಂದ್ರಹಾರಂ
ಅಜಂ ಪುರಾಣಂ ಪ್ರಣಮಾಮಿ ನಿತ್ಯಂ
ಅಣೋರಣೀಯಾನ್ ಮಹತೋ ಮಹೀಯಾನ್’ ಎಂದೆನಿಸುವ ಲಿಂಗವು. ಮತ್ತಂ ಶಿವಧರ್ಮಪುರಾಣದಲ್ಲಿ, ಆಕಾಶಂ ಲಿಂಗಮಿತ್ಯಾಹುಃ ಪೃಥ್ವೀ ತಸ್ಯಾದಿಪೀಠಿಕಾ ಆಲಯಸ್ಸರ್ವಭೂತಾನಾಂ ಲಯನಾಲ್ಲಿಂಗಮುಚ್ಯತೇ ಎಂದೆನಿಸುವ ಲಿಂಗವು. ಮತ್ತಂ ಗಾರುಡಪುರಾಣದಲ್ಲಿ, ಲಿಂಗಮಧ್ಯೇ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಂ ಲಿಂಗಬಾಹ್ಯಾತ್ ಪರಂ ನಾಸ್ತಿ ತಸ್ಮೈ ಶ್ರೀಗುರವೇ ನಮಃ ಎಂದೆನಿಸುವ ಲಿಂಗವು. ಮತ್ತಂ ಯಜುರ್ವೆದದಲ್ಲಿ, ವಿಶ್ವತಶ್ಚಕ್ಷುರುತ ವಿಶ್ವತೋಮುಖೋ ವಿಶ್ವತೋಬಾಹುರುತ ವಿಶ್ವತಸ್ಪಾತ್ ಸಂಬಾಹುಭ್ಯಾಂಧಮತಿ ಸಂಪತತ್ರೈದ್ರ್ಯಾವಾಭೂಮೀ ಜನಯನ್ ದೇವ ಏಕಃ ಎಂದೆನಿಸುವ ಲಿಂಗವು. ಮತ್ತಂ ಗಾಯತ್ರಿಯಲ್ಲಿ, ಓಂ ಭೂಃ ಓಂ ಭುವಃ ಓಂ ಸುವಃ ಓಂ ಮಹಃ ಓಂ ಜನಃ
ಓಂ ತಪಃ ಓಂ ಸತ್ಯಂ ಓಂ ತತ್ಸವಿತುರ್ವರೇಣ್ಯಂ
ಭರ್ಗೊ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್
ಎಂದೆನಿಸುವ ಲಿಂಗವು.
ಮತ್ತಂ ಸ್ಕಂದಪುರಾಣದಲ್ಲಿ
ಲೀಯತೇ ಗಮ್ಯತೇ ಯತ್ರ ಯೇನ ಸರ್ವಂ ಚರಾಚರಂ
ತದೇವ ಲಿಂಗಮಿತ್ಯಕ್ತಂ ಲಿಂಗತತ್ತ್ವಪರಾಯಣೈಃ
ಎಂದೆನಿಸುವ ಲಿಂಗವು.
ಮತ್ತಂ ಜ್ಞಾನವೈಭವಖಂಡದಲ್ಲಿ,
ಲಕಾರಂ ಲಯಸಂಪ್ರೋಕ್ತಂ ಗಕಾರಂ ಸೃಷ್ಟಿರುಚ್ಯತೇ
ಲಯನಾದ್ಗಮನಾಚ್ಚೈವ ಲಿಂಗಶಬ್ದಮಿಹೋಚ್ಯತೇ
ಎಂದೆನಿಸುವ ಲಿಂಗವು.
ಮತ್ತಂ ಮಹಿಮ್ನದಲ್ಲಿ,
‘ಚಕಿತಮಭಿಧತ್ತೇ ಶ್ರುತಿರಪಿ’
ಎಂದೆನಿಸುವ ಲಿಂಗವು.
ಮತ್ತಂ ಶಿವಧರ್ಮೊತ್ತರದಲ್ಲಿ,
‘ನ ಜಾನಂತಿ ಪರಂ ಭಾವಂ’ ಯಸ್ಯ ಬ್ರಹ್ಮಸುರಾದಯಃ
ಎಂದೆನಿಸುವ ಲಿಂಗವು.
ಮತ್ತಂ ಪುರುಷಸೂಕ್ತದಲ್ಲಿ,
`ಅತ್ಯತಿಷ್ಠದ್ದಶಾಂಗುಲಂ ಎಂದೆನಿಸುವ ಲಿಂಗವು.
ಮತ್ತಂ ಉಪನಿಷತ್ತಿನಲ್ಲಿ,
‘ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ’
ಎಂದೆನಿಸುವ ಲಿಂಗವು.
ಮತ್ತಂ ಕೂರ್ಮಪುರಾಣದಲ್ಲಿ,
‘ವಾಚಾತೀತಂ ಮನೋತೀತಂ ಭಾವಾತೀತಂ ನಿರಂಜನಂ
ಅವರ್ಣಮಕ್ಷರಂ ಬ್ರಹ್ಮ ನಿತ್ಯಂ ಧ್ಯಾಯಂತಿ ಯೋಗಿನಃ ‘
ಎಂದೆನಿಸುವ ಲಿಂಗವು.
ಮತ್ತಂ ಋಗ್ವೇದದಲ್ಲಿ,
‘ಆಯಂ ಮೇ ಹಸ್ತೋ ಭಗವಾನ್ ಅಯಂ ಮೇ ಭಗವತ್ತರಃ
ಅಯಂ ಮೇ ವಿಶ್ವಭೇಷಜೋಯಂ ಶಿವಾಭಿಮರ್ಶನಃ
ಅಯಂ ಮಾತಾ ಅಯಂ ಪಿತಾ ಅಯಂ ಜೀವಾತುರಾಗಮ್
ಎಂದೆನಿಸುವ ಲಿಂಗವು.
ಮತ್ತಂ ಉತ್ತರವಾತುಳದಲ್ಲಿ,
ಸ ಬಾಹ್ಯಾಭ್ಯಂತರಂ ಸಾಕ್ಷಾಲ್ಲಿಂಗಜ್ಯೋತಿಃ ಪರಂ ಸ್ವಕಂ
ತಿಲೇ ತೈಲಮಿವಾಭಾತಿ ಅರಣ್ಯಾಮಿವ ಪಾವಕಃ
ಕ್ಷೀರೇ ಸರ್ಪಿರಿವ ಸ್ರೋತಸ್ಯಂಬುವತ್ ಸ್ಥಿತಮಾತ್ಮನಿ
ಏಕೋಯಂ ಪುರುಷೋ ವಿಶ್ವತೈಜಸಪ್ರಾಜ್ಞರೂಪತಃ
ಸದಾ ಸ್ವಾಂಗೇಷು ಸಂಯುಕ್ತಮುಪಾಸ್ತೇ ಲಿಂಗಮದ್ವಯಂ
ಎಂದೆನಿಸುವ ಲಿಂಗವು.
ಮತ್ತಂ ಲೈಂಗ್ಯದಲ್ಲಿ,
ಅನಯೋದೃಷ್ಟಿಸಂಯೋಗಾಜ್ಞಾಯತೇ ಜ್ಞಪ್ತಿರೂಪಿಣೀ
ವೇಧಾದೀಕ್ಷಾ ತು ಸೈವಸ್ಯಾನ್ಮಂತ್ರರೂಪೇಣ ತಾಂ ಶ್ರುಣು
ಎಂದೆನಿಸುವ ಲಿಂಗವು.
ಮತ್ತಂ ಸಾರಪುರಾಣದಲ್ಲಿ,
ಹಸ್ತಮಸ್ತಕಸಂಯೋಗಾತ್ಕಲಾ ವೇಧೇತಿ ಗೀಯತೇ
ಗುರುಣೋದೀರಿತಾ ಕರ್ಣೆ ಸಾ ಮಂತ್ರೇತಿ ಕಥ್ಯತೇ
ಶಿಷಾಣಿತಲೇದತ್ತಾ ಸಾ ದೀಕ್ಷಾ ತು ಕ್ರಿಯೋಚ್ಯತೇ
ಎಂದೆನಿಸುವ ಲಿಂಗವು.
ಮತ್ತಂ ಕಾಳಿಕಾಖಂಡದಲ್ಲಿ,
ಅಂಗಂ ಚ ಲಿಂಗಂ ಚ ಮುಖಂ ಚ ಹಸ್ತಂ ಶಕ್ತಿಶ್ಚ ಭಕ್ತಶ್ಚ ತಥಾರ್ಪಣಂ ಚ
ಆನಂದಮೇವ ಸ್ವಯಮರ್ಪಣಂ ಚ ಪ್ರಸಾದರೂಪೇಣ ಭವೇತ್ರಿತತ್ತ್ವಂ
ಎಂದೆನಿಸುವ ಲಿಂಗವು.
ಮತ್ತಂ ಶಂಕರಸಂಹಿತೆಯಲ್ಲಿ,
ತದೇವ ಹಸ್ತಾಂಬುಜಪೀಠಮಧ್ಯೇ ನಿಧಾಯ ಲಿಂಗಂ ಪರಮಾತ್ಮಚಿಹ್ನಂ
ಸಮರ್ಚಯೇದೇಕಧಿಯೋಪಚಾರರೈರ್ನರಶ್ಚ ಬಾಹ್ಯಾಂತರಭೇದಭಿನ್ನಂ
ಎಂದೆನಿಸುವ ಲಿಂಗವು.
ಮತ್ತಂ ವೀರಾಗಮದಲ್ಲಿ,
ಭಾವಪ್ರಾಣಶರೀರೇಷು ಲಿಂಗಂ ಸಂಸಾರಮೋಚಕಂ
ಧಾರಯೇದವಧಾನೇನ ಭಕ್ತಿನಿಷ್ಠಸ್ಸುಬುದ್ಧಿಮಾನ್
ಎಂದೆನಿಸುವ ಲಿಂಗವು.
ಮತ್ತಂ ಶಿವರಹಸ್ಯದಲ್ಲಿ,
ಕರ್ಣದ್ವಾರೇ ಯಥಾವಾಕ್ಯಂ ಗುರುಣಾ ಲಿಂಗಮೀರ್ಯತೇ
ಇಷ್ಟಂ ಪ್ರಾಣಸ್ತಥಾ ಭಾವಸ್ತ್ರಿಧಾ ಚೈಕಂ ವರಾನನೇ
ಎಂದೆನಿಸುವ ಲಿಂಗವು
ಮತ್ತಂ ಶಿವರಹಸ್ಯದಲ್ಲಿ,
ಏಕಮೂರ್ತಿಸ್ತ್ರಯೋಭಾಗಾಃ ಗುರುರ್ಲಿಂಗಂ ತು ಜಂಗಮಃ
ಜಂಗಮಶ್ಚ ಗುರುರ್ಲಿಂಗಂ ತ್ರಿವಿಧಂ ಲಿಂಗಮುಚ್ಯತೇ
ಎಂದೆನಿಸುವ ಲಿಂಗವು.
ಗುರುಲಿಂಗಜಂಗಮರೂಪಾಗಿ ಎನ್ನ ಕರಸ್ಥಲಕ್ಕೆ ಬಿಜಯಂಗೈದು
ಕರತಲಾಮಲಕವಾಗಿ ತೋರುತ್ತೈದಾನೆ.
ಆಹಾ ಎನ್ನ ಪುಣ್ಯವೇ, ಆಹಾ ಎನ್ನ ಭಾಗ್ಯವೇ,
ಆಹಾ ಎನ್ನ ಸತ್ಯವೇ, ಆಹ ಎನ್ನ ನಿತ್ಯವೇ,
ಶಿವ ಶಿವ, ಮಹಾದೇವ, ಮಹಾದೇವ, ಮಹಾದೇವ
ನೀನೇ ಬಲ್ಲೆ, ನೀನೇ ಬಲ್ಲೆ,
ಉರಿಲಿಂಗಪೆದ್ದಿಪ್ರಿಯವಿಶ್ವೇಶ್ವರ.

