ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಗುರು ಪೂರ್ಣಿಮೆ ಮತ್ತು ವೇದವ್ಯಾಸರು ಹುಟ್ಟಿದ ಕಥೆ

ಗುರು ಪೂರ್ಣಿಮೆ

ಆಷಾಢ ಮಾಸದ ಹುಣ್ಣಿಮೆಯ ದಿನವನ್ನು ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ. ಇದೇ ಹಿಂದೂಗಳ ಪಾಲಿಗೆ ನಿಜವಾದ ಶಿಕ್ಷಕರ ದಿನ ಅರ್ಥಾತ್ Teacher’s Day. ಇದನ್ನು ವ್ಯಾಸ ಪೂರ್ಣಿಮೆ ಎಂದೂ ಕರೆಯುತ್ತಾರೆ. ಏಕೆಂದರೆ, ಇದು ವಿಷ್ಣುವಿನ ಇನ್ನೊಂದು ಅವತಾರ ಎಂದೇ ಪರಿಗಣಿತರಾದ ಭಗವಾನ್ ವೇದವ್ಯಾಸ ಜನ್ಮದಿನ.

ವೇದವ್ಯಾಸರ ಮೂಲ ಹೆಸರು ಕೃಷ್ಣ ದ್ವೈಪಾಯನ. ತಂದೆ ಪರಾಶರ ಮುನಿಗಳು ಹಾಗೂ ತಾಯಿ ಸತ್ಯವತೀ ದೇವಿ. ಒಮ್ಮೆ ಮಹರ್ಷಿ ಪರಾಶರರು ನಾವೆಯೊಂದರಲ್ಲಿ ಗಂಗಾ ನದಿಯನ್ನು ದಾಟುತ್ತಿರುವಾಗ ದೂರದ ದ್ವೀಪದಿಂದ ಮೀನು ಕೊಳೆತಾಗ ಬರುವಂತಹ ಕೆಟ್ಟ ವಾಸನೆ ಬರುತ್ತಿತ್ತು. ಅವರು ಆ ದ್ವೀಪಕ್ಕೆ ಹೋಗಿ ನೋಡಿದಾಗ ಅಲ್ಲಿ ಒಬ್ಬ ಕುರೂಪಿಯಾದ ಬೆಸ್ತರ ಕನ್ಯೆ ಕುಳಿತಿದ್ದಳು. ಆಕೆಯ ದೇಹದಿಂದಲೇ ಆ ಕೆಟ್ಟ ವಾಸನೆ ಬರುತ್ತಿತ್ತು. ಆಕೆಯ ಹೆಸರು “ಸತ್ಯವತಿ”. ಆಕೆಯ ದೇಹದಿಂದ ಮೀನಿನ ವಾಸನೆ ಬರುತ್ತಿದ್ದುದರಿಂದ ಆಕೆಯನ್ನು “ಮತ್ಸ್ಯಗಂಧೀ” ಎಂದೂ ಮತ್ತು ಆ ವಾಸನೆಯು ಯೋಜನ ದೂರದವರೆಗೂ ಪಸರಿಸುತ್ತಿದ್ದುದರಿಂದ ಆಕೆಯನ್ನು “ಯೋಜನಗಂಧೀ” ಎಂದೂ ಕರೆಯುತ್ತಿದ್ದರು.

