ಪವಿತ್ರವಾದ ಜಲ ಮೂಲಗಳು ..!
ಬೆಟ್ಟ-ಗುಡ್ಡ ,ಕಾಡು- ಮೇಡು, ಕಣಿವೆ- ಕಂದಕ ,ಹೀಗೆ ಎಲ್ಲೇ ಆಗಲಿ ಒಂದು ಶಿವನ ಗುಡಿ ಇದ್ದು ಸನಿಹದಲ್ಲೇ ಪುಷ್ಕರಣಿ- ಕಲ್ಯಾಣಿ ಅಥವಾ ಎಲ್ಲಾ ಕಾಲದಲ್ಲಿಯೂ ನೀರಿನ ವರತೆ ಇರುವ ಝರಿ- ಜಲಪಾತದಂತ ನೀರಿನ ಸೆಲೆ ಇರುತ್ತದೆ. ಯಾವುದೇ ಕಥೆಗಳನ್ನು ಓದಿದರು ಅದರಲ್ಲಿ ಒಂದು ಪುರಾತನ ಶಿವನ ದೇವಾಲಯ ಪಕ್ಕದಲ್ಲಿ ನೀರಿನ ಸೌಲಭ್ಯವಿರುವ ಏನಾದರೂ ಒಂದು ವ್ಯವಸ್ಥೆ ಇರುವುದನ್ನು ಓದಿ -ಕೇಳಿ, ಕೆಲವೊಮ್ಮೆ ನೋಡಿಯೂ ಇದ್ದೇವೆ. ಪೌರಾಣಿಕ ಹಿನ್ನೆಲೆಯುಳ್ಳ ದೇವಾಲಯಗಳ ಸಮೀಪ ಹೀಗೊಂದು ನದಿ – ಕೆರೆ- ಪುಷ್ಕರಣಿ -ಕಲ್ಯಾಣಿ- ಕೊಳ- ನೀರುಕ್ಕುವ ಚಿಲುಮೆ, ಬಂಡೆಗಳ ಸಂಧಿಯಿಂದ ಇಳಿದು ಬರುವ ಪುಟ್ಟ ಜಲಪಾತ. ಇವು ಇದ್ದೇ ಇರುತ್ತಿತ್ತು. ಇವುಗಳನ್ನು ಜನಗಳಿಗೆ ಅನುಕೂಲವಾಗಲೆಂದು ನಿರ್ಮಿಸುತ್ತಿದ್ದರು.
ದೇವಾಲಯಗಳ ಬಳಿಯೇ ನೀರಿನ ತಾಣಗಳನ್ನು ಮಾಡಲು ಕಾರಣವೂ ಇದೆ.
ದೇವಸ್ಥಾನ ಶ್ರದ್ಧಾ ಕೇಂದ್ರವಾಗಿ ಪೂಜೆ ಪುನಸ್ಕಾರಗಳು ನಡೆಯುತ್ತದೆ. ಮತ್ತು ಊರಿಂದೂರಿಗೆ ಓಡಾಡುವ ಪಾದಚಾರಿಗಳಿಗೆ, ಬಿಸಿಲಲ್ಲಿ ಬಾಯಾರಿದ ವರಿಗೆ, ಯಾತ್ರೆ ಹೋಗುವವರಿಗೆ, ಆಕಸ್ಮಿಕವಾಗಿ ಕಾಡಿನಲ್ಲಿ ದಾರಿ ತಪ್ಪಿದರೆ ಅಥವಾ ಕಾರಣಗಳಿಂದ ಒಂದು ರಾತ್ರಿ ಅಲ್ಲಿಯೇ ತಂಗಿ ಬೆಳಿಗ್ಗೆ ಎದ್ದು ಹೊರಡುವ ಮುನ್ನ ಮುಖ- ಮಾರ್ಜನಗಳನ್ನು ಮಾಡಿ ಕೊಳ್ಳಲು ಮುಂದೆ ಕುಡಿಯಲು ಬೇಕಾಗುವುದೆಂದು ತುಂಬಿಸಿಕೊಂಡು ಹೋಗಲು ಒಟ್ಟಾರೆ ಅಗತ್ಯಗಳಿಗೆ ಅನುಕೂಲವಾಗಲೆಂದು ಪುಷ್ಕರಣಿ ಅಥವಾ ಕಲ್ಯಾಣಿ ಸಮೀಪ ಒಂದು ಗುಡಿಯನ್ನು ಕಟ್ಟುತ್ತಿದ್ದರು. ಪೂಜೆ ಮಾಡಲು ಒಬ್ಬ ಅರ್ಚಕರನ್ನು ನೇಮಿಸುತ್ತಿದ್ದರು. ಇದರಿಂದ ಅರ್ಚಕರ ಜೀವನ ನಿರ್ವಹಣೆ ಆಗುತ್ತಿತ್ತು. ಇಂಥ ಧಾರ್ಮಿಕ ಕಾರ್ಯಗಳಿಂದ ಸಮಾಜದಲ್ಲಿ ಸಕಾರಾತ್ಮಕ ಶಕ್ತಿ ವ್ಯಾಪಿಸುತ್ತಿತ್ತು. ಪೂಜೆ ಮಾಡುವಾಗ ಹೇಳುವ ಮಂತ್ರ- ಘಂಟಾನಾದ ಇವುಗಳೆಲ್ಲವೂ ಆ ಸುತ್ತಮುತ್ತಲ ವಾತಾವರಣದಲ್ಲಿ ಬೆರೆತು ಆಧ್ಯಾತ್ಮಿಕ ಶಕ್ತಿ ಪ್ರಹರಿಸಿ ದೈವೀಕ ಶಕ್ತಿ ನೆಲೆಯೂರಿ ದುಷ್ಟ ಶಕ್ತಿಗಳು ಹತ್ತಿರವೂ ಸುಳಿಯಲು ಸಾಧ್ಯವಿರುವುದಿಲ್ಲ. ಗುಡಿಗಳಲ್ಲಿರುವ ಗುಣಾತ್ಮಕ ವಿಷಯಗಳನ್ನು ತಿಳಿದ ಯಾತ್ರಿಕರು ಪಾದಾಚಾರಿ ಗಳು ಅನಿವಾರ್ಯ ಸಮಯದಲ್ಲಿ ದೇವಸ್ಥಾನದ ಹೊರ ಜಗಲಿಯಲ್ಲಿ ನಿಶ್ಚಿಂತೆ ಯಾಗಿ ಮಲಗಿದ್ದು ಬೆಳಕಾಗುತ್ತಲೇ ಪ್ರಯಾಣ ಮುಂದುವರಿಸುತ್ತಿದ್ದರು.
ದೇವಸ್ಥಾನ ಪೂಜೆ ಅಂದಮೇಲೆ ಹಬ್ಬ -ಹರಿ ದಿನಗಳು ಹೋಮ -ಹವನ ವಿಶೇಷ ಪೂಜೆ ಪ್ರಸಾದ- ಪುರಾಣ- ಪ್ರವಚನ -ಹರಿಕಥೆ- ಭಜನೆ ಈ ಕಾರಣಗಳಿಂದ ಸಾಮೂಹಿಕವಾಗಿ ಜನಗಳು ಸೇರಿ ಅದೊಂದು ಪವಿತ್ರ ಧಾರ್ಮಿಕ ಕ್ಷೇತ್ರ ವಾಗುತ್ತಿತ್ತು. ಇನ್ನು ಕೆಲವು ಸ್ಥಳಗಳಲ್ಲಿ ಸ್ವಯಂಭೂವಾಗಿ ಉದ್ಭವ ದೇವರುಗಳ ದೇವಸ್ಥಾನ ಇರುವ ಕಡೆಯೂ ಸಹ ನೀರಿನ ಸೆಲೆ ಇದ್ದೇ ಇರುತ್ತದೆ. ನಮ್ಮ ಪೂರ್ವಿಕರು ಎಲ್ಲಿ ನೀರಿನ ತಾಣ- ಇರುವುದೋ ಅಲ್ಲಿ ಗುಡಿಯನ್ನು ಕಟ್ಟುತ್ತಿದ್ದರು. ಇದು ಸಮಾಜ ಸೇವೆಯಲ್ಲಿ ಪ್ರಮುಖ ಪಾತ್ರ ವಹಿಸುತಿತ್ತು. ಹಾಗೆ ಮಕ್ಕಳು- ಜಾನುವಾರ, ಹಾಗೂ ಊರಿನ ರಕ್ಷಣೆಗಾಗಿ ಹನುಮನ ಗುಡಿ- ದುರ್ಗಿಗುಡಿ ಕಟ್ಟುತ್ತಿದ್ದರು. ಪೂಜೆ ವ್ಯವಸ್ಥೆ ಮಾಡುತ್ತಿದ್ದರು. ಊರಿನಲ್ಲಿ ದಡಾರ- ಸಿಡುಬು -ಕಣ್ಣು ಬೇನೆ- ಬಿಟ್ಟು ಬಿಟ್ಟು ಬರುವ ಜ್ವರ ಬಾದೆ- ಮಂಗಬಾವು- ನಾಯಿ ಕೆಮ್ಮು, ಇಂತಹ ಹಲವು ವ್ಯಾಧಿಗಳಿಗೆ ತುತ್ತಾದ ವರು ದುರ್ಗಾದೇವಿ ಹರಕೆ ಹೊತ್ತು ಗುಣಮುಖ ರಾದ ಮೇಲೆ ಶುದ್ಧರಾಗಿ ಬಂದು ದೇವಿ ದರ್ಶನ ಮಾಡಿ, ಪೂಜೆ ಮಾಡಿಸಿ ಹಣ್ಣು ಕಾಯಿ,ಮೊಸರನ್ನ ನೈವೇದ್ಯ ಮಾಡಿಸುತ್ತಾರೆ. ಆಂಜನೇಯನ ಹರಕೆಗೆ ಅಂಬಡೆ – ಚಕ್ಕುಲಿ – ಉದ್ದಿನ ವಡೆ ಹಾರಮಾಡಿ ಹಾಕುವುದು, (ಕೆಲವರು ಬೆಳ್ಳಿ ಕಣ್ಣು -ಬೆಳ್ಳಿ ಉಡುದಾರ )ಅರ್ಪಿಸುವದಾಗಿ ಹರಕೆ ಹೇಳಿ ಕೊಳ್ಳುತ್ತಾರೆ. ಇಂತಹ ಹರಕೆ ಹಾಡ್ಯಗಳು ಹೆಚ್ಚಿನ ಖರ್ಚು ವೆಚ್ಚಗಳಿಲ್ಲದೆ ಮನೆಯಲ್ಲಿಯೇ ಮಾಡಿ ಪೂಜೆ ಸಲ್ಲಿಸಿ ಅದನ್ನು ಪ್ರಸಾದವೆಂದು ಅಕ್ಕ ಪಕ್ಕದ ಮನೆಗಳಿಗೆ ಅಥವಾ ದೇವಸ್ಥಾನ ಕ್ಕೆ ಬಂದ ಭಕ್ತರಿಗೆ ಕೊಟ್ಟು ಅಪರೂಪಕ್ಕೆ ಮಾಡುವ ತಿಂಡಿಗಳಾದ್ದರಿಂದ ಮನೆಯಲ್ಲಿ ಎಲ್ಲರೂ ಇಷ್ಟಪಟ್ಟು ತಿನ್ನುತ್ತಿದ್ದರು. ಕೆಲವು ಪುಣ್ಯಕ್ಷೇತ್ರಗಳಲ್ಲಿ ದೇವರು ಸ್ವಯಂ ಭೂವಾಗಿ ಉದ್ಭವ ಲಿಂಗ -ಗಣಪತಿ ಅಥವಾ ಹುತ್ತದಲ್ಲಿ ಅಮ್ಮನವರು ಎಂದು ಹೇಳುತ್ತಾರೋ ಅಂಥ ಕಡೆಗಂತೂ ನಿಶ್ಚಯ ವಾಗಿ ನದಿ-!ಕೆರೆ -ಪುಷ್ಕರಣಿ -ಕಲ್ಯಾಣಿ ಹೀಗೆ ಏನಾದರೂ ನೀರಿನ ಸೆಲೆ ಇರುತ್ತಿತ್ತು. ದೊಡ್ಡ ಬೆಟ್ಟ ಗುಡ್ಡಗಳ ಮೇಲೂ ನೀರಿನ ಹೊಂಡ, ಸರೋವರ, ಕೊಳ, ಇದ್ದು ಕುಡಿಯುವವರಿಗೆ ನೀರು ತಣ್ಣಗೆ ಸಿಹಿಯಾಗಿ ಎಷ್ಟು ಕುಡಿದರು ಬೇಕು ಎನ್ನುವಷ್ಟು ರುಚಿಯಾಗಿ ಇರುತ್ತದೆ.
