ಹಿಂದೂ ಧರ್ಮ – ಐದು ಮರ ಗಿಡ – ರಕ್ಷಾ ಸೂತ್ರ
ಹಿಂದೂ ಧರ್ಮದಲ್ಲಿ ಮರಗಿಡಗಳನ್ನು ಅತ್ಯಂತ ಪವಿತ್ರ ಭಾವದಿಂದ ನೋಡಲಾಗುತ್ತದೆ. ಕೆಲವು ಮರ ಗಿಡಗಳಲ್ಲಿ ದೇವರ ಸಾನಿಧ್ಯವಿದೆ ಎಂಬುದು ಸನಾತನ ಧರ್ಮದ ನಂಬಿಕೆ. ಹೀಗಾಗಿ, ಬಹಳ ಶ್ರದ್ಧೆ ಮತ್ತು ಭಕ್ತಿಯಿಂದಲೇ ಭಕ್ತರು ಮರಗಿಡಗಳ ಪೂಜೆಯನ್ನು ಮಾಡುತ್ತಾರೆ.
ಈ ಐದು ಮರ ಗಿಡಗಳಿಗೆ ಈ ರಕ್ಷಾ ಸೂತ್ರವನ್ನು ಕಟ್ಟಿದರೆ ವಿಷ್ಣು ಮತ್ತು ದೇವಿ ಲಕ್ಷ್ಮಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ, ರಾಹು ಶನಿಯ ದೋಷದಿಂದಲೂ ಪರಿಹಾರ ಸಿಗುತ್ತದೆ ಎಂಬುದು ನಂಬಿಕೆ.
ತುಳಸಿ ಗಿಡ :
ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಅತ್ಯಂತ ಪವಿತ್ರ ಸ್ಥಾನ. ಪ್ರತಿಯೊಂದು ಹಿಂದೂ ಧರ್ಮೀಯರ ಮನೆಯಲ್ಲಿ ನೀವು ತುಳಸಿ ಗಿಡವನ್ನು ನೋಡಬಹುದು. ತುಳಸಿಯ ಪೂಜೆಯಿಂದ ಸಾಕಷ್ಟು ಮಂದಿ ನೆಮ್ಮದಿ ಕಾಣುತ್ತಾರೆ. ಪವಿತ್ರ ತುಳಸಿ ದೇವಿ ಲಕ್ಷ್ಮಿಯ ನೆಲೆ ಎಂಬ ನಂಬಿಕೆ ಹಿಂದೂ ಧರ್ಮದ್ದು. ಹೀಗಾಗಿ, ತುಳಸಿಯ ಆರಾಧನೆಯನ್ನು ಅತ್ಯಂತ ಶ್ರದ್ಧೆಯಿಂದ ಮಾಡಲಾಗುತ್ತದೆ. ಇದರ ಜತೆಗೆ ತುಳಸಿ ಗಿಡಕ್ಕೆ ಸಣ್ಣದಾದ ರಕ್ಷಾ ಸೂತ್ರ ಅಥವಾ ಕೆಂಬಣ್ಣದ ದಾರವನ್ನು ಕಟ್ಟಿದರೆ ಉತ್ತಮ ಎಂಬ ನಂಬಿಕೆ ಕೂಡಾ ನಮ್ಮಲ್ಲಿದೆ. ಇದರಿಂದ ದೇವಿ ಲಕ್ಷ್ಮೀ ಪ್ರಸನ್ನರಾಗುತ್ತಾರೆ ಮತ್ತು ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾರೆ ಎಂದು ನಂಬಲಾಗಿದೆ.
