ಯಾವ ದೇವರ ನೆನೆಯಲಿ…
ಅನೇಕರಿಗೆ ದ್ವಂದ್ವ ತಾನು ಯಾವ ದೇವರ ನೆನೆಯಬೇಕು? ಯಾವದೇವರ ಉಪಾಸನೆ ಮಾಡಬೇಕು? ದೇವರ ದೇವ ಮಹಾದೇವನ ಉಪಾಸನೆ ಮಾಡೋಣವೇ?, ಭಗವಾನ್ ಶ್ರೀಕೃಷ್ಣ ನನ್ನು ನೆನೆಯೋಣವೇ? ಕುಲದೇವರ ನೆನೆಯೋಣವೇ ?ಆಥವಾ ಮನೆ ಪಕ್ಕದಲ್ಲಿರುವ ಅಂಜನೆಯನನ್ನು ಪೂಜಿಸೋಣವೇ? ಈ ಗೊಂದಲದಲ್ಲಿ ಯಾವ ದೇವರನ್ನೂ ಸರಿಯಾಗಿ ಏಕಾಗ್ರತೆ ಯಿಂದ ಧ್ಯಾನಿಸಲಾಗದೆ , ವಿಮರ್ಶೆಯಲ್ಲಿಯೇ ಸಮಯ ವ್ಯರ್ಥಮಾಡುತ್ತಾರೆ . ಕೆಲವರಿಗೆ ಭಯ ತಾನು ಆ ದೇವರ ಉಪಾಸನೆ ಮಾಡಿದರೆ ತಮ್ಮ ಕುಲದೇವರಿಗೆ ,ಸ್ಥಾನ ದೇವರಿಗೆ ಸಿಟ್ಟು ಬಂದಿತೆ ? ಎಂದು. ಅದಕ್ಕೆ ಶ್ರೀಕೃಷ್ಣ ಪರಮಾತ್ಮ ನೆ ಪರಿಹಾರ ಹೇಳಿದ್ದಾನೆ.ಭಗವದ್ಗೀತೆ ಯಲ್ಲಿ.
ಯೇ ಯಥಾ ಮಾಂ ಪ್ರಪದ್ಯಂತೇ ತಾಂಸ್ತಥ್ಯೆವ ಭಜಾಮ್ಯಹಂ l
( ಯಾರು ಹೇಗೆ ನನ್ನನ್ನು ಉಪಾಸನೆ ಮಾಡುತ್ತಾರೆಯೋ ಅವರಿಗೆ ಹಾಗೆಯೇ ಅನುಗ್ರಹ ನೀಡುತ್ತೆನೆ).
ಶ್ರೀಕೃಷ್ಣ ಹೇಳುತ್ತಾನೆ ಯಾರು ನನ್ನನ್ನು ಕೃಷ್ಣ ನಾಗಿ ಪೂಜಿಸುತ್ತಾರೆಯೋ ಅವರಿಗೆ ನಾನು ಕೃಷ್ಣ ನಾಗಿ ಅನುಗ್ರಹಿಸುತ್ತೇನೆ . ಯಾರು ನನ್ನನ್ನು ಶಿವನಾಗಿ ಪೂಜಿಸುತ್ತಾರೆಯೋ ಅವರಿಗೆ ನಾನು ಶಿವನಾಗಿ ಕಾಣುತ್ತೇನೆ ಮತ್ತು ಅನುಗ್ರಹ ನೀಡುತ್ತೇನೆ. ಕೃಷ್ಣನಾಗಿ ಪೂಜಿಸಿದರೆ ಮಾತ್ರ ಫಲ ನೀಡುತ್ತೇನೆ ಶಿವನಾಗಿ ಪೂಜಿಸದರೆ ಅನುಗ್ರಹಿಸುದಿಲ್ಲಾ ಅನ್ನುದಿಲ್ಲಾ.
ಹಾಗೆಯೇ ಆಂಜನೇಯನಾಗಿಯೋ ,ಸಾಯಿಬಾಬಾ ನಾಗಿಯೋ , ಮಾರಿಕಾಂಬೆಯಾಗಿಯೋ ಪೂಜಿಸಿದರೆ ಅದೇ ರೂಪ ದಲ್ಲಿ ನಾನು ನಿನಗೆ ತೋರುತ್ತೇನೆ ,,ಅದೇ ರೂಪದಲ್ಲಿ ನಿನಗೆ ಎಲ್ಲಾ ಫಲಗಳನ್ನು ಕೊಡುತ್ತೆನೆ. ಏಕೆಂದರೆ ಎಲ್ಲಾ ದೇವರಲ್ಲಿ ಇರುವ ದೇವರು ಒಬ್ಬನೆ .