ಬೆಟ್ಟಗುಡ್ಡಗಳಿಂದ ಇಳಿದು ಬರುವ ಜಲಧಾರೆಯ ಕೆಳಗೆ ನಿಂತು ಲಾರಿ- ಟ್ಯಾಕ್ಸಿ ಚಾಲಕರು, ಆಸುಪಾಸಿನ ಮಕ್ಕಳು ಖುಷಿಖುಷಿ ಯಾಗಿ ಸ್ನಾನ ಮಾಡುವುದನ್ನು ನೋಡುತ್ತೇವೆ. ಗುಡ್ಡ ಬೆಟ್ಟಗಳಿಂದ ಧಾರೆ ಧಾರೆಯಾಗಿ ಇಳಿಯುವ ಜಲಧಾರೆ ಸ್ವಚ್ಛ , ಶುದ್ಧ ಹಾಗೂ ಪವಿತ್ರವಾಗಿದ್ದು ಹೇರಳವಾದ ಔಷಧಯುಕ್ತ ಗಿಡ ಮೂಲಿಕೆಗಳ ಸಾರ ಸಂಗ್ರಹವನ್ನೇ ಹೊತ್ತು ಇಳಿಯುತ್ತದೆ. ಇಲ್ಲಿ ನಿಂತು ಸ್ನಾನ ಮಾಡುವವರ ( ಕುಡಿದರೂ ಒಳ್ಳೆಯದು) ಆರೋಗ್ಯ ವರ್ದಿಸುತ್ತದೆ, ಚರ್ಮ ವ್ಯಾಧಿಗಳು ನಿವಾರಣೆಯಾಗುತ್ತದೆ ಹಾಗೂ ದೃಷ್ಟಿ ದೋಷ -ಗಾಳಿ ಸೋಕು- ಮೆಟ್ಟಿದ ದುಷ್ಟ ಶಕ್ತಿಗಳು ದೇಹದಿಂದ ಹೊರ ಹೋಗುತ್ತದೆ.
ಕೆಲವೊಂದು ಸಂಪ್ರದಾಯ – ಪದ್ಧತಿ- ಆಚರಣೆಗಳು ವೈಜ್ಞಾನಿಕ ಹಿನ್ನೆಲೆಯನ್ನು ಒಳಗೊಂಡಿ ರುತ್ತದೆ ಅವುಗಳಲ್ಲಿ ತೀರ್ಥಕ್ಷೇತ್ರಗಳ ನದಿ- ಕೆರೆ ಪುಷ್ಕರಣಿ ಗಳಿಗೆ ನಾಣ್ಯಗಳನ್ನು ಹಾಕುವುದು. ಬಸ್ಸಿನಲ್ಲಿ ಪ್ರಯಾಣ ಮಾಡುವಾಗಲು ಪಕ್ಕದಲ್ಲಿ ನದಿಗಳು ಕಂಡರೆ ಕಿಟಿಕಿಯಿಂದಲೇ ನಾಣ್ಯವನ್ನು ನದಿಗೆ ಎಸೆಯುತ್ತಾರೆ. ಇದಕ್ಕೆ ಕಾರಣ ಹಲವು ನದಿಗೆ ನಾಣ್ಯ ಹಾಕಿದರೆ ಪುಣ್ಯ ಬರುತ್ತದೆ ಎಂದು, ಅದೃಷ್ಟ ಹುಡುಕಿಕೊಂಡು ಬರುತ್ತದೆ ಎಂದು, ಎಲ್ಲಾ ನದಿಗಳು ‘ಪವಿತ್ರ ಗಂಗೆ’ ಸಮಾನ ಎಂದು ತಿಳಿದು ಮನಸ್ಸಿನಲ್ಲಿ ಏನಾದರೂ ಪ್ರಾರ್ಥಿಸಿ ಕೊಂಡು ನಾಣ್ಯವನ್ನು ನದಿಗೆ ಹಾಕುವ ಪದ್ಧತಿ, ಈಗಲೂ ಇದೆ. ಕೆಲವರು ಭಕ್ತಿಯಿಂದ ಆಚರಿಸಿದರೆ ಇನ್ನು ಕೆಲವರು ಮೂಢನಂಬಿಕೆ ಎಂದು ತಿಳಿಯುತ್ತಾರೆ. ಆದರೆ ಈ ನಾಣ್ಯ ವನ್ನು ನದಿ ಹಾಕುವುದರ ಹಿಂದೆ ವೈಜ್ಞಾನಿಕ ಹಿನ್ನೆಲೆಯು ಇದೆ.
