ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಆಂಜನೇಯ ಸ್ತುತಿ.

ಆಂಜನೇಯ ಸ್ತುತಿ.

ಗೋಷ್ಪದೀಕೃತ ವಾರಾಶಿಂ,
ಮಶಕೀಕೃತ ರಾಕ್ಷಸಂ ರಾಮಾಯಣಮಹಾಮಾಲಾ ರತ್ನಂ
ವಂದೇ ಅನಿಲಾತ್ಮಜಂ

ವಿಶಾಲವಾದ ಸಾಗರವನ್ನು ಒಂದು ಹಸುವಿನ ಗೊರಸಿನಷ್ಟೇ ಚಿಕ್ಕದಾದ ನೀರಿನ ಹಳ್ಳವನ್ನು ದಾಟುವಂತೆ ದಾಟಿಬಿಟ್ಟ ಹನುಮಂತ. ಸೊಳ್ಳೆಯನ್ನು ಹೊಸಕಿ ಹಾಕುವಂತೆ ರಾಕ್ಷಸಸೇನೆಯನ್ನು ನಾಶಪಡಿಸಿದ. ಅಂಥಾ ಪರಾಕ್ರಮಿಯಾದ ಹನುಮಂತ ರಾಮಾಯಣವೆಂಬ ದೊಡ್ಡ ಮಾಲೆಗೆ ರತ್ನಪದಕದಂತಿರುವವನು. ವಾಯುವಿನ ಮಗನಾದ ಅವನನ್ನು ನಾನು ವಂದಿಸುತ್ತೇನೆ.

ಅಂಜನಾ ನಂದನಂ ವೀರಂ,
ಜಾನಕೀ ಶೋಕನಾಶನಂ,
ಕಪೀಶಂ, ಅಕ್ಷ ಹಂತಾರಂ,
ವಂದೇ ಲಂಕಾ ಭಯಂಕರಂ.

ಹನುಮಂತ ಅಂಜನಾದೇವಿಯ ಮಗ. ಅವನು ಸೀತಾದೇವಿಯ ದುಃಖವನ್ನು ಕೊನೆಗೊಳಿಸಿದವ.
ಕಪಿಗಳಿಗೆ ಅವನು ಒಡೆಯ.
ರಾವಣನ ಮುದ್ದಿನ ಮಗನೂ, ಪರಾಕ್ರಮಿಯೂ ಆದ ಅಕ್ಷಕುಮಾರನನ್ನು ಹನುಮಂತನೇ ಕೊಂದ.
ಲಂಕೆಯಂಥಾ ವೈಭವೋಪೇತ ಊರನ್ನು ಸುಟ್ಟ ಹನುಮಂತ ಆ ಊರಿನ ಜನರಿಗೆ ಭಯಂಕರನಾದ. ಲಂಕಾವಾಸಿಗಳಿಗೆ, ಕುಳಿತರೂ, ನಿಂತರೂ, ಮಲಗಿದರೂ ಕೆಂಪು ಮುಖದ ವಾನರನೇ ಎತ್ತೆತ್ತಲೂ ಕಂಡು ಭಯಪಡುತ್ತಿದ್ದರಂತೆ. ಇಂಥಾ ಆಂಜನೇಯನಿಗೆ ನಾನು ನಮಸ್ಕರಿಸುತ್ತೇನೆ.

ಮನೋಜವಂ ಮಾರುತತುಲ್ಯ ವೇಗಂ,
ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ,
ವಾತಾತ್ಮಜಂ ವಾನರ ಯೂಥಮುಖ್ಯಂ,
ಶ್ರೀ ರಾಮದೂತಂ ಶಿರಸಾ ನಮಾಮಿ.

