ಸೀತಾದೇವಿಯ ಮೂಗುತಿಯನ್ನು ಹುಡುಕಿ ಮೇಲೆತ್ತಿದ ಮುತ್ತೆತ್ತರಾಯನ ಕ್ಷೇತ್ರ ….ಮುತ್ತತ್ತಿ…!~~~~~~~
ಕರ್ನಾಟಕ ರಾಜ್ಯ, ಮಂಡ್ಯ ಜಿಲ್ಲೆ, ಮಳವಳ್ಳಿ ತಾಲ್ಲೂಕು, ಹಲಗೂರು ಹೋಬಳಿಯಲ್ಲಿರುವ ಮುತ್ತತ್ತಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಪ್ರಸಿದ್ದ ಯಾತ್ರಾ ಸ್ಥಳ ಹಾಗೂ ಪ್ರವಾಸಿ ತಾಣವಾಗಿದೆ. ಕಾವೇರಿ ನದಿಯ ಹರಿವಿನ ಸುಂದರ ಪ್ರಕೃತಿ ಸೌಂದರ್ಯದೊಂದಿಗೆ ಕಂಗೊಳಿಸುವ ಚಿಕ್ಕ ಗ್ರಾಮವೇ ಮುತ್ತತ್ತಿ . ಕಾವೇರಿ ನದಿ ನೀರಿನಲ್ಲಿ ಭಾರಿ ಜನಪ್ರಿಯ ಸಾಹಸಕ್ರೀಡೆ ಕೋರಲ್ ರೈಡ್ ನ್ನು ಇಲ್ಲಿ ಪ್ರವಾಸಿಗರು ಆನಂದಿಸಬಹುದು. ಕಾವೇರಿ ವನ್ಯಜೀವಿ ಧಾಮ ಮತ್ತು ದಟ್ಟ ಅರಣ್ಯಗಳಿಂದ ಸುತ್ತುವರಿದಿರುವ ಮುತ್ತತ್ತಿ ಗ್ರಾಮದ ಪ್ರಕೃತಿ ಸೌಂದರ್ಯ ಮನ ಸೆಳೆಯುತ್ತದೆ. ರಮಣೀಯ ಕಣಿವೆ, ರಭಸದಿಂದ ಹರಿಯುವ ನೀರಿನ ಸೆಳವುಳ್ಳ ಸಣ್ಣ ಹಳ್ಳಗಳು ಇಲ್ಲಿವೆ. ಹಲವಾರು ಬಗೆಯ ಪ್ರಾಣಿ ಪಕ್ಷಿಗಳು ಈ ಅರಣ್ಯದಲ್ಲಿ ನೆಲೆಸಿವೆ.
ಸ್ಥಳ ಪುರಾಣ ಉದ್ಬವ ಮತ್ತು ಹಿನ್ನಲೆ
ಶ್ರೀ ರಾಮ, ಲಕ್ಷ್ಮಣ ಸೀತಾಮಾತೆಯರು ಕಾಡಿಗೆ ವನವಾಸಕ್ಕೆ ಬಂದಾಗ ಕಾವೇರಿ ನದಿ ತೀರದಲ್ಲಿರುವ ತಿರುಗಣೆ ಮಡುವಿನಲ್ಲಿ ಕುಳಿತು ಸ್ನಾನ ಮಾಡುತ್ತಿದ್ದಾಗ ಸೀತಾಮಾತೆಯ ಮೂಗುತಿಯು ಕಾವೇರಿ ನದಿಯಲ್ಲಿ ಬಿದ್ದು ಹೋಗಿರುವುದಾಗಿ ತನ್ನ ಪತಿಯಾದ ಶ್ರೀ ರಾಮರಿಗೆ ಹೇಳಿದಾಗ ಅಲ್ಲೇ ಇದ್ದ ಹನುಮಂತನು ನೀರಿನಲ್ಲಿದ್ದ ಮೂಗುತಿಯನ್ನು ಹುಡುಕಲು