ಬಹಳ ಹಿಂದೆ ಬಾವಿ-ಕೆರೆ- ನದಿ -ಪುಷ್ಕರಣಿ ನೀರನ್ನು ನೇರವಾಗಿ ಕುಡಿಯುತ್ತಿ ದ್ದರು. ಆಗ ಅದು ಶುದ್ಧವಾಗಿರುತ್ತಿತ್ತು. ಹಾಗೆ ಹಿಂದಿನ ಪೂಜಾ ಸಾಮಗ್ರಿಗಳು ನಾಣ್ಯಗಳಲ್ಲಿ ತಾಮ್ರದ ಬಳಕೆ ಹೆಚ್ಚಿದ್ದು ಮನುಷ್ಯನ ಆರೋಗ್ಯದ ದೃಷ್ಟಿಯಿಂದ ತಾಮ್ರ ದೇಹಕ್ಕೆ ಅಗತ್ಯವಾಗಿದ್ದು ಉದರಕ್ಕೆ ಸಂಬಂಧಿತ ಕಾಯಿಲೆಗಳು ಗುಣಮುಖವಾಗಲು ಒಳ್ಳೆಯದು. ತಾಮ್ರದ ಅಂಶದ ಸೇವನೆಯಿಂದ ರಕ್ತ ಶುದ್ಧೀಕರಣ ಆಗುತ್ತದೆ ಹಾಗೂ ತಾಮ್ರದ ಪಾತ್ರೆಯಲ್ಲಿಟ್ಟ ನೀರನ್ನು ತಾಮ್ರ ಶುದ್ಧೀಕರಿಸುತ್ತದೆ ಎಂಬುದನ್ನು ತಿಳಿದಿದ್ದರು. ತಾಮ್ರದ ತಪ್ಪಲೆ- ಕೊಡಗಳಲ್ಲಿ ನೀರು ತುಂಬಿಸಿಟ್ಟು ಕುಡಿಯುತ್ತಿದ್ದರು. ತಾಮ್ರದ ಹಂಡೆಯ ನೀರಿನಲ್ಲಿ ಸ್ನಾನ ಮಾಡುತ್ತಿದ್ದರು. ಈ ಕಾರಣಗಳಿಂದ ನದಿಗೆ ತಾಮ್ರದ ನಾಣ್ಯವನ್ನು ಹಾಕುತ್ತಿದ್ದರು ಇದರಿಂದ ಕುಡಿಯುವ ನೀರು ಶುದ್ದಿಯಾಗಿ ಶುದ್ಧವಾಗಿ ನೀರು ಎಲ್ಲರು ಕುಡಿಯುತ್ತಾರೆ ಎಲ್ಲರಿಗೂ ಒಳ್ಳೆಯದಾಗಲಿ ಎಂಬ ದೃಷ್ಟಿಕೋನವು ಇತ್ತು.ಅಂದಿನಿಂದಲೂ ಈ ಪದ್ಧತಿ ಬೆಳೆದು ಬಂದು ಈಗ ಯಾವುದೇ ಸತುವಿನಿಂದ ನಾಣ್ಯ ಮಾಡಿದರು ನದಿಗೆ ಹಾಕುವ ಪದ್ಧತಿ ಮುಂದುವರೆದುಕೊಂಡು ಬಂದಿದೆ. ಪೂರ್ವಿಕರು ಮಾಡುತ್ತಿದ್ದ ಆಚರಣೆ ಪದ್ಧತಿಗಳು ಮನುಷ್ಯನ ದೇಹ ಮತ್ತು ಮನಸ್ಸಿಗೆ ಪೂರಕವಾಗಿದ್ದು
ಸಮಾಜಕ್ಕೆ ಅದೊಂದು ಕೊಡುಗೆಯಾಗಿತ್ತು ವಾಗಿದ್ದು, ಒಟ್ಟಾರೆ ಯಾವುದನ್ನೇ ನಿರ್ಮಾಣ ಮಾಡಲಿ ಅದರಲ್ಲಿ ಎಲ್ಲರ ಹಿತದೃಷ್ಟಿಯನ್ನು ಇಟ್ಟುಕೊಂಡು ಸಮಾಜಮುಖಿ ಹಾಗೂ ಜನಹಿತ ಕಾರ್ಯಗಳನ್ನೇ ಮಾಡುತ್ತಿದ್ದರು.
ನದೀ ಸ್ತೋತ್ರಂ ಪ್ರವಕ್ಷ್ಯಾಮಿ
ಸರ್ವಪಾಪ ಪ್ರಣಾಶನಂ !
ಭಾಗೀರಥೀ ವಾರಣಾಸೀ ಯಮುನಾ ಚ
ಸರಸ್ವತೀ !!
ಕೋಟಿ ಜನ್ಮಾರ್ಜಿತಂ ಪಾಪಂ ಸ್ಮರಣೇನ
ವಿನಶ್ಶತಿ !
ಇಹಲೋಕೆ ಸುಖೀ ಭೂತ್ವಾ
ವಿಷ್ಣು ಲೋಕಂ ಸಗಚ್ಛತಿ !!
ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ.