ಸನಾತನ ಧರ್ಮದಲ್ಲಿ ಹೊಸ್ತಿಲು ಪೂಜೆಗೆ ಅತ್ಯಂತ ಮಹತ್ವವೇಕೆ ?
ಹಿಂದೂ ಸಂಪ್ರದಾಯದ ಪ್ರಕಾರ ಹೊಸ್ತಿಲನ್ನು ದೇವರೆಂದು ಪೂಜಿಸುತ್ತೇವೆ. ಇದರಲ್ಲಿ ದೇವಿ ಶ್ರೀಮಹಾಲಕ್ಷ್ಮಿ ನೆಲೆಸಿರುತ್ತಾಳೆ ಎನ್ನುವ ಪ್ರತೀತಿ ಇದೆ . ಹಾಗಾಗಿ ಹೊಸ್ತಿಲು ಪೂಜೆಯ ಸಂಪ್ರದಾಯ ಬಂದಿದೆ. ಹೊಸ್ತಿಲ ಪೂಜೆಯನ್ನು ಮುತ್ತೈದೆ ಸ್ತ್ರೀಯರು ಮಾಡಿದರೆ ಸಕಲ ಸೌಭಾಗ್ಯ, ನೆಮ್ಮದಿ ಸಿಗುತ್ತದೆ ಎಂದು ಹೇಳುತ್ತಾರೆ. ಇದನ್ನು ಹೇಗೆ ಮಾಡುವುದು ? ಯಾವ ಹೊತ್ತಿನಲ್ಲಿ ಮಾಡುವುದು ? ಎಂಬ ವಿಷಯವನ್ನು ಶಾಸ್ತ್ರಗಳಲ್ಲಿ ತಿಳಿಸಿದ್ದಾರೆ.
ಹೊಸ್ತಿಲ ಪೂಜೆಯನ್ನು ಕೇವಲ ಹಬ್ಬ ಹರಿದಿನಗಳಲ್ಲಿ ಮಾತ್ರ ಮಾಡದೇ ದಿನನಿತ್ಯ ಮಾಡಬೇಕು. ಮುತ್ತೈದೆಯರು ಬೆಳಗ್ಗಿನ ಜಾವ ಸೂರ್ಯೋದಯಕ್ಕೆ ಮೊದಲು ಎದ್ದು ನಿತ್ಯ ಕರ್ಮ ಸ್ನಾನಾದಿ ಗಳನ್ನು ಮುಗಿಸಿ ದೇವರಿಗೆ ದೀಪ ವಿಟ್ಟು , ದೇವರಕೋಣೆಯ ಹೊಸ್ತಿಲು ಮತ್ತು ಮುಖ್ಯ ದ್ವಾರದ ಹೊಸ್ತಿಲನ್ನು ಚೆನ್ನಾಗಿ ತೊಳೆಯಬೇಕು.
ನಂತರ ರಂಗೋಲಿಯಲ್ಲಿ ಗೆರೆಗಳನ್ನು ಎಳೆದು ಅದಕ್ಕೆ ಅರಶಿನ , ಕುಂಕುಮ ಮತ್ತು ಹೂವನ್ನು ಹೊಸ್ತಿಲಲ್ಲಿ ಇಡಬೇಕು. ನೀರಿನ ತಂಬಿಗೆ ಇಟ್ಟು ನಮಸ್ಕರಿಸಬೇಕು. ಹೊಸ್ತಿಲು ಬರೆಯುವಾಗ ಇಪ್ಪತ್ತನಾಲ್ಕು ಗೆರೆಗಳಿರಬೇಕು.