ಆಕೆಯು ಮೂಲತಃ ಬೆಸ್ತರವಳಲ್ಲ. ಆಕೆಯ ಜನ್ಮ ವೃತ್ತಾಂತವು ಬಹಳ ವಿಚಿತ್ರವಾಗಿದೆ. ಮೃಗಬೇಟೆಗೆಂದು ಕಾಡಿಗೆ ಹೋದ ಚೇದಿ ದೇಶದ ಅರಸ ಉಪರಿಚರ ವಸು ಎಂಬವನು ಅಲ್ಲಿ ಹರಿಣಗಳ ಮೈಥುನವನ್ನು ನೋಡುತ್ತಾನೆ. ಇದರಿಂದ ಆತ ಕಾಮೋದ್ರಿಕ್ತನಾದಾಗ ಅವನಿಗೆ ವೀರ್ಯ ಸ್ಖಲನವಾಗುತ್ತದೆ. ವೀರ್ಯನಾಶವು ಭ್ರೂಣಹತ್ಯೆಗೆ ಸಮ ಎಂಬುದನ್ನು ಮನಗಂಡು ವಸುವು ಅದನ್ನು ಒಂದು ಗಿಡುಗ ಪಕ್ಷಿಯ ಮೂಲಕ ಅರಮನೆಯಲ್ಲಿರುವ ತನ್ನ ಪತ್ನಿ ಗಿರಿಕೆಗೆ ಕಳುಹಿಸುತ್ತಾನೆ. ಆ ಗಿಡುಗವು ಆಕಾಶ ಮಾರ್ಗದಲ್ಲಿ ಹಾರುತ್ತಾ ಹೋಗುತ್ತಿರುವಾಗ ಇನ್ನೊಂದು ಗಿಡುಗವು ಅದನ್ನು ನೋಡಿ , ಅದರ ಬಾಯಿಯಲ್ಲಿರುವುದು ಮಾಂಸದ ಚೂರು ಎಂಬುದಾಗಿ ಭ್ರಮಿಸಿ , ಆಹಾರಕ್ಕಾಗಿ ಜಗಳಕ್ಕೆ ತೊಡಗುತ್ತದೆ. ಹಾಗೆ ಜಗಳ ಆಡುವಾಗ ಗಿಡುಗದ ಬಾಯಿಯಲ್ಲಿರುವ ವೀರ್ಯವು ಎರಡು ತುಂಡುಗಳಾಗಿ ಕೆಳಗಡೆ ಇರುವ ಗಂಗಾ ನದಿಗೆ ಬೀಳುತ್ತದೆ.

ಬ್ರಹ್ಮನ ಶಾಪದ ಕಾರಣದಿಂದಾಗಿ ಆ ನದಿಯಲ್ಲಿ ಮತ್ಸ್ಯಕನ್ಯೆಯಾಗಿ ಜೀವಿಸುತ್ತಿದ್ದ “ಅದ್ರಿಕೆ” ಎಂಬ ಅಪ್ಸರೆಯು ಆ ವೀರ್ಯದ ತುಂಡುಗಳೆರಡನ್ನು ನುಂಗುತ್ತಾಳೆ. ಪರಿಣಾಮವಾಗಿ ಆ ಮೀನು ಗರ್ಭವತಿಯಾಗುತ್ತದೆ. ಮುಂದೆ ಒಂದು ದಿನ ಬೆಸ್ತರ ಗುರಿಕಾರನಾದ ದಾಶರಾಜ ಕಂಧರನಿಗೆ ಆ ಮೀನು ಸಿಗುತ್ತದೆ. ಅವನು ಅದರ ಹೊಟ್ಟೆಯನ್ನು ಸೀಳಿದಾಗ ಅದರಲ್ಲಿ ಅವಳಿ ಶಿಶುಗಳು ಒಂದು ಗಂಡು ಮತ್ತು ಒಂದು ಹೆಣ್ಣು ಶಿಶುಗಳು ಕಾಣಿಸುತ್ತವೆ. ಕಂಧರನಿಂದ ಸೀಳಲ್ಪಟ್ಟು ಮತ್ಸ್ಯಕನ್ಯೆಯು ಕೊಲ್ಲಲ್ಪಟ್ಟಾಗ ಶಾಪವಿಮೋಚನೆಗೊಂಡ ಅದ್ರಿಕೆಯು ಪ್ರತ್ಯಕ್ಷಳಾಗಿ ಆ ಅವಳಿ ಮಕ್ಕಳನ್ನು ವಸುರಾಜನಿಗೆ ಒಪ್ಪಿಸುವಂತೆ ತಿಳಿಸಿ ಆಕೆ ಅದೃಶ್ಯಳಾಗುತ್ತಾಳೆ.

