ಮಧುಕೇಶ್ವರ ದೇವಾಲಯ ಬನವಾಸಿ
ಮಧುಕೇಶ್ವರದೇವಾಲಯವುಉತ್ತರಕನ್ನಡ ಜಿಲ್ಲೆಯ ಶಿರಸಿತಾಲೂಕಿನ ಬನವಾಸಿಯಲ್ಲಿದೆ.ಸುಮಾರು ೧೫೦೦ ವರ್ಷದ ಹಿಂದೆ ಕದಂಬರು,ಚಾಲುಕ್ಯರು,ಹೊಯ್ಸಳರ ಕಾಲದಲ್ಲಿ ದೇವಾಲಯವನ್ನು ಕಟ್ಟಲಾಗಿದೆ.ಪ್ರಸಿದ್ಧ ಶಿಲ್ಪಿ ಅಮರಶಿಲ್ಪಿ ಜಕಣಾಚಾರಿ ಈ ದೇವಾಲಯವನ್ನು ನಿರ್ಮಿಸಿದನೆಂದು ನಂಬಲಾಗಿದೆ.ಪವಿತ್ರ ವರದಾ ನದಿಯು ದೇವಾಲಯದ ಎದುರಿಗೆ ಹರಿಯುತ್ತಿದೆ.ಶ್ರೀ #ಮಧುಕೇಶ್ವರ ಇಲ್ಲಿನ ಆರಾಧ್ಯದೈವ.ದೇವಾಲಯವು ಕರ್ನಾಟಕದ ಏಳು ಮುಕ್ತಿ ಸ್ಥಳಗಳಲ್ಲೊಂದು ಎಂದು ಪ್ರಸಿದ್ಧವಾಗಿದೆ.
ಪೌರಾಣಿಕ ಐತಿಹ್ಯ
ಮಾರ್ಕಂಡೇಯ ಪುರಾಣದ ಕಥೆಯ ಪ್ರಕಾರ ಕೃತಯುಗದಲ್ಲಿ ಮಹಾವಿಷ್ಣುವಿನ ಕಿವಿಯಿಂದ ಮಧು, ಕೈಟಭರೆಂಬ ಇಬ್ಬರು ದೈತ್ಯರು ಉತ್ಪತ್ತಿಯಾಗುತ್ತಾರೆ.ಅವರು ಈಶ್ವರನನ್ನು ಕುರಿತು ತಪಸ್ಸು ಮಾಡಿ ವರ ಪಡೆದು ಅಜರಾಮರರಾಗುತ್ತಾರೆ.ಕ್ರಮೇಣ ಅವರಲ್ಲಿ ಗರ್ವ ಉಂಟಾಗಿ ಲೋಕ ಕಂಟಕರಾಗುತ್ತಾರೆ.ಭೂಲೋಕಗಳನ್ನೆಲ್ಲ ಜಯಿಸಿ ಬ್ರಹ್ಮನ ಕಾರ್ಯಕ್ಕೆ,ಶಿವನ ಕಾರ್ಯಕ್ಕೆ ತೊಂದರೆ ಉಂಟುಮಾಡುತ್ತಾರೆ.ಆಗ ಬ್ರಹ್ಮ ವಿಷ್ಣುವಿನಲ್ಲಿ ಮೊರೆಯಿಟ್ಟು ಈ ಲೋಕ ಕಂಟಕ ರಾಕ್ಷಸರನ್ನು ಸಂಹರಿಸಲು ಕೇಳಿಕೊಳ್ಳುತ್ತಾನೆ.ವಿಷ್ಣುವು ಸಮ್ಮತಿಸಿ ಮಧು,ಕೈಟಭರೊಂದಿಗೆ ಯುದ್ಧಕ್ಕೆ ಆಹ್ವಾನಿಸುತ್ತಾನೆ.