ಮನಸ್ಸಿನಷ್ಟೇ ವೇಗದಿಂದ ಹಾರಬಲ್ಲವನು ಹನುಮಂತ. ಆದ್ದರಿಂದಲೇ ಒಂದೇ ಏಟಿಗೆ ಸಮುದ್ರವನ್ನು ಹಾರಿದ.
ಅವನು ಜಿತೇಂದ್ರಿಯ. ಆದ್ದರಿಂದಲೇ, ರಾವಣನ ಅಂತಃಪುರದ ಸ್ತ್ರೀಯರ ಮಧ್ಯೆ ಸೀತಾದೇವಿಯನ್ನು ಹುಡುಕುವಾಗ, ಸುಂದರವಾದ ಆ ಸ್ತ್ರೀಯರು ಅಸ್ತವ್ಯಸ್ತವಾದ ಭಂಗಿಗಳಲ್ಲಿ ಅರೆಬರೆ ವಸ್ತ್ರಗಳಲ್ಲಿ ಮಲಗಿದ್ದನ್ನು ನೋಡಿದರೂ ಅವನ ಚಿತ್ತ ಕೆಡಲಿಲ್ಲ. ಅವನಿಗೆ ಅಷ್ಟು ಇಂದ್ರಿಯ ನಿಗ್ರಹ.

ಅವನು ಬುದ್ಧಿವಂತನೂ ಹೌದು. ಸೀತೆಯನ್ನು ಹುಡುಕಬೇಕೆಂದಷ್ಟೇ ಅವನಿಗೆ ಅಪ್ಪಣೆಯಾಗಿತ್ತು. ಆದರೆ, ಅವನು ತನ್ನ ಬುದ್ಧಿಯನ್ನುಪಯೋಗಿಸಿ, ಅಶೋಕ ವನವನ್ನು ಹಾಳುಮಾಡಿದ. ರಾವಣನನ್ನು ಭೇಟಿ ಮಾಡಿದ. ಲಂಕೆಯನ್ನೂ ಸುಟ್ಟ. ಇಡೀ ವಾನರ ಸೇನೆಯಲ್ಲೇ ಅವನು ಅತ್ಯಂತ ಬುದ್ಧಿವಂತ. ಆದ್ದರಿಂದಲೇ ಅವನು ಅವರ ನಾಯಕ. ಅವನ ಬುದ್ಧಿಮತ್ತೆಯನ್ನು ಗಮನಿಸಿಯೇ ರಾಮಚಂದ್ರಸ್ವಾಮಿ, “ಇವನು ಖಂಡಿತ ಸೀತೆಯನ್ನು ಹುಡುಕಿ ಮಾತಾಡಿಸಿಕೊಂಡು ಬಂದೇ ಬರುತ್ತಾನೆ.” ಎಂದು ಅವನಲ್ಲಿ ವಿಶ್ವಾಸವಿಟ್ಟು ತನ್ನ ಅಂಗುಳೀಯಕ ಅಂದರೆ ಕೈಬೆರಳಲ್ಲಿದ್ದ ಉಂಗುರವನ್ನು ಅವನ ಕೈಗಿತ್ತ. ಹೀಗೆ ರಾಮನಿಗೆ ಪ್ರಿಯನಾಗಿ,
ರಾಮದೂತನೂ ಆದ ವಾಯುಪುತ್ರನನ್ನು ನಾನು ವಂದಿಸುತ್ತೇನೆ.

  ಶ್ರೀವಿಷ್ಣು ಸಹಸ್ರನಾಮದ ಮಹತ್ವ

ಉಲ್ಲಂಘ್ಯ ಸಿಂಧೋಃ ಸಲಿಲಂ ಸಲೀಲಂ,
ಯಃ ಶೋಕವಹ್ನಿಂ ಜನಕಾತ್ಮಜಾಯಾಃ,
ಆದಾಯ ತೇನೈವ ದದಾಹ ಲಂಕಾಂ,
ನಮಾಮಿ ತಂ ಪ್ರಾಂಜಲಿರಾಂಜನೇಯಂ.