  ಗಣಪತಿ ಅಷ್ಟೋತ್ತರ ಮಹತ್ವ

ಅವಳ ಆಣತಿಯಂತೆ ಕಂಧರನು ಆ ಎರಡು ಶಿಶುಗಳನ್ನು ವಸುರಾಜನಿಗೆ ಒಪ್ಪಿಸಿದಾಗ ಆತ ಗಂಡು ಶಿಶುವನ್ನು ಮಾತ್ರ ಸ್ವೀಕರಿಸಿ , ಆ ಮಗುವಿಗೆ “ಮತ್ಸ್ಯ” ಎಂಬ ಹೆಸರನ್ನಿರಿಸಿ ತಾನೇ ಸಾಕಿಕೊಳ್ಳುತ್ತಾನೆ. ಮುಂದೆ ಆತನೇ “ಮತ್ಸ್ಯರಾಜ”ನಾಗುತ್ತಾನೆ. ಹೆಣ್ಣು ಶಿಶುವಿಗೆ “ಮತ್ಸ್ಯಗಂಧೀ” ಎಂಬ ಹೆಸರನ್ನಿರಿಸಿ ಕಂದರನಿಗೆ ಮರಳಿಸಿ ಸಾಕಿಕೊಳ್ಳುವಂತೆ ಆದೇಶಿಸುತ್ತಾನೆ. ಹೀಗೆ ಬೆಸ್ತನಾದ ಕಂಧರನ ಸಾಕು ಮಗಳಾಗಿ ಬೆಳೆದವಳೇ ಈ ಮತ್ಸ್ಯಗಂಧಿ. ಆಕೆಯು ವಸುದೇವರಿಂದ ಶಾಪಗ್ರಸ್ತಳಾಗಿದ್ದುದರಿಂದ ಆಕೆಯ ದೇಹದಿಂದ ಕೆಟ್ಟ ವಾಸನೆ ಬರುತ್ತಿತ್ತು.

ಆಕೆಯು ಪರಾಶರ ಮುನಿಗಳನ್ನು ನೋಡಿ , ಬಳಿಗೆ ಬಂದು ಅವರ ಪಾದಕ್ಕೆರಗುತ್ತಾಳೆ. ಅಲ್ಲದೇ “ವಿಷ್ಣುವಿನ ಅಂಶವಿರುವ ತಾವು ಈ ಸ್ಥಳಕ್ಕೆ ಬಂದಿದ್ದರಿಂದ ಈ ದ್ವೀಪ ಪಾವನವಾಯಿತು. ನನ್ನ ಶಾಪ ವಿಮೋಚನೆ ಮಾಡಬೇಕು” ಎಂದು ಆಕೆ ಪರಾಶರರನ್ನು ಪ್ರಾರ್ಥಿಸುತ್ತಾಳೆ. ಆಗ ಮಹರ್ಷಿಗಳು ಆಕೆಯನ್ನು ಸ್ಪರ್ಶಿಸಿ ಅವಳ ಶಾಪ ವಿಮೋಚನೆ ಮಾಡುತ್ತಾರೆ. ಆಗ ಅವಳು ಸುರೂಪಿಯಾಗಿ ಸುಗಂಧವನ್ನು ಹೊರ ಹೊಮ್ಮಿಸುವ “ಯೋಜನಗಂಧಿ”ಯಾಗುತ್ತಾಳೆ. ತ್ರಿಕಾಲ ಜ್ಞಾನಿಗಳಾದ ಪರಾಶರರು ಆಕೆಯ ಭವಿಷ್ಯವನ್ನು ಅರಿತು “ಯೋಜನಗಂಧೀ , ಒಬ್ಬ ಮಹಾಮುನಿಯ ಮಹಾಮಾತೆಯಾಗುವ ಯೋಗ ನಿನಗಿದೆ. ಹೀಗಾಗಿ ನಾನು ಲೋಕಕಲ್ಯಾಣಕ್ಕಾಗಿ ನಿನ್ನ ಸಮಾಗಮವನ್ನು ಬಯಸುತ್ತಿದ್ದೇನೆ. ಹಾಗಂತ ನೀನು ಶಿಶುವನ್ನು ನವಮಾಸ ಪರ್ಯಂತ ಗರ್ಭದಲ್ಲಿ ಧರಿಸುವ ಅಗತ್ಯವಿಲ್ಲ. ನಮ್ಮಿಬ್ಬರ ಸಮಾಗಮವಾದ ಕೂಡಲೇ ಒಬ್ಬ ಮಹಾಪುರುಷನ ಜನನವಾಗುತ್ತದೆ. ಅಲ್ಲದೇ ಶಿಶುವನ್ನು ಪಡೆದ ಮೇಲೆ ನಿನ್ನ ಕನ್ಯೆತನವು ಕೂಡಾ ನಾಶವಾಗುವುದಿಲ್ಲ. ನಮ್ಮ ಮಿಲನದಿಂದ ಜನಿಸುವ ಆ ತೇಜೋವಂತ ಮಗನಿಂದ ಮುಂದೆ ಲೋಕ ಕಲ್ಯಾಣವಾಗುವುದು” ಎನ್ನುತ್ತಾರೆ.