ವಚನ
ಶ್ರೀಪಂಚಾಕ್ಷರಿ
ಸರ್ವಮಂತ್ರಗಳಿಗೆಲ್ಲಕ್ಕೂ
ವೇದಾದಿ ಸರ್ವವಿದ್ಯೆಗಳಿಗೆಯೂ ಮೂಲಕಾರಣ,
ಸಪ್ತಕೋಟಿಮಹಾಮಂತ್ರಾ ಉಪಮಂತ್ರಾಸ್ತ್ವನೇಕಶಃ
ಪಂಚಾಕ್ಷರ್ಯಾಂ ಪ್ರಲೀಯಂತೇ ಪುನಸ್ತಸ್ಯಾ ವಿನಿರ್ಗತಾಃ
ಎಂದುದಾಗಿ,
ಶ್ರೀ ಪಂಜಾಕ್ಷರಿವುಳ್ಳ ಶಿವಭಕ್ತನೆ ವೇದವಿತ್,
ಆ ಸದ್ಭಕ್ತನೆ ಶಾಸ್ತ್ರವಿತ್,
ಆ ಮಹಾಮಹಿಮನೆ ಪುರಾಣಿಕನು, ಆಗಮಿಕ ಸರ್ವಜ್ಞನಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಶ್ರೀಮತ್ಪಂಚಾಕ್ಷರಿಯ ಉಚ್ಚರಣದ ವಿಶ್ವಾಸದಿಂದ
ಉಪಮನ್ಯುವಿಂಗೆ ಶಿವಜ್ಞಾನ ಸಿದ್ಧಿಸಿತ್ತು.
ಶ್ರೀಮತ್ಪಂಚಾಕ್ಷರಿಯ ಉಚ್ಚರಣದ ವಿಶ್ವಾಸದ ಸಾಧನದಿಂದ
ವಸಿಷ್ಠ, ವಾಮದೇವ ಮೊದಲಾದ ಸಮಸ್ತಋಷಿಗಳಿಗೆ
ಹಿರಿದಪ್ಪ ಪಾಪದೋಷವು ಹರಿದಿತ್ತು.
ಶ್ರೀಮತ್ಪಂಚಾಕ್ಷರಿಯ ಉಚ್ಚರಣದ ವಿಶ್ವಾಸದ ಸಾಧನದಿಂದ
ಬ್ರಹ್ಮವಿಷ್ಣ್ವಾದಿಗಳಿಗೆ ಜಗತ್ಸೃಷ್ಟಿರಕ್ಷಾಪತಿತ್ವ ಸಾಧ್ಯವಾಯಿತ್ತು.
ಅದೆಂತೆಂದಡೆ:ಬ್ರಹ್ಮಾಂಡಪುರಾಣದಲ್ಲಿ,
ಉಪಮನ್ಯುಃ ಪುರಾ ಯೋಗೀ ಮಂತ್ರೇಣಾನೇನ ಸಿದ್ಧಿಮಾನ್
ಲಬ್ಧವಾನ್ಪರಮೇಶತ್ವಂ ಶೈವಶಾಸ್ತ್ರ ಪ್ರವಕ್ತೃತಾಂ
ಮತ್ತಂ, ವಿಷ್ಣುಪುರಾಣದಲ್ಲಿ,
ವಸಿಷ್ಠವಾಮದೇವಾದ್ಯಾ ಮುನಯೋ ಮುಕ್ತಕಿಲ್ಬಿಷಾಃ
ಮಂತ್ರೇಣಾನೇನ ಸಂಸಿದ್ಧಾ ಮಹಾತೇಜಸ್ವಿನೋಭವನ್
ಎಂದುದಾಗಿ,
ಮತ್ತಂ ಕೂರ್ಮಪುರಾಣದಲ್ಲಿ,
ಬ್ರಹ್ಮಾದೀನಾಂ ಚ ದೇವಾನಾಂ ಜಗತ್ಸೃಷ್ಟ್ಯರ್ಥಕಾರಣಂ
ಮಂತ್ರಸ್ಯಾಸ್ಯೈವ ಮಹಾತ್ಮ್ಯಾತ್ಸಾಮಥ್ರ್ಯಮುಪಜಾಯತೇ
ಎಂದುದಾಗಿ,
ಇಂತಪ್ಪ ಪುರಾಣವಾಕ್ಯಂಗಳನರಿದು ವಿಪ್ರರೆಲ್ಲರು
ಶ್ರೀ ಪಂಚಾಕ್ಷರಿಯ ಜಪಿಸಿರೋ, ಜಪಿಸಿರೋ.
ಮಂತ್ರಂಗಳುಂಟೆಂದು ಕೆಡಬೇಡಿ ಕೆಡಬೇಡಿ.
ಮರೆಯದಿರಿ, ಮಹತ್ತಪ್ಪ ಪದವಿಯ ಪಡೆವಡೆ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರದೇವರ ದಿವ್ಯನಾಮವನು.

ವಚನ
ಶ್ರೋತ್ರ, ತ್ವಕ್ಕು, ನೇತ್ರ, ಜಿಹ್ವೆ, ಘ್ರಾಣ,
ಶಬ್ದ ಸ್ಪರ್ಶ ರೂಪು ರಸ ಗಂಧ,
ಆಕಾಶ, ವಾಯು, ಅಗ್ನಿ, ಸಲಿಲ, ಭೂಮಿ.
ಈ ಸಕಲ ಕಾರಣ ಪ್ರಾಪ್ಯಸ್ವರೂಪನಾಗಿ,
“ಸಾಮವೇದಾಶ್ರಯೋ ಪುರುಷಃ
“ಸ್ವಯಂಜ್ಯೋತಿರಸ್ಮಿನ್ ಮಾನುಷತ್ವಂ ಉಪೇತ್ಯ
ಎಂಬ ಶ್ರುತಿಗೆ ಅಪ್ರತಿಮೇಯನಾಗಿ ವಿೂರಿದ,
ನಿತ್ಯ ಶುದ್ಧ ಪ್ರಬುದ್ಧ ಬೋಧ ವೇದ್ಯ ಸಂವಿದ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಸಕಲಜನರು ಹೇಸಿದ ಉದಾನವ ಶ್ವಾನ ಭುಂಜಿಸಿ
ತನ್ನ ಹೊಟ್ಟೆಯ ಹೊರೆವುದಲ್ಲದೆ.
ತನ್ನ ತಾ ಹೇಸಿದ ಉದಾನವ ಮುಟ್ಟದು ನೋಡಾ.
ಶ್ವಾನಗಿಂದವೂ ಕಡೆಯೆ?
ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ,
ಮರಳಿ ಭವಿಯ ಬೆರಸಿದಡೆ ಅವ ಭಕ್ತನಲ್ಲ,
ಅವ ಶ್ವಾನನಿಂದ ಕರಕಷ್ಟ.
ಇದು ನೀನೊಲಿದ ಶರಣಂಗಲ್ಲದೆ ಎಲ್ಲರಿಗೇಕಹುದು ಹೇಳಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಸಕಲವ ಪೂಜಿಸಿಹೆನೆಂಬವಂಗೆ,
ಸಕಲವನು ಲಿಂಗದಲ್ಲಿಯೇ ಪೂಜಿಸಬೇಕು.
ನಿಷ್ಕಲವ ಪೂಜಿಸಿಹೆನೆಂಬವಂಗೆ,
ನಿಷ್ಕಲವನು ಲಿಂಗದಲ್ಲಿಯೇ ಪೂಜಿಸಬೇಕು.
ಅದೆಂತೆಂದಡೆ:
ಸಕಲನಿಷ್ಕಲಾತ್ಮನು, ಸಕಲನಿಷ್ಕಲಾತೀತನು
ಲಿಂಗಾರ್ಚನೆಯಿಂದ ಪರ ಒಂದು ಇಲ್ಲಾಗಿ
ಒಳಹೊರಗೆಂಬ ಭಾವ ಅಳಿದುಳಿದ ಶರಣನ
ಅಂತರಂಗಬಹಿರಂಗಭರಿತನಾಗಿಹನು ಶಿವನು,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಸಟೆಯ ದಿಟವಮಾಡಿ ಕಂಡು ಸ್ವಭಾವವಾಗಿ ಸದ್ಭಾವದಿಂ ಲಿಂಗವಾಗಿ
ಲಿಂಗವನು ಭಕ್ತಿಯಿಂದ ಪೂಜಿಸಿ
ಲಿಂಗದಲ್ಲಿ ವರವ ಪಡೆದು, ಶಿವಪದವ ಪಡೆದರು ಪುರಾತನರು.
ಅದೆಂತೆನಲು ಕೇಳಿರೆ:
ಬಳ್ಳ ಲಿಂಗವೆ? ಅಲ್ಲ, ಅದು ಸಟೆ,
ಸದ್ಭಾವದಿಂ ಲಿಂಗವಾಯಿತ್ತು, ಬಳ್ಳೇಶ್ವರ ಮಲ್ಲಯ್ಯಗಳಿಂದ.
ಆಡಿನ ಹಿಕ್ಕೆ ಲಿಂಗವೆ? ಅಲ್ಲ, ಅದು ಸಟೆ.
ಸದ್ಭಾವದಿಂ ಲಿಂಗವಾಯಿತ್ತು, ಗೊಲ್ಲಾಳರಾಯನಿಂದ.
ನರಮಾಂಸವ ಭಕ್ಷಿಸುವೆನೆಂಬವ ಜಂಗಮವೆ? ಅಲ್ಲ, ಅದು ಸಟೆ.
ಸದ್ಭಾವದಿಂ ಭಾವಿಸೆ ಜಂಗಮವಾಗಿ ಕೇವಲ ಲಿಂಗವಾಯಿತ್ತು ಸಿರಿಯಾಳನಿಂದ.
ಸತ್ತ ಕರುವ ಹೊತ್ತು ಮಾದಾರನಾಗಿಬರುವುದು ಜಂಗಮಲಕ್ಷಣವೇ?
ಅಲ್ಲ, ಅದು ಸಟೆ.
ಸದ್ಭಾವದಿಂ ಭಾವಿಸೆ ಜಂಗಮ ಲಿಂಗವಾಯಿತ್ತು
ಕೆಂಭಾವಿಯ ಭೋಗಣ್ಣನಿಂದ.
ಡೊಂಬಿತಿ ಗುರುವೆ? ಅಲ್ಲ, ಅದೂ ಸಟೆ.
ಸದ್ಭಾವದಿಂ ಭಾವಿಸೆ ಲಿಂಗವಾಯಿತ್ತು ಗುರುಭಕ್ತಯ್ಯಂಗಳಿಂದ.
ಇಂತು ಸಟೆಯ ದಿಟವ ಮಾಡಿ
ದಿಟವಾದರು, ಸದ್ಭಕ್ತರಾದರು, ಕೇವಲ ಲಿಂಗವ ಮಾಡಿದರು.
ದಿಟ ಶಿವನ ಸಟೆಯ ಮಾಡಿ ಕಂಡು
ಸನತ್ಕುಮಾರನೊಂಟೆಯಾದನು.
ದಿಟ ಶಿವನ ಸಟೆಯ ಮಾಡಿ ಕಂಡು
ಬ್ರಹ್ಮ ತನ್ನ ಶಿರವ ಹೋಗಾಡಿಕೊಂಡನು.
ದಿಟ ಶಿವನ ಸಟೆಯ ಮಾಡಿ ಕಂಡು
ದಕ್ಷನು ತನ್ನ ಶಿರವ ಹೋಗಾಡಿಕೊಂಡನು.
ದಿಟ ಶಿವನ ಸಟೆಯ ಮಾಡಿ ಕಂಡು
ನರಸಿಂಹನು ವಧೆಗೊಳಗಾದನು.
ಈ ಮಹಾ ತಪ್ಪುಗಳನ್ನು ಮಾಡಿ ದೋಷಿಗಳಾದರು.
ಮಹಾಲಿಂಗದ ಸದ್ಭಕ್ತರು,
ಮಹಾಶರಣಪ್ಪ ನಂದೀಶ್ವರ ವೀರಭದ್ರ ಮೊದಲಾದ ಮಹಾಗಣಂಗಳಿಗೆ
ಸದ್ಭಕ್ತಿಯ ಮಾಡಿ ತಪ್ಪ ಪರಿಹರಿಸಿಕೊಂಡು ಸದ್ಭಕ್ತರಾದರು.
ಸಟೆಯ ದಿಟವ ಮಾಡುವ ಶಕ್ತಿಯಿಲ್ಲ ಎಮ್ಮ ಸದ್ಭಕ್ತರಂತೆ.
ಅದಂತಿರಲಿ, ದಿಟವ ಸಟೆಯ ಮಾಡಿ ದೋಷಿಗಳಾದಿರಿ ಅಭಕ್ತರಂತೆ.
ಅದಂತಿರಲಿ, ಸಟೆಯ ದಿಟವ ಮಾಡಬೇಡ, ದಿಟವ ಸಟೆಯ ಮಾಡಬೇಡ.
ಸಹಜಸ್ವಭಾವ ನಿತ್ಯಸತ್ಯವಹ ತಾತ್ಪರ್ಯವನೆ
ವಿಶ್ವಾಸವ ಮಾಡಿ, ನಂಬಿ ಭಕ್ತಿಯಿಂ ಪೂಜಿಸಿ
ಅವಿಶ್ವಾಸದಿಂ ಕೆಡಬೇಡ, ಕೆಡಬೇಡ.
ಸಹಜವಹ ದೃಷ್ಟವಹ ಪರಶಿವನು
ಶ್ರೀಗುರು ವಿಶ್ವಾಸವಂ ಮಾಡಿ ನಂಬಿರಣ್ಣಾ, ಮತ್ತೆಯೂ ನಂಬಿರಣ್ಣಾ.
ಆ ಪರಶಿವನು ಶ್ರೀಗುರುಲಿಂಗವು ಏಕವಾದ ಲಿಂಗವು
ವಿಶ್ವಾಸವ ಮಾಡಿ ನಂಬಿರಣ್ಣಾ, ಮತ್ತೆಯೂ ನಂಬಿರಣ್ಣಾ.
ಆ ಪರಶಿವಮೂರ್ತಿ ಜಂಗಮವು
ವಿಶ್ವಾಸವ ಮಾಡಿ ನಂಗಿರಣ್ಣಾ, ಮತ್ತೆಯೂ ನಂಬಿರಣ್ಣಾ.
ಕೇವಲವಿಶ್ವಾಸವ ಮಾಡಿ ಪ್ರಸಾದವ ಪಡೆದು ಮುಕ್ತರಾಗಿ, ಇದು ದೃಷ್ಟ.
ಅವಿಶ್ವಾಸದಿ ಕೆಡದಿರಿ ಕೆಡದಿರಿ. ಸರ್ವಸದ್ಭಾವವಿಶ್ವಾಸದಿಂ ಬದುಕಿರಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಲಿಂಗವ ನಂಬಿರಣ್ಣಾ.

ವಚನ
ಸತ್ಕ್ರೀಯಿಂದ ಸಕಲಪದಾರ್ಥಂಗಳ ಭಾಜನ ತೀವಿ,
ತನ್ನ ಲಿಂಗಕ್ಕೆ ಕೊಟ್ಟಲ್ಲದೆ ಕೊಳ್ಳೆನೆಂಬ
ಅಚ್ಚ ಪ್ರಸಾದಿಗಳಿಗೆ ಹುಸಿ ಹೊದ್ದಿತಲ್ಲಾ
ಪೃಥ್ವಿ ಅಪ್ಪು ತೇಜ ವಾಯು ಆಕಾಶ
ಕತ್ತಲೆ ಬಿಸಿಲು ಬೆಳದಿಂಗಳು ಮುಂತಾದ ಪದಾರ್ಥಂಗಳು ತನ್ನಂಗವ ಸೋಂಕಿ
ಅಲ್ಲಿ ಅರ್ಪಿತವೆಂದು ಕೊಳ್ಳಬಾರದು, ಅನರ್ಪಿತವೆಂದು ಕಳೆಯಬಾರದು.
ಇದು ಕಾರಣವದಂತಿರಲಿ,
ಆವ ವೇಳೆಯಲ್ಲಿ ಆವಠಾವಿನಲ್ಲಿ
ತನಗೆ ಬೇಕಾದ ಪದಾರ್ಥಂಗಳನು,
ತನ್ನ ಪ್ರಾಣಲಿಂಗವಿರಹಿತವಾಗಿ
ಉಂಡಡೆ ಭವದುಃಖವನುಂಬುದು ತಪ್ಪದಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಸತ್ತುರೂಪು ಲಿಂಗ,
ಚಿತ್ತುರೂಪು ಜಂಗಮ,
ಆನಂದರೂಪು ಪ್ರಸಾದ.
ಇಂತೀ ತ್ರಿವಿಧವಾದ ಅರಿವನು
ಶ್ರೀಗುರು ಇಷ್ಟಲಿಂಗದಲ್ಲಿ ತೋರಿ ಬಿಜಯಂಗೈಸಿ ಕೊಟ್ಟ ಬಳಿಕ,
ಸತ್ತುಚಿತ್ತಾನಂದವೆಂಬ ಬಟ್ಟಬಯಲೇಕಯ್ಯಾ?
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಸತ್ಯ ಛಲ ಭಾಷೆಯಿಂ ಸತಿಯಾಗಿರಬಲ್ಲ ಶರಣಂಗೆ ಲಿಂಗವೇ ಪತಿ.
ಗಮನಾಗಮನವರ್ಜಿತ, ಅರಿಷಡ್ವರ್ಗ ವರ್ಜಿತವ ಮಾಡಿ,
ಮಾಟದೊಳು ಬಹುಭಾಷಿತನಲ್ಲಾಗಿ ಸುಬುದ್ಧಿ.
ಲಿಂಗಪ್ರಾಣಿ ಎನ್ನ ಬಲ್ಲನಾಗಿ ಷಡುರುಚಿ ವಿರೋಧಿ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಸತ್ಯಸಹಜ ನಿತ್ಯ ಉತ್ತಮ ವಸ್ತು,
ನಿಜತತ್ವವೆನಿಸುವ ಶಿವನು ಒಂದೇ ವಸ್ತು.
ವೇದ, ಶಾಸ್ತ್ರ, ಪುರಾಣ, ಆಗಮ,
ಅಷ್ಟಾದಶ ವಿದ್ಯೆಂಗಳು ವಾದಿಸಲು,
ಅಂದೂ ಇಂದೂ ಶಿವತತ್ವ ಒಂದೇ ವಸ್ತುವೆಂದು ನಿರ್ಧರಿಸುವವು.
ಸಕಲ ನಿಃಕಲದೊಳಗೆ ಉತ್ತಮೋತ್ತಮ ವಸ್ತುವೊಂದೇ.
ಇದನರಿದು ನಿಶ್ಚೈಸುವ ವಿವೇಕವುಳ್ಳ ಮನ ಅಂದೂ ಇಂದೂ ಒಂದೇ.
ಇದನೆಂತೂ ನೀವೇ ಬಲ್ಲರಿ.
ಈ ಒಂದೊಂದರಲ್ಲೆ ಒಂದೊಂದ ಮಾಡಲು
ಒಂದಲ್ಲದೆ ಮತ್ತೊಂದಿಲ್ಲ.
ಇದಲ್ಲದೆ ಇನ್ನೊಂದುಂಟೆಂಬವಂಗೆ ಎರಡಲ್ಲದೆ ಒಂದಿಲ್ಲ.
ಅವಂಗೆ ಅಧೋಗತಿ, ಅವನಜ್ಞಾನಿ.
ಒಂದೆಂದರಿದವಂಗೆ ಜ್ಞಾನವಿದೆ, ಭಕ್ತಿಯಿದೆ, ಮುಕ್ತಿಯಿದೆ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಸದ್ಗುರುವಿನಿಂದ ಮಹತ್ತಪ್ಪ ಮಹಾಲಿಂಗ ಉತ್ಪತ್ತಿ,
ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ
ನಾದಬಿಂದುಕಲಾತೀತಂ ಗುರುಣಾ ಲಿಂಗಮುದ್ಭವಂ
ಎಂದುನಾಗಿ,
ಸದ್ಗುರುವಿನಿಂದ ಉರಿಲಿಂಗ ಉತ್ಪತ್ತಿ,
ಲಿಂಗದಿಂದವು ಜಂಗಮ ಉತ್ಪತ್ತಿ,
ಜಂಗಮದಿಂದವು ಪ್ರಸಾದೋತ್ಪತ್ತಿ,
ಪ್ರಸಾದದಿಂದವು ಭಕ್ತಿ ಉತ್ಪತ್ತಿ,
ಭಕ್ತಿ ಪ್ರಸಾದದಿಂದವೂ ಸಕಲೋತ್ಪತ್ತಿ.
ಇದು ಕಾರಣ,
ಪ್ರಸಾದವುಳ್ಳವಂಗೆ ಭಕ್ತಿ ಉಂಟು,
ಯುಕ್ತಿಯುಳ್ಳವಂಗೆ ಜಂಗಮ ಉಂಟು,
ಜಂಗಮವುಳ್ಳವಂಗೆ ಲಿಂಗ ಉಂಟು.
ಲಿಂಗವುಳ್ಳವಂಗೆ ಸದ್ಗುರು ಉಂಟು.
ಇದು ಕಾರಣ,
ಸದ್ಗುರುವೇ ಕಾರಣವು
ಗುರುಣಾ ದೀಯತೇ ಲಿಂಗಂ ಗುರುಣಾ ದೀಯತೇ ಕ್ರಿಯಾ
ಗುರುಣಾ ದೀಯತೇ ಮಂತ್ರಂ ಸದ್ಗುರುಸ್ಸರ್ವಕಾರಣಂ
ಎಂದುದಾಗಿ,
ಸದ್ಗುರುವೆ ಸರ್ವಶ್ರೇಷ್ಠನು,
ಸದ್ಗುರುವೆ ಸರ್ವಪೂಜ್ಯನು, ಸದ್ಗುರುವೆ ಸರ್ವಕಾರಣವಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಸದ್ಗುರುವೇ ಶಿವಲಿಂಗವು, ಸದ್ಗುರುವೇ ಜಂಗಮಲಿಂಗವು,
ಸದ್ಗುರುವೆ ಪ್ರಸಾದಲಿಂಗವು, ಸದ್ಗುರುವೆ ಸದ್ಭಕ್ತನು,
ಎಂದೆಂಬ ಮಹಾಜ್ಞಾನಜ್ಯೋತಿಪ್ರಕಾಶವಾದ
ಜ್ಯೋತಿರ್ಮಯಲಿಂಗವೇ ಗುರುವಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಸದ್ಗುರುಶ್ಶಿವಲಿಂಗಂ ಚ ಜಂಗಮಶ್ಚ ಪ್ರಸಾದಕಂ
ಚತುರ್ವಿಧಃ ಷಡಕ್ಷರೋ ಮಂತ್ರಸ್ಸಾಕ್ಷಾತ್ಪರಶ್ಶಿವಃ
ಓಂ ನಮಃ ಶಿವಾಯ ಓಂ ನಮಃ ಶಿವಾಯ
ಓಂ ನಮಃ ಶಿವಾಯ ಎಂದೆನ್ನದಿರೆ ಬಂಧನ,
ಓಂ ನಮಃ ಶಿವಾಯ ಎಂದೆನಲು ಮೋಕ್ಷ.
ಷಡಕ್ಷರಜಪಾನ್ನಾಸ್ತಿ ಸರ್ವೆಷಾಂ ಬಂಧನಂ ತಥಾ
ತನ್ಮಂತ್ರಂ ಚ ಜಪನ್ ಭಕ್ತ್ಯಾ ಸದ್ಯೋನ್ಮುಕ್ತೋ ನ ಸಂಶಯಃ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಸದ್ಭಕ್ತನು ತನು ಮನ ಧನ ಪ್ರಾಣಾದಿಗಳನರ್ಪಿಸಿ,
ಸಕಲ ಸಾಕಾರ ದ್ರವ್ಯಾದಿಗಳೆಲ್ಲವೂ ಶಿವನ ಸೊಮ್ಮಾಗಿ,
ಅದೆಂತೆಂದಡೆ ಋಗ್ವೇದ,
ಶಿವೋ ದಾತಾ ಶಿವೋ ಭೋಕ್ತಾ ಶಿವಸ್ಸರ್ವಮಿದಂ ಜಗತ್
ಶಿವೋ ಯಜತಿ ಸರ್ವತ್ರ ಯಶ್ಶಿವಸ್ಸೋಹಮೇವ ಚ ಎಂದುದಾಗಿ,
ಇದನರಿದು ದಾತೃ ಭೋಕ್ತೃ ಶಿವನೆಂದು,
ಅಹಂ ಮಮತೆಗಳಡಗಿ, ಸ್ವಾನುಭಾವವಳವಟ್ಟು,
ಬಾಗಿಲುಗಾಹಿಯಾಗಿ ದಾಸೋಹಮಂ ಮಾಡುವುದು,
ಇದು ಉತ್ತಮ ಕ್ರಿಯೆಯು.
ಇದು ಲಿಂಗದೊಡನೆ ಹುಟ್ಟಿ, ಲಿಂಗದೊಡನೆ ಬೆಳೆದು,
ಲಿಂಗದೊಡನೆ ಲೀಯವಹ ಮಹಾಲಿಂಗಾಂಗಿಗಲ್ಲದೆ ಸಾಧ್ಯವಾಗದು.
ಇದು ಅಳವಡದಿರ್ದಡೆ ಸದ್ಭಕ್ತನು
ತನು, ಮನ, ಧನ, ಪ್ರಾಣ ಮುಂತಾಗಿ
ವಂಚನೆ ಇಲ್ಲದೆ ಸದ್ಭಕ್ತಿಯಿಂ ದಾಸೋಹಮಂ ಮಾಡುವುದು.
ಇದು ಮಧ್ಯಮ ಕ್ರಿಯೆಯು. ಇದು ಸಾಮಾನ್ಯರಿಗಳವಡದು.
ಇದು ಅಸಾಧ್ಯವು.
ಇದು ಅಳವಡದಿರ್ದಡೆ, ಸದ್ಭಕ್ತನು ತನ್ನ
ತನು ಮನ ಪ್ರಾಣಂಗಳ ಬಳಲಿಸಿ
ತನಗೆ ಪ್ರಿಯವಾದ ಪುತ್ರ ಮಿತ್ರ ಕಳತ್ರಾದಿಗಳಿಗೆ
ಹೇಗೆ ಸಕಲ ದ್ರವ್ಯಂಗಳಂ ಕೊಡುವನೋ
ಹಾಗೆ ಸ್ನೇಹದಿಂದ ದಾಸೋಹವ ಮಾಡುವುದು,
ಇದು ಕನಿಷ್ಠಕ್ರಿಯೆಯು.
ಇದು ಮಹಾಜ್ಞಾನಿಪುರುಷರಿಗಲ್ಲದೆ ಅಳವಡದು.
ಇದು ಅಳವಡದಿರ್ದಡೆ, ಶಕ್ತ್ಯಾನುಸಾರದಿಂ ಮಾಡುವುದು.
ಇದು ನಿಕೃಷ್ಟಕ್ರಿಯೆಯು.
ಅದೆಂತೆಂದಡೆ:
ಶ್ರೂಯತಾಂ ಧರ್ಮಸರ್ವಸ್ವಂ ಶ್ರುತ್ವಾ ಚೈವಾವಧಾರ್ಯತಾಂ
ಆತ್ಮನಃ ಪ್ರತಿಕೂಲಂ ಚ ಪರೇಷಾಂ ನ ಸಮಾಚರೇತ್ ಎಂದುದಾಗಿ
ಇದನರಿತು ತನ್ನಂತೆ ಭಾವಿಸಿಯಾದಡೂ
ದಾಸೋಹವ ಮಾಡಿ ಪ್ರಸನ್ನತೆಯ ಪಡೆವುದೇ
ಸದ್ಭಕ್ತನ ಪಥವು ನೋಡಾ.
ಇಂತಪ್ಪ ಉತ್ತಮ ಮಧ್ಯಮ ಕನಿಷ್ಠ ನಿಕೃಷ್ಟವೆಂಬ
ಈ ನಾಲ್ಕು ಪರ್ಯಾಯದಲ್ಲಾದಡೆಯೂ,
ಒಂದು ಪರ್ಯಾಯದಲ್ಲಿ ಭಾವಿಸಿಕೊಂಡು,
ತನುಮನಧನವನಿತ್ತು ಸ್ನೇಹದಿಂದ ದಾಸೋಹವ ಮಾಡಿ
ಪ್ರಸಾದವ ಪಡೆದು ಭೋಗಿಸಿ, ಭಕ್ತರಾಗಬೇಕು.
ಈ ಪ್ರಕಾರದಿಂದಲ್ಲದೆ, ಮುಕ್ತಿ ಇಲ್ಲ.
ಈ ಚತುರ್ವಿಧ ಕ್ರಿಯೆಗಳೊಳಗೆ
ಆವುದನು ಮಾಡದೆ, ದುಷ್ಕ್ರಿಯೆಯಲ್ಲಿ ವರ್ತಿಸುತ್ತ
ದಾಸೋಹವವಿಲ್ಲದೆ, ತನ್ನೊಡಲನೆ ಹೊರೆದಡೆ
ಅವನು ಸದ್ಭಕ್ತರೊಳಗೆ ಸಲ್ಲ, ಅವಂಗೆ ಪ್ರಸಾದವಿಲ್ಲ.
ಪ್ರಸಾದವಿಲ್ಲಾಗಿ ಮುಕ್ತಿ ಇಲ್ಲ, ಅವನು ಉಭಯಭ್ರಷ್ಟ.
ಇದನರಿತು ತನ್ನಂತೆ ಭಾವಿಸಿ, ವಿಶ್ವಾಸದಿಂ ದಾಸೋಹವಂ ಮಾಡಲು,
ಇಹಸಿದ್ಧಿ, ಪರಸಿದ್ಧಿ, ಸರ್ವಸಿದ್ಧಿಯಯ್ಯ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಸದ್ಭಕ್ತಿಯೆ ಆರು ಸ್ಥಲಕ್ಕೆ ಮುಖ್ಯ
ಸದ್ಭಕ್ತಿಯ ಕೂಡಿಕೊಂಡು ಷಟ್ಸ್ಥಲವಿಪ್ಪುದು.
ಇದು ಕಾರಣ:
ಸದ್ಭಕ್ತಿಯಿಂ ಲಿಂಗದ-ಲಿಂಗವಂತರ ಸುಖವನು, ಮಹಿಮೆಯ ಪೂಜೆಯನು
ಅರಿದು ಮರೆದು ವಿಷ್ಣು ಕಷ್ಟಜನ್ಮದಲ್ಲಿ ಬಂದನು.
ಅರಿದು ಮರೆದು ಬ್ರಹ್ಮನು ಘನವೆಂದು
ಶಿರವ ಹೋಗಾಡಿಕೊಂಡನು.
ಅರಿದು ಮರೆದು ಇಂದ್ರನು ಭಂಗಿತನಾಗಿ
ಐಶ್ವರ್ಯಮಂ ಹೋಗಾಡಿಕೊಂಡನು.
ಅರಿದು ಮರೆದು ದಕ್ಷನು ಭಂಗಿತನಾಗಿ
ಶಿರವ ಹೋಗಾಡಿಕೊಂಡನು.
ಅರಿದು ಮರೆದು ವ್ಯಾಸನು ಹಸ್ತವ ಹೋಗಾಡಿಕೊಂಡನು.
ಈ ದೃಷ್ಟವ ಹಲವು ಪುರಾತನರು ಕೇಳಿರಣ್ಣಾ:
ಅರಿದು ಮರೆಯದೆ ನಂಬಲು
ಸಿರಿಯಾಳನಿಗೆ ಶಿವಪದವಾಯಿತ್ತು.
ಅರಿದು ಮರೆಯದೆ ನಂಬಲು
ಸಿಂಧುಬಲ್ಲಾಳಂಗೆ ಶಿವಪದವಾಯಿತ್ತು.
ಅರಿದು ಮರೆಯದೆ ನಂಬಲು
ನಂಬಿಯಣ್ಣನ ಬೆನ್ನಿಲಿ ಶಿವ ಬಂದನು.
ಅರಿದು ಮರೆಯದೆ ನಂಬಲು
ನಿಂಬವ್ವೆಗೆ ಶಿವಪದವಾಯಿತ್ತು.
ಅರಿದು ಮರೆಯದೆ ನಂಬಲು
ಕೆಂಭಾವಿಯ ಭೋಗಣ್ಣನ ಬೆನ್ನಿಲಿ ಶಿವ ಬಂದನು.
ಅರಿದು ಮರೆಯದೆ ನಂಬಲು
ಪುರಾತನರೆಲ್ಲರು ಶಿವಪದಂಗಳ ಪಡೆದರು.
ಇದನು ಶ್ರುತ ದೃಷ್ಟ ಅನುಮಾನದಿಂ ಕೇಳಿ, ನಿಶ್ಚೈಸಿ, ನಂಬಿ.
ಅರಿವಿನ ಹದವಿದು, ಮರವೆಯ ಪರಿಯಿದು
ಇಷ್ಟವಾದುದ ಹಿಡಿದು ಅನಿಷ್ಟವಾದುದ ಬಿಟ್ಟು
ಅರಿವು ಸಯವಾಗಲು ಶಿವಪದವಪ್ಪುದು ತಪ್ಪದು, ಶಿವನಾಣೆ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಸದ್ಯೋಜಾತ ವಾಮದೇವ ತತ್ಪುರುಷ ಅಘೋರ ಈಶಾನ್ಯವೆಂಬ
ಪಂಚಬ್ರಹ್ಮವೇ ಮೊದಲಾದ ಪಂಚಮುಖದ ರುದ್ರಾಕ್ಷಿ.
ಆ ರುದ್ರಾಕ್ಷಿಯ ಹಸ್ತ ತೋಳು ಕರ್ಣ ಕಂಠ
ಮಸ್ತಕದಲ್ಲಿ ಧರಿಸಿಪ್ಪ ಶಿವಭಕ್ತನೇ ರುದ್ರನು.
ಆತನ ದರ್ಶನದಿಂದ ಭವರೋಗ ದುರಿತ ಇರಲಮ್ಮವು ನೋಡಾ.
`ಓಂ ಅತ ಏವ ರುದ್ರಾಕ್ಷಧಾರಣಾತ್ ರುದ್ರಃ’
ಎಂದುದಾಗಿ
ರುದ್ರಪದವಿಯನೀವ ರುದ್ರಾಕ್ಷಿಯಂ ಧರಿಸಿಪ್ಪ ಭಕ್ತರಿಗೆ
ಶರಣೆಂಬೆನಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಸದ್ಯೋಜಾತಮುಖವೇ ಪೃಥ್ವಿ ಎಂದರಿದಲ್ಲಿ
ಸ್ಥಾವರಂಗಳಲ್ಲಿ ಪತ್ರಪುಷ್ಪದ ಹಂಗೇಕೆ?
ವಾಮದೇವಮುಖವೇ ಅಪ್ಪುವೆಂದರಿದಲ್ಲಿ
ಅಗ್ಗವಣಿಯಲ್ಲಿ ಮಜ್ಜನಕ್ಕೆರೆವ ಹಂಗೇಕೆ?
ಅಘೋರಮುಖವೇ ಅಗ್ನಿ ಎಂದರಿದಲ್ಲಿ
ಧೂಪದೀಪಾರತಿಗಳ ಹಂಗೇಕೆ?
ತತ್ಪುರುಷಮುಖವೇ ವಾಯುವೆಂದರಿದಲ್ಲಿ
ಮಂತ್ರತಂತ್ರದ ಹಂಗೇಕೆ?
ಈಶಾನ್ಯಮುಖವೇ ಆಕಾಶವೆಂದರಿದಲ್ಲಿ
ಧ್ಯಾನವರಿಾನದ ಹಂಗೇಕೆ?
ಇಂತೀ ಪಂಚಬ್ರಹ್ಮವೇ ಪರಬ್ರಹ್ಮವೆಂದರಿದ ಶರಣಂಗೆ
ಸರ್ವ ಉಪಚಾರಸಂಕಲ್ಪವೇಕೆ ಹೇಳಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ?

