ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಚತುರ್ಯುಗಮೂರ್ತಿ ರಾಮೇಶ್ವರಸ್ವಾಮಿ ಹಾಗೂ ಇತರ ದೇವಸ್ಥಾನಗಳು – ಅರಕಲಗೂಡು ತಾಲೂಕಿನ ರಾಮನಾಥಪುರ

ಕಾವೇರಿಯಲ್ಲಿ ಮೀನುಗಳ ಆಟ:
ಬನ್ನಿ ಹೋಗೋಣ ರಾಮನಾಥಪುರಕ್ಕೆ…

ಮೀನುಗಳ ಆಟ ನೋಡಲು ಎಷ್ಟು ಚೆನ್ನಾ …
ಅದರಲ್ಲೂ ಸುಮಾರು 10 ಕೆ.ಜಿ. ಗಿಂತಲೂ ದೊಡ್ಡ-ದೊಡ್ಡದಾದ, ಬಣ್ಣ-ಬಣ್ಣದ ಮೀನುಗಳನ್ನು ಅತೀ ಹತ್ತಿರದಿಂದಲೇ ನೋಡುವುದೆಂದರೆ ಒಂದು ರೀತಿಯ ಖುಷಿ ಹಾಗೂ ಅದರ ಮಜವೇ ಬೇರೆ. ಇಂತಹ ಖುಷಿಯ ಅನುಭವ ನಿಮಗೂ ಬೇಕೆ ???
ಹಾಗಾದರೆ ಒಮ್ಮೆ ನಮ್ಮ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥಪುರಕ್ಕೆ ಬನ್ನಿ … ಇಲ್ಲಿನ ಚತುರ್ಯುಗಮೂರ್ತಿ ರಾಮೇಶ್ವರಸ್ವಾಮಿ ದೇವಸ್ಥಾನದ ಪಕ್ಕವಿರುವ ಕಾವೇರಿ ನದಿಯ ಪುಷ್ಕರಣಿಯಲ್ಲಿ ಪಂಚವರ್ಣಗಳ ವೈವಿಧ್ಯಮಯ ಮತ್ಸ್ಯಗಳನ್ನು ನೋಡಲು, ಕಣ್ತುಂಬಿಕೊಳ್ಳಲು ಪ್ರತಿದಿನವೂ ಭಕ್ತಸಾಗರವೇ ಹರಿದುಬರುತ್ತದೆ. ಭಕ್ತರು, ಪ್ರವಾಸಿಗರಿಗೆ ಈ ಮೀನುಗಳ ಆಟ ಮೈ ಮನಸ್ಸನ್ನು ಪುಳಕಗೊಳಿಸುತ್ತದೆ.

ಪ್ರವಾಸಿ ತಾಣ :
ಪುರಾಣಕಾಲದ ಐತಿಹ್ಯವಿರುವ ಈ ಕ್ಷೇತ್ರ ಬಹು ಪ್ರಸಿದ್ದವಾದದು. ಇದನ್ನು ದಕ್ಷಿಣಕಾಶಿ ಎಂದೂ ಕರೆಯುತ್ತಾರೆ. ಇಲ್ಲಿ ಕಾವೇರಿ ನದಿ, ವಹ್ನಿ ಪುಷ್ಕರಣಿ, ಗಾಯತ್ರಿ ಶಿಲೆ, ಗೋಗರ್ಭ, ಕುಮಾರಧಾರಾ ತೀರ್ಥ, ಶ್ರೀ ರಾಮೇಶ್ವರ ದೇವಸ್ಠಾನ, ಶ್ರೀ ಅಗಸ್ತ್ಯೇಶ್ವರ ದೇವಸ್ಥಾನ, ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ, ಶ್ರೀ ಪಟ್ಟಾಭಿರಾಮ ದೇವಸ್ಥಾನ, ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ, ಶ್ರೀ ಲಕ್ಷ್ಮಣೇಶ್ವರ ಸೇರಿದಂತೆ ಹಲವಾರು ದೇವಸ್ಥಾನಗಳಿವೆ.

ಜಿಲ್ಲಾಕೇಂದ್ರ ಹಾಸನದಿಂದ ಸುಮಾರು 62 ಕಿ. ಮೀ ದೂರವಿರುವ ಈ ರಾಮನಾಥಪುರದಲ್ಲಿ ನಡೆಯುವ ಸುಬ್ರಹ್ಮಣ್ಯಸ್ವಾಮಿ ಜಾತ್ರೆ ಈ ಭಾಗದಲ್ಲೇ ಅತ್ಯಂತ ಪ್ರಸಿದ್ಧ ಜಾತ್ರೆ. ಇಲ್ಲಿನ ರಾಮೇಶ್ವರ ದೇವಸ್ಥಾನದ ಪಕ್ಕದಲ್ಲಿ ಹರಿಯುವ ಕಾವೇರಿ ನದಿಯಲ್ಲಿ ಭಾರೀ ಗಾತ್ರದ ಮೀನುಗಳಿವೆ. ಈ ಮೀನುಗಳನ್ನು ನೋಡಲು ಜನಸಾಗರವೇ ಹರಿದು ಬರುತ್ತದೆ.

  ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಇತಿಹಾಸ

ಶ್ರೀ ರಾಮೇಶ್ವರ ದೇವಸ್ಥಾನ :
ಈ ದೇವಸ್ಥಾನ ವಿಶ್ವವಿಖ್ಯಾತ ರಾಜಮನೆತನವಾದ ಹೊಯ್ಸಳರ ಕಾಲದಲ್ಲಿ ನಿರ್ಮಿತವಾದದ್ದು ಎಂದು ಅಲ್ಲಿನ ಶಾಸನಗಳು ಹೇಳುತ್ತವೆ. ಈ ದೇವಸ್ಥಾನದ ಒಳಗಡೆ ಹಲವಾರು ಶಿವನ ಲಿಂಗಗಳಿವೆ. ದೇವಸ್ಥಾನದ ಬಳಿ ಹರಿಯುವ ಕಾವೇರಿ ನದಿಗೆ ವಹ್ನಿಪುಷ್ಕರಣೀ ಎಂದು ಹೆಸರು. ಈ ಲೋಕದಲ್ಲಿ ವಹ್ನೀಪುಷ್ಕರಣೀ, ಅರ್ಕಪುಷ್ಕರಣೀ, ಚಂದ್ರಪುಷ್ಕರಣೀ ಎಂಬ ಮೂರು ಪುಷ್ಕರಣಿಗಳುಂಟು. ಈ ಮೂರು ಪುಷ್ಕರಣೀಗಳೂ ಕಾವೇರಿ ನದಿಯಲ್ಲೇ ಇವೆ.
ರಾಮನಾಥಪುರದಲ್ಲಿ ವಹ್ನಿ ಪುಷ್ಕರಣಿ, ಕೃಷ್ಣರಾಜನಗರದಲ್ಲಿ (ಕೆ ಆರ್ ನಗರ) ಅರ್ಕಪುಷ್ಕರಣಿ, ತಮಿಳುನಾಡಿನ ಶ್ರೀರಂಗದಲ್ಲಿ ಚಂದ್ರಪುಷ್ಕರಣಿ ಇದೆ. ರಾಮನಾಥಪುರದಲ್ಲಿ ಇರುವ ವಹ್ನಿಪುಷ್ಕರಣಿಯಲ್ಲಿ ಪಂಚವರ್ಣಗಳ ಮತ್ಸ್ಯಗಳು ಇರುವುದು ಇಲ್ಲಿನ ವಿಶೇಷವಾಗಿದೆ.