  ಹನುಮಂತನ ನಿಸ್ವಾರ್ಥ ಭಕ್ತಿ

ಸತ್ಯವತಿಯು ಅದಕ್ಕೆ ಒಪ್ಪುತ್ತಾಳೆ. ನಂತರ ಪರಾಶರರು ಅಲ್ಲಿಯೇ ಅಗ್ನಿಯನ್ನು ಸ್ಥಾಪಿಸಿ , ಗಾಂಧರ್ವ ರೀತಿಯಲ್ಲಿ ಆಕೆಯನ್ನು ವಿವಾಹವಾಗುತ್ತಾರೆ. ಇವರಿಬ್ಬರಿಂದ ಜನಿಸಿದ ಮಗುವೇ “ಕೃಷ್ಣ ದ್ವೈಪಾಯನ”. ಅಂದರೆ ವ್ಯಾಸರು. ‘ಕೃಷ್ಣ’ ಎಂದರೆ ‘ಕಪ್ಪು’ ಎಂತಲೂ , ‘ದ್ವೈಪಾಯನ’ ಎಂದರೆ ಸುತ್ತಲೂ ನೀರು ಇರುವ ಪ್ರದೇಶ ಅಂದರೆ ದ್ವೀಪ ಎಂತಲೂ ಅರ್ಥ. ಹೀಗೆ ವ್ಯಾಸರ ಬಣ್ಣ ಕಪ್ಪಾಗಿದ್ದು ದ್ವೀಪದಲ್ಲಿ ಜನಿಸಿದವರಾದ್ದರಿಂದ ಕೃಷ್ಣದ್ವೈಪಾಯನ ಎಂಬ ಹೆಸರು ಬಂದಿತು. ಈ ದ್ವೀಪವು ಈಗಿನ ಕಾಲದ ಉತ್ತರ ಪ್ರದೇಶದ ಜಲುವಾ ಜಿಲ್ಲೆಯ ‘ಕಲ್ಪಿ’ ಎನ್ನುವ ಸ್ಥಳದ ಬಳಿಯಿದೆ.

ಹುಟ್ಟಿದ ಕ್ಷಣವೇ ಅಳುವುದಕ್ಕೆ ಬದಲಾಗಿ ಕೃಷ್ಣದ್ವೈಪಾಯನರು ದೊಡ್ಡವರಾಗಿ ಬೆಳೆದು ತಾಯಿ ಸತ್ಯವತಿಯ ಪಾದಕ್ಕೆ ಎರಗಿ “ಮಾತೃದೇವೋಭವ” ಎನ್ನುತ್ತಾ ವಂದಿಸುತ್ತಾರೆ. ಅಲ್ಲದೇ “ತಾಯೇ ನಿನಗೆ ಕಷ್ಟಕಾಲ ಒದಗಿದಾಗ ನನ್ನನ್ನು ಸ್ಮರಿಸಿಕೋ , ತಕ್ಷಣ ನಾನು ಪ್ರತ್ಯಕ್ಷನಾಗಿ ನಿನ್ನ ಇಷ್ಟಾರ್ಥಗಳನ್ನು ನೆರವೇರಿಸುತ್ತೇನೆ” ಎಂದು ಹೇಳಿ ಅಲ್ಲಿಂದ ಬದರಿಕಾಶ್ರಮಕ್ಕೆ ಹೊರಟು ಹೋಗುತ್ತಾರೆ. ಅಲ್ಲಿ ತಾಪಸ ಜೀವನ ನಡೆಸಿ ಅತಿ ಪ್ರಮುಖ ಋಷಿಗಳಲ್ಲಿ ಒಬ್ಬರಾಗಿ ಪರಿಗಣಿತರಾಗುತ್ತಾರೆ.