ವಚನ
ಸಪ್ತವ್ಯಸನಿಗಳಾದವರಿಗೆ ಆ ವ್ಯಸನಿಗಳ ಸಂಗದಿಂದಲ್ಲದೆ
ಆ ವ್ಯಸನಂಗಳು ಸಿದ್ಧಿಸವಯ್ಯಾ.
ಲಿಂಗವ್ಯಸನಿಗಳಿಗೆ ಆ ಲಿಂಗವ್ಯಸನಿಗಳ ಸಂಗದಿಂದಲ್ಲದೆ
ಆ ಲಿಂಗವ್ಯಸನಂಗಳು ಸಿದ್ಧಿಸವಯ್ಯಾ,
ಆ ಲಿಂಗವ್ಯಸನದಿಂದಲ್ಲದೆ ಜಂಗಮವ್ಯಸನ ಸಿದ್ಧಿಸದಯ್ಯಾ.
ಆ ಜಂಗಮವ್ಯಸನದಿಂದಲ್ಲದೆ ಪ್ರಸಾದವ್ಯಸನ ಸಿದ್ಧಿಸದಯ್ಯಾ,
ಆ ಪ್ರಸಾದವ್ಯಸನದಿಂದಲ್ಲದೆ ಮುಕ್ತಿಯಿಲ್ಲವಯ್ಯಾ.
ಇದು ಕಾರಣ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ,
ಲಿಂಗಾನುಭಾವಿಗಳ ಸಂಗವನೆ ಕರುಣಿಸಿ,
ಎನ್ನ ಮುಕ್ತನ ಮಾಡಯ್ಯಾ ನಿಮ್ಮ ಧರ್ಮ.

