“ಕಷ್ಟಗಳ ನಿವಾರಕ ಸಿದ್ಧಿ ಬುದ್ಧಿದಾಯಕ..!
ಶಿವ ಪಾರ್ವತಿಯ ಪುತ್ರನಾದ ಗಣೇಶನು ಗಣಗಳ ಒಡೆಯ. ಹಿಂದೂ ಧರ್ಮದಲ್ಲಿ ಗಣೇಶನಿಗೆ ಮೊದಲ ಪೂಜೆ ಸಲ್ಲಿಸದೆ ಯಾವ ಕೆಲಸವನ್ನೂ ಪ್ರಾರಂಭಿಸುವುದಿಲ್ಲ. ಗಣೇಶನಿಗೆ ಮೊದಲ ಪೂಜೆಯನ್ನು ಸಮರ್ಪಿಸಿದರೆ ನಮ್ಮ ಕೆಲಸ ಕಾರ್ಯಗಳು ಹಾಗೂ ಅಪೇಕ್ಷಿತ ಯೋಜನೆಗಳು ಸುಗಮವಾಗಿ ನೆರವೇರುತ್ತವೆ ಎಂಬ ನಂಬಿಕೆ ಇದೆ. ಕಷ್ಟಗಳು ಎದುರಾದಾಗ ಗಣೇಶನನ್ನು ನೆನೆಸಿಕೊಂಡರೆ ಎಲ್ಲವೂ ಬಹುಬೇಗ ಮಾಯವಾಗುತ್ತವೆ ಎನ್ನುವ ನಂಬಿಕೆಯಿದೆ.
ಶಿವನಿಂದ ವರವನ್ನು ಪಡೆದ ಗಣೇಶನು ಸಕಲ ಗಣಗಳಿಗೂ ಒಡೆಯ. ಗಣೇಶನ ಪೂಜೆ, ಮಂತ್ರ ಹಾಗೂ ಪ್ರಾರ್ಥನೆ ಮಾಡುವುದರಿಂದ ವ್ಯಕ್ತಿಯು ಜೀವನದಲ್ಲಿ ಯಶಸ್ಸು, ಸಮೃದ್ಧಿ ಮತ್ತು ಪ್ರತಿಕೂಲದ ವಿರುದ್ಧ ರಕ್ಷಣೆಯನ್ನು ಸಹ ಪಡೆದುಕೊಳ್ಳುತ್ತಾನೆ ಎನ್ನಲಾಗುತ್ತದೆ. ಹಾಗಾಗಿಯೇ ಪ್ರತಿಯೊಂದು ಹಬ್ಬ-ಹುಣ್ಣಿಮೆ, ಶುಭ ಕಾರ್ಯಗಳನ್ನು ಕೈಗೊಳ್ಳುವ ಮೊದಲು ಗಣೇಶನ ಪ್ರಾರ್ಥನೆ ಹಾಗೂ ಪೂಜೆಯಿಂದ ಆರಂಭಿಸಲಾಗುತ್ತದೆ. ವಿದ್ಯಾರ್ಥಿಗಳು ವಿದ್ಯಾ-ಬುದ್ಧಿಯನ್ನು ಹೊಂದಲು ದಿನವೂ ಗಣೇಶನಿಗೆ ಪ್ರಾರ್ಥನೆ ಹಾಗೂ ನಮಸ್ಕಾರವನ್ನು ಸಲ್ಲಿಸುದು ಸಾಮಾನ್ಯ. ಆಗ ನೆನಪಿನ ಶಕ್ತಿಯು ವೃದ್ಧಿಯಾಗುವುದು ಎನ್ನುವುದು ಒಂದು ಬಲವಾದ ನಂಬಿಕೆ.
ಸರಳ ಹಾಗೂ ಉದಾರ ಗುಣವನ್ನು ಹೊಂದಿರುವ ದೇವನೆಂದರೆ ಗಣೇಶ. ಗಣೇಶನ ಪೂಜೆಯ ಪದ್ಧತಿಯು ಅತ್ಯಂತ ಸರಳತೆಯಿಂದ ಕೂಡಿರುತ್ತದೆ. ಪೂಜೆ ಸಲ್ಲಿಸುವಾಗ ಕೆಲವು ಮಂತ್ರಗಳನ್ನು ವಿಶೇಷವಾಗಿ ಹೇಳಿದರೆ, ಗಣೇಶನು ಭಕ್ತರ ಭಕ್ತಿಯನ್ನು ಮೆಚ್ಚಿ ಆಶೀರ್ವದಿಸುತ್ತಾನೆ ಎನ್ನಲಾಗುವುದು. ಜೀವನದಲ್ಲಿ ಕಷ್ಟಗಳಿಂದಲೇ ಮುಳುಗಿದ್ದರೆ ಗಣೇಶನಿಗೆ ಸಂಬಂಧಿಸಿದ ಕೆಲವು ಪ್ರಾರ್ಥನೆ ಹಾಗೂ ಮಂತ್ರಗಳನ್ನು ಹೇಳಬೇಕು. ಆಗ ತೊಂದರೆಗಳು ದೂರವಾಗುವುದು ಎನ್ನುವ ನಂಬಿಕೆಯಿದೆ.
“ವಕ್ರತುಂಡ ಮಹಾ ಕಾಯ ಸೂರ್ಯ ಕೋಟಿ ಸಮಪ್ರಭ
ನಿರ್ವಿಘ್ನಮ್ ಕುರು ಮೇ ದೇವಾ ಸರ್ವ ಕಾರ್ಯೇಶು ಸರ್ವದಾ.”
ಗಣೇಶನ ಪೂಜಿಸುವಾಗ ಈ ಮಂತ್ರವನ್ನು ಜಪಿಸುವುದರಿಂದ ವ್ಯಕ್ತಿ ತನ್ನ ಜೀವನದಲ್ಲಿ ಇದ್ದ ಅನೇಕ ಅಡೆತಡೆಗಳಿಂದ ಮುಕ್ತಿಯನ್ನು ಪಡೆಯುತ್ತಾನೆ ಎನ್ನಲಾಗುತ್ತದೆ. ಜೀವನದಲ್ಲಿ ಪ್ರಯತ್ನಗಳನ್ನು ಕೈಗೊಳ್ಳುವುದರ ಮೂಲಕ ಯಶಸ್ಸು, ಸಂಪತ್ತು, ಬುದ್ಧಿವಂತಿಕೆ, ಅದೃಷ್ಟ, ಸಮೃದ್ಧಿ ಮತ್ತು ಯಶಸ್ಸನ್ನು ಪಡೆದುಕೊಳ್ಳಬಹುದು ಎಂಬುದು ಭಕ್ತರ ನಂಬಿಕೆ.
ಗುರು ಪರಶುರಾಮನೊಂದಿಗೆ ಜಗಳವಾಡುವಾಗ, ಪರಶುರಾಮನು ಶಿವನಿಂದ ವರವಾಗಿ ಪಡೆದ ಕೊಡಲಿಯನ್ನು ಗಣೇಶನ ಮೇಲೆ ಎಸೆದನು. ಆಗ ಗಣೇಶನು ತನ್ನ ತಂದೆಯಾದ ಶಿವನೇ ಪರುಶುರಾಮನಿಗೆ ನೀಡಿದ ಅಸ್ತ್ರ ಕೊಡಲಿಯಾದುದರಿಂದ ಅದಕ್ಕೆ ಗೌರವ ಸಲ್ಲಿಸಬೇಕು ಎನ್ನುವ ದೃಷ್ಟಿಯಿಂದ ಪರುಶುರಾಮ ಬೀಸಿದ ಕೊಡಲಿಗೆ ಅಡ್ಡವಾಗಲಿಲ್ಲ. ಆ ಅಸ್ತ್ರವು ಗಣೇಶನ ಒಂದು ದಂತವನ್ನು ತುಂಡರಿಸಿತು. ಗಣೇಶನು ತನ್ನ ಒಂದು ದಂತವನ್ನು ಕಳೆದುಕೊಂಡನು. ಆದರೆ ಅವನು ವಿನಯ ಮತ್ತು ಭಾವನಾತ್ಮಕ ಶಕ್ತಿಯನ್ನು ಗಳಿಸಿದನು ಎನ್ನುವ ಕಥೆಯಿದೆ.