“ಹೊಸ್ತಿಲನ್ನು ಬರೆಯುವಾಗ ಹೇಳುವ ಮಂತ್ರ ;”
ಹ್ರೀಂಕಾರ ರೂಪಿಣೀ ದೇವಿ ವೀಣಾ ಪುಸ್ತಕ ಧಾರಿಣೀ | ಸೌಭಾಗ್ಯಮ್ ದೇಹಿಮೇ ನಿತ್ಯಂ ದಾರಿದ್ರ್ಯನ ಪ್ರಯಚ್ಛಮೇ||
ಕಾತ್ಯಾಯನೀ ಮಹಾಮಾಯೇ ಮಹಾಯೋಗಿನ್ಯಾಧೀಶ್ವರಿ| ನಂದಗೋಪ ಸುತಂ ದೇವಿ ಪತಿಂ ಮೇ ಕುರುತೇ ನಮಃ ||
ದುರ್ಗೇತಿ ಭದ್ರಕಾಳೀತಿ ವಿಜಯಾ ವೈಷ್ಣವೀ ತಥಾ| ಕುಮುದಾ ಚಂಡಿಕಾ ಕೃಷ್ಣಾ ಮಾಧವೀ ಕನ್ಯಕೇತಿಚ | ಮಾಯಾ ನಾರಾಯಣೀಶೌನಾ ಶಾರದೇತ್ಯಂಬಿಕೇತಿ ಚ ||
“ಸಂಜೆಯ ಹೊತ್ತಿನಲ್ಲಿ ಹೊಸ್ತಿಲು ಬರೆಯುವ ವಿಧಾನ” ಸಂಜೆಯ ಹೊತ್ತಿನ ಪೂಜೆಯ ಆರತಿಯನ್ನು ದೇವರಿಗೆ ಸಮರ್ಪಿಸಿದ ಹಾಲಿನ ತಟ್ಟೆಯ ಜೊತೆ ಹೊಸ್ತಿಲಿನಲ್ಲಿ ಇಟ್ಟು ಸ್ವಲ್ಪ ಹಾಲನ್ನು ಹೊಸ್ತಿಲಿಗೆ ಹಾಕಿ ನಮಸ್ಕರಿಸಿ, ನಂತರ ತುಳಸಿಗೆ ದೀಪವಿಡುವುದು ವಾಡಿಕೆ.
ಈ ಮಂತ್ರವನ್ನು ಕೂಡ ಹೇಳಬಹುದು : ದ್ವಾರಾದೇವಿ ನಮಸ್ತುಭ್ಯಮ್ ದ್ವಾರಕೇಶ್ವರ ಭಾಮಿನಿ | ಪತಿ ದ್ವಾರ ಹರಿ ಗುರು ಭಕ್ತಿಮ್ ಪುತ್ರಸ್ತ ದೇಹಿಮೇ
ಹೀಗೆ ಹೊಸ್ತಿಲು ಬರೆಯುವ ವಿಧಾನಗಳಲ್ಲಿ ಇದು ಒಂದು. ಇನ್ನೂ ಕೆಲವು ವಿಧಾನಗಳಿವೆ ಅವು ದೇಶ, ಕಾಲ ಪರಿಸ್ಥಿತಿಗಳಿಗೆ ಅನುಗುಣವಾಗಿ ಹೊಸ್ತಿಲು ಪೂಜೆ ಮಾಡುತ್ತಾರೆ.
ಏನೇ ಇರಲಿ ಹೇಗೆ ಇರಲಿ ಮುಖ್ಯವಾಗಿ ಹೊಸ್ತಿಲು ಪೂಜೆ ಮಾಡವುದು ಎಂದರೆ ಲಕ್ಷ್ಮೀ ದೇವಿಯನ್ನು ಪೂಜಿಸುವುದು, ಪ್ರಾರ್ಥಿಸುವುದು. ಇಲ್ಲಿನ ಮುಖ್ಯ ಉದ್ದೇಶ ಹೊಸ್ತಿಲು ಪೂಜೆ ಮಾಡುವುದರಿಂದ ಯಮ ಅಥವಾ ಮೃತ್ಯು ಹೊಸ್ತಿಲು ದಾಟಿ ಒಳಪ್ರವೇಶಿಸುವುದಿಲ್ಲವೆಂದು ಶಾಸ್ತ್ರದಲ್ಲಿ ತಿಳಿಸಿದೆ.
ಸ್ತ್ರೀಯರಿಗೆ ಲಕ್ಷ್ಮೀ ದೇವಿಯ ಆರಾಧನೆಗೆ ಹಲವು ಪ್ರತೀಕಗಳಿವೆ. ಅವುಗಳಲ್ಲಿ, ಹೊಸ್ತಿಲು ಮತ್ತು ತುಳಸೀ ವೃಂದಾವನ ಪೂಜೆ ಪ್ರಮುಖವಾದವು. ಮನೆಯ ಮುತ್ತೈದೆಯರೆಲ್ಲರೂ ಹೊಸ್ತಿಲಿನಲ್ಲಿ ಲಕ್ಷ್ಮೀ ಭಾರತಿ ಯರನ್ನು ಪೂಜಿಸಬೇಕು. ಹೊಸ್ತಿಲು ಮತ್ತು ತುಳಸೀ ವೃಂದಾವನ ಪೂಜೆಯನ್ನು ಕನ್ಯೆಯರೂ ಕಡ್ಡಾಯವಾಗಿ ಮಾಡತಕ್ಕದ್ದು. ಸ್ನಾನಕ್ಕೆ ಮೊದಲೇ ಹೊಸ್ತಿಲು ಬಳಿದು, ಸ್ವಸ್ತಿಕೆ ಬರೆದು, ಅಲಂಕರಿಸಿ ಸ್ನಾನಾನಂತರ ಪೂಜಿಸಬಹುದು. ಕೆಲವೆಡೆ ಸ್ನಾನಾನಂತರ ಹೊಸ್ತಿಲು ಬರೆಯುವ ಸಂಪ್ರದಾಯವಿದೆ. ಶಾಸ್ತ್ರರೀತ್ಯಾ ಸ್ನಾನಾನಂತರದ ಹೊಸ್ತಿಲಪೂಜೆ ಉತ್ತಮ.