ವಿಸ್ತಾರವಾದ ಸಾಗರವನ್ನು ಆಟವಾಡುವಾಗ ಒಂದು ಕಡೆಯಿಂದ ಸ್ವಲ್ಪವೇ ದೂರದ ಇನ್ನೊಂದು ಕಡೆಗೆ ಜಿಗಿಯುವಷ್ಟು ಸುಲಭವಾಗಿ, ಸಲೀಸಾಗಿ ದಾಟಿಬಿಟ್ಟ ಹನುಮಂತ. ಸಾಮಾನ್ಯ ಕೆಲಸವೇ ಅದು?

ರಾವಣ ಅಗ್ನಿ ಮುಂತಾದ ದೇವತೆಗಳನ್ನೂ ಸೆರೆಯಲ್ಲಿಟ್ಟಿದ್ದನಲ್ಲವೇ? ಮತ್ತೆ ಹನುಮನ ಬಾಲ ಸುಟ್ಟಿದ್ದು ಹೇಗೆ?

ಬಾಲ ಸುಡುವಂತೆ ಹೇಳಿದ್ದು ರಾವಣ. ಅಷ್ಟರ ಮಟ್ಟಿಗೆ ಮಾತ್ರ ಅಂದರೆ ಕೇವಲ ಸ್ವಲ್ಪ ಕಾಲದವರೆಗೆ ಅಗ್ನಿಯನ್ನು ಬಿಡುಗಡೆ ಮಾಡಿದ್ದನೇನೋ. ಆದರೆ ಆ ಅಗ್ನಿಯೂ ಹನುಮಂತನ ತಂದೆ ವಾಯುವಿನ ಮಿತ್ರನಾದ್ದರಿಂದ ಅವನ ಬಾಲವನ್ನು ಸುಡಲಿಲ್ಲ. ಆದರೆ ಇಡೀ ಲಂಕೆಯನ್ನು ಹನುಮಂತ ಸುಡುವಾಗ ರಾವಣ ಅಗ್ನಿಯನ್ನು ನಿಗ್ರಹಿಸಲಿಲ್ಲವೇ? ಹೇಗೂ ಅವನ ಅಧೀನದಲ್ಲಿಯೇ ಇದ್ದನಲ್ಲ? ಎಂಬುದು ಒಂದು ಪ್ರಶ್ನೆ.

ಹನುಮಂತ ಸೀತೆಯನ್ನು ನೋಡಿದ ಕ್ಷಣದಲ್ಲೇ ಅವಳ ದುಃಖವೆಂಬ ಅಗ್ನಿಯನ್ನು ತಾನೂ ಅನುಭವಿಸಿ ಬೆಂದು ಹೋದ. ಅವಳಿಗೆ ಸಾಂತ್ವನ ಹೇಳಿ, ದುಃಖವನ್ನು ಸ್ವಲ್ಪ ಮಟ್ಟಿಗೆ ಪರಿಹಾರ ಮಾಡಿ, ಸೀತಾಶೋಕವೆಂಬ ಅದೇ ಅಗ್ನಿಯನ್ನು ತೆಗೆದುಕೊಂಡು ಅದರಿಂದಲೇ ಲಂಕೆಯನ್ನು ಸುಟ್ಟನಂತೆ. ಇದೊಂದು ಚಮತ್ಕಾರದ ಶ್ಲೋಕ.

ಇನ್ನೊಬ್ಬ ವ್ಯಾಖ್ಯಾನಕಾರರ ಪ್ರಕಾರ, ಹನುಮಂತ ತನ್ನ ತಂದೆ ವಾಯುವಿನ ಮಿತ್ರನಾದ ಅಗ್ನಿಗೆ ಏನಾದರೂ ಗೌರವ ಸಲ್ಲಿಸಬೇಕು ಎಂದು ಲಂಕೆಯನ್ನೇ ಅವನಿಗೆ ಆಹುತಿಯಾಗಿತ್ತನಂತೆ!