ಶ್ರೀ ಪಟ್ಟಾಭಿರಾಮಸ್ವಾಮಿ ದೇವಸ್ಥಾನ :
ಇಲ್ಲಿ ‘ಪಟ್ಟಾಭಿರಾಮ’ ಎಂಬ ನಾಮಾಂಕಿತವುಳ್ಳ ಶ್ರೀರಾಮನ ದೇವಾಲಯವು ದ್ರಾವಿಡ ಶೈಲಿಯಲ್ಲಿದೆ. ಪಟ್ಟಾಭಿಷಿಕ್ತನಾದ ಶ್ರೀರಾಮನು ತನ್ನ ತೊಡೆಯಮೇಲೆ ಸೀತಾದೇವಿಯನ್ನು ಕುಳ್ಳಿರಿಸಿಕೊಂಡಿರುವ ಅಪೂರ್ವ ಭಂಗಿ ಈ ಕ್ಷೇತ್ರದಲ್ಲಿ ಮಾತ್ರವಿದೆ. ಆದ್ದರಿಂದ ರಾಮನಾಥಪುರದ ಶ್ರೀ ಪಟ್ಟಾಭಿರಾಮನ ದೇವಾಲಯ ಬಹಳ ವೈಶಿಷ್ಟ್ಯಪೂರ್ಣವೇ ಸರಿ. ರಥೋತ್ಸವದ ಸಮಯದಲ್ಲಿ ಇಲ್ಲಿ ನಡೆಯುವ ಕಾರ್ಯಕ್ರಮಗಳು ಬಹಳ ಚೆನ್ನಾಗಿರುತ್ತವೆ. ಇಲ್ಲಿ ರಾಮಾನುಜಾಚಾರ್ಯರ ತಿರುನಕ್ಷತ್ರ ಬಹಳ ವಿಜೃಂಭಣೆಯಿಂದ ಇರುತ್ತದೆ. ಇಲ್ಲಿನ ರಾಮನವಮಿಯ ಸಂಗೀತ ಕಾರ್ಯಕ್ರಮಗಳೂ ಕೂಡ ಬಹಳ ಸೊಗಸಾಗಿರುತ್ತವೆ. ಸಾಮಾನ್ಯವಾಗಿ ಬೇಸಿಗೆ ಸಮಯದಲ್ಲಿ ನಡೆಯುವ ಶ್ರೀರಾಮನ ರಥೋತ್ಸವಕ್ಕೆ ತುಂಬಾ ಜನರು ಸೇರುತ್ತಾರೆ. ಬೇಸಿಗೆ ಸಮಯದಲ್ಲಿ ಕಾವೇರಿ ನದಿಯಲ್ಲಿ ಈಜಾಡುವುದು ಬಹಳ ಆನಂದದಾಯಕವಾಗಿರುತ್ತದೆ.

  ಆಧ್ಯಾತ್ಮಿಕ ಪರಿಹಾರಕ್ಕಾಗಿ ‘ದಶಪ್ರಣವೀ ಗಾಯತ್ರಿ ಮಂತ್ರ’

ಪ್ರಸನ್ನ ಶ್ರೀಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನ :
ಶ್ರೀ ಪ್ರಸನ್ನ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಬಹಳ ಪ್ರಸಿದ್ದಿಯನ್ನು ಹೊಂದಿದೆ. ದಕ್ಷಿಣಕನ್ನಡದ ಕುಕ್ಕೇಸುಬ್ರಹ್ಮಣ್ಯದ ಮಾದರಿಯಲ್ಲೇ ಇಲ್ಲೂ ಕೂಡ ಪೂಜಾ ವಿಧಿ-ವಿಧಾನಗಳು ನಡೆಯುತ್ತವೆ. ಅಲ್ಲಿರುವಂತೆಯೇ ಇಲ್ಲೂ ಕೂಡ ಹೊಸಳೀಗಮ್ಮನ ಗುಡಿ ಇದೆ. ಪ್ರತೀ ವರ್ಷ ಷಷ್ಟಿಯಂದು ಇಲ್ಲಿ ನಡೆಯುವ ರಥೋತ್ಸವ ಬಹಳ ಪ್ರಖ್ಯಾತಿಯನ್ನು ಹೊಂದಿದೆ. ಈ ರಥೋತ್ಸವವು ಭರ್ತಿ ಒಂದು ತಿಂಗಳ ಕಾಲ ನಡೆಯುತ್ತದೆ. ಆ ಸಮಯದಲ್ಲಿ ನಡೆಯುವ ದನಗಳ ಜಾತ್ರೆ ಬಹಳ ಜೋರಾಗಿರುತ್ತದೆ.

