ಒಂದೂರಿನಲ್ಲಿ ಮಹಾ ಜಿಪುಣನೊಬ್ಬನಿದ್ದ.ಪಾಪ ಅವನೇನು ಹುಟ್ಟಿನಿಂದ ಜಿಪುಣನಾಗಿರಲ್ಲಿಲ್ಲ.ಬಡಮನೆತನದಲ್ಲಿ ,ಹುಟ್ಟಿ, ಕಷ್ಟಕಾರ್ಪಣ್ಯ ನೋಡಿ ಬೇಸತ್ತು ,ಒಪ್ಪತ್ತಿನ ಊಟಕ್ಕೂ ಪರದಾಡುತ್ತಾ,ಒಂದೊಂದು ಪೈಸಕ್ಕೂ ಬೇರೆಯವರ ಮುಂದೆ ಕೈ ಚಾಚುವ ಪರಿಸ್ಥಿತಿ ಯಿಂದ ಬೇಸತ್ತು,ತಾನು ದೂಡ್ಡವನಾದಮೇಲೆ ಬಹಳಷ್ಟು ಹಣ ಮಾಡಬೇಕೆಂದು ತೀರ್ಮಾನಕ್ಕೆ ಬಂದ.ಹಣಗಳಿಸಲು ಯಾವುದೇ ದಾರಿಯಾದರೂ ಸರಿಯೇ ಒಟ್ಟಿನಲ್ಲಿ ತಾನು ಹಣಗಳಿಸಿ ಅದನ್ನು ಕೂಡಿಡಬೇಕೆಂದು ನಿರ್ಧರಿಸಿದ.
ಹೀಗೇ ಹಣಕೂಡಿಡುತ್ತಾ ಗಳಿಸಿದ ಹಣದಿಂದ ಏನನ್ನೂ ಅನುಭವಿಸುತ್ತಿರಲ್ಲಿಲ್ಲ,ಯಾರಿಗೂ ಕೊಡುತ್ತಲ್ಲೂ ಇರಲ್ಲಿಲ್ಲ.ಸ್ವಲ್ಪ ಹಣಬಂದ ತಕ್ಷಣ ಅದನ್ನು ಹೆಚ್ಚಿನ ಬಡ್ಡಿ ದರದಲ್ಲಿ ಮತ್ತೊಬ್ಬರಿಗೆ ಸಾಲಕೊಡುವುದು, ಯಾವ ಮುಲಾಜೂ ಇಲ್ಲದೆ ಅದನ್ನು ವಸೂಲಿ ಮಾಡಿ ,ವ್ಯಾಪಾರ ಶುರುಮಾಡಿದ,ಅದರಲ್ಲೂ ಮೋಸಮಾಡಿ ಬಂದ ಹಣದಿಂದ ಜಮೀನು ಕೊಂಡುಕೊಂಡ.ಜಮೀನಿನ ಬೆಲೆ ಏರಿದಾಗ ಮಾರಿ ಅಪಾರ ಹಣಗಳಿಸಿದ ,ಅದರಲ್ಲೂ ತೃಪ್ತಿ ಯಾಗದೇ ,ಮೇಲಿನ ಅಧಿಕಾರಿಗಳಿಗೆ ,ಲಂಚ ನೀಡಿ ತನ್ನದಲ್ಲದ ಜಮೀನನ್ನು ತನ್ನ ಹೆಸರಿಗೆ ಮಾಡಿಸಿಕೊಂಡ.ಹೇರಳವಾದ ಹಣದ ಹೊಳೆಯೇ ಹರಿಯುತ್ತಿತ್ತು ಆದರೂ ಅವನ ಧನ ದಾಹ ತೀರದೇ , ಹಣದ ಹುಚ್ಚನಾಗಿದ್ದ.