ಬಾಳೆ ಗಿಡ :
ಬಾಳೆ ಹಣ್ಣು, ಬಾಳೆ ಗಿಡಕ್ಕೂ ಸನಾತನ ಧರ್ಮದಲ್ಲಿ ಮಹತ್ವದ ಸ್ಥಾನವಿದೆ. ದೇವರ ಪೂಜೆಯ ಸಂದರ್ಭದಲ್ಲಿ ಬಾಳೆಹಣ್ಣು ಬೇಕೇಬೇಕು. ಇನ್ನು ಬಾಳೆ ಗಿಡಕ್ಕೂ ಭಕ್ತಿಯಿಂದ ಪೂಜೆ ಸಲ್ಲಿಸಲಾಗುತ್ತದೆ. ಸತ್ಯನಾರಾಯಣ ದೇವರ ಪೂಜೆಯ ಸಂದರ್ಭದಲ್ಲಿ ಅಲಂಕಾರಕ್ಕೆ ಬಾಳೆ ದಿಂಡನ್ನು ಬಳಸಲಾಗುತ್ತದೆ. ಇದರೊಂದಿಗೆ ಗುರುವಾರ ಬಾಳೆ ಗಿಡವನ್ನು ಪೂಜಿಸುವುದರಿಂದ ವಿಷ್ಣು ಮತ್ತು ದೇವಿ ಲಕ್ಷ್ಮಿಯ ಕೃಪೆಗೆ ಪಾತ್ರರಾಗಬಹುದು ಎಂಬ ನಂಬಿಕೆ ಕೂಡಾ ಇದೆ. ಅಲ್ಲದೆ, ಬಾಳೆ ಗಿಡಕ್ಕೆ ರಕ್ಷಾ ಸೂತ್ರವನ್ನು ಕಟ್ಟುವುದು ಕೂಡಾ ಉತ್ತಮ ಎಂಬ ನಂಬಿಕೆ ಇದೆ. ಗುರುವಾರ ಬಾಳೆ ಗಿಡಕ್ಕೆ ಹಳದಿ ಬಣ್ಣದ ರಕ್ಷಾ ಸೂತ್ರ ಕಟ್ಟಿದರೆ ಗುರು ಬೃಹಸ್ಪತಿಯ ಆಶೀರ್ವಾದ ಕೂಡಾ ಸಿಗುತ್ತದೆ ಎಂದು ನಂಬಲಾಗಿದೆ.
ಶಮಿ ವೃಕ್ಷ :
ಶಮಿ ಅಥವಾ ಬನ್ನಿ ಮರ. ಇದು ಕೂಡಾ ಅತ್ಯಂತ ಪವಿತ್ರ ಗಿಡಗಳಲ್ಲಿ ಒಂದು. ಮಹಾದೇವನಿಗೆ ಬಹಳ ನೆಚ್ಚಿನ ಮರವಿದು. ಹೀಗಾಗಿ, ಪರಮೇಶ್ವರನ ಕೃಪಾದೃಷ್ಟಿಗೆ ಪಾತ್ರರಾಗಲು ಮತ್ತು ಶನಿ ದೋಷದಿಂದ ಮುಕ್ತಿ ಹೊಂದಲು ಸಾಕಷ್ಟು ಮಂದಿ ಮನೆಯಲ್ಲಿ ಶಮಿ ವೃಕ್ಷವನ್ನು ನೆಡುತ್ತಾರೆ. ಅಂತೆಯೇ, ಈ ಶಮಿ ವೃಕ್ಷಕ್ಕೆ ಮಿಶ್ರ ರಕ್ಷಾ ಸೂತ್ರವನ್ನು ಕಟ್ಟಿದರೆ ಶನಿ ದೇವರು ಪ್ರಸನ್ನರಾಗುತ್ತಾರೆ. ಇದರಿಂದ ರಾಹುವಿನ ದೋಷವೂ ಕಡಿಮೆಯಾಗುತ್ತದೆ ಎಂಬ ನಂಬಿಕೆ ಕೂಡಾ ನಮ್ಮಲ್ಲಿದೆ.