ಆದುದರಿಂದ ದ್ವಂದ್ವ ಬೇಡಾ. ಜನಾರ್ಧನ ಸ್ವಾಮಿ ಯನ್ನು ನಮಿಸುವಾಗ ನಾನು ಮಂಜುನಾಥನನ್ನೂ, ಕುಲದೇವರನ್ನೂ ನಮಿಸುತಿದ್ದೇನೆ.
ಹಾಗೆ ಮಂಜುನಾಥನನ್ನು ನೆನೆಯುವಾಗ ಸಮಾನಾಂತರವಾಗಿ ಇತರ ಇಷ್ಟದೇವರನ್ನು ನೆನೆಯುತ್ತೇನೆ ಎಂದು ತಿಳಿದರೆ ಸಾಕು.
ಅದನ್ನೇ ಕೃಷ್ಣ ಪರಮಾತ್ಮ ಹೇಳುತ್ತಾನೆ .ಅಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ l ಸರ್ವದೇವ ನಮಸ್ಕಾರಃ ಕೇಶವಂ ಪ್ರತಿ ಗಚ್ಚತಿ .ಅಂದರೆ ಹೇಗೆ ಆಕಾಶದಿಂದ ಮಳೆಯ ನೀರು ಭೂಮಿಗೆ ಎಲ್ಲೇ ಬಿದ್ದರೂ ಅದು ಕೊನೆಗೆ ಒಂದೇ ಸಾಗರಕ್ಕೆ ಹೇಗೆ ಹೋಗಿ ಸೇರುತ್ತದೆಯೊ .ಹಾಗೆಯೇ ಯಾವ ದೇವರಿಗೂ ನಮಸ್ಕಾರ ಹಾಕಿದರೂ ಅದು ಕೇಶವನಿಗೆ( ಒಂದೇ ದೇವರಿಗೆ ) ಸೇರುತ್ತದೆ.
ನಮ್ಮ ಭಾರತೀಯ ತತ್ವಶಾಸ್ತ್ರ ಎಷ್ಟು ವಿಶಾಲ ಮನೋಭಾವ ದಿಂದ ಕೂಡಿದೆ ನೋಡಿ . ನೀನು ಇದೆ ದೇವರನ್ನು ಪೂಜಿಸಬೇಕು ,ಹೀಗೆ ಪೂಜಿಸಬೇಕು ಎಂದು ಹೇಳುದಿಲ್ಲ. ನೀನು ಯಾವ ದೇವರನ್ನು ಬೇಕಾದರೂ ಪೂಜಿಸು, ಹೇಗೆ ಬೇಕಾದರೂ ಪೂಜಿಸು ನೀನು ಭಕ್ತಿಯಿಂದ ಪೂಜಿಸಿದರೆ ದೇವರು ನಿನಗೆ ಅದೇ ರೂಪದಲ್ಲಿ ಅನುಗ್ರಹಿಸುತ್ತಾನೆ. ಎಷ್ಟು ಸುಂದರ ಪರಿಕಲ್ಪನೆ ನೋಡಿ.
ದೇವರನ್ನು ಪೂಜಿಸುವ ಜನರಲ್ಲಿ ನಾಲ್ಕು ವಿಧ. ಒಂದು ಆರ್ತ .ಏನಾದರೂ ಸಂಕಟ ಬಂದಾಗ ಮಾತ್ರ ಅವರು ದೇವರನ್ನು ಪೂಜಿಸುವುದು. ಕಾಯಿಲೆ ಬಂದಾಗ ದೇವರ ಲ್ಲಿ ಮೊರೆ ಹೋಗುವರು. ಕಾಯಿಲೆಗುಣವಾದ ಮೇಲೆ ದೇ ವರನ್ನು ಮರತೇ ಬಿಡುವರು . ಹೆಚ್ಚಿನವರು ಈ ವರ್ಗದಲ್ಲಿ ಇರುತ್ತಾರೆ. ಎರಡನೆಯವರು ಅರ್ಥಾರ್ಥಿ ಅವರು ತನಗೆ ಧನ ಕೊಡು, ಆಸ್ತಿ ಕೊಡು ವ್ಯಾಪಾರ ದಲ್ಲಿ ಲಾಭ ಮಾಡು, ಮಕ್ಕಳಿಗೆ ದೊಡ್ಡ ಉದ್ಯೋಗ ಕೊಡು ಎಂದು ಪೂಜಿಸುತ್ತಾರೆ. ಅವರಿಗೆ ದೇವರ ಮೇಲಿನ ಭಕ್ತಿ ಗಿಂತಲೂ ಅವನು ಕೊಡುವ ಲಾಭದ ಮೇಲೆ ಹೆಚ್ಚು ಗಮನ. ಅವರಿಗೆ ಪೂಜೆ ಅಂದರೆ ಒಂದು ವ್ಯಾಪಾರ. ಮೂರನೆಯವರು ಜಿಜ್ಞಾಸು ಅವರಿಗೆ ದೇವರು ಇದ್ದಾನೋ ಇಲ್ಲವೋ ಎಂಬ ಜಿಜ್ಞಾಸೆ. ಒಂದೇ ವೇಳೆ ಇದ್ದರೆ , ತಾನು ಪೂಜೆ ಮಾಡದಿದ್ದರೆ .ಮುಂದೆ ತಾಪತ್ರಯ ವಾದಿತು. ಇಲ್ಲದಿದ್ದರೆ ಪೂಜೆ ಮಾಡಿದ್ದು ಆಷ್ಟೇ ನಷ್ಟ . ಅವರದು ಶರತ್ತಿಲ್ಲದ ಭಕ್ತಿಯಲ್ಲ. To be safer side ಭಕ್ತಿ. ನಾಲ್ಕನೆಯಯವರು ಜ್ಞಾನಿಗಳು ಅವರಿಗೆ ದೇವರ ಪ್ರೀತಿಯೊಂದೇ ಸಾಕು ಬೇರೇನೂ ಬೇಡಾ . ದೇವರಿಂದ ಲೌಕಿಕ ವಾದುದನ್ನು ವಸೂಲಿ ಮಾಡವ ಭಕ್ತಿಯಲ್ಲ . ದೇವರ ಒಲುಮೆ ಯೊಂದೇ ಅವರಿಗೆ ಬೇಕಾದದ್ದು.ಅವರಿಗೆ ದೇವರಲ್ಲಿ ಸಂಶಯವೇ ಇಲ್ಲಾ. ದೇವರು ಕಷ್ಟ ಕೊಡಲಿ ,ಸುಖಕೊಡಲಿ ಅವರು ಅನನ್ಯವಾಗಿ ದೇವರ ಉಪಾಸನೆ ಮಾಡುವರು. ಇಂಥವರು ಕಮ್ಮಿ.ಇಂಥವರಲ್ಲಿ ನನಗೆ ಪ್ರೀತಿ ಜಾಸ್ತಿ ಎನ್ನುತ್ತಾನೆ ಭಗವಾನ್ ಶ್ರೀಕೃಷ್ಣ. ಭಗವದ್ಗೀತೆಯ ಏಳನೆಯ ಅಧ್ಯಾಯ ದಲ್ಲಿ.
ಮನುಷ್ಯ ಕಿಲಾಡಿ .ಅವನಿಗೆ ಏನಾದರೂ ವಿಘ್ನ ಬರುತ್ತದೆ ಅಂದರೆ ವಿಘ್ನೇಶನನ್ನು ಪೂಜಿಸುತ್ತಾನೆ. ಧನಬೇಕಾದರೆ ಧನಲಕ್ಷ್ಮೀ ಯನ್ನು ಪೂಜಿಸುತ್ತಾನೆ.ಆರೋಗ್ಯ ಬೇಕಾದರೆ ಧನವಂತರಿ ಪೂಜೆಮಾಡುತ್ತಾನೆ , ಆಯಸ್ಸು ಬೇಕಾದಾಗ ಮಾರ್ಕಂಡೇಯ ನ ಪೂಜೆ ಮಾಡುತ್ತಾನೆ. ಆದರೆ ಶ್ರೀಕೃಷ್ಣ ಹೇಳುತ್ತಾನೆ ನೀನು ಯಾವ ದೇವರ ಪೂಜೆ ಮಾಡಿದರೂ ನಾನು ನಿನಗೆ ಅನುಗ್ರಹಿಸುತ್ತೇನೆ. ಏಕೆಂದರೆ ಎಲ್ಲಾ ದೇವರು ಒಂದೇ .ಭಕ್ತಿಯಿಂದ ಒಂದು ಎಲೆನೋ, ಹುಲ್ಲನ್ನೂ ಅರ್ಪಿಸಿದರೂ ಸಾಕು ನಾನು ಸಂತೋಷ ಪಡುತ್ತೇನೆ.
ಶ್ರೀ ಕೃಷ್ಣನ ಸಂದೇಶ ಸಾರ್ವಕಾಲಿಕ ಸತ್ಯ. ಎಲ್ಲಾ ಜನಾಂಗದವರಿಗೂ.
ಶ್ರೀ ತಿವಿಕ್ರಮ ಹೆಬ್ಬಾರ್.