ಸನಾತನ ಕಾಲಗಣನೆ…!
ಮಾನವರ ಒಂದು ವರ್ಷ ದೇವತೆಗಳ ಒಂದು ದಿನಕ್ಕೆ ಸಮ. ನಮ್ಮ ಆರು ತಿಂಗಳ ಉತ್ತರಾಯಣವು ದೇವತೆಗಳ ಹಗಲು, ದಕ್ಷಿಣಾಯನ ದೇವತೆಗಳ ರಾತ್ರಿಯ ಕಾಲ.
ಕೃತ, ತ್ರೇತ, ದ್ವಾಪರ ಹಾಗೂ ಕಲಿ ಈ ನಾಲ್ಕು ಯುಗಳನ್ನು ಸೇರಿಸಿ ಒಂದು ಮಹಾಯುಗ ಅಂತ ಕರೆಯುತ್ತಾರೆ. ಇಂತಹ 1000 ಮಹಾಯುಗಳು ಸೇರಿದರೆ ಬ್ರಹ್ಮನಿಗೆ ಒಂದು ಹಗಲು. ಬ್ರಹ್ಮನ ಹಗಲಿಗೆ ‘ಕಲ್ಪ’ ಎಂದು ಹೆಸರು. ಬ್ರಹ್ಮನ ಒಂದೊಂದು ಹಗಲಿಗೂ ಒಂದೊಂದು ಹೆಸರಿದೆ. ಅವುಗಳೆಂದರೆ (೧) ಶ್ವೇತವರಾಹ (೨) ನೀಲಲೋಹಿತ (೩) ವಾಸುದೇವ (೪) ರಥಂತರ (೫) ರೌರವ (೬) ಪ್ರಾಣ (೭) ಬೃಹತ್ (೮) ಕಂದರ್ಪ (೯) ಸದ್ಯ ( ೧೦) ಈಶಾನ (೧೧) ವ್ಯಾನ (೧೨) ಸಾರಸ್ವತ (೧೩) ಉದಾನ (೧೪) ಗಾರುಡ (೧೫) ಕೌರ್ಮ (೧೬) ನಾರಸಿಂಹ (೧೭) ಸಮಾನ (೧೮) ಆಗ್ನೇಯ (೧೯) ಸೋಮ (೨೦) ಮಾನವ (೨೧) ತತ್ಪುರುಷ (೨೨) ವೈಕುಂಠ (೨೩) ಲಕ್ಷ್ಮಿ (೨೪) ಸಾವಿತ್ರಿ (೨೫) ಘೋರ (೨೬) ವಾರಾಹ (೨೭) ವೈರಾಜ (೨೮) ಗೌರಿ (೨೯) ಮಾಹೇಶ್ವರ (೩೦) ಪಿತೃ.
ಇವು ಬ್ರಹ್ಮನ ಒಂದು ತಿಂಗಳ ೩೦ ದಿನದ,(ಕಲ್ಪಗಳ) ಹೆಸರುಗಳು. ಇವುಗಳಲ್ಲಿ ಮೊದಲ ಹದಿನೈದು ಕಲ್ಪಗಳಿಗೆ ಶುಕ್ಲ ಪಕ್ಷವೆಂದು, ಉಳಿದ ಹದಿನೈದು ಕಲ್ಪಗಳಿಗೆ ಕೃಷ್ಣಪಕ್ಷವೆಂದು ಹೆಸರು. ಈ ಒಟ್ಟು ಮೂವತ್ತು ಕಲ್ಪಗಳು ಕಳೆದರೆ ಬ್ರಹ್ಮನಿಗೆ ಒಂದು ತಿಂಗಳು. ಹೀಗೆ ಬ್ರಹ್ಮನಿಗೆ ನೂರು ವರ್ಷಗಳು ಆಯಸ್ಸು. ಈಗ ನಡೆಯುತ್ತಿರುವ ಬ್ರಹ್ಮನ ಹಗಲಿನ ಹೆಸರು ಶ್ವೇತವರಾಹ ಕಲ್ಪ. ಬ್ರಹ್ಮನ ಒಂದು ಕಲ್ಪದ ಅವಧಿಯಲ್ಲಿ ಸ್ವರ್ಗಲೋಕದಲ್ಲಿ 14 ಜನ ಇಂದ್ರರೂ, ಭೂಲೋಕದಲ್ಲಿ 14 ಜನ ಮನುಗಳೂ ರಾಜ್ಯಭಾರ ಮಾಡುತ್ತಾರೆ. ( ಒಬ್ಬೊಬ್ಬರ ಅವಧಿ ಎಪ್ಪತ್ತೊಂದು ಮಹಾಯುಗಗಳು) ಯಜ್ಙ, ರೋಚನ, ಸತ್ಯಜಿತ್, ತ್ರಿಶಿಖ, ವಿಭು, ಮಂತ್ರದ್ರುಮ, ಪುರಂದರ, ಬಲಿ, ಅದ್ಭುತ, ಶಂಭು, ವೈವೃತಿ, ಋತಿಧಾಮ, ದಿವ್ಯಸ್ಪತಿ ಹಾಗೂ ಶುಚಿ ಇವು ಹದಿನಾಲ್ಕು ಇಂದ್ರರ ಹೆಸರುಗಳು.