ಅರಳಿ ಮರ :
ಅಶ್ವತ್ಥ ಅಥವಾ ಅರಳಿ ಮರಕ್ಕೆ ನಮ್ಮಲ್ಲಿ ಎಷ್ಟು ಪ್ರಾಮುಖ್ಯತೆ ಇದೆ ಎಂಬುದು ಎಲ್ಲರಿಗೂ ಗೊತ್ತಿದೆ. ಬಹುತೇಕ ದೇವಸ್ಥಾನಗಳಲ್ಲಿ ನಾವು ಈ ಮರವನ್ನು ನೋಡಬಹುದು. ಜತೆಗೆ, ಸಾಕಷ್ಟು ಅರಳಿ ಕಟ್ಟೆಗಳೂ ಊರಿನಲ್ಲಿ ಇವೆ. ಈ ಅರಳಿ ಕಟ್ಟೆಯನ್ನು ಅತ್ಯಂತ ಭಕ್ತಿ ಭಾವದಿಂದಲೇ ನೋಡಲಾಗುತ್ತದೆ. ಅರಳಿ ಮರಕ್ಕೆ ನೀರೆರೆಯುವುದು, ಪೂಜೆ ಮಾಡುವುದು, ದೀಪ ಹಚ್ಚುವುದು, ಭಕ್ತಿಯಿಂದ ನಮಿಸಿ ಪ್ರದಕ್ಷಿಣೆ ಬರುವುದು ಬಹಳ ಮಂಗಳಕರ ಎಂಬುದು ನಮ್ಮ ನಂಬಿಕೆ. ಹಿಂದೂ ಧರ್ಮದಲ್ಲಿ ಬಹಳ ಪವಿತ್ರ ಮರಗಳ ಸಾಲಿನಲ್ಲಿ ಅರಳಿ ಮರ ಕೂಡಾ ಸೇರುತ್ತದೆ. ಈ ಮರದಲ್ಲಿ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಸಾನಿಧ್ಯವಿದೆ, ಈ ಮರದ ಎಲೆಯಲ್ಲಿ ದೇವಾನುದೇವತೆಗಳು ನೆಲೆಯಾಗಿದ್ದಾರೆ ಎಂಬುದು ನಂಬಿಕೆ. ಅಂತೆಯೇ, ಮಂಗಳವಾರ ಮತ್ತು ಶುಕ್ರವಾರ ಅಶ್ವತ್ಥದ ಮರವನ್ನು ಪೂಜಿಸಿದ ಬಳಿಕ ಅದಕ್ಕೆ ಹಳದಿ ಬಣ್ಣದ ರಕ್ಷಾ ಸೂತ್ರವನ್ನು ಕಟ್ಟಿದರೆ ಮನೆಯಲ್ಲಿ ಸಕಾರಾತ್ಮಕತೆ ನೆಲೆಯಾಗುತ್ತದೆ ಎಂದು ನಂಬಲಾಗಿದೆ.
ಆಲದ ಮರ :
ಅರಳಿ ಮರದಷ್ಟೇ ಪವಿತ್ರ ಭಾವದಿಂದ ಆಲದ ಮರವನ್ನೂ ನೋಡಲಾಗುತ್ತದೆ. ವಟ ಸಾವಿತ್ರಿ ವ್ರತದಂದು ಉಪವಾಸ ಮಾಡಿ ವಿವಾಹಿತೆಯರು ಆಲದ ಮರಕ್ಕೆ ಪೂಜೆ ಸಲ್ಲಿಸುತ್ತಾರೆ. ಈ ದಿನ ಆಲದ ಮರವನ್ನು ವಿಧಿ – ವಿಧಾನಗಳಂತೆ ಪೂಜಿಸಲಾಗುತ್ತದೆ ಮತ್ತು ಆಲದ ಮರಕ್ಕೆ ಪ್ರದಕ್ಷಿಣೆಯನ್ನು ಬರಲಾಗುತ್ತದೆ. ಅಂತೆಯೇ, ವಿವಾಹಿತೆಯರು ಆಲದ ಮರವನ್ನು ಪೂಜಿಸಿದ ನಂತರ ಅದರಕ್ಕೆ ಮಿಶ್ರ ರಕ್ಷಾ ಸೂತ್ರವನ್ನು ಕಟ್ಟಿದರೆ ಇವರ ಸಾಂಸಾರಿಕ ಜೀವನ ಸುಖಮಯವಾಗಿರುತ್ತದೆ ಎಂಬುದು ನಂಬಿಕೆ. ಜೊತೆಗೆ, ಆಲದ ಮರದಲ್ಲೂ ತ್ರಿಮೂರ್ತಿಗಳು ನೆಲೆಯಾಗಿದ್ದಾರೆ ಎಂಬ ನಂಬಿಕೆ ಇದೆ. ಈ ಮರದ ತೊಗಟೆಯನ್ನು ವಿಷ್ಣುವೆಂದು, ಬೇರುಗಳನ್ನು ಬ್ರಹ್ಮನೆಂದು ಮತ್ತು ರೆಂಬೆ-ಕೊಂಬೆಗಳನ್ನು ಶಿವನೆಂದು ಪರಿಗಣಿಸಲಾಗುತ್ತದೆ.
“ಓಂ ಶ್ರೀ ವೃಕ್ಷ ರಾಜಾಯ ನಮಃ”