ಪುರಾಣಗಳಲ್ಲಿ ಇವರನ್ನು ವಿಷ್ಣುವಿನ ಒಂದು ಅವತಾರವೆಂದೇ ಪರಿಗಣಿಸಲಾಗಿದೆ. ಹಿಂದೂ ಪುರಾಣದ ಪ್ರಕಾರ ಇರುವ ಏಳು ಚಿರಂಜೀವಿಗಳಲ್ಲಿ ಇವರೂ ಒಬ್ಬರು. ಕೃಷ್ಣದ್ವೈಪಾಯನರು ತಮ್ಮ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಎಲ್ಲ ವೈದಿಕ ಋಕ್ಕುಗಳನ್ನು ಸಂಗ್ರಹಿಸಿ , ಯಜ್ಞ ಯಾಗಾದಿ ಧಾರ್ಮಿಕ ವಿಧಿಗಳಲ್ಲಿನ ಅವುಗಳ ಬಳಕೆಯ ಆಧಾರದ ಮೇಲೆ ಅವುಗಳನ್ನು ಋಗ್ವೇದ , ಯಜುರ್ವೇದ , ಸಾಮವೇದ ಮತ್ತು ಅಥರ್ವವೇದ ಎಂಬ ನಾಲ್ಕು ಭಾಗಗಳನ್ನಾಗಿ ವಿಭಾಗಿಸಿ , ಅವುಗಳನ್ನು ಕ್ರಮವಾಗಿ ತಮ್ಮ ನಾಲ್ಕು ಮುಖ್ಯ ಶಿಷ್ಯರಾದ ಪೈಲ , ವೈಶಂಪಾಯನ , ಜೈಮಿನಿ ಮತ್ತು ಸುಮಂತು ಮುನಿಗಳಿಗೆ ಬೋಧಿಸಿದರು.

ಆ ನಾಲ್ಕು ಮುನಿಗಳು ತಮ್ಮ ಶಿಷ್ಯ ಪರಂಪರೆಗೆ ಆ ವೇದವನ್ನು ಬೋಧಿಸಿದರು. ಹೀಗೇ ವೇದ ಪಾಠವು ಇಂದಿಗೂ ಗುರುಗಳಿಂದ ಶಿಷ್ಯರಿಗೆ ನಡೆಯುತ್ತಿದೆ. ಹೀಗೆ ವೇದವನ್ನು ವಿಭಜಿಸಿದುದರಿಂದ ಕೃಷ್ಣದ್ವೈಪಾಯನರಿಗೆ “ವೇದವ್ಯಾಸ” ಎಂಬ ಗೌರವ ನಾಮ ದೊರೆಯಿತು. ಭಗವಾನ್ ವೇದವ್ಯಾಸರು ನಾಲ್ಕು ವೇದಗಳನ್ನು ರಚಿಸಿದ್ದಲ್ಲದೇ , 18 ಪುರಾಣಗಳನ್ನು , ಮಹಾಭಾರತ ಮತ್ತು ಶ್ರೀಮದ್ಭಾಗವತವನ್ನು ರಚಿಸಿದ ಮಹಾತ್ಮರಾಗಿದ್ದಾರೆ. ವೇದಾಧ್ಯಯನಕ್ಕೆ ನಾಂದಿ ಹಾಡಿದ ವೇದವ್ಯಾಸ ಮಹರ್ಷಿಗಳು ಗುರುಗಳಿಗೆ ಗುರುಗಳಾಗಿ ಪರಮ ಗುರುಗಳಾಗಿದ್ದಾರೆ. ಹೀಗಾಗಿ ಅವರ ಜನ್ಮ ದಿನವಾದ ಈ ಹುಣ್ಣಿಮೆಯ ದಿನವನ್ನು ಗುರುಪೂರ್ಣಿಮೆ ಎಂದು ಆಚರಿಸುವುದು ಅರ್ಥಪೂರ್ಣವಾಗಿದೆ.