ತನ್ನ ಬಾಲವನ್ನು ನೀರಿನಲ್ಲಿ ತಿರುಗಿಸಿ ನೀರಿನಲ್ಲಿ ಮೂಗುತಿ ಕಾಣಿಸಿದಾಗ ಹನುಮಂತನು ಮೂಗುತಿಯನ್ನು ಸೀತಾಮಾತೆಗೆ ನೀಡಿದನು, ಅವನು ಬಾಲವನ್ನು ನೀರಿನಲ್ಲಿ ತಿರುಗಿಸಿದ ರಭಸಕ್ಕೆ ಆ ಜಾಗವು ಇಂದಿಗೂ ತಿರುಗಣೆ ಮಡುವೆಂದು ಪ್ರಸಿದ್ದಿಯಾಗಿದೆ. ಹನುಮಂತನು ಸೀತಾಮಾತೆಗೆ ಮೂಗುತಿಯನ್ನು ನೀಡಿದ್ದಕ್ಕೆ #ಮುತ್ತೆತ್ತರಾಯನೆಂದು ಹೆಸರು ಬಂದಿರುತ್ತದೆ. ಈಗ ಆ ಸ್ಥಳವನ್ನು #ಮುತ್ತತ್ತಿಯೆಂದು ಕರೆಯುತ್ತಾರೆ.
ಶ್ರೀ ಆಂಜನೇಯಸ್ವಾಮಿ ಮೂರ್ತಿಯು ಮುತ್ತತ್ತಿಯಲ್ಲಿ ಭೂಮಿಯಿಂದ ಮೂಡಿದ್ದು ಸದರಿ ಜಾಗದಲ್ಲಿ ಮೂಡಿರುವ ಮೂರ್ತಿಯನ್ನು ಭೂಮಿಯಲ್ಲೇ ಹೂತು ಹನುಮಂತನ ವಿಗ್ರಹವನ್ನು ಕೆತ್ತಿಸಿ ಪ್ರತಿಷ್ಠಾಪನೆ ಮಾಡಿ ಆ ಜಾಗದಲ್ಲಿ ದೇವಸ್ಥಾನವನ್ನು 1986-87ನೇ ಸಾಲಿನಲ್ಲಿ ಸಾರ್ವಜನಿಕ/ ಭಕ್ತಾಧಿಗಳ ವಂತಿಕೆಯಿಂದ ಹಣ ಕ್ರೂಢೀಕರಿಸಿ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಸದರಿ ಜಾಗದಲ್ಲಿ ನಿರ್ಮಿಸಿರುವ ಹನುಮಂತನು ಸಾರ್ವಜನಿಕ/ಭಕ್ತಾಧಿಗಳಿಗೆ ಅಭಯ ಹಸ್ತವನ್ನು ನೀಡುತ್ತಾ ನೆಲೆಸಿದ್ದರಿಂದ ಆ ಜಾಗವನ್ನು ಮುತ್ತತ್ತಿಯೆಂದು ಕರೆಯುತ್ತಾರೆ.
ದೇವಸ್ಥಾನದ ವಿವರ
ದೇವಸ್ಥಾನದ ವೇಳೆ
ಬೆಳಿಗ್ಗೆ 6.00 ಗಂಟೆಯಿಂದ ರಾತ್ರಿ 7.30 ರವರೆಗೆ,ಧನುರ್ಮಾಸದ ಸಂದರ್ಭದಲ್ಲಿ ಬೆಳಿಗ್ಗೆ 4.30 ರಿಂದ ರಾತ್ರಿ 8.30ರವರೆಗೆ
ಪ್ರತಿ ಮಾಹೆ ಪೂರ್ಣಿಮೆ ದಿವಸ ಬೆಳಿಗ್ಗೆ 5.00 ರಿಂದ ರಾತ್ರಿ 8.30 ರವರೆಗೆ.