ವಚನ
ಸಮ್ಯಜ್ಞಾನ ಸದ್ಭಕ್ತಿ ಸನ್ನಹಿತನಾಗಿ,
ಲಿಂಗ ಮುಂತಾಗಿ ಮಾಡಿದ ಕ್ರೀಗಳು ಲಿಂಗಕ್ರೀ.
ಪೂಜೆ, ಧ್ಯಾನ, ಅರ್ಪಿತ, ಪ್ರಸಾದ, ಮುಕ್ತಿ ಇವೆಲ್ಲವು ಲಿಂಗದೊಳಗು.
ಅಜ್ಞಾನ, [ಅ]ಭಕ್ತಿ, ಮರವೆ, ಅಂಗ ಮುಂತಾಗಿ ಮಾಡಿದ ಕ್ರೀಗಳು ಅಂಗಕ್ರೀ,
ಅದು ಹೊರಗು.
ಇದು ಕಾರಣ, ಸಮ್ಯಜ್ಞಾನ ಸದ್ಭಕ್ತಿ ಸನ್ನಹಿತವಾದುದೆ ಸದ್ಭಕ್ತಿ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಸರ್ವಗತನಾಗಿ ನೀನೆನ್ನೊಳಗಿಹೆ,
ಸರ್ವೆಶ್ವರನಾಗಿ ನೀನೆನಗೊಡೆಯ,
ಸರ್ವಜ್ಞನಾಗಿ ನೀನೆನ್ನ ಬಲ್ಲೆ.
ನೀನರಿಯದಿರ್ದಡೆ ನಾನೇನಪ್ಪೆನು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ?

ವಚನ
ಸಾಕಾರವಿಡಿದು ಅರ್ಚನೆ ಪೂಜನೆಯಂ ಮಾಡುವುದಲ್ಲದೆ
ನಿರಾಕಾರವ ನಂಬಲಾಗದು.
ಅಗ್ನಿಯಲ್ಲಿಹ ಗುಣವು ಪ್ರಕಾಶದಲುಂಟೆ?
ಶ್ರೀಗುರು ಕರಸ್ಥಲದಲ್ಲಿ ಬಿಜಯಂಗೈಸಿ ಕೊಟ್ಟ
ಇಷ್ಟಲಿಂಗವಿದ್ದ ಹಾಂಗೆ ವಜ್ರದೊಳಗೆ ಬಯಲನರಸುವರೆ?
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಸಾಕಾರವಿಡಿದು ಪರಬ್ರಹ್ಮ, ನಿರಾಕಾರವಿಡಿದು ಪರಬ್ರಹ್ಮವೆಂಬಿರಿ.
ಪರಬ್ರಹ್ಮವ ನುಡಿವಿರಿ, ಪರಬ್ರಹ್ಮವನರಿದಿಹೆವೆಂಬಿರಿ,
ಅರಿಹಿಸಿಹೆವೆಂಬಿರಿ, ಆನೆ ಪರಬ್ರಹ್ಮವೆಂಬಿರಿ,
ಪರಬ್ರಹ್ಮವನರಿಯದೆ ನುಡಿವಿರಿ,
ಬ್ರಹ್ಮದೊಡಕು ಅರಿದು ಕಂಡಿರಣ್ಣಾ.
ಈ ಬ್ರಹ್ಮದೊಡಕಿಂದ ಮುನ್ನೊಮ್ಮೆ ದೇವಜಾತಿಗಳು ಋಷಿಜನಂಗಳು
ಬ್ರಹ್ಮನನು, ಪರಬ್ರಹ್ಮವ ಬೆಸಗೊಳಲು
ಅಹಂ ಬ್ರಹ್ಮವೆಂದು ತಲೆಯ ಹೋಗಾಡಿಕೊಂಡುದು
ಸರ್ವಪುರಾಣಪ್ರಸಿದ್ಧ,
ಇನ್ನೂ ತಲೆಯ ಮೋಟು ಕಾಣಬರುತ್ತದೆ.
ಬ್ರಹ್ಮನ ಶಿರ ಪರಬ್ರಹ್ಮದ ಕೈಯಲ್ಲಿದೆ.
ಆನೆ ಪರಬ್ರಹ್ಮವೆಂದು ಸನತ್ಕುಮಾರ ಒಟ್ಟೆಯಾದುದು
ಸ್ಕಂದ ಪುರಾಣಪ್ರಸಿದ್ಧ.
ಅವರಂತಾಗದೆ, ಪರಬ್ರಹ್ಮದ ನೆಲೆಯ ಕೇಳಿರಣ್ಣಾ:
ಲಿಂಗವೇ ಪರಬ್ರಹ್ಮವೆಂದು ಅಥರ್ವಣ ಹೇಳುತ್ತದೆ,
ಏಕೋ ರುದ್ರಸ್ಸ ಈಶಾನಃ ಸ ಭಗವಾನ್ ಸ ಮಹೇಶ್ವರೋ ಮಹಾದೇವ ಇತಿ ಈ ಪ್ರಕಾರದಲೆ ಯಜುರ್ವೆದ ಹೇಳುತ್ತಿದ್ದಿತ್ತು. ಋತಂ ಸತ್ಯಂ ಪರಂ ಬ್ರಹ್ಮ ಪುರುಷಂ ಕೃಷ್ಣ ಪಿಂಗಲಂ ಊಧ್ರ್ವರೇತಂ ವಿರೂಪಾಕ್ಷಂ ವಿಶ್ವರೂಪಾಯ ವೈ ನಮಃ ಈ ಪ್ರಕಾರದಲ್ಲಿ ಶಿವಸಂಕಲ್ಪೋಪನಿಷತ್ ಹೇಳುತ್ತಿದೆ. ಋತಂ ಸತ್ಯಂ ಪರಂ ಬ್ರಹ್ಮಪುರುಷಂ ಕೃಷ್ಣ ಪಿಂಗಲಂ ಊಧ್ರ್ವರೇತಂ ವಿರೂಪಾಕ್ಷಂ ತನ್ಮೇ ಮನಶ್ಶಿವಸಂಕಲ್ಪಮಸ್ತು ಎಂದುದಾಗಿ ಲಿಂಗವೇ ಪರಬ್ರಹ್ಮ. ಮುನ್ನೊಮ್ಮೆ ಹರಿಬ್ರಹ್ಮರ ಸಂವಾದದಲ್ಲಿ ಉರಿಲಿಂಗ ಉದ್ಭವವಾದಲ್ಲಿ ಹರಿಬ್ರಹ್ಮಾದಿಗಳು ಸ್ತೋತ್ರವ ಮಾಡಿದರು. ಲೈಂಗ್ಯ ಪುರಾಣದಲ್ಲಿ, ಜ್ವಾಲಾಮಾಲಾವೃತಾಂಗಾಯ ಜ್ವಲನಸ್ತಂಭರೂಪಿಣೇ ನಮಶ್ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ ಇದು ಮುನ್ನೊಮ್ಮೆ ಬ್ರಹ್ಮಕಾರಣ ಲಿಂಗವೇ ಪರಬ್ರಹ್ಮ, ಶಿವನೇ ಪರಬ್ರಹ್ಮವೆಂದು ಮತ್ತೆ ಯಜುರ್ವೆದ ನುಡಿಯುತ್ತಿದೆ. ಈಶಾನಸ್ಸರ್ವವಿದ್ಯಾನಾಮೀಶ್ವರಸ್ಸರ್ವಭೂತಾನಾಂ ಬ್ರಹ್ಮಾದಿಪತಿ ಬ್ರಹ್ಮಣೋಧಿಪತಿಬ್ರ್ರಹ್ಮಾ ಶಿವೋ ಮೇಸ್ತು ಸದಾಶಿವೋಂ ಆದಿತ್ಯ ಪುರಾಣದಲೂ ಮಹಾಪುರುಷ ಆದಿತ್ಯ ಹೇಳುತ್ತಿದ್ದಾನೆ: ಪರಬ್ರಹ್ಮಾ ಚ ಈಶಾನ ಏಕೋ ರುದ್ರಸ್ಸ ಏವ ಚ ಭಗವಾನ್ ಮಹೇಶ್ವರಸ್ವಾಕ್ಷಾನ್ಮಹಾದೇವೋ ನ ಸಂಶಯಃ ಯಸ್ಯಾಂತಸ್ಥಾನಿ ಭೂತಾನಿ ಯೇನೇದಂ ಧಾರ್ಯತೇ ಜಗತ್ ಬ್ರಹ್ಮೇತಿ ಯಂ ಜಹುರ್ವೆದಾಃ ಸರ್ವೆ ತಂ ಶರಣಂ ವ್ರಜೇತ್ ಕೂರ್ಮ ಈಶ್ವರಗೀತೆಯಲ್ಲಿ, ಆವ್ಯಕ್ತಂ ಕಾರಣಂ ಪ್ರಾಹುರಾನಂದಂ ಜ್ಯೋತಿರಕ್ಷರಂ ಅಹಮೇವ ಪರಬ್ರಹ್ಮ ಮತ್ತೋನ್ಯಂ ಹಿ ನ ವಿದ್ಯತೇ ಅಹಂ ತತ್ಪರಮಂ ಬ್ರಹ್ಮ ಪರಮಾತ್ಮಾ ಸನಾತನಃ ಮಹಾಪುರುಷ ಮನು ಮಾನವಪುರಾಣದಲ್ಲೂ ಹೇಳಿದನು: ಋತಂ ಸತ್ಯಂ ಪರಬ್ರಹ್ಮಪುರುಷಂ ಸೋಮವೀಶ್ವರಂ ಊಧ್ರ್ವರೇತಂ ಸಮುತ್ಪತ್ತಿಸ್ಥಿತಿಸಂಹಾರಕಾರಣಂ ವಿಶ್ವರೂಪಂ ವಿರೂಪಾಕ್ಷಂ ಚಂದ್ರಮೌಳಿಂ ಘೃಣಾನಿಧಿಂ ಹರಣ್ಯಬಾಹುಮದ್ವಂದ್ವಂ ಹಿರಣ್ಯಪತಿಮೀಶ್ವರಂ ಅಂಬಿಕಾಯಾಃ ಪತಿಂ ಸಾಕ್ಷಾದುಮಾಯಾಃ ಪತಿಮಕ್ರಿಯಂ ಪರತತ್ವಂ ಸಮಾಖ್ಯಾತಂ ಶಿವಂ ಧ್ಯಾಯಂತಿ ಸಂತತಂ ತೈತ್ತಿರೀಯ ಶ್ರುತಿ, ಸದ್ವಿಪ್ರಾಹಿ…..
ಎಂದುದಾಗಿ,
ಬಹಳ ಬಹಳ ಚಕ್ಷು, ಬಹಳ ಬಹಳ ಮುಖನು,
ಬಹಳ ಬಹಳ ಬಾಹು, ಬಹಳ ಪಾದನು,
ಇಂತಹ ಬಹಳ ಲಿಂಗವೆ, ಬ್ರಹ್ಮ ಕಾಣಿರಣ್ಣಾ.
`ಅಣೋರಣೀಯಾನ್ ಮಹತೋ ಮಹೀಯಾನ್’
ಎಂದುದಾಗಿ,
ಬಹಳಕ್ಕೆ ಬಹಳ, ಮಹಾಬಹಳ ಲಿಂಗವೆ ಬಹಳಬ್ರಹ್ಮ ಕಾಣಿರಣ್ಣಾ.
ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ
ನಾದಬಿಂದುಕಳಾತೀತಂ ಗುರುಣಾ ಲಿಂಗಮುದ್ಭವಂ
ಎಂದುದಾಗಿ,
ಮನೋವಾಕ್ಕಾಯ ನಾದಬಿಂದುಕಳೆಗೆ ಅತೀತನಾದ
ಮಹಾಬಹಳ ಲಿಂಗವನು ಶ್ರೀಗುರು ನಿರೂಪಿಸಿ ಕೊಟ್ಟನಾಗಿ
ಈ ಲಿಂಗವೇ ಪರಬ್ರಹ್ಮ ಕಾಣಿರಣ್ಣಾ.
ಇದು ಕಾರಣ,
ಪರಬ್ರಹ್ಮಲಿಂಗವೆಂದು ಧ್ಯಾನಿಸಿ ಪೂಜಿಸಿ
ಮಹಾನಂದ ಪರಮುಕ್ತಿಯನೈದಿದರು ಪೂರ್ವದಲ್ಲಿ
ದೇವಜಾತಿಗಳು ಹಲಬರು, ಇದು ಪುರಾಣ ಪ್ರಸಿದ್ಧ.
ಕಲಿಯುಗದಲ್ಲಿ ದೃಷ್ಟ:
ಬಸವರಾಜದೇವರು ಮೊದಲಾದ ಅಸಂಖ್ಯಾತ ಮಾಹೇಶ್ವರರು ಇದನರಿದು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಲಿಂಗವೆ
ಪರಬ್ರಹ್ಮವೆಂದು ಅರಿದು ಧ್ಯಾನಿಸಿ ಪೂಜಿಸಿ
ಮಹದಾನಂದಮುಕ್ತಿಯನೈದಿದರಣ್ಣಾ.