  ಒಳ್ಳೆಯ ಕಾಲ ಬಂದೇ ಬರುತ್ತದೆ - ಕೃಷ್ಣ ಮತ್ತು ಬಿಸಿ ನೀರಿನ ಕಥೆ

ಹಿಂದೂಗಳಲ್ಲಿ ತಂದೆ ತಾಯಿಯ ನಂತರದ ಸ್ಥಾನ ಗುರುವಿನದ್ದಾಗಿದೆ. ನಮ್ಮ ಭವಿಷ್ಯವನ್ನು ರೂಪಿಸಿ ನಮ್ಮನ್ನು ವಿದ್ಯಾವಂತರನ್ನಾಗಿ ಮತ್ತು ಬುದ್ಧಿವಂತರನ್ನಾಗಿ ಮಾಡುವ ಜವಾಬ್ದಾರಿ ನಮ್ಮ ಗುರಗಳದ್ದಾಗಿದೆ. ಆದ್ದರಿಂದಲೇ ಗುರು ಪೂರ್ಣಿಮೆಯಂದು ಗುರುಗಳಿಗೆ ಗೌರವ ತೋರುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ವ್ಯಾಸರ ನೆನಪಿಗಾಗಿ ಈ ದಿವಸವನ್ನು ಆಚರಿಸಲಾಗುತ್ತದೆ. ಹಲವಾರು ದೇವಸ್ಥಾನಗಳಲ್ಲಿ ವ್ಯಾಸರ ಪೂಜೆಯನ್ನು ನೆರವೇರಿಸಲಾಗುತ್ತದೆ. ಇದೇ ದಿನದಂದು ಗುರುಗಳ ಪಾದಪೂಜೆಗಳನ್ನು ಮಾಡುತ್ತಾರೆ. ಕೆಲವು ಕಡೆ ಯತಿಗಳು ಇದೇ ಗುರುಪೂರ್ಣಿಮೆಯಂದು ಚಾತುರ್ಮಾಸ್ಯವನ್ನು ಆರಂಭಿಸುತ್ತಾರೆ. ವೇದವ್ಯಾಸರು ಇದೇ ದಿನದಂದು ಬ್ರಹ್ಮಸೂತ್ರಗಳ ರಚನೆ ಪ್ರಾರಂಭಿಸಿದರಂತೆ. ಇದರ ಸ್ಮರಣಾರ್ಥಕವಾಗಿ ಈ ದಿನದಂದು ಬ್ರಹ್ಮಸೂತ್ರಗಳ ಪಠಣ ಮಾಡಲಾಗುತ್ತದೆ. ಏಕಲವ್ಯನು ಇದೇ ದಿನದಂದು ತನ್ನ ಗುರು ದ್ರೋಣಾಚಾರ್ಯರಿಗೆ ಗುರು ಕಾಣಿಕೆಯಾಗಿ ತನ್ನ ಬಲಗೈ ಹೆಬ್ಬೆರಳನ್ನೇ ಕತ್ತರಿಸಿಕೊಟ್ಟನಂತೆ.

ಬೌದ್ಧರಿಗೂ ಗುರು ಪೂರ್ಣಿಮೆಯು ಮಹತ್ವದ ದಿನವಾಗಿದೆ. ಸಾಂಪ್ರದಾಯಿಕವಾಗಿ ಬೌದ್ಧರು ಬುದ್ಧನಿಗೆ ಗೌರವ ಅರ್ಪಿಸುವ ದಿನವನ್ನಾಗಿ ಗುರುಪೂರ್ಣಿಮೆಯನ್ನು ಆಚರಿಸುತ್ತಾರೆ. ಬೌದ್ಧರು ಈ ಹಬ್ಬವನ್ನು ಗೌತಮ ಬುದ್ಧನ ಪ್ರಥಮ ಧರ್ಮೋಪದೇಶದ ಅಂಗವಾಗಿ ಆಚರಿಸುತ್ತಾರೆ.

(03-07-2023 ನೇ ಸೋಮವಾರದಂದು ಗುರು ಪೂರ್ಣಿಮೆ)

Leave a Reply

Your email address will not be published. Required fields are marked *

Translate »