ಆಮುಷೀಕೃತ ಮಾರ್ತಾಂಡಂ, ಗೋಷ್ಪದೀಕೃತ ಸಾಗರಂ,
ತೃಣೀಕೃತ ದಶಗ್ರೀವಂ, ಆಂಜನೇಯಂ ನಮಾಮ್ಯಹಂ.

ಒಂದು ಕಾಲದಲ್ಲಿ ಸೂರ್ಯನ ಪ್ರಖರ ಕಿರಣಗಳನ್ನು ಅವಸರದಿಂದ ತಿನ್ನಲು ಹೊರಟ ಹನುಮಂತ ಮುಂದೆ,
ಸಮುದ್ರವನ್ನು ದಾಟಲು ಆಕಾಶ ಭೂಮಿಗಳನ್ನೇ ಒಂದು ಮಾಡುವಂತೆ ಬೆಳೆದ. ಹಾಗೆ ಬೆಳೆದು ನಿಂತವನ ಎದುರಿಗೆ ಸಮುದ್ರವು ಹಸುವಿನ ಕಾಲಿನ ಗೊರಸಿನಷ್ಟೇ ದೊಡ್ಡದಾಗಿ ಕಾಣಿಸುತ್ತಿತ್ತಂತೆ. ಅದನ್ನು ಲೀಲೆಯಿಂದಲೇ ದಾಟಿಬಿಟ್ಟ ಹನುಮ.

  ಆಸ್ತಿಕ ಋಷಿಯು ಜನಮೇಜಯನ ಸರ್ಪಯಾಗ - ಕಥೆ

ಸೀತೆ ರಾವಣನೊಂದಿಗೆ ಹುಲ್ಲುಕಡ್ಡಿಯನ್ನಿಟ್ಟು ಮಾತನಾಡಿದ್ದನ್ನು ನೋಡಿದ್ದ ಅವನು ತಾನೂ ರಾವಣನೊಂದಿಗೆ ಮಾತಾಡುವಾಗ ಅವನಿಗಿಂತ ಎತ್ತರವಾಗಿ ತನ್ನ ಬಾಲವನ್ನು ಸುತ್ತಿಕೊಂಡು ಆಸನವಾಗಿ ಮಾಡಿಕೊಂಡು ಕುಳಿತ. ನೀನು ನನಗೆ ಹುಲ್ಲುಕಡ್ಡಿಗೆ ಸಮ ಎಂಬ ಸಂದೇಶ ನೀಡಿದ. “ಸುಗ್ರೀವನ ಸೇನೆಯಲ್ಲಿ ನಾನೇ ಅತ್ಯಂತ ಕಡಿಮೆ ಶೌರ್ಯದವನು.” ಎನ್ನುತ್ತ ಅವನಲ್ಲಿ ಭಯವನ್ನುಂಟು ಮಾಡಿದ. ಅವನ ಪ್ರೀತಿಯ ಅಶೋಕವನವನ್ನು ಕ್ಷಣಮಾತ್ರದಲ್ಲಿ ಧ್ವಂಸ ಮಾಡಿ, ಹುಲ್ಲುಕಡ್ಡಿಯಂತಾಗಿಸಿದ. ಅದು ರಾವಣನ ಪ್ರತಿಷ್ಠೆಗೇ ಕೊಟ್ಟ ಏಟು. ಇಂತಹ ವೀರ ಆಂಜನೇಯನಿಗೆ ನಮಸ್ಕರಿಸುತ್ತೇನೆ.

ಆಂಜನೇಯಂ ಅತಿಪಾಟಲಾನನಂ,
ಕಾಂಚನಾದ್ರಿ ಕಮನೀರ ವಿಗ್ರಹಂ,
ಪಾರಿಜಾತ ತರುಮೂಲವಾಸಿನಂ,
ಭಾವಯಾಮಿ ಪವಮಾನ ನಂದನಂ.