ವಚನ
ಸಾಲೋಕ್ಯವೆಂದೇನೋ,
ಅಂಗದ ಮೇಲೆ ಲಿಂಗಸಂಬಂಧವಾಗಿರುತ್ತಿರಲು?
ಸಾಮೀಪ್ಯವೆಂದೇನೋ,
ಗುರುಲಿಂಗಜಂಗಮದಾಸೋಹ ಸನ್ನಿಧಿಯೊಳಿರುತ್ತಿರಲು?
ಸಾರೂಪ್ಯವೆಂದೇನೋ,
ಅನವರತ ಅರ್ಚನೆಯೊಳಿರುತ್ತಿರಲು?
ಸಾಯುಜ್ಯವೆಂದೇನೋ,
ಚತುರ್ದಶಭುವನವನೊಳಕೊಂಡ ಮಹಾಧನವ
ಮನ ಅವಗವಿಸಿ ನೆನೆಯುತ್ತಿರಲು?
ಇಂತೀ ಚತುರ್ವಿಧ ಪದವೆಂಬುದೇನೋ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ, ನಿಮ್ಮನರಿದ ಶರಣಂಗೆ?

ವಚನ
ಸಾವುದು ದಿಟ ದಿಟ ನೋಡಾ.
ಅದು ಸಟೆಯೆಂದು ನಿತ್ಯವೆಂದನಿತ್ಯವ ನಂಬಿ
ಹೊನ್ನು ಹೆಣ್ಣು ಮಣ್ಣು ನಿನ್ನವೆಂದು ನಂಬಿರಲು
ಅವು ನಿನ್ನ ವಂಚಿಸಿ ಅನ್ಯರಿಗೆ ಹೋದುದನರಿಯಿ?.
ಅಯ್ಯೋ! ಅಯ್ಯೋ! ಕೆಡದಿರಿ ಕೆಡದಿರಿ, ಸತ್ಪಾತ್ರಕ್ಕೆ ಸಲಿಸಿ ಬದುಕಿರಯ್ಯಾ.
ಗುರುಲಿಂಗಜಂಗಮಕ್ಕೆ ಸದ್ಭಕ್ತಿಯಂ ದಾಸೋಹವಂ ಮಾಡಲು ನಿತ್ಯನು.
ಇದು ಸಟೆಯೆಂದು ನರಕಕ್ಕಿಳಿದು ಕೆಡದಿರಿ ಕೆಡದಿರಿ,
ಇದನರಿದು ಸಟೆಯ ದಿಟವ ಮಾಡದಿರಿ.
ಗುರುಲಿಂಗಜಂಗಮಕ್ಕೆ ದಾಸೋಹವ ಮಾಡುವುದೆ ದಿಟ.
ಇದು ಸತ್ಯ ಇದು ಸತ್ಯ, ಇದೇ ನಿತ್ಯ ಇದೇ ಯುಕ್ತಿ ಇದೇ ಭಕ್ತಿ,
ಇದೇ ಶಕ್ತಿ ಇದೇ ಮುಕ್ತಿ ಇದು ಸತ್ಯ.
ಶಿವ ಬಲ್ಲ, ಶಿವನಾಣೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ವಚನ
ಸೂರ್ಯನಿಲ್ಲದೆ ಹಗಲುಂಟೆ ಅಯ್ಯಾ?
ದೀಪ ಇಲ್ಲದೆ ಬೆಳಕುಂಟೆ ಅಯ್ಯಾ?
ಪುಷ್ಪವಿಲ್ಲದೆ ಪರಿಮಳವನರಿಯಬಹುದೆ ಅಯ್ಯಾ?
ಸಕಲವಿಲ್ಲದೆ ನಿಷ್ಕಲವ ಕಾಣಬಾರದು.
ಮಹಾಘನ ನಿರಾಳ ಪರಶಿವನಿಂದ ಲಿಂಗವು ತೋರಿತ್ತು,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ

ವಚನ
ಸೂಳೆ ಭಕ್ತೆಯಾದಡೆ ಮಿಂಡಜಂಗಮಕ್ಕಲ್ಲದೆ ಮಾಡಳು.
ಬ್ರಾಹ್ಮಣ ಭಕ್ತನಾದಡೆ ಕುಲಕಂಜಿ ನೆಂಟರು ಇಷ್ಟರಿಗಲ್ಲದೆ ಮಾಡನು.
ಶೂದ್ರ ಭಕ್ತನಾದಡೆ ನಚ್ಚುಮಚ್ಚಿನ ಜಂಗಮಕ್ಕಲ್ಲದೆ ಮಾಡನು.
ಇದಕ್ಕೆ ಶ್ರುತಿ:
“ಓಂ ದಂಡಂ ದ್ವಿಜಂ ಕಿರಾತಂ [ಕುಲ]ತಂತ್ರಂ
ಎಂದುದಾಗಿ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ,
ನಿಷ್ಪ್ರಹನೆಂಬ ಜಂಗಮಕ್ಕೆ ಮಾಡುವರಾರನೂ ಕಾಣೆನಯ್ಯ.