ಈಗ ವೈವಸ್ವತ ಮನು ಭೂಮಿಯಲ್ಲಿ ರಾಜ್ಯಭಾರ ಮಾಡುತ್ತಿದ್ದರೆ ಸ್ವರ್ಗದಲ್ಲಿ ಪುರಂದರ ನೆಂಬ ಇಂದ್ರ ಇದ್ದಾನೆ.
ಬ್ರಹ್ಮನ ಆಯಸ್ಸಿಗೆ ‘ಪರಾ’ ಎಂದು ಹೆಸರು. ಈಗ ಪ್ರಥಮ ಪರಾರ್ಧ (50 ವರ್ಷಗಳು) ಮುಗಿದು,ಎರಡನೆಯ ಪರಾರ್ಧ ನಡೆಯುತ್ತಿದೆ.
ವಿರಿಂಚಿ ಬ್ರಹ್ಮನ ಈಗಿನ ವಯಸ್ಸು 51 ನೆ ವರ್ಷದ ಮೊದಲ ತಿಂಗಳಲ್ಲಿ 26 ನೆಯ ದಿನದ ಹಗಲಿನ ಮೊದಲನೆ ಜಾವದ ಎರಡನೆ ಮುಹೂರ್ತ.
ಆದ್ದರಿಂದಲೇ ನಾವು,ವ್ರತ, ಪೂಜೆ,
ಮಂಗಳಕಾರ್ಯಗಳನ್ನು ಮಾಡುವಾಗ ಸಂಕಲ್ಪದಲ್ಲಿ ಪುರೋಹಿತರು
“ಅದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ,
ಶ್ವೇತವಾರಾಹಕಲ್ಪೇ,ವೈವಸ್ವತ ಮನ್ವಂತರೇ ಅಷ್ಟಾವಿಂಶತಿತಮೇ ಕಲಿಯುಗೇ,ಪ್ರಥಮ ಪಾದೇ”
ಎಂದು ಹೇಳತ್ತಾ ಪ್ರಾರಂಭಿಸುತ್ತಾರೆ.
ವಿ.ಸೂ: ತ್ರಿಮೂರ್ತಿಗಳಿಗೂ ಆಯಷ್ಯದ ನಿರ್ಣಯ ಇರುತ್ತದೆಯಂತೆ. ಅನಂತರ ಅವರೂ ಯಾವ ಮೂಲ ತತ್ವದಿಂದ ಹೊರ ಹೊಮ್ಮಿದ್ದಾರೆಯೋ ಅದೇ ಮೂಲ ತತ್ವದಲ್ಲಿ ಲೀನರಾಗುತ್ತಾರಂತೆ. ಇದು ಆಮೆಯು ಅಗತ್ಯ ಬಿದ್ದಾಗ ತನ್ನ ಕಾಲುಗಳನ್ನು ಹೊರಚಾಚಿ, ಅಗತ್ಯವಿಲ್ಲದಾಗ ಒಳಗೆ ಸೆಳೆದುಕೊಂಡ ಹಾಗೆ. ವಿರಿಂಚಿ ಬ್ರಹ್ಮನ ನಂತರ ಮುಂದಿನ ಬ್ರಹ್ಮ ಪಟ್ಟ ಹನುಮಂತನಿಗಂತೆ