ಬ್ರಿಟಿಷರು ನಂಬಿ ಕರೆದರೆ ಓ ಎನ್ನನೇ ಶಿವನು?
ವಿಸ್ಮಯದ ಶಿವಾಲಯವೊಂದು ಮಧ್ಯಪ್ರದೇಶದ ಶಾಜಾಪೂರ್ ಜಿಲ್ಲೆಯ ಅಗರ್ ಎಂಬಲ್ಲಿದೆ. ವಿಸ್ಮಯವೇನೆಂದರೆ ಇದನ್ನು ಕಟ್ಟಿಸಿದವರು ಬ್ರಿಟಿಷ್ ಸೈನ್ಯದಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಮಾರ್ಟಿನ್ ಎಂಬ ಕ್ರಿಶ್ಚಿಯನ್ ಅಧಿಕಾರಿ! ಇದರ ಹಿಂದಿನ ರೋಚಕ ಪ್ರಸಂಗ ಹೀಗಿದೆ.
1879ರಲ್ಲಿ ಮಾರ್ಟಿನ್ ಅಫ್ಘಾನಿಸ್ಥಾನದ ಯುದ್ಧರಂಗದಲ್ಲಿದ್ದರು. ಅವರ ಪತ್ನಿ ಮಧ್ಯಪ್ರದೇಶದಲ್ಲಿದ್ದರು. ಅವರು ತಮ್ಮ ಯೋಗಕ್ಷೇಮವನ್ನು ಪತ್ರಮುಖೇನ ಪತ್ನಿಗೆ ತಿಳಿಸುತ್ತಿದ್ದರು. ಇದ್ದಕ್ಕಿದ್ದಂತೆ ಪತ್ರಗಳು ಬರುವುದು ನಿಂತುಹೋದಾಗ ಲೇಡಿ ಮಾರ್ಟಿನ್ ಚಿಂತಾಕ್ರಾಂತರಾದರು.
ಒಮ್ಮೆ ಆಕೆ ಅಲ್ಲಿದ್ದ ಬೈಜನಾಥ್ ಮಹಾದೇವ ಮಂದಿರದ ಬಳಿ ಹೋಗುತ್ತಿದ್ದಾಗ ದೇವಾಲಯದೊಳಗಿನಿಂದ ಕೇಳಿಬರುತ್ತಿದ್ದ ಮಂತ್ರೋಚ್ಛಾರಣೆಯ ಮತ್ತು ಶಂಖ-ಜಾಗಟೆಗಳ ಶಬ್ದ ಆಕೆಯನ್ನು ಆಕರ್ಷಿಸಿತು. ಆಕೆ ಕುತೂಹಲದಿಂದ ದೇವಾಲಯದೊಳಕ್ಕೆ ಹೋಗಿ ನಿಂತುಕೊಂಡರು. ಅಲ್ಲಿ ಪೂಜೆ ಮಾಡುತ್ತಿದ್ದ ಪುರೋಹಿತರು ಆಕೆ ಚಿಂತಾಕ್ರಾಂತಳಾಗಿರುವ ಕಾರಣವನ್ನು ಕೇಳಿದರು. ಆಕೆ “ನನ್ನ ಪತಿ ಯುದ್ಧರಂಗಕ್ಕೆ ಹೋಗಿದ್ದಾರೆ. ಅವರಿಂದ ಹಲವಾರು ದಿನಗಳಿಂದ ಯಾವ ಸಂದೇಶವೂ ಬಂದಿಲ್ಲ. ಅವರಿಗೆ ಏನಾಗಿದೆಯೋ ಏನೋ?” ಎಂದು ಗೋಳಾಡಿದರು. ಪುರೋಹಿತರು ಸಂದರ್ಭೋಚಿತವಾಗಿ ಸಾಂತ್ವನ ಹೇಳುತ್ತಾ “ನೀವು ಶಿವನನ್ನು ನಂಬಿ ಪ್ರಾರ್ಥಿಸಿ. ಕಷ್ಟಗಳಿಂದ ಪಾರುಗೊಳಿಸುತ್ತಾನೆ” ಎಂದರು. ಆಕೆ ಏನು ಪ್ರಾರ್ಥನೆ ಮಾಡಬೇಕೆಂದು ಕೇಳಿದಾಗ ಅವರು ‘ಲಘುರುದ್ರ ಅನುಷ್ಠಾನವನ್ನೂ, ಓಂ ನಮಃ ಶಿವಾಯ ಮಂತ್ರಜಪವನ್ನೂ ಹನ್ನೊಂದು ದಿನಗಳ ಕಾಲ ಮಾಡಲು’ ಸೂಚಿಸಿದರು.