ಶುದ್ಧಜಲಪೂರ್ಣವಾದ ತಂಬಿಗೆಯನ್ನು ಹೊಸ್ತಿಲ ಮಧ್ಯದಲ್ಲಿಟ್ಟು ಮಂಗಳದ್ರವ್ಯಗಳಿಂದ ಪೂಜಿಸಿ, “ಹ್ರೀಂಕಾರರೂಪಿಣೀ…” ಎಂಬ ಶ್ಲೋಕಗಳಿಂದ ನಮಸ್ಕರಿಸಿ, ಹೊಸ್ತಿಲಿಗೆ ಅರ್ಪಿಸಿದ್ದ ಒಂದು ಹೂವನ್ನು ಮುಡಿದುಕೊಂಡು, ಕೈತೊಳೆದು, ತಂಬಿಗೆಯನ್ನು ಕೆಳಗಿಳಿಸಬೇಕು (ಹೊಸ್ತಿಲುಪೂಜೆ ಮುಗಿಯುವ ತನಕ ಯಾರೂ ಹೊಸ್ತಿಲು ದಾಟಬಾರದು….. ಬ್ರಾಮ್ಹೀ ಮುಹೂರ್ತದಲ್ಲಿ ಉತ್ತಮ)
ಗೃಹದ ಪ್ರಧಾನ ದ್ವಾರವನ್ನು ಹೊಸ್ತಿಲು ಪೂಜೆಗಾಗಿ ಆರಿಸಿಕೊಳ್ಳಬೇಕು. ಅನುಕೂಲತೆ ಹಾಗೂ ಶುದ್ಧಿಯ ಕಾರಣಗಳಿಂದ ದೇವರ ಕೋಣೆಯ ದ್ವಾರವನ್ನು ಪೂಜಿಸಿದರೂ, ಪ್ರಧಾನ ದ್ವಾರದಲ್ಲೂ ರಂಗೊಲಿ ಇರಲೇಬೇಕು. ”ಅಶೂನ್ಯಾ ದೇಹಲೀ ಕಾರ್ಯಾ…” ಎಂಬಂತೆ ಹೊಸ್ತಿಲು ಬೋಳಾಗಿರಕೂಡದು. ಕಸಕಡ್ಡಿಗಳಿಂದ ತುಂಬಿರಕೂಡದು. ಗೃಹವಸ್ತುಗಳನ್ನು ಹೊಸ್ತಿಲಲ್ಲಿಡಕೂಡದು. ಮನೆಯೊಳಗಿದ್ದೇ ಹೊಸ್ತಿಲ ಪೂಜೆಯನ್ನು ಮಾಡಬೇಕು. ಹೊರಗಿನಿಂದ ಒಳಮುಖವಾಗಿ ಮಾಡಬಾರದು. ಆದರೂ ಲಕ್ಶ್ಮೀದೇವಿಯನ್ನು ಬರಮಾಡಿಕೊಳ್ಳುವಾಗ, ಹೊಸ್ತಿಲ ಹೊರಗೆ ನಿಂತು ಆಕೆಯನ್ನು ಆಹ್ವಾನಿಸುವ ಮತ್ತು ಆವಾಹಿಸುವ ಸಂಪ್ರದಾಯವು ಕೆಲವೆಡೆ ಪ್ರಚಲಿತವಾಗಿರುತ್ತದೆ. ಯಾವುದೇ ಪೂಜೆಯಲ್ಲೂ ಶ್ರದ್ಧೆ, ಭಕ್ತಿ ಮತ್ತು ಅನುಸಂಧಾನಗಳು ಪ್ರಮುಖವಾಗುತ್ತವೆ. ಕ್ರಮಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಯಗಳಿದ್ದರೂ ಯಾವುದೇ ಲೋಪವಿರುವುದಿಲ್ಲ.
ದೇವರ ಕೋಣೆಯ ಹೊಸ್ತಿಲಿಗೆ ಮಾತ್ರ ಹೊರಗಿನಿಂದ ಪೂಜಿಸಬೇಕು. ಮನೆಯ ಮುಖ್ಯ ದ್ವಾರದ ಪೂಜೆ ಮನೆಯ ಒಳಗಿನಿಂದ ಮಾಡಬೇಕು.