ವಚನ
ಸೆಜ್ಜೆ ಶಿವದಾರ ವಸ್ತ್ರದಲ್ಲಿ ಹುದುಗಿಸಿ ಲಿಂಗವ ಧರಿಸಿಕೊಂಡು
ಅಂಗಲಿಂಗಸಾಹಿತ್ಯವಾಗಿ,
ಭಕ್ತರೆಂದು ಮಜ್ಜನಕ್ಕೆರೆವ
ಭಂಗಿತರ ಮಾತ ಕೇಳಲಾಗದು, ಬಾಲನುಡಿ.
ತನುಗುಣವಿರಹಿತವಾಗಿ ಮಜ್ಜನಕ್ಕೆರೆಯಲರಿಯರಾಗಿ ಭಕ್ತರೆನ್ನೆ.
ಮನವೇ ಸೆಜ್ಜೆ, ನೆನಹೇ ಶಿವದಾರವಾಗಿ, ಸಮತೆಯೇ ಲಿಂಗವಾಗಿ
ತನ್ನ ಮರೆದು ಮಜ್ಜನಕ್ಕೆರೆವರ ಭಕ್ತರೆಂಬೆನಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಸೊಡರ ಹಿಡಿದು ಕುಣಿಯಲ್ಲಿ ಬೀಳುವವರ ಕಂಡು,
ವಿಧಿಯ ಕೈಯಲ್ಲು ನಿಸ್ತರಿಸಲಾರೆನಯ್ಯಾ ನಾನು.
ಅಹಂಗಾದೆನಲ್ಲಾ ಎಂಬ ಚಿಂತೆಯ ನಿಸ್ತರಿಸಲಾರೆನಯ್ಯಾ.
ವೇದವೆಂಬ ಮಹಾಜ್ಯೋತಿಯ ಹಿಡಿದು ಶಿವಪಥದಲ್ಲಿ ನಡೆಯಲರಿಯದೆ
ಪಾಪದ ಕುಣಿಯಲ್ಲಿ ಬೀಳುವವರ ಕಂಡು ನಗೆಯಾದುದಯ್ಯಾ.
ಗುರೂಪದೇಶವೆಂಬ ಜ್ಯೋತಿಯ ಹಿಡಿದು,
ಶಿವಪಥದಲ್ಲಿ ನಡೆದು
ಪ್ರಸಾದವೆಂಬ ನಿಧಾನವ ಕಂಡುಕೊಂಡು
ಉಂಡು ಪರಿಣಾಮಿಸಿ ಬದುಕಿದೆನಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಸ್ತನಾಮೃತವ ಸೇವಿಸುವ ಶಿಶು ಸಕ್ಕರೆಯನಿಚ್ಛಿಸುವುದೆ?
ಪರುಷ ದೊರಕೊಂಡ ಪುರುಷನು ಜರಗ ತೊಳೆಯಲಿಚ್ಛೈಸುವನೇ?
ದಾಸೋಹವ ಮಾಡುವ ಭಕ್ತನು ಮುಕ್ತಿಯನಿಚ್ಛೈಸುವನೇ?
ಇವರು ಮೂವರಿಗೆಯೂ ಇನ್ನಾವುದೂ ಇಚ್ಛೆಯಿಲ್ಲ.
ರುಚಿ ಪದಾರ್ಥವಿದ್ದಂತೆ. ಲಿಂಗಪದವು ಸಹಜಸುಖವಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಸ್ಥೂಲತನು ಸೂಕ್ಷ್ಮತನುವಿಡಿದು ಜಾಗ್ರತೆಯಲ್ಲಿ
ಶ್ರೀಗುರುಲಿಂಗಜಂಗಮದಾಸೋಹವ ಮಾಡದೆ
ಮಾತಿನಬ್ರಹ್ಮ ಲಿಂಗವಂತರಿಗೆ ತರ್ಕವೇತಕಯ್ಯಾ?
ಸೂಕ್ಷ್ಮತನುವಿಡಿದು ಸ್ವಪ್ನದಲ್ಲಿ
ಇಷ್ಟಲಿಂಗದಲ್ಲಿ ಪ್ರಾಣವೆಚ್ಚರಿಕೆಯಲ್ಲಿ
ಅರಿವೇ ಲಿಂಗವಲ್ಲದೆ ಬ್ರಹ್ಮವಾವುದಯ್ಯಾ?
ಕಾರಣತನುವಿಡಿದು ಸುಷುಪ್ತಿಯಲ್ಲಿ
ತೃಪ್ತಿಲಿಂಗದಲ್ಲಿ ಪ್ರಾಣಲೀಯವಾಗಿ
ಕುರುಹನರಿವನುಳಿದ ಸುಖದರಿವಿನ ಲಿಂಗವನರಿದ ಬಳಿಕ
ನಿರಾಕಾರಬ್ರಹ್ಮವೆಂಬ ನುಡಿಯದೇಕೆ?
ಲಿಂಗಬ್ರಹ್ಮವಾಗಿಪ್ಪರು ನಮ್ಮ ಶರಣರು.
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಸ್ವಸ್ತಿ ಸಮಸ್ತವಿದ್ಯಾದಿ ಮೂಲವಹ
ಋಕ್ಯಜುಸ್ಸಾಮಾಥರ್ವಣದಲ್ಲಿ ಅಂತರ್ಗತವಾಗಿಹ
ಶ್ರೀರುದ್ರ, ಪಂಚಬ್ರಹ್ಮ, ಶ್ವೇತಾಶ್ವತರ, ಬ್ರಹದಾರಣ್ಯಕ,
ಕೇನ, ಈಶ, ಜಾಬಾಲ, ಗರ್ಭ, ಕಾಲಾಗ್ನಿರುದ್ರ, ವಾಜಸನೇಯ,
ಶಿವಸಂಕಲ್ಪ, ಬ್ರಹ್ಮಬಿಂದು, ಕಾತ್ಯಾಯನ, ಕಣ್ವ
ಇತ್ಯಾದಿ ನಿಖಿಲೋಪನಿಷತ್ತುಗಳನ್ನು ಪ್ರತಿಪಾದಿಸಿ ನೋಡಲು,
ನಿತ್ಯಶುದ್ಧ ನಿರ್ಮಲಪರಶಿವನನ್ನು
ಸತ್ಯಶುದ್ಧ ಶಿವಾಚಾರಸಂಪನ್ನಭಕ್ತರನಲ್ಲದೆ
ವಿಸ್ತರಿಸಿ ಸ್ತುತಿಗೈದುದಿಲ್ಲ. ಅದಕ್ಕೆ ಶಪಥ,
ಆ ವೇದಪುರಷರ ಚಿತ್ತವೇ ಸಾಕ್ಷಿ.
ಶಿವನ ಶರಣರು ವಾಙ್ಮಾನಸಾಗೋಚರರು ಎಂದು ಹೇಳುತ್ತಲಿದೆ ಶ್ರುತಿ.
ಅಖಿಲಬ್ರಹ್ಮಾಂಡಂಗಳಿಗೆ ಪಿತಮಾತೆಯಹ ಶಿವನಲ್ಲಿ
ಶಿವನ ಶರಣನು ಅವಿರಳನೆಂಬುದಕ್ಕೆ
ಯಥಾ ಶಿವಸ್ತಥಾ ಭಕ್ತಃ’ ಎಂಬ ವೇದವಾಕ್ಯವೇ ಪ್ರಮಾಣ. ನಾಭ್ಯಾ ಅಸೀದಂತರಿಕ್ಷಂ ಶೀಷ್ಣರ್ೊದ್ಯಾಃ ಸಮವರ್ತತ’ ಎಂಬ ಶ್ರುತಿ,
ಸಕಲ ಬ್ರಹ್ಮಾಂಡಕೋಟಿಗಳು ಶಿವನ ನಾಭಿಕೂಪದಲ್ಲಿ
ಅಡಗಿಹವೆಂದು ಹೇಳಿತ್ತು.
ಭಕ್ತಸ್ಯ ಹೃತ್ಕಮಲಕರ್ಣಿಕಾಮಧ್ಯಸ್ಥಿತೋಹಂ ನ ಸಂಶಯಃ ಎಂಬ ಶ್ರುತಿ, ಅಂತಹ ಶಿವನು ಸದ್ಭಕ್ತನೊಳಗಡಗಿಹನೆಂದು ಹೇಳಿತ್ತು. ಅಘೋರೇಭ್ಯೋಥ ಘೋರೇಭ್ಯೋ ಘೋರಘೋರತರೇಭ್ಯಃ
ಸರ್ವೆಭ್ಯಃ ಸರ್ವಶರ್ವೆರಭ್ಯೋ ನಮಸ್ತೆ ಅಸ್ತು ರುದ್ರರೂಪೇಭ್ಯಃ ಎಂಬ ಶ್ರುತಿ,
ಶಿವನ ಅಘೋರಮೂರ್ತಿಯ ನಿತ್ಯತೇಜೋಮೂರ್ತಿಯೆಂದು ಹೇಳಿತ್ತು.
ಜ್ಯೋತಿರ್ಲಿಂಗತ್ವಮೇವಾಯರ್ೆ ಲಿಂಗೀ ಚಾಹಂ ಮಹೇಶ್ವರಿ
ತದೇತದವಿಮುಕ್ತಾಖ್ಯಂ ಜ್ಯೋತಿರಾಲೋಕ್ಯತಾಂ ಪ್ರಿಯೇ ಎಂಬ ವಾಕ್ಯ,
ಶರಣಸತಿ ಲಿಂಗಪತಿಯಹ ಶಿವನ ಶರಣನೇ ಜ್ಯೋತಿರ್ಲಿಂಗವೆಂದು ಹೇಳಿತ್ತು.
ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ
ಉರ್ವಾರುಕಮಿವ ಬಂಧನಾನ್ಮೃತ್ಯೋರ್ಮುಕ್ಷೀಯ ಮಾಮೃತಾತ್ ಎಂಬ ಶ್ರುತಿ,
ಶಿವಧ್ಯಾನ ಸ್ತುತಿ ನಿರೀಕ್ಷಣೆ ಪೂಜೆಯಿಂದಲ್ಲದೆ
ಜನ್ಮ ಮೃತ್ಯು ಜರಾ ವ್ಯಾಧಿ ಹಿಂಗಿ
ಪರಮಸುಖ ಪರಮನಿರ್ವಾಣವಾಗದೆಂದು ಹೇಳಿತ್ತು.
ಅಪವರ್ಗಪದಂ ಯಾತಿ ಶಿವಭಕ್ತೋ ನ ಚಾಪರಃ’ ಎಂಬ ವಾಕ್ಯ, ಮುಕ್ತಿ ಶಿವಭಕ್ತಂಗಲ್ಲದೆ ಮತ್ತೊಬ್ಬರಿಗಿಲ್ಲವೆಂದು ಹೇಳಿತ್ತು. ಋತಂ ಸತ್ಯಂ ಪರಂ ಬ್ರಹ್ಮ ಪುರುಷಂ ಕೃಷ್ಣಪಿಂಗಲಂ
ಊಧ್ರ್ವರೇತಂ ವಿರೂಪಾಕ್ಷಂ ವಿಶ್ವರೂಪಾಯ ತೇ ನಮಃ’ ಎಂಬ ಶ್ರುತಿ,
ಪರಬ್ರಹ್ಮವೆಂಬುದು ಶಿವನಲ್ಲದೆ
ಬೇರೆ ಬೇರೆ ಮತ್ತೊಂದು ವಸ್ತುವಿಲ್ಲವೆಂದು ಹೇಳಿತ್ತು.
ಬ್ರಹ್ಮಣಿ ಚರತಿ ಬ್ರಾಹ್ಮಣಃ’ ಎಂಬ ವಾಕ್ಯ, ಅಂತಹ ಬ್ರಹ್ಮವ ಚಿಂತಿಸಿ ನಿರೀಕ್ಷಿಸಿ ಸ್ತುತಿಸಿ ಪೂಜಿಸಿ ಪ್ರಸನ್ನಪ್ರಸಾದವ ಪಡೆವ ಸದ್ಭಕ್ತನೇ ಮಹಾಬ್ರಾಹ್ಮಣನೆಂದು ಹೇಳಿತ್ತು. ವಿಶ್ವತಶ್ಚಕ್ಷುರುತ ವಿಶ್ವತೋ ಮುಖೋ ವಿಶ್ವತಃ ಪಾತ್
ವಿಶ್ವಾದಿಕೋ ರುದ್ರೋ ಮಹಾಋಷಿಸ್ಸರ್ವೊ ಹಿ ರುದ್ರಃ’ ಎಂಬ ಶ್ರುತಿ, ಸಕಲ
ಜೀವರ ಶಿವನೆಂದು ಹೇಳಿತ್ತು.
ಭಕ್ತಸ್ಯ ಚೇತನೋ ಹ್ಯಹಂ’ ಎಂಬ ವಾಕ್ಯ, ಶಿವಭಕ್ತಂಗೆ ನಾನೇ ಚೈತನ್ಯನೆಂದು ಹೇಳಿತ್ತು. ಇಂತಪ್ಪ ಶಿವಲಿಂಗಾರ್ಚನೆಯ ಮಾಡುವ ಶಿವಭಕ್ತನ ಶ್ರೀಮೂರ್ತಿಗಿನ್ನು ಸರಿಯುಂಟೆರಿ ವಾಚೋತೀತಂ ಮನೋತೀತಂ ಭಾವಾತೀತಂ ಪರಂ ಶಿವಂ
ಸರ್ವಶೂನ್ಯಂ ನಿರಾಕಾರಂ ನಿತ್ಯತ್ವಂ ಪರಮಂ ಪದಂ’
ಇಂತಪ್ಪ ಶಿವನಲ್ಲಿ ಅವಿನಾಭಾವರಪ್ಪ ಶರಣರ ಕಂಡಡೆ ಕರ್ಮಕ್ಷಯ,
ನೋಡಿದಡೆ ಕಣ್ಗೆ ಮಂಗಳತರ ನಿರುಪಮಸುಖ,
ನುಡಿಸಿದಡೆ ಶಿವರಾತ್ರಿ, ಸಂಭಾಷಣೆ ಮಾಡಿದಡೆ
ಜನ್ಮಕರ್ಮಬಂಧನನಿವೃತ್ತಿ, ಜೀವನ್ಮುಕ್ತನಹ,
ಇದು ನಿತ್ಯ ಕೇಳಿರಣ್ಣಾ.
ದರ್ಶನಾತ್ ಶಿವಭಕ್ತನಾಂ ಸಕೃತ್ಸಂಭಾಷಣಾದಪಿ
ಅತಿರಾತ್ರಸ್ಯ ಯಜ್ಞಸ್ಯ ಫಲಂ ಭವತಿ ನಾರದ
ಎಂದು ನಾರದಬೋಧೆಯಲ್ಲಿ ಈಶ್ವರ ಹೇಳಿದನು.
ಇಂತಪ್ಪ ಈಶ್ವರನ ಕಾಣವು ವೇದಂಗಳು.
`ಯಜ್ಞೇನ ಯಜ್ಞಮಯಜಂತ ದೇವಾಸ್ತಾನಿ ಧರ್ಮಾಣಿ ಪ್ರಥಮಾನ್ಯಾಸನ್’
ಎಂದುದಾಗಿ,
ಇಂತು ವೇದಕ್ಕತೀತನಹಂತಹ ಶಿವನ ಶರಣರ
ಮಾಹಾತ್ಮೆಯ ಹೊಗಳಲ್ಕೆ ವೇದಕ್ಕೆ ವಶವಲ್ಲ,
ಮಂದಮತಿಮಾನವರ ಮಾತಂತಿರಲಿ.
ಶಿವಶರಣರ ಮಹಾಮಹಿಮೆಗೆ ನಮೋ ನಮೋ ಎಂಬೆ ಕಾಣಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಹರನೆ, ನಿಮ್ಮನು ದುಷ್ಟನಿಗ್ರಹ ಶಿಷ್ಟಪರಿಪಾಲನವಿಚಕ್ಷಣನೆಂದೆಂಬರು.
ನಿಮಗೆ ಅಹಂಕರಿಸಿದ ಬ್ರಹ್ಮವಿಷ್ಣುದಕ್ಷಾದಿಗಳ ಶಿಕ್ಷಿಸಿದಿರಿ.
ನಿಮಗೆರಗದೆ ದುವರ್ೃತ್ತಿಯಿಂದ ನಡೆದ
ಗಜಾಸುರ ವ್ಯಾಘ್ರಾಸುರ ಗುಹ್ಯಾಸುರರುಗಳ ಕೊಂದು ಕಳೆದಿರಿ.
ಇದನರಿದು ಸ್ತೋತ್ರವ ಮಾಡಿದಡೆ ನೀವು ಕರುಣಿಸದೇ ಇಲ್ಲಯ್ಯ.
ಇಂತಹ ಕರ್ತರಿನ್ನುಂಟೆ? ನಿಮ್ಮಂತಹ ಬಲಿಷ್ಠರುಗಳೆಲ್ಲರ ಶಿಕ್ಷಿಸಿದಿರಿ.
ಎನ್ನ ಮನವ ಶಿಕ್ಷಿಸಲಾರೆ.
ಶಿವಶಿವಾ, ನಿಮ್ಮಿಂದ ಎನ್ನ ಮನ ಸಾಮಥ್ರ್ಯವುಳ್ಳುದು.
ಎನ್ನಿಂದ ನೀವು ಸಮರ್ಥರಿಲ್ಲದಡೆ,
ಶಿವಭಕ್ತ ಅಪರಾಧಿಗಳ ಶಿಕ್ಷಿಸುವಂತಹ
ಇರಿಭಕ್ತ ಕಾಲಾಗ್ನಿರುದ್ರ ಮಡಿವಾಳ ಮಾಚಯ್ಯಂಗೆ
ಮೊರೆಯಿಟ್ಟು ಕಳೆವೆನು.
ಶಿವಧೋ ಎನ್ನ ಮೊರೆಯ ಕೇಳಿರಣ್ಣಾ.
ಹರನೇ ನೀನು ದುಷ್ಟನಿಗ್ರಹ ಶಿಷ್ಟಪರಿಪಾಲಕನೆಂಬ ಬಿರುದ ಬಿಟ್ಟು ಕಳೆ.
ಬಳಿಕ ನಾ ನಿಮ್ಮ ವರದಹಸ್ತನೆಂಬೆ, ಶಶಿಧರನೆಂಬೆ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನೆಂಬೆ.