ಆಂಜನೇಯನ ಮುಖ ರಕ್ತದ ಬಣ್ಣದಂತೆ ಕೆಂಪು,
ದೇಹವೋ ಹೊಳೆಯುವ ಬಂಗಾರದ ಬೆಟ್ಟದಂತೆ. ಅವನು ವಾಸ ಮಾಡುವುದು ಪಾರಿಜಾತ ವೃಕ್ಷದ ಬುಡದಲ್ಲಿ. ಅವನು
ಪವಮಾನ ಎಂದೂ ಪ್ರಸಿದ್ಧನಾದ ವಾಯುವಿನ ಪುತ್ರ. ಅವನಿಗಿದೋ ನಮಸ್ಕರಿಸುತ್ತೇನೆ.

ಮಾರುತ ಅಂದರೆ ವಾಯುವಿನ ಮಗನಾದ್ದರಿಂದ ಅವನು ಮಾರುತಿ. ಅವನಿಗೆ ನಾನು ನಮಸ್ಕರಿಸುತ್ತೇನೆ.

ಯತ್ರ ಯತ್ರ ರಘುನಾಥ ಕೀರ್ತನಂ,
ತತ್ರ ತತ್ರ ಕೃತ ಮಸ್ತಕಾಂಜಲಿಂ,
ಬಾಷ್ಪವಾರಿ ಪರಿಪೂರ್ಣಲೋಚನಂ,
ಮಾರುತಿಂ ನಮತ ರಾಕ್ಷಸಾಂತಕಂ.

ಪ್ರಪಂಚದ ಯಾವ ಯಾವ ಮೂಲೆಯಲ್ಲೇ ರಘುನಾಥನಾದ ರಾಮಚಂದ್ರನ ಗುಣಗಾನ ನಡೆಯುತ್ತದೆಯೋ, ಅಲ್ಲೆಲ್ಲಾ ತಲೆಯ ಮೇಲೆ ಕೈಮುಗಿದುಕೊಂಡೇ ಕೇಳುತ್ತಿರುತ್ತಾನಂತೆ ಹನುಮಂತ. ತನ್ನ ಪ್ರಭುವಿನ ಕಥೆಯನ್ನು ಕೇಳುತ್ತಾ ಆನಂದ ಬಾಷ್ಪದಿಂದ ತೊಯ್ದ ಅವನ ಕಣ್ಣುಗಳು ಸಂತೋಷದಿಂದ ಆಗಾಗ ಹಿಗ್ಗಿ ದೊಡ್ಡದಾಗುತ್ತಲೂ, ಭಕ್ತಿಪರವಶದಿಂದ ಮುಚ್ಚುತ್ತಲೂ ಇರುತ್ತವಂತೆ. ರಾಕ್ಷಸರಿಗೆ ಮೃತ್ಯುವಾದ ಇಂಥಾ ಆಂಜನೇಯನನ್ನು ನಾನು ನಮಸ್ಕರಿಸುತ್ತೇನೆ.

  ಮಡಿವಾಳ ಮಾಚಿದೇವ ಮತ್ತು ಆತನ ಸಂಪೂರ್ಣ ವಚನಗಳು

ಬುದ್ಧಿರ್ಬಲಂ ಯಶೋ ಧೈರ್ಯಂ,
ನಿರ್ಭಯತ್ವಂ ಅರೋಗತಾ,
ಅಜಾಡ್ಯಂ ವಾಕ್ಪಟುತ್ವಂ ಚ ಹನೂಮತ್ ಸ್ಮರಣಾತ್ ಭವೇತ್.