ಆಕೆ ಅದರಂತೆ ಹನ್ನೊಂದು ದಿನ ಶ್ರದ್ಧೆಯಿಂದ ಮಂತ್ರಜಪವನ್ನು ಮಾಡಿದರು. ಹನ್ನೊಂದನೆಯ ದಿನ ಮಾರ್ಟಿನ್ನರಿಂದ ಒಂದು ಪತ್ರ ಬಂದಿತು. ಅದರಲ್ಲಿ “ಇಲ್ಲಿ ಯುದ್ಧರಂಗದಲ್ಲಿ ಇದ್ದಕ್ಕಿದ್ದಂತೆ ಪಠಾಣರು ನಮ್ಮನ್ನು ಎಲ್ಲ ಕಡೆಗಳಿಂದಲೂ ಸುತ್ತುವರೆದರು. ತಪ್ಪಿಸಿಕೊಂಡು ಬರುವ ಅವಕಾಶಗಳೇ ಇರಲಿಲ್ಲ. ಸಾವು ಖಚಿತವೆನ್ನುವ ಸನ್ನಿವೇಶ. ಹಾಗಾಗಿ ನಿನಗೆ ಸಂದೇಶಗಳನ್ನು ಕಳುಹಿಸಲಾಗಲಿಲ್ಲ. ಏನೂ ತೋಚದ ಪರಿಸ್ಥಿತಿಯಲ್ಲಿದ್ದಾಗ, ಇದ್ದಕ್ಕಿದ್ದಂತೆ ಒಬ್ಬ ಭಾರತೀಯ ಯೋಗಿ ಅಲ್ಲಿಗೆ ಬಂದರು. ಆತ ಆಜಾನುಬಾಹು, ಉದ್ದ ಜಡೆ, ಕೈಯಲ್ಲಿ ತ್ರಿಶೂಲ, ಚರ್ಮದ ಉಡುಪು, ಬೆರಗುಗೊಳಿಸುವ ವ್ಯಕ್ತಿತ್ವ ಹೊಂದಿದ್ದ. ಆತ ಕೈಯಲ್ಲಿ ತ್ರಿಶೂಲವನ್ನು ಹಿಡಿದು ತಿರುಗಿಸುವ ರೀತಿಯನ್ನು ನೋಡಿ ಪಠಾಣರು ಪ್ರಾಣಭಯದಿಂದ ಓಡಿಹೋದರು. ನಾವು ಯುದ್ಧದಲ್ಲಿ ಗೆದ್ದುಬಿಟ್ಟೆವು. ನಾನು ಯೋಗಿಗೆ ವಂದಿಸಿದಾಗ ಆತ “ನಿಮ್ಮ ಪತ್ನಿಯ ಪ್ರಾರ್ಥನೆಯಿಂದಾಗಿ ನಿಮ್ಮನ್ನು ರಕ್ಷಿಸಲು ನಾನಿಲ್ಲಿ ಬಂದಿದ್ದೇನೆ ಎಂದರು” ಎಂದು ಬರೆದಿತ್ತು. ಕಾಗದವನ್ನು ಓದುತ್ತಿದ್ದಂತೆ ಲೇಡಿ ಮಾರ್ಟಿನರು ಸಂತೋಷದ ಕಣ್ಣೀರು ಸುರಿಸಿದರು. ಅವರ ಹೃದಯ ತುಂಬಿ ಬಂತು. ಅವರು ತಮ್ಮ ಮನೆಯಲ್ಲಿಟ್ಟು ಪೂಜಿಸುತ್ತಿದ್ದ ಶಿವನ ಮೂರ್ತಿಗೆ ಮತ್ತೆಮತ್ತೆ ನಮಸ್ಕಾರ ಮಾಡಿದರು. ಇದಾದ ಕೆಲವೇ ವಾರಗಳಲ್ಲಿ ಮಾರ್ಟಿನ್ ಹಿಂದಿರುಗಿ ಬಂದರು. ಲೇಡಿ ಮಾರ್ಟಿನರು ಇಲ್ಲಿ ಲಘುರುದ್ರ ಅನುಷ್ಠಾನ, ‘ಓಂ ನಮಃ ಶಿವಾಯ’ ಮಂತ್ರ ಜಪಿಸಿದ್ದನ್ನೂ ತಿಳಿಸಿದರು. ಅಂದಿನಿಂದ ದಂಪತಿಗಳಿಬ್ಬರೂ ಶಿವಭಕ್ತರಾದರು. 1883ರಲ್ಲಿ ಅವರು ಹದಿನೈದು ಸಾವಿರ ರೂಪಾಯಿಗಳನ್ನು ಕೊಟ್ಟು ದೇವಾಲಯದ ಪುನರ್ನಿರ್ಮಾಣ ಮಾಡಿಸಿದರು. ದೇವಾಲಯದಲ್ಲಿ ಇರುವ ಒಂದು ಶಿಲಾಶಾಸನದಲ್ಲಿ ಈ ಘಟನೆಯ ವಿವರಗಳು ಕೆತ್ತಲ್ಪಟ್ಟಿದೆ. ಭಾರತವನ್ನು ಆಳಿದ ಬ್ರಿಟೀಷರು ಕೆತ್ತಿಸಿ ಕೊಟ್ಟ ಏಕೈಕ ಹಿಂದೂ ದೇವಾಲಯ ಈಗಲೂ ಅಲ್ಲಿದೆ.
ದೇವರು ಯಾರಾದರೇನು?
ಭಕ್ತರು ಯಾರಾದರೇನು?
ನಂಬಿ ಕರೆದೊಡೆ ದೇವರು ಓ ಎನ್ನದಿರುತ್ತಾನೆಯೇ?
https://maps.app.goo.gl/kLGhE1nxZYgbzHcZ6