ದಿನ ನಿತ್ಯವೂ ತನ್ನ ಹಣದ ಸಂಗ್ರಹ ಹೆಚ್ಚಾಗುತ್ತಿರುವುದನ್ನು ಕಂಡು ,ಅಂಗಡಿ ಮುಂಗಟ್ಟುಗಳನ್ನು ಕಟ್ಟಿಸಿದ, ಅದನ್ನು ಬಾಡಿಗೆಗೆ ಕೊಟ್ಟ,ವಜ್ರ ವೈಢೂರ್ಯ ಗಳನ್ನು ಖರೀದಿಸಿ ದ,ಒಂದೇ ಎರಡೇ ಕಂಡದ್ದನ್ನೆಲ್ಲಾ ಕೊಂಡ, ಆದರೂ ದರಿದ್ರ ನಂತೆ ಬದುಕುವುದನ್ನು ಬಿಡಲ್ಲಿಲ್ಲ.
ಯಾಕೋ ಇದ್ದಕ್ಕಿದ್ದಂತೆ ಒಂದು ದಿನ ಅವನಿಗೆ ಜ್ಞಾನೋದಯ ವಾದಂತೆ ಆಯಿತು. ಇನ್ನು ಸ್ವಲ್ಪ ದಿನ ಹಣ ಗಳಿಸಿ ನಂತರ ರಾಜನಂತೆ ಬದುಕಬೇಕೆಂದು.
ಒಂದು ದಿನ ಬೆಳಗ್ಗೆ ಎದ್ದಾಗ ಅವನ ಕಣ್ಣುಗಳು ಮಂಜು ಮಂಜಾದಂತೆ ಅನಿಸಿತು.ಅವನ.ಮುಂದೆ ಯಾರೋ ನಿಂತಹಾಗೆ ಕಾಣಿಸಿತು.ಯಾರದು, ಎಂದು ಕೇಳಿದ. ಮುಂದಿದ್ದ ವ್ಯಕ್ತಿ ಈಗ ಸ್ಪಷ್ಟವಾಗಿ ಕಾಣತೊಡಗಿದ,ಹೇಳಿದ ,ನಾನು ಯಮಧೂತ , ಈ ಕ್ಷಣಕ್ಕೆ ನಿನ್ನ ಆಯಸ್ಸು ಮುಗಿಯಿತು,ನಿನ್ನನ್ನು ಕರೆದುಕೊಂಡು ಹೋಗಲು ಬಂದಿದ್ದೇನೆ, ಎಂದ. ಜಿಪುಣನ ಹೃದಯ ಒಡೆದು ಹೋಯಿತು. ಅಯ್ಯೋ ಇಷ್ಟು ದಿನ ಕಷ್ಟ ಪಟ್ಟು, ಇನ್ನ ಮೇಲೆ ಸುಖವಾಗಿರಬೇಕೆಂದು ಬಯಸಿದ್ದೆ,ಹೇಗೆ ಬರಲಿ?ನನಗೆ ಒಂದು ವರ್ಷದ ಅವಕಾಶ ಕೊಡಿ ,ಸಂತೃಪ್ತಿಯ ಜೀವನ ನೆಡೆಸಿ ಬರುತ್ತೇನೆ ಎಂದು ಕೇಳಿಕೊಂಡ.ಯಮಧೂತ ಒಪ್ಪಲೇ ಇಲ್ಲ.ಆಗ ಜಿಪುಣ ಅವನಲ್ಲಿ ವ್ಯಾಪಾರಕ್ಕೆ ಇಳಿದ.ನನ್ನಲ್ಲಿರುವ ಹಣದಲ್ಲಿ ನಿನಗೆ ಸಾವಿರ ಕೋಟಿಗಳಷ್ಟು ಕೊಡುತ್ತೇನೆ ,ಕೊನೇ ಪಕ್ಷ ಆರು ತಿಂಗಳ ಅವಕಾಶ ಕೊಡು ,ಎಂದು ಗೋಗರೆದ.ಯಮಧೂತ ಮಾತನಾಡದೇ ,ಕೊರಳಿಗೆ ಹಗ್ಗ ಎಸೆದು ಪ್ರಾಣ ಎಳೆಯಲು ಸಿದ್ದನಾದ.