ಅವರೊಡನೆ ಐದು ಸಹಸ್ರ ವರ್ಷಗಳವರೆಗೆ ಯುದ್ಧ ಮಾಡಿದರೂ ಸೋಲಿಸಲಾಗುವುದಿಲ್ಲ.ಕೊನೆಗೆ ವಿಷ್ಣು ಉಪಾಯದಿಂದ ಯೋಚಿಸಿ ವರವೇನಾದರೂ ಬೇಕಿದ್ದರೆ ಕೇಳಿ,ಕೊಡುತ್ತೇನೆ ಎಂದಾಗ ಮತಾಂಧರಾದ ದೈತ್ಯರು ನಾವೇ ನಿನಗೆ ವರ ಕೊಡುತ್ತೇವೆ ಕೇಳಿಕೋ ಎಂದರು.ಇದನ್ನೇ ಆಶಿಸಿದ್ದ ವಿಷ್ಣು ಹಸನ್ಮುಖದಿಂದ ಹಾಗಾದರೆ ನನ್ನಿಂದ ನೀವು ಹತರಾಗುವ ವರ ಕೊಡಿರೆಂದು ಕೇಳುತ್ತಾನೆ.ಈ ಮಾತನ್ನು ಕೇಳಿ ಗರಬಡಿದವರಂತೆ ಆಗಿ ಅಹಂಕಾರ ಅಳಿದು ಮಧು-ಕೈಟಭರು ತಾವಾಗೇ ಇಂಥ ಪ್ರಸಂಗ ತಂದುಕೊಂಡೆವಲ್ಲ ಎಂದು ಚಿಂತಿಸಿ,ಮರುಗಿ ನಮ್ಮನ್ನು ಸಂಹರಿಸಿ ನಮ್ಮ ಪ್ರತೀಕವಾಗಿ ಇಲ್ಲಿ ಈಶ್ವರಾಲಯ ನಿರ್ಮಿಸಬೇಕೆಂದು ಪ್ರಾರ್ಥಿಸುತ್ತಾರೆ.ಮಹಾವಿಷ್ಣು ಹಾಗೇ ಆಗಲೆಂದು ಅವರೀರ್ವರನ್ನು ಸಂಹರಿಸಿ ಬನವಾಸಿಯಲ್ಲಿ ಮಧುಕೇಶ್ವರ ದೇವಾಲಯವನ್ನು ಇಲ್ಲಿಂದ ೧೫ ಕಿ.ಮೀ.ದೂರದಲ್ಲಿ ಕೈಟಭೇಶ್ವರಾಲಯವನ್ನು ನೆಲೆಗೊಳಿಸಿದನೆಂಬ ಪ್ರತೀತಿಯಿದೆ.ಈಗಲೂ ಬನವಾಸಿಯಲ್ಲಿ ಮಧುಕೇಶ್ವರ ದೇವಾಲಯ,ಸೊರಬ ತಾಲೂಕಿನ ಆನವಟ್ಟಿಯ ಸಮೀಪ ಕೋಟೆಪುರದಲ್ಲಿ ಕೈಟಭೇಶ್ವರ ದೇವಾಲಯವಿದೆ.
ದೇವಾಲಯದ ಪ್ರಮುಖ ಆಕರ್ಷಣೆಗಳು.
ಮಧುಕೇಶ್ವರ ಲಿಂಗ
ಶ್ರೀ ಮಧುಕೇಶ್ವರ ಲಿಂಗವು ೫.೫ ಅಡಿ ಎತ್ತರವಿದ್ದು,ಲಿಂಗದ ಶಿಲೆಯು ಜೇನು ತುಪ್ಪ(ಮಧು)ದ ಬಣ್ಣದಲ್ಲಿದೆ.ಅಂತೆಯೇ ಮಧುಕೇಶ್ವರ ಲಿಂಗವೆಂದು ಹೆಸರು.ಇಂತಹ ಕಲ್ಲಿನ ಶಿವಲಿಂಗಗಳು ಅತಿವಿರಳ.