ವಚನ
ಹಸಿವು ತೃಷೆ ವಿಷಯ ಕಾಮ ಕ್ರೋಧ ಲೋಭ
ಮೋಹ ಮದ ಮತ್ಸರವಾದಿಯಾದ ತನುಗುಣಂಗಳು
ದೇವ ದಾನವ ಮಾನವರಂತೆ ಆದಡೆ, ಲಿಂಗವಂತನೆಂಬ ಪರಿಯೆಂತಯ್ಯಾ?
ತನುಗುಣಂಗಳು ಭೂತದೇಹಿಗಳಂತಾದಡೆ
ಲಿಂಗದೇಹಿಕನೆಂಬ ಪರಿಯೆಂತಯ್ಯಾ?
ಲಿಂಗಚಿಹ್ನವಿಲ್ಲದಡೆ ಲಿಂಗದೇಹಿಯೆಂಬ ಪರಿಯೆಂತಯ್ಯಾ?
ಹಸಿವು ತೃಷೆ ವಿಷಯ ವ್ಯಸನವಡಗಿದಡೆ ಲಿಂಗಚಿಹ್ನೆ.
ಕ್ರೋಧ ಲೋಭ ಮೋಹ ಮದ ಮತ್ಸರ
ಇವಾದಿಯಾದ ದೇಹಗುಣಂಗಳಳಿದಡೆ ಲಿಂಗಚಿಹ್ನೆ.
ದೇಹಗುಣಭರಿತನಾಗಿ ಲಿಂಗದೇಹಿ ಎಂದಡೆ,
ಲಿಂಗವಂತರು ನಗುವರಯ್ಯಾ.
ಅಂಗಗುಣವಳಿದು ಗುರುಲಿಂಗಜಂಗಮದಲ್ಲಿ
ತನು ಮನ ಧನ ಲೀಯವಾದಡೆ
ಆತನು ಸರ್ವಾಂಗಲಿಂಗಿಯಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಹಿಂದಾದ ದುಃಖವನೂ ಇಂದಾದ ಸುಖವನೂ ಮರೆದೆಯಲ್ಲಾ!
ಯಜಮಾನ, ನೀನು ಮರೆದ ಕಾರಣ ಬಂಧನ ಪ್ರಾಪ್ತಿಯಾಯಿತ್ತಲ್ಲಾ!
ಹೇಮ ಭೂಮಿ ಕಾಮಿನಿ ಎಂಬ ಸಂಕಲೆಯಲ್ಲಿ ಬಂಧಿಸಿದರಲ್ಲಾ!
ಅರಿಷಡ್ವರ್ಗವೆಂಬ ಬಂಧನದಲ್ಲಿ ದಂಡಿಸಿದರಲ್ಲಾ!
ಲಿಂಗವ ಮರೆದಡೆ ಇದೇ ವಿಧಿಯಲಾ!
ಮರೆದಡೆ ಬಂಧನ ಅರಿದಡೆ ಮೋಕ್ಷ.
ಅರಿದ ಯಜಮಾನ ಇನ್ನು ಮರೆಯದಿರು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನ ಪರಿಯನು.

ವಚನ
ಹೆಣ್ಣ ಧ್ಯಾನಿಸಿ ನಿಮ್ಮ ಮರೆದೆನಯ್ಯಾ,
ನಾನು ಮರೆದ ಕಾರಣ ನೀನೆನ್ನ ಮರೆದೆ.
ನೀ ಮರೆದ ಕಾರಣ ಹೆಣ್ಣು ಸಾಧ್ಯವಾಗದು.
ನಿನ್ನ ಮೋಹ ತಪ್ಪಿ ಕೆಟ್ಟೆನಯ್ಯಾ.
ಹೊನ್ನು ಹೆಣ್ಣು ಮಣ್ಣು ಎಂಬ ಆಸೆಯೆನ್ನ ಘಾಸಿ ಮಾ[ಡೆ],
ಕೆಟ್ಟೆ ಕೆಟ್ಟೆ ಶಿವಧೋ ಶಿವಧೋ ಮಹಾದೇವ.
ಹೊನ್ನು ಹೆಣ್ಣು ಮಣ್ಣಿಗೆ ಕರ್ತನು ನೀನು.
`ತೇನ ವಿನಾ ತೃಣಾಗ್ರಮಪಿ ನ ಚಲತಿ
ಎಂಬುದನರಿದೂ, ಮದದಲ್ಲಿದ್ದು ಕೆಟ್ಟೆ.
ಈ ಕೇಡಲ್ಲದೆ ಹಸಿವು ತೃಷೆ ವ್ಯಸನ ವಿಷಯ
ಪಂಚೇಂದ್ರಿಯ ಷಡುವರ್ಗ ನೀನಾಗಿ ಕಾಡುತ್ತಿವೆ.
ಕೆಟ್ಟೆ ಕೆಟ್ಟೆ ಶಿವಧೋ ಮಹಾದೇವ.
ಹೊನ್ನು ಹೆಣ್ಣು ಮಣ್ಣಿನ ಆಶೆಯಿಂದ ಈ ಅವಸ್ಥೆಗೊಳಗಾದೆನು.
ಇನ್ನಿವಕ್ಕಾಶೆಮಾಡೆನು, ನಿಮ್ಮ ಮರೆಯೆನು, ನಿಮ್ಮಾಣೆ.
ಭಕ್ತವತ್ಸಲ, ಭಕ್ತದೇಹಿಕ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ವಚನ
ಹೊನ್ನ ಬಿಟ್ಟು, ಹೆಣ್ಣ ಬಿಟ್ಟು, ಮಣ್ಣ ಬಿಟ್ಟು, ಬ್ರಹ್ಮಚಾರಿಗಳಾಗಬೇಕೆಂದು
ಬಣ್ಣುವಿಟ್ಟು ನುಡಿವ ಅಣ್ಣಗಳ ಪರಿಯ ನೋಡಿರೋ.
ಹೆಣ್ಣು ಬಿಟ್ಟಡೆಯೂ ಹೊನ್ನ ಬಿಡರಿ, ಹೊನ್ನ ಬಿಟ್ಟಡೆಯೂ ಮಣ್ಣ ಬಿಡರಿ.
ಒಂದ ಬಿಟ್ಟಡೆಯೂ ಒಂದ ಬಿಡರಿ.
ಬ್ರಹ್ಮಚಾರಿಗಳೆಂತಪ್ಪಿ? ಹೇಳಿರಣ್ಣಾ?
ಹೆಣ್ಣ ಬಿಟ್ಟು ಬ್ರಹ್ಮಚಾರಿಗಳಾಗಬೇಕೆಂದು,
ಅವರೆಂತು ಹೇಳಿದರು? ನೀವೆಂತು ಕೇಳಿದಿರಿ?
ಹೆಣ್ಣನು ಹೆಣ್ಣೆಂದರಿವಿರಿ, ಹೊನ್ನನು ಹೊನ್ನೆಂದರಿವಿರಿ.
ಮಣ್ಣನು ಮಣ್ಣೆಂದರಿವಿರಿ,
ಬ್ರಹ್ಮಚಾರಿಗಳೆಂತಪ್ಪಿರಣ್ಣಾ?
ಬಿಟ್ಟಡೆ, ಹೆಣ್ಣು ಹೊನ್ನು ಮಣ್ಣು ಈ ಮೂರನು ಬಿಟ್ಟು
ಜ್ಞಾನದಲ್ಲಿ ಸುಳಿಯಲ್ಲಡೆ, ಭವಂ ನಾಸ್ತಿ ತಪ್ಪದು.
ಹಿಡಿದಡೆ ಹೆಣ್ಣು ಮಣ್ಣು ಹೊನ್ನು ಈ ಮೂರನು ಹಿಡಿದು,
ಸದ್ಭಕ್ತಿಯಿಂದ ದಾಸೋಹವ ಮಾಡಬಲ್ಲಡೆ,
ಭವಂ ನಾಸ್ತಿ ತಪ್ಪದು.
ಅದೆಂತೆಂದಡೆ:ವೀರಾಗಮೇ
ಮಾತರಃ ಪಿತರಶ್ಚೈವ ಸ್ವಪತ್ನೀ ಬಾಲಕಾಸ್ತಥಾ
ಹೇಮ ಭೂಮಿರ್ನಬಂಧಾಕಾಃ ಪ್ರಾಜ್ಞಾನಂ ಬ್ರಹ್ಮಚಾರಿಣಾಂ
ಎಂದುದಾಗಿ,
ಹೆಣ್ಣು, ಹೊನ್ನು, ಮಣ್ಣು ಈ ಮೂರನು ಹಿಡಿದು
ಸದ್ಭಕ್ತಿಯಿಂ ದಾಸೋಹವ ಮಾಡಬಲ್ಲಡೆ ಭವಂ ನಾಸ್ತಿ.
ಅಲ್ಲಿ ಇದ್ದಡೆಯೂ ನೀರ ತಾವರೆಯಂತಿಪ್ಪರು,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ, ನಿಮ್ಮ ಶರಣರು.

ವಚನ
ಹೊನ್ನು, ಹೆಣ್ಣು, ಮಣ್ಣು, ಅನ್ನ, ಉದಕ, ದ್ರವ್ಯಂಗಳು
ಧರ್ಮದಾಸೆಯ ಕಾರಣ, ಅರ್ಥದಾಸೆಯ ಕಾರಣ,
ಕಾಮದಾಸೆಯ ಕಾರಣ, ಮೋಕ್ಷದಾಸೆಯ ಕಾರಣ,
ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯದಾಸೆಯ ಕಾರಣ,
ಪಂಚಮಹಾಪಾತಕಂಗಳ ಮಾಡಿದ ದೋಷಂಗಳ ಕಾರಣ,
ಅಧಿಕಾರಣ, ವ್ಯಾಧಿಕಾರಣ, ಕೀರ್ತಿಕಾರಣ, ವಾರ್ತೆಕಾರಣ,
ಸರ್ವವನು ನಿರಂತರ ಕೊಡುವರು.
ನಿಷ್ಕಾರಣವಾಗಿ ನಿರುಪಾಧಿಕರಾಗಿ, ನಿರಾಶ್ರಿತರಾಗಿ
ಶ್ರೀಗುರುಕಾರಣವಾಗಿ, ಲಿಂಗಕಾರಣವಾಗಿ,
ಜಂಗಮಕಾರಣವಾಗಿ, ಪ್ರಸಾದಕಾರಣವಾಗಿ,
ಈ ನಾಲ್ಕನು ಒಂದು ಮಾಡಿ,
ಸದ್ಭಕ್ತಿಯಿಂದ ದ್ವಿವಿಧವು ಪರಿಣಾಮಿಸುವಂತೆ,
ಕ್ಷಣಮಾತ್ರದಲ್ಲಿ ಅಣುಮಾತ್ರದ್ರವ್ಯವ
ಕೊಡುವವರಾರನು ಕಾಣೆ, ನಿರ್ವಂಚಕರಾಗಿ.
ಆನು ವಂಚಕನು, ಎನಗೆ ಭಕ್ತಿ ಇಲ್ಲ.
ಶಿವ ಶಿವಾ, ಸಂಗನಬಸವಣ್ಣ ನಿರ್ವಂಚಕನು,
ನಿರಾಶಾಭರಿತನು,
ಸುಚರಿತ್ರನು, ಸದ್ಭಕ್ತಿಪುರುಷನು, ಮಹಾಪುರುಷನು.
ಎನಗೆ ಮಹಾ ಶ್ರೀಗುರುಲಿಂಗಜಂಗಮಪ್ರಸಾದ.
ಈ ಚತುರ್ವಿಧವು ಬಸವಣ್ಣನು.
ಈ ಬಸವಣ್ಣನ ಭೃತ್ಯರ ಭೃತ್ಯನಾಗಿ ಎನ್ನನಿರಿಸಯ್ಯ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

Leave a Reply

Your email address will not be published. Required fields are marked *

Translate »