ಆಗ ಜಿಪುಣ ನನ್ನಲ್ಲಿರುವ ಹಣವನ್ನು ಪೂರ್ತಿ ನಿನಗೇ ಕೊಡುತ್ತೇನೆ, ಕನಿಷ್ಠ ಒಂದು ದಿವಸವಾದರೂ ಬಿಡು,ನನ್ನ ಬಾಕಿ ಉಳಿದ ಕೆಲಸವನ್ನಾದರೂ ಮಾಡಿ ಮುಗಿಸುತ್ತೇನೆ ಎಂದು ಕಣ್ಣೀರು ಹಾಕಿದ. ಆಗ ಯಮಧೂತ ನಕ್ಕು ಮೂರ್ಖ ,ನನಗೆ ನಿನ್ನ ಹಣದಿಂದ ಆಗುವುದಾದರೂ ಏನಿದೆ? .ಒಂದು ಕ್ಷಣವೂ ನಿನ್ನನ್ನು ಬಿಡಲಾರೆ,ಎಂದು ಹಗ್ಗವನ್ನು ಎಳೆದ .ಪೂರ್ತಿ ಹತಾಶನಾದ ಜಿಪುಣ ,ದಯವಿಟ್ಟು ನನಗೆ ಒಂದು ನಿಮಿಷಗಳ ಸಮಯ ಕೊಡು ,ನನ್ನಂತಹ ಜನರಿಗೆ ಒಂದು ಮಾತು ಬರೆದಿಟ್ಟು ನಿನ್ನೊಂದಿಗೆ ಬರುತ್ತೇನೆ ಎಂದು ಕಣ್ಣೀರು ಸುರಿಸಿದ. ಈ ಬಾರಿ ಯಮಧೂತನಿಗೆ ಸ್ವಲ್ಪ ಕರುಣೆ ಬಂತು. ಆಯ್ತು ಬೇಗ ಮುಗಿಸು ಎಂದ .ಈತ ಅಳುತ್ತಾ ತನ್ನ ಮುಂಗೈಯನ್ನು ಕೊರೆದು ಕೊಂಡ,ಚಿಮ್ಮಿದ ರಕ್ತದಲ್ಲಿ ಬೆರಳನ್ನು ಅದ್ದಿ,ಸ್ನೇಹಿತರೇ ನಾನು ಮೂರು ಸಾವಿರ ಕೋಟಿ ಹಣಗಳಿಂದ ಜೀವನದ ಒಂದು ಕ್ಷಣವನ್ನೂ ಹೆಚ್ಚಾಗಿ ಪಡೆಯಲಾಗಲ್ಲಿಲ್ಲ. ಜೀವನದ ಪ್ರತೀ ಕ್ಷಣವನ್ನೂ ಸರಿಯಾಗಿ ಬಳಸಿ,ಅನುಭವಿಸಿ. ಪ್ರತಿಕ್ಷಣದ ಬೆಲೆ ಮೂರು ಸಾವಿರ ಕೋಟಿಗಳಿಗಿಂತ ಅಮೂಲ್ಯ ವಾದದ್ದು ಎಂಬುದನ್ನು ಇಂದು ಅರಿತಿದ್ದೇನೆ,ಎಂದು ಬರೆದ.ಮರುಕ್ಷಣವೇ ಅವನ ಜೀವ ದೇಹದಿಂದ ಬೇರೆಯಾಯಿತು.
ಜೀವನದ ಪ್ರತಿಕ್ಷಣವೂ ಅತ್ಯಮೂಲ್ಯವಾದದ್ದು.ಏನೇ ಕೊಡುವೆವೆಂದರೂ ಅರ್ಧಕ್ಷಣ ಕೂಡಾ ಹೆಚ್ಚು ದೊರಕಲಾರದು.ಅದರ ಬೆಲೆಯನ್ನರಿತು ಜೀವನ ನೆಡೆಸಿದರೆ ಜೀವನಕ್ಕೆ ಒಂದು ಮೌಲ್ಯ ಇರುತ್ತದೇ…..