ಮಾಯಾದೇವಿ ನಾಟ್ಯಮಂಟ.
ಗುಡಿಯ ಮುಖಮಂಟಪದ ಮಧ್ಯದಲ್ಲಿ ನಾಟ್ಯಮಂಟಪವಿದೆ.ಮಮಕಾರ ರಾಜನ ಮಗಳಾದ ಮಾಯಾದೇವಿ ಶಿವನನ್ನೇ ಒಲಿಸಿಕೊಳ್ಳಬೇಕೆಂದು ನಾಟ್ಯಸೇವೆ ಮಾಡುತ್ತಿರುವಾಗ ಅಲ್ಲಮ ಪ್ರಭುವು ಮದ್ದಳೆಕಾರನಾಗಿ ಬಂದು ಮದ್ದಳೆ ನುಡಿಸಿ ಮಾಯೆಯನ್ನು ಸೋಲಿಸಿದನೆಂದು ಪ್ರಭುಲಿಂಗಲೀಲೆಯಲ್ಲಿ ಹೇಳಿದೆ.ಈ ಮಂಟಪದ ದುಂಡಗಿನ ನಾಲ್ಕು ಕಂಬಗಳಲ್ಲಿ ನಮ್ಮ ಪ್ರತಿಬಿಂಬವು ಏಕಕಾಲದಲ್ಲಿ ನೇರವಾಗಿ,ತಲೆ ಕೆಳಗಾಗಿಯೂ ಕಾಣುತ್ತದೆ.
ಕಲ್ಲು ಮಂಚ
ದೇವಾಲಯದ ದಕ್ಷಿಣ ಪಾರ್ಶ್ವದಲ್ಲಿರುವ ಕಲ್ಲಿನಮಂಚವು ಗ್ರೆನೈಟ್ ಶಿಲೆಯಿಂದ ಮಾಡಿದ್ದಾಗಿದೆ.ಇದು ಹತ್ತು ತುಂಡು ಕಲ್ಲಿನಿಂದ ಮಾಡಿದುದಾಗಿದೆ.ಇದು ಹೊಳಪಿನಿಂದ ಕೂಡಿದ್ದು ಇದರ ಮೇಲೆ ಶಾಸನಗಳನ್ನು ಕೆತ್ತಲಾಗಿದೆ.ಮಂಚದ ಮೇಲೆ ಗಿಳಿ,ಸಿಂಹಗಳು,ಆನೆಗಳು,ಛಾವಣಿಯ ಕಮಲಗಳನ್ನು ಕೆತ್ತಲಾಗಿದೆ.ಸೋಂದೆಯ ರಘುನಾಥ ನಾಯಕನು ೧೬೨೮ರಲ್ಲಿ ಇದನ್ನು ಮಧುಕೇಶ್ವರನಿಗೆ ಅರ್ಪಿಸಿದನು.
ಅರ್ಧಗಣಪತಿ
ಗುಡಿಯ ಬಲಭಾಗಕ್ಕೆ ಅನನ್ಯವಾದ ಅರ್ಧಗಣಪತಿಯ ಮೂರ್ತಿಯಿದೆ.ಇದರ ಇನ್ನೊಂದು ಅರ್ಧಭಾಗ ವಾರಣಾಸಿಯಲ್ಲಿದೆಯೆಂದು ನಂಬಲಾಗಿದೆ.ಇದು ಅರ್ಧಾಂಗಿಯಿಲ್ಲದೇ ನಿಂತಿರುವ ಏಕದಂತನ ಬ್ರಹ್ಮಚರ್ಯವನ್ನು ಸಂಕೇತಿಸುತ್ತದೆ.