ದೇವರ ಮೀನು, ಹಿಡಿಯೋ ಹಾಗಿಲ್ಲ:
ಇಲ್ಲಿಯ ಮೀನುಗಳನ್ನು ದೇವರ ಮೀನು ಎನ್ನುತ್ತಾರೆ. ಈ ಮೀನುಗಳನ್ನು ಯಾರೂ ಕೂಡ ಹಿಡಿಯುವುದಿಲ್ಲ. ಈಗ ಕಾವೇರಿ ನದಿ ನೀರು ಕಡಿಮೆಯಾಗಿದೆ. ಹಾಗಾಗಿ ಮೀನುಗಳು ದಡಕ್ಕೆ ಬರುತ್ತವೆ. ಅವುಗಳನ್ನು ನಾವು ಕೈಯಿಂದ ಸ್ಪರ್ಶಿಸುವಷ್ಟು ಹತ್ತಿರ ಬರುತ್ತವೆ. ಇಲ್ಲಿ ನಾನಾ ಜಾತಿಯ ಬೃಹತ್‌ ಗಾತ್ರದ ಮೀನುಗಳಿವೆ. ಈ ಮತ್ಸ್ಯಗಳೆಲ್ಲವೂ ಶಿವನ ಸಾನ್ನಿಧ್ಯದಲ್ಲಿರುವ ದೇವತೆಗಳ ಅವತಾರವೆಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ಹಾಗಾಗಿ ಇಲ್ಲಿನ ಜನರು ಕೂಡಾ ಈ ಮೀನುಗಳನ್ನು ಬಹಳ ಭಕ್ತಿ – ಭಾವದಿಂದಲೇ ನೋಡುತ್ತಾರೆ. ಪ್ರವಾಸಿಗರು ಹಾಗೂ ಸ್ಥಳೀಯರು ಈ ಮೀನುಗಳಿಗೆ ಪುರಿ ಹಾಗೂ ಇನ್ನಿತರ ಆಹಾರ ಪದಾರ್ಥಗಳನ್ನು ಹಾಕುತ್ತಾರೆ.

ಇತಿಹಾಸ:
ಮೈಸೂರಿನ ಅಂದಿನ ಅರಸರಾದ ಮುಮ್ಮಡಿ ಕೃಷ್ಣರಾಜ ಒಡೆಯರ್‌ ರವರು ಈ ಕ್ಷೇತ್ರಕ್ಕೆ ಅಗಮಿಸಿದ್ದಾಗ ಒಂದೆರಡು ಮೀನುಗಳಿಗೆ ಮುತ್ತಿನ ಮೂಗುತಿಯನ್ನು ಅಲಂಕರಿಸಿದ್ದರು ಎನ್ನಲಾಗಿದೆ. ಹಾಗಾಗಿಯೇ ಈ ಮೀನುಗಳು ಅಂದಿನಿಂದಲೂ ಇಲ್ಲಿಯೇ ನೆಲೆನಿಂತಿವೆ ಎಂದು ಹೇಳಲಾಗುತ್ತದೆ. ಇಲ್ಲಿರುವ ಎಲ್ಲಾ ಮೀನುಗಳೂ ಸಹ ತಮ್ಮ ಮೈಮೇಲೆ ಮುತ್ತಿನ ಹರಳುಗಳನ್ನು ಹೊಂದಿರುವಂತೆ ಫಳಫಳ ಹೊಳೆಯುತ್ತಿರುತ್ತವೆ. ಯಾವುದೇ ಕಾಲದಲ್ಲೂ ಎಂತಹ ಪ್ರವಾಹ ಬಂದರೂ ಇಲ್ಲಿರುವ ಮತ್ಸ್ಯಗಳು ಮಾತ್ರ ಈ ಜಾಗದಿಂದ ಕದಲಲಾರವು. ಇದು ಇಲ್ಲಿನ ಜನರ ನಂಬಿಕೆಗೆ ಬಲವಾದ ಬೇರಿನಂತಿದೆ.

Leave a Reply

Your email address will not be published. Required fields are marked *

Translate »