ಹನುಮಂತ ಬುದ್ಧಿವಂತಿಕೆಗೂ, ಶಕ್ತಿಗೂ, ಯಶಸ್ಸಿಗೂ, ಧೈರ್ಯಕ್ಕೂ ಹೆಸರಾದವನು. ಅವನನ್ನು ನೆನೆದರೆ, ನಮಗೂ ಅವನ್ನೆಲ್ಲ ಕೊಡುತ್ತಾನೆ. ಅವನನ್ನು ನೆನೆದರೆ ಭಯವು ದೂರವಾಗುತ್ತದೆ.
ರೋಗಗಳು ಹೆಸರಿಲ್ಲದೆ ಓಡಿಹೋಗುತ್ತವೆ. ಸೋಮಾರಿತನವಂತೂ ಅವನನ್ನು ನೆನೆಯುವರ ಬಳಿ ಸುಳಿಯುವುದೇ ಇಲ್ಲ. ಮಾತಿನಲ್ಲಿ ಅವನಂಥಾ ಚತುರರು ಉಂಟೇ?
ಅವನನ್ನು ಸ್ಮರಿಸಿದರೆ ಸಾಕು ನಮ್ಮ ಮಾತೂ ಮಧುರವಾಗಿ, ಕೇಳುಗರಿಗೆ ಹಿತವಾಗುತ್ತದೆ.

ಇಂಥಾ
ಹನುಮಂತನಿಗೆ ಸೀತಾದೇವಿ ಒಂದು ಆಶೀರ್ವಾದ ಮಾಡಿದ್ದಾಳೆ.

ತ್ವಮಸ್ಮಿನ್ ಕಾರ್ಯ ನಿರ್ಯೋಗೇ ಪ್ರಮಾಣಂ ಹರಿಸತ್ತಮ,
ಹನೂಮನ್ ಯತ್ನಮಾಸ್ಥಾಯ,
ದುಃಖಕ್ಷಯಕರೋ ಭವ.

” ಹೇ ಹನುಮಾ! ಹರಿಸತ್ತಮ! ನಿನಗೆ ವಿಧಿಸಿದ ಕಾರ್ಯಗಳನ್ನು ನೀನು ಅತ್ಯುತ್ತಮವಾಗಿ ಸಾಧಿಸುತ್ತೀಯೆಂದು ನೀನು ಪ್ರಮಾಣೀಕರಿಸಿದ್ದೀಯೆ. ಮಾಡಿ ತೋರಿಸಿದ್ದೀಯೆ. ( ನಿನ್ನ ಒಡೆಯ ಸುಗ್ರೀವನೂ, ಸ್ವಾಮಿಯಾದ ರಾಮಚಂದ್ರನೂ ನನ್ನನ್ನು ಕಂಡುಹಿಡಿಯಲು ನಿನಗೆ ಒಪ್ಪಿಸಿದ್ದ ಕೆಲಸವನ್ನು ಸಮರ್ಥವಾಗಿ ಮಾಡಿದ್ದೀಯೆ. ) ಕಪಿಶ್ರೇಷ್ಠ!
ಹಾಗೆಯೇ ಇನ್ನೂ ಸ್ವಲ್ಪ ಪ್ರಯತ್ನಿಸಿ ನನ್ನ ಸ್ವಾಮಿಯಾದ ಶ್ರೀ ರಾಮನಿಗೆ ನನ್ನ ವಿಷಯವನ್ನೆಲ್ಲಾ ತಿಳಿಸಿ, ಬೇಗ ಅವನು ಬಂದು ನನ್ನನ್ನು ಕರೆದೊಯ್ಯುವಂತೆ ಹೇಳು. ನನ್ನ ದುಃಖವನ್ನು ಬೇಗ ಪರಿಹಾರ ಮಾಡು ಹನುಮಾ! ” ಎನ್ನುತ್ತಾಳೆ.

ಜೈ ಶ್ರೀರಾಂ
ಜೈ ಭಜರಂಗಬಲೀ ಹನುಮಾನ್.

ನಿರೂಪಣೆ:
ನಿರ್ಮಲಾ ಶರ್ಮ

ಉಪದೇಶ: ಡಾ. ಕೆ.ಎಸ್. ನಾರಾಯಣಾಚಾರ್ಯರು.

Leave a Reply

Your email address will not be published. Required fields are marked *

Translate »