ನಂದಿ ವಿಗ್ರಹ
ನಾಟ್ಯಮಂಟಪದ ಎದುರು ೭.೫ ಅಡಿ ಎತ್ತರದ ಬೃಹತ್ ನಂದಿ ಇದೆ.ಇದು ಹಾನಗಲ್ ಕದಂಬರ ಕಾಲಕ್ಕೆ ಸೇರಿದ್ದಾಗಿದೆ.ಈ ನಂದಿಯು ಎಡಗಣ್ಣಿನಿಂದ ಎದುರಿಗೆ ಶಿವನನ್ನು ಬಲಗಣ್ಣಿನಿಂದ ಪಕ್ಕದಲ್ಲಿರುವ ಪಾರ್ವತಿ ಗುಡಿಯಲ್ಲಿರುವ ಪಾರ್ವತಿಯನ್ನು ನೋಡುತ್ತಿದೆ.ನಂದಿಯನ್ನು ಅತ್ಯಂತ ನುಣುಪಾದ ಬಳಪದ ಕಲ್ಲಿನಿಂದ ಮಾಡಲಾಗಿದೆ.
ಇತರ ಆಕರ್ಷಣೆಗಳು
ಮಧುಕೇಶ್ವರ ದೇವಾಲಯದ ಗರ್ಭಗುಡಿ ಶುಕನಾಸಿ,ಮುಖಮಂಟಪಗಳ ಸುತ್ತಲಿನ ಪ್ರದಕ್ಷಿಣಾ ಪಥದ ಎಡಗಡೆ ಇರುವ ಮಹಾವರಣಭಸ್ತಿಯಲ್ಲಿ ದೊಡ್ಡದಾದ ಅಷ್ಟದಿಕ್ಪಾಲಕರ ಎಂಟು ಮೂರ್ತಿ ಪತ್ನಿ ವಾಹನ ಸಮೇತರಾಗಿ ಆಯಾ ದಿಕ್ಕಿಗೆ ಸ್ಥಾನಕ್ಕೆ ಸರಿಯಾಗಿ ಪೂರ್ವಕ್ಕೆ ಇಂದ್ರ,ಆಗ್ನೇಯಕ್ಕೆ ಅಗ್ನಿ,ದಕ್ಷಿಣಕ್ಕೆ ಯಮ,ನೈಋತ್ಯಕ್ಕೆ ನಿರಋತಿ,ಪಶ್ಚಿಮಕ್ಕೆ ವರುಣ,ವಾಯುವ್ಯಕ್ಕೆ ವಾಯು,ಉತ್ತರಕ್ಕೆ ಕುಬೇರ,ಈಶಾನ್ಯಕ್ಕೆ ಈಶಾನಗಳನ್ನು ಪ್ರತ್ಯೇಕವಾಗಿ ಸ್ಥಾಪಿಸಿದ್ದಾರೆ.ಇದರ ನಡುವೆ ಅಲ್ಲಲ್ಲಿ ಪಾಂಡುರಂಗ,ಕಾಶಿ ವಿಶ್ವೇಶ್ವರ,ವರದೇಶ್ವರ,ಹಾವಳಿ ಮಧುಕೇಶ್ವರ,ಅಮೃತೇಶ್ವರ,ಕೇದಾರೇಶ್ವರ,ಸಪ್ತಮಾತೃಕೆ,ಚಿಂತಾಮಣಿಯರ ಪಟ್ಟಿ,ನರಸಿಂಹದೇವರ ಗುಡಿ,ವೆಂಕಟರಮಣ,ಅಮೃತಶಿಲೆಯ ರಾಮ-ಲಕ್ಷ್ಮಣ-ಸೀತೆ,ದತ್ತಪಾದುಕೆ,ದುಂಡಿರಾಜ,ಉಮಾಮಹೇಶ್ವರ,ಬಸಲಿಂಗೇಶ್ವರ,ಸೂರ್ಯ,೨ನೇ ಶತಮಾನದ ೫ ಹೆಡೆಯುಳ್ಳ ಆದಿಶೇಷ,ಕೇಶವ,ಉತ್ತರದ್ವಾರ,ಪೂರ್ವದ್ವಾರ,ಚೌಡೇಶ್ವರಿ,ದುರ್ಗೆ-ಪಾರ್ವತಿಯರ ಗುಡಿ,ಸಾಕ್ಷಿ ಗಣಪತಿ,ಚಂಡೇಶ್ವರ,ಕಡಲೆ ಮಾರುತಿ,ಕಬ್ಬುಮಾರುತಿ,ವೀರಭದ್ರ,ಸದಾಶಿವ,ಕದಂಬೇಶ್ವರ,ತಿಥಿಕಂಠೇಶ್ವರ ಗುಡಿಗಳಿವೆ.
ಮನ್ಮಹಾಸ್ಯಂದನ ರಥೋತ್ಸವ
ರಥೋತ್ಸವ ಬನವಾಸಿಯ ದೊಡ್ಡ ಹಬ್ಬಗಳಲ್ಲೊಂದು.ಕಳೆದ ೩೮೦ ವರ್ಷಗಳಿಂದ ಪ್ರತಿ ವರ್ಷ ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಎರಡು ದಿನಗಳಂದು ರಥೋತ್ಸವವನ್ನು ನಡೆಸಿಕೊಂಡು ಬರಲಾಗುತ್ತಿದೆ.ಈ ಉತ್ಸವ ಶಿವಪಾರ್ವತಿಯರ ವಿವಾಹ ಮಹೋತ್ಸವವೂ ಹೌದು.ಇದರಲ್ಲಿ ಅತಿ ವಿಶೇಷವೆಂದರೆ ರಥದಲ್ಲಿ ಸಾಲಂಕೃತವಾದ ಮಧುಕೇಶ್ವರ,ಪಾರ್ವತಿ ಜೊತೆಗೆ ಗಣಪತಿ,ಸುಬ್ರಹ್ಮಣ್ಯರ ಉತ್ಸವಮೂರ್ತಿಗಳನ್ನು ಸ್ಥಾಪನೆ ಮಾಡಿ ದೀಪಾಲಂಕಾರಗಳೊಂದಿಗೆ ರಥವನ್ನು ಎಳೆಯಲಾಗುತ್ತದೆ.ಒಟ್ಟಾರೆ ಬನವಾಸಿಯಲ್ಲಿ ೪ ರಥಗಳಿವೆ. 1. ಹಗಲೋತ್ಸವ ರಥ 2. ತಿರುಗುಣಿ ರಥ 3. ಹೂವಿನ ರಥ 4. ಶ್ರೀ ಮನ್ಮಹಾಸ್ಯಂದನ ರಥ ಶ್ರೀ ಮನ್ಮಹಾಸ್ಯಂದನ ರಥವನ್ನು ‘ದೊಡ್ಡ ತೇರು’ ಎಂದು ಕರೆಯಲಾಗುತ್ತದೆ.ಇದು ಭಾರತದ ಅತಿ ದೊಡ್ಡ ರಥಗಳಲ್ಲೊಂದು.ಇದನ್ನು ಸೋಂದೆಯ ಅರಸ ಶ್ರೀ ರಾಮಚಂದ್ರ ನಾಯಕ ೧೬೦೮ರಲ್ಲಿ ಮಧುಕೇಶ್ವರ ಉತ್ಸವಕ್ಕೆಂದು ದಾನವಾಗಿ ನೀಡಿದನು.ರಥವು ೭೫ ಅಡಿ ಎತ್ತರವಿದ್ದು,ಸುಮಾರು ೧೫೦ ಟನ್ ತೂಕವಿದ್ದು ೬ ಚಕ್ರಗಳನ್ನು ಹೊಂದಿದೆ.ಈ ರಥವು ಕರ್ನಾಟಕದ ಅತ್ಯಂತ ಹಳೆಯ ರಥಗಳಲ್ಲೊಂದಾಗಿದೆ(೪೦೪